Tag: ಪ್ರಸ್ನೆ ಪತ್ರಿಕೆ ಸೋರಿಕೆ

  • ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸೋ ಮೋದಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗ್ತಿಲ್ಲ: ರಾಗಾ ವ್ಯಂಗ್ಯ

    ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸೋ ಮೋದಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗ್ತಿಲ್ಲ: ರಾಗಾ ವ್ಯಂಗ್ಯ

    ನವದೆಹಲಿ: ರಷ್ಯಾ – ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದಾರೆ.

    ಎಐಸಿಸಿ (AICC) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ (RSS) ವಶಪಡಿಸಿಕೊಂಡಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ‌.

    ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿಲ್ಲ “ನಿರ್ದಿಷ್ಟ ಸಂಸ್ಥೆ” ಯೊಂದಿಗೆ ಅವರ ಸಂಪರ್ಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಈ ಸಂಘಟನೆ ಮತ್ತು ಬಿಜೆಪಿ ಸೇರಿ ನಮ್ಮ ಶಿಕ್ಷಣ ವ್ಯವಸ್ಥೆಗೆ ನುಗ್ಗಿ ನಾಶ ಮಾಡುತ್ತಿದೆ. ನೋಟು ಅಮಾನ್ಯೀಕರಣದ ಮೂಲಕ ಆರ್ಥಿಕತೆ ನಾಶ ನರೇಂದ್ರ ಮೋದಿ ಈಗ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದರು. ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

    ಮೋದಿ (Narendra Modi) ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ದೇಶದಲ್ಲಿ ಏನಾದರೂ ಆಗಲಿ ಅವರಿಗೆ ಸರ್ಕಾರ ಉಳಿಯಬೇಕು ಎನ್ನುವಂತಾಗಿದೆ. ಸದ್ಯ ತಮ್ಮ ಪರವಾದ ಸ್ಪೀಕರ್ ಆಯ್ಕೆ ಮಾಡುವುದರಲ್ಲಿ ಮೋದಿ ತಲ್ಲಿನರಾಗಿದ್ದಾರೆ. ದೇಶದ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಮೋದಿಯವರ ಬಗ್ಗೆ ಇದ್ದ ಭಯ ಕಡಿಮೆಯಾಗಿದೆ. ವಾರಣಾಸಿಯಲ್ಲಿ ಮೋದಿಯವರತ್ತ ಚಪ್ಪಲಿ ತೂರಲಾಗಿದೆ. ಚುನಾವಣೆಗೂ ಮೊದಲು ಮೋದಿ ಕಡೆ ಚಪ್ಪಲಿ ತೂರುವ ಕೆಲಸ ಮಾಡುತ್ತಿರಲಿಲ್ಲ. ಬಿಜೆಪಿ ಒಳಗೂ ಮೋದಿ ಬಗ್ಗೆ ಈಗ ಯಾವುದೇ ಭಯ ಇಲ್ಲ ಗೌರವವೂ ಇಲ್ಲ ಎಂದು ಹೇಳಿದರು.

    ಪ್ರಶ್ನೆ ಪತ್ರಿಕೆ ಲೀಕ್ ಆಗುವ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಲಾಗುವುದು. ಸೂಕ್ತ ಕಾನೂನು ಜಾರಿಯಾಗಬೇಕಿದೆ. ಅದಕ್ಕೂ ಮುನ್ನ ಬಿಜೆಪಿ ಮಾತೃಸಂಸ್ಥೆ ಕಪಿ ಮುಷ್ಠಿಯಿಂದ ಶಿಕ್ಷಣ ವ್ಯವಸ್ಥೆಯನ್ನು ಹೊರ ತರಬೇಕಿದೆ. ಭಾರತ್ ಜೋಡೋ ಯಾತ್ರೆ ವೇಳೆ ಸಾಕಷ್ಟು ಯುವಕರು ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ದೂರಿದ್ದಾರೆ ಎಂದು ರಾಗಾ ಹೇಳಿದರು.