Tag: ಪ್ರಸ್ತಾವನೆ

  • ಇನ್ಮುಂದೆ ಶಾಲೆಗಳಲ್ಲಿ ಪ್ರಾರ್ಥನೆಯ ಬಳಿಕ ಸಂವಿಧಾನ ಪ್ರಸ್ತಾವನೆ ವಾಚನ ಕಡ್ಡಾಯ

    ಇನ್ಮುಂದೆ ಶಾಲೆಗಳಲ್ಲಿ ಪ್ರಾರ್ಥನೆಯ ಬಳಿಕ ಸಂವಿಧಾನ ಪ್ರಸ್ತಾವನೆ ವಾಚನ ಕಡ್ಡಾಯ

    ಬೆಂಗಳೂರು: ಭಾರತದ ಸಂವಿಧಾನದ ಮಹತ್ವ ಕುರಿತು ಶಾಲಾ ಹಂತದಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಶಾಲೆಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆಯ ಅವಧಿಯಲ್ಲಿ ಸಂವಿಧಾನದ ಪ್ರಸ್ತಾವನೆಯ ವಾಚನವನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಸಂವಿಧಾನದ ಪ್ರಸ್ತಾವನೆಯನ್ನು ಓದಿ ಹೇಳುವ ಮತ್ತು ಉಪಸ್ಥಿತರೆಲ್ಲರೂ ಪುನರ್ ಉಚ್ಚರಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಶಾಲಾ ವ್ಯಾಪ್ತಿಯಲ್ಲಿರುವ ಸಂವಿಧಾನ ತಜ್ಞರನ್ನು ಶಾಲೆಗೆ ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಹ ಸರ್ಕಾರ ಸೂಚಿಸಿದೆ.

    ನವೆಂಬರ್ 26 ರಂದು ಪ್ರತಿವರ್ಷ ಸಂವಿಧಾನದ ದಿನಾಚರಣೆ ಆಚರಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಮುಂದುವರಿದ ಭಾಗವಾಗಿ ಈಗ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನೂ ವಾಚಿಸಲು ಆದೇಶಿಸಲಾಗಿದೆ. ಆ ಮೂಲಕ ಮಕ್ಕಳಲ್ಲಿ ಸಂವಿಧಾನದ ಮಹತ್ವ ಅರಿವಿಗೆ ಬರಲಿ ಎನ್ನುವುದು ಸರ್ಕಾರದ ಆಶಯವಾಗಿದೆ.

    ಪ್ರಸ್ತಾವನೆಯಲ್ಲಿ ಏನಿದೆ?
    “ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮಾಜವಾದಿ, ಜಾತ್ಯತೀತ, ಗಣರಾಜ್ಯವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಭಾರತದ ಸಮಸ್ತ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕುವಂತೆಯೂ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನೆಗಳ ಸ್ವಾತಂತ್ರ್ಯ ದೊರಕುವಂತೆ ಮಾಡುವುದು, ಅಂತಸ್ತು ಮತ್ತು ಅವಕಾಶದಲ್ಲಿ ಸಮಾನತೆಯನ್ನು ಸಾಧಿಸುವ ಹಾಗೂ ಎಲ್ಲರಿಗೂ ವ್ಯಕ್ತಿ ಗೌರವ ದೊರಕಿ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆ ಇವುಗಳನ್ನು ವೃದ್ಧಿಗೊಳಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ಬೆಳೆಸಲು ದೃಢ ಸಂಕಲ್ಪ ಮಾಡಿ ಈ ದಿನ ಅಂದರೆ ನವೆಂಬರ್ 26, 1949ರಂದು ಈ ಸಂವಿಧಾನವನ್ನು ಅಂಗೀಕರಿಸಿ ಶಾಸನ ಮಾಡಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ”

  • ಸಣ್ಣ ನಗರಗಳಲ್ಲಿ ಬರಲಿದೆ ಮೆಟ್ರೋಲೈಟ್ ವ್ಯವಸ್ಥೆ – ಮೆಟ್ರೋಕ್ಕಿಂತ ಭಿನ್ನ ಹೇಗೆ?

    ಸಣ್ಣ ನಗರಗಳಲ್ಲಿ ಬರಲಿದೆ ಮೆಟ್ರೋಲೈಟ್ ವ್ಯವಸ್ಥೆ – ಮೆಟ್ರೋಕ್ಕಿಂತ ಭಿನ್ನ ಹೇಗೆ?

    ನವದೆಹಲಿ: ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಪ್ರಯಾಣಿಕರ ಸಂಚಾರಕ್ಕೆ ಸುಲಭವಾಗಲು ಮೆಟ್ರೊ ಕಾರ್ಯರೂಪಕ್ಕೆ ಬಂತು. ಆದರೆ ಈಗ ಕೇವಲ ಮಹಾನಗರಗಳಷ್ಟೇ ಅಲ್ಲದೆ ಸಣ್ಣ ನಗರಗಳಲ್ಲೂ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮೆಟ್ರೋ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ಸರ್ಕಾರದ ಮುಂದಿಟ್ಟಿದೆ.

    ಈ ಯೋಜನೆಗೆ `ಮೆಟ್ರೋಲೈಟ್’ ಎಂದು ಹೆಸರು ನೀಡಲಾಗಿದ್ದು, ಪ್ರಸ್ತುತವಾಗಿ ಮಹಾನಗರಗಳಲ್ಲಿ ಭಾರೀ ವೆಚ್ಚದಲ್ಲಿ ಮೆಟ್ರೋ ರೈಲು ಕಾರ್ಯರೂಪಕ್ಕೆ ಬಂದಿದೆ. ದೊಡ್ಡ ನಗರಗಳಲ್ಲಿ ಇರುವ ಮೆಟ್ರೋ ರೈಲುಗಳ ಸಂಚಾರ ವ್ಯವಸ್ಥೆಗಿಂತ ಕಡಿಮೆ ವೆಚ್ಚದಲ್ಲಿ `ಮೆಟ್ರೋಲೈಟ್’ ಅಭಿವೃದ್ಧಿ ಮಾಡಬಹುದಾಗಿದೆ. ಸುಮಾರು ಮೂರು ಬೋಗಿಗಳ ಮೆಟ್ರೋ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

    ಈ ಮೆಟ್ರೋಲೈಟ್ ರೈಲಿನಲ್ಲಿ ಸುಮಾರು 300 ಪ್ರಯಾಣಿಕರು ಪ್ರಯಾಣಿಸಬಹುದು. ಇದು ಗಂಟೆಗೆ 25 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಮೆಟ್ರೋಲೈಟ್ ರೈಲುಗಳಿಗೆ ರಸ್ತೆಯ ಪಕ್ಕದಲ್ಲಿ ಮಾರ್ಗ ನಿರ್ಮಿಸಲಾಗುತ್ತದೆ, ಅಗತ್ಯ ಬಿದ್ದರೆ ಮಾತ್ರ ಎತ್ತರದ ಮಾರ್ಗಗಳನ್ನು ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸುರಕ್ಷತೆಗಾಗಿ ರೈಲುಗಳ ಸಂಚಾರ ಮಾರ್ಗದ ಎರಡೂ ಕಡೆಯಲ್ಲೂ ತಂತಿಬೇಲಿಗಳನ್ನು ಹಾಕಲಾಗುವುದು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

    ಎಕ್ಸ್-ರೇ ಲಗೇಜ್ ಸ್ಕ್ಯಾನರ್, ಪ್ಲಾಟ್‍ಫಾರ್ಮ್ ಪರದೆ ಬಾಗಿಲುಗಳು, ಆಟೋಮ್ಯಾಟಿಕ್ ಪ್ರವೇಶ ದ್ವಾರಗಳನ್ನು ಈ ನಿಲ್ದಾಣಗಳು ಹೊಂದಿರುವುದಿಲ್ಲ. ಬದಲಿಗೆ ಟಿಕೆಟ್ ವ್ಯಾಲಿಡೇಟರ್ಸ್ ಮೆಟ್ರೋಲೈಟ್ ರೈಲುಗಳಲ್ಲಿಯೇ ಇರಲಿದ್ದಾರೆ. ಅಲ್ಲದೆ ಪ್ಲಾಟ್‍ಫಾರ್ಮ್ ವ್ಯವಸ್ಥೆ ಇರಲಿದೆ. ಹಾಗೆಯೇ ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ನಡೆಸಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡು ಸಮಾನಾಂತರ ರಸ್ತೆಗಳ ಮಧ್ಯೆ ತಡೆಯಿಲ್ಲದೇ ಸಂಚಾರಕ್ಕಾಗಿ ಸಿಂಗಲ್ ಟ್ರ್ಯಾಕ್ ನಿರ್ಮಿಸಲಾಗುವುದು. ಇಂತಹ ರಸ್ತೆಗಳನ್ನು ಗುರುತಿಸುವ ಕೆಲಸವನ್ನು ನಗರದ ಪಾಲಿಕೆಗಳಿಗೆ ನೀಡಲಾಗುತ್ತದೆ. ಮೆಟ್ರೋಲೈಟ್‍ನಲ್ಲಿ 3 ಪ್ರತ್ಯೇಕಿಸಲಾಗದ ಬೋಗಿಗಳು ಇರಲಿದೆ. ನೆಲದಿಂದ ಬೋಗಿಗಳ ಎತ್ತರ 2.2 ಮಿ. ವರೆಗೆ ಇರುತ್ತದೆ. ಈ ರೈಲು ಗಂಟೆಗೆ ಗರಿಷ್ಟ 60 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ ಹೊಂದಿರುತ್ತದೆ.

    ಈ ಹಿಂದೆ ಎಂದು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಸುಮಾರು 50 ನಗರಗಳಿಗೆ ಮೆಟ್ರೋ ಜಾಲವನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿತ್ತು.