Tag: ಪ್ರಸನ್ನ ಕುಮಾರ್

  • ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್‌!

    ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್‌!

    – ಕೋರ್ಟ್‌ಗೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ಹೇಳಿದ್ದೇನು?

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ ಹೈಕೋರ್ಟ್‌ (Karnataka Highcourt) ನೀಡಿದ್ದ 6 ವಾರಗಳ ಮಧ್ಯಂತರ ಜಾಮೀನು ಅವಧಿ ಇದೇ ಡಿ.11ಕ್ಕೆ ಮುಕ್ತಾಯವಾಗಲಿದೆ. ಆದ್ರೆ ಅದೇ ದಿನ ದರ್ಶನ್‌ ಶಸ್ತ್ರ ಚಿಕಿತ್ಸೆಗೆ ವೈದ್ಯರು ತಯಾರಿ ಮಾಡಿಕೊಂಡಿದ್ದಾರೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಡಿಸೆಂಬರ್‌ 11ರಂದು ದರ್ಶನ್‌ ಶಸ್ತ್ರಚಿಕಿತ್ಸೆಗೆ (Surgery For Darshan) ವೈದ್ಯರು ದಿನಾಂಕ ನಿಗಡಿಪಡಿಸಿದ್ದಾರೆ ಎಂದು ಹಿರಿಯ ವಕೀಲ ಸಿ.ವಿ ನಾಗೇಶ್‌ (CV Nagesh) ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

    ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ರೆಗ್ಯೂಲರ್‌ ಬೇಲ್‌ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದೆ. ಅಲ್ಲದೇ ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿದೆ. ಇದರಿಂದ ಆರೋಪಿ ದರ್ಶನ್‌ಗೆ ರಿಲೀಫ್‌ ಸಿಕ್ಕಂತಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರದ ಆರೋಪಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಎಸ್‌ಪಿಪಿ ಪ್ರಸನ್ನಕುಮಾರ್‌ (SPP Prasannakumar) ಅವರು ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ಆಕ್ಷೇಪಣಾ ವಾದ ಮಂಡಿಸಿದರು. ಬಳಿಕ ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್‌, ಹಲವು ವಿಚಾರಗಳನ್ನು ಕೋರ್ಟ್‌ ಗಮನಕ್ಕೆ ತಂದರು. ಇದೇ ವೇಳೆ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನು ಅವಧಿಯನ್ನ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.

    ಬಳ್ಳಾರಿಯ ವೈದ್ಯರ (Ballari Doctors) ವರದಿಯ ಮೇಲೆ ಜಾಮೀನು ಸಿಕ್ಕಿತ್ತು. ಬಿಜಿಎಸ್ ಆಸ್ಪತ್ರೆಯಲ್ಲಿ ಬಳ್ಳಾರಿ ವೈದ್ಯರ ವರದಿ ಒಪ್ಪಿಕೊಂಡರು, ಆಪರೇಷನ್ ಅವಶ್ಯಕತೆ ಇದೆ ಅಂತ ಹೇಳಿದ್ರು. ಡಾಕ್ಟರ್ ಹೇಳಿದ ಹಾಗೇ ನಾವು ಆಪರೇಷನ್ ಮಾಡಿಸಬೇಕು, ನಾವು ಹೇಳಿದಾಗ ಅಪರೇಷನ್ ಮಾಡಿಸೋದಕ್ಕೆ ಆಗೋದಿಲ್ಲ. ಮೂರು ವಾರ ಆಯ್ತು, ನಾಲ್ಕು ಅಯ್ತು ಅಂತ ಅಪರೇಷನ್ ಮಾಡಿಸಿ ಅನ್ನೋದಕ್ಕೆ ಆಗೋಲ್ಲ ಅಂತ ವಾದಿಸಿದರು. ಈ ವೇಳೆ ನೀವು ದಿನಾಂಕ ನಿಗದಿ ಆಗಿದೆ ಅಂದಿದ್ದೀರಿ ಅಲ್ವಾ? ಅಂತ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿ.ವಿ ನಾಗೇಶ್‌, ಹೌದು ಮುಂದೆ ಹೇಳ್ತೀನಿ ಯಾವಾಗ ಅಂತ ಎಂದರು.

    ದರ್ಶನ್ ಹೋಗಿ 4 ವಾರ ಆಯ್ತು ಆಪರೇಷನ್ ಮಾಡಿ ಅಂತ ಪಟ್ಟು ಹಿಡಿಯೋದಕ್ಕೆ ಆಗೋಲ್ಲ. ಟೈಂ ಮುಗಿಯುತ್ತಾ ಇದೆ ಅಂತ ಒತ್ತಡ ಮಾಡೋಕೆ ಆಗೋಲ್ಲ, ನ.11-21ನೇ ತಾರೀಖು ನೀಡಿದ ವರದಿಯಲ್ಲಿ ಬಿಪಿ ವ್ಯತ್ಯಾಸ ಇದೆ ಅಂತ, ಡಿಸೆಂಬರ್ 5 ರಂದು ಮತ್ತೊಂದು ವರದಿ ನೀಡಲಾಗಿದೆ. ದರ್ಶನ್‌ಗೆ ಸ್ಟಿರಾಯ್ಡ್‌ ಇಂಜೆಕ್ಷನ್ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಜನರಲ್ ಅನಸ್ತೇಷಿಯಾ ನೀಡಲು ತಯಾರಿ ಮಾಡಿಕೊಳ್ಳಲು ದೇಹ ಸಮತೋಲನಕ್ಕೆ ತೆಗೆದುಕೊಳ್ಳುಲಾಗುತ್ತೆ. ಪಿಸಿಯೋಥೆರಪಿ ಮತ್ತು ವ್ಯಾಯಾಮ ಮಾಡಲಾಗುತ್ತಿದೆ, ಡಿ.11 ರಂದು ಶಸ್ತ್ರಚಿಕಿತ್ಸೆ ಮಾಡಿಸಲು ತಯಾರಿ ಮಾಡಲಾಗಿದೆ, ಹೀಗಾಗಿ ದರ್ಶನ್ ಯಾವುದೇ ಮಧ್ಯಂತರ ಆದೇಶ ಉಲ್ಲಂಘನೆ ಮಾಡಿಲ್ಲ, ದಯಮಾಡಿ ಇದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.

    ಇದೇ ವೇಳೆ ರೆಗ್ಯೂಲರ್ ಬೇಲ್‌ಗೂ ಎಸ್‌ಪಿಪಿ ಆಕ್ಷೇಪ ವಾದಕ್ಕೆ ಪ್ರತಿವಾದ ಮಂಡಿಸಿದ ಸಿ.ವಿ ನಾಗೇಶ್‌, ರೇಣುಕಾಸ್ವಾಮಿ ದೇಹದ ಮೇಲೆ 39 ರಕ್ತದ ಕಲೆಗಳು ಇವೆ ಎಂದು ಹೇಳ್ತಾ ಇದ್ದಾರೆ. ಆದ್ರೆ ಬ್ಲೋಡಿಂಗ್ ಇಂಜುರಿ ಇದ್ದದ್ದು ಒಂದೇ ಒಂದು.. ರೇಣುಕಾಸ್ವಾಮಿ ಮೃತದೇಹದಲ್ಲಿ 2.5 ಸೆಂಟಿ ಮೀಟರ್ ಗಾಯ ಮಾತ್ರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಾಸಿಕ್ಯೂಷನ್ ಜೊತೆ ಸೇರಿ ವೈದ್ಯರು ತಿರುಚಿದ್ದಾರೆ. ಪ್ರತಿ ಹಂತದಲ್ಲಿ ಕೂಡ ಪ್ರಾಸಿಕ್ಯೂಷನ್ ಸುಳ್ಳು ಹೇಳುತ್ತಾ ಬರುತ್ತಾ ಇದೆ? ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು ಮಾಡೋದ್ರಿಂದ ಹಿಡಿದು ಮಹಜರು ಮಾಡುವ ತನಕ ಸುಳ್ಳು ಹೇಳಿದೆ ಎಂದು ಪ್ರಬಲ ವಾದ ಮಂಡಿಸಿದರು.

    ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ದರ್ಶನ್ ಸೇರಿ 7 ಜನರ ಜಾಮೀನು ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದೆ. ಅಲ್ಲದೇ ರೆಗ್ಯೂಲರ್‌ ಬೇಲ್‌ ಸಿಗುವವರೆಗೆ ಮಧ್ಯಂತರ ಜಾಮೀಜು ಅವಧಿಯನ್ನ ವಿಸ್ತರಣೆ ಮಾಡಿದೆ.

  • ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೆಟ್ಟು ಹೋದ ಸರ್ವರ್‌ಗೆ ಪಿಂಡ ಇಟ್ಟ ಹೋರಾಟಗಾರ

    ಕೋಲಾರ: ಜಿಲ್ಲೆಯ ಬಹುತೇಕ ಸರ್ಕಾರಿ ಕಛೇರಿಗಳಲ್ಲಿ (Government Office) ಸರ್ವರ್ ಸಮಸ್ಯೆ (Server Down) ಎದುರಾಗಿ ಸಾರ್ವಜನಿಕರು ಇನ್ನಿಲ್ಲದ ಕಷ್ಟಪಡುತ್ತಿರುವುದನ್ನು ಗಮನಿಸಿದ ಹೋರಾಟಗಾರರೊಬ್ಬರು ಪಿಂಡ ಪ್ರದಾನ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಪಿತೃಪಕ್ಷವಾದ ಹಿನ್ನೆಲೆ ನೊಂದ ಹೋರಾಟಗಾರ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿ ಗಮನ ಸೆಳೆದಿದ್ದಾರೆ. ಪಿತೃಪಕ್ಷದ ಹಿನ್ನೆಲೆ ಸರ್ಕಾರಿ ಮಾಲೀಕತ್ವದ ಸರ್ವರ್‌ಗಳಿಗೆ ಪಿಂಡ ಪ್ರದಾನ ಮಾಡಿದ ಸಾಮಾಜಿಕ ಹೋರಾಟಗಾರನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಕೋಲಾರದ (Kolar) ಬಂಗಾರಪೇಟೆ ತಾಲೂಕಿನ ಕರಪನಹಳ್ಳಿ ನಿವಾಸಿ ಪ್ರಸನ್ನ ಕುಮಾರ್ ಹೀಗೆ ಪಡಿತರ, ಆಧಾರ್, ಪಹಣಿ, ಮುಟೇಷನ್, ಬ್ಯಾಂಕ್ ಕಾರ್ಯಗಳಿಗೆ ಅಡ್ಡಿಯಾಗಿರುವ ಸರ್ವರ್‌ಗೆ ಪಿಂಡ ಬಿಟ್ಟು, ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಅಂತರ್ಜಾಲ ಮತ್ತು ಸರ್ವರ್‌ಗಳಿಗೆ ಎಡೆ ಇಟ್ಟು ಶ್ಲೋಕಗಳನ್ನು ಹೇಳಿ ಪಿತೃಪಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸರ್ವರ್‌ಗಳು ಸತ್ತು ಹೋಗಿವೆ, ಅದಕ್ಕಾಗಿ ಇಂದು ಪಿತೃಪಕ್ಷದ ಹಿನ್ನೆಲೆ, ಪಿಂಡ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ನನ್ನ ಬಳಿ ರೇಷನ್ ಕಾರ್ಡ್ ಇದೆ, ಆದ್ರೆ ಸರ್ವರ್ ಸತ್ತು ಹೋಗಿದೆ. ಮೊಬೈಲ್‌ಗೆ ಆಧಾರ್ ಲಿಂಕ್ ಮಾಡಬೇಕು, ಸರ್ವರ್ ಸತ್ತು ಹೋಗಿದೆ. ನಮ್ಮ ತಾತ ಮುತ್ತಾತ ತಂದೆಯವರ ಸಂಪಾದನೆಯ ಆಸ್ತಿ ಮ್ಯೂಟೇಷನ್ ತೆಗೋಬೇಕು, ಸರ್ವರ್ ಸತ್ತು ಹೋಗಿದೆ. ಹೀಗೆ ಯಾವುದೇ ದಾಖಲೆ ಪಡೆಯಲಾಗದೇ ಸಾರ್ವಜನಿಕರು ಪರದಾಡುವಂತಾಗಿದೆ. ಅದಕ್ಕಾಗಿ ಸತ್ತು ಹೋದ ಸರ್ವರ್‌ಗೆ ಪಿಂಡ ಪ್ರದಾನ ಮಾಡುತ್ತಿದ್ದೇನೆ ಎಂದು ಹೇಳಿ ವಿಭಿನ್ನವಾಗಿ ಸರ್ವರ್ ಸಮಸ್ಯೆ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಾನು Law ಓದಿದ್ದೀನಿ, ಬೊಮ್ಮಾಯಿ ಲಾ ಓದಿಲ್ಲ – ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ?: ಸಿದ್ದರಾಮಯ್ಯ

    ಹಿಂದೆ ಕಿತ್ತುಹೋಗಿದ್ದ ಡಾಂಬರ್ ರಸ್ತೆಗೆ ಎಳ್ಳು ನೀರು ಬಿಟ್ಟು ಪ್ರತಿಭಟಿಸಿದ್ದ ಕನ್ನಡಪರ ಹೋರಾಟಗಾರರೂ ಆಗಿರುವ ಪ್ರಸನ್ನ ಕುಮಾರ್ ಅವರ ಹೋರಾಟ ಹಾಗೂ ಪಿಂಡ ಪ್ರದಾನ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಫೋಟಕ ಆಡಿಯೋ ಕಹಾನಿ – ಕಾಂಗ್ರೆಸ್‍ನಲ್ಲಿ ಮತ್ತಷ್ಟು ಅಲ್ಲೋಲ ಕಲ್ಲೋಲ

    ಸ್ಫೋಟಕ ಆಡಿಯೋ ಕಹಾನಿ – ಕಾಂಗ್ರೆಸ್‍ನಲ್ಲಿ ಮತ್ತಷ್ಟು ಅಲ್ಲೋಲ ಕಲ್ಲೋಲ

    – ಡಿಕೆಶಿ ಭರ್ಜರಿ ಗೇಮ್?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದಾರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಈಗ ಕಾಂಗ್ರೆಸ್ ಒಳ ರಾಜಕಾರಣಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಡಿಯೋದಲ್ಲಿ ಒಂದೇ ಪಾನ್‍ಗೆ ಮೂವರು ನಾಯಕರಿಗೆ ಡಿ.ಕೆ.ಶಿವಕುಮಾರ್ ಶಾಕ್ ನೀಡಿದ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಮಾಜಿ ಶಾಸಕ ಪ್ರಸನ್ ಕುಮಾರ್ ಕಾರ್ಯಕರ್ತರೊಬ್ಬರ ಜೊತೆಗಿನ ಸಂಭಾಷಣೆಗೆ ಆಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಡಿಯೋದಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ಸೋಲು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಜಮೀರ್ ಅಹ್ಮದ ವಿಚಾರವಾಗಿ ಮಾತನಾಡಲಾಗಿದೆ.

    ಆಡಿಯೋದಲ್ಲಿ ಏನಿದೆ?:
    ಪ್ರಸನ್ನ ಕುಮಾರ್ : ಮೊದಲು ವಿಠಲ ದಯಾನಂದ್ ಅಶೋಕ್ ಬೇಕಾಗಿತ್ತು.. ಈಗ್ಯಾಕೆ ನಮ್ಮ ಹತ್ತಿರ ಬಂದ..?
    ಕಾರ್ಯಕರ್ತ : ಹುಂ
    ಪ್ರಸನ್ನ ಕುಮಾರ್: ಶಿಸ್ತಿನ ಸಮಿತಿ ಇದೆ. ಅಲ್ಲಿ ಕೊಡ್ತೀನಿ ನೀನು ಕೊಟ್ಟಿರೋ ಕಂಪ್ಲೆಂಟ್.. ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ ಅಂತ ಹೇಳಿ ಕಳುಹಿಸಿದ್ದಾನಂತೆ.
    ಕಾರ್ಯಕರ್ತ: ಹುಂ…
    ಪ್ರಸನ್ನ ಕುಮಾರ್ : ನಾನು ಹೇಳಿದೆ ಅವನಿಗೆ.. ಯಾರು ಇಲ್ಲಾ ನಾನೇ ಅಂತ ತಿಳಿದುಕೊಂಡಿದ್ದಾನೆ ಪುಲಿಕೇಶಿ ನಗರದಲ್ಲಿ. ಮೊದಲು ನೀನು ನನ್ನ ಪಾರ್ಟಿಗೆ ಸೇರಿಸಿಕೊಳ್ಳಿ ಅವನ ಮಾತೆಲ್ಲಾ ಕಡಿಮೆ ಆಗ್ತದೆ ಅಂದೆ.

    ಕಾರ್ಯಕರ್ತ : ಹುಂ..
    ಪ್ರಸನ್ನ ಕುಮಾರ್ : ನಡಿ ಕಾಂಗ್ರೆಸ್ ಆಫೀಸಿಗೆ.. ನಡಿ.. ಸಲೀಂ ಬರ್ತಾನೆ ಮಾತಾಡೋಣ.. ಅಲ್ಲೇ ಡಿಸೈಡ್ ಮಾಡ್ತೀನಿ ಅಂತ.
    ಕಾರ್ಯಕರ್ತ: ಹುಂ..
    ಪ್ರಸನ್ನ ಕುಮಾರ್ : ಪಾರ್ಟಿ ಆಫೀಸ್‍ಗೆ ಹೋದ್ವಿ.. ಅಲ್ಲಿ ಯಾರೋ ಹಾಸನ ಡಿಸ್ಟ್ರಿಕ್‍ನವರು ಬಂದಿದ್ದರು. ಸುಮಾರು ಹೊತ್ತು ಅಲ್ಲೇ ಆಗ್ಬಿಡ್ತು. ನಾನ್ ಬೇರೆ ಟಿಫನ್ ಮಾಡಿಕೊಂಡು ಹೋಗಿರ್ಲಿಲ್ಲ ಸ್ವಲ್ಪ ಗಂಜಿ ಕುಡ್ಕೊಂಡು ಹೋಗಿದ್ದೆ. ಹಂಗೆ ಹಿಂಗೆ ಮಾಡಿ ಎರಡುವರೆ ಮೂರು ಗಂಟೆ ಅಲ್ಲೆ ಆಯ್ತು. ಸಲೀಂ ಕರೆಸಿ.. ನೋಡಿ ಇವನದು ಡೇಟ್ ಫಿಕ್ಸ್ ಮಾಡಿಬಿಡಿ ಅಂತ ಹೇಳಿದರು. ಆಮೇಲೆ ಇನ್ನು ಒಂದು ಸ್ವಲ್ಪ ಹೊತ್ತು ಯಾರೋ ಬಂದ್ರು ಅಂತ ಹೋದರು. ಫೈನಲ್ ಆಗಿ ಒಳಗೆ ಹೋದ್ವಿ .. ಆ್ಯಂಟಿ ಚೇಂಬರ್‍ನಲ್ಲಿ ಶರತ್ ಬಚ್ಚೇಗೌಡ, ಮಧು ಬಂಗಾರಪ್ಪ ಜೊತೆಗೆ ನಿಂದು ಸೇರಿಸಿಕೊಳ್ಳೋಣ.. ಸೇರಿಸೋದಾದರೆ ಪ್ರೆಸ್‍ಮೀಟ್ ಮಾಡಿ ಸೇರಿಸಿಕೊಳ್ಳಬೇಕು. ಹಂಗೇನಾದರು ಇದ್ದರೆ ಈಗಲೇ ಸೇರಿಸಿಕೊಳ್ತೀನಿ.. ಅದು ಸರಿ ಹೋಗೋದಿಲ್ಲ. ಪ್ರೆಸ್‍ಮೀಟ್ ಮಾಡಿ ಸೇರಿಸಿಕೊಳ್ಳಬೇಕು ಅಂತ ಅವರು ಹೇಳಿ ಕಳುಹಿಸಿದರು.

    ಕಾರ್ಯಕರ್ತ: ಈಗ ಸೇರಿಸಿಕೊಂಡ ಮೇಲೆ ಟಿಕೆಟ್ ಕೊಡಬೇಕಲ್ಲ..?
    ಪ್ರಸನ್ನ ಕುಮಾರ್ : ಯಾರು…?
    ಕಾರ್ಯಕರ್ತ: ನಿಮಗೆ ಟಿಕೆಟ್ ಸಿಗಬೇಕಲ್ಲ ಸೇರಿಸಿದ ಮೇಲೆ
    ಪ್ರಸನ್ನ ಕುಮಾರ್ : ಅದು ಆಮೇಲೆ ನೋಡಿಕೊಳ್ಳೋಣ.. ಮೊದಲು ಇನ್ನ ಬಾಳ ದಿಸ ಐತೆ. ಈಗಲೇ ಟಿಕೆಟ್-ಗಿಕೆಟ್ ಅಂತಲ್ಲ ಅದು ಮುಂದಕ್ಕೆ ನೋಡೋಣ.
    ಕಾರ್ಯಕರ್ತ : ಅದೇ ಅದೇ ಮೊದಲು ಎಂಟ್ರಿ.
    ಪ್ರಸನ್ನ ಕುಮಾರ್ : ಅಲ್ಲಿ ಅಲ್ಲಿ ನಾನೊಬ್ಬನೆ ಅನ್ನೋತರ ಇರಬಾರದು ಅವರ ತಲೆಯಲ್ಲಿ.
    ಕಾರ್ಯಕರ್ತ : ಅದು ಕರೆಕ್ಟೇ
    ಪ್ರಸನ್ನ ಕುಮಾರ್: ಟಿಕೆಟ್ ಅಂತು 200% ಅವನಿಗೆ ಕೊಡೋದಿಲ್ಲ.

    ಪ್ರಸನ್ನ ಕುಮಾರ್ : ಚಾಮುಂಡೇಶ್ವರಿ ಎಲ್ಲೋ ಒಂದು ಬೋವಿ ಜನಾಂಗದ್ದು ಕಾನ್ಫರೆನ್ಸ್ ಇತ್ತಂತೆ. ಏಯ್ ನಾನು ಬಸವಲಿಂಗಪ್ಪನ ಮಗನಿಗೆ ಕೊಡದೆ ನಿಮ್ಮವರಿಗೆ ಕೊಟ್ಟಿದೀನಿ ಅಂದ್ರಂತೆ ಅದು ಅಲ್ಲಿ ವೈಲ್ಡ್ ಸ್ಪ್ರೆಡ್ ಆಯ್ತು.
    ಕಾರ್ಯಕರ್ತ : ಹೌದು ಹೇಳಿ
    ಪ್ರಸನ್ನ ಕುಮಾರ್ : ಮೈಸೂರು ಆ ಕಡೆ ಎಲ್ಲಾ ಶಡ್ಯೂಲ್ ಕಾಸ್ಟ್ ನಮ್ಮವರೆಲ್ಲಾ ಜಾಸ್ತಿ ಇದಾರೆ ಅಲ್ಲಿ
    ಕಾರ್ಯಕರ್ತ : ಅವರೆಲ್ಲಾ ಉಲ್ಟಾ ವೋಟ್ ಹಾಕಿದರು.
    ಪ್ರಸನ್ನ ಕುಮಾರ್ : ಎಲ್ಲಾ ಉಲ್ಟಾ ಹಾಕಿದರು

  • ಕಾಂಗ್ರೆಸ್ ಎಂಎಲ್‍ಸಿ ಪ್ರಸನ್ನ ಕುಮಾರ್ ಪುತ್ರ ಹೃದಯಾಘಾತದಿಂದ ನಿಧನ

    ಕಾಂಗ್ರೆಸ್ ಎಂಎಲ್‍ಸಿ ಪ್ರಸನ್ನ ಕುಮಾರ್ ಪುತ್ರ ಹೃದಯಾಘಾತದಿಂದ ನಿಧನ

    ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಪುತ್ರ ಸುಹಾಸ್ (31) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಮೃತ ಸುಹಾಸ್‍ಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲೇ ಕುಸಿದು ಬಿದ್ದಿದ್ದರು. ನಂತರ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸ್ ಕೊನೆಯುಸಿರು ಎಳೆದಿದ್ದಾರೆ. ಸುಹಾಸ್ ಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು.

    ಎಂಎಲ್‍ಸಿ ಪ್ರಸನ್ನ ಕುಮಾರ್ ಅವರ ತೋಟದಲ್ಲಿ ಮೃತ ಪುತ್ರನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಸುಹಾಸ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.