Tag: ಪ್ರಶ್ನೆ

  • ಪ್ರಶ್ನೆ ಮಾಡಿದ ಮತದಾರರನ್ನೇ ಹೀಯಾಳಿಸಿದ ಶಾಸಕ?

    ಪ್ರಶ್ನೆ ಮಾಡಿದ ಮತದಾರರನ್ನೇ ಹೀಯಾಳಿಸಿದ ಶಾಸಕ?

    ಮಂಡ್ಯ: ತಮ್ಮ ಸಮಸ್ಯೆ ಬಗೆಹರಿಸಿ ಎಂದು ತರಾಟೆಗೆ ತೆಗೆದುಕೊಂಡ ಮತದಾರರನ್ನೇ ತಲೆಯೆಲ್ಲ ಮಾತನಾಡ್ತಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಹೀಯಾಳಿಸಿದ ಘಟನೆ ನಡೆದಿದೆ.

    ಕೆಆರ್ ಪೇಟೆ ತಾಲೂಕಿನ, ಕಿಕ್ಕೇರಿ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಶಾಸಕರ ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ದೊಡ್ಡತ್ತಾರಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಮತದಾರರು ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯದ ಬಗ್ಗೆ ಪ್ರಶ್ನೆ ಮಾಡುತ್ತಾ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

    ಜನರ ಪ್ರಶ್ನೆಯಿಂದ ಗೊಂದಲಕ್ಕೆ ಒಳಗಾದ ಶಾಸಕ ನಾರಾಯಣಗೌಡ ನಾನು ನಿಮ್ಮ ಸಮಸ್ಯೆ ಆಲಿಸಲು ಅಧಿಕಾರಿಗಳ ಜೊತೆ ಬಂದಿದ್ದೇನೆ. ಯಾರು ಐದು ಕೋಟಿ ಕೆಲಸ ಹಾಕಿಕೊಟ್ಟಿರೋದು. ತಲೆಯೆಲ್ಲ(ತಲೆಬುಡ ಇಲ್ಲದೆ) ಮತನಾಡ್ತಾರೆ ಎಂದು ಪ್ರಶ್ನೆ ಮಾಡಿದವರ ವಿರುದ್ಧವೇ ತಿರುಗಿ ಬಿದ್ದರು.

    ಈ ವೇಳೆ ಶಾಸಕರ ಬೆಂಬಲಿಗರು ಕೂಡ ಸುಮ್ಮನಿರುವಂತೆ ಸಾರ್ವಜನಿಕರನ್ನು ಮನವಿ ಮಾಡಿದ್ದರು. ಇದರಿಂದ ಮತ್ತಷ್ಟು ಕೆರಳಿದ ಸಾರ್ವಜನಿಕರು ನಾವು ಪ್ರಶ್ನೆ ಮಾಡೋದೆ ತಪ್ಪಾ? ಎಂದು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೆಲಕಾಲ ಸಭೆ ಗೊಂದಲದ ಗೂಡಾಗಿ ಮಾರ್ಪಾಡಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಮ್ಮ ಸ್ತನಗಳು ನೈಜವೇ? – ಸಂದರ್ಶನದಲ್ಲಿ ಶಿಕ್ಷಕಿಗೆ ಎದುರಾಯ್ತು ಭಯಾನಕ ಪ್ರಶ್ನೆ

    ನಿಮ್ಮ ಸ್ತನಗಳು ನೈಜವೇ? – ಸಂದರ್ಶನದಲ್ಲಿ ಶಿಕ್ಷಕಿಗೆ ಎದುರಾಯ್ತು ಭಯಾನಕ ಪ್ರಶ್ನೆ

    ಕೋಲ್ಕತ್ತಾ: ಲಿಂಗಾ ಪರಿವರ್ತನೆ ಶಸ್ತ್ರ ಚಿಕಿತ್ಸೆ ಒಳಪಟ್ಟ ಶಿಕ್ಷಕಿಯರೊಬ್ಬರಿಗೆ ಶಾಲೆಯ ಸಂದರ್ಶನದಲ್ಲಿ ನಿಮ್ಮ ಸ್ತನಗಳು ನಿಜವೇ, ನೀವು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

    ಸುಚಿತ್ರಾ ಡೇ ಎಂಬವರು ಇಂಗ್ಲಿಷ್ ಹಾಗೂ ಭೂಗೋಳ ಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಪಡೆದಿದ್ದು, ಬಿಎಡ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ಶಿಕ್ಷಕರಾಗಿ ಅನುಭವವನ್ನು ಹೊಂದಿದ್ದು, ಶಾಲೆಯೊಂದರಲ್ಲಿ ಶಿಕ್ಷಕರ ಸಂದರ್ಶನಕ್ಕೆ ಹೋದ ವೇಳೆ ಲೈಂಗಿಕ ಶೋಷಣೆ ನಡೆದಿರುವ ಕುರಿತು ಬಹಿರಂಗ ಪಡಿಸಿದ್ದಾರೆ.

    ಅಂದಹಾಗೇ ಹಿರಣ್ಮೆ ಡೇ ಎಂದು ಹೆಸರು ಹೊಂದಿದ್ದ 30 ವರ್ಷದ ಸುಚಿತ್ರಾ ಡೇ 2017 ರಲ್ಲಿ ಲಿಂಗಾ ಪರಿವರ್ತನೆಗೆ ಒಳಗಾಗಿದ್ದರು. ಸಂದರ್ಶನದ ವೇಳೆ ತಮ್ಮನ್ನು ತೃತೀಯ ಲಿಂಗಿಯಂತೆ ಕಂಡು ಹಾಸ್ಯಾಸ್ಪದವಾಗಿ ವರ್ತಿಸಿದ್ದರು ಎಂದು ತಿಳಿಸಿದ್ದಾರೆ. ಇದೇ ವೇಳೆ 2014 ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿದ ಅವರು ಶೈಕ್ಷಣಿಕ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳು ಉದ್ಯೋಗ ಅವಕಾಶ ಪಡೆಯಬಹುದು ಎಂದು 2014 ರಲ್ಲಿ ತೀರ್ಪು ನೀಡಿತ್ತು. ಸದ್ಯ ತಮಗಾದ ಅನುಭವವನ್ನು ಸುಚಿತ್ರಾ ಡೇ ಅವರು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಸಮಿತಿಗೆ ಪತ್ರ ಬರೆದಿದ್ದಾರೆ.

  • ಕೈ, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತಿದ್ದು ನಾವು ಏನು ಮಾಡೋಣ: ಪ್ರಕಾಶ್ ರೈ ಪ್ರಶ್ನೆ

    ಕೈ, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತಿದ್ದು ನಾವು ಏನು ಮಾಡೋಣ: ಪ್ರಕಾಶ್ ರೈ ಪ್ರಶ್ನೆ

    ಬೆಂಗಳೂರು:ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷದ ವಿರುದ್ಧ ಕೋಮುವಾದಿ ಪಕ್ಷ ಎಂದು ಆರೋಪಿಸಿ ಪ್ರಚಾರ ನಡೆಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ, ಇಂದಿನ ರಾಜಕೀಯ ನೇತರಾರರ ನಡೆ ಕಂಡು ಏನು ಮಾಡೋಣ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಪ್ರಕಾಶ್ ರೈ, ನಮ್ಮ ಕ್ಷೇತ್ರದ ಪ್ರತಿನಿಧಿಗಳ ಮೇಲೆ ನಾವಿಟ್ಟ ನಂಬಿಕೆಯನ್ನು, ಇವರು ಇನ್ಯಾರಿಗೋ ಮಾರಿಕೊಳ್ಳುವುದನ್ನು ಬೇರೆ ದಾರಿಯಿಲ್ಲದೇ ಈ ರಾಜಕಾರಣಿಗಳ ಆಟವನ್ನು ನಾವು ಒಪ್ಪಿಕೊಳ್ಳವಂತೆ ಮಾಡಿದೆ. ಸದ್ಯ ನಮ್ಮ ಮೇಲೆ ಅಭಿಪ್ರಾಯ ಹೇರುವುದು ನಾವು ಪ್ರಶ್ನಿಸದಿದ್ದರೆ, ನಮ್ಮ ಈ ಅಸಹಾಯಕತೆಗೆ ಹಾಗೂ ಅಮಾಯಕತೆಯ ದುರುಪಯೋಗಕ್ಕೆ ಯಾರು ಕಾರಣವೆಂದು ನಾವು ಬೇಗ ಗೊತ್ತು ಮಾಡಿಕೊಳ್ಳದಿದ್ದರೆ ಮತ್ತೊಮ್ಮೆ ಸೋಲುವುದು ನಾವೇ ಎಂದು ಬರೆದುಕೊಂಡಿದ್ದಾರೆ.

    ಕರ್ನಾಟಕದ ಸಂವಿಧಾನಿಕ ಸರ್ಕಾರದ ರಚನೆಯ ಕಸರತ್ತು ಆರಂಭವಾಗಿದೆ. ಪ್ರಜೆಗಳಿಗೆ ಈ ಕುರಿತು ಸುದ್ದಿ ನೀಡಬೇಕಾಗುವುದರ ಬದಲು ಯಾರು, ಯಾವ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಪಡೆಯುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

    ಯಾರಿಗೂ ಬಹುಮತ ಬರದ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಬ್ಬರನ್ನೊಬ್ಬರು ಕೊಳ್ಳುವ ಮಾರುವ ವ್ಯಾಪಾರಕ್ಕಿಳಿಯುತ್ತಾರೆ. ನಮ್ಮ ಅನುಮತಿಯಿಲ್ಲದೆ, ತಮ್ಮ ಶಕ್ತ್ಯಾನುಸಾರ ದಕ್ಕಿದ್ದನ್ನು ಹಂಚಿಕೊಂಡು, ಭಿನ್ನಾಭಿಪ್ರಾಯ ಮರೆತು, ವಿಧಾನಸೌಧದೊಳಗೆ ಒಂದಾಗಿ ಓಡಾಡುತ್ತ ಮುಂದಿನ ಚುನಾವಣೆಯವರೆಗೆ ಆರಾಮಾಗಿರುತ್ತಾರೆ ಎಂದು ಟೀಕೆ ಮಾಡಿದ್ದಾರೆ.

    ರಾಜ್ಯ ರಾಜಕಾರಣದ ಕುರಿತು ನಿರಂತರವಾಗಿ ಟೀಕೆ ಮಾಡುತ್ತಿರುವ ಪ್ರಕಾಶ್ ರೈ, ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ನಡೆಗಳ ಕುರಿತು ಹ್ಯಾಪಿ ವಿವೀಂಗ್ ಎಂಬ ಹೆಸರಿನೊಂದಿಗೆ ವ್ಯಂಗ್ಯವಾಡಿ ಟೀಕೆ ಮಾಡುತ್ತಿದ್ದಾರೆ.

    ಚುನಾವಣೆಗೂ ಮೊದಲು ಬಿಜೆಪಿ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿ ಬಿಜೆಪಿಗೆ ಮತ ನೀಡದಂತೆ ಪ್ರಕಾಶ್ ರೈ ಮನವಿ ಮಾಡಿದ್ದರು. ತಾವು ಯಾವುದೇ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಆದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಮುಂದಿನ ಸರ್ಕಾರದ ರಚನೆ ಬಳಿಕವೂ ತಾವು ವಿರೋಧಿ ಸ್ಥಾನದಲ್ಲಿ ನಿಂತು ಜನರಿಗೆ ಪ್ರಶ್ನೆ ಕೇಳಲು ಪ್ರೇರಣೆ ನೀಡುವುದಾಗಿ ಹಾಗೂ ನಿರಂತರ ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.

  • ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಮನಿಲಾ: ನೀವು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದರೆ ಏನು ಮಾಡ್ತೀರ ಅಂತ ಕೇಳಿದಾಗ ಎಲ್ಲಾ ಸ್ಪರ್ಧಿಗಳು ಸಮಾಜಕ್ಕಾಗಿ ಏನಾದ್ರೂ ಸಹಾಯ ಮಾಡ್ತೀನಿ ಎಂದು ಹೇಳಿದ್ರೆ, ಒಬ್ಬ ಸ್ಪರ್ಧಿ ಮಾತ್ರ ಸರಿಯಾಗಿ ಊಟ ಮಾಡಿ ತುಂಬಾ ದಿನ ಆಯ್ತು…. ಬಿಸಿಬೇಳೆ ಬಾತ್ ತಿಂತೀನಿ ಅಂತ ಹೇಳೋದನ್ನ ಜಾಹಿರಾತೊಂದರಲ್ಲಿ ಕೇಳಿರ್ತೀರ. ಆದೇ ರೀತಿ ಇಲ್ಲೊಬ್ಬ ಸ್ಪರ್ಧಿ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪ್ರಾಮಾಣಿಕ ಉತ್ತರದಿಂದ ಸ್ಪರ್ಧೆಯ ನಿರ್ಣಾಯಕರನ್ನೇ ದಂಗಾಗಿಸಿದ್ದಾಳೆ.

    ಸೌಂದರ್ಯ ಸ್ಪರ್ಧೆಗಳು ಸ್ಕ್ರಿಪ್ಟೆಡ್ ಆಗಿರುತ್ತೆ, ಸ್ಪರ್ಧಿಗಳು ನೀಡೋ ಉತ್ತರ ಮೊದಲೇ ಅಭ್ಯಾಸ ಮಾಡಿಕೊಂಡು ಬಂದಿರುತ್ತಾರೆ ಎಂಬ ಆರೋಪವಿದೆ. ಆದ್ರೆ ಮಿಸ್ ಫಿಲಿಪೈನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬಳು ಪ್ರಶ್ನೋತ್ತರ ಸುತ್ತಿನಲ್ಲಿ ಸುಳ್ಳು ಹೇಳದೇ ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ಟಾಪ್ 15 ಸ್ಪರ್ಧಿಗಳಲ್ಲಿ ಮೊದಲು ವೇದಿಕೆ ಮೇಲೆ ಕರೆಯಲಾದ ಸಾಂದ್ರಾ ಲೆಮೊನಾನ್ ಗೆ ಸರ್ಕಾರಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸರ್ಕಾರದ ಬಿಲ್ಡ್, ಬಿಲ್ಡ್, ಬಿಲ್ಡ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸ್ಪರ್ಧೆಯ ನಿರ್ಣಾಯಕರು ಕೇಳಿದ್ದರು. ಇದಕ್ಕೆ ಸಾಂದ್ರಾ ಸುಮ್ಮನೆ ಬುರುಡೆ ಬಿಡುವ ಬದಲು, ಸಾವಿರಾರು ಪ್ರೇಕ್ಷಕರ ಮುಂದೆ ತನಗೆ ಈ ಯೋಜನೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ನಿಜ ಹೇಳಬೇಕೆಂದರೆ, ನಾನು ಈ ಪ್ರಶ್ನೋತ್ತರ ಸುತ್ತಿಗಾಗಿ ಬಹಳ ಓದಿಕೊಂಡಿದ್ದೆ. ಆದ್ರೆ ಈ ವಿಷಯದ ಬಗ್ಗೆ ನನಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದ್ರೂ ನಾನೊಂದು ಒಳ್ಳೆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲು ಇಲ್ಲಿದ್ದೇನೆ, ಧನ್ಯವಾದ ಎಂದು ಹೇಳಿ ತನಗೆ ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂಬುದನ್ನ ವೇದಿಕೆ ಮೇಲೆಯೇ ಹೇಳಿದ್ದಾಳೆ.

    ಸ್ಪರ್ಧಿಯ ಈ ಪ್ರಾಮಾಣಿಕ ಉತ್ತರ ಕೇಳಿ ಕಾರ್ಯಕ್ರಮದ ನಿರೂಪಕಿ ಹಾಗೂ 2015ರ ಮಿಸ್ ಯೂನಿವರ್ಸ್ ಪಿಯಾ ವರ್ಟ್‍ಬ್ಯಾಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು, ಸುಳ್ಳು ಹೇಳುವುದಕ್ಕಿಂತ ಇದು ಉತ್ತಮ ಎಂದು ವರ್ಟ್‍ಬ್ಯಾಚ್ ಹೇಳಿದ್ದಾರೆ.

    ಪ್ರಾಮಾಣಿಕ ಉತ್ತರ ನೀಡಿದ ಸಾಂದ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಂತಿಮವಾಗಿ ಸಾಂದ್ರಾ ಸ್ಪರ್ಧೆಯಲ್ಲಿ ಗೆದ್ದಿಲ್ಲವಾದ್ರೂ ಸಾವಿರಾರು ಅಭಿಮಾನಿಗಳನ್ನ ಗೆದ್ದಿದ್ದಾರೆ.

    https://www.youtube.com/watch?time_continue=11&v=sMJpf1DV9-4

  • ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ- ಪವರ್ ಮಿನಿಸ್ಟರ್‍ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನಾವಳಿ ಇಲ್ಲಿದೆ

    ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ- ಪವರ್ ಮಿನಿಸ್ಟರ್‍ಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನಾವಳಿ ಇಲ್ಲಿದೆ

    – ಇಸ್ಪೀಟ್ ಆಟದ ಬಗ್ಗೆಯೂ ಬರೆದಿದ್ದರಂತೆ ಪವರ್ ಮಿನಿಸ್ಟರ್
    – ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವ್ಯವಹಾರದ ಬಗ್ಗೆಯೂ ಪ್ರಶ್ನಿಸಿದ ಐಟಿ

    ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್‍ಗೆ ಆದಾಯ ತೆರಿಗೆ ಇಲಾಖೆ ಆಸ್ತಿ, ವ್ಯವಹಾರದ ಬಗ್ಗೆ ಕೇಳಿರೋ ಪ್ರಶ್ನಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವ್ಯವಹಾರದ ಬಗ್ಗೆಯೂ ಐಟಿ ಕೆದಕಿದ್ದು, ಈ ಬಗೆಗಿನ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು? ಅದಕ್ಕೆ ಡಿಕೆಶಿ ಉತ್ತರಿಸಿದ್ದೇನು ಎಂಬ ವಿವರ ಇಲ್ಲಿದೆ.

    1 ಐಟಿ ಪ್ರಶ್ನೆ: ನಿಮ್ಮ ಬಗ್ಗೆ ಪರಿಚಯಿಸಿಕೊಳ್ಳಿ.
    ಡಿಕೆಶಿ ಉತ್ತರ: ನಾನು ಡಿಕೆ ಶಿವಕುಮಾರ್, 56 ವರ್ಷ, ಕೆಂಪೇಗೌಡ ನಮ್ಮ ತಂದೆ #252, 18ನೇ ಮೇನ್ ಸದಾಶಿವ ನಗರ. ನಾನು ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವನಾಗಿ ಕೆಲಸ ಮಾಡ್ತಾ ಇದ್ದೀನಿ. ನನ್ನ ಸ್ಟೇಟ್‍ಮೆಂಟ್ ಇಂಗ್ಲೀಷ್‍ನಲ್ಲಿ ರೆಕಾರ್ಡ್ ಮಾಡಲಿಕ್ಕೆ ನನ್ನದೇನು ಅಭ್ಯಂತರ ಇಲ್ಲ. ನಾನು ಎಂಎ ಪದವೀಧರ.

    2 ಐಟಿ ಪ್ರಶ್ನೆ: ಸಂವಿಧಾನದ ಮೇಲೆ ನಂಬಿಕೆ ಇಟ್ಟು ಹೇಳಿ, ನೀವು ಕೊಡುವ ಎಲ್ಲಾ ಹೇಳಿಕೆಗಳು ಸತ್ಯವಾಗಿದೆ ಎಂದು ಈ ಮೂಲಕ ದೃಢೀಕರಿಸಿ. ತಪ್ಪೇನಾದ್ರೂ ಹೇಳಿದ್ರೆ ದಂಡ ತೆರಬೇಕಾಗುತ್ತೆ ಅಂತ ನಿಮಗೆ ತಿಳಿದಿದೆ ಅಲ್ವಾ?
    ಡಿಕೆಶಿ ಉತ್ತರ: ಹೌದು, ನನಗೆ ಅದರ ಅರಿವಿದೆ

    3 ಐಟಿ ಪ್ರಶ್ನೆ: ತಪ್ಪೇನಾದ್ರೂ ಹೇಳಿದ್ರೆ ದಂಡ ತೆರಬೇಕಾಗುತ್ತೆ ಅಂತ ನಿಮಗೆ ತಿಳಿದಿದೆ ಅಲ್ವಾ. ಯಾವ್ಯಾವ ಸೆಕ್ಷನ್‍ನಲ್ಲಿ ಎಷ್ಟು ಶಿಕ್ಷೆ ಅನ್ನೋದು ಗೊತ್ತಿದೆ ಅಲ್ವಾ?
    ಡಿಕೆಶಿ ಉತ್ತರ: ನನಗೆ ಅದರ ಅರಿವಿದೆ. ನಾನು ಈ ಮೂಲಕ ದೃಢೀಕರಿಸುತ್ತಾ ಇದ್ದೇನೆ, ತಪ್ಪೇನಾದ್ರೂ ಹೇಳಿದ್ರೆ ಅದರ ದಂಡ ತೆರುತ್ತೇನೆ.

    4 ಐಟಿ ಪ್ರಶ್ನೆ: ನಿಮ್ಮ ಕುಟುಂಬವನ್ನು ಪರಿಚಯಿಸಿ. ಮತ್ತು ಕುಟುಂಬ ಸದಸ್ಯರ ಆದಾಯದ ಮೂಲ ತಿಳಿಸಿ.
    ಡಿಕೆಶಿ ಉತ್ತರ: ನನ್ನ ಪೋಷಕರು ಕೆಂಪೇಗೌಡ ನನ್ನ ತಂದೆ, ಅವರು ನಿಧನರಾಗಿದ್ದಾರೆ. ತಾಯಿ ಗೌರಮ್ಮ, ನಾವು ಇಬ್ಬರು ಗಂಡು ಮಕ್ಕಳು. ನನ್ನ ತಮ್ಮನ ಹೆಸರು ಡಿ.ಕೆ ಸುರೇಶ್, ಪ್ರಸ್ತುತ ಸಂಸದರಾಗಿದ್ದಾರೆ. ನನಗೆ ಒಬ್ಬರು ಚಿಕ್ಕ ತಂಗಿ ಇದ್ದಾರೆ. ಅವರು ಮದುವೆಯಾಗಿದ್ದು, ಗೃಹಿಣಿಯಾಗಿದ್ದಾರೆ. ನನ್ನ ಹೆಂಡತಿಯ ಹೆಸರು ಉಷಾ, ಮಗಳ ಹೆಸರು ಐಶ್ವರ್ಯ, ಎಂಜಿನಿಯರಿಂಗ್ ಮುಗಿಸಿದ್ದಾಳೆ. ಆಭರಣ ಎಂಬ ಮಗಳು ಇದ್ದಾಳೆ. ಹನ್ನೊಂದನೇ ತರಗತಿ ಓದುತ್ತಿದ್ದಾಳೆ. ನನ್ನ ಮಗ ಆಕಾಶ್, ಒಂಬತ್ತನೇ ತರಗತಿಯಲ್ಲಿ ಓದುತ್ತಾ ಇದ್ದಾನೆ. ನನ್ನ ಹೆಂಡತಿ ಉಷಾ ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದಾಳೆ. ನನ್ನ ಹೆಂಡತಿ ಮತ್ತು ನನ್ನ ಆದಾಯದ ಮೂಲದ ಮಾಹಿತಿಗಳನ್ನು ಈಗಾಗಲೇ ನಿಮಗೆ ನೀಡಿದ್ದೇನೆ. ನನ್ನ ಮಗಳು ಐಶ್ವರ್ಯ ಪ್ರತ್ಯೇಕ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಾ ಇದ್ದಾಳೆ. 2016 -17ರಲ್ಲಿ ಆದಾಯ ತೆರಿಗೆ ಪಾವತಿ ಮಾಡಿದ್ದಾಳೆ. ಕೆಲವೊಂದು ರಿಯಲ್ ಎಸ್ಟೇಟ್‍ನಲ್ಲಿ ಶೇರುಗಳನ್ನು ಖರೀದಿ ಮಾಡಿದ್ದಾಳೆ. ಅದರ ಬಗ್ಗೆಯೂ ನಿಮಗೆ ಮಾಹಿತಿ ನೀಡಲಾಗಿದೆ. ಇನ್ನು ಇಬ್ಬರು ಮಕ್ಕಳು ಅಪ್ರಾಪ್ತರಾಗಿ ಇರೋದ್ರಿಂದ ಯಾವುದೇ ಆದಾಯದ ಮೂಲಗಳು ಇಲ್ಲ.

    5 ಐಟಿ ಪ್ರಶ್ನೆ: ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು, ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದೀರಾ. ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಿ. ಮತ್ತು ನಿಮ್ಮ ಪಾನ್‍ಕಾರ್ಡ್ ಮಾಹಿತಿ ನೀಡಿ
    ಡಿಕೆಶಿ ಉತ್ತರ: ಹೌದು, ನಾವು ಪ್ರತಿವರ್ಷ ಆದಾಯ ತೆರಿಗೆ ಪಾವತಿ ಮಾಡ್ತಾ ಇದ್ದೀವಿ. ನಾನು ಪಾವತಿ ಮಾಡುತ್ತಾ ಇರೋ ಪಾನ್ ಸಂಖ್ಯೆ ****6ಎಫ್

    6 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬ ಹೊಂದಿರುವ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ತಿಳಿಸಿ.
    ಡಿಕೆಶಿ ಉತ್ತರ: ನನಗೆ ಸದ್ಯಕ್ಕೆ ಬ್ಯಾಂಕ್ ಅಕೌಂಟ್‍ಗಳ ಮಾಹಿತಿ ನೆನಪಿಗೆ ಬರ್ತಿಲ್ಲ. ಸಕಾಲದಲ್ಲಿ ಎಲ್ಲದರ ಬಗ್ಗೆ ಮಾಹಿತಿ ನೀಡ್ತೀನಿ.

    7 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ ಯಾವುದಾದರು ಬ್ಯಾಂಕ್ ಲಾಕರ್‍ಗಳು ಇದ್ದಾವಾ? ಇದ್ರೆ ಅದರ ಬಗ್ಗೆ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ನನ್ನದಾಗಲಿ ಮತ್ತು ನನ್ನ ಕುಟುಂಬದ್ದಾಗಲೀ ಯಾವುದೇ ಬ್ಯಾಂಕ್ ಲಾಕರ್‍ಗಳು ಇಲ್ಲ.

    8 ಐಟಿ ಪ್ರಶ್ನೆ: ನೀವು ಮತ್ತು ನಿಮ್ಮ ಭಾಗಿದಾರರಾಗಿರುವ ಕಂಪನಿಗಳಲ್ಲಿ ನಿಮ್ಮ ಪಾತ್ರ ಏನು? ಯಾವ ರೀತಿ ಹುದ್ದೆಯನ್ನು ಅಲಂಕರಿಸಿದ್ದೀರಿ? ಅದರ ಬಗ್ಗೆ ಹೇಳಿ
    ಡಿಕೆಶಿ ಉತ್ತರ: ನಾನು ಕಂಪನಿಗಳ ಆದಾಯ ತೆರಿಗೆಯನ್ನು ಪ್ರತಿ ವರ್ಷ ಪಾವತಿ ಮಾಡ್ತಾ ಇದ್ದೀನಿ. ಅದನ್ನೆಲ್ಲಾ ಕೊಡ್ತೀನಿ, ಆಗ ಎಲ್ಲಾ ಮಾಹಿತಿ ನಿಮಗೆ ತಿಳಿಯುತ್ತೆ.

    9. ಐಟಿ ಪ್ರಶ್ನೆ: ನಿಮ್ಮ ಕಂಪನಿಗಳು ಯಾವ ರೀತಿ ಕೆಲಸ ಮಾಡುತ್ತೆ. ಅದು ಏನೇನು ಪಾತ್ರ ನಿರ್ವಹಣೆ ಮಾಡುತ್ತೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನಾನು ಈಗಾಗಲೇ ಹೇಳಿದಂತೆ, ನಾನು ಯಾವುದರ ಬಗ್ಗೆಯೂ ಮುಚ್ಚಿಡೋದಿಲ್ಲ. ಎಲ್ಲದರ ಬಗ್ಗೆಯೂ ನಿಮಗೆ ಮಾಹಿತಿಯನ್ನು ನೀಡುತ್ತೇನೆ.

    10 ಐಟಿ ಪ್ರಶ್ನೆ: ನಾನು ಈಗಾಗಲೇ ಹೇಳಿದಂತೆ ತಪ್ಪು ಮಾಹಿತಿ ನೀಡಿದ್ರೆ ಯಾವ ಶಿಕ್ಷೆಯಾಗುತ್ತೆ ಅಂತ ನಿಮಗೆ ಅರಿವಿದೆ ಅಲ್ವಾ? ಇಲ್ಲಿವರೆಗೂ ನೀಡಿದ ಮಾಹಿತಿ ಸರಿಯಿದೆ ಎಂದು ದೃಢಿಕರಿಸ್ತೀರಾ?
    ಡಿಕೆಶಿ ಉತ್ತರ: ಹೌದು, ನಾನು ಇದುವರೆಗೂ ಕೂಡ ಸತ್ಯವನ್ನೇ ಹೇಳಿದ್ದೇನೆ. ಶಿಕ್ಷೆಯ ಬಗ್ಗೆಯೂ ಅರಿವಿದೆ.

    11 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಚರಾಸ್ತಿಯ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಸದ್ಯಕ್ಕೆ ಯಾವುದರ ಬಗ್ಗೆಯೂ ನೆನಪಿಲ್ಲ. ಕ್ರಮೇಣ ನಿಮಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡ್ತೀನಿ.

    12 ಐಟಿ ಪ್ರಶ್ನೆ: ನಿಮ್ಮ ಮತ್ತು ನಿಮ್ಮ ಕುಟುಂಬದ ಸ್ಥಿರಾಸ್ತಿಯ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಸದ್ಯಕ್ಕೆ ಯಾವುದರ ಬಗ್ಗೆಯೂ ನೆನಪಿಲ್ಲ, ಕ್ರಮೇಣ ನಿಮಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ. ಅದರ ಪಟ್ಟಿ ದೊಡ್ಡದಾಗಿ ಇರೋದ್ರಿಂದ ಸದ್ಯದಲ್ಲಿ ಮಾಹಿತಿ ನೀಡುತ್ತೇನೆ.

    13 ಐಟಿ ಪ್ರಶ್ನೆ: ನೀವು ಯಾವ ರೀತಿಯ ವ್ಯವಹಾರವನ್ನು ಮಾಡ್ತಿರಾ. ನಿಮಗೆ ಆದಾಯದ ಮೂಲ ಯಾವುದು ಸ್ಪಷ್ಟ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನಾನು ರೈತ, ನನ್ನದೇ ಆದಂತಹ ರಿಯಲ್ ಎಸ್ಟೇಟ್ ವ್ಯವಹಾರ ಇದೆ. ಬೆಂಗಳೂರಿನಲ್ಲಿ ನನ್ನದೇ ಆದಂತಹ ಕೆಲವು ಆಸ್ತಿ- ಪಾಸ್ತಿಯಿದೆ. ಗ್ರಾನೈಟ್ ಕ್ವಾರಿಗಳು ಇವೆ. ನನ್ನ ಆದಾಯ ಈ ಎರಡೂ ವ್ಯವಹಾರಗಳಿಂದ ಪಡೆಯುತ್ತಿದ್ದೇನೆ. ಇವಾಗಿನ ದೊಡ್ಡ ಆದಾಯ ಅಂದರೆ ಜಂಟಿ ಪಾಲುದಾರಿಕೆ ಹೊಂದಿದ್ದೇನೆ. ಆ ಆದಾಯ ಬರಬೇಕಿದೆ, ಇನ್ನು ಸಹ ಅದರ ಆದಾಯ ನನ್ನ ಕೈಸೇರಿಲ್ಲ.

    14 ಐಟಿ ಪ್ರಶ್ನೆ: ನಿಮ್ಮ ನ್ಯಾಷನಲ್ ಎಜುಕೇಷನ್ ಟ್ರಸ್ಟ್ ಮತ್ತು ಅಪೋಲೋ ಎಜುಕೇಷನ್ ಟ್ರಸ್ಟ್ ಬಗ್ಗೆ ವಿವರಣೆ ನೀಡಿ.
    ಡಿಕೆಶಿ ಉತ್ತರ: ನಾನು ಎರಡೂ ಸಂಸ್ಥೆಗಳಲ್ಲಿ ಛೇರಮನ್, ನನ್ನ ಹೆಸರಿನಲ್ಲಿ ಇನ್ನೊಂದು ಡಿಕೆಎಸ್ ಎಂಬ ಚಾರಿಟಬಲ್ ಟ್ರಸ್ಟ್ ಇದೆ. ಎನ್‍ಇಎಫ್ ಟ್ರಸ್ಟ್‍ನಲ್ಲಿ ಎಂಜಿನಿಯರಿಂಗ್ ಕಾಲೇಜ್, ನರ್ಸಿಂಗ್ ಕಾಲೇಜ್ ಎಂಬಿಎ ಸ್ಕೂಲ್‍ಗಳು ಇವೆ. ಅಪೋಲೋ ಎಜುಕೇಷನ್ ಟ್ರಸ್ಟ್‍ನಲ್ಲಿ ಐಸಿಎಸ್‍ಸಿ ಸ್ಕೂಲ್ ಇದೆ. ನಾನು ಬಿಟಿಎಲ್ ಎಜುಕೇಷನ್ ಟ್ರಸ್ಟ್‍ನಲ್ಲಿ ಕಾರ್ಯಾಧ್ಯಕ್ಷನಾಗಿದ್ದೇನೆ ಮತ್ತು ಜ್ಞಾನವಿಕಾಸ್ ಎಜುಕೇಷನ್ ಸೊಸೈಟಿಯಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ.

    15 ಐಟಿ ಪ್ರಶ್ನೆ: ನಿಮಗೆ ಬರುವ ಆದಾಯದ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ಅವುಗಳ ಬಗ್ಗೆ ನನ್ನ ಆಡಿಟರ್ ಜೊತೆ ಮಾತನಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತೇನೆ.

    16 ಐಟಿ ಪ್ರಶ್ನೆ: ನೀವು ಎಲ್ಲಿಂದಾದರೂ ಸಾಲವನ್ನು ಪಡೆದುಕೊಂಡಿದ್ದೀರಾ ಎಂಬ ಮಾಹಿತಿಯನ್ನು ನೀಡಿ?
    ಡಿಕೆಶಿ ಉತ್ತರ: ಅವುಗಳ ಬಗ್ಗೆ ನನ್ನ ಆಡಿಟರ್ ಜೊತೆ ಮಾತನಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತೇನೆ.

    17 ಐಟಿ ಪ್ರಶ್ನೆ: ನಿಮ್ಮ ಮನೆಯಲ್ಲಿ ದಾಳಿ ನಡೆಸಿದಾಗ 1 ಲಕ್ಷ 88 ಸಾವಿರ ಹಣ ಸಿಕ್ಕಿದೆ. ಅದನ್ನು ನಿಮ್ಮ ಪತ್ನಿ ಉಷಾ ಅವರ ಉಪಸ್ಥಿತಿಯಲ್ಲಿ ಸೀಜ್ ಮಾಡಿದ್ದೇವೆ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನನಗೆ ಮಾಹಿತಿ ಇದೆ.

    18 ಐಟಿ ಪ್ರಶ್ನೆ: ನಿಮ್ಮ ಮನೆಯಲ್ಲಿ ದಾಳಿ ನಡೆಸಿದಾಗ ಹಣ ಸಿಕ್ಕಿದೆ ಜೊತೆಗೆ ಚಿನ್ನಾಭರಣಗಳು ವಜ್ರದ ಆಭರಣಗಳು ಸಿಕ್ಕಿದೆ. ಅದನ್ನು ನಿಮ್ಮ ಪತ್ನಿ ಉಷಾ ಅವರ ಉಪಸ್ಥಿತಿಯಲ್ಲಿ ಸೀಜ್ ಮಾಡಿದ್ದೇವೆ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನನಗೆ ಮಾಹಿತಿ ಇದೆ. ಅದನ್ನು ನೀವು ವಾಪಸ್ಸು ನೀಡಿದ್ದೀರಿ.

    19 ಐಟಿ ಪ್ರಶ್ನೆ: ನೀವು ಮನೆಯನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ಚಿನ್ನಾಭರಣ ಇಟ್ಟಿದ್ದೀರಾ?
    ಡಿಕೆಶಿ ಉತ್ತರ: ನನಗೆ ಮಾಹಿತಿ ಸದ್ಯಕ್ಕೆ ನೆನಪಿಲ್ಲ.

    20 ಐಟಿ ಪ್ರಶ್ನೆ: ಈಗಲ್‍ಟನ್ ರೆಸಾರ್ಟ್‍ನ ಮೇಲೆ ದಾಳಿ ನಡೆಸಿದಾಗ ನೀವು ಇದ್ದಂತಹ ರೂಂ ನಂಬರ್ 216ರಲ್ಲಿ ಸಿಕ್ಕಂತಹ ಲೂಸ್ ಶೀಟ್‍ಗಳನ್ನು ತೋರಿಸ್ತಾ ಇದ್ದೇನೆ ಅದರ ಬಗ್ಗೆ ಮಾಹಿತಿಯನ್ನು ನೀಡಿ.
    ಡಿಕೆಶಿ ಉತ್ತರ: ನೀವು ತೋರಿಸುತ್ತಿರುವ ಪತ್ರಗಳು ರೂಂ ನಂಬರ್ 216ರಲ್ಲಿ ಸಿಕ್ಕಿದೆ. ಅದನ್ನು ನೀವು ಸೀಜ್ ಮಾಡಿದ್ದೀರಿ. ನಾನು ಸಚಿವನಾಗಿರೋದ್ರಿಂದ ಸಾಕಷ್ಟು ಜನ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳಲು, ಭೇಟಿ ಮಾಡಲು ಕೊಟ್ಟಿರುವ ಪತ್ರಗಳು. ಅದರ ಬಗ್ಗೆ ನೋಡಿ ನಿಮಗೆ ಮಾಹಿತಿಯನ್ನು ನೀಡುತ್ತೇನೆ. ಪೇಜ್ ನಂಬರ್ 1ರಲ್ಲಿ ಇರುವಂತೆ, ನನ್ನ ಕುಟುಂಬಕ್ಕೆ ಆಭರಣಗಳನ್ನು ಖರೀದಿ ಮಾಡಲು ಲೆಕ್ಕಾಚಾರ ಮಾಡಿದ್ದೆ. ನಾನು ಕೇವಲ ಲೆಕ್ಕವನ್ನು ಮಾಡಿದ್ದೆ ಹೊರತು ಇನ್ನೂ ಖರೀದಿ ಮಾಡಿಲ್ಲ. ಇನ್ನುಳಿದಂತೆ ಇರುವ ಪತ್ರಗಳು ಪಾರ್ಟಿಗೆ ಸಂಬಂಧಪಟ್ಟವು ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಪಟ್ಟವು.

    21. ಐಟಿ ಪ್ರಶ್ನೆ: ನಿಮ್ಮ ಸದಾಶಿವನಗರ ಮನೆಯ ಮೇಲೆ ದಾಳಿ ನಡೆಸಿದಾಗ ಸಿಕ್ಕಂತಹ ಪತ್ರಗಳ ಬಗ್ಗೆ ಪ್ರಶ್ನೆ ಮಾಡ್ತಾ ಇದ್ದೀನಿ. ಅದನ್ನು ನೀವು ಉತ್ತರ ನೀಡುವ ಮೂಲಕ ದೃಢೀಕರಿಸಿ.
    ಡಿಕೆಶಿ ಉತ್ತರ: ಹೌದು, ನಮ್ಮ ಮನೆಯಲ್ಲಿ ಸಾಕಷ್ಟು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದೀರಿ. ಅವೆಲ್ಲವೂ ಕೂಡ ಆಸ್ತಿಯ ಪತ್ರಗಳು. ಒಂದಷ್ಟು ಪಾಲುದಾರಿಕೆಯ ಬಗ್ಗೆ ಪತ್ರಗಳನ್ನು ಇಟ್ಟುಕೊಂಡಿದ್ದೇನೆ. ಎಜುಕೇಷನ್ ಸೊಸೈಟಿಗೆ ಸಂಬಂಧಪಟ್ಟ ಪತ್ರಗಳು. ಶೋಭಾ ಡೆವಲಪರ್ಸ್ ಸಹಭಾಗಿತ್ವದ ಪತ್ರಗಳು ಮತ್ತು ನನ್ನ ಮಗಳಿಗೆ ಫ್ಲ್ಯಾಟ್ ಖರೀದಿ ಮಾಡಲು ಇಟ್ಟುಕೊಂಡಿದ್ದ ಪತ್ರಗಳಾಗಿವೆ.

    22. ಐಟಿ ಪ್ರಶ್ನೆ: ನಿಮ್ಮ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಚೆನ್ನರಾಜ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಕಳೆದ 10 ವರ್ಷಗಳ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಪಕ್ಷದ ಒಬ್ಬ ರಾಜಕಾರಣಿಯಾಗಿದ್ದಾರೆ. ಚೆನ್ನರಾಜ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ. ಇಬ್ಬರ ನಡುವೆಯು ಸಹ ವ್ಯವಹಾರಿಕ ಸಂಬಂಧಗಳು ಇಲ್ಲ

    23. ಐಟಿ ಪ್ರಶ್ನೆ: ನಾನು ನಿಮ್ಮ ಮನೆಯಲ್ಲಿ ವಶಪಡಿಸಿಕೊಂಡ ಕೆಲವು ಪೇಜ್‍ಗಳನ್ನ ತೋರಿಸುತ್ತಿದ್ದೇನೆ. ಇದರಲ್ಲಿರುವಂತೆ ನಿಮ್ಮ ಅಕೌಂಟ್‍ನಲ್ಲಿ 32 ಕೋಟಿ ರೂ. ತೋರಿಸುತ್ತಿದೆ. ಅದ್ರಲ್ಲಿ 15.92 ಕೋಟಿ ರೂ. ಕೆಲವರಿಗೆ ಟ್ರಾನ್ಸ್ ಫರ್ ಮಾಡಿರೋ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ಅದು ನಾನು ಬರೆದಿದ್ದಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ.

    24. ಐಟಿ ಪ್ರಶ್ನೆ: ನಾವು ನಿಮಗೆ ಕೆಲವೊಂದು ನೋಟ್ ಬುಕ್‍ಗಳನ್ನ ತೋರಿಸುತ್ತಿದ್ದೇವೆ. ಅದ್ರಲ್ಲಿರೋ ಬಗ್ಗೆ ಮಾಹಿತಿ ತಿಳಿಸಿ.
    ಡಿಕೆಶಿ ಉತ್ತರ: ಇಸ್ಪೀಟ್ ಆಟದ ಬಗ್ಗೆ ಒಂದಷ್ಟು ಮಾಹಿತಿಯನ್ನು ಬರೆದಿಟ್ಟಿದ್ದೆ. ಅದಕ್ಕೂ ನನ್ನ ವ್ಯವಹಾರಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ.

    25. ಐಟಿ ಪ್ರಶ್ನೆ: ಗ್ಲೋಬಲ್ ಮಾಲ್ ಪ್ರಾಜೆಕ್ಟ್‍ನಲ್ಲಿ ನಿಮ್ಮ ಪಾತ್ರ ಏನು? ನಿಮಗೆ ಅದರ ಜೊತೆ ಯಾವ ರೀತಿಯ ವ್ಯವಹಾರಿಕ ಸಂಬಂಧ ಇದೆ ತಿಳಿಸಿ.
    ಡಿಕೆಶಿ ಉತ್ತರ: ಈ ಪ್ರಪೋಸಲ್ ಗ್ಲೋಬಲ್ ಮಾಲ್ ಪ್ರಾಜೆಕ್ಟ್ ಕುರಿತಾಗಿದ್ದು, ಶೋಭಾ ಡೆವಲಪರ್ಸ್ ಜೊತೆ ಸಹಭಾಗಿತ್ವವನ್ನು ಹೊಂದಿದ್ದೇವೆ. ಜೊತೆಗೆ ದುಬೈನ ಒಬ್ಬ ಉದ್ಯಮಿ ಪ್ರಕಾಶ್‍ನೊಂದಿಗೆ ಸೇರಿ ಅಮ್ಯೂಸ್‍ಮೆಂಟ್ ಪಾರ್ಕ್ ಕುರಿತು ಮಾತುಕತೆ ನಡೆಸಿದ್ದೇವೆ. ಜೊತೆಗೆ ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಮಾತುಕತೆ ನಡೆಸಿದ್ದೇವೆ.

    26. ಐಟಿ ಪ್ರಶ್ನೆ: ಕಳೆದ 10 ವರ್ಷಗಳಿಂದ ನೀವು ಯಾವ್ಯಾವ ವ್ಯವಹಾರಿಕ ಸಹಭಾಗಿತ್ವವನ್ನು ಹೊಂದಿದ್ದೀರಿ ತಿಳಿಸಿ. ಜೊತೆಗೆ ಅವುಗಳ ತೆರಿಗೆಯನ್ನು ಪಾವತಿ ಮಾಡಿದ್ದೀರಾ? ಅದರ ಬಗ್ಗೆ ಮಾಹಿತಿ ನೀಡಿ.
    ಡಿಕೆಶಿ ಉತ್ತರ: ನಾನು ಏಕಾಂಗಿಯಾಗಿ ಹಾಗೂ ನನ್ನ ಕುಟುಂಬದ ಸದಸ್ಯರ ಹತ್ತು ಹಲವು ಪ್ರಾಜೆಕ್ಟ್‍ಗಳಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇವೆ. ನನಗೆ ತಿಳಿದಿರುವ ಮಟ್ಟಿಗೆ ಎಲ್ಲದಕ್ಕೂ ನಾನು ತೆರಿಗೆ ಪಾವತಿ ಮಾಡಿದ್ದೇನೆ. ಹಾಗೇನಾದ್ರೂ ಮಿಸ್ ಆಗಿದ್ರೆ ನಾನು ಆಡಿಟರ್ ಜೊತೆ ಮಾತಾಡಿ ಪಾವತಿ ಮಾಡುತ್ತೇನೆ. ಇನ್ನೂ ಕೆಲವು ಹೊಸ ಸಹಭಾಗಿತ್ವ ಹೊಂದಿದ್ದೇವೆ. ಅದರಿಂದ ಆದಾಯ ಬಂದಿಲ್ಲ. ಬಳಿಕ ಆದಾಯ ತೆರಿಗೆ ಪಾವತಿಯನ್ನು ಮಾಡುತ್ತೇನೆ.

    27. ಐಟಿ ಪ್ರಶ್ನೆ: ನಿಮ್ಮ ಬ್ಯಾಲೆನ್ಸ್ ಶೀಟ್ ಪ್ರಕಾರ ಗೌರಮ್ಮ ಅವರಿಗೆ 21.61 ಕೋಟಿ ರೂ. ಹಾಗೂ ದಿವಂಗತ ಕೆಂಪೇಗೌಡ ಅವರಿಗೆ 5.05 ಕೋಟಿ ರೂ. ಸಾಲ ಮತ್ತು ಮುಂಗಡ ಹಣ ಕೊಟ್ಟಿರುತ್ತೀರಿ. ಈ ಹಣದ ಮೂಲವನ್ನು ತಿಳಿಸಿ.
    ಡಿಕೆಶಿ ಉತ್ತರ: ಇವರಿಬ್ಬರೂ ನನ್ನ ತಂದೆ-ತಾಯಿ. ಇವರಿಗೆ ಪಾವತಿ ಮಾಡಿರೋ ಹಣದ ಬಗ್ಗೆ ಎಲ್ಲಾ ದಾಖಲಾತಿಗಳು ಇಟ್ಟುಕೊಂಡಿದ್ದೇನೆ. ಇದು ಒಂದು ರನ್ನಿಂಗ್ ಅಕೌಂಟ್ ಹಾಗು ಇದನ್ನು ನಾನು ಭೂಮಿ ಖರೀದಿ ಮಾಡಲು ಬೇರೆ ಬೇರೆ ದಿನಗಳಲ್ಲಿ ಕೊಟ್ಟಿದ್ದೇನೆ.

    28. ಐಟಿ ಪ್ರಶ್ನೆ: ಕ್ವಾಲಿಟಿ ಬಿಸ್ಕೆಟ್ ಕಂಪನಿ ಜೊತೆ ನಿಮ್ಮ ವ್ಯವಹಾರಿಕ ಸಂಬಂಧಗಳೇನು?
    ಡಿಕೆಶಿ ಉತ್ತರ: ವೈಯುಕ್ತಿಕವಾಗಿ ನನಗೆ ಯಾವುದೇ ಸಂಬಂಧ ಇಲ್ಲ. ಆದರೆ ನನ್ನ ಕೆಲವು ಸ್ನೇಹಿತರು ಆ ಕಂಪನಿಯ ಜೊತೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ. ಅಲ್ಲದೇ ಶೇರು ಖರೀದಿ ಮಾಡಿ ಮಾರಾಟ ಮಾಡಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿ ಇಲ್ಲ.

    29. ಐಟಿ ಪ್ರಶ್ನೆ: ಎಸ್.ಚಂದ್ರಶೇಖರ್ ಅವರ ಕಚೇರಿ ಪರಿಶೀಲನೆ ಮಾಡಿದಾಗ, ಕ್ವಾಲಿಟಿ ಬಿಸ್ಕೆಟ್ಸ್ ನಿಂದ 75 ಲಕ್ಷ ರೂ. ಬಡ್ಡಿ ಇಲ್ಲದ ಸಾಲವನ್ನು ಪಡೆದುಕೊಂಡಿದ್ದೀರಿ. ಸಾಲವನ್ನು ಮರುಪಾವತಿಯೂ ಮಾಡಿಲ್ಲ. ನಷ್ಟದಲ್ಲಿ ಇರುವ ಕಂಪನಿ ನಿಮಗೆ ಯಾವುದೇ ಬಡ್ಡಿ ಇಲ್ಲದೇ ಸಾಲ ಯಾಕೆ ನೀಡುತ್ತದೆ?
    ಡಿಕೆಶಿ ಉತ್ತರ: ಈ ವ್ಯವಹಾರ ಬಹಳ ವರ್ಷಗಳ ಹಿಂದಿನದ್ದು. ಅದನ್ನು ನಾನು ಮರೆತಿದ್ದೇನೆ. ನಾನು ಅಕೌಂಟ್ಸ್ ಪರಿಶೀಲನೆ ಮಾಡಿ ನಿಮಗೆ ಉತ್ತರ ನೀಡುತ್ತೇನೆ.

    30. ಐಟಿ ಪ್ರಶ್ನೆ: ಶ್ರೀರಾಂ ಪ್ರಾಪರ್ಟಿಸ್‍ನಿಂದ ನಿಮ್ಮ ಪತ್ನಿ ಉಷಾ ಹಾಗೂ ಸತ್ಯನಾರಾಯಣ್ ಗೆ 68 ಕೋಟಿ ರೂ. ಹಣ ಬೈಬ್ಯಾಕ್ ಸ್ಕೀಂನಲ್ಲಿ ಬಿಲ್ಟಪ್ ಏರಿಯಾದ 33% ಶೇರಿನ ಬದಲಾಗಿ ನಾಲ್ಕು ವರ್ಷದ ಹಿಂದೆ ಬಂದಿದೆ. ನಿಮಗೆ ಶ್ರೀರಾಂ ಪ್ರಾಪರ್ಟಿಸ್ ಸಹಾಯ ಮಾಡಿದೆ. ಆದ್ರೆ ಕ್ಯಾಪಿಟಲ್ ಗೇನ್ಸ್ ಯಾಕೆ ಪಾವತಿ ಮಾಡಿಲ್ಲ ಮತ್ತು ಯಾವಾಗ ಪಾವತಿ ಮಾಡ್ತೀರಿ?
    ಡಿಕೆಶಿ ಉತ್ತರ: ಶ್ರೀರಾಂ ಪ್ರಾಪರ್ಟಿಸ್‍ನಿಂದ ನಮಗೆ ಹಣ ಬಂದಿದ್ದು ನಿಜ. ಆದ್ರೆ ಆ ಸಂದರ್ಭದಲ್ಲಿ ಮಾರ್ಕೆಟ್ ವ್ಯಾಲ್ಯೂ ಕಡಿಮೆ ಇತ್ತು. ಮೊದಲು ನಾವು ಕಮರ್ಷಿಯಲ್ ಪ್ರಾಪರ್ಟಿಸ್ ಅಂತ ಶೇರು ಪಡೆದಿದ್ವಿ. ಆದ್ರೆ ನಂತರ ಅದು ರೆಸಿಡೆನ್ಶಿಯಲ್ ಆಗಿ ಬದಲಾಯಿತು. ಈಗ ಸಿಕ್ಕಿದ 68 ಕೋಟಿಯನ್ನೇ ಲಾಭ ಎಂದು ಆದಾಯ ತೆರಿಗೆ ಪಾವತಿ ಮಾಡ್ತೀವಿ.

    31. ಐಟಿ ಪ್ರಶ್ನೆ: ಮಿನರ್ವ ಮಿಲ್ಸ್ ಪ್ರಾಜೆಕ್ಟ್ ಕುರಿತಾದ ಎಲ್ಲಾ ಮಾಹಿತಿಗಳನ್ನು ಕೊಡಿ.
    ಡಿಕೆಶಿ ಉತ್ತರ: ನಾನು, ನನ್ನ ತಂದೆ ಮತ್ತು ಧವನಂ ಕನ್ಸ್‍ಟ್ರಕ್ಷನ್ಸ್ ಜೊತೆ ಒಂದು ಪಾಲುದಾರಿಕಾ ಸಹಭಾಗಿತ್ವವನ್ನು ಹೊಂದಿಕೊಂಡ್ವಿ. 2005ರಲ್ಲಿ ಶೇರುಗಳ ಹಂಚಿಕೆ ಮಾಡಿಕೊಂಡ್ವಿ. ಮುಂಗಡ ಹಣದಲ್ಲಿಯೂ ಕೂಡ ನಮಗೆ ಯಾವುದೇ ಲಾಭ ಪಡೆದುಕೊಳ್ಳಲಾಗಲಿಲ್ಲ. ಪ್ರಾಜೆಕ್ಟ್ ಮುಗಿದ ಬಳಿಕ ಲಾಭ ಬಂದರೆ ಆದಾಯ ತೆರಿಗೆ ಪಾವತಿ ಮಾಡಿಕೊಡುತ್ತೇನೆ.

    32. ಐಟಿ ಪ್ರಶ್ನೆ: ಉಷಾ ಶಿವಕುಮಾರ್ ಮತ್ತು ಸತ್ಯನಾರಾಯಣ್ 2016-17ರ ಸಾಲಿನ ಆದಾಯ ತೆರಿಗೆ ರಿಟನ್ರ್ಸ್‍ಯನ್ನು ಫೈಲ್ ಮಾಡಿಲ್ಲ. ಆದರೆ ಸೋಮೇಶ್ ಆಫೀಸ್‍ನಲ್ಲಿ ಸಿಕ್ಕ ದಾಖಲಾತಿಗಳಲ್ಲಿ ಉಷಾ ಶಿವಕುಮಾರ್ ಹೆಸರಲ್ಲಿ 19,04,41,070 ಸತ್ಯನಾರಾಯಣ್ ಹೆಸರಲ್ಲಿ 45 ಕೋಟಿ ಎಂದು ಕಂಡುಬಂದಿದೆ. ಆದ್ರೂ ಆದಾಯ ತೆರಿಗೆ ಪಾವತಿ ಮಾಡಿಲ್ಲ ಏಕೆ?
    ಡಿಕೆಶಿ ಉತ್ತರ: ಅದು ನಾನು ಕಟ್ಟಬೇಕೆಂದು ತಯಾರು ಮಾಡಿ ಇಟ್ಟುಕೊಂಡಿದ್ದ ದಾಖಲಾತಿಗಳು ಅಷ್ಟೇ. ಇದುವರೆಗೂ ನಾವು ಪಾವತಿಯನ್ನು ಮಾಡಿಲ್ಲ. ಲೀಗಲ್ ಅಡ್ವೈಸ್ ಬೇಕಿತ್ತು. ಅದಕ್ಕಾಗಿ ಕಾಯುತ್ತಾ ಇದ್ವಿ. ಜೊತೆಗೆ ಶ್ರೀರಾಂ ಪ್ರಾಪರ್ಟಿಸ್ ಕೂಡ ನಮ್ಮ ಬಳಿ ಹೇಳಿಕೊಂಡಿದ್ರು. ಆದ್ರಿಂದ ಮುಂದಿನ ವರ್ಷ 68 ಕೋಟಿಯ ತೆರಿಗೆಯನ್ನು ಪಾವತಿ ಮಾಡುತ್ತೇವೆ.

    33. ಐಟಿ ಪ್ರಶ್ನೆ: ದೆಹಲಿಯಲ್ಲಿ ರಾಜೇಂದ್ರನ್ ಮನೆಗೆ ದಾಳಿ ನಡೆಸಿದಾಗ, ರಾಜೇಂದ್ರನ್ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ ನಿಮ್ಮ ಪರವಾಗಿ ಅವರು ಕ್ಯಾಶ್ ಕಲೆಕ್ಷನ್ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
    ಡಿಕೆಶಿ ಉತ್ತರ: ಆತ ನನ್ನ ಸಹೋದ್ಯೋಗಿಯೂ ಅಲ್ಲ. ಅಲ್ಲದೆ ಆತ ನನಗೆ ಸಂಬಂಧಪಟ್ಟ ಯಾವುದೇ ಹಣವನ್ನು ಕಲೆಕ್ಟ್ ಮಾಡಿಲ್ಲ.

    34. ಐಟಿ ಪ್ರಶ್ನೆ: ಚಂದ್ರಶೇಖರ್ ಹೇಳಿಕೆಯ ಪ್ರಕಾರ 4 ಕೋಟಿ ನಗದು ಹಣವನ್ನು ವಿಶಾಲಾಕ್ಷಿದೇವಿ ಅವರಿಗೆ ಶಶಿಕುಮಾರ್ ಅವರು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಅಲ್ಲದೇ ಹಣದ ಮೂಲ ನಿಮ್ಮದೇ ಇರಬಹುದು ಎಂದಿದ್ದಾರೆ ಇದಕ್ಕೆ ನೀವೇನು ಹೇಳ್ತೀರಿ?
    ಡಿಕೆಶಿ ಉತ್ತರ: ನಾನು ಈ ನಿವೇಶನ ವಿಚಾರದಲ್ಲಿ ಯಾವುದೇ ಅಗ್ರಿಮೆಂಟ್ ಮಾಡಿಲ್ಲ. ನನ್ನ ಸ್ನೇಹಿತನೊಬ್ಬ ಈ ಎಲ್ಲಾ ವ್ಯವಹಾರಗಳನ್ನು ಮಾಡಿದ್ದಾನೆ. ಈ ಹಣ ಅವನದಾಗಿರೋದ್ರಿಂದ ಅವನು ಇದನ್ನು ತಿಳಿಸಲು ಅರ್ಹ.

    35. ಐಟಿ ಪ್ರಶ್ನೆ: ಲೋಕಾಯುಕ್ತ ಮತ್ತು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯ ಪ್ರಮಾಣಪತ್ರದಲ್ಲಿ ಏನಾದರೂ ವ್ಯತ್ಯಾಸಗಳು ಇದೆಯಾ?
    ಡಿಕೆಶಿ ಉತ್ತರ: ನನಗೆ ತಿಳಿದಿರುವ ಹಾಗೆ ಯಾವುದೇ ವ್ಯತ್ಯಾಸಗಳು ಕೂಡ ಇಲ್ಲ. ಆ ರೀತಿ ವ್ಯತ್ಯಾಸ ಇದ್ರೆ ನಿಮಗೆ ತಿಳಿಸುತ್ತೇನೆ.

    36. ಐಟಿ ಪ್ರಶ್ನೆ: ನೀವು ಪ್ರಸ್ತುತ ವಾಸವಾಗಿರುವ ಸದಾಶಿವನಗರದ #252 ಬಂಗಲೆಯ ನಿರ್ಮಾಣದಲ್ಲಿ ಹಣ ಹೂಡಿಕೆಯ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ನಾನು ವಾಸವಾಗಿರುವ ಮನೆಯನ್ನು ಶೋಭಾ ಡೆವಲಪರ್ಸ್ ಅವರು ನಿರ್ಮಾಣ ಮಾಡಿದ್ದಾರೆ. ಆದ್ರೆ, ಹೆಚ್ಚಿನ ಮಾಹಿತಿ ಇಲ್ಲ. ಒಂದು ವಾರ ಕಾಲಾವಕಾಶ ನೀಡಿ.

    37. ಐಟಿ ಪ್ರಶ್ನೆ: ನವದೆಹಲಿಯ ಹಲವು ನಿವಾಸಗಳಲ್ಲಿ ನಮಗೆ 8 ಕೋಟಿ 83 ಲಕ್ಷ ರೂ. ನಗದು ಹಣ ಸಿಕ್ಕಿದೆ. ಇದರ ಬಗ್ಗೆ ಮಾಹಿತಿ ನೀಡಿ
    ಡಿಕೆಶಿ ಉತ್ತರ: ಬಿ2 ಸಪ್ತರ್‍ಜಂಗ್ ಎನ್‍ಕ್ಲೈವ್ 41.03 ಲಕ್ಷ ರೂ., ಬಿ4 ಸಪ್ತರ್‍ಜಂಗ್ ಎನ್‍ಕ್ಲೈವ್ 1.37 ಕೋಟಿ ರೂ., ಬಿ5 ಸಪ್ತರ್‍ಜಂಗ್ ಎನ್‍ಕ್ಲೈವ್ 6.68 ಕೋಟಿ ರೂ., ಆಂಜನೇಯಲು ಮನೆಯಲ್ಲಿ 12.44 ಲಕ್ಷ ರೂ., ಜೋವಿನ್ ಜೋಸೆಫ್ ನಿವಾಸ 23.38 ಲಕ್ಷ ರೂ.,

    38. ಐಟಿ ಪ್ರಶ್ನೆ: ಆಂಜನೇಯಲು ಹೇಳಿಕೆ ಪ್ರಕಾರ ಈ ಎಲ್ಲಾ ನಗದು ನಿಮಗೆ ಸೇರಿದ್ದು ಎಂದಿದ್ದಾರೆ. ಈ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ಸರ್, ಇದೆಲ್ಲ ಹಣದಲ್ಲಿ ಬಿ2 ಅಲ್ಲಿ ಸಿಕ್ಕಿರುವ 41.03 ಲಕ್ಷ ಹಣ ಮಾತ್ರ ನನ್ನದು. ಬೇರೆಯ ಹಣದ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಕುಟುಂಬಕ್ಕೆ 100 ಎಕರೆ ಕೃಷಿ ಭೂಮಿ ಇದ್ದು ಇದರ ಆದಾಯದ ಹಣವೇ ದೆಹಲಿಯಲ್ಲಿ ಸಿಕ್ಕಿರೋದು. ಬೇರೆ ಹಣ ಸಿಕ್ಕಿದೆ ಅಂದಿದ್ದೀರಿ, ಅದ್ಯಾವುದು ನನ್ನ ಮಾಲೀಕತ್ವದ ಮನೆಯಲ್ಲಿ ಸಿಕ್ಕಿರುವುದಿಲ್ಲ.

    39. ಐಟಿ ಪ್ರಶ್ನೆ: ಆಂಜನೇಯಲು ಸ್ವಇಚ್ಛಾ ಹೇಳಿಕೆ ಪ್ರಕಾರ ಎಎನ್ ಪ್ರಾಪ್ ಬಿಲ್ಡ್ ಎಎಲ್‍ಪಿ ಮಾಲೀಕ ಅಜಯ್ ಖನ್ನಾ ಮೂಲಕ ನೀವು 4 ಕೋಟಿ ನಗದು ಹಣವನ್ನು ಸಫ್ದರ್‍ಜಂಗ್ ಎನ್‍ಕ್ಲೇವ್‍ನ ಬಿ1 ಫ್ಲಾಟ್ ಖರೀದಿಗೆ ನೀಡಿರುತ್ತೀರಿ. ಮುಂದೆ ಇದೇ 4 ಕೋಟಿ ರಾವತ್ ಎಂಬವರಿಂದ ಆಂಜನೇಯಲು ಮತ್ತು ರಾಜೇಂದ್ರನ್ ಪಡೆದು ಇನ್ಸ್‍ಸ್ಟಾಲ್ಮೆಂಟ್ ಮೂಲಕ ನೀಡಿರುತ್ತಾರೆ. ಇದರ ಬಗ್ಗೆ ತಿಳಿಸಿ.
    ಡಿಕೆಶಿ ಉತ್ತರ: ನಾನು ಈ ಫ್ಲ್ಯಾಟ್ ಖರೀದಿ ಮಾಡಲು ಚೆಕ್ ಮೂಲಕ 3 ಕೋಟಿ ನೀಡಿರುತ್ತೇನೆ. ನಗದು ಹಣ ವ್ಯವಹಾರದ ಬಗ್ಗೆ ನನಗೇನು ಗೊತ್ತಿಲ್ಲ.

    40. ಐಟಿ ಪ್ರಶ್ನೆ: ಚಂದ್ರಶೇಖರ್ ಅವರು ಸ್ವಇಚ್ಛಾ ಹೇಳಿಕೆ ಪ್ರಕಾರ, ಅವರಿಗೆ ನೀವು 3.5 ಕೋಟಿ ಮುಂಗಡ ಹಣವನ್ನು ನೀಡಿರುತ್ತೀರಿ. ಇದ್ರಲ್ಲಿ ಚಂದ್ರಶೇಖರ್ ನಿಮ್ಮ ಮಾರ್ಗದರ್ಶನದ ಮೇರೆಗೆ 2.65 ಕೋಟಿ ರೂ. ಹಣವನ್ನು ಎಸ್‍ಬಿಜಿ ಹೌಸಿಂಗ್ ಲಿಮಿಟೆಡ್‍ಗೆ ನೀಡಿರುತ್ತಾರೆ. ಉಳಿದ ಹಣದಲ್ಲಿ 3 ಸೈಟ್, ಎರಡು ಭಾಗ ಕೃಷಿ ಭೂಮಿ ಖರೀದಿ ಮಾಡಿರುತ್ತಾರೆ. ಈ ಎಲ್ಲಾ ಆಸ್ತಿಯ ವಿವರಗಳು ನಿಮ್ಮ ಅಕೌಂಟ್ ಬುಕ್ ಅಲ್ಲಿ ಆಗಲಿ ಚಂದ್ರಶೇಖರ್ ಬುಕ್ ಅಲ್ಲಿ ಆಗಲಿ ಸಿಕ್ಕಿಲ್ಲ ಏನು ಹೇಳ್ತೀರಿ.?
    ಡಿಕೆಶಿ ಉತ್ತರ: ನಾನು ಇದನ್ನು ಲೀಗಲ್ ಆಗಿಯೇ ಮಾಡಿದ್ದೇನೆ. ಆದ್ರೆ ಚಂದ್ರಶೇಖರ್ ಅವರ ಅಕೌಂಟ್ ಬುಕ್‍ಗಳಲ್ಲಿ ಇದ್ಯಾವುದೂ ಯಾಕೆ ಇಲ್ಲ ಅಂತ ನನಗೂ ಗೊತ್ತಿಲ್ಲ. ಅವರ ಬಳಿ ಮಾಹಿತಿ ಪಡೆದು ನಿಮಗೆ ತಿಳಿಸುತ್ತೇನೆ.

     

    41. ಐಟಿ ಪ್ರಶ್ನೆ: ನಿಮ್ಮ ಮನೆಯನ್ನು ಹುಡುಕಾಡಿದಾಗ ನಿಮ್ಮ ತಂದೆ ಇಲ್ಲಿಯವರೆಗೂ ಯಾವುದೇ ಆದಾಯ ತೆರಿಗೆ ಪಾವತಿ ಮಾಡಿಲ್ಲ. ಅದಾಗಿಯೂ ಮಿನರ್ವ ಮಿಲ್ಸ್‍ನಲ್ಲಿ 10% ಪಾಲುದಾರಿಕೆಯನ್ನು ಹೊಂದಿದ್ದಾರೆ ಹೇಗೆ? ಹಾಗಾದ್ರೆ ನಿಮ್ಮ ತಂದೆ ಹೇಗೆ ಭೂಮಿ ಖರೀದಿ ಮಾಡಿದ್ರು? ಆದಾಯದ ಮೂಲ ಯಾವುದು? ಯಾರ ಅಕೌಂಟ್ ಬುಕ್‍ನಲ್ಲಿ ದಾಖಲಾಗಿದೆ?
    ಡಿಕೆಶಿ ಉತ್ತರ: ಸರ್ ಇದು 2004ರಲ್ಲಿ ನಡೆದ ವ್ಯವಹಾರ. ನನ್ನ ತಂದೆಗೆ ಕೃಷಿಯಿಂದ ಆದಾಯ ಬರುತ್ತಿತ್ತು. ಅವರು ಸ್ನೇಹಿತರಿಂದ ಸಾಲವನ್ನು ಪಡೆದು ಈ ಶೇರನ್ನು ಹೊಂದಿದ್ದಾರೆ.

    42. ಐಟಿ ಪ್ರಶ್ನೆ: ನೀವು ನಿಮ್ಮ ಕುಟುಂಬದ ಜೊತೆ ಜುಲೈನಲ್ಲಿ ಸಿಂಗಾಪುರಕ್ಕೆ ಹೋಗಿರುತ್ತೀರಿ. ಆ ಸಮಯದಲ್ಲಿ ನಿಮ್ಮ ಹೆಸರಲ್ಲಿ ಮತ್ತು ನಿಮ್ಮ ಮಗಳು ಐಶ್ವರ್ಯ ಹೆಸರಲ್ಲಿ ಸಿಂಗಾಪುರದಲ್ಲಿ ಯಾವುದಾದ್ರೂ ವ್ಯವಹಾರ ನಡೆಸಿದ್ರಾ?
    ಡಿಕೆಶಿ ಉತ್ತರ: ನಾನು ನನ್ನ ಮದುವೆ ವಾರ್ಷಿಕೋತ್ಸವದ ಸಂಭ್ರಮಾಚರಣೆಗೆ ಅಲ್ಲಿಗೆ ಹೋಗಿದ್ದೆ. ನನ್ನ ಮಕ್ಕಳು ಕೂಡ ಬಂದಿದ್ರು. ಆ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಇರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ಗೆ ಭೇಟಿ ನೀಡಿದ್ವಿ. ಈ ಭೇಟಿ ನನ್ನ ಮಗಳ ಶಾಲೆ ನಡೆಸುವ ವ್ಯವಹಾರಿಕ ಜ್ಞಾನಕ್ಕೆ ಅನುಕೂಲ ಆಗೋದ್ರಿಂದ ಹೋಗಿದ್ದೇ ಹೊರತು ಯಾವುದೇ ವ್ಯವಹಾರಗಳನ್ನು ಇಟ್ಟುಕೊಂಡಿಲ್ಲ.

    43. ಐಟಿ ಪ್ರಶ್ನೆ: ಬೇರೆ ಏನಾದ್ರು ಹೇಳೋದು ಇದೆಯಾ?
    ಡಿಕೆಶಿ ಉತ್ತರ: ನನಗೆ ತಿಳಿದಿರುವಂತಹ ಎಲ್ಲ ಮಾಹಿತಿಗಳನ್ನ ನೀಡಿದ್ದೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ತಿಳಿದ ಮಟ್ಟಿಗೆ ಉತ್ತರ ನೀಡಿದ್ದೇನೆ. ನನಗೆ ಮತ್ತು ನನ್ನ ಪತ್ನಿಗೆ ಕೆಲವೊಂದು ರಿಯಲ್ ಎಸ್ಟೇಟ್ ಕಂಪನಿಗಳ ಒಪ್ಪಂದದಲ್ಲಿ ಬಂದ ಆದಾಯ 102.46 ಕೋಟಿ ರೂ. ನಾನು ಆದಾಯ ತೆರಿಗೆ ಪಾವತಿಸಬೇಕಾಗಿದೆ. ಅಷ್ಟೇ ಅಲ್ಲದೆ ನನ್ನ ಮನೆಯಲ್ಲಿ ವಶಪಡಿಸಿಕೊಂಡ 88 ಕೋಟಿಗೆ ನಾನು ಆದಾಯ ತೆರಿಗೆ ಕಟ್ಟಬೇಕಾಗಿದೆ. ನನಗೆ ಇನ್ನು ಒಂದು ವಾರಗಳ ಕಾಲ ಸಮಯವನ್ನು ನೀಡಿದ್ರೆ ಸೀಜ್ ಮಾಡಿದ ಎಲ್ಲಾ ದಾಖಲಾತಿಗಳ ಬಗ್ಗೆ ಮಾಹಿತಿ ನೀಡುತ್ತೇನೆ. ನಾನು ನಿಮ್ಮ ಎಲ್ಲಾ ಕಾರ್ಯಗಳಿಗೆ ಸಹಕಾರ ನೀಡುತ್ತೇನೆ.

    Usha Wife of Minister DK Shivakumar with son and daughter seen at the house at Sadashivanagar in Bengaluru 

    Usha Wife of Minister DK Shivakumar seen at the house at Sadashivanagar in Bengaluru

    Usha Wife of Minister DK Shivakumar seen at the house at Sadashivanagar in Bengaluru

    Police security seen at the House of Minister DK Shivakumar at Sadashivanagar in Bengaluru

    Usha Wife of Minister DK Shivakumar seen at Ministers House at Sadashivanagar in Bengaluru

  • ಸಿಎಂ ಕಾರ್ಯಕ್ರಮದಲ್ಲಿ ರೌಡಿಶೀಟರ್ ಗಳಿಗೆ ಏನ್ ಕೆಲ್ಸ?

    ಸಿಎಂ ಕಾರ್ಯಕ್ರಮದಲ್ಲಿ ರೌಡಿಶೀಟರ್ ಗಳಿಗೆ ಏನ್ ಕೆಲ್ಸ?

    ಕೊಪ್ಪಳ: ನುಡಿದಂತೆ ನಡೆದಿದ್ದೇವೆ- ಸಾಧನಾ ಸಂಭ್ರಮ ಎಂಬ ಘೋಷಣೆ ವಾಕ್ಯದೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸುತ್ತಿರೋದು ಸರ್ಕಾರಿ ಕಾರ್ಯಕ್ರಮ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಗಳಿಗೆ ಏನು ಕೆಲಸ? ಎಂಬ ಪ್ರಶ್ನೆಗೆ ಇದೀಗ ಸಿಎಂ ಉತ್ತರಿಸಬೇಕಿದೆ.

    ಸಿಎಂ ತಾವು ನಡೆಸುವ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಅಧಿಕಾರಿಗಳೊಂದಿಗೆ ಜನರಿಗೆ ಪರಿಚಯಿಸುವುದು ಸಂವಿಧಾನಾತ್ಮಕಾಗಿ ಒಪ್ಪಿತವಾದುದು. ಆದರೆ ಕಳೆದ 14 ರಂದು ಕೊಪ್ಪಳದ ಗಂಗಾವತಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ ವೇದಿಕೆ ಮೇಲೆ ಬರೀ ರೌಡಿ ಶೀಟರ್ ಗಳೇ ತುಂಬಿದ್ದು, ಸಿಎಂ ನೈತಿಕತೆ ಪ್ರಶ್ನಿಸುವಂತಿತ್ತು.

     

    ಸಿಎಂ ಸಿದ್ದರಾಮಯ್ಯ ಯಾವಾಗಲೂ ತಾವು ಸಮಾಜವಾದಿ, ಸಂವಿಧಾನಕ್ಕೆ ಗೌರವಿಸುವ ವ್ಯಕ್ತಿ ಎಂದು ಹೇಳತ್ತಾರೆ. ಆದರೆ ತಾವು ಭಾಗವಹಿಸುವ ಗಂಗಾವತಿ ವೇದಿಕೆಯಲ್ಲಿ ಸುಮಾರು ಐದಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದರು ಎಂಬುದು ಸಿಎಂಗೆ ಗೊತ್ತಿದೆಯೋ ಅಥಾವಾ ಗೊತ್ತಿದ್ದೂ ಜಾಣ ಕುರುಡು ಪ್ರದರ್ಶಿಸಿದ್ರೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

    ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜುಬೇರ್, ಸಲ್ಮಾನ ಮತ್ತು ಕಾಮದೊಡ್ಡಿ ದೇವಪ್ಪ ಎಂಬ ಮೂವರು ರೌಡಿ ಶೀಟರ್ ಗಳು ಸಿಎಂ ಪಕ್ಕದಲ್ಲೇ ನಿಂತು ಫೋಸ್ ಕೊಟ್ಟರು. ಇನ್ನು ಅತ್ಯಾಚಾರ ಆರೋಪದಡಿ ಪೊಲೀಸರಿಗೆ ಬೇಕಾಗಿರುವ ಶ್ಯಾಮೀದ್ ಮನಿಯಾರ್ ಕೂಡ ಸಿಎಂ ಅಕ್ಕ- ಪಕ್ಕ ನಿಂತಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ರೌಡಿ ಶೀಟರ್ ಗಳಾಗಿರುವ ಶಾಸಕ ಇಕ್ಬಾಲ್ ಅನ್ಸಾರಿ ಬಂಟರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರು ಪೊಲೀಸರು ಬಿ ರಿಪೋರ್ಟ್ ಹಾಕ್ತಿರೋದು ದುರಂತವೇ ಸರಿ.

  • ಕಾಂಗ್ರೆಸ್ ಟೀಕಿಸಲು ಅಭಿಮಾನಿಗಳಿಗೆ ರಸಪ್ರಶ್ನೆ ಆರಂಭಿಸಿದ ಪ್ರತಾಪ್ ಸಿಂಹ!

    ಕಾಂಗ್ರೆಸ್ ಟೀಕಿಸಲು ಅಭಿಮಾನಿಗಳಿಗೆ ರಸಪ್ರಶ್ನೆ ಆರಂಭಿಸಿದ ಪ್ರತಾಪ್ ಸಿಂಹ!

    ಮೈಸೂರು: ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆ ಕೇಳುವ ಮೂಲಕ ಟಾಂಗ್ ನೀಡಲು ಆರಂಭಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ವಿನಯ್ ಕುಲರ್ಣಿ ಹಾಗೂ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್ ವಿರುದ್ಧ ಹಲವು ಪೋಸ್ಟ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.

    ಸಿಂಹ ಪ್ರಶ್ನೆಗಳು:
    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಕಪಾಳಕ್ಕೆ ಹೊಡೆದ ಪುಂಡ ಯಾರು? ಬಳ್ಳಾರಿ ನಗರ ಪಾಲಿಕೆ ಅಧಿಕಾರಿಯ ಕಪಾಳಕ್ಕೆ ಹೊಡೆದವರ ವಿರುದ್ಧ ಕೇಸು ದಾಖಲಾಗಿದೇಯೋ ಇಲ್ವೋ? ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿದವನ ಜಯಂತಿ ಆರಂಭಿಸಿದ ಸರ್ಕಾರ ಯಾವುದು? ಮೈಸೂರಿನ ಕೆ.ಆರ್.ನಗರದಲ್ಲಿ ಅಂಟಿಸಿರುವ ಪೋಸ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಇಲ್ಲವೆ? ಎಂಬ ಪ್ರಶ್ನೆಗಳನ್ನು ಟ್ಟಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಕೇಳಿದ್ದಾರೆ.

    ಮಂಗಳವಾರದಿಂದ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಕೆದಾರರು ತಮಗೆ ತೊಚಿದಂತೆ ಉತ್ತರಗಳನ್ನು ನೀಡುತ್ತಿದ್ದಾರೆ.