Tag: ಪ್ರಶ್ನೆ ಪತ್ರಿಕೆ ಸೋರಿಕೆ

  • ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ

    ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ

    ಲಕ್ನೋ: ಉತ್ತರ ಪ್ರದೇಶ (Uttar Pradesh) ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ (Renuka Mishra) ಅವರನ್ನು ವಜಾಗೊಳಿಸಲಾಗಿದೆ.

    ಉತ್ತರ ಪ್ರದೇಶ ಸರ್ಕಾರ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿದ್ದು, ರಾಜೀವ್ ಕೃಷ್ಣ ಅವರಿಗೆ ನೇಮಕಾತಿ ಮಂಡಳಿಯ ಜವಾಬ್ದಾರಿಯನ್ನು ನೀಡಿದೆ. ಫೆಬ್ರವರಿ 17 ಮತ್ತು 18ರಂದು ಉತ್ತರ ಪ್ರದೇಶದಲ್ಲಿ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. 60,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 48 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಸದ್ಯ ಈ ಪ್ರಕರಣವನ್ನು ಎಸ್‌ಟಿಎಫ್‌ಗೆ ಹಸ್ತಾಂತರಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ಲಿಖಿತ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಾಗುವುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂದಿನ 3 ತಿಂಗಳು ರಣರಣ ಬಿಸಿಲು – ಬಿಸಿಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

  • ಸಿಟಿಇಟಿ ಪರೀಕ್ಷೆ ವಂಚನೆ – ಐವರು ಮಹಿಳೆಯರು ಸೇರಿದಂತೆ 18 ಮಂದಿ ಅರೆಸ್ಟ್

    ಸಿಟಿಇಟಿ ಪರೀಕ್ಷೆ ವಂಚನೆ – ಐವರು ಮಹಿಳೆಯರು ಸೇರಿದಂತೆ 18 ಮಂದಿ ಅರೆಸ್ಟ್

    ಲಕ್ನೋ: ಸಿಟಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗೌತಮ್ ಬುದ್ಧನಗರ ಪೊಲೀಸರು ಬಂಧಿಸಿದ್ದಾರೆ.

    ಇದೇ ಡಿಸೆಂಬರ್ 30ರಂದು ಸಿಬಿಎಸ್‍ಇ ಆಯೋಜಿಸಿದ್ದ (ಸಿಟಿಇಟಿ) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಕೊಂಡಿದ್ದ ಗ್ಯಾಂಗ್‍ವೊಂದನ್ನು ಬೇಧಿಸುವಲ್ಲಿ ಗೌತಮ್ ಬುದ್ಧನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಐವರು ಮಹಿಳೆಯರು ಸೇರಿದಂತೆ 18 ಮಂದಿಯನ್ನು ಗುರುವಾರ ಜಿಲ್ಲೆಯ ಸೆಕ್ಟರ್ 71 ರ ಹೋಟೆಲ್‍ನಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್

    ಗುರುವಾರ ಮುಂಜಾನೆ ಪೊಲೀಸರು ಸೆಕ್ಟರ್ 58 ರಲ್ಲಿ ಗಸ್ತು ತಿರುಗುತ್ತಿದ್ದಾಗ, ನೋಯ್ಡಾ ವಿಭಾಗದ ಸೆಕ್ಟರ್ 60 ರಲ್ಲಿ ಮಾರುತಿ ಸುಜುಕಿ ಇಕೊವೊಂದನ್ನು ಗುರುತಿಸಿದ್ದಾರೆ. ಅನುಮಾನಸ್ಪದವಾಗಿ ಆ ಕಾರನ್ನು ಪೊಲೀಸರ ತಂಡವು ಪರಿಶೀಲಿಸಿದಾಗ ಕಾರಿನಲ್ಲಿ ಐವರು ಯುವಕರು ಕುಳಿತುಕೊಂಡಿದ್ದು, ಕೆಲ ಮಹಿಳೆಯರ ಪರ್ಸ್‍ಗಳು ಪೊಲೀಸರಿಗೆ ಸಿಕ್ಕಿವೆ. ಆಗ ಕಾರಿನಲ್ಲಿದ್ದ ಯುವಕರು ಈ ಪರ್ಸ್‍ಗಳು ನೋಯ್ಡಾದ ಸೆಕ್ಟರ್ 71 ರ ಅತಿಥಿ ಗೃಹದಲ್ಲಿ ಇದ್ದ ಕೆಲವು ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದ್ದಾರೆ.

    ಆಗ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಕುಮಾರ್ ರಣವಿಜಯ್ ಸಿಂಗ್ ಆರೋಪಿಗಳ ವಿರುದ್ಧ ಅನುಮಾನ ಬಂದು ಪೊಲೀಸ್ ತಂಡದೊಂದಿಗೆ ಸೆಕ್ಟರ್ 71 ರಲ್ಲಿರುವ ಹೋಟೆಲ್ ಅನ್ನು ಶೋಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

    ಆರೋಪಿಗಳಿಂದ ನಾವು ಮೂರು ಲ್ಯಾಪ್‍ಟಾಪ್‍ಗಳು, ಒಂದು ಕೀಬೋರ್ಡ್ ಒಂದು ಪ್ರಿಂಟರ್, 20 ಮೊಬೈಲ್ ಫೋನ್‍ಗಳು, 36,000 ರೂ. ನಗದು, ಐದು ಕಾರುಗಳು ಒಂದು ಟೊಯೊಟಾ ಫಾರ್ಚುನರ್, ಮಾರುತಿ ಸ್ವಿಫ್ಟ್ ಡಿಜೈರ್, ಮಹೀಂದ್ರಾ ಎಕ್ಸ್‍ಯುವಿ 500, ಮಾರುತಿ ಸುಜುಕಿ ಬಲೆನೊ, ಮಾರುತಿ ಸುಜುಕಿ ಇಕೊ ಮತ್ತು ಸಿಟಿಇಟಿಗೆ ಸಂಬಂಧಪಟ್ಟ 50 ಪ್ರವೇಶ ಪತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಣವಿಜಯ್ ಸಿಂಗ್ ಬಹಿರಂಗಪಡಿಸಿದ್ದಾರೆ.

    ಪೊಲೀಸರೇ ಭಾಗಿ:
    ರಾಜಸ್ಥಾನದ ನಿವೃತ್ತ ಸಿಆರ್‍ಪಿಎಫ್ ಕಾನ್‍ಸ್ಟೆಬಲ್ ಭವಾನಿ ಶರ್ಮಾ (45) ಪ್ರಸ್ತುತ ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್ ಕಾನ್‍ಸ್ಟೆಬಲ್ ಶಿವ ರಾಮ್ ಸಿಂಗ್ (32), ಮತ್ತು ಹರಿಯಾಣ ಮೂಲದ ದೆಹಲಿ ಪೊಲೀಸ್ ವಿಕಾಸ್ (30) ಬಂಧಿತ ಆರೋಪಿಗಳು.

    ಇಡೀ ಕಾರ್ಯಾಚರಣೆಯನ್ನು ಸೋನಿಪತ್‍ನ ವಿನಯ್ ದಹಿಯಾ ಮತ್ತು ಅಂಕಿತ್ ಕುಮಾರ್ ನಡೆಸಿದ್ದು, ಅವರು ಪರಿಹರಿಸಿದ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳಲು ಪ್ರತಿ ಅಭ್ಯರ್ಥಿಗೆ 2.5-3 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದರು. ಈ ವಿಷಯವನ್ನು ತನಿಖೆ ಮಾಡಲು ನಾವು ಸಿಬಿಎಸ್‍ಇಗೆ ಪತ್ರ ಬರೆಯುತ್ತೇವೆ ಎಂದರು. ಇದನ್ನೂ ಓದಿ: ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ BSF ಯೋಧನ ಅಂತ್ಯಕ್ರಿಯೆ

    ನೋಯ್ಡಾದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇರಲಿಲ್ಲ. ಆದಾಗ್ಯೂ ಈ ಶಂಕಿತರು ನೋಯ್ಡಾದಲ್ಲಿ ಪರಿಹರಿಸಿದ ಪತ್ರಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮತ್ತೊಬ್ಬ ಶಂಕಿತ ರವಿ ಎಂಬಾತ ಪ್ರಶ್ನೆಪತ್ರಿಕೆ ಹೊಂದಿರುವ ಪೆನ್‍ಡ್ರೈವ್‍ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎಡಿಸಿಪಿ ತಿಳಿಸಿದ್ದಾರೆ.

  • ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌ – ಕೆಪಿಎಸ್‌ಸಿಯ ಇಬ್ಬರ ಮೊಬೈಲ್‌ ಸ್ವಿಚ್‌ ಆಫ್‌, ನಾಪತ್ತೆ

    ಎಫ್‌ಡಿಎ ಪ್ರಶ್ನೆ ಪತ್ರಿಕೆ ಲೀಕ್‌ – ಕೆಪಿಎಸ್‌ಸಿಯ ಇಬ್ಬರ ಮೊಬೈಲ್‌ ಸ್ವಿಚ್‌ ಆಫ್‌, ನಾಪತ್ತೆ

    – ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳು ಅರೆಸ್ಟ್‌
    – ಬಂಧಿತರ ಸಂಖ್ಯೆ 14ಕ್ಕೆ ಏರಿಕೆ

    ಬೆಂಗಳೂರು: ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಬಂಧನಕ್ಕೊಳಗಾದ ಆರೋಪಿಗಳ ವಿಚಾರಣೆಯ ವೇಳೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ.

    ಸಿಸಿಬಿ ಪೊಲೀಸರು ಶನಿವಾರ ಈ ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದ್ದರು. ನಿನ್ನೆ ರಾತ್ರಿ ಮತ್ತು ಇಂದು ಒಟ್ಟು 8 ಮಂದಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

    ಬಂಧಿತರಿಂದ ಒಟ್ಟು 36 ಲಕ್ಷ ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಪೈಕಿ ಕೆಲವರು ಅಭ್ಯರ್ಥಿಗಳಾಗಿರುವುದು ವಿಶೇಷ.

    ಕೆಪಿಎಸ್‌ಸಿಯಿಂದಲೇ ಸೋರಿಕೆ: ಈ ಕೃತ್ಯದ ಹಿಂದೆ ಇಬ್ಬರ ಮೇಲೆ ಸಿಸಿಬಿಗೆ ಬಲವಾದ ಅನುಮಾನವಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಎಫ್‌ಡಿಎ ದರ್ಜೆಯ ಇಬ್ಬರು ಅಧಿಕಾರಿಗಳ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು ನಾಪತ್ತೆಯಾಗಿದ್ದಾರೆ.  ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಇಬ್ಬರನ್ನು ವಿಚಾರಣೆ ನಡೆಸಲು ಸಿಸಿಬಿ ಮುಂದಾಗಿತ್ತು. ಆದರೆ ಆರೋಪಿಗಳ ಬಂಧನ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಬ್ಬರು ನಾಪತ್ತೆಯಾಗಿದ್ದಾರೆ.  ನಾಪತ್ತೆಯಾಗಿರುವ ಈ ಇಬ್ಬರಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎಂಬ ಅನುಮಾನ ಸಿಸಿಬಿಯದ್ದು.

    ಇಂದು ಎಫ್‌ಡಿಎ ಪರೀಕ್ಷೆ ನಡೆಯಬೇಕಿತ್ತು. ಆದರೆ ಪರೀಕ್ಷೆ ನಡೆಯುವ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ.

  • ಪ್ರಶ್ನೆ ಪತ್ರಿಕೆ ಸೋರಿಕೆ – ಭಾನುವಾರದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ

    ಪ್ರಶ್ನೆ ಪತ್ರಿಕೆ ಸೋರಿಕೆ – ಭಾನುವಾರದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ

    – 116 ಅಭ್ಯರ್ಥಿಗಳು ವಶಕ್ಕೆ, ಪರೀಕ್ಷೆ ಮುಂದೂಡಿ ಎಡಿಜಿಪಿಯಿಂದ ಆದೇಶ

    ಹಾಸನ: ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ಜಾಲವನ್ನು ಜಿಲ್ಲೆಯ ಪೋಲಿಸರು ಭೇದಿಸಿದ್ದಾರೆ.

    ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಭಾನುವಾರ ನಿಗದಿಯಾಗಿತ್ತು. ಹೀಗಾಗಿ ಅಭ್ಯರ್ಥಿಗಳನ್ನು ಕುಳ್ಳಿರಿಸಿ ಪ್ರಶ್ನೆ ಪತ್ರಿಕೆ ಹಂಚಲು ಸಿದ್ಧತೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕಿಂಗ್‍ಪಿನ್ ಶಿವಕುಮಾರ್ ಸ್ವಾಮಿಯನ್ನು ಬಂಧಿಸಲಾಗಿದೆ.

    ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅವರು ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಆರೋಪಿ ಶಿವಕುಮಾರ್ ಸ್ವಾಮಿ ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈ ಬೆನ್ನಲ್ಲೇ ಈಗ ಪೊಲೀಸ್ ಪೇದೆ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ. ನಾಳೆ ಪರೀಕ್ಷಾರ್ಥಿಗಳನ್ನು ನೇರವಾಗಿ ಪರೀಕ್ಷಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದ.

    ಪೊಲೀಸ್ ಪೇದೆ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಈ ಜಾಲದ ಬಗ್ಗೆ ಖಚಿತ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ರಾಜ್ಯದ ವಿವಿಧ ಭಾಗಗಳಿಂದ ವಿಶೇಷವಾಗಿ ಉತ್ತರ ಕರ್ನಾಟಕದಿಂದ ಸುಮಾರು 116 ಅಭ್ಯರ್ಥಿಗಳನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕಲ್ಲಮಠದ ಶ್ರೀನಂಜುಂಡೇಶ್ವರ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ಸೇರಿಸಲಾಗಿತ್ತು. ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಅವುಗಳಿಗೆ ಉತ್ತರ ನೀಡಲು ಶಿವಕುಮಾರ್, ಬಸವರಾಜು ಒಳ ಸಂಚು ರೂಪಿಸಿದ್ದರು.

    ಆರೋಪಿಗಳಿಗೆ ಬಲೆ ಬಿಸಿದ್ದ ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ವೇಣುಗೋಪಾಲ್ ಮತ್ತು ಬಿ.ಬಾಲರಾಜು ರವರ ನೇತೃತ್ವದ 2 ವಿಶೇಷ ತಂಡಗಳನ್ನು ರಚಿಸಿ, ಹಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಈ ತಂಡವು ಇಂದು ಬೆಳಗ್ಗೆ ದಾಳಿ ನಡೆಸಿದೆ. ಈ ಜಾಲದ ಪ್ರಮುಖ ರುವಾರಿಯಾಗಿದ್ದ ಶಿವಕುಮಾರ್ ನನ್ನು ಪ್ರಶ್ನೆಪತ್ರಿಕೆ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಕ್ರಮವಾಗಿ ಗುಂಪು ಸೇರಿಸಿದ್ದ ಸುಮಾರು 116 ಅಭ್ಯರ್ಥಿಗಳು, 7 ಜನ ಚಾಲಕರು, ಕ್ಲೀನರ್ಸ್ ಹಾಗೂ 4 ಮಿನಿ ಬಸ್, 1 ಇನ್ನೋವಾ ಕಾರ್ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

    ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷ ರೂ. ಹಣ ಪಡೆಯಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಕೃತ್ಯವನ್ನು ಎಸಗಲು ಬೇರೆ ಬೇರೆ ಆಸಾಮಿಗಳ ಹೆಸರಿನ ದಾಖಲಾತಿಗಳನ್ನು ಬಳಸಿ, ಮೊಬೈಲ್ ಸಿಮ್ ಕಾರ್ಡ್‍ಗಳನ್ನು ಪಡೆದಿರುವುದಾಗಿಯೂ ಮತ್ತು ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿದೆ. ದಾಳಿ ವೇಳೆ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರಿದಿರುತ್ತದೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv