Tag: ಪ್ರವೀಣ್ ತೊಗಾಡಿಯಾ

  • ತೊಗಾಡಿಯಾಗೆ ರಾಮಮಂದಿರ ಶಿಲಾನ್ಯಾಸಕ್ಕೆ ಆಹ್ವಾನ ಇಲ್ಲ ಯಾಕೆ?: ಮುತಾಲಿಕ್ ಗರಂ

    ತೊಗಾಡಿಯಾಗೆ ರಾಮಮಂದಿರ ಶಿಲಾನ್ಯಾಸಕ್ಕೆ ಆಹ್ವಾನ ಇಲ್ಲ ಯಾಕೆ?: ಮುತಾಲಿಕ್ ಗರಂ

    ಉಡುಪಿ: ಹಿಂದೂ ಮುಖಂಡ ಪ್ರವೀಣ್ ತೊಗಾಡಿಯಾರನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಯಾಕೆ ಕರೆದಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ತೊಗಾಡಿಯಾರನ್ನು ಆಹ್ವಾನಿಸದಿರುವುದು ನೋವು ತಂದಿದೆ. ಅವರು ಸಂಸಾರ ದೂರವಿಟ್ಟು 32 ವರ್ಷ ತ್ಯಾಗದ ಜೀವನ ನಡೆಸಿದವರು. ತೊಗಾಡಿಯಾ ರಾಮಜನ್ಮಭೂಮಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯಾರನ್ನು ಆಹ್ವಾನಿಸಬೇಕು. ಇದು ಲಕ್ಷಾಂತರ ಹಿಂದೂಗಳ ತುಡಿತ. ಈಗಲೂ ಕಾಲ ಮಿಂಚಿಲ್ಲ ಇನ್ನಾದರೂ ಆಹ್ವಾನಿಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಶಿಲಾನ್ಯಾಸ ದಿನವೇ ದೀಪಾವಳಿ, ರಾಮನವಮಿ:
    ನಮ್ಮ ನೆಚ್ಚಿನ ಪ್ರಧಾನಿ ಮೋದಿ ಮೂಲಕ ಶಿಲಾನ್ಯಾಸ ಆಗುತ್ತಿರುವುದು ಖುಷಿಕೊಟ್ಟಿದೆ. ಶಿಲಾನ್ಯಾಸದ ದಿನವೇ ನಮಗೆ ದೀಪಾವಳಿ, ಅಂದೇ ರಾಮನವಮಿ. ರಾಮ ಮಂದಿರ ವಿರೋಧಿಸುವವರು ಸಂವಿಧಾನ ವಿರೋಧಿಗಳು. ನೀವು ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ಮಾಡುತ್ತಿದ್ದೀರಿ. ಕಾಂಗ್ರೆಸ್, ಕಮ್ಯುನಿಸ್ಟ್ ನವರು ಅಜ್ಮೀರ್ ದರ್ಗಾಗೆ ಹೋಗಲ್ವಾ? ದರ್ಗಾಗೆ ಚಾದರ ಹೊದಿಸಿ ಬರುವುದಕ್ಕೆ ತೊಂದರೆ ಇಲ್ವಾ. ಸಿದ್ದರಾಮಯ್ಯ ಟಿಪ್ಪುವಿನ ವೇಷಹಾಕಿ ಖಡ್ಗ ಹಿಡಿದುಕೊಳ್ಳಬಹುದು. ಪ್ರಧಾನಿ ಶಿಲಾನ್ಯಾಸ ಮಾಡುವುದನ್ನು ವಿರೋಧಿಸುವುದು ಶತ ಮೂರ್ಖತನ ಎಂದು ಮುತಾಲಿಕ್ ಗುಡುಗಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

  • ಗೌರಿ ಲಂಕೇಶ್ ಹತ್ಯೆ ನಂತ್ರ ರೈ ಗೋರಿಯಿಂದ ಹೊರ ಬಂದಿದ್ದಾರೆ- ಪ್ರಮೋದ್ ಮುತಾಲಿಕ್ ಕಿಡಿ

    ಗೌರಿ ಲಂಕೇಶ್ ಹತ್ಯೆ ನಂತ್ರ ರೈ ಗೋರಿಯಿಂದ ಹೊರ ಬಂದಿದ್ದಾರೆ- ಪ್ರಮೋದ್ ಮುತಾಲಿಕ್ ಕಿಡಿ

    ಬೆಳಗಾವಿ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೇಲೆ ಪ್ರಹಾರ ನಡೆಸುತ್ತಿರುವ ನಟ ಪ್ರಕಾಶ್ ರೈ ಗೌರಿ ಲಂಕೇಶ್ ಹತ್ಯೆ ನಂತರ ಗೋರಿಯಿಂದ ಹೊರ ಬಂದಿದ್ದಾರೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾವರಿ, ಮಹದಾಯಿ ಮತ್ತು ಕೃಷ್ಣ ನದಿ ಬಗ್ಗೆ ರೈ ಮಾತನಾಡಲ್ಲ. ನಟನಾಗಿ ಎಲ್ಲ ಭಾಷೆಯಿಂದ ಆಗೋ ಲಾಭ ಬೇಕು. ಕಾಂಗ್ರೆಸ್ ಅಧಿಕಾರದಲ್ಲಿಯೇ ಕಲಬುರ್ಗಿ, ಗೌರಿ, ಪನ್ಸಾರೆ ಹತ್ಯೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಕಾಶ್ ರೈ ಮಾತನಾಡಬೇಕು. ಬೈಯೋದಾದ್ರೆ ಎಲ್ಲರನ್ನು ಬೈಯಿರಿ ಇಲ್ಲವಾದ್ರೆ ನೀವು ಕಾಂಗ್ರೆಸ್ ಏಜೆಂಟ್ ಎನ್ನುವುದು ಸಾಬೀತಾಗುತ್ತದೆ ಅಂತ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನಗೆ ಲೇಟಾಗಿ ಆದರೂ ಜ್ಞಾನೋದಯ ಆಗಿದೆ, ಹೀಗಾಗಿ ಕ್ಷಮಿಸಿ: ಪ್ರಕಾಶ್ ರೈ

    ಇದೇ ವೇಳೆ ವಿಎಚ್‍ಪಿಯಿಂದ ಪ್ರವೀಣ್ ತೊಗಾಡಿಯ ಉಚ್ಛಾಟನೆ ವಿಚಾರದ ಕುರಿತು ಮಾತನಾಡಿದ ಅವರು, ಇದು ಅತ್ಯಂತ ನೀಚ, ನಿರ್ಲಜ್ಜದ ಕೆಲಸವಾಗಿದ್ದು ಖಂಡನೀಯವಾಗಿದೆ. ತೊಗಾಡಿಯ ಉಚ್ಛಾಟನೆ ಹಿಂದೆ ಮೋದಿ, ಆರ್ ಎಸ್ ಎಸ್ ಕೈವಾಡವಿದೆ. ಪ್ರವೀಣ ತೊಗಾಡಿಯ ಮಾಡಿದ ಅಪರಾಧ ಏನು? ಹಿಂದೂ ಮತಗಳನ್ನು ಒಗ್ಗೂಡಿಸಲು ಪ್ರವೀಣ ತೊಗಾಡಿಯಾ ಬೇಕು. ಆದರೇ ಈಗ ಯಾರೊಬ್ಬರು ಆರ್ ಎಸ್ ಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ನಿಮ್ಮ ಅವಧಿಯಲ್ಲಿ ರಾಮಮಂದಿರ ನಿರ್ಮಿಸಿ ಅಂತ ಹೇಳಿದ್ದ ತೊಗಾಡಿಯ ಮಾಡಿದ್ದು ತಪ್ಪಾ? ಗೋ ಹತ್ಯೆ, ಸಮಾನ ನಾಗರೀಕ ಕಾಯ್ದೆ ಜಾರಿ ಮಾಡಿ ಅಂತ ಹೇಳಿದ್ದೆ ತಪ್ಪೇ? ರಾಮ ಮಂದಿರದ ಹೆಸರಲ್ಲಿ ಕಟ್ಟಿಸುವ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಇದೀಗ ಆರ್ ಎಸ್ ಎಸ್ ಕಟ್ಟಪ್ಪಣೆ ಮೀರಿದ್ದಕ್ಕೆ ತೊಗಾಡಿಯಾ ಉಚ್ಛಾಟನೆಯಾಗಿದ್ದಾರೆ ಅಂತ ಸಿಡಿಮಿಡಿಗೊಂಡರು. ಇದನ್ನೂ ಓದಿ: ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ

    ತೊಗಾಡಿಯ ಉಚ್ಛಾಟನೆ ಖಂಡಿಸಿ ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯದ 22 ಜಿಲ್ಲೆಯಲ್ಲಿ ಶ್ರೀರಾಮಸೇನೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದೆ. ಶ್ರೀರಾಮಸೇನೆಗೆ 5 ಹಿಂದುಪರ ಸಂಘಟನೆಗಳ ಬೆಂಬಲ ಸೂಚಿಸಿವೆ ಅಂತ ಅವರು ತಿಳಿಸಿದ್ರು.

  • ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

    ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ

    ಜೈಪುರ: ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, ತನ್ನನ್ನು ಎನ್ ಕೌಂಟರ್ ಮಾಡವ ಮಾಹಿತಿ ಲಭಿಸಿತ್ತು ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಬಿಜೆಪಿ ನಾಯಕರನ್ನು ಹೆಸರನ್ನು ಉಲ್ಲೇಖಿಸದೇ ರಾಜಸ್ಥಾನ ಹಾಗೂ ಗುಜರಾತ್ ಸರ್ಕಾರ ಸಂಸ್ಥೆಗಳು ತಮ್ಮ ವಿರುದ್ಧ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಪೊಲೀಸರಿಗೆ ರಾಜಕೀಯ ಒತ್ತಡದಿಂದ ಕಾರ್ಯನಿರ್ವಹಿಸದಂತೆ ಮನವಿ ಮಾಡಿದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 10 ವರ್ಷದ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ ಟಾರ್ಗೆಟ್ ಮಾಡಲಾಗಿದ್ದು, ರಾಜಸ್ಥಾನ ಪೊಲೀಸರು ತನ್ನನ್ನು ಬಂಧನ ಮಾಡಲು ಆಗಮಿಸಿದ್ದರು. ಈ ವೇಳೆ ತಮ್ಮನ್ನು ಎನ್‍ಕೌಂಟರ್ ಮಾಡಲು ಪ್ಲಾನ್ ಮಾಡಲಾಗಿತ್ತು ಎನ್ನುವ ಮಾಹಿತಿ ಸಿಕ್ಕಿತ್ತು ಎಂದು ಹೇಳಿದರು.

    ಇದರಿಂದ ನನ್ನನ್ನು ಕೊಲೆ ಮಾಡಬಹುದೆಂಬ ಭೀತಿ ಉಂಟಾಯಿತು. ಸುರಕ್ಷತೆಗಾಗಿ ತಕ್ಷಣ ಕಚೇರಿಗೆ ತೆರಳಲು ನಿರ್ಧರಿಸಿ ಥಟ್ಲೆಜ್‍ನಲ್ಲಿರುವ ಕಾರ್ಯಕರ್ತರೊಬ್ಬರ ಮನೆಗೆ ತೆರಳಿದೆ. ಈ ಮುನ್ನ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದೆ. ನಾನು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಸಂಪರ್ಕಿಸಿ ಮಾಹಿತಿ ಪಡೆದೆ. ರಾಜಸ್ಥಾನ ಸರ್ಕಾರದ ಆದೇಶವಿದೆ ಎಂದು ಅವರು ತಿಳಿಸಿದರು. ನಂತರ ರಾಜಸ್ಥಾನದಲ್ಲಿರುವ ನನ್ನ ವಕೀಲರ ಜತೆ ವಾರಂಟ್ ವಿಷಯ ತಿಳಿಸಿದೆ. ಬಳಿಕ ಜೈಪುರಕ್ಕೆ ವಿಮಾನದಲ್ಲಿ ತೆರಳಲು ನಿರ್ಧರಿಸಿ ಏರ್‍ಪೋರ್ಟ್ ಕಡೆಗೆ ಹೊರಡುವ ಮಾರ್ಗಮಧ್ಯೆ ಪ್ರಜ್ಞೆತಪ್ಪಿದೆ. ಬಳಿಕ ರಾತ್ರಿ ನಾನು ಆಸ್ಪತ್ರೆಯಲ್ಲಿದ್ದೇನೆ ಎಂಬುದು ಗೊತ್ತಾಯಿತು ಎಂದು ತೊಗಾಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಧ್ವನಿ ಅಡಗಿಸುವ ಯತ್ನ: ಕೆಲವರು ನನ್ನ ಧ್ವನಿಯನ್ನು ಅಡಗಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ರಾಮ ಮಂದಿರ ಗೋ ಹತ್ಯೆ ನಿಷೇಧ ಹಾಗೂ ರೈತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೋರಾಟ ಮಾಡುತ್ತಿದ್ದು, ಈ ಕಾರಣದಿಂದಲೇ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿದರು.

    ಯಾರು ನಿಮ್ಮ ಮೇಲೆ ಮೇಲೆ ದಾಳಿ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಈಗ ಯಾರ ಮೇಲೂ ಆರೋಪ ಮಾಡಲು ಸಾಧ್ಯವಿಲ್ಲ. ಆದರೆ ಈ ಕುರಿತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡುವ ಮೂಲಕ ಮಾತನಾಡಿತ್ತೇನೆ ಎಂದರು.

    ಇದೇ ವೇಳೆ ಪ್ರವೀಣ್ ತೊಗಾಡಿಯಾ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರಯಲ್ಲೇ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

    12 ವರ್ಷಗಳ ಹಳೆಯ ಪ್ರಕರಣ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ಅವರನ್ನು ಬಂಧನ ಮಾಡಲು ಸೋಮವಾರ ಬೆಳಗ್ಗೆ ರಾಜಸ್ಥಾನ ಪೊಲೀಸರು ಆಗಮಿಸದ ವೇಳೆ ಎ-ಝೆಡ್ ಭದ್ರತೆಯನ್ನು ಹೊಂದಿರುವ ಅವರು ಅಹಮದಾಬಾದ್ ನಗರದ ಪಾಲ್ಡಿ ಪ್ರದೇಶದ ತಮ್ಮ ನಿವಾಸದಿಂದ ಕಾಣೆಯಾಗಿದ್ದರು. ನಂತರ ಲೋ ಬಿಪಿ ಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು.

    ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ವಿರುದ್ಧ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ) ಅಡಿಯಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಅದರೆ ಅವರ ಮನೆಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ವೇಳೆಯಲ್ಲಿ ಅವರು ಕಾಣೆಯಾಗಿದ್ದರು.

    ಪೊಲೀಸರು ತೊಗಾಡಿಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ವಿಹೆಚ್‍ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘೋಷಣೆಗಳನ್ನ ಕೂಗಿ, ಸರ್‍ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತೊಗಾಡಿಯ ಅವರು ಇರುವ ಸ್ಥಳವನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದರು.

    ಆದ್ರೆ ತೊಗಾಡಿಯಾ ಅವರನ್ನು ನಮ್ಮ ತಂಡ ಬಂಧಿಸಿಲ್ಲ ಎಂದು ರಾಜಸ್ಥಾನ ಪೊಲೀಸ್‍ನ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ವಸಿಷ್ಠ ಸ್ಪಷ್ಟಪಡಿಸಿದ್ದರು.

    https://www.youtube.com/watch?v=nR9PoIhWD9M

  • ಕಾಣೆಯಾಗಿದ್ದ ಪ್ರವೀಣ್ ತೊಗಾಡಿಯಾ ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ, ಆಸ್ಪತ್ರೆಗೆ ದಾಖಲು

    ಕಾಣೆಯಾಗಿದ್ದ ಪ್ರವೀಣ್ ತೊಗಾಡಿಯಾ ಪಾರ್ಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ, ಆಸ್ಪತ್ರೆಗೆ ದಾಖಲು

    ಅಹಮದಾಬಾದ್: ಸೋಮವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಲೋ ಬಿಪಿ ಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ತೊಗಾಡಿಯಾ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲಾಯಿತು. ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

    ತೊಗಾಡಿಯಾ ಅವರು ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಗೆ ವಿಹಚ್‍ಪಿ ಕಚೇರಿಯಿಂದ ಆಟೋ ರಿಕ್ಷಾದಲ್ಲಿ ತೆರಳಿದ್ದು, ನಂತರ ಕಾಣೆಯಾಗಿದ್ದರು ಎಂದು ವರದಿಯಾಗಿದೆ. ತೊಗಾಡಿಯಾ ಅವರು ಅಹಮದಾಬಾದ್‍ನ ಕೊಟಾರ್‍ಪುರ್ ಪ್ರದೇಶದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಯಾರೋ ಅಪರಿಚಿತರು ನೋಡಿದ್ದರು. ನಂತರ ಆ ವ್ಯಕ್ತಿ ಆಂಬುಲೆನ್ಸ್ ಗೆ ಕರೆ ಮಾಡಿ ತೊಗಾಡಿಯಾ ಅವರನ್ನ ಆಸ್ಪತ್ರೆಗೆ ಕರೆತರಲಾಯ್ತು ಎಂದು ಚಂದ್ರಮಣಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.

    ತೊಗಾಡಿಯಾ ಕಾಣೆಯಾಗಿರುವ ಹಿಂದೆ ಪೊಲೀಸರ ಕೈವಾಡವಿದೆ ಎಂದು ಸೋಮವಾರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತೊಗಾಡಿಯಾ ಅವರನ್ನ ಪತ್ತೆ ಮಾಡಲು ನಾಲ್ಕು ಪೊಲೀಸ್ ತಂಡಗಳನ್ನ ರಚಿಸಲಾಗಿತ್ತು.

    ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೊಗಾಡಿಯಾ ವಿರುದ್ಧ ಅರೆಸ್ಟ್ ವಾರೆಂಟ್ ಹಿಡಿದು ರಾಜಸ್ಥಾನ ಪೊಲೀಸರು ಅವರ ಮನೆಗೆ ಹೋಗಿದ್ದರು. ಆದ್ರೆ ತೊಗಾಡಿಯಾ ಮನೆಯಲ್ಲಿಲ್ಲದ ಕಾರಣ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತೊಗಾಡಿಯಾ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ವಿಹೆಚ್‍ಪಿ ಕಾರ್ಯಕರ್ತರು ಸೋಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘೋಷಣೆಗಳನ್ನ ಕೂಗಿ, ಸರ್‍ಖೇಜ್- ಗಾಂಧಿನಗರ ಹೆದ್ದಾರಿಯಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತೊಗಾಡಿಯ ಅವರು ಇರುವ ಸ್ಥಳವನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ದರು.

    ಆದ್ರೆ ತೊಗಾಡಿಯಾ ಅವರನ್ನು ನಮ್ಮ ತಂಡ ಬಂಧಿಸಿಲ್ಲ ಎಂದು ರಾಜಸ್ಥಾನ ಪೊಲೀಸ್‍ ನ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ವಸಿಷ್ಠ ಸ್ಪಷ್ಟಪಡಿಸಿದ್ದರು.

  • ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ

    ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ

    ಮಂಗಳೂರು: ನಗರದಲ್ಲಿ ನಡೆಯಲಿರುವ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆಯಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ.

    ಮೂರು ದಿನಗಳ ಕಾಲ ನಡೆಯುವ ಉಡುಪಿ ಧರ್ಮಸಂಸತ್‍ನಲ್ಲಿ ಭಾಗವಹಿಸಲು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರವೀಣ್ ಭಾಯ್ ತೊಗಾಡಿಯಾ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ, ಗೋ ರಕ್ಷಣೆ, ಗೋ ರಕ್ಷಣೆ ಕುರಿತ ಕಾನೂನು ಚರ್ಚೆಯಾಗಲಿದೆ. ಅಲ್ಲದೇ ರೈತರಿಗೆ ಪೂರಕ ಯೋಜನೆ ಕುರಿತ ವಿಷಯದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

    ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗುತ್ತಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಆಯೋಧ್ಯಾ ರಾಮ ಮಂದಿರ ನಿರ್ಮಾಣ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ಉತ್ತರಿಸಿದರು.

    ಇದನ್ನೂ ಓದಿ: ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಇದೇ ವೇಳೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ಬಿಡುಗಡೆಯನ್ನು ನಿಷೇಧಿಸಬೇಕು ಎಂದು ಹೇಳಿದರು.

    ಇದನ್ನೂ ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?