Tag: ಪ್ರವಾಸಿ ತಾಣ

  • ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಮಡಿಕೇರಿ: ಕೊರೊನಾ ವೈರಸ್ ಬಗ್ಗೆ ಜಿಲ್ಲೆಯ ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು ಹಾಗೂ ಹೋಟೆಲ್‍ಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಬೆಂಗಳೂರಿನಲ್ಲಿ ಕಂಡು ಬಂದಿರುವ ಹಿನ್ನೆಲೆ ಜಿಲ್ಲೆಯಲ್ಲಿಯೂ ಸಹ ಇನ್ನಷ್ಟು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರವಾಸಿ ತಾಣಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರವಾಸಿ ತಾಣಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು. ಈಗಾಗಲೇ ಜಿಲ್ಲೆಯ ಕರಿಕೆ, ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ಜನದಟ್ಟಣೆ ಸ್ಥಳಗಳಲ್ಲಿಯೂ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಅವರು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಗೆಯೇ ಪೋಸ್ಟರ್, ಬ್ಯಾನರ್, ಪ್ರವಾಸಿ ತಾಣಗಳು, ಗಡಿ ಪ್ರದೇಶ ಸೇರಿದಂತೆ ಜಿಲ್ಲೆಯ ಜನದಟ್ಟಣೆ ಪ್ರದೇಶಗಳಲ್ಲಿ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

    ವಿದೇಶದಿಂದ ಬರುವವರ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರಿಗೆ (94498 43263) ಕಡ್ಡಾಯವಾಗಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು. ಹಾಗೆಯೇ 104 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಅವರು ಹೇಳಿದರು.

  • ಕೊರೊನಾ ಎಫೆಕ್ಟ್ – ಪ್ರವಾಸಿ ತಾಣಗಳ ವ್ಯಾಪಾರದಲ್ಲಿ ಗಣನೀಯ ಕುಸಿತ

    ಕೊರೊನಾ ಎಫೆಕ್ಟ್ – ಪ್ರವಾಸಿ ತಾಣಗಳ ವ್ಯಾಪಾರದಲ್ಲಿ ಗಣನೀಯ ಕುಸಿತ

    ಹಾಸನ: ಕೊರೊನಾ ವೈರಸ್ ಎಫೆಕ್ಟ್ ಹಾಸನದ ಪ್ರಮುಖ ಪ್ರವಾಸಿ ತಾಣಗಳಿಗೂ ತಟ್ಟಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ಹಾಸನಕ್ಕೆ ಬರುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರೀ ಕಡಿಮೆಯಾಗಿದ್ದು, ಸ್ಥಳೀಯ ವ್ಯಾಪಾರಸ್ಥರು ಸರಿಯಾದ ವ್ಯಾಪಾರ ಇಲ್ಲದೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ವೈರಸ್ ಭೀತಿ ಶುರುವಾಗುವ ಮುಂಚೆ ಹಾಸನದ ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.

    ಕೊರೊನಾ ಎಫೆಕ್ಟ್ ನಂತರ ಸ್ಥಳೀಯ ಪ್ರವಾಸಿಗರಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೆ, ವಿದೇಶಿ ಪ್ರವಾಸಿಗರ ಆಗಮನದಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದಾಗಿ ವಿದೇಶಿ ಪ್ರವಾಸಿಗರನ್ನೇ ನಂಬಿಕೊಂಡು ವ್ಯಾಪಾರ ಮಾಡುತ್ತಿದ್ದವರ ಆದಾಯದಲ್ಲಿ ಅರ್ಧಕ್ಕರ್ಧ ಕುಸಿತ ಕಂಡಿದೆ. ಹೀಗಾಗಿ ಪ್ರವಾಸಿ ತಾಣಗಳ ವ್ಯಾಪಾರಸ್ಥರು ಬೇಸರಕ್ಕೆ ಒಳಗಾಗಿದ್ದು, ಆದಷ್ಟು ಬೇಗ ವೈದ್ಯರು ಕೊರೊನಾ ಸಮಸ್ಯೆಗೆ ಪರಿಹಾರ ನೀಡಲಿ ಅಂತಿದ್ದಾರೆ.

  • ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ

    ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ

    -ಚುಮುಚುಮು ಚಳಿಯಯಲ್ಲಿ ಮಿಂದೆದ್ದ ಪ್ರವಾಸಿಗರು

    ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಬೆಟ್ಟ ಬರದ ನಡುವೆಯೂ ಪ್ರವಾಸಿಗರ ಪಾಲಿಗೆ ರಸದೌತಣ ಉಣಬಡಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಪ್ರವಾಸಿಗರ ದಂಡು ಈಗ ಬರದನಾಡಿನ ಪ್ರವಾಸಿತಾಣದತ್ತ ಲಗ್ಗೆ ಇಡುತ್ತಿದ್ದು ಇಡೀ ಸ್ಥಳ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

    ಬೆಟ್ಟಕ್ಕೆ ಮುತ್ತಿಡೋಕೆ ಲಗ್ಗೆ ಇಡ್ತಿರೋ ಬೆಳ್ಳಿ ಮೋಡಗಳು, ಬೆಳ್ಳಿ ಮೋಡಗಳ ಇಬ್ಬನಿಯ ಮುಸುಕಿಗೆ ಬೆಳ್ಳನೆಯ ಬಣ್ಣ ಪಡೆದ ಹಚ್ಚು ಹಸಿರು ಪಡೆದ ಪ್ರವಾಸಿ ತಾಣವೇ ನಂದಿ ಬೆಟ್ಟ. ಚಿಕ್ಕಬಳ್ಳಾಪುರ ಜಿಲ್ಲೆ ಈ ಬಾರಿಯೂ ಬರದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಿದ್ದರೂ ಈ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮ ಮಾತ್ರ ಬರದ ನಡುವೆಯೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ತನ್ನತ್ತ ಬರ ಸೆಳೆಯುತ್ತಿದೆ.

    ರಾಜಧಾನಿ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದ ನಂದಿ ಹಿಲ್ಸ್ ಬೆಂಗಳೂರಿಗರ ಪಾಲಿಗರ ವಿಕೇಂಡ್ ಹಾಟ್ ಸ್ಪಾಟ್. ಇದಲ್ಲದೆ ಈ ಬಾರಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಾದ ನೆರೆಗೆ ಬೆದರಿದ ಜನ ನಂದಿಗಿರಿಧಾಮದತ್ತ ಮುಖ ಮಾಡಿದ್ದಾರೆ. ಹೀಗಾಗಿ ಹಿಂದಿನಿಗಿಂತಲೂ ಅತಿ ಹೆಚ್ಚಿನ ಪ್ರವಾಸಿಗರು ನಂದಿ ಗಿರಿಧಾಮಕ್ಕೆ ಲಗ್ಗೆಯಿಡುತ್ತಿದ್ದು, ಅಲ್ಲಿಯ ಸೌಂದರ್ಯಕ್ಕೆ ಮಾರು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಬರದ ನಡುವೆಯೂ ಈ ಬಾರಿ ಬಾಡದ ನಂದಿಗಿರಿಧಾಮ ತುಂತುರು ಮಳೆಯ ಸಿಂಚನಕ್ಕೆ ಹಚ್ಚು ಹಸುರಾಗಿ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

  • ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ – ಮಂಡ್ಯ ಜಿಲ್ಲೆಯಾದ್ಯಂತ ಕಟ್ಟೆಚ್ಚರ

    ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ – ಮಂಡ್ಯ ಜಿಲ್ಲೆಯಾದ್ಯಂತ ಕಟ್ಟೆಚ್ಚರ

    ಮಂಡ್ಯ: ಶ್ರೀಲಂಕಾ ದೇಶದಲ್ಲಿ ನಡೆದಿರುವ ಬಾಂಬ್ ಬ್ಲಾಸ್ಟ್ ನಿಂದ ಎಚ್ಚೆತ್ತುಕೊಂಡಿರುವ ಮಂಡ್ಯ ಪೊಲೀಸರು ಅಲರ್ಟ್ ಘೋಷಿಸಿಕೊಂಡಿದ್ದಾರೆ.

    ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದು, ಮಂಡ್ಯ ಜಿಲ್ಲೆಯ ವಿಶ್ವವಿಖ್ಯಾತ ಕೆ.ಆರ್.ಎಸ್ ಡ್ಯಾಂ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿಗಾವಹಿಸಿದ್ದಾರೆ. ಮಂಡ್ಯದಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಮಂಡ್ಯ ಎಸ್.ಪಿ ಶಿವಪ್ರಕಾಶ್ ದೇವರಾಜು ಅವರು ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಪರಿಶೀಲನೆ ನಡೆಸಿದರು.

    ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ಶ್ರೀಲಂಕಾ ದೇಶದಲ್ಲಿ ನಡೆದ ಉಗ್ರರ ಬಾಂಬ್ ದಾಳಿಯಿಂದ ಎಚ್ಚೆತ್ತುಕೊಂಡಿರುವ ಮಂಡ್ಯ ಜಿಲ್ಲಾ ಪೊಲೀಸರ್ ಹೈ ಅಲರ್ಟ್ ಘೋಷಿಸಿದ್ದಾರೆ. ಕೆ.ಆರ್.ಎಸ್ ಡ್ಯಾಂಗೂ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯಿಂದ ಈಗಾಗಲೇ ಇರುವ ಭದ್ರತೆಯನ್ನ ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಗಿದೆ ಎಂದು ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

    ಮಂಡ್ಯ ನಗರದಲ್ಲಿನ ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳಲ್ಲೂ ಸಹ ಪೊಲೀಸರನ್ನ ನಿಯೋಜನೆಗೊಳಿಸಲಾಗಿದೆ. ಅಪರಿಚಿತ ವ್ಯಕ್ತಿಗಳೇನಾದರೂ ಓಡಾಡಿದರೆ ನಿಗಾವಹಿಸಲು ಸೂಚಿಸಲಾಗಿದೆ. ಇದಲ್ಲದೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪುವಿನ ಜಾಮೀಯಾ ಮಸೀದಿ, ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ಇರುವ ಕಾವೇರಿ ನದಿಯ ಬಲಮುರಿ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲೂ ಪೊಲೀಸರನ್ನ ನಿಯೋಜಿಸಲಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರ ಮೇಲೆ ನಿಗಾ ವಹಿಸಲಾಗಿದೆ. ಇದು ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಗಿದ್ದು, ಇಂತಹ ಸಂದರ್ಭದಲ್ಲಿ ಪೊಲೀಸರ ಈ ಕ್ರಮ ಸರಿಯಾಗಿಯೇ ಇದೆ ಎಂದು ಸ್ಥಳೀಯ ನೀಲಕಂಠ ಹೇಳಿದ್ದಾರೆ.

    ಶ್ರೀಲಂಕಾದಲ್ಲಿ ನಡೆದಿರುವ ಉಗ್ರರ ದಾಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿರುವುದರ ಜೊತೆಗೆ ಎಲ್ಲೆಡೆ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನೂ ನೀಡಲಾಗುತ್ತಿದೆ. ಹೀಗಾಗಿ ಮಂಡ್ಯದಲ್ಲೂ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಎಲ್ಲಾ ಕಡೆಗೂ ಪೊಲೀಸರು ನಿಗಾವಹಿಸಿದ್ದಾರೆ.

  • ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಚಿಕ್ಕಮಗಳೂರು: ಕಾಫಿನಾಡನಲ್ಲಿ ವಿಶಿಷ್ಟ ಜಾಗವೊಂದಿದೆ. ಅಲ್ಲಿ ಎಂದಿಗೂ ನೀರು ಹರಿಯುವುದು ನಿಂತಿಲ್ಲ. ಹಾಗೆಯೇ ಎಂತಹ ಮಳೆಗಾಲ ಬಂದ್ರೂ ಇಲ್ಲಿ ನೀರು ಜಾಸ್ತಿಯಾಗಲ್ಲ. ಅದೆಂತದ್ದೇ ಬರ ಬಂದ್ರೂ ನೀರು ಹರಿಯುವುದು ಕಡಿಮೆಯಾಗಲ್ಲ.

    ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿ ಈ ವಿಶಿಷ್ಟ ಜಾಗದ ಹೆಸರೇ ಸೀತಾವನ. ನೋಡೋಕೆ ದೊಡ್ಡ ಜಲಪಾತದಂತಿಲ್ಲದಿದ್ದರು ಈ ವನ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಈ ಜಾಗದಲ್ಲಿ ನೀವು ಕಲ್ಲು, ನಾಣ್ಯ ಅಥವ ಮರದ ಕೋಲು ಏನನ್ನೇ ಹಾಕಿದರೂ ನಾಲ್ಕೈದು ದಿನದಲ್ಲಿ ಅದರ ಮೇಲೆ ಸುಣ್ಣದ ಅಂಶದಂತೆ ಬೆಳೆಯುತ್ತದೆ. ಹೀಗೆ ಬೆಳೆಯೋದಕ್ಕೂ ಶತಮಾನಗಳ ಆಯಸ್ಸಿದೆ. ರಾಮಾಯಣದ ಕಾಲದಲ್ಲಿ ಸೀತೆ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸ್ನಾನ ಮಾಡಿದ್ದಳು. ಆಗ ಎಲೆ-ಅಡಿಕೆ ಹಾಕಿಕೊಂಡ ಸೀತೆ ಇಲ್ಲಿ ಸುಣ್ಣವನ್ನ ಹಾಕಿದ್ದಳು. ಅಂದಿನಿಂದ ಈ ಜಾಗದಲ್ಲಿ ಏನೇ ವಸ್ತುಬಿದ್ರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತೆ ಅನ್ನೋದು ಸ್ಥಳೀಯರ ನಂಬಿಕೆ. ಸುತ್ತಲೂ ಕಾಫಿತೋಟದ ಮಧ್ಯದಲ್ಲಿ ಹಂತ ಹಂತವಾಗಿ ಧುಮ್ಮಿಕ್ಕುವ ನೀರು ಘಳಿಗೆಗೊಂದು ಹೊಸ-ಹೊಸ ಸಂಗೀತ ಸೃಷ್ಠಿಸುತ್ತೆ. ಈ ಜಾಗ ಅಷ್ಟಾಗಿ ಪರಿಚಿತವಲ್ಲದಿರೋದರಿಂದ ಸ್ಥಳೀಯ ಪ್ರವಾಸಿ ಪ್ರಿಯರಷ್ಟೆ ಆಗಾಗ ಭೇಟಿ ನೀಡಿ ಎಂಜಾಯ್ ಮಾಡ್ತಾರೆ.

    ಜಯಪುರದಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಅಲಗೇಶ್ವರ ಎಸ್ಟೇಟ್ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸಾಗಿದ್ರೆ ಸೀತಾವನ ಸಿಗುತ್ತದೆ. ಐದನೇ ಶತಮಾನದಲ್ಲಿ ಸೀತೆ ಸ್ನಾನ ಮಾಡಿದಾಗ ಈ ಜಾಗ ಹೇಗಿತ್ತೋ ಇಂದಿಗೂ ಹಾಗೇ ಇದೆ. ನೀರು ಹರಿಯುವ ಜಾಗದ ಸುತ್ತಲೂ ಸುಣ್ಣದಂತೆ ಭಾಸವಾಗುವ ಪಾಚಿ ಬೆಳೆದಿದ್ದು, ತೇವಾಂಶ ಎಷ್ಟೇ ಹೆಚ್ಚಿದ್ರು ಮಣ್ಣು ಜರುಗದಂತೆ ಕಲ್ಲಿನಂತಾಗಿದೆ. ಸುಣ್ಣದ ಅಂಶದಿಂದ ಗಟ್ಟಿಯಾಗಿರುವುದರಿಂದ ಸದಾ ನೀರು ಹರಿಯುತ್ತಿದ್ದರು ಇದರ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ನೀರು ನಿಂತಿರೋದನ್ನಾಗಲಿ ಅಥವ ಕಡಿಮೆಯಾಗಿರೋದನ್ನಾಗಲಿ ಇಲ್ಲಿವರೆಗೂ ಯಾರೂ ನೋಡಿಲ್ಲ. ವರ್ಷಪೂರ್ತಿ ನೀರು ಇಷ್ಟೇ ಪ್ರಮಾಣದಲ್ಲಿ ಹರಿಯುತ್ತದೆ. ಕಡಿಮೆಯೂ ಆಗಲ್ಲ, ಹೆಚ್ಚು ಆಗಲ್ಲ. ಆದ್ರೆ, ಈ ಜಾಗ ಅಷ್ಟಾಗಿ ಜನಮಾನಸಕ್ಕೆ ಬಂದಿಲ್ಲ. ಸ್ಥಳೀಯರಿಗಷ್ಟೆ ಗೊತ್ತು. ಅಲ್ಲದೆ ತೋಟದ ಮಾಲೀಕರು ಕೂಡ ಯಾವುದೇ ನಿರ್ಬಂಧ ಹೇರದಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.

    ಇಲ್ಲಿ ಸೀತೆ ಸ್ನಾನ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಸುಣ್ಣ ಹಾಕಿದ್ದಳೋ ಇಲ್ಲವೋ ಅದೂ ಗೊತ್ತಿಲ್ಲ. ಅದನ್ನ ಕಣ್ಣಾರೆ ಕಂಡೋರು ಇಲ್ಲ. ಆದ್ರೆ ಅದೊಂದು ನೂರಾರು ವರ್ಷಗಳಿಂದ ಜನರ ನಂಬಿಕೆಯಷ್ಟೆ. ಆದ್ರೆ, ಇಲ್ಲಿ ಶತಮಾನಗಳಿಂದ ನೀರು ನಿರಂತರವಾಗಿ ಹರಿಯುತ್ತಿರೋದಂತು ಸತ್ಯ. ಸೀತೆಯ ಹೆಸರನ್ನಿಟ್ಟಿಕೊಂಡಿರೋ ಈ ಜಾಗವಂತು ಅದ್ಭುತ. ನೋಡೋಕೆ ತುಸು ಚಿಕ್ಕದಿದ್ದರೂ ಈ ಜಾಗದ ಅನುಭವವೇ ಬೇರೆ. ಹೀಗಾಗಿ ನೆಕ್ಸ್ಟ್ ಟೈಂ ಕಾಫಿನಾಡಿಗೆ ಬಂದಾಗ ಈ ತಾಣವನ್ನ ಮಿಸ್ ಮಾಡ್ಕೋಬೇಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಗಮನಿಸಿ, ಮಲೆನಾಡಿನ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ!

    ಚಿಕ್ಕಮಗಳೂರು: ಮರಣ ಮೃದಂಗ ಬಾರಿಸುತ್ತಿರುವ ಮಂಗನಜ್ವರಕ್ಕೆ ಮಲೆನಾಡಿಗರು ತತ್ತರಿಸಿ ಹೋಗಿದ್ದು, ಈ ಕಾಯಿಲೆ ಇಲ್ಲಿಗೆ ಬರುವ ಪ್ರವಾಸಿಗರಿಗೂ ತಗಲುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಮಲೆನಾಡು ಹಾಗೂ ಸುತ್ತಮುತ್ತಲ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರೋ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‍ಡಿ) ವೈರಾಣುವಿನಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಈ ಕಾಯಿಲೆ ಈ ಭಾಗಕ್ಕೆ ಬರುವ ಪ್ರವಾಸಿಗರಿಗೂ ತಗಲಬಾರದೆಂದು ಮುಂಜಾಗೃತೆ ಕ್ರಮವಾಗಿ ಪ್ರವಾಸಿಗರಿಗೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಕುದುರೆಮುಖಕ್ಕೆ ಒಳಪಡುವ ಹಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದೆ. ಪ್ರವಾಸಿಗರ ಚಾರಣಕ್ಕೆ ಅರಣ್ಯ ಇಲಾಖೆಯಿಂದ ನಿಷೇಧ ಹೇರಿದೆ. ಈ ಭಾಗದಲ್ಲಿ ಕೆ.ಎಫ್.ಡಿ ವೈರಾಣು ಪತ್ತೆ ಹಿನ್ನೆಲೆ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್, ಕೊಡಚಾದ್ರಿ, ಕುರೆಂಜಲ್ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರು ಪ್ರವೇಶಿಸಬಾರದೆಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಅಷ್ಟೇ ಅಲ್ಲದೆ ಕಾರ್ಕಳಕ್ಕೆ ಒಳಪಡುವ ಪ್ರದೇಶದಲ್ಲೂ ಟ್ರಕ್ಕಿಂಗ್ ನಿಷೇಧಿಸಲಾಗಿದೆ. ಕಾರ್ಕಳ ಹಾಗೂ ಚಿಕ್ಕಮಗಳೂರು, ಕುದುರೆಮುಖ ವ್ಯಾಪ್ತಿಯಲ್ಲಿ ಕೆಎಫ್‍ಡಿ ಭೀತಿ ಹೆಚ್ಚಾಗಿದ್ದು, ಮುಂಜಾಗೃತೆ ಕ್ರಮವಾಗಿ ಅರಣ್ಯ ಇಲಾಖೆ ಮಲೆನಾಡಿಗೆ ಬರೋ ಪ್ರವಾಸಿಗರಿಗೆ ಹಾಗೂ ಜನರಿಗೆ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯದಲ್ಲಿ ಸೃಷ್ಟಿಯಾಯ್ತು ಒಂದೇ ಬಾರಿ ಐನೂರು ಜನ ನಿಲ್ಲಬಹುದಾದ ತೇಲುವ ವೇದಿಕೆ!

    ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಕೆರೆ ತೊಣ್ಣೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ತೊಣ್ಣೂರು ಕೆರೆ ಉತ್ಸವ ನಡೆಯಲಿದ್ದು, ಉತ್ಸವಕ್ಕಾಗಿ ಕೆರೆಯ ನಡುವೆ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

    ಇಂದು ಸಂಜೆ ಏಳು ಗಂಟೆ ಸುಮಾರಿಗೆ ತೊಣ್ಣೂರು ಕೆರೆ ಉತ್ಸವವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕೆರೆಯ ಸುತ್ತಮುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

    ಕೆರೆಯ ಸಮೀಪವೇ ಇರುವ ಬೆಟ್ಟಗುಡ್ಡಗಳೂ ಕೂಡ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಕೆರೆಯ ನಡುವೆ ಹಾಕಿರುವ ವೇದಿಕೆಯಲ್ಲಿ ಏಕಕಾಲಕ್ಕೆ ಐನೂರು ಜನ ಕುಳಿತುಕೊಳ್ಳಬಹುದಾಗಿದೆ. ಮೊದಲು ಕೆರೆಗೆ ಗಂಗಾಪೂಜೆ ಸಲ್ಲಿಸಲಾಗುತ್ತದೆ.

    ಮೂರು ದಿನಗಳ ಕಾಲ ಕನ್ನಡದ ಪ್ರಖ್ಯಾತ ಗಾಯಕರು, ಸಿನೆಮಾ ನಟ, ನಟಿಯರು, ಜಾನಪದ ಕಲಾವಿದರು ಕೆರೆಯ ನಡುವೆ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ, ಕಲಾ ರಸಿಕರ ಮನ ತಣಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕಾಗಿ ಪ್ರವಾಸಿ ತಾಣ ತೊಣ್ಣೂರು ಕೆರೆ ಸರ್ವ ಅಲಂಕೃತವಾಗಿದ್ದು, ಹೊಸ ಲೋಕವೇ ಧರೆಗಿಳಿದಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಸ್ವರ್ಗವನ್ನ ನಾಚಿಸುವಂತಿದೆ ಅಡ್ಯಾರ್ ಫಾಲ್ಸ್-ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರೀತಿದೆ ಜಲಪಾತ

    ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಹಲವು ಬೀಚ್‍ಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಕೆಲವೊಂದು ಜಲಪಾತಗಳು ಮೂಲ ಸೌಕರ್ಯದ ಕೊರತೆಯಿಂದಾಗಿ ದೂರ ಉಳಿದುಕೊಂಡಿವೆ. ಈ ಸಾಲಿನಲ್ಲಿ ಅಡ್ಯಾರ್ ಜಲಪಾತವೂ ಸೇರುತ್ತದೆ.

    ಮಂಗಳೂರು ನಗರದಿಂದ 10 ಕಿ.ಮೀ ದೂರದ ಅಡ್ಯಾರ್ ಎಂಬಲ್ಲಿ ಈ ಜಲಪಾತವಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್‍ನಿಂದ ಎಡಕ್ಕೆ ಸಾಗಿದರೆ ಸಿಗೋ ಈ ಫಾಲ್ಸ್ ವಿದ್ಯಾರ್ಥಿಗಳ ನೆಚ್ಚಿನ ವೀಕೆಂಡ್ ಸ್ಪಾಟ್ ಆಗಿದೆ. ಅಡ್ಯಾರ್ ಫಾಲ್ಸ್ ಅಂತಾನೇ ಹೆಸರುವಾಸಿಯಾಗಿರೋ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಸ್ವರ್ಗವನ್ನೇ ನಾಚಿಸುವ ಸೌಂದರ್ಯ ಪಡೆಯುತ್ತದೆ.

    ಬೆಟ್ಟದ ಮೇಲಿಂದ ಹಾಲ್ನೊರೆಯ ಹಾಗೆ ಹರಿದು ಬರೋ ನೀರು ಲಲನೆಯ ರೀತಿ ಹರಿಯುತ್ತದೆ. ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕಾರಣ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ ಶಾಂತವಾಗಿ ಹರಿಯುತ್ತದೆ. ಹಾಗಾಗಿಯೇ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಯಾರ್ ಫಾಲ್ಸ್ ಗೆ ಬರುತ್ತಾರೆ.

    ಅಡ್ಯಾರ್ ಜಲಪಾತ ಜೂನ್‍ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಜಲಪಾತ ನವಂಬರ್‍ವರೆಗೂ ವೈಭವದಿಂದ ಮೇಳೈಸುತ್ತದೆ. ಆದರೆ ಫಾಲ್ಸ್ ಗೆ ಹೋಗೋಕೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿಯೇ ಜನ ಫಾಲ್ಸ್ ವೈಭವ ಕಾಣೋಕೆ ಹಿಂಜರಿಯುತ್ತಾರೆ. ಇನ್ನೊಂದೆಡೆ ಪೋಲಿಗಳು ಈ ಫಾಲ್ಸ್ ನ್ನು ಜಾಲಿ ಮಾಡೋಕೆ ಬಳಸೋದ್ರಿಂದ ಮದ್ಯದ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಇದರ ಸೌಂದರ್ಯಕ್ಕೆ ಧಕ್ಕೆ ತಂದಿದೆ.

    ಒಟ್ಟಿನಲ್ಲಿ ಫಾಲ್ಸ್ ನೋಡೋಕೆ ಪಶ್ಚಿಮ ಘಟ್ಟಗಳ ತಪ್ಪಲಿಗೆ ಹೋಗೋ ಜನ ಮಂಗಳೂರಿಗೆ ಕೂಗಳತೆ ದೂರದಲ್ಲಿರೋ ಫಾಲ್ಸ್ ನ ಸೌಂದರ್ಯ ನೋಡೋ ಅವಕಾಶ ವಂಚಿತರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಜಲಪಾತ ಸೌಂದರ್ಯ ಉಳಿಸಿದ್ರೆ ಕರಾವಳಿಯ ಪ್ರವಾಸಿ ತಾಣಗಳ ಪಟ್ಟಿಗೆ ಅಡ್ಯಾರ್ ಫಾಲ್ಸ್ ಕೂಡಾ ಸೇರಿ, ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

    https://youtu.be/iYalE_HuW6k

  • ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: 2017ರ ಕೊನೆಯ ದಿನವಾದ ಇಂದು ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಪ್ರವಾಸಿಗರು ಆಗಮಿಸಿದ್ದರು.

    ಮುಗಿಲಿನಲ್ಲಿ ಮೋಡದ ನಡುವೆ ಬಣ್ಣದ ಚಿತ್ತಾರ ಬಿಡಿಸಿದ್ದ ನೇಸರನನ್ನು ಕಂಡು ಪುಳಕಿತರಾದ ಪ್ರವಾಸಿಗರು 2017ರ ರವಿಮಾಮನಿಗೆ ಶುಭ ವಿದಾಯ ಹೇಳಿ ನಾಳೆಯ ಹೊಸ ಸೂರ್ಯನ ಬರುವಿಕೆಗಾಗಿ ಸಂಭ್ರಮಿಸಿದರು. ಸಂಜೆ ವೇಳೆಗೆ ತಣ್ಣಗಾದ ಸೂರ್ಯ ಕೆಂಪು ಕಡಲಲ್ಲಿ ತೇಲಿದಂತೆ ಕಂಡು ಬಂದ. ಸೂರ್ಯಾಸ್ತದ ಕೊನೇ ಕ್ಷಣ ಹತ್ತಿರವಾಗುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕೈ ಬೀಸಿ ಹಾಯ್ ಬಾಯ್ ಎನ್ನುತ್ತಾ ಹಲವು ಸಿಹಿ ಕಹಿಗಳ ಮಿಶ್ರಣ ಹೊಂದಿದ್ದ 2017 ಕ್ಕೆ ಜನರು ಖುಷಿ ಖುಷಿಯಿಂದಲೇ ಬೀಳ್ಕೊಟ್ಟರು.

    ಎಂದಿನಂತೆ ಜಗತ್ತು ಬೆಳಗುವ ತನ್ನ ಕಾಯಕ ಮುಗಿಸಿ ರಂಗು ರಂಗಾಗಿ ಕೊನೆಯ ದರ್ಶನ ನೀಡಿ ಮೋಡದ ಮರೆಯಲ್ಲಿ ಮರೆಯಾದ ರವಿಮಾಮನನ್ನು ಕಂಡು ಜನರು ಪುಳಕಿತರಾದರು. ವರ್ಷದ ಕೊನೆಯ ಸೂರ್ಯನನ್ನು ಆತ್ಮೀಯವಾಗಿ ಬೀಳ್ಕೊಡಲೆಂದೇ ದೇಶದ ವಿವಿದೆಡೆಗಳಿಂದ ಇಲ್ಲಿಗೆ ಆಗಮಿಸಿದ್ದರು. ತಮ್ಮ ಕ್ಯಾಮೆರಾಗಳಲ್ಲಿ ವರ್ಷದ ಕೊನೆ ಸೂರ್ಯಾಸ್ತವನ್ನು ಸೆರೆಹಿಡಿದು ಕೊಂಡು ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2017ರ ನೇಸರನಿಗೆ ವಿದಾಯ ಹೇಳಿ 2018ರ ನೇಸರನ ನಿರೀಕ್ಷೆಯಿಂದ ಹೊರನಡೆದರು.