Tag: ಪ್ರವಾಸಿ ತಾಣ

  • ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

    ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

    – ಆಕರ್ಷಿಸುತ್ತಿದೆ ಆಡುಮಲ್ಲೇಶ್ವರ ಮೃಗಾಲಯ

    ಚಿತ್ರದುರ್ಗ: ಕೊರೊನಾ ಭೀತಿಯಿಂದಾಗಿ ಸತತ ಎರಡು ತಿಂಗಳುಗಳಿಂದ ಸಂಪೂರ್ಣ ಬಂದ್ ಆಗಿದ್ದ ಜೋಗಿಮಟ್ಟಿ ಅರಣ್ಯ ಧಾಮದಲ್ಲಿರುವ ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ತೆರೆಯಲಾಗಿದೆ. ಜೂನ್ 24 ರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡುಮಲ್ಲೇಶ್ವರ ಕಿರುಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

    ಕರ್ನಾಟಕ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಕೋವಿಡ್-19 ಎರಡನೇ ಅಲೆಯ ತೀವ್ರತೆಯನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ವೀಕ್ಷಣೆಗೆ ನಿಬರ್ಂಧಿಸಲಾಗಿತ್ತು. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಜೂನ್ 21ರಂದು ಕೋವಿಡ್-19 ನಿಯಂತ್ರಣದ ಮಾನದಂಡಗಳೊಂದಿಗೆ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಅನ್‍ಲಾಕ್ ಘೋಷಿಸಿರುತ್ತಾರೆ. ಅದರಂತೆ ಕರ್ನಾಟಕದ ವಿವಿಧ ಮೃಗಾಲಯಗಳನ್ನು ಪ್ರವಾಸಿಗರು, ವೀಕ್ಷಕರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.

    ನಾಳೆಯಿಂದ ಕಿರುಮೃಗಾಲಯ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದ್ದು, ನೂತನವಾಗಿ ನಿರ್ಮಾಣ ಮಾಡಿರುವ ಸುಸಜ್ಜಿತ ಬೃಹತ್ ಕರಡಿ ಜೋನ್, ಚಿರತೆಗಳ ಘರ್ಜನೆ, ಜಿಂಕೆಗಳ ಫ್ರೀಡಮ್ ಓಡಾಟ ಹಾಗು ವಿವಿಧ ಆಕರ್ಷಕ ಪಕ್ಷಿಗಳ ನಿನಾದವನ್ನು ಪ್ರವಾಸಿಗರು ಸವಿಯಬಹುದಾಗಿದೆ. ಆದರೆ ಕಿರು ಮೃಗಾಲಯಕ್ಕೆ ಮಕ್ಕಳೊಂದಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ವೀಕ್ಷಣೆಗೆ ಧಾವಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಿರುಮೃಗಾಲಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ವೀಕೆಂಡ್ ನಲ್ಲಿ ಸಹಸ್ರಾರು ಜನರು ವಿವಿಧೆಡೆಗಳಿಂದ ಈ ಮೃಗಾಲಯದಲ್ಲಿನ ಪ್ರಾಣಿಗಳ ವೀಕ್ಷಣೆಗೆ ಬರಲಿದ್ದಾರೆ. ಹೀಗಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಿಬ್ಬಂದಿ ನೇಮಿಸುವ ಮೂಲಕ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಲಾಗಿದೆ. ಹೀಗಾಗಿ ಪ್ರವಾಸಿಗರು ನಿರಾತಂಕವಾಗಿ ಕಿರು ಮೃಗಾಲಯ ವೀಕ್ಷಿಸಲು ಕೋವಿಡ್ ನಿಯಮ ಪಾಲನೆಯೊಂದಿಗೆ ಧಾವಿಸಿ ಎಂಜಾಯ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಿಗಬೇಕು ಅದೇ ರಾಜಕಾರಣ: ಎಂಟಿಬಿ

  • ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಭೂಕುಸಿತ. ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಬೆಟ್ಟಗುಡ್ಡಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಬಾರದು ಬೆಟ್ಟಗುಡ್ಡಗಳಲ್ಲಿ ರೆಸಾರ್ಟ್, ಕಟ್ಟಡ ಕಾಮಗಾರಿ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಹೀಗಿದ್ದರೂ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಬೆಟ್ಟಗಳನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಬೆಟ್ಟದ ಕೆಳಗೆ ವಾಸ ಮಾಡುವ ಜನರಿಗೆ ಇದೀಗ ಅತಂಕ ಶುರುವಾಗಿದೆ.

    ಮಳೆಗಾಲ ಆರಂಭವಾಯಿತು ಅಂದ್ರೆ ಕೊಡಗಿನ ಜನರಿಗೆ ಅತಂಕ ಶುರುವಾಗುತ್ತದೆ. ಕಳೆದ ಮೂರು ವರ್ಷದಿಂದ ಅರಂಭವಾಗಿರುವ ಜಲಪ್ರಳಯ ಭೂಕುಸಿತ ಇಲ್ಲಿಯ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಅರ್ಚಕರಾದ ನಾರಾಯಣ್ ಅಚಾರ್ ಕುಟುಂಬವೇ ಭೂ ಸಮಾಧಿಯಾಗಿದ್ದನ್ನು ಯಾರೂ ಮರೆತ್ತಿಲ್ಲ. ಹೀಗಿದ್ದರೂ ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಸೀಟ್ ವ್ಯೂವ್ ಪಾಯಿಂಟ್ ಮಾಡಲು ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿಯನ್ನು ತೋಟಗಾರಿಕೆ ಇಲಾಖೆ ಅರಂಭ ಮಾಡಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

    ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಬೆಟ್ಟದ ಕೆಳಗೆ ವಾಸಮಾಡುತ್ತಿರುವ ಹತ್ತಾರು ಕುಟುಂಬ ಭಯದಲ್ಲಿ ದಿನ ಕಳೆಯುತ್ತಿದೆ. ಬೆಟ್ಟ ಕುಸಿದು ಬಿದ್ದರೆ ಅಪಾಯ ಅಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದನ್ನು ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯು ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದು, ಕಾಮಗಾರಿ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವು ಇದ್ದರೂ ಕೂಡ ಮತ್ತೆ ಬೆಟ್ಟ ಕೊರೆದು ಕಾಮಗಾರಿ ಮಾಡುತ್ತಿದೆ. ಒಂದು ವೇಳೆ ಬೆಟ್ಟ ಕುಸಿದು ದುರಂತ ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಹೋರಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

  • ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    – ಮಾಂಸದಂಗಡಿಗಳಿಗೆ ನಗರಸಭೆಯಿಂದ ಬೀಗ

    ಮಡಿಕೇರಿ: ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅಚರಣೆ ಮಾಡುತ್ತಿರುವ ವೇಳೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ನಗರಸಭೆಯ ಸಿಬ್ಬಂದಿ ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

    ವಾರಾಂತ್ಯದ ಲಾಕ್‍ಡೌನ್ ಇರುವುದರಿಂದ ಇಂದು ಮಾಂಸ ಪ್ರಿಯರು ಚಿಕನ್ ಹಾಗೂ ಮಟನ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಮಾಂಸ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು ಎಂದಿನಂತೆ ಬೆಳಗ್ಗೆ ಅಂಗಡಿಗಳನ್ನು ತೆರೆದಿದ್ದರು. ಅದರೆ ಮಹಾವೀರ ಜಯಂತಿ ಇದ್ದರೂ ಅದರ ಅರಿವು ಇಲ್ಲದೆ ಎಂದಿನಂತೆ ವ್ಯಾಪಾರಿಗಳು ವ್ಯಾಪಾರ ಮಾಡಲು ಮುಂದಾಗಿದ್ದ ವೇಳೆಯಲ್ಲಿ ನಗರಸಭೆಯ ಸಿಬ್ಬಂದಿಗಳು ದಾಳಿ ನಡೆಸಿದರು. ನಗರದ ಮಾರ್ಕೆಟ್ ಕೊಯಿನೂರ್ ರಸ್ತೆ. ಪೋಸ್ಟ್ ಅಫೀಸ್ ರಸ್ತೆ ಸೇರಿದಂತೆ 10 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿ ಬೀಗ ಹಾಕಿ, ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇಂದು ಭಾನುವಾರ ಅಗಿರುವುದರಿಂದ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ಬಂದ ನಾನ್‍ವೆಜ್ ಪ್ರಿಯರು ನಿರಾಸೆಯಿಂದ ಮನೆ ವಾಪಸ್ ಹೋದರು.

    ಕೊಡಗು ಸ್ತಬ್ಧ: ವಿಕೇಂಡ್ ಬಂತು ಅಂದ್ರೆ ದಕ್ಷಿಣ ಕಾಶ್ಮೀರ ಕೊಡಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ಜನ ತುಂಬಿ ತುಳುಕುತ್ತಿದರು. ಆದರೆ ರಾಜ್ಯದಾದ್ಯಂತ ವಿಕೇಂಡ್ ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ಭಾನುವಾರ ಕೊಡಗು ಸಂಪೂರ್ಣ ಸ್ಥಬ್ಧವಾಗಿದೆ. ಯಾವುದೇ ರಸ್ತೆಗಳಲ್ಲೂ ಒಂದೇ ಒಂದು ವಾಹನಗಳ ಓಡಾಟವಿಲ್ಲ. ಪ್ರವಾಸಿಗರ ಮಾತಿರಲಿ, ಸ್ಥಳೀಯರು ಸೇರಿದಂತೆ ವಾಹನ ಚಾಲಕರು ಕೂಡ ಮನೆಬಿಟ್ಟು ಹೊರಗೆ ಕಾಲಿಡಲಿಲ್ಲ. ಹೀಗಾಗಿ ಭಾನುವಾರದಂದು ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಪ್ರಸಿದ್ಧಿಯಾಗಿರುವ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು.

    ನಿನ್ನೆ ಕೆಲ ಸಾರ್ವಜನಿಕರು ಕುತೂಹಲಕ್ಕೆಂದು ನಗರ ಪ್ರದೇಶಗಳಿಗೆ ಬಂದು ವೀಕ್ಷಣೆ ಮಾಡಿ ಹೋಗುತ್ತಿದ್ದರು. ಅದರೆ ಇಂದು ಒಬ್ಬರೆ ಒಬ್ಬರು ರಸ್ತೆಗೆ ಇಳಿಯಲಿಲ್ಲ. ಬೆಳಗ್ಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋದ ಸಾರ್ವಜನಿಕರು ಮತ್ತೆ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳೆಲ್ಲ. ಸಂಪೂರ್ಣವಾಗಿ ಖಾಲಿ ಖಾಲಿ ಯಾಗಿತ್ತು. ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ. ಸೋಮವಾರಪೇಟೆ. ವಿರಾಜಪೇಟೆ. ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಪೂರ್ಣ ವಾರಾಂತ್ಯದ ಲಾಕ್‍ಡೌನ್ ಯಶಸ್ವಿಯಾಗಿದೆ.

  • ಕೊಡಗಿನಿಂದ ವಾಪಸ್ ಆಗುತ್ತಿದ್ದಾರೆ ನೂರಾರು ಪ್ರವಾಸಿಗರು

    ಕೊಡಗಿನಿಂದ ವಾಪಸ್ ಆಗುತ್ತಿದ್ದಾರೆ ನೂರಾರು ಪ್ರವಾಸಿಗರು

    ಮಡಿಕೇರಿ: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಕೊಡಗು ಜಿಲ್ಲಾಡಳಿತ ಆದೇಶ ಮಾಡಿದೆ.

    ಫೆಬ್ರವರಿ 3ರ ಸಂಜೆಯಿಂದಲೇ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದು, ಏಪ್ರಿಲ್ 20 ರವರೆಗೆ ಮುಚ್ಚಲಿವೆ. ಕೊಡಗಿನ ಪ್ರಸಿದ್ದ ಪ್ರವಾಸಿ ತಾಣ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ರಾಜಾಸೀಟ್, ಅಬ್ಬಿಫಾಲ್ಸ್, ದುಬಾರೆ ಅಷ್ಟೇ ಅಲ್ಲ ತಲಕಾವೇರಿ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.

    ಪ್ರವಾಸಿ ತಾಣಗಳನ್ನು ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಸಮಸ್ಯೆಗೆ ಸಿಲುಕುವಂತಾಯಿತು. ಅದರಲ್ಲೂ ರಜಾ ದಿನವಾದ ಭಾನುವಾರವೂ ಮಾಹಿತಿ ಇಲ್ಲದೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬಂದಿದ್ದ ನೂರಾರು ಪ್ರವಾಸಿಗರು ನಿರಾಶರಾಗಬೇಕಾಯಿತು. ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬಂದಿದ್ದ ಪ್ರವಾಸಿಗರು ಪ್ರವಾಸಿ ತಾಣಗಳ ಎಂಟ್ರಿಯಲ್ಲೇ ಬೀಗ ಹಾಕಿರುವುದನ್ನು ನೋಡಿ ವಾಪಸ್ ತೆರಳಿದರು. ಮೊದಲೇ ಮಾಹಿತಿ ನೀಡಿದ್ದರೆ ವೆಚ್ಚ ಮಾಡಿಕೊಂಡು ಕೊಡಗಿಗೆ ಬರುವುದೆಲ್ಲವೂ ತಪ್ಪುತ್ತಿತ್ತು ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದರು.

    ಮತ್ತೊಂದೆಡೆ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು ವೀಕೆಂಡ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವರೆಂದು ಸಾಕಷ್ಟು ಬಂಡವಾಳ ಹಾಕಿದ್ದು, ಇದ್ದಕ್ಕಿದ್ದಂತೆ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಆರೇಳು ತಿಂಗಳ ಕಾಲ ಲಾಕ್ ಡೌನ್ ಆಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವು. ಈಗ ಮತ್ತೆ ಲಾಕ್‍ಡೌನ್ ಮಾಡಿರುವುದರಿಂದ ತಮ್ಮ ಬದುಕು ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಏಪ್ರಿಲ್ 20ರ ವರೆಗೆ ಕೊಡಗಿನ ಪ್ರವಾಸಿತಾಣಗಳು ಬಂದ್

    ಏಪ್ರಿಲ್ 20ರ ವರೆಗೆ ಕೊಡಗಿನ ಪ್ರವಾಸಿತಾಣಗಳು ಬಂದ್

    ಮಡಿಕೇರಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 20ರ ವರೆಗೆ ಕೊಡಗಿನ ಎಲ್ಲಾ ಪ್ರವಾಸಿತಾಣಗಳನ್ನು ಬಂದ್ ಮಾಡಲು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

    ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವೀಕೆಂಡ್ ಬಂತೆಂದರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಜನ ಕೋವಿಡ್ ನಿಯಮಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಅದರಲ್ಲೂ ಕೊಡಗಿನ ಪ್ರವಾಸಿತಾಣಗಳಾದ ದುಬಾರೆ, ನಿಸರ್ಗಧಾಮ, ಮಡಿಕೇರಿ ನಗರದ ರಾಜಾಸೀಟ್, ಅಬ್ಬಿ ಜಲಪಾತ, ಮಂದಲ್ ಪಟ್ಟಿ ಸೇರಿದಂತೆ ಅನೇಕ ಪ್ರವಾಸಿತಾಣಗಳಲ್ಲಿ ಕೊರೊನಾ ನಿಯಮಗಳನ್ನು ಮರೆತು ಎಂಜಾಯ್ ಮಾಡುತ್ತಿದ್ದಾರೆ. ಇದರ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಕಡೆಗೂ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಪ್ರವಾಸಿತಾಣಗಳನ್ನು ಏಪ್ರಿಲ್ 20 ರ ವರೆಗೆ ಬಂದ್ ಮಾಡಲು ಆದೇಶ ನೀಡಿದೆ.

    ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಗಡಿ ಭಾಗದಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಿದರೂ ಜಿಲ್ಲೆಗೆ ಬರುವ ಪ್ರವಾಸಿಗರಿಂದ ಕಂಟಕ ಎದುರಾಗುತ್ತಿದೆ. ಹೀಗಾಗಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಪ್ರವಾಸಿಗರು ಮತ್ತು ಸಾರ್ವಜನಿಕರ ವೀಕ್ಷಣೆಗೆ ಪ್ರವಾಸಿತಾಣಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

    ಒಟ್ಟಿನಲ್ಲಿ ವರ್ಷದಲ್ಲಿ ಎರಡನೇ ಬಾರಿಗೆ ಮತ್ತೆ ಕೊಡಗಿನ ಪ್ರವಾಸಿತಾಣಗಳು ಬಂದ್ ಅಗುತ್ತಿರುವುದರಿಂದ ಪ್ರವಾಸಿತಾಣಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಸ್ಥಿತಿ ಶೋಚನೀಯವಾಗುತ್ತಿದೆ.

  • ಅಕ್ಕಮಹಾದೇವಿ ಜನ್ಮಸ್ಥಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ: ಯಡಿಯೂರಪ್ಪ

    ಅಕ್ಕಮಹಾದೇವಿ ಜನ್ಮಸ್ಥಳ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ: ಯಡಿಯೂರಪ್ಪ

    ಶಿವಮೊಗ್ಗ: ಅಕ್ಕಮಹಾದೇವಿ ಜನ್ಮಸ್ಥಳವಾದ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 30 ಕೋಟಿ ರೂ.ಗಳನ್ನು ಮೀಸಲಾಗಿರಿಸಿದ್ದು, ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಉಡುಗುಣಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ಸಿಎಂ ಶರಣೆ ಅಕ್ಕಮಹಾದೇವಿಯವರ ಹಾಗೂ 12ನೇ ಶತಮಾನದ ಶಿವಶರಣರ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶ ಹೊಂದಲಾಗಿದೆ ಎಂದರು. ಈ ಕ್ಷೇತ್ರವು ಕರ್ನಾಟಕ ಮಾತ್ರವಲ್ಲದೇ ದೇಶದ ವಿಶಿಷ್ಟ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಅಕ್ಕಮಹಾದೇವಿಯವರ ದರ್ಶನ ಪಡೆದು ಪುನೀತರಾಗಬೇಕು ಎಂದರು.

    ಜೊತೆಗೆ ಇಲ್ಲಿ ಇರುವಷ್ಟು ಸಮಯ ಇಲ್ಲಿನ ಸುಂದರ ತಾಣದಲ್ಲಿ ಕಳೆಯುವ ಸಮಯ ಸದಾ ನೆನಪಿನಲ್ಲಿ ಉಳಿಯುವಂತಾಗಲಿದೆ. ಜೊತೆಗೆ ಅಕ್ಕನ ಆದರ್ಶಗಳನ್ನು ಅವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ. ಇದರಿಂದಾಗಿ ಸತ್ ಚಿಂತನೆಯ ಸುಂದರ ಸಮಾಜ ನಿರ್ಮಾಣಗೊಳ್ಳಲಿದೆ. ಮುಂದಿನ 10 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇಲ್ಲಿನ ಸುಂದರ ತಾಣದಲ್ಲಿ ಪಾದಚಾರಿ ಮಾರ್ಗ, ವಾಯುವಿಹಾರ, ಒಂದು ಕಿ.ಮೀ.ಗೂ ಹೆಚ್ಚಿನ ದೂರದ ದೋಣಿ ವಿಹಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ವಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರಿನ ಪ್ರವಾಸಿ ತಾಣಗಳು ಓಪನ್: ಎಸ್.ಟಿ ಸೋಮಶೇಖರ್

    ಮೈಸೂರು: ಪ್ರವಾಸಿ ತಾಣಗಳು ಇಂದಿನಿಂದ ಓಪನ್ ಮಾಡುವಂತೆ ಸಚಿವ ಎಸ್ ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.

    ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶದ ಮೇರೆಗೆ ತೆರೆಯುವಂತೆ ಸಚಿವರು ಘೋಷಿಸಿದ್ದಾರೆ.

    ಚಾಮುಂಡಿ ಬೆಟ್ಟ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಅರಮನೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನವೆಂಬರ್ 1 ರವೆಗೂ ಮೈಸೂರು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮೈಸೂರಿನ ಹಲವು ಸಂಘ ಸಂಸ್ಥೆಗಳು ಈ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡವು. ಈ ಮನವಿಗೆ ಸಿಎಂ ಸ್ಪಂದಿಸಿದ್ದು, ಸದ್ಯ ಎಲ್ಲಾ ಪ್ರವಾಸಿತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿದೆ.

    ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

  • ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    – ಪ್ರವಾಸಿಗರಿಗೆ ನಿಷೇಧ ಹೇರಿದ ಜಿಲ್ಲಾಡಳಿತ
    – ಇಂದು ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ನಿಷೇಧ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2020 ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಮೃಗಾಲಯಕ್ಕೆ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಇಂದು ಮಧ್ಯರಾತ್ರಿಯಿಂದಲೇ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ನಂಜನಗೂಡು ದೇವಾಲಯಕ್ಕೂ ಪ್ರವೇಶ ನಿಷೇಧ ಮಾಡಿದ್ದು, ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಪ್ರವಾಸಿಗರು ಹೋಗುವಂತಿಲ್ಲ. ಮೈಸೂರಿನ ಜೊತೆಗೆ ಮಂಡ್ಯ ಪ್ರವಾಸಿ ತಾಣಗಳನ್ನು ಮುಚ್ಚಲಾಗುವುದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್ ದಸರಾ ಮಾಡೋಣ ಎಂದು ಫೇಸ್‍ಬುಕ್ ಲೈವ್‍ನಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೈಸೂರು ಜಿಲ್ಲೆ ಕೊರೊನಾ ಸೋಂಕಿನಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿದೆ. ಕೊರೊನಾ ಸಾವಿನ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ರಾಜ್ಯದ ಶೇಖಡ 10% ರಷ್ಟಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯವಾಗಿವೆ. ಸಾರ್ವಜನಿಕರು ತಮ್ಮ ಮನೆಯಲ್ಲೆ ಇದ್ದು ಈ ಬಾರಿ ದಸರಾ ಆಚರಿಸಲು ಸಹಕಾರ ನೀಡಬೇಕೆಂದು ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

  • ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ 40 ಕೋಟಿ ಬಿಡುಗಡೆ

    ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ 40 ಕೋಟಿ ಬಿಡುಗಡೆ

    ಮಡಿಕೇರಿ: ಕೊಡಗು ಜಿಲ್ಲೆ ಮೂರು ವರ್ಷಗಳಿಂದಲೂ ನಿರಂತರವಾಗಿ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದೆ. ಜೊತೆಗೆ ಈ ಬಾರಿ ಕೊರೊನಾ ಮಹಾಮಾರಿ ಕೂಡ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಕೊಡಗಿಗೆ 40 ಕೋಟಿ ಬಿಡುಗಡೆ ಮಾಡಿದೆ.

    ಹೌದು. ಭಾರತದ ಸ್ಕಾಟ್‍ಲೆಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಕಾಡಿನೊಳಗೆ ನಡೆದ ಅನುಭವ ನೀಡುವ ಕಾವೇರಿ ನಿಸರ್ಗಧಾಮ, ಮಂಜು ಮುಸುಕಿದ ವ್ಹೀವ್ ಪಾಯಿಂಟ್ ಇರುವ ರಾಜಾಸೀಟ್, ಮುಗಿಲೆತ್ತರದ ಬೆಟ್ಟಗಳಿಗೆ ಚುಂಬಿಸಿ ಒಂದಾಗುವ ಮಂಜಿನಗರಿ ಮಾಂದಲ್‍ಪಟ್ಟಿ, ಭೋರ್ಗರೆದು, ಧುಮ್ಮಿಕ್ಕಿ ಬೆಳ್ನೊರೆಯ ಹಾಲಿನಂತೆ ಕಂಗೊಳಿಸುವ ಅಬ್ಬಿ, ಮಲ್ಲಳ್ಳಿ ಜಲಪಾತಗಳು. ಹೀಗೆ ಸಾಲು ಸಾಲು ಪ್ರವಾಸಿತಾಣಗಳು ಪ್ರವಾಸಿಗರ ಕಣ್ಮನ ಕೋರೈಸುತ್ತವೆ.

    ಆದರೆ ಮೂರು ವರ್ಷಗಳಿಂದ ಎದುರಾದ ಪ್ರಾಕೃತಿಕ ವಿಕೋಪದ ಜೊತೆಗೆ ಕೊವಿಡ್ ನಿಂದಾಗಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿತ್ತು. ವಾರದ ಹಿಂದೆಯಷ್ಟೇ ಮತ್ತೆ ಪ್ರವಾಸಿಗರಿಗೆ ವೀಕ್ಷಣೆಗೆ ಮುಕ್ತವಾಗಿರುವ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ರೂಪಾಯಿಯ ಅನುದಾನಕ್ಕೆ ಅಸ್ತು ಎಂದಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳು ಕೂಡ ನಡೆಯುತ್ತಿದ್ದವು. ಅವೆಲ್ಲವೂ ಸಂಪೂರ್ಣ ಸ್ತಬ್ಧವಾಗಿದ್ದು, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಕೊರೊನಾ ಇನ್ನೂ ಕೂಡ ಹರಡುತ್ತಲೇ ಇರುವುದರಿಂದ ನಾವು ಸಹ ಎಲ್ಲಿಯೂ ಎಚ್ಚರ ತಪ್ಪದೇ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸಬೇಕಾಗಿದೆ.

    ಬರುವ ಪ್ರವಾಸಿಗರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ತೋರಿಸಲು ಮತ್ತು ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದು ಹೋಂಸ್ಟೇ ಮತ್ತು ರೆಸಾರ್ಟ್ ಮಾಲಿಕ ಸತ್ಯ ಹೇಳುತ್ತಾರೆ.

    ಒಟ್ಟಿನಲ್ಲಿ ಮೂರು ವರ್ಷಗಳಿಂದ ತತ್ತರಿಸಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಃಶ್ಚೇತನ ನೀಡಲು ಸರ್ಕಾರ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆ ಅನುದಾನ ಸರಿಯಾಗಿ ಬಳಕೆಯಾಗಿ ಪ್ರವಾಸಿತಾಣಗಳ ಸಹಜ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

  • 100 ವರ್ಷಗಳಿಂದ ‘ಹೃದಯ’ದಲ್ಲೇ ಅನ್ನ ಬೆಳೆಯುತ್ತಿರೋ ಅನ್ನದಾತ

    100 ವರ್ಷಗಳಿಂದ ‘ಹೃದಯ’ದಲ್ಲೇ ಅನ್ನ ಬೆಳೆಯುತ್ತಿರೋ ಅನ್ನದಾತ

    – ಪ್ರವಾಸಿ ತಾಣವಾದ ಸ್ಥಳ

    ಚಿಕ್ಕಮಗಳೂರು: ಕೈ-ಕಾಲು ಕೆಸರಾದರು ಬೆಳೆಯುವ ಬೆಳೆಗೆ ಹೃದಯದ ಸ್ಪರ್ಶ ನೀಡಿ ಭೂಮಾತೆಯ ಹೃದಯದಲ್ಲೇ ಅನ್ನ ಬೆಳೆಯುತ್ತಿದ್ದಾರೆ ಮಲೆನಾಡಿನ ಮುಗ್ಧ ಅನ್ನದಾತ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಸಮೀಪದ ಬಾಮಿಕೊಂಡ ಗ್ರಾಮದ ರೈತ ಕೃಷ್ಣನ ಈ ಭತ್ತದ ಗದ್ದೆ ಈಗ ಪ್ರವಾಸಿ ತಾಣವಾಗಿದೆ. ತಂದೆಯ ಕಾಲದಿಂದಲೂ ಅಂದರೆ ಸರಿ ಸುಮಾರು 100ಕ್ಕೂ ಅಧಿಕ ವರ್ಷಗಳಿಂದಲೂ ಕೂಡ ಕೃಷ್ಣ ಹೃದಯದಲ್ಲೇ ಭತ್ತ ಬೆಳೆಯುತ್ತಿದ್ದಾರೆ.

    ತಮ್ಮ ಭತ್ತದ ಗದ್ದೆಗೆ ಹೃದಯದ ಆಕಾರ ನೀಡಿರೋ ಇವರು ಶತಮಾನದಿಂದ ಭೂದೇವಿಯನ್ನ ಹೃದಯದಲ್ಲೇ ಭತ್ತದ ಗದ್ದೆಯಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಇದನ್ನ ಇವರು ಶೋಕಿಗಾಗೋ ಅಥವಾ ಪ್ರಚಾರಕ್ಕಾಗೋ ಮಾಡಿದ್ದಲ್ಲ. ಶತಮಾನಗಳ ಹಿಂದೆ ಯಾವ ಟ್ರ್ಯಾಕ್ಟರ್, ಜೆಸಿಬಿ ಏನೂ ಇರಲಿಲ್ಲ. ಎತ್ತಿನ ಹೆಗಲಿಗೆ ನೊಗ ಕಟ್ಟಿ ಗುಡ್ಡವನ್ನ ಸಮಮಾಡಿ ಮಾಡಿದ ಭತ್ತದ ಗದ್ದೆ ಇದು. ಅಂದಿನಿಂದಲೂ ಇದನ್ನ ಹಾಗೇ ಬಿಟ್ಟಿದ್ದಾರೆ. ಅಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು. ಮಧ್ಯದಲ್ಲೊಂದು ಗದ್ದೆ. ಗದ್ದೆಯ ಮಧ್ಯದಲ್ಲಿ ಖಾಲಿ ಬಿಟ್ಟಿರೋ ಹೃದಯ ಆಕಾರದ ಜಾಗ. ಇದೀಗ ಆ ಜಾಗವೇ ನೋಡುಗರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.

    ಈ ಜಾಗವಿರೋದು ಸ್ಥಳಿಯರಿಗೆ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈ ಸುಂದರ ತಾಣದ ಒಂದೆರಡು ಫೋಟೋಗಳು ಹೊರಬೀಳುತ್ತಿದ್ದಂತೆ ಈಗಾಗಲೇ ಸುತ್ತಮುತ್ತಲಿನ ಜಾಗಕ್ಕೆ ಭೇಟಿ ನೀಡೋದಕ್ಕೆ ಶುರುವಿಟ್ಟಿದ್ದಾರೆ. ನಾಲ್ಕು ಎಕರೆಯ ಈ ಭತ್ತದ ಗದ್ದೆಗೆ ಎರಡು ಎಕರೆಗೆ ದಾಖಲೆ ಇದೆ. ಅಜ್ಜನ ಕಾಲದಿಂದಲೂ ಭೂಮಾತೆಯ ಹೃದಯದಲ್ಲೇ ಭತ್ತ ಬೆಳೆಯುತ್ತಿರೋ ರೈತ ಕೃಷ್ಣನ ಕುಟುಂಬ 100 ವರ್ಷಗಳ ಹಿಂದೆ ಹೇಗಿತ್ತೋ ಇಂದಿಗೂ ಹಾಗೇ ಬಿಟ್ಟಿದ್ದಾರೆ. ಅದೇ ಆಕಾರದಲ್ಲಿ ಭತ್ತ ಬೆಳೆಯುತ್ತಿದ್ದಾರೆ.

    ಬೆಟ್ಟದ ತುದಿಯಲ್ಲಿರೋ ಭತ್ತದ ಗದ್ದೆಯ ಸುತ್ತಲೂ ಇರುವ ಬೆಟ್ಟಗುಡ್ಡದ ಮೇಲೆ ಹಾಸಿರೋ ಹಸಿರ ವನರಾಶಿ ಭತ್ತದ ಗದ್ದೆಯ ಅಂದ ಹೆಚ್ಚಿಸಿದ್ದು, ಮಲೆನಾಡು ಕೇಳಿದ್ದೆಲ್ಲವನ್ನೂ ಕೊಡುವ ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ದೂರದ ದೇಶಗಳಲ್ಲಿ ಇಂತಹ ಚಿತ್ರಣ ನೋಡಿ ಜನ ಬೆರಗಾಗುತ್ತಿದ್ದರು. ಆದರೆ 100 ವರ್ಷಗಳ ಹಿಂದೆಯೇ ಇಂತಹ ಅದ್ಭುತ ಲೋಕವನ್ನ ಸೃಷ್ಟಿಸಿರೋ ನಮ್ಮ ರೈತರೇ ನಮ್ಮ ಹೆಮ್ಮೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

    ಬೇಸಿಗೆಯಲ್ಲಿ ಸಿನಿಮಾ ಶೂಟಿಂಗ್:
    ಭೂಮಾತೆಯ ಮಡಿಲಲ್ಲೇ ಅನ್ನ ಬೆಳೆಯುತ್ತಿರೋ ರೈತ ಕೃಷ್ಣನ ಈ ಸುಂದರ ತಾಣ ಸಿನಿಮಾ ಶೂಟಿಂಗ್‍ಗೂ ಸಾಕ್ಷಿಯಾಗಿದೆ. ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ಇಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆದಿತ್ತು ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ. ಈ ಹೃದಯ ಭತ್ತದ ಗದ್ದೆಯಲ್ಲಿ ಒಂದು ದಿನ ಶೂಟಿಂಗ್ ನಡೆದಿದೆ. ಆದರೆ, ಯಾವ ಸಿನಿಮಾ ಅನ್ನೋದು ನನಗೆ ನೆನಪಿಲ್ಲ ಅಂತಾರೆ ಕೃಷ್ಣ. ಬಂದಿದ್ದ ಸಿನಿಮಾದವರು ಮುಂದೆ ಬರುತ್ತೀವಿ ಎಂದು ಹೇಳಿದ್ದಾರಂತೆ. ಆದರೆ, ಸುತ್ತಲೂ ಹಸಿರುಟ್ಟ ತುಂಬು ಮುತ್ತೈದೆಯಂತ ಪ್ರಕೃತಿ. ಆ ಪ್ರಕೃತಿಯ ಮಾತೆಯ ಹೃದಯದಲ್ಲಿ ಅನ್ನ ಬೆಳೆಯುತ್ತಿರೋ ಮುಗ್ಧ ಅನ್ನದಾತ. ತಲೆ ತಗ್ಗಿಸಿದರೂ ಸೌಂದರ್ಯ, ತಲೆ ಎತ್ತಿದರೂ ಸೌಂದರ್ಯ. ಅಂತಹ ಅದ್ಭುತವಾದ ಈ ತಾಣವನ್ನ ನೋಡಲೆರಡು ಕಣ್ಣು ಸಾಲದಂತಿರೋದಂತು ಸತ್ಯ.