Tag: ಪ್ರವಾಸಿ ತಾಣಗಳು

  • ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ರಾಜ್ಯದ 1,275 ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ `ಗದಗ’ದ 48 ತಾಣಗಳು ಆಯ್ಕೆ

    ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಮಹತ್ವದ ಸ್ಥಾನ ಪಡೆಕೊಂಡಿವೆ.

    ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿರುವ ಗದಗ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ಸರ್ಕಾರ ಗುರುತು ಮಾಡಿರುವ 1,275 ಹೊಸ ಪ್ರವಾಸಿ ತಾಣಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮ, ವೀರಗಲ್ಲು, ಸಬರಮತಿ ಆಶ್ರಮದ ಪ್ರತಿರೂಪ ಸೇರಿದಂತೆ ಒಟ್ಟು 45 ತಾಣಗಳು ಸೇರಿಕೊಂಡಿವೆ. ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ

    ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶಗಳನ್ನು ಆಧರಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ಆಧಾರದ ಮೇಲೆ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾ ಯೋಜನೆಗಳು ಮತ್ತು ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ವಿಶೇಷವಾಗಿ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಧಾರ್ಮಿಕ ತಾಣಗಳು, ಐತಿಹಾಸಿಕ ದೇವಸ್ಥಾನಗಳು ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಪ್ರವಾಸಿ ತಾಣಗಳ ವಿವರ:
    ಗದಗ ತಾಲೂಕು:
    * ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ)
    * ಶ್ರೀ ವೀರನಾರಾಯಣ ದೇವಸ್ಥಾನ
    * ಶ್ರೀ ತ್ರಿಕೂಟೇಶ್ವರ ದೇವಸ್ಥಾನ
    * ಶ್ರೀ ಸೋಮೇಶ್ವರ ದೇವಸ್ಥಾನ
    * ಶ್ರೀ ರಾಮೇಶ್ವರ ದೇವಸ್ಥಾನ
    * ಶ್ರೀ ತೋಂಟದಾರ್ಯ ಮಠ
    * ಶ್ರೀ ವೀರೇಶ್ವರ ಪುಣ್ಯಾಶ್ರಮ
    * ಜಾಮಿಯಾ ಮಸೀದಿ
    * ಬೆಟಗೇರಿ ಚರ್ಚ್
    * ಸಬರಮತಿ ಆಶ್ರಮ
    * ಶ್ರೀರಾಮಕೃಷ್ಣ ಆಶ್ರಮ
    * ಶ್ರೀ ವೆಂಕಟೇಶ್ವರ ದೇವಸ್ಥಾನ, ವೆಂಕಟಾಪುರ
    * ದಾವಲಮಲಿಕ ದರ್ಗಾ, ಮುಳಗುಂದ
    * ಶ್ರೀ ಸಿದ್ದೇಶ್ವರ ದೇವಸ್ಥಾನ, ಮುಳಗುಂದ
    * ಚಂದ್ರನಾಥ ಬಸದಿ, ಮುಳಗುಂದ
    * ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನ, ಹರ್ತಿ
    * ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
    * ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
    * ಬೆಟಗೇರಿಯ ವೀರಗಲ್ಲುಗಳು
    * ಸರ್ಕಾರಿ ವಸ್ತು ಸಂಗ್ರಹಾಲಯ
    * ಬ್ರಹ್ಮ, ಜೀನಾಲಯ ದೇವಸ್ಥಾನ, ಲಕ್ಕುಂಡಿ
    * ಶ್ರೀ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ
    * ಮುಸಕಿನ ಭಾವಿ, ಲಕ್ಕುಂಡಿ
    * ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
    * ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನ, ಲಕ್ಕುಂಡಿ
    * ವಸ್ತು ಸಂಗ್ರಹಾಲಯ, ಲಕ್ಕುಂಡಿ

    ಮುಂಡರಗಿ ತಾಲೂಕು:
    * ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸಿಂಗಟಾಲೂರು
    * ಹಮ್ಮಿಗಿ ಬ್ಯಾರೇಜ್, ಹಮ್ಮಿಗಿ.
    * ಶ್ರೀ ಅನ್ನದಾನೇಶ್ವರ ಮಠ, ಮುಂಡರಗಿ.
    * ಕಪ್ಪತ್ತಗುಡ್ಡ.
    * ಶ್ರೀ ದೊಡ್ಡಬಸಪ್ಪ ದೇವಸ್ಥಾನ, ಡಂಬಳ.
    * ಶ್ರೀ ಸೋಮೇಶ್ವರ ದೇವಸ್ಥಾನ, ಡಂಬಳ.
    * ವಿಕ್ಟೋರಿಯಾ ರಾಣಿ ಕೆರೆ, ಡಂಬಳ.
    * ಜಪದ ಬಾವಿ, ಡಂಬಳ

    ರೋಣ ಹಾಗೂ ಗಜೇಂದ್ರಗಡ:
    * ಶ್ರೀ ಕಲ್ಲೇಶ್ವರ ದೇವಸ್ಥಾನ, ರೋಣ
    * ಗಜೇಂದ್ರಗಡ ಕೋಟೆ, ಗಜೇಂದ್ರಗಡ
    * ಶ್ರೀ ಕಾಲಕಾಲೇಶ್ವರ ಕ್ಷೇತ್ರ, ಗಜೇಂದ್ರಗಡ
    * ಶ್ರೀ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ಸೂಡಿ
    * ರಸದ ಬಾವಿ ನಾಗನ ಹೊಂಡ, ಗಜೇಂದ್ರಗಡ
    * ಶ್ರೀ ಭೀಮಾಂಬಿಕ ದೇವಸ್ಥಾನ, ಇಟಗಿ
    * ಶ್ರೀ ಶಂಭುಲಿಂಗ ದೇವಸ್ಥಾನ, ಇಟಗಿ

    ಶಿರಹಟ್ಟಿ ತಾಲೂಕು:
    * ಶ್ರೀ ಫಕೀರೇಶ್ವರ ಮಠ. ಶಿರಹಟ್ಟಿ
    * ಶ್ರೀ ಹೊಳಲಮ್ಮದೇವಿ ದೇವಸ್ಥಾನ, ಶ್ರೀಮಂತಗಡ
    * ಕೋಟೆ, ಶಿರಹಟ್ಟಿ
    * ಶ್ರೀ ವರವಿ ಮೌನೇಶ್ವರ ದೇವಸ್ಥಾನ, ಶಿರಹಟ್ಟಿ
    * ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ

    ಲಕ್ಷ್ಮೇಶ್ವರ ತಾಲೂಕು:
    * ಶ್ರೀ ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ.
    * ಶಂಖ ಬಸದಿ, ಲಕ್ಷ್ಮೇಶ್ವರ

    ನರಗುಂದ ತಾಲೂಕು:
    * ಶ್ರೀ ವೆಂಕಟೇಶ್ವರ ದೇವಸ್ಥಾನ.

    ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಶೇಷ ಪ್ರಯತ್ನದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ಗುರುತಿಸಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ರಾಜ್ಯದ 1,275 ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

  • Waqf Land Row | ವಿಜಯಪುರದ 43 ಪ್ರವಾಸಿ ತಾಣಗಳಿಗೆ ವಕ್ಫ್‌ ನೋಟಿಸ್‌

    Waqf Land Row | ವಿಜಯಪುರದ 43 ಪ್ರವಾಸಿ ತಾಣಗಳಿಗೆ ವಕ್ಫ್‌ ನೋಟಿಸ್‌

    – ನೋಟಿಸ್ ಹಿಂಪಡೆಯುವಂತೆ ಸಂಸದ ರಮೇಶ್‌ ಜಿಗಜಿಣಗಿ ಆಗ್ರಹ

    ವಿಜಯಪುರ: ಸ್ಮಾರಕಗಳೂ ಸೇರಿದಂತೆ ವಿಜಯಪುರ (Vijayapura) ಜಿಲ್ಲೆಯ 43 ಪ್ರವಾಸಿ ತಾಣಗಳು (Tourist Place) ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇತ್ತೀಚೆಗಷ್ಟೇ ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಭೂಮಿ ವಕ್ಫ್‌ ಆಸ್ತಿ ಎಂದು ಮಂಡಳಿ ಹೊನವಾಡ ಗ್ರಾಮದ 15 ರೈತರಿಗೆ ವಕ್ಫ್‌ ಮಂಡಳಿ (Waqf Board) ನೋಟಿಸ್ ನೀಡಿತ್ತು. ಇದನ್ನೂ ಓದಿ: Waqf Land Row | ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್ : ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

    ಕಳೆದ ಒಂದು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ವಿಜಯಪುರದಲ್ಲಿ ಪ್ರವಾಸಿ ತಾಣಗಳಿಗೆ ನೋಟಿಸ್‌ ನೀಡಿರುವುದು ಬೆಳಕಿಗೆ ಬಂದಿದೆ.

    ವಿಜಯಪುರದ 43 ಪ್ರವಾಸಿ ತಾಣಗಳಿಗೆ ವಕ್ಫ್‌ ನೋಟಿಸ್‌ ನೀಡಿದ್ದು, ಇದಕ್ಕೆ ಸಂಸದ ರಮೇಶ್‌ ಜಿಗಜಿಣಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಆಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ

    ಪ್ರವಾಸಿ ತಾಣಗಳು, ಸ್ಮಾರಕಗಳಿಗೆ ನೀಡಿರುವ ವಕ್ಫ್‌ ನೋಟಿಸ್‌ಗಳನ್ನು ಹಿಂಪಡೆಯುವಂತೆ ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಮಡಿಕೇರಿ: ಕೋವಿಡ್ ಮೂರನೇ ಅಲೆಯಲ್ಲಿ ನಷ್ಟ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ಈಗ ಚೇತರಿಕೆ ಹಾದಿಗೆ ಮರಳಿದೆ.

    ಡಿಸೆಂಬರ್ ತಿಂಗಳಿನಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ನಿಂದಾಗಿ ಸಂಪೂರ್ಣ ನೆಲಕಚ್ಚಿತ್ತು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆರವು ಮಾಡಿದ 2 ವಾರಗಳ ಕಾಲವೂ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಲೇ ಇಲ್ಲ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    3ನೇವಾರದಲ್ಲಾದರೂ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ಕೊಡಗಿನ ಪ್ರವಾಸೋದ್ಯಮಿಗಳಿದ್ದರು. ಈ ವಾರವೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲೇನು ಬಂದಿಲ್ಲ. ಆದರೆ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು ಪ್ರವಾಸಿತಾಣಗಳು ಒಂದಷ್ಟು ಕಳೆ ಪಡೆದುಕೊಂಡಿವೆ.

    ಮಡಿಕೇರಿ ಸಮೀಪದ ಅಬ್ಬಿಜಲಪಾತ, ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ಪ್ರವಾಸಿಗರಷ್ಟು ಪ್ರಮಾಣದಲ್ಲಿ ಈ ಬಾರಿ ಇಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ, ನೈಟ್ಕರ್ಫ್ಯೂಗಳಿಂದ ನಷ್ಟ ಅನುಭವಿಸಿದ್ದ ಪ್ರವಾಸಿಗರ ಅವಲಂಬಿತ ವ್ಯಾಪಾರೋದ್ಯಮಿಗಳು ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಮತ್ತೊಂದೆಡೆ 3ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಅಷ್ಟೊಂದು ಅಪಾಯವಿಲ್ಲ ಎನ್ನುವ ಕಾರಣದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಬಹುತೇಕ ಪ್ರವಾಸಿಗರು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೆ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದಾರೆ.

    ಇದು ಮಾಸ್ಕ್ ಧರಿಸಿ ಓಡಾಡುವ ಪ್ರವಾಸಿಗರಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದ 3 ವಾರಗಳ ಬಳಿಕ ಕೊಡಗಿನ ಪ್ರವಾಸೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿದೆ.

  • ಪ್ರವಾಸಿಗರಿಂದ ಕೊಡಗು ಜನತೆಗೆ ಕೊರೊನಾ ಸಂಕಷ್ಟ- 15 ದಿನ ಲಾಕ್‍ಡೌನ್ ಮಾಡುವಂತೆ ವ್ಯಾಪಾರಿ ಆಗ್ರಹ

    ಪ್ರವಾಸಿಗರಿಂದ ಕೊಡಗು ಜನತೆಗೆ ಕೊರೊನಾ ಸಂಕಷ್ಟ- 15 ದಿನ ಲಾಕ್‍ಡೌನ್ ಮಾಡುವಂತೆ ವ್ಯಾಪಾರಿ ಆಗ್ರಹ

    – ದಿನೇ ದಿನೇ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ದಿನ ಕೇವಲ ಎರಡು, ಮೂರು ದಾಖಲಾಗುತ್ತಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೀಗ ನಿತ್ಯ 20 ರಿಂದ 25ಕ್ಕೆ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 39 ಪ್ರಕರಣಗಳು ದಾಖಲಾಗಿವೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.

    ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳನ್ನು ಏ.20ರ ವರೆಗೆ ಬಂದ್ ಮಾಡಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಏಪ್ರಿಲ್ 3ರಂದು ಆದೇಶ ಹೊರಡಿಸಿದ್ದರು. ಆದರೆ ಕೊಡಗಿನ ಹೋಮ್ ಸ್ಟೇ ಮಾಲೀಕರ ಸಂಘ, ಹೊಟೇಲ್ ಹಾಗೂ ರೆಸಾರ್ಟ್ ಮಾಲೀಕರ ಸಂಘ ಸಚಿವರಿಗೆ ಒತ್ತಡ ತಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಮಾಡಿ ಪ್ರವಾಸಿ ತಾಣಗಳನ್ನು ಮತ್ತೆ ತೆರೆಯುವಂತೆ ಮಾಡಿದೆ. ಹೀಗಾಗಿಯೇ ಏಪ್ರಿಲ್ 9 ರಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ.

    ಪ್ರವಾಸಿ ತಾಣಗಳು ಮತ್ತೆ ಓಪನ್ ಆಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿಲ್ಲ. ಆದರೆ ಬರುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ಎಷ್ಟೋ ಪ್ರವಾಸಿಗರು ಮಾಸ್ಕ್ ಧರಿಸಿರುವುದಿಲ್ಲ. ಮತ್ತೆಷ್ಟೋ ಪ್ರವಾಸಿಗರು ನಾಮಕಾವಸ್ಥೆಗೆ ಮಾಸ್ಕ್ ಧರಿಸಿರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕವಿದೆ. ಹೀಗಾಗಿ ಜಿಲ್ಲಾಧಿಕಾರಿ ಯಾರ ಒತ್ತಾಯಕ್ಕೂ ಮಣಿಯದೆ ಜಿಲ್ಲೆಯ ಪ್ರವಾಸಿತಾಣಗಳನ್ನು ಬಂದ್ ಮಾಡಿ ಪ್ರವಾಸಿಗರು ಬರದಂತೆ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿರುವ ಐದೂವರೆ, ಆರು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಬೆಂಗಳೂರಿನಷ್ಟೇ ಇದೆ. ಹೀಗಾಗಿ ಸದ್ಯಕ್ಕೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾನೂ ಕೂಡ ವ್ಯಾಪಾರಿಯೇ ಆಗಿದ್ದು, ನಾನೂ ಪ್ರವಾಸಿಗರನ್ನೇ ನಂಬಿಕೊಂಡಿದ್ದೇನೆ. ಆದರೆ ನಾವು ಜೀವಂತವಾಗಿದ್ದರೆ, ಮುಂದೆ ಕೆಲಸ ಮಾಡಬಹುದು, ಸಂಪಾದಿಸಬಹುದು. ದುಡಿಮೆಗಿಂತ ಜೀವ ಮುಖ್ಯ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ 10 ರಿಂದ ಹದಿನೈದು ದಿನಗಳ ಕಾಲ ಲಾಕ್‍ಡೌನ್ ಮಾಡಿದರೂ ತಪ್ಪಿಲ್ಲ ಎಂದು ವ್ಯಾಪಾರಿ ಮಧು ಆತಂಕ ವ್ಯಕ್ತಪಡಿಸಿದ್ದಾರೆ.

  • ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಚಿಕ್ಕಮಗಳೂರು: ದಿನೇ ದಿನೇ ಕೊರೊನಾ ಆತಂಕ ಹೆಚ್ಚುತ್ತಿದ್ದರೂ, ಇದಾವುದನ್ನೂ ಲೆಕ್ಕಿಸದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಚಿಕ್ಕಮಗಳೂರು ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

    ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲದ ಚಿಕ್ಕಮಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ 70ರ ಗಡಿ ಮುಟ್ಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರುವ ಬಹುತೇಕರಲ್ಲಿ ಕೊರೊನಾ ಸೋಂಕು ದೃಢವಾಗುತ್ತಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಪ್ರತಿ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎಗ್ಗಿಲ್ಲದೆ ಪ್ರವಾಸಿಗರು ಬರುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಸಿಗರು ಜಿಲ್ಲೆಗೆ ಬರದಂತೆ ಸರ್ಕಾರ ಎಚ್ಚರ ವಹಿಸಬೇಕೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಹ ಮಾಡಿದ್ದರು.

    ಜೂನ್ 28ರ ಭಾನುವಾರ ಒಂದೇ ದಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಸಾವಿರಾರು ಪ್ರವಾಸಿಗರು ಬಂದಿದ್ದರು. ನೂರಾರು ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಇದರಿಂದ ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದರು. ಅಲ್ಲದೆ ಕೊರೊನಾ ಕುರಿತು ಅರಿವಿದ್ದೂ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಹಾಕುವುದನ್ನು ಮರೆತು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದರು. ಹೀಗಾಗಿ ಸ್ಥಳೀಯರು ಭಯಭೀತರಾಗಿದ್ದರು.

    ಈ ಮಧ್ಯೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಬಂದ ಪ್ರವಾಸಿಗರು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವುದನ್ನು ಕಂಡ ಸ್ಥಳಿಯರು, ತಿಳಿ ಹೇಳಿದ್ದಾರೆ. ಆಗ ಪ್ರವಾಸಿಗರು ಸ್ಥಳೀಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲಿ, ಬಿಯರ್ ಬಾಟಲಿ ಎಸೆಯುತ್ತಿದರೆಂದು ಸ್ಥಳಿಯರು-ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯುತ್ತಿತ್ತು.

    ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವರ್ತನೆ ಕಂಡ ಜಿಲ್ಲಾಡಳಿತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಪ್ರವಾಸವನ್ನು ರದ್ದುಗೊಳಿಸಿ ಎಂದು ಮನವಿ ಮಾಡಿದೆ.