Tag: ಪ್ರವಾಸಿ ಕಾರ್ಮಿಕರು

  • ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ನೀಡುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

    ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ನೀಡುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

    ಕೋಲ್ಕತ್ತಾ: ಕೊರೊನಾ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ಬ್ಲೇಮ್ ಗೇಮ್ ಮುಂದುವರಿದಿದೆ. ಕೇಂದ್ರ ಸರ್ಕಾರ ಪ್ರತಿ ಪ್ರವಾಸಿ ಕಾರ್ಮಿಕರ ಬ್ಯಾಂಕ್ ಖಾತೆಗೆ 10 ಸಾವಿರ ರೂ.ಗಳನ್ನು ನೀಡುವಂತೆ ಬುಧವಾರ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ ಮಾಡಿದ್ದಾರೆ.

    ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಯನ್ನು ಬಳಕೆ ಮಾಡಿಕೊಳ್ಳುವ ಉತ್ತಮ ಸಮಯ ಇದಾಗಿದೆ. ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಅಸಂಘಟಿತ ವಲಯ ಹಾಗೂ ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ರೂ. ನೀಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳ ನೆರವಿಗೆ ಬಂದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ, ನಿನ್ನೆಯಷ್ಟೇ ತಲಾ 20 ಸಾವಿರ ರೂ. ಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಸದ್ಯ ಮಮತಾ ಅವರು ಕಾರ್ಮಿಕರ ನೆರವಿಗೆ ಕೇಂದ್ರ ಆಗಮಿಸಬೇಕು. ನಮ್ಮ ಸರ್ಕಾರ ಚಂಡಮಾರುತ ಹೊಡೆತಕ್ಕೆ ಸಿಲುಕಿ ಸಮಸ್ಯೆ ಎದುರಿಸಿದ್ದ 5 ಲಕ್ಷ ಜನರಿಗೆ ನೆರವು ನೀಡಿದ್ದೇವೆ. ಅಲ್ಲದೇ 23.3 ಲಕ್ಷ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

    ಇತ್ತ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಪ್ರವಾಸಿ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತಮ್ಮ ಅವ್ಯವಸ್ಥೆಯನ್ನು ಮುಚ್ಚಿ ಹಾಕಿಕೊಳ್ಳಲು ಇಂತಹ ಹೇಳಿಕೆ ನೀಡಿ ಗಮನ ಬೇರೆಡೆ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಪ್ರವಾಸಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಮಮತಾ ಅವರ ಸರ್ಕಾರ ಅವರಿಗೆ ಹೊಸ ಜೀವನವನ್ನು ಕಲ್ಪಿಸಿಕೊಡುವ ಕಾರ್ಯ ಮಾಡುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರಾಜ್ಯದ ಪ್ರವಾಸಿ ಕಾರ್ಮಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಸರ್ಕಾರ ಮಾಹಿತಿ ಅನ್ವಯ ಸುಮಾರು 5 ಲಕ್ಷ ಪ್ರವಾಸಿ ಕಾರ್ಮಿಕರು ವಾಪಸ್ ಆಗಿದ್ದಾರೆ.

     

  • ದಾರಿ ತಪ್ಪಿದ ಬೆಂಗಳೂರಿನಿಂದ ಹೊರಟ ಶ್ರಮಿಕ ರೈಲು – ಆಹಾರವಿಲ್ಲದೇ ಪ್ರಯಾಣಿಕರ ಪರದಾಟ

    ದಾರಿ ತಪ್ಪಿದ ಬೆಂಗಳೂರಿನಿಂದ ಹೊರಟ ಶ್ರಮಿಕ ರೈಲು – ಆಹಾರವಿಲ್ಲದೇ ಪ್ರಯಾಣಿಕರ ಪರದಾಟ

    -20 ಗಂಟೆಯಿಂದ ಆಹಾರವಿಲ್ಲದೇ ಗೋಳಾಟ

    ಬೆಂಗಳೂರು: 1,450 ಪ್ರವಾಸಿ ಕಾರ್ಮಿಕರನ್ನು ಹೊತ್ತು ಬೆಂಗಳೂರಿನಿಂದ ಹೊರಟ ರೈಲು ಮಾರ್ಗ ಮಧ್ಯೆ ದಾರಿ ತಪ್ಪಿ ಘಾಜಿಯಾಬಾದ್ ತಲುಪಿದೆ. ಗುರುವಾರ ಸಂಜೆ ಬೆಂಗಳೂರಿನ ಚಿಕ್ಕಬಾಣವಾರ ಸ್ಟೇಶನ್ ನಿಂದ ಹೊರಟಿದ್ದ ರೈಲು ಉತ್ತರ ಪ್ರದೇಶದ ಬಸ್ತಿ ತಲುಪಬೇಕಿತ್ತು. 20 ಗಂಟೆಗೂ ಅಧಿಕ ಸಮಯದವರೆಗೆ ಪ್ರವಾಸಿ ಕಾರ್ಮಿಕರು ಊಟ ಮಾಡಿಲ್ಲ. ಇನ್ನು ಹಲವರಿಗೆ ತಾವು ಊರು ಸೇರುತ್ತೇವೆ ಎಂಬ ನಂಬಿಕೆ ಇಲ್ಲ ಅನ್ನೋ ಅನುಮಾನ ಮೂಡಿದೆ.

    ಗುರುವಾರ ಸಂಜೆ 6.45ಕ್ಕೆ ಚಿಕ್ಕಬಾಣವಾರದಿಂದ ಈ ರೈಲು ಹೊರಟಿತ್ತು. ಬೆಂಗಳೂರಿನಿಂದ 2,456 ಕಿಲೋ ಮೀಟರ್ ದೂರದಲ್ಲಿರೋ ಬಸ್ತಿಯನ್ನು ಈ ರೈಲು ತಲುಪಬೇಕಿತ್ತು. ಪ್ರವಾಸಿ ಕಾರ್ಮಿಕರು ಪ್ರಯಾಣಕ್ಕಾಗಿ 1,020 ರೂಪಾಯಿ (875 ರೈಲ್ವೇ ಚಾರ್ಜ್ + 145 ಬಸ್ ಚಾರ್ಜ್) ಪಾವತಿ ಮಾಡಿದ್ದರು. ಬೆಂಗಳೂರಿನಿಂದ ಹೊರಟ ರೈಲು ಸಿಕಂದರಾಬಾದ್, ನಾಗಪುರ, ಇಟಾರಸಿ, ಝಾಂಸಿ, ಕಾನ್ಪುರ ಮತ್ತು ಲಕ್ನೋ ಮಾರ್ಗವಾಗಿ ಬಸ್ತಿಗೆ ಹೋಗಬೇಕಿತ್ತು. ಇದು ಬರೋಬ್ಬರಿ 45 ಗಂಟೆಯ ಪ್ರಯಾಣವಿತ್ತು. ಆದ್ರೆ ಝಾಂಸಿಯಲ್ಲಿ ರೈಲು ಮಾರ್ಗ ಬದಲಿಸಿದ್ದರಿಂದ ಶನಿವಾರ ಸಂಜೆ ಗಾಜಿಯಾಬಾದ್ ತಲುಪಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸಿ ಕಾರ್ಮಿಕ, ರೂಟ್ ಮ್ಯಾಪ್ ಬದಲಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಶುಕ್ರವಾರ ರಾತ್ರಿ ನಾಗಪುರ ನಿಲ್ದಾಣದ ನಂತ್ರ ನಾವು ಆಹಾರವೇ ಸೇವಿಸಿಲ್ಲ ಎಂದಿದ್ದಾರೆ. ಇನ್ನು ಕಾರ್ಮಿಕರಿಗೆ ಟಿಕಟ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ ನರೇಂದ್ರ ಕುಮಾರ್ ಮಾತನಾಡಿ, ಟ್ರೈನ್ ಡೈವರ್ಟ್ ತೆಗೆದುಕೊಂಡಿದೆ ಎಂದು ಫೋನ್ ಬಂತು. ಪ್ರಯಾಣಿಕರು 20 ಗಂಟೆಯಿಂದ ಏನು ತಿಂದಿಲ್ಲ ಮತ್ತು ರೈಲು ಯಾವಾಗ ಬಸ್ತಿ ತಲುಪುತ್ತೆ ಎಂಬ ವಿಷಯ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಮಾರ್ಗ ಮಧ್ಯೆ ಸಿಲುಕಿರುವ ಪ್ರವಾಸಿ ಕಾರ್ಮಿಕರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಅವರನ್ನು ಬಸ್ತಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರಿನ ರೈಲ್ವೇ ಅಧಿಕಾರಿ (ಡಿಆರ್‍ಎಂ) ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

  • ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    ಸೈಕಲ್ ಮೇಲೆ 1860 ಕಿ.ಮೀ. ಪ್ರಯಾಣ ಆರಂಭಿಸಿದ ಯುವಕರು

    -ಆರು ರಾಜ್ಯ ದಾಟಿ ಸೇರಬೇಕಿದೆ ಗೂಡು
    -ರೈಲ್ವೇ ಟಿಕೆಟ್ ಕನ್ಫರ್ಮ್ ಆಗ್ತಿಲ್ಲ ಏನ್ ಮಾಡೋದು?

    ಚೆನ್ನೈ: ಯುವಕರಿಬ್ಬರು 1860 ಕಿಲೋ ಮೀಟರ್ ದೂರದ ಊರು ಸೇರಲು ಪ್ರಯಾಣ ಆರಂಭಿಸಿದ್ದಾರೆ. ರೈಲ್ವೇ ಟಿಕೆಟ್ ಖಚಿತವಾಗದ ಹಿನ್ನೆಲೆಯಲ್ಲಿ ಯುವಕರಿಬ್ಬರು ಸೈಕಲ್‍ನಲ್ಲಿಯೇ ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಪಯಣ ಬೆಳೆಸಿದ್ದಾರೆ.

    ಸೋನು ಮತ್ತು ಶೈಲು ಉತ್ತರ ಪ್ರದೇಶದ ಔರಿಯಾ ಜಿಲ್ಲೆಯವರಾಗಿದ್ದು, ತಮಿಳುನಾಡಿನ ಅರ್ಕನೊಂನಲ್ಲಿ ವಾಸವಾಗಿದ್ದರು. ಅರ್ಕನೋಂನಲ್ಲಿ ಕ್ಯಾಂಡಿ ವ್ಯಾಪಾರ ಮಾಡಿಕೊಂಡಿದ್ದ ಇವರ ಬದುಕನ್ನು ಕೊರೊನಾ ಕಿತ್ತುಕೊಂಡಿತ್ತು. ಇದೀಗ ಪ್ರಯಾಣ ಆರಂಭಿಸಿರುವ ಸೋನು ಮತ್ತು ಶೈಲು ಆರು ರಾಜ್ಯಗಳನ್ನು ಪಾರು ಮಾಡಿ ಹೋಗಬೇಕಿರೋದು ದೊಡ್ಡ ಸವಾಲು ಆಗಿದೆ.

    ನಾವು ಕೆಲಸ ಆರಂಭಿಸಿದ ದಿನದಿಂದಲೂ ಸ್ವಲ್ಪ ಹಣ ಕೂಡಿಟ್ಟು ಅದರಲ್ಲಿ ಒಂದು ಭಾಗವನ್ನು ಊರಿಗೆ ಕಳಿಸ್ತಾ ಇದ್ದೀವಿ. ಲಾಕ್‍ಡೌನ್ ನಿಂದಾಗಿ ಇಷ್ಟು ದಿನ ಕೂಡಿಟ್ಟ ಹಣದಿಂದ ಜೀವನ ನಡೆಯಿತ್ತು. ಹಣ ಇಲ್ಲದಿದ್ರೆ ಈ ಊರಿನಲ್ಲಿರಲು ಆಗಲ್ಲ. ನಮ್ಮ ಟ್ರೈನ್ ಟಿಕೆಟ್ ಸಹ ಕನ್ಫರ್ಮ್ ಆಗುತ್ತಿಲ್ಲ. ವಿಧಿಯಿಲ್ಲದೇ ಗೆಳೆಯನ ಜೊತೆ ಸೇರಿ ಬ್ಯಾಗ್ ಗಳಿಗೆ ಬಟ್ಟೆ ಹಾಕಿಕೊಂಡು ಸೈಕಲ್ ಮೇಲೆಯೇ ಊರಿಗೆ ಹೊರಟಿದ್ದೇವೆ ಎಂದು ಸೋನು ಹೇಳುತ್ತಾರೆ.

    ಹೆದ್ದಾರಿಯ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಮಹಿಳೆ ಸುಂಕಮ್ಮ ಮಾತನಾಡಿ, ನನ್ನ ಕಣ್ಮುಂದೆ ಕಾರ್ಮಿಕರು ನಡೆದುಕೊಂಡು ಹೋಗೋದನ್ನು ನೋಡಿ ದುಃಖವಾಗುತ್ತದೆ. ಕೆಲವರು ಬಂದು ಬಾಟಲ್ ಗಳಿಗೆ ನೀರು ತುಂಬಿಕೊಡುವಂತೆ ಕೇಳುತ್ತಾರೆ. ಬಾಟಲ್ ಗಳಿಗೆ ನೀರು ತುಂಬಿ ಕೆಲವು ಬಾರಿ ಊಟ ಸಹ ನೀಡುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಅಶ್ಲೀಲ ಡ್ಯಾನ್ಸ್- ವಿಡಿಯೋ ವೈರಲ್

    ಕ್ವಾರಂಟೈನ್ ಕೇಂದ್ರದಲ್ಲಿ ಅಶ್ಲೀಲ ಡ್ಯಾನ್ಸ್- ವಿಡಿಯೋ ವೈರಲ್

    -ಶಾಲೆಯ ಆವರಣದಲ್ಲಿ ನಂಗಾನಾಚ್
    -ತನಿಖೆಗೆ ಆದೇಶ

    ಪಾಟ್ನಾ: ಕ್ವಾರಂಟೈನ್ ಕೇಂದ್ರದಲ್ಲಿ ಅಶ್ಲೀಲ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಿಹಾರದ ಸಮಸ್ತಪುರ ಜಿಲ್ಲೆಯ ವಿಭೂತಿಪುರ ಕ್ಷೇತ್ರದ ಮದ್ಯ ವಿದ್ಯಾಲಯದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಪ್ರವಾಸಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿ ಸೌಂಡ್ ಸಿಸ್ಟಂ ತಂದು ಹೊರಗಿನಿಂದ ಯುವತಿಯರನ್ನು ಕರೆಸಿ ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿಸಲಾಗಿದೆ. ಶಾಲೆಯ ಆವರಣದಲ್ಲಿಯೇ ಈ ನಂಗಾನಾಚ್ ಕಾರ್ಯಕ್ರಮ ನಡೆದಿದೆ. ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಡಿಷನಲ್ ಕಲೆಕ್ಟರ್, ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜನೆಯ ಮಾಹಿತಿ ಲಭ್ಯವಾಗಿದೆ. ಕ್ವಾರಂಟೈನ್ ಕೇಂದ್ರಕ್ಕೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ನೀಡಿಲ್ಲ. ಕ್ವಾರಂಟೈನ್ ನಲ್ಲಿರೋರ ಮನೋರಂಜನೆಗಾಗಿ ಟಿವಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ತಡೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಸರತ್ತು ನಡೆಸುತ್ತಿದ್ದು, ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡುತ್ತಿದೆ. ಸರ್ಕಾರವೇ ಕ್ವಾರಂಟೈನ್ ವೆಚ್ಚವನ್ನು ಭರಿಸುತ್ತಿದ್ದು, ಕೆಲ ಕೊರೊನಾ ಶಂಕಿತರು ಮಾತ್ರ ತಮಗೆ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

     

  • ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ, ನೆರವು ನೀಡುತ್ತಾಳೆ – ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಲು ‘ರಾಗಾ’ ಒತ್ತಾಯ

    ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ, ನೆರವು ನೀಡುತ್ತಾಳೆ – ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಲು ‘ರಾಗಾ’ ಒತ್ತಾಯ

    ನವದೆಹಲಿ : ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಬೇಕು. ವಲಸೆ ಕಾರ್ಮಿಕರು ಮತ್ತು ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುವಂತೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

    ದೇಶದ ಹಲವು ರಾಜ್ಯಗಳ ಪತ್ರಕರ್ತರ ಜೊತೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಮಾತನಾಡಿದ ಅವರು, ಅವಶ್ಯಕತೆ ಇರುವವರ ಖಾತೆಗೆ ಹಣ ಹಾಕಿ, ಬಡವರ ಜೇಬಿಗೆ ನೇರವಾಗಿ ಹಣ ತಲುಪಬೇಕು. ಬಡ ಜನರಿಗೆ ಲೋನ್ ಅವಶ್ಯಕತೆ ಇಲ್ಲ. ಅವರಿಗೆ ಬೇಕಿರುವುದು ಆರ್ಥಿಕ ನೆರವು ಅವರ ಖಾತೆಗಳಿಗೆ, ಕೈಗಳಿಗೆ ನೇರ ಹಣ ವರ್ಗಾಯಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

    ವಲಸೆ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಭಾರತದ ಭವಿಷ್ಯದ ಮಕ್ಕಳು ರೋಡ್ ನಲ್ಲಿವೆ. ಪ್ರತಿನಿತ್ಯ ಕಾರ್ಮಿಕರು ವಲಸೆ ಹೋಗುವುದು ನಿಲ್ಲುತ್ತಿಲ್ಲ. ದೇಶ ಅವರ ನೆರವಿಗೆ ನಿಲ್ಲಬೇಕು ಎಂದರು. ಮಗ ಸಂಕಷ್ಟದಲ್ಲಿದ್ದಾಗ ತಾಯಿ ಸಾಲ ನೀಡುವುದಿಲ್ಲ ನೆರವು ನೀಡುತ್ತಾಳೆ. ಹಾಗೇ ಸರ್ಕಾರವು ಜನರ ನೆರವಿಗೆ ಮುಂದಾಗಬೇಕು. ನೇರವಾಗಿ ಹಣದ ವರ್ಗಾವಣೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ. ಇದರ ಜೊತೆಗೆ ಮನರೇಗಾದಡಿ ಕೂಲಿ ದಿನಗಳನ್ನು 200ಕ್ಕೆ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಎಚ್ಚರಿಕೆಯಿಂದ ಹಂತ ಹಂತವಾಗಿ ಸಡಿಲಿಸಬೇಕು. ದುರ್ಬಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ವಿನಾಯತಿ ನೀಡಬೇಕು. ಲಾಕ್‍ಡೌನ್ ವಿನಾಯತಿಯಿಂದ ತೊಂದರೆಗಳಾಗಬಾರದು ಸರ್ಕಾರ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

  • ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ‘ಸತ್ತರೆ ಅಲ್ಲೇ ಸಾಯಲಿ’, ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬರೋದು ಬೇಡ: ಶಿವಲಿಂಗೇಗೌಡ

    ಹಾಸನ: ಯಾರು ಎಲ್ಲಿ ಬದುಕುತ್ತಿದ್ದಾರೆ ಅಲ್ಲೇ ಬದುಕಲಿ. ಸತ್ತರೆ ಅಲ್ಲೇ ಸಾಯಲಿ, ಬದುಕಿದರೆ ಅಲ್ಲೇ ಬದುಕಲಿ ಎಂದು ಶಾಸಕ ಶಿವಲಿಂಗೇಗೌಡ ಅವರು ಹೇಳಿದ್ದು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.

    ಕೊರೊನಾ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಶಿವಲಿಂಗೇಗೌಡ ಅವರು, ಹೊರರಾಜ್ಯದಿಂದ ಹಾಸನಕ್ಕೆ ಬರುವವರಿಗೆ ಅವಕಾಶ ನೀಡದಂತೆ ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.

    ಇಂದು ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ನಡೆಯುತ್ತಿತ್ತು. ಈ ವೇಳೆ ಮುಂಬೈನಿಂದ ಬಂದವರಿಂದ ಹಾಸನ ಗ್ರೀನ್‍ಝೋನ್ ಪಟ್ಟ ಕಳೆದುಕೊಂಡು ಜಿಲ್ಲೆಯ ಜನ ಆತಂಕಕ್ಕೊಳಪಟ್ಟ ವಿಚಾರವನ್ನು ಶಿವಲಿಂಗೇಗೌಡ ಅವರು ಪ್ರಸ್ತಾಪಿಸಿದರು.

    ಯಾರಿಗೂ ಹೊರರಾಜ್ಯದಿಂದ ಬರಲು ಅವಕಾಶ ನೀಡದಂತೆ ಮನವಿ ಮಾಡುತ್ತಿದ್ದೇನೆ. ಕಳೆದ 25 ವರ್ಷಗಳಿಂದ ಮುಂಬೈಯಲ್ಲಿ ವಾಸವಿದ್ದವರು ಈಗ ನಮ್ಮ ಜಿಲ್ಲೆ ಸೇಫ್ ಆಗಿದೆ ಎಂದು ಬರುತ್ತಿದ್ದಾರೆ. ಆದರೆ ಯಾರು ಎಲ್ಲಿ ಇದ್ದಾರೋ ಅಲ್ಲೇ ಇರಲಿ. ನಮ್ಮ ಜಿಲ್ಲೆ ಸೇಫ್ ಆಗಿದೆ. ಹೊರ ರಾಜ್ಯದವರ ಸಹವಾಸವೇ ಬೇಡ. ಅವರ ಜೀವನ ಅಲ್ಲಿ ಉತ್ತಮವಾಗಿದೆ. ಆದರೆ ಜೀವ ಭಯದಿಂದ ಮಾತ್ರ ಅವರು ಇಲ್ಲಿ ಬರಲು ಮುಂದಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕು ಎಂದರೇ ಇದಕ್ಕೆ ಅವಕಾಶ ನೀಡಬಾರದು. ಮೋದಿ ಅವರು ಯಾವ ದೃಷ್ಟಿಯಿಂದ ಈ ಬಗ್ಗೆ ಅವಕಾಶ ನೀಡಿದ್ದರೆ ಎಂದು ತಿಳಿದಿಲ್ಲ. ಆದರೆ ನಮ್ಮ ಜಿಲ್ಲೆ ಸೇಫ್ ಆಗಬೇಕು ಎಂದರೇ ಜಿಲ್ಲಾಧಿಕಾರಿಗಳು ತಮಗೆ ಲಭಿಸಿರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

  • ಲಾಕ್‍ಡೌನ್: ಗಣಿನಾಡಿನಿಂದ ಹೊರಟ 13,671 ಮಂದಿ ಪ್ರವಾಸಿ ಕಾರ್ಮಿಕರು

    ಲಾಕ್‍ಡೌನ್: ಗಣಿನಾಡಿನಿಂದ ಹೊರಟ 13,671 ಮಂದಿ ಪ್ರವಾಸಿ ಕಾರ್ಮಿಕರು

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಹೊರಡಲು ಪ್ರವಾಸಿ ಕಾರ್ಮಿಕರು ತಯಾರಾಗಿದ್ದು, ಒಟ್ಟು 13,671 ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಕಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

    ಪ್ರತಿಯೊಬ್ಬ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಹೊಸಪೇಟೆಯಿಂದ ಮೇ 17 ರಂದು ತೆರಳಲಿರುವ ಎರಡು ವಿಶೇಷ ರೈಲಿನಲ್ಲಿ ಕಾರ್ಮಿಕರನ್ನು ಕಳಿಸಿ ಕೊಡಲಿದೆ. ಬಹುತೇಕ ಕಾರ್ಮಿಕರು, ಬಳ್ಳಾರಿ ಸಂಡೂರು ಹೊಸಪೇಟೆ ಸೇರಿದಂತೆ ಜಿಲ್ಲೆಯಲ್ಲಿ ಇರುವ ಗಣಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಬಳ್ಳಾರಿ ಹೊಸ ಬಸ್ ನಿಲ್ದಾಣ ಹಾಗೂ ಸಂಡೂರು ಹೊಸಪೇಟೆಯಲ್ಲಿ ಕಾರ್ಮಿಕರ ಸ್ಕ್ರೀನಿಂಗ್ ನಡೆಯುತ್ತಲಿದೆ.

    ಪ್ರತಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಜಿಲ್ಲಾಡಳಿತ ಆರೋಗ್ಯ ಕಾರ್ಡ್ ನೀಡಲಿದ್ದು, ಆರೋಗ್ಯ ಕಾರ್ಡ್ ಹೊಂದಿದವರು ಟಿಕೆಟ್ ಪಡೆದು ಪ್ರಯಾಣ ಮಾಡಬಹುದಾಗಿದೆ. ಉಳಿದಂತೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ಬಸ್‍ನಲ್ಲಿ ಸಂಚಾರ ಮಾಡುವ ಮನಸ್ಸು ಇದ್ದವರನ್ನು ಬಸ್‍ನಲ್ಲಿ ಕಳುಹಿಸಿ ಕೊಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈವರೆಗೂ ಯಾರು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್‍ನಲ್ಲಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೇರೆ ಬೇರೆ ರಾಜ್ಯದ ಒಟ್ಟು 13,671 ಜನ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದರೆ. ಉತ್ತರ ಪ್ರದೇಶದ ಸುಮಾರು 3,300 ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ.