Tag: ಪ್ರಮೋಷನ್

  • ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ವರ್ಣಚಿತ್ರ ದಾಖಲೆ ಬೆಲೆಗೆ ಮಾರಾಟ

    ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ವರ್ಣಚಿತ್ರ ದಾಖಲೆ ಬೆಲೆಗೆ ಮಾರಾಟ

    ವಾಷಿಂಗ್ಟನ್: ಖ್ಯಾತ ಕಲಾವಿದ ಆಂಡಿ ವಾರ್ಹೋಲ್ ಕುಂಚದಲ್ಲಿ ಮೂಡಿದ ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ಅವರ ವರ್ಣಚಿತ್ರವು 1,500 ಕೋಟಿಗೂ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. 1962 ರಲ್ಲಿ ಶಾಟ್ ಸೇಜ್ ಬ್ಲೂ ಮರ್ಲಿನ್ ನಟಿಯ ಮರಣದ ನಂತರ ವಾರ್ಹೋಲ್ ಮಾಡಿದ ಭಾವಚಿತ್ರಗಳ ಸರಣಿಯಲ್ಲಿ ಇದು ಒಂದಾಗಿದೆ.

    ಅಲ್ಲದೆ, ಇದು ಈವರೆಗೆ ಮಾರಾಟವಾದ 20ನೇ ಶತಮಾನದ ಅತ್ಯಂತ ದುಬಾರಿ ವರ್ಣಚಿತ್ರ ಎಂಬ ಖ್ಯಾತಿಯನ್ನೂ ಇದು ಪಡೆದುಕೊಂಡಿದೆ. ಇದನ್ನೂ ಓದಿ: ತಾಜ್ ಮಹಲ್ ನಿಜಕ್ಕೂ ವಿಶ್ವದ ಅದ್ಭುತ: ಭಾರತದ ಭೇಟಿಯನ್ನು ನೆನಪಿಸಿಕೊಂಡ ಮಸ್ಕ್

    Marilyn Monroe 2

    1964ರಲ್ಲಿ ಪ್ರಸಿದ್ಧ ಪಾಪ್ ಕಲಾವಿದ ಆಂಡಿ ವಾರ್ಹೋಲ್ ರೇಷ್ಮೆ-ಪರದೆಯ ಮೇಲೆ ಸಿದ್ಧಪಡಿಸಿದ ಮರ್ಲಿನ್ ಮನ್ರೋ ಅವರ ಭಾವಚಿತ್ರವು ಹರಾಜಿನಲ್ಲಿ 195 ಮಿಲಿಯನ್ ಡಾಲರ್‌ಗೆ (ಸುಮಾರು 1,500 ಕೋಟಿ ರೂ) ಮಾರಾಟವಾಯಿತು. ಪಾಪ್ ಕಲೆಯ ಅತ್ಯಂತ ಪ್ರಸಿದ್ಧ ತುಣುಕುಗಳಲ್ಲಿ ಒಂದಾಗಿರುವ ಇದು ಸ್ವಿಸ್ ಕಲಾ ವಿತರಕರಾದ ಥಾಮಸ್ ಮತ್ತು ಡೋರಿಸ್ ಅಮ್ಮನ್ ಅವರ ಸಂಗ್ರಹಣೆಯಲ್ಲಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಕ್ರಿಸ್ಟೀಸ್‌ನಿಂದ ಮಾರಾಟವಾಗಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    Marilyn Monroe 2

    1987ರಲ್ಲಿ ರಚನೆಯಾದ ಈ ಚಿತ್ರದ ಪೂರ್ವ ಅಂದಾಜು ಬೆಲೆ 200 ಮಿಲಿಯನ್ ಡಾಲರ್ (ಸುಮಾರು 1500 ಕೋಟಿ ರೂ) ತಲುಪಿತ್ತು. ನಂತರದ ಸುತ್ತಿನಲ್ಲಿ 170 ಮಿಲಿಯನ್ ಡಾಲರ್ (1,300 ಕೋಟಿ ರೂ ಗಿಂತ ಅಧಿಕ) ಸುತ್ತಿಗೆ ಬೆಲೆಗೆ ಮಾರಾಟವಾದ ಚಿತ್ರಕಲೆ ಹೆಚ್ಚುವರಿ ಶುಲ್ಕವನ್ನು 195 ಮಿಲಿಯನ್ ಡಾಲರ್‌ಗೆ (1,500 ಕೋಟಿ ರೂ)ಗೆ ಅಂತಿಮ ಬೆಲೆಯನ್ನು ನೀಡಿತು. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ

    Marilyn Monroe 1

    ಇದು 1982ರಲ್ಲಿ ರಚಿತವಾದ ಜೀನ್-ಮೈಕೆಲ್ ಬಾಸ್ಕ್ವಿಯಾಟ್‌ ಅವರ ವರ್ಣಚಿತ್ರದ ದಾಖಲೆಯನ್ನೂ ಮುರಿದಿದೆ. ಮೈಕೆಲ್ ಬಾಸ್ಕ್ವಿಯಾಟ್‌ ಚಿತ್ರವು 2017ರಲ್ಲಿ 110.5 ಮಿಲಿಯನ್ ಡಾಲರ್ (ಸುಮಾರು 9 ಸಾವಿರ ಕೋಟಿ ರೂಪಾಯಿ)ಗೆ ಮಾರಾಟವಾಗಿತ್ತು. ಇದೀಗ 1953 ರಲ್ಲಿ ಮನ್ರೋ ಅವರ ನಯಾಗರಾ ಚಿತ್ರದ ಪ್ರಮೋಷನ್‌ಗೆ ಬಳಸಲಾದ ಚಿತ್ರವನ್ನು ವರ್ಣದಲ್ಲಿ ನಿರ್ಮಿಸಲಾಗಿದೆ.

  • ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಗೆ ಬದಲು ಪ್ರಮೋಷನ್: ಅಬಕಾರಿ ಇಲಾಖೆಯಲ್ಲಿ ಎಲ್ಲಾ ಮಾಫಿ!

    ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಗೆ ಬದಲು ಪ್ರಮೋಷನ್: ಅಬಕಾರಿ ಇಲಾಖೆಯಲ್ಲಿ ಎಲ್ಲಾ ಮಾಫಿ!

    – ಅಬಕಾರಿ ಆಯುಕ್ತರ ಶೋಕಾಸ್ ನೋಟೀಸ್‍ಗೆ ಬೆಲೆ ಇಲ್ವಾ?

    ರಾಯಚೂರು: ಅಧಿಕಾರಿಗಳು ತಪ್ಪು ಮಾಡಿದರೆ ಮೇಲಾಧಿಕಾರಿಗಳು ಶಿಕ್ಷೆ ಕೊಡುವುದನ್ನ ನೋಡಿದ್ದೀರಿ. ಆದ್ರೆ ರಾಯಚೂರಿನ ಅಬಕಾರಿ ಇಲಾಖೆಯಲ್ಲಿ ತಪ್ಪು ಮಾಡಿದ್ರೆ ಪ್ರಮೋಷನ್ ಕೊಡ್ತಾರೆ. ತಪ್ಪಿತಸ್ಥ ಅನ್ನೋದು ಸಾಬೀತಾದರೂ ಅಬಕಾರಿ ನೀರಿಕ್ಷಕನಿಗೆ ಉಪ-ಅಧೀಕ್ಷಕ ಜವಾಬ್ದಾರಿ ನೀಡಲಾಗಿದೆ.

    ಜಿಲ್ಲೆಯಲ್ಲಿ ಲಾಕ್‍ಡೌನ್ ಸಮಯದಲ್ಲೂ ಮದ್ಯದ ವ್ಯಾಪಾರ ಜೋರಾಗಿ ನಡೆದಿದೆ. ಇದರ ಜೊತೆಗೆ ಅಧಿಕಾರಿಗಳ ಸಹಾಯದಿಂದ ಅಕ್ರಮ ಮದ್ಯ ಮಾರಾಟವೂ ಇನ್ನೂ ಜೋರಾಗಿಯೆ ನಡೆದಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟ ಆರೋಪದಲ್ಲಿ ಅಬಕಾರಿ ನಿರೀಕ್ಷಕ ಮೋನಪ್ಪನ ವಿರುದ್ಧ ಇಲಾಖೆ ಕ್ರಮಕೈಗೊಂಡಿದೆ. ಆದ್ರೆ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆ ನೀಡುವ ಬದಲು ಪ್ರಮೋಷನ್ ನೀಡಿದೆ. ಇದರಿಂದ ಅಬಕಾರಿ ಇಲಾಖೆಯಲ್ಲಿ ಅಕ್ರಮ ಎಸಗಿದವರಿಗೆ ಮೇಲಾಧಿಕಾರಿಗಳೇ ಬೆನ್ನಿಗೆ ನಿಲ್ಲುತ್ತಾರೆ ಅನ್ನೋದು ಸಾಬೀತಾಗಿದೆ.

    ಕಠಿಣ ಲಾಕ್ ಡೌನ್ ಜಾರಿಯಿದ್ದರೂ ಮೇ 31 ರಂದು ರಾತ್ರಿ ರಾಯಚೂರಿನ ಕೆ.ಎಸ್.ಐ.ಬಿ.ಸಿ.ಎಲ್ ಡಿಪೋವನ್ನ ಅವಧಿ ಮೀರಿ ತೆರೆದಿರುವುದಲ್ಲದೇ, ಮದ್ಯ ತುಂಬಿದ ಲಾರಿಗಳನ್ನ ಡಿಪೋ ಮುಂದೆಯೇ ನಿಲ್ಲಿಸಿ ಅಕ್ರಮಕ್ಕೆ ಅನುವು ಮಾಡಿಕೊಟ್ಟ ಅಬಕಾರಿ ನೀರಿಕ್ಷಕ ಮೋನಪ್ಪ ಭ್ರಷ್ಟಾಚಾರದ ಬಣ್ಣವನ್ನ ಅಬಕಾರಿ ಆಯುಕ್ತೆ ಲಕ್ಷ್ಮೀ ನಾಯಕ್ ತಡರಾತ್ರಿಯ ದಾಳಿಯಲ್ಲಿ ಬಯಲಿಗೆಳೆದಿದ್ದರು. ಅಲ್ಲದೆ ಸುಮಾರು 5 ಲಕ್ಷ ಮೌಲ್ಯದ ಮದ್ಯವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ವಾಹನಗಳ ಜಪ್ತಿ ಮಾಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿದ್ದರು. ಅಧಿಕಾರಿ ಮೋನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿದ್ದರು. ಆದ್ರೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ತಡರಾತ್ರಿವರೆಗೆ ಅಕ್ರಮವಾಗಿ ಮದ್ಯ ಹಂಚಿಕೆ ನಡೆಸಿದ್ದ ಅಧಿಕಾರಿಗೆ ಶಿಕ್ಷೆ ನೀಡುವ ಬದಲು ಅಬಕಾರಿ ಜಂಟಿ ಆಯುಕ್ತರು ಮೋನಪ್ಪನನ್ನ ಬೇರೆಡೆ ಪ್ರತಿನಿಯೋಜನೆ ಮಾಡಿ ಜೊತೆಗೆ ಉಪ- ಅಧಿಕ್ಷಕ ಹುದ್ದೆಯನ್ನೂ ಪ್ರಭಾರಿಯಾಗಿ ನಿರ್ವಹಿಸಲು ಜವಾಬ್ದಾರಿ ನೀಡಿದ್ದಾರೆ.

    ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಸಂಪೂರ್ಣ ಲಾಕ್‍ಡೌನ್ ಸಮಯದಲ್ಲಿ ವಾರಕ್ಕೆ ಎರಡು ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ಮದ್ಯದ ಅಂಗಡಿ ಹಾಗೂ ಮದ್ಯದ ಗೋದಾಮು ಕೆ.ಎಸ್.ಐ.ಬಿ.ಸಿ.ಎಲ್ ಡಿಪೋವನ್ನ ತೆರೆಯಲು ಅವಕಾಶ ನೀಡಿತ್ತು. ಆದ್ರೆ ಡಿಪೋ ವ್ಯವಸ್ಥಾಪಕ ಶಿವಪ್ಪ ಹಾಗೂ ಅಬಕಾರಿ ನಿರೀಕ್ಷಕ ಮೋನಪ್ಪ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೆ ಮದ್ಯದ ಅಂಗಡಿ ಮಾಲೀಕರಿಗೆ ಮನಬಂದಂತೆ ಮದ್ಯ ಹಂಚಿಕೆ ಮಾಡಿದ್ದರು. ಅಧಿಕಾರಿಗಳ ಅಕ್ರಮ ಅಬಕಾರಿ ಡಿ ಸಿ ದಾಳಿಯಲ್ಲಿ ಬಯಲಾದರೂ ಮೇಲಾಧಿಕಾರಿಗಳಿಗು ಮೋನಪ್ಪನನ್ನ ರಕ್ಷಿಸಿದ್ದಾರೆ ಅಂತ ಮದ್ಯ ಸಿಗದೆ ವಂಚಿತರಾದ ಮದ್ಯದಂಗಡಿ ಮಾಲೀಕರು ಆರೋಪಿಸಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಸಹ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ದಾರೆ.

    ಒಟ್ಟಿನಲ್ಲಿ ಅಬಕಾರಿ ಇಲಾಖೆಯಲ್ಲಿ ಅಕ್ರಮ ಮಾಡಿದರೂ ,ಕರ್ತವ್ಯ ಲೋಪ ಎಸಗಿದರು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಶೋಕಾಸ್ ನೋಟಿಸ್ ಜಾರಿಯಾದರೂ ಶಿಕ್ಷೆ ಮಾತ್ರ ಆಗುವುದಿಲ್ಲ ಅನ್ನೋದು ಸಾಬೀತಾಗಿದೆ. ರಾತ್ರೋರಾತ್ರಿ ನಿಯಮ ಉಲ್ಲಂಘಿಸಿ ಹಂಚಿಕೆಯಾದ ಮದ್ಯದ ಲೆಕ್ಕಪತ್ರವೂ ಸರಿಯಾಗಿ ಇಲ್ಲದೆ ಇದ್ದರೂ ತಪ್ಪಿತಸ್ಥ ಅಧಿಕಾರಿ ಸುಲಭವಾಗಿ ಬಚಾವಾಗಿದ್ದಾನೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ತಪ್ಪಿತಸ್ಥ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮದ್ಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

  • ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಎಡಿಜಿಪಿ ರವೀಂದ್ರನಾಥ್ ರಾಜೀನಾಮೆ

    ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಎಡಿಜಿಪಿ ರವೀಂದ್ರನಾಥ್ ರಾಜೀನಾಮೆ

    ಬೆಂಗಳೂರು: ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿಪಿ) ಡಾ.ಪಿ.ರವೀಂದ್ರನಾಥ್ ರಾಜೀನಾಮೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

    ತಮಗಿಂತ ಕಿರಿಯ ಅಧಿಕಾರಿ, ರ್ಯಾಂಕಿಗ್‍ನಲ್ಲೂ ಮೊದಲಿಲ್ಲದವರಿಗೆ ಬಡ್ತಿ ನೀಡಲಾಗಿದೆ ಎಂದು ಬೇಸರಗೊಂಡು ರವೀಂದ್ರನಾಥ್ ರಾತ್ರಿ 10.30 ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರಾಜಿನಾಮೆ ಪತ್ರ ಇಟ್ಟು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಗಿದೆ.

    ಈ ಕುರಿತು ಮಾತನಾಡಿರುವ ಅವರು, ಇಂದು ನಿವೃತ್ತರಾಗಲಿರುವ ಟಿ.ಸುನಿಲ್ ಕುಮಾರ್ ಅವರಿಗೆ 2020ರ ಅಕ್ಟೋಬರ್ 28ರಂದು ಎಡಿಜಿಪಿ ಶ್ರೇಣಿಯಿಂದ ಪೊಲೀಸ್ ಮಹಾ ನೀರ್ದೇಶನಾಲಯ (ಡಿಜಿಪಿ) ಶ್ರೇಣಿಗೆ ಬಡ್ತಿ ನೀಡಲಾಗಿದೆ. ರ್ಯಾಂಕಿಗ್ ಇಲ್ಲದ ಹಾಗೂ ತನಗಿಂತ ಕಿರಿಯವರಾದ ಸುನೀಲ್ ಕುಮಾರ್ ಗೆ ಡಿಜಿಯಾಗಿ ಕಾನೂನು ಬಾಹಿರವಾಗಿ ಬಡ್ತಿ ನೀಡಿದ್ದಾರೆ ಎಂದು ರವೀಂದ್ರನಾಥ್ ಅಸಮಾಧಾನ ಹೊರ ಹಾಕಿದ್ದಾರೆ.

    ಯಾವುದೇ ಪೋಸ್ಟ್ ಮೇಲಿರುವ ಆಸೆಗಾಗಿ ರಾಜೀನಾಮೆ ಕೊಟ್ಟಿಲ್ಲ. ನಾನು ಕೂಟ್ಟ ಅಪ್ಲಿಕೇಷನ್‍ನ್ನು ಕಡಗಣನೆ ಮಾಡಿ ಸರ್ಕಾರ ಜ್ಯೂನಿಯರ್‍ಗೆ ಪ್ರಮೋಷನ್ ಕೊಟ್ಟಿದೆ. ಸೀರಿಯಲ್ ಪ್ರಕಾರ ನಂಬರ್ 2 ನಲ್ಲಿದ್ದೇನೆ. ನಂಬರ್ 5 ಸುನೀಲ್ ಕುಮಾರ್ ಇದ್ದಾರೆ. ಆದರೂ ಕಾನೂನು ಬಾಹಿರವಾಗಿ ಬಡ್ತಿ ನೀಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

    ನಿವೃತ್ತಿ ಆಗುವುದಕ್ಕೂ ಮುನ್ನ ಬಡ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಬಡ್ತಿ ಪೋಸ್ಟ್ ಗೆ ಬರಬೇಕಾದ ಎಲ್ಲ ಸೌಲಭ್ಯ ಸಿಗುತ್ತವೆ. ನಾನು ಮಾಡುತ್ತಿರುವುದು ಕ್ರೆಡಿಬಿಲಿಟಿ, ಡಿಗ್ನಿಟಿಗೊಸ್ಕರ. ಈಗ ನಾನು ಮಾತಾನಾಡಿದಕ್ಕೆ ನನ್ನ ಸಸ್ಪೆಂಡ್ ಮಾಡಬಹುದು. ರಾಜೀನಾಮೆ ಕೊಟ್ಟ ಮೇಲೆ ನಾಳೆ ಬನ್ನಿ ಮಾತಾಡೋಣ ಎಂದಿದ್ದಾರೆ. ಅಟೆಂಡ್ ಪರೇಡ್ ಆ್ಯಂಡ್ ಮೀಟ್ ಮಿ ಎಂದು ಹೇಳಿದ್ದಾರೆ. ಐಪಿಎಸ್ ಅಧಿಕಾರಿಗಳು ಹೇಳಿದಂತೆ ನಾವು ಕುಣಿಯಬೇಕು. ಇದು ಪರೋಕ್ಷ ಕಿರುಕುಳವಾಗುತ್ತಿದೆ. ಅದಕ್ಕೆ ನಾನು ಪರೇಡ್ ಗೂ ಕೂಡ ಹೋಗಿಲ್ಲ. ನನ್ನದು ಇನ್ನೂ ಮೂರು ವರ್ಷ ಸರ್ವಿಸ್ ಇದೆ. ಹೀಗಾಗಿ ಇವರನ್ನು ನಿಯಂತ್ರಣದಲ್ಲಿಡಬೇಕು ಎಂದು ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಬೇಸರಗೊಂಡು ರಾಜೀನಾಮೆ ನೀಡುವುದೇ ಸೂಕ್ತ ಎನಿಸಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

    ನಾನು ಈ ಹಿಂದೆ ಮೂರು ಬಾರಿ ರಾಜೀನಾಮೆ ಕೊಟ್ಟಿದ್ದೇನೆ. ಈ ಕಾರಣ ಸುಪ್ರೀಂ ಕೋರ್ಟ್ 2014ರಲ್ಲಿ ಸ್ಟೇ ನೀಡಿತ್ತು. ಇದೀಗ ಅದರ ಅವಧಿ ಸಹ ಮುಗಿದಿದೆ. ಸುಪ್ರೀ ಕೋರ್ಟ್ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಮಾಡಿದ್ದೇನೆ ಎಂಬ ಆರೋಪದ ಮೇಲೆ ಮತ್ತೆ ದೆಹಲಿಗೆ ನಾನು ಹೋಗಬಹುದು. ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದಕ್ಕೆ ಡಿಇ ಆರ್ಡರ್ ಆಗಿದೆ. ಆದರೆ ಈಗ ನನಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126

  • ಸಿದ್ದರಾಮಯ್ಯ ಟ್ರಬಲ್‍ಶೂಟರ್ ನಾನೇ ಎಂದು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ: ಪರಮೇಶ್ವರ್

    ಸಿದ್ದರಾಮಯ್ಯ ಟ್ರಬಲ್‍ಶೂಟರ್ ನಾನೇ ಎಂದು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ: ಪರಮೇಶ್ವರ್

    ಧಾರವಾಡ: ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ ಅವರವರ ಕ್ಷೇತ್ರದಲ್ಲಿ ಕೆಲಸಗಳು ಆಗಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಂಬಂಧಪಟ್ಟ ಮುಖ್ಯಮಂತ್ರಿಗಳ ಜೊತೆ, ನನ್ನ ಜೊತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಟ್ರಬಲ್‍ಶೂಟರ್ ನಾನೇ ಎಂದು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿಸಿ ಪರಮೇಶ್ವರ್ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಗಾವಣೆ ಆಡಳಿತದಲ್ಲಿ ಒಂದು ಭಾಗ. ಆ ಭಾಗವಾಗಿ ವರ್ಗಾವಣೆ ನಡೆಯುತ್ತಿವೆ. ಅದು ಯಾವುದೇ ಶಿಕ್ಷೆಯಲ್ಲ. ಯಾವ ಅಧಿಕಾರಿ ಒಳ್ಳೆಯ ಕೆಲಸಮಾಡುತ್ತಾರೋ ಅವರನ್ನು ಗುರುತಿಸಿ ಅವರನ್ನು ವರ್ಗಾವಣೆ ಮಾಡುವುದು ಕಾನೂನಿನ ಅವಕಾಶವಾಗಿದೆ. ಹೀಗಾಗಿ ಅದು ಏನೂ ದೊಡ್ಡ ವಿಚಾರ ಅಲ್ಲ. ಅದು ಒಂದು ಪ್ರಕ್ರಿಯೆ ಎಂದು ಹೇಳಿದರು.

    ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಆಫರ್ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ನನ್ನ ಬಳಿ ಹೇಳಿಕೊಂಡಿದ್ದರು. ನನಗೆ ಬಿಜೆಪಿಯಿಂದ ಆಹ್ವಾನ ಬರುತ್ತಿದೆ ಅಂತ ಮಾತ್ರ ಹೇಳಿಕೊಂಡಿದ್ದರು. ಹಣದ ಆಮಿಷದ ಬಗ್ಗೆ ಯಾವುದೇ ವಿಚಾರ ನನಗೆ ಹೇಳಿರಲಿಲ್ಲ. ಬಿಜೆಪಿಯವರು ಕರೆಯುತ್ತಿದ್ದಾರೆ ಅನ್ನೋದನ್ನು ಮಾತ್ರ ಗಮನಕ್ಕೆ ತಂದಿದ್ದರು. ಈಗ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದು, ಅವರು ಈ ಕುರಿತು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

    ಪೊಲೀಸ್ ಅಧಿಕಾರಿಗಳ ಪ್ರಮೋಷನ್ ವಿಚಾರಕ್ಕೆ ಆಯಾ ಕಾಲಕ್ಕೆ ತಕ್ಕಂತೆ ಆಗಿದೆ. ಪ್ರಮೋಷನ್ ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ತೀರ್ಮಾನವನ್ನು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಮೋಷನ್ ನಿಂತಿರಬಹುದೇ ಹೊರತು ಯಾವುದೇ ಬಡ್ತಿಯನ್ನು ನಿಲ್ಲಿಸುವುದಿಲ್ಲ. ಕಳೆದ ಬಾರಿ ಗೃಹ ಸಚಿವನಾಗಿದ್ದಾಗ 12 ಸಾವಿರ ಜನರಿಗೆ ಬಡ್ತಿ ಕೊಟ್ಟಿದ್ದೇನೆ. ಅದೇ ರೀತಿ ಈಗಲೂ ಬಡ್ತಿ ಪ್ರಕ್ರಿಯೆಯನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಇಲಾಖೆಯಿಂದ ನಿಲ್ಲಿಸಬಾರದೆಂದು ಆದೇಶಿದ್ದೇನೆ ಎಂದರು. ರಾಹುಲ್ ಗಾಂಧಿ ಬಗ್ಗೆ ಎಸ್ ಎಲ್ ಭೈರಪ್ಪ ಮೈಸೂರಿನಲ್ಲಿ ಹೇಳಿದ ವಿಚಾರಕ್ಕೆ ಅದು ಅವರವರ ಅಭಿಪ್ರಾಯವಷ್ಟೇ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರ: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೋಮವಾರ ತಮ್ಮ ಹೊಚ್ಚ ಹೊಸ ಮಫ್ತಿ ಸಿನಿಮಾದ ಪ್ರಮೋಷನ್ ಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು.

    ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಶ್ರೀಮುರುಳಿ ಹಾಗೂ ನಟ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಸೋಮವಾರ ಸಂಜೆ ನಟ ಶ್ರೀಮುರುಳಿ ಚಲನಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಆಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಶ್ರೀಮುರುಳಿಗೆ ಅಭಿಮಾನಿಗಳು ಆದರದ ಸ್ವಾಗತ ಕೋರಿ ಹೂಮಾಲೆ ಹಾಕಿ ಬರಮಾಡಿಕೊಂಡರು. ಇದೇ ವೇಳೆ ನಟ ಶ್ರೀಮುರುಳಿ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಈ ವೇಳೆ ಮಾತನಾಡಿದ ಶ್ರೀ ಮುರುಳಿ, ಮಫ್ತಿ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸು ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿದರು.

  • ಪ್ರಮೋಷನ್ ಸಿಗದಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

    ಪ್ರಮೋಷನ್ ಸಿಗದಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

    ಬೆಂಗಳೂರು: ತನ್ನ ಕನಸಿನಂತೆ ಪ್ರಮೋಷನ್ ದೊರೆತಿಲ್ಲ ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬರು ವಿದ್ಯಾರಣ್ಯಪುರ ತಿಂಡ್ಲುವಿನ ವಿಘ್ನೇಶ್ವರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಆರ್.ಟಿ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ದಮಯಂತಿ (26) ಎಂಬವರು ಆತ್ಮಹತ್ಯೆಗೆ ಶರಣಾದ ಮಹಿಳೆ.

    ದಿವ್ಯಾ ಅವರು ಕೆಲದಿನಗಳಿಂದ ಫ್ಲೋರ್ ಮ್ಯಾನೇಜರ್ ಹುದ್ದೆಯ ಪ್ರಮೋಷನ್ ನಿರೀಕ್ಷೆಯಲ್ಲಿದ್ದರು. ಆದರೆ ಇವರಿಗೆ ಪ್ರಮೋಷನ್ ನೀಡದೇ ಬೇರೊಬ್ಬ ಮಹಿಳೆಗೆ ಕಂಪನಿ ಪ್ರಮೋಷನ್ ನೀಡಿತ್ತು. ಈ ವಿಚಾರ ತಿಳಿದು ದಿವ್ಯಾ ಖಿನ್ನತೆ ಒಳಗಾಗಿದ್ದರು. ಈಗ ಈ ವಿಚಾರಕ್ಕೆ ಮನನೊಂದು ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

    ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಲಂ 371(ಜೆ) ಅನುಷ್ಠಾನ ಗೊಂದಲ: ರಾಯಚೂರು ಪೊಲೀಸರ ಮುಂಬಡ್ತಿಯಲ್ಲಿ ತಾರತಮ್ಯ

    ರಾಯಚೂರು: ಶೈಕ್ಷಣಿಕ ಹಾಗೂ ಹುದ್ದೆಯ ಮುಂಬಡ್ತಿಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ದಿಗೆ ಪೂರಕವಾಗಬೇಕಿದ್ದ ಭಾರತ ಸಂವಿಧಾನದ ಅನುಚ್ಛೇದ 371 (ಜೆ) ರಾಯಚೂರಿನ ಪೊಲೀಸರಲ್ಲಿ ತಾರತಮ್ಯ ಮೂಡಿಸಿದೆ. ಕೇವಲ 5 ವರ್ಷ ಅನುಭವವಿರುವವರಿಗೆ ಬಡ್ತಿ ಸಿಗುತ್ತಿದ್ದರೆ, 15 ವರ್ಷ ದುಡಿದವರಿಗೆ ಯಾವುದೇ ಸೌಲಭ್ಯವಿಲ್ಲದಂತಾಗಿದೆ. ಹೋರಾಟಗಳ ಮೂಲಕ ಪಡೆದ ಸಾಂವಿಧಾನಿಕ ಹಕ್ಕು ಈಗ ಇಲ್ಲಿನ ಪೊಲೀಸರಿಗೆ ಮುಳುವಾಗಿದೆ. ಹೀಗಾಗಿ ಪೊಲೀಸರು ನ್ಯಾಯಕ್ಕಾಗಿ ಧ್ವನಿ ಎತ್ತಲು ಮುಂದಾಗಿದ್ದಾರೆ.

    2017 ಜನವರಿ 27 ರಂದು ರಾಯಚೂರು ಜಿಲ್ಲೆಯಲ್ಲಿ 43 ಜನರಿಗೆ ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಸಿಪಿಸಿ) ಹುದ್ದೆಯಿಂದ ಸಿವಿಲ್ ಹೆಡ್ ಕಾನ್ಸಟೇಬಲ್ (ಸಿಹೆಚ್‍ಸಿ) ಹುದ್ದೆಗೆ ನೀಡಲಾಗಿರುವ ಮುಂಬಡ್ತಿಯಲ್ಲಿ ತಾರತಮ್ಯವಾಗಿದೆ. ಮುಂಬಡ್ತಿಗೆ ಸ್ಥಳೀಯ ವೃಂದ ಭರ್ತಿಯಾದ ಬಳಿಕ ಪರಸ್ಥಳೀಯ ವೃಂದದ ಹುದ್ದೆಗಳಿಗೆ ಸ್ಥಳೀಯರನ್ನೇ ಪರಿಗಣಿಸಲಾಗಿದೆ. ಆದ್ರೆ ಜೇಷ್ಠತೆಯ ಹಿರಿತನದ ಆಧಾರದ ಮೇಲೆ ಬಡ್ತಿ ಸಿಗದೆ ಇತ್ತೀಚಿಗೆ ಹುದ್ದೆಗೆ ಸೇರಿದವರಿಗೆ ಬಡ್ತಿ ನೀಡುವ ಮೂಲಕ 15 ವರ್ಷಗಳಷ್ಟು ಅನುಭವವಿರುವವರಿಗೆ ಅನ್ಯಾಯವಾಗಿದೆ. 2011 ರಲ್ಲಿ ಕೆಲಸಕ್ಕೆ ಸೇರಿದ 43 ಜನ ಈಗ ಹೆಡ್ ಕಾನ್ಸಟೇಬಲ್‍ಗಳಾಗಿದ್ದಾರೆ. ಆದ್ರೆ 2002, 2005, 2007, 2008 ಹಾಗೂ 2009 ನೇ ಸಾಲಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಬಡ್ತಿ ನೀಡಲಾಗಿಲ್ಲ. ಕಲಂ 371 (ಜೆ) ಪ್ರಕಾರ ಪರಸ್ಥಳೀಯ ವೃಂದಕ್ಕೆ ಜೇಷ್ಠತೆಯಲ್ಲಿ ಕೆಳಗಿನಿಂದ ಮೇಲಕ್ಕೆ ಆಯ್ಕೆ ಮಾಡುತ್ತಿರುವುದೇ ಯಡವಟ್ಟಿಗೆ ಕಾರಣವಾಗಿದೆ. ಎಂದು ಆರೋಪಿಸಲಾಗಿದೆ.

    ಕಲಂ 371 ಜೆ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯೇತರ ವೃಂದಕ್ಕೆ ಒಟ್ಟು 74 ಸಿಹೆಚ್‍ಸಿ ಹುದ್ದೆಗಳು ಲಭ್ಯವಾಗಿವೆ. ಇದರಲ್ಲಿ 29 ಜನ ಈಗಾಗಲೇ ಸಿವಿಲ್ ಹೆಡ್ ಕಾನ್ಸಟೇಬಲ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 43 ಸಿವಿಲ್ ಹೆಡ್ ಕಾನ್ಸಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಆದ್ರೆ ರಾಜ್ಯಮಟ್ಟದಲ್ಲಿ ಜೇಷ್ಠತೆಯಲ್ಲಿ ಮೇಲಿದ್ದರು ಪರಸ್ಥಳೀಯ ವೃಂದದಲ್ಲಿ ಹಿಂದೆ ಬೀಳುವಂತಾಗಿದೆ. ಹೀಗಾಗಿ ಮುಂಬಡ್ತಿ ವಂಚಿತರಾದ ಪೊಲೀಸ್ ಕಾನ್ಸಟೇಬಲ್‍ಗಳು ತಾರತಮ್ಯ ಸರಿಪಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿದ್ದಾರೆ. ಸಂವಿಧಾನ ಅಳವಡಿಕೆಯಲ್ಲಿ ಗೊಂದಲಗಳು ಸೃಷ್ಠಿಯಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.

    ಕಲಂ 371(ಜೆ) ಅಡಿ ಎರಡೆರಡು ವೃಂದಗಳನ್ನಾಗಿ ಮಾಡಿ ಪ್ರಮೋಷನ್ ನೀಡುತ್ತಿರುವುದರಿಂದ ಜೇಷ್ಠತೆಯಲ್ಲಿ ಹಿರಿಯರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಯಲ್ಲೂ ಇದೇ ಸಮಸ್ಯೆ ತಲೆದೋರಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.