Tag: ಪ್ರಮೋದ್ ಸಾವಂತ್

  • ಗೋವಾ ವಿಧಾನಸಭಾ ಚುನಾವಣೆ – ಜ.19ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್

    ಗೋವಾ ವಿಧಾನಸಭಾ ಚುನಾವಣೆ – ಜ.19ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್

    ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜನವರಿ 19 ರಂದು ಪ್ರಕಟಿಸಲಾಗುವುದಾಗಿ ತಿಳಿಸಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಇಂದು ಮುಂಜಾನೆ ಮತ್ತೆ ಗೋವಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಮೋದ್ ಸಾವಂತ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜನವರಿ 19 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಮುಂದಿನ ವಿಧಾನಸಭಾ ಚುನಾವಣೆಯ ಕುರಿತಂತೆ ಚರ್ಚಿಸಲು ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದೇನೆ. ಜನವರಿ 19 ರಂದು ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದಿದ್ದಾರೆ. ಈ ಮುನ್ನ ಭಾನುವಾರ ಮಧ್ಯಾಹ್ನ ಗೋವಾ ವಿಧಾನಸಭೆಯ 40 ಸ್ಥಾನಗಳ ಕುರಿತಂತೆ ಆಡಳಿತ ಪಕ್ಷ ಸಭೆ ನಡೆಸಿತು. ಈ ಸಭೆಯಲ್ಲಿ ಪ್ರಮೋದ್ ಸಾವಂತ್ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್, ಜಿ ಕಿಶನ್ ರೆಡ್ಡಿ ಮತ್ತು ಸಂಘಟನಾ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

    ಗೋವಾದ ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ 38 ಮಂದಿ ಭಾರತೀಯ ಜನತಾ ಪಕ್ಷದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, ಕ್ರಿಶ್ಚಿಯನ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಮತ್ತೆರಡು ಸ್ಥಾನಕ್ಕೆ ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದೆ.

  • ಲೈಂಗಿಕ ಶೋಷಣೆ ಆರೋಪ – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಿಲಿಂದ್ ನಾಯ್ಕ್

    ಲೈಂಗಿಕ ಶೋಷಣೆ ಆರೋಪ – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಿಲಿಂದ್ ನಾಯ್ಕ್

    ಪಣಜಿ: ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ಅವರು ಲೈಂಗಿಕ ಶೋಷಣೆ ಆರೋಪದ ಹಿನ್ನೆಲೆ ರಾಜ್ಯ ಸಂಪುಟಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಈ ಕುರಿತಂತೆ ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಬುಧವಾರ ತಡರಾತ್ರಿ ಅಧಿಕೃತವಾಗಿ ಪ್ರಕಟಿಸಿದ್ದು, ಈ ಸಂಬಂಧ ಮುಕ್ತ ಮತ್ತು ನ್ಯಾಯಯುತ ತನಿಖೆ ಖಚಿತಪಡಿಸುವ ಉದ್ದೇಶದಿಂದ ಮಿಲಿಂದ್ ನಾಯ್ಕ್ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

    ಮಿಲಿಂದ್ ನಾಯ್ಕ್ ದಕ್ಷಿಣ ಗೋವಾದ ಮರ್ಮಗೋವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದರು. ಈ ಮುನ್ನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನೇತೃತ್ವದ ಹಿಂದಿನ ಸಂಪುಟದಲ್ಲೂ ಸಚಿವರಾಗಿದ್ದರು. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ಕೆಲವು ದಿನಗಳ ಹಿಂದೆ ಮಿಲಿಂದ್ ನಾಯ್ಕ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಗೋವಾ ಅಧ್ಯಕ್ಷ ಗಿರೀಶ್ ಛೋಡನ್ಕರ್ ಆರೋಪಿಸಿದ್ದರು. ಅಲ್ಲದೇ ಅವರನ್ನು ಪ್ರಮೋದ್ ಸಾವಂತ್ ವಜಾಗೊಳಿಸಬೇಕು ಮತ್ತು ಅವರ ಮೇಲಿರುವ ಆರೋಪ ಕುರಿತಂತೆ ಸಮಗ್ರವಾಗಿ ತನಿಖೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು.

    ಗಿರೀಶ್ ಛೋಡನ್ಕರ್ ಅವರು ಹದಿನೈದು ದಿನಗಳ ಹಿಂದೆಯೇ ಈ ವಿಚಾರವನ್ನು ಪ್ರಸ್ತಾಪಿಸಿದ್ದರು, ಆದರೆ ಆ ವೇಳೆ ಸಚಿವರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಸಚಿವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗಳಿಗೆ 15 ದಿನಗಳ ಗಡವು ನೀಡಿದ್ದರು. ನಂತರ ಗಿರೀಶ್ ಛೋಡನ್ಕರ್ ಅವರಿಗೆ ಸಚಿವರ ಹೆಸರು ಬಹಿರಂಗ ಪಡಿಸಿ, ಅವರ ವಿರುದ್ಧ ಸಂತ್ರಸ್ತೆ ನೀಡಿರುವ ದೂರಿನ ಪ್ರತಿ ಸಲ್ಲಿಸುವಂತೆ ಪ್ರಮೋದ್ ಸಾವಂತ್ ಸೂಚಿಸಿದ್ದರು. ಇದನ್ನೂ ಓದಿ: ಸಿಎಂ ರ‍್ಯಾಲಿ ವೇಳೆ ನಿರುದ್ಯೋಗಿ ಶಿಕ್ಷಕರ ಮೇಲೆ ಪೊಲೀಸರ ದಬ್ಬಾಳಿಕೆ – ವೀಡಿಯೋ ವೈರಲ್

    ಮಿಲಿಂದ್ ನಾಯ್ಕ್ ಅವರ ಹೆಸರನ್ನು ಗಿರೀಶ್ ಛೋಡನ್ಕರ್ ಬಹಿರಂಗಪಡಿಸಿದರು. ನಂತರ ಗೋವಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸಂಕಲ್ಪ್ ಅಮೋನ್ಕರ್ ಕೂಡ ಮಿಲಿಂದ್ ನಾಯ್ಕ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಈ ಸಂಬಂಧ ಅಮೋನ್ಕರ್ ಅವರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸಚಿವರು ಹಾಗೂ ಸಂತ್ರಸ್ತೆ ನಡೆಸಿರುವ ಸಂಭಾಷಣೆ ನಡೆಸಿರುವ ಆಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.

  • ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ

    ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ

    ಪಣಜಿ: ಕಾಡುಹಂದಿ ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಭವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

    ಪಣಜಿಯಲ್ಲಿ ಕೃಷಿ ಮತ್ತು ಅರಣು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡ್ತಿರಲಿಲ್ಲ: ಎಸ್‍ಪಿ ಲೋಕೇಶ್ ಜಗಲಾಸರ್

    ಕಾಡುಹಂದಿಗಳು ರಾಜ್ಯದಲ್ಲಿ ಕೃಷಿ ಕ್ಷೇತ್ರಗಳಿಗೆ ಹಾನಿಯುಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಸರ್ಕಾರ 2016ರಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (ಎನ್‍ಡಬ್ಲ್ಯೂಬಿ) ಶಿಫಾರಸ್ಸು ಮಾಡಿತ್ತು. ಆದ್ದರಿಂದ ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಸ್ತಾವ ಬಾಕಿ ಉಳಿದಿದೆ ಎಂದು ಸಿಎಂ ಸಾವಂತ್ ಮಾಹಿತಿ ನೀಡಿದ್ದಾರೆ.

    ಪ್ರಸ್ತುತ, ಕಾಡುಹಂದಿಯನ್ನು ವನ್ಯಜೀವಿ ಕಾಯ್ದೆಯಡಿ ರಕ್ಷಿಸಲಾಗಿದೆ, ಅದರ ಹತ್ಯೆಯನ್ನು ಕಾನೂನುಬಾಹಿರಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಮನುಷ್ಯ-ಪ್ರಾಣಿಗಳ ಸಂಘರ್ಷ ಮತ್ತು ಬೆಳೆಗಳ ನಾಶದಿಂದಾಗಿ, ರೈತರು ಕೆಲವು ಕಾಡು ಪ್ರಾಣಿಗಳ ಕ್ರಿಮಿಕೀಟಗಳನ್ನು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು, ಅವುಗಳಲ್ಲಿ ಒಂದು ಕಾಡುಹಂದಿಯಾಗಿದೆ.

  • ಪಕ್ಷವನ್ನೇ ಬದಿಗಿಟ್ಟು ಮಹದಾಯಿ ನೋಡ್ತೀನಿ ಅಂದ್ರು ಗೋವಾ ಸಿಎಂ- ತುಟಿ ಬಿಚ್ಚದ ರಾಜ್ಯದ ನಾಯಕರು

    ಪಕ್ಷವನ್ನೇ ಬದಿಗಿಟ್ಟು ಮಹದಾಯಿ ನೋಡ್ತೀನಿ ಅಂದ್ರು ಗೋವಾ ಸಿಎಂ- ತುಟಿ ಬಿಚ್ಚದ ರಾಜ್ಯದ ನಾಯಕರು

    – ಮಹದಾಯಿ ತಾಯಿ ಸಮಾನ, ಗೋವಾದ ಜೀವನದಿ ಎಂದ ಸಾವಂತ್

    ಬೆಳಗಾವಿ: ಒಂದೇ ಸಲಕ್ಕೆ ಕರ್ನಾಟಕದ ವಿರುದ್ಧ ನೆರೆ ರಾಜ್ಯಗಳು ತಿರುಗಿ ಬಿದ್ದಿದ್ದು, ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹದಾಯಿ ಕ್ಯಾತೆ ಶುರುವಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಹಾದಾಯಿಗಾಗಿ ತೊಡೆ ತಟ್ಟಿ ನಿಂತಿದ್ದಾರೆ. ಆದರೆ ರಾಜ್ಯ ಸರ್ಕಾರದ ಸಿಎಂ ಹಾಗೂ ಯಾವುದೇ ಸಚಿವರು ಈ ಬಗ್ಗೆ ತುಟಿ ಬಿಚ್ಚಿಲ್ಲ.

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಹೇಳಿಕೆ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ್ ಕ್ಯಾತೆ ತೆಗೆದಿದ್ದಾರೆ. ಕರ್ನಾಟಕದ ವಿರುದ್ಧ ತೊಡೆ ತಟ್ಟಿ ನಿಂತಿರುವ ಸಾವಂತ್, ಗೋವಾ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸಿದ್ದಾರೆ. ಪಕ್ಷವನ್ನೂ ಬದಿಗಿಟ್ಟು ಮಹದಾಯಿ ನೋಡುವೆ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ವಿರುದ್ಧ ಗುಟುರು ಹಾಕಿದ್ದಾರೆ. ಇಷ್ಟಾದರೂ ರಾಜ್ಯದ ಯಾವೊಬ್ಬ ರಾಜಕಾರಣಿ ಈ ಬಗ್ಗೆ ತುಟಿ ಬಿಚ್ಚಿಲ್ಲ.

    ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಹೀಗಾಗಿ ಮಹದಾಯಿ ವಿವಾದವನ್ನು ಬೇಗ ಬಗೆಹರಿಸಬಹುದು ಎಂದು ಭಾವಿಸಿರುವಾಗಲೇ ಗೋವಾ ಸಿಎಂ ಉಲ್ಟಾ ಹೊಡೆದಿದ್ದಾರೆ. ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳಲ್ಲ. ಮಹದಾಯಿ ನನಗೆ ತಾಯಿ ಸಮಾನ, ಮಹದಾಯಿ ಗೋವಾದ ಜೀವನದಿ, ಈ ಜೀವನದಿಗಾಗಿ ನಾನು ಪಕ್ಷ ಮತ್ತು ರಾಜಕೀಯವನ್ನು ಬದಿಗಿಡುವೆ. ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಇದೆ. ಹಾಗಂತ ಪಕ್ಷದ ಮಾತು ಕೇಳಿ ರಾಜಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    ಮಹದಾಯಿ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪಕ್ಷದಿಂದ ಯಾವ ಒತ್ತಡ ಬಂದರೂ ಒಪ್ಪಲಾರೆ ಎಂದು ಗೋವಾದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.

  • ಗೋವಾ ಸಿಎಂ ಪ್ರಮೋದ್ ಸಾವಂತ್‍ಗೆ ರಮೇಶ್ ಜಾರಕಿಹೊಳಿ ಸವಾಲ್

    ಗೋವಾ ಸಿಎಂ ಪ್ರಮೋದ್ ಸಾವಂತ್‍ಗೆ ರಮೇಶ್ ಜಾರಕಿಹೊಳಿ ಸವಾಲ್

    – ಮಹದಾಯಿಗೆ ಕಟ್ಟಿದ ಗೋಡೆ ಟಚ್ ಮಾಡಿದ್ರೆ ರಾಜೀನಾಮೆ
    – ಡಿಸಿಎಂ ಹುದ್ದೆ ನಾನು ಬಯಸಿಲ್ಲ

    ಬೆಳಗಾವಿ: ನಾವು ಮಹದಾಯಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಗೋಡೆ ಟಚ್ ಮಾಡಿದ್ರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಎಂದಿದ್ದಾರೆ.

    ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ನಮ್ಮ ನಾಯಕ ಬಿಎಸ್‍ವೈ. ಈ ಅವಧಿ ಮಾತ್ರ ಅಲ್ಲ, ಮುಂದಿನ ಚುನಾವಣೆಯಲ್ಲಿಯೂ ಯಡಿಯೂರಪ್ಪ ನಾಯಕತ್ವದಲ್ಲಿ ನಾವು ಸಾಗುತ್ತೇವೆ.

    ಡಿಸಿಎಂ ಹುದ್ದೆ ನಾನು ಬಯಸಿಲ್ಲ. ಬಾಂಬೆ ಪಾರ್ಟಿ ವಿಚಾರಚಾಗಿ ಶಾಸಕ ರೇಣುಕಾಚಾರ್ಯ ಹೇಳಿಕೆಯನ್ನು ಪ್ರತ್ಯಕ್ಷವಾಗಿ ಗಮನಿಸಿಲ್ಲ. ಮಾಧ್ಯಮಗಳಿಂದ ತಿಳಿದು ಬಂದಿದೆ. ನಮ್ಮ ಜೊತೆಗಿದ್ದವರಿಗೆ ಸಚಿವ ಸ್ಥಾನ ಕೊಡಿಸಲು ನಾನು ರಾಜೀನಾಮೆ ನೀಡಲು ಸಿದ್ಧ ಎಂದರು.

  • ‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ

    ‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ

    ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ.

    ಫಿಲಿಪ್ ನೆರಿ ರಾಡ್ರಿಗೆಸ್, ಜೆನ್ನಿಫರ್ ಮಾನ್ಸೆರಾಟ್ಟೆ ಮತ್ತು ಚಂದ್ರಕಾಂತ್ ಕವಲೇಕರ್ ಅವರು ಪ್ರಮೋದ್ ಸಾವಂತ್ ಅವರ ಸಂಪುಟ ಸೇರಿದ್ದಾರೆ. ಈ ಮೂವರು ನೂತನ ಸಚಿವರು ಹಾಗೂ ಮಾಜಿ ಉಪಸಭಾಪತಿ ಮೈಕೆಲ್ ಲೋಬೋ ಕೂಡ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಗೋವಾದ 10 ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಸೇರಿದ್ದರು. 40 ಸದಸ್ಯರ ಸದನದಲ್ಲಿ ಕಾಂಗ್ರೆಸ್‍ನ ಹತ್ತು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದು ಕಮಲ ಪಾಳಯದ ಬಲವನ್ನು 27ಕ್ಕೇರುವಂತೆ ಮಾಡಿತ್ತು. ಈ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮುಂದಾಗಿದ್ದರು.

    ಈ ಬಗ್ಗೆ ಶುಕ್ರವಾರ ತಡರಾತ್ರಿ ಮಾಹಿತಿ ನೀಡಿದ್ದ ಪ್ರಮೋದ್ ಸಾವಂತ್ ಅವರು, ನಾಲ್ಕು ನೂತನ ಸಚಿವರನ್ನು ನೇಮಕ ಮಾಡಲಾಗುವುದು. ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಓರ್ವ ಪಕ್ಷೇತರ ಶಾಸಕರಿಗೆ ನೀಡಿದ್ದ ಸಚಿವ ಸ್ಥಾನವನ್ನು ಹಿಂಪಡೆಯಲಾಗುತ್ತಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು.

    ದೋಸ್ತಿ ಪಕ್ಷದ ಶಾಸಕರನ್ನು ಸಂಪುಟದಿಂದ ಕೈಬಿಡುತ್ತಿರುವುದು ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಮೋದ್ ಸಾವಂತ್ ಅವರು, ಉತ್ತಮ ಆಡಳಿತ ನೀಡಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ಹೈಕಮಾಂಡ್ ಸೂಚನೆಮೇರೆಗೆ ಸಂಪುಟ ಪುನಾರಚನೆ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದರು.

    ಪ್ರಮೋದ್ ಸಾವಂತ್ ಅವರು ನೂತನ ಸಚಿವರಾಗಿ ನೇಮಕಗೊಳ್ಳುವ ಶಾಸಕರು ಯಾರು ಎನ್ನುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಬಿಟ್ಟು ಪಕ್ಷ ಸೇರಿದ ಶಾಸಕರಿಗೆ ಮಂತ್ರಿಗಿರಿ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜಕೀಯ ಚಾಣಾಕ್ಷತೆ ತೋರಿದೆ ಎನ್ನಲಾಗುತ್ತಿದೆ. ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎರಡನೇ ಬಾರಿಗೆ ಸಂಪುಟ ಪುನಾರಚನೆ ಇದಾಗಿದೆ.

    ವಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ ಕಾಂಗ್ರೆಸ್‍ನ 10 ಮಂದಿ ಬಣವು ಬುಧವಾರ ಸಂಜೆಯ ನಂತರ ಸ್ಪೀಕರ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್‍ನಿಂದ ಹೊರಬರುತ್ತಿರುವುದಾಗಿ ಸ್ಪೀಕರ್ ರಾಜೇಶ್ ಪಾಟ್ನೇಕರ್ ಅವರಿಗೆ ಪತ್ರವನ್ನು ನೀಡಿತ್ತು. ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್‍ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್‍ನಿಂದ ಬಂದು ಕಮಲ ಬಣದ ಸದಸ್ಯರಾಗಿದ್ದಾರೆ.

  • ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    – ಪರಿಕ್ಕರ್ ಅಂತ್ಯಕ್ರಿಯೆ ಬೆನ್ನಲ್ಲೆ ಸರ್ಕಾರ ರಚನೆ
    – ರಾತ್ರೋರಾತ್ರಿ ಮುಗಿದೇ ಹೋಯ್ತು ಕಾರ್ಯಕ್ರಮ

    ಪಣಜಿ: ಗೋವಾ ನೂತನ ಸಿಎಂ ಆಗಿ ಪ್ರಮೋದ್ ಸಾವಂತ್ ರಾತ್ರೋರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ (ಎಂಜಿಪಿ)ಯ ಸುದೀನ್ ದಾವಲೀಕರ್ ಮತ್ತು ಗೋವಾ ಫಾವರ್ಡ್ ಪಾರ್ಟಿ (ಜಿಎಫ್‍ಪಿ)ಯ ವಿಜಯ್ ಸರ್ದೇಸಾಯಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.

    11 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ವಿವಿಧ ಕಾರಣಗಳಿಂದಾಗಿ ತಡವಾಯಿತು. ಮಧ್ಯರಾತ್ರಿ 2 ಗಂಟೆ ವೇಳೆಗೆ ರಾಜಭವನದಲ್ಲಿ ಪ್ರಮೋದ್ ಸಾವಂತ್, 11 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಗವರ್ನರ್ ಭೇಟಿಯಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮೈತ್ರಿಪಕ್ಷದ ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಪ್ರಮೋದ್ ಸಾವಂತ್ ಗೋವಾ ಸ್ಪೀಕರ್ ಆಗಿ ಕಾರ್ಯ ನಿರ್ವಸುತ್ತಿದ್ದರು. ದೊಡ್ಡ ಪಕ್ಷವಾದ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.

    ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ?
    40 ಶಾಸಕರನ್ನು ಹೊಂದಿರುವ ಗೋವಾ ವಿಧಾನಸಭೆ ಸಂಖ್ಯೆ 36ಕ್ಕೆ ಇಳಿದಿದ್ದು, 19 ಶಾಸಕರನ್ನು ಹೊಂದಿರುವ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಬಹುದು. ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಎಂಜಿಪಿ, ಜಿಎಫ್ ಪಿ ಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.

  • ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಬೆಳಗಾವಿ: ಮಹದಾಯಿ ನದಿ ನೀರುಹಂಚಿಕೆ ವಿವಾದ ವಿಚಾರ ಸಂಬಂಧಿಸಿದಂತೆ ಕರ್ನಾಟಕ ಕಣಕುಂಬಿಗೆ ಗೋವಾ ವಿಧಾನಸಭೆ ಸ್ವೀಕರ್ ನೇತೃತ್ವದ ತಂಡ ಇಂದು ಭೇಟಿ ನೀಡಿದೆ.

    ಕರ್ನಾಟಕ ಸರ್ಕಾರ ಕಳಸಾ ಕಾಮಗಾರಿ ನಡೆಸುತ್ತಿರುವ ಪ್ರದೇಶ ಇದಾಗಿದ್ದು, ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಖೆಲ್ ಲೋಬೋ ಹಾಗೂ ಹಲವು ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 40 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಈ ವೇಳೆ ಕಣಕುಂಬಿಯಲ್ಲಿ ಮಾತನಾಡಿದ ಗೋವಾ ಡೆಪ್ಯೂಟಿ ಸ್ಪೀಕರ್ ಮೈಕಲ್ ಲೋಬೋ, ನ್ಯಾಯಾಧೀಕರಣದ ಆದೇಶವನ್ನು ಕರ್ನಾಟಕ ಉಲ್ಲಂಘನೆ ಮಾಡಿದೆ. ಕರ್ನಾಟಕ ಸರ್ಕಾರ ನಿಯಮ ಉಲ್ಲಂಘನೆ ಮಾಡಿ ಗೋವಾಕ್ಕೆ ಹೋಗುವ ನೀರನ್ನು ತಡೆಯುವ ಯತ್ನ ಮಾಡಿದೆ. ನ್ಯಾಯಾಧೀಕರಣ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು. ಇದು ಕೇವಲ ಸಾಮಾನ್ಯ ಭೇಟಿ ಅಷ್ಟೇ ಎಂದು ಹೇಳಿದರು.

    ಮಹದಾಯಿ ನ್ಯಾಯಾಧೀಕರಣ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎನ್ನುವ ಆರೋಪದ ಹಿನ್ನೆಲೆ ಗೋವಾ ತಂಡದ ಈ ಭೇಟಿ ತೀವ್ರ ಕುತೂಹಲವನ್ನು ಉಂಟುಮಾಡಿದೆ. ಸ್ಥಳದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ, ಎಸ್ಪಿ ಉಪಸ್ಥಿತರಿದ್ದರು. ಮುಂಜಾಗೃತ ಕ್ರಮವಾಗಿ ಕಳಸಾ ನಾಲೆ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

    ಸಿಎಂ ಸ್ಪಷ್ಟನೆ: ಗೋವಾ ಸ್ಪೀಕರ್ ತಂಡದಿಂದ ಕಳಸಾ ನಾಲಾ ಯೋಜನೆ ವೀಕ್ಷಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಗೋವಾ ರಾಜ್ಯದಿಂದ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಅವರ ತಂಡ ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಬಂದಿದ್ದಾರೆ. ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜೊತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವುದರ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಸ್ಥಳ ವೀಕ್ಷಣೆ ಮಾಡಿ ಹೋಗಲಿ. ಆದರೆ ನಾವು ಯಾವುದೇ ಕಾಮಗಾರಿ ಮುಂದುವರೆಸಿಲ್ಲ. ನ್ಯಾಯಾಧೀಕರಣದ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.