Tag: ಪ್ರಮೋದಾದೇವಿ

  • ನಾಡಹಬ್ಬಕ್ಕೆ ಪ್ರಮೋದಾದೇವಿಯವರಿಗೆ ಎಸ್.ಟಿ.ಎಸ್ ಅಧಿಕೃತ ಆಹ್ವಾನ

    ನಾಡಹಬ್ಬಕ್ಕೆ ಪ್ರಮೋದಾದೇವಿಯವರಿಗೆ ಎಸ್.ಟಿ.ಎಸ್ ಅಧಿಕೃತ ಆಹ್ವಾನ

    ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಅವರನ್ನು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಂದು ಅಧಿಕೃತವಾಗಿ ಆಹ್ವಾನಿಸಿದ್ದಾರೆ.

    ರಾಜಮಾತೆಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿ ಆಹ್ವಾನ ನೀಡಲಾಯಿತು. ಸಚಿವರ ಆಹ್ವಾನ ಸ್ವೀಕರಿಸಿದ ಪ್ರಮೋದಾದೇವಿ ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರತಿವರ್ಷದ ಪದ್ಧತಿಯಂತೆ ದಸರಾ ಮಹೋತ್ಸವಕ್ಕೆ ರಾಜಮಾತೆಯವರನ್ನು ಆಹ್ವಾನಿಸಲಾಯಿತು. ದಸರಾಗೆ ಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅರಮನೆಯ ಕಾರ್ಯಕ್ರಮಗಳಿಗೂ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುವಂತೆ ಅವರೂ ಕೋರಿದರು. ಅದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದರು. ಇದನ್ನೂ ಓದಿ:   ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ಅ.7ರಿಂದ 15ರವರೆಗೆ ದಸರಾ ನಡೆಯಲಿದೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 400 ಜನರಿಗೆ ಅವಕಾಶ ನೀಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಯಾವುದೇ ನಿಬರ್ಂಧ ಇಲ್ಲ. ದೇವರ ದರ್ಶನ ಮಾಡುವವರು ಮಾಡಬಹುದು ಎಂದು ಹೇಳಿದರು. ಇದನ್ನೂ ಓದಿ:  ರಾಜ್ಯ ರಾಜಕಾರಣ ಬಿಟ್ಟು ನಾನು ಬರಲ್ಲ: ಸೋನಿಯಾ ಭೇಟಿಯ ಇನ್‌ಸೈಡ್‌ ಸುದ್ದಿ

    ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು, ಜಂಬೂ ಸವಾರಿ ನಡೆಯಲಿದೆ. ಇದರ ಹೊರತು ಬೇರೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಜಂಬೂ ಸವಾರಿ ವೀಕ್ಷಣೆಗೆ 500 ಜನರಿಗೆ ಅವಕಾಶವಿದ್ದು, ಯಾವರೀತಿ ಅವಕಾಶ ಕಲ್ಪಿಸಬೇಕು ಎಂಬುದರ ಕುರಿತಾಗಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಇದನ್ನೂ ಓದಿ: ಡಿಕೆಶಿ ಸಾಕ್ಷ್ಯ ವೇಳೆ ಸುಳ್ಯ ಕೋರ್ಟಲ್ಲಿ ಕೈ ಕೊಟ್ಟ ಕರೆಂಟ್! 

    ರಾಜಮಾತೆಗೆ ಆಹ್ವಾನ ನೀಡುವ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೂಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಪಾಲಿಕೆ ಆಯುಕ್ತರಾದ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಇತರೆ ಗಣ್ಯರು ಹಾಗೂ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.

  • ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ

    ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರಿ ನಡೆಯುತ್ತಿದ್ದ ವೇಳೆ ಅಂಬಾರಿ ವಾಲಿದ್ದು, ಅದನ್ನು ಸರಿ ಮಾಡಲು ರಾಜಮಾತೆ ಪ್ರಮೋದಾದೇವಿ ಕೈಸನ್ನೆ ಮಾಡಿದ್ದರು.

    ಮಂಗಳವಾರ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಜಂಬೂಸವಾರಿ ಆರಂಭಿಸಿದ ವೇಳೆ ಅಂಬಾರಿ ಕೊಂಚ ವಾಲಿತ್ತು. ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಮಾಡುವಂತೆ ಕೈಸನ್ನೆ ಮಾಡಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ನಂತರ ಹಗ್ಗದ ಸಹಾಯದಿಂದ ಆರಂಭದಿಂದ ಕೊನೆಯವರೆಗೂ ಜಂಬೂಸವಾರಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿತು. ಸಿಎಂ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡುತ್ತಿದ್ದ ವೇಳೆಯೂ ಅಂಬಾರಿಗೆ ಹಗ್ಗದ ಸಪೋರ್ಟ್ ನೀಡಲಾಗಿತ್ತು. ನಾಡಹಬ್ಬ ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಂಬಾರಿ ವಾಲಿದರೆ ನಾಡಿಗೆ ಕೆಡಕಾಗುತ್ತಾ ಎಂಬ ಆತಂಕ ಇದೀಗ ಶುರುವಾಗಿದೆ.

    750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು.

    ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.

    ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.

  • ಮೈಸೂರಿನಲ್ಲಿ ಖಾಸಗಿ ದರ್ಬಾರ್ ನ ಕೊನೆ ದಿನ- ವಜ್ರಮುಷ್ಠಿ ಕಾಳಗ, ವಿಜಯಯಾತ್ರೆಗೆ ಸಿದ್ಧತೆ

    ಮೈಸೂರಿನಲ್ಲಿ ಖಾಸಗಿ ದರ್ಬಾರ್ ನ ಕೊನೆ ದಿನ- ವಜ್ರಮುಷ್ಠಿ ಕಾಳಗ, ವಿಜಯಯಾತ್ರೆಗೆ ಸಿದ್ಧತೆ

    ಮೈಸೂರು: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಮತ್ತು ನಾದಿನಿ ನಿಧನದಿಂದ ರದ್ದಾಗಿದ್ದ ವಜ್ರಮುಷ್ಠಿ ಕಾಳಗ, ವಿಜಯಯಾತ್ರೆ ಮೆರವಣಿಗೆ ಇಂದು ನಡೆಯಲಿದೆ.

    ಬೆಳಗ್ಗೆ 8.45ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ಸಲ್ಲಿಕೆಯಾಗಲಿದ್ದು, 9.10 ರಿಂದ 10.15ರ ಒಳಗೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ಕಾಳಗ ಮುಗಿದ ನಂತ್ರ ಬೆಳ್ಳಿ ರಥದಲ್ಲಿ ಮಹಾರಾಜ ಯದುವೀರ್ ವಿಜಯಯಾತ್ರೆ ನಡೆಸಲಿದ್ದಾರೆ.

    ವಿಜಯಯಾತ್ರೆಯ ನಂತರ ಯದುವೀರ್ ಅರಮನೆಯೊಳಗಿನ ಭುವನೇಶ್ವರಿ ದೇವಾಲಯದಲ್ಲಿ ಬನ್ನಿ ಪೂಜೆ ಮಾಡಲಿದ್ದು, ನಂತ್ರ ಮೆರವಣಿಗೆ ಅರಮನೆಯತ್ತ ಸಾಗಲಿದೆ. ಅಲ್ಲಿಗೆ ಈ ವರ್ಷದ ದಸರಾ ಖಾಸಗಿ ದರ್ಬಾರ್ ಮುಕ್ತಾಯವಾಗಲಿದೆ. ಈ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿಜಯದಶಮಿ ದಿನವೇ ಅವರ ಪುತ್ರ ನಿಧನರಾಗಿ ಕಾರ್ಯಕ್ರಮ ರದ್ದಾಗಿ, ನಂತರದಲ್ಲಿ ಆಚರಿಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಯದುವಂಶದಲ್ಲಿ ಇಂತಹ ದಿನ ಮರುಕಳಿಸಿದೆ. ಇದನ್ನೂ ಓದಿ: ಭಾವುಕರಾದ ಯದುವೀರ್ ಒಡೆಯರ್

    ದಸರಾ ದಿನ ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ ವೇಳೆ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದರು. ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದೇ ದಿನ ಒಡೆಯರ್ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಸಿತ್ತು. ದಿ.ಶ್ರೀಕಂಠದತ್ತ ಒಡೆಯರ್ ಸಹೋದರಿ ವಿಶಾಲಾಕ್ಷಿ ಅವರು ವಿಧಿವಶರಾಗಿದ್ದರು.

    ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲಾಕ್ಷಿ (58) ಅವರು ಶುಕ್ರವಾರ ಸಂಜೆ ವೇಳೆಗೆ ಕೊನೆಯುಸಿರೆಳೆದಿದ್ದರು. ಅನಾರೋಗ್ಯದಿಂದ ವಿಶಾಲಾಕ್ಷಿ ಅವರು ಬಳಲುತ್ತಿದ್ದರು ಎನ್ನಲಾಗಿದ್ದು, ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=BsIcolSBl8Y

    https://www.youtube.com/watch?v=fV9i0nABh6U

  • ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ಬೆಂಗಳೂರು: ಇಂದು ನಾಡಿನಾದ್ಯಂತ ವಿಜಯ ದಶಮಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಆದ್ರೆ ಇಂದೇ ರಾಜಮಾತೆ ಪ್ರಮೋದಾದೇವಿ ಅವರ ತಾಯಿ 98 ವರ್ಷದ ಪುಟ್ಟ ಚಿನ್ನಮ್ಮಣ್ಣಿ ವಿಧಿವಶರಾಗಿದ್ದಾರೆ. ಜಂಬೂ ಸವಾರಿ ದಿನವೇ ರಾಜಮಾತೆಯ ತಾಯಿಯವರು ವಿಧಿವಶವಾಗಿದ್ದರಿಂದ ಅಪಶಕುನನಾ? ಅರಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗುತ್ತಾ..? ಜಂಬೂ ಸವಾರಿ ನಡೆಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ನಾಡಿನ ಜನರಲ್ಲಿ ಹುಟ್ಟಿಕೊಂಡಿವೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ, ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದ ಅರಮನೆಯಲ್ಲಿ ಸೂತಕವಾದ ವಾತಾವರಣ ನಿರ್ಮಾಣ ಆಗಲ್ಲ. ಪ್ರಮೋದಾದೇವಿಯವರ ತವರು ಮನೆ ಆಗಿದ್ದರಿಂದ ಅರಮನೆಗೆ ಸೂತಕ ಎಂಬ ಮಾತು ಬರಲ್ಲ. ಮೃತ ದೇಹದ ದರ್ಶನ ಪಡೆಯುವ ಮೊದಲು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ ಆಗಬಹುದು. ಆದ್ರೆ ದರ್ಶನ ಪಡೆದ ನಂತರ 5 ಅಥವಾ 11 ಅಥವಾ 13 ದಿನ ಜನರು ದೇವತಾ ದರ್ಶನ ಮತ್ತು ದೇವತಾ ಕಾರ್ಯ ಮಾಡಬಾರದು ಎಂಬುದು ನಮ್ಮ ಸಂಸ್ಕಾರಗಳಲ್ಲಿದೆ. ಜಂಬೂ ಸವಾರಿಯ ನಂತರ ದರ್ಶನ ಪಡೆತಯುತ್ತಾರಾ..? ಅಥವಾ ಧಾರ್ಮಿಕ ವಿಧಿ ವಿಧಾನಗಳಿಂದ ದೂರು ಉಳಿಯುತ್ತಾರಾ? ಎಂಬುದನ್ನು ಪ್ರಮೋದಾ ದೇವಿ ಅವರು ನಿರ್ಧರಿಸಬೇಕಿದೆ.

     

    ಪುಟ್ಟಚಿನ್ನಮ್ಮಣಿ ವಯೋಸಹಜ, ಪ್ರಕೃತ್ತಿದತ್ತವಾಗಿ ವಿಧಿವಶವಾಗಿದ್ದರಿಂದ ಅರಮನೆಗೆ ಸೂತಕದ ಛಾಯೆ ಬರೋದಿಲ್ಲ. ನಾಡ ಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾಡಿಗೆ ಕೆಡುಕು, ಒಳ್ಳೆಯದಾಗಲ್ಲ, ಅಪಶುಕನ ಎಂಬಿತ್ಯಾದಿ ಸುಳ್ಳು. ನಾಡಿನ ಜನರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ವಿಜಯದಶಮಿ ದಿನದಂದು ದೈವಾಧೀನರಾದ್ರೆ, ಆತ್ಮ ನೇರವಾಗಿ ಭಗವಂತನ ಪಾದಕ್ಕೆ ಸೇರುವ ಮೂಲಕ ಮೋಕ್ಷ ಸಿಗುತ್ತೆ ಎಂಬ ಧರ್ಮದಲ್ಲಿ ನಂಬಿಕೆ ಇದೆ. ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದ್ರೆ, ಒಂದು ಕಡೆ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ನಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಮೈಸೂರು: ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇಂದು ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಅವರು ಮೊಟಕುಗೊಳಿಸಿ ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

    ರಾಜವಂಶಸ್ಥೆ ವಿಶಾಲಾಕ್ಷಿ ದೇವಿಯವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ದಿಢೀರ್ ಆಗಿ ಪ್ರಮೋದಾದೇವಿ ಅವರು ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದಾರೆ. ವಿಶಾಲಕ್ಷಿದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿಯಾಗಿದ್ದು, ಸಂಬಂಧದಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ನಾದಿನಿಯಾಗಬೇಕು. ಆದ್ದರಿಂದ ನಾದಿನಿ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಹೊರಟಿದ್ದಾರೆ.

    ವಿಶಾಲಾಕ್ಷಿ ದೇವಿಯವರಿಗೆ ತೀವ್ರ ಅನಾರೋಗ್ಯದ ವಿಚಾರ ತಿಳಿದು ಆಯುಧ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರಮೋದಾದೇವಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದಸರಾ ಆಚರಣೆಗಳಲ್ಲೂ ರಾಜಮನೆತನ ಸರಳತೆಯನ್ನು ಕಾಯ್ದುಕೊಂಡಿದೆ. ವಿಶಾಲಾಕ್ಷಿದೇವಿಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದರ್ಶನ್ ಚಿತ್ರದ ಟೈಟಲ್‍ಗೆ ನಮಗೆ ಯಾವುದೇ ಆಕ್ಷೇಪವಿಲ್ಲ: ರಾಜಮಾತೆ ಪ್ರಮೋದಾದೇವಿ

    ದರ್ಶನ್ ಚಿತ್ರದ ಟೈಟಲ್‍ಗೆ ನಮಗೆ ಯಾವುದೇ ಆಕ್ಷೇಪವಿಲ್ಲ: ರಾಜಮಾತೆ ಪ್ರಮೋದಾದೇವಿ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ‘ಒಡೆಯರ್’ ಚಿತ್ರದ ಟೈಟಲ್ ವಿವಾದಕ್ಕೆ ರಾಜಮಾತೆ ಪ್ರಮೋದಾದೇವಿ ಪ್ರತಿಕ್ರಿಯಿಸಿದ್ದಾರೆ.

    ಒಡೆಯರ್ ಹೆಸರಿನ ಸಿನಿಮಾ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಚಿತ್ರಕ್ಕೆ ಒಡೆಯರ್ ಎಂದು ಹೆಸರಿಟ್ಟಿರಿವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನನ್ನ ಆಕ್ಷೇಪವಿದೆ ಎಂದು ಹೇಳಿದ್ದಾರೆ.

    ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದದ್ದು. ಒಡೆಯರ್ ಹೆಸರು ತುಂಬಾ ಜನ ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಬಂದರೆ ಅದಕ್ಕೆ ಆಕ್ಷೇಪವಿದೆ. ಈ ವಿಚಾರದಲ್ಲಿ ಒಡೆಯರ್ ಅಭಿಮಾನಿಗಳು ಕೊಟ್ಟಿರುವ ದೂರಿನ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಏನಿದು ವಿವಾದ?
    ನಟ ದರ್ಶನ ಅಭಿನಯದ `ಒಡೆಯರ್’ ಚಿತ್ರದ ಹೆಸರು ಬದಲಾವಣೆ ಮಾಡಬೇಕೆಂದು ಎರಡು ಸಂಘಟನೆಯ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ನಮಗೆ ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನಮ್ಮ ನಾಡಿನ ನೆಲ ಜಲ ವಿಚಾರದಲ್ಲಿ ಅವರ ಕೊಡುಗೆ ಅಪಾರವಿದೆ. ಮೈಸೂರು ಜನತೆ ಅರಸರನ್ನ ಭಗವಂತನ ರೀತಿ ಕಾಣುತ್ತೇವೆ. ಚಿತ್ರದಲ್ಲಿ ರೌಡಿಸಂ, ಹಾಸ್ಯ, ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿ ಪಡಿಸುವುದಾಗಿ ಎಚ್ಚರಿಸುತ್ತಿದ್ದೇವೆ ಎಂದು ಕನ್ನಡ ಕ್ರಾಂತಿದಳ ಸಂಘಟನೆ ಮೈಸೂರಿನ ಕೆ.ಆರ್. ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು.

    ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲೇ ಅರಸು ಯುವಜನ ವೇದಿಕೆ ಒಡೆಯರ್ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿತ್ತು. ಈ ಹಿಂದೆ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳದಿಂದ `ಒಡೆಯರ್ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿ ಈ ಶೀರ್ಷಿಕೆಯನ್ನ ಹಿಂಪಡೆಯುವಂತೆ ಆಗ್ರಹಿಸಿತ್ತು.

  • ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ಮೈಸೂರು: ಯದುವಂಶದ ಪ್ರಮೋದಾದೇವಿ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ಅವರೇ ಇಂದು ತೆರೆ ಎಳೆದಿದ್ದಾರೆ.

    ಮೈಸೂರಿನ ಅರಮನೆಯಲ್ಲಿ ಎಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ತುಂಬಾ ಜನ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ ಎಂದು ಪ್ರಮೋದಾದೇವಿ ತಿಳಿಸಿದರು.

    ಅಮೀತ್ ಶಾ ಭೇಟಿ ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದ್ದರು ಕೊಟ್ಟರೆ ತಕ್ಷಣ ನಿಮ್ಮನ್ನ ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಕೇವಲ ಜನರ ಪರವಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಹೇಳಿದರು.

    ನನ್ನ ಮಗ ಯದುವೀರ್‍ಗೆ ರಾಜಕೀಯ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿ ಅವರು ರಾಜಕೀಯಕ್ಕೆ ಬರಬೇಕಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರೂ ಎಂದು ಕೂಡ ಸ್ಪಷ್ಟಪಡಿಸಿದರು.

    ಇದೇ ವೇಳೆ ಪ್ರಮೋದಾ ದೇವಿ ಒಡೆಯರ್ ನಾ ರಾಜಕೀಯಕ್ಕೆ ಬರಬೇಕಾ ಬೇಡವಾ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ಈಗ ನಮ್ಮ ಕೆಲ ವಿಚಾರಗಳನ್ನು ಮಾಧ್ಯಮಗಳಲ್ಲೇ ತಿಳಿದುಕೊಳ್ಳುವಂತಾಗಿದೆ. ಹಾಗಾಗಿ ನೀವೇ ಹೇಳಿ ನಾ ರಾಜಕೀಯಕ್ಕೆ ಬರಬೇಕೇ? ಬೇಡವೇ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.

  • ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮಹಾರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಂದು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಯದುವಂಶದ ರಾಜ ಯದುವೀರ್ ದೇವಿಯ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

    ರಥೋತ್ಸವ ಬಳಿಕ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವ ಇದಾಗಿದೆ. ಈ ಬಾರಿ ದಸರಾ ಉತ್ಸವ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ. ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ ಎಂದು ಹೇಳಿದರು.

    ಇನ್ನು ಈ ಬಾರಿ ದಸರಾಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಉತ್ತಮವಾದ ಜೀವನ ನಡೆಸಲಿ ಎಂದರು.

    ಇನ್ನು ರಾಣಿ ತ್ರಿಷಿಕಾ ಸೀಮಂತ ಕಾರ್ಯದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ, ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜಮನೆತದ ಸೀಮಂತ ಕಾರ್ಯದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಸಂಪ್ರದಾಯಗಳ ಪ್ರಕಾರ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಚರ್ಚೆ ಬೇಡ ಎಂದರು.

    ಬಳಿಕ ಮಾತನಾಡಿದ ರಾಜ ಯದುವೀರ್, ಈ ಬಾರಿ ದಸರಾ ಯಶಸ್ವಿಯಾಗಿ ಆಚರಣೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಸಮಯಕ್ಕೆ ಸರಿಯಾಗಿ ನೇರವೇರಿವೆ. ಯಾವುದೇ ಅಡಚಣೆಗಳಿಲ್ಲದೇ ನೆರವೇರಿದೆ. ವಿಶ್ವವಿಖ್ಯಾತ ದಸರಾ ಸುಸೂತ್ರವಾಗಿ ನೆರವೇರಿದ್ದು ನಮಗೆ ಸಂತೋಷ ತಂದಿದೆ. ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ದೇವಿಗೆ ರಥೋತ್ಸವದ ಮೂಲಕ ಗೌರವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ ಎಂದರು.

    ಇನ್ನು ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಜೊತೆಗೆ ರಥ ದೇವಾಲಯದ ಸುತ್ತಾ ಒಂದು ಸುತ್ತು ಹಾಕಿತು. ಇದೇ ವೇಳೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.