Tag: ಪ್ರಮಾಣ ವಚನ ಕಾರ್ಯಕ್ರಮ

  • ರಾಜಭವನದಲ್ಲಿ ಏಕಾಂಗಿಯಾಗಿ ಓಡಾಡಿದ ‘ಹಳ್ಳಿಹಕ್ಕಿ’ ವಿಶ್ವನಾಥ್

    ರಾಜಭವನದಲ್ಲಿ ಏಕಾಂಗಿಯಾಗಿ ಓಡಾಡಿದ ‘ಹಳ್ಳಿಹಕ್ಕಿ’ ವಿಶ್ವನಾಥ್

    ಬೆಂಗಳೂರು: ಇಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಜೊತೆ ಈ ಹಿಂದೆ ಮುಂಬೈನಲ್ಲಿ ಒಟ್ಟಿಗೆ ಕೈ ಎತ್ತಿ ಹೆಚ್. ವಿಶ್ವನಾಥ್ ಸಮ್ಮಿಶ್ರ ಸರ್ಕಾರ ಕೆಡವಿದ್ದರು. ಆದರೆ ಇಂದು ಏಕಾಂಗಿಯಾಗಿ ರಾಜಭವನದಲ್ಲಿ ಓಡಾಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಶಾಸಕರ ಪಾತ್ರ ಪ್ರಮುಖವಾಗಿದೆ. ಹೀಗೆ ಬಿಜೆಪಿ ಸೇರಿದ 10 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಒಂದು ಕಡೆ ಅಧಿಕಾರ ಸಿಕ್ಕ ಖುಷಿಯಲ್ಲಿ ನೂತನ ಸಚಿವರಿದ್ದರೆ, ಇನ್ನೊಂದೆಡೆ ಹಳ್ಳಹಕ್ಕಿ ವಿಶ್ವನಾಥ್ ಅವರು ಏಕಾಂಗಿಯಾಗಿ ರಾಜಭವನದಲ್ಲಿ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

    ಏಕಾಂಗಿಯಾಗಿ ರಾಜಭವನದಲ್ಲಿ ವಿಶ್ವನಾಥ್ ಓಡಾಡುತ್ತಿದ್ದ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಬೆಂಬಲಿಗರು, ಕಾರ್ಯಕರ್ತರು ಯಾರೂ ಇಲ್ಲದೇ ಏಕಾಂಗಿಯಾಗಿ ವಿಶ್ವನಾಥ್ ಅವರು ರಾಜಭವನದಲ್ಲಿ ಓಡಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಧಿಕಾರ ಸಿಕ್ಕ ಮೇಲೆ ವಿಶ್ವನಾಥ್ ಜೊತೆಗಿದ್ದ ಶಾಸಕರು ಅವರನ್ನು ಒಂಟಿಯಾಗಿ ಬಿಟ್ಟು ಹೋದರಾ ಎಂಬ ಮಾತುಗಳು ಕೂಡ ಕೇಳಿಬಂದಿದೆ.

    ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸೇರಿದಂತೆ ಗೆದ್ದವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ನಾನೇನು ಅವಸರ ಮಾಡಲಾರೆ. ಇದೊಂದು ತರ ಸಿಎಂ ಅವರಿಗೂ ಸಂಕಟದ ಕಾಲ. ಒಂದಲ್ಲ ಒಂದು ದಿನ ಸಚಿವ ಸ್ಥಾನ ಸಿಗುತ್ತದೆ. ಸಿಎಂ ವಚನ ಭ್ರಷ್ಟರಾಗಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

    ಎಂಟಿಬಿ ನಾಗರಾಜ್, ವಿಶ್ವನಾಥ್ ಹಾಗೂ ಶಂಕರ್ ಅವರನ್ನು ಕರೆದು ಸಿಎಂ ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದಾರೆ. ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ, ತಾಳ್ಮೆಗೆಟ್ಟು ಹೇಳಿಕೆಗಳನ್ನು ಕೊಡಬಾರದು ಎಂದು ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಜೂನ್ ಬಳಿಕ ನಿಮಗೆ ಸೂಕ್ತ ಸ್ಥಾನ ಮಾನ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿರುವ ಹಿನ್ನೆಲೆ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಅವರು ಸುಮ್ಮನ್ನಿದ್ದಾರೆ ಎಂಬ ಚರ್ಚೆಗಳು ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

  • ಪ್ರಧಾನಿ ಮೋದಿ ವಿರುದ್ದ ಸಿಡಿದೆದ್ದ ಸಿಎಂ ಕುಮಾರಣ್ಣ

    ಪ್ರಧಾನಿ ಮೋದಿ ವಿರುದ್ದ ಸಿಡಿದೆದ್ದ ಸಿಎಂ ಕುಮಾರಣ್ಣ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿದೆದಿದ್ದಾರೆ. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಖರ್ಚಿನ ವಿವಾದಕ್ಕೆ ಟಾಂಗ್ ಕೊಡಲು ಸಿಎಂ ಸಿದ್ಧರಾಗುತ್ತಿದ್ದಾರೆ.

    ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದ ಖರ್ಚಿನ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಜೆಡಿಎಸ್ ಐಟಿ ಸೆಲ್ ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೇಶದ ಗಣ್ಯರು ಸೇರಿದಂತೆ ವಿದೇಶದ ರಾಜಕೀಯ ನಾಯಕರು ಸಹ ಆಗಮಿಸಿದ್ದರು. ಈ ಸಂಬಂಧ ಆರ್ ಟಿಐ ಮೂಲಕ ಮಾಹಿತಿ ಪಡೆದುಕೊಂಡು ಸಿಎಂ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ.

    ಆರ್ ಟಿಐ ಅರ್ಜಿಯ ಮಾಹಿತಿ ಅಂಶಗಳು:
    * ಪ್ರಮಾಣ ವಚನಕ್ಕೆ ಬಂದ ಗಣ್ಯರು ಉಳಿದ ಕೊಂಡಿದ್ದ ಹೋಟೆಲ್ ಯಾವವು? ಹೋಟೆಲ್‍ಗೆ ಖರ್ಚಾದ ಹಣ ಎಷ್ಟು? (ಎಲ್ಲಾ ಗಣ್ಯರ ಪ್ರತ್ಯೇಕ ಮಾಹಿತಿ ಊಟ ಇನ್ನಿತರ ಖರ್ಚು ಸೇರಿ)
    * ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹೂವಿನ ಬೊಕ್ಕೆಗೆ ಖರ್ಚಾದ ಹಣ ಎಷ್ಟು.?
    * ಮೋದಿ ಪ್ರಮಾಣ ವಚನದ ಖರ್ಚು ಭರಿಸಿದ್ದು ಯಾರು?
    * ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಳಸಿದ ಕಾರುಗಳು ಎಷ್ಟು? ಯಾವ ಯಾವ ಕಾರುಗಳನ್ನ ಬಳಸಲಾಗಿದೆ.? ಇದಕ್ಕೆ ಖರ್ಚಾದ ಹಣ ಎಷ್ಟು?
    * ಪ್ರಮಾಣ ವಚನ ಕಾರ್ಯಕ್ರಮದ ಭದ್ರತೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ.?
    * ಪ್ರಮಾಣ ವಚನ ಕಾರ್ಯಕ್ರಮ ಪ್ರಸಾರಕ್ಕೆ ಖರ್ಚಾದ ಹಣ ಎಷ್ಟು? (ಎಲ್ ಡಿ ಪರದೆ, ಧ್ವನಿ ವರ್ಧಕ ಇನ್ನಿತರ ಮಾಹಿತಿ)

    ಮೇ 23ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆದಿದ್ದ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಜಿ.ಪರಮೇಶ್ವರ್ 7 ನಿಮಿಷದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ರೂ. ಖರ್ಚಾಗಿದೆ ಎಂಬ ಮಾಹಿತಿ ಆರ್‍ಟಿಐ ನಲ್ಲಿ ಹೊರ ಬಂದಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ವಿರೋಧ ಪಕ್ಷದ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು.

    7 ನಿಮಿಷಕ್ಕೆ 42 ಲಕ್ಷ ಖರ್ಚು:
    ತಾಜ್‍ವೆಸ್ಟೆಂಡ್, ಶಾಂಗ್ರಿ ಹೋಟೆಲ್ ನಲ್ಲಿ ಮೇ 23, 24ರಂದು ಅತಿಥಿಗಳ ವಾಸ್ತವ್ಯ ಕಲ್ಪಿಸಲಾಗಿತ್ತು. ಊಟ, ಕಾಫಿ-ತಿಂಡಿಗೆ ಒಟ್ಟು 37,53,536 ರೂ. ಖರ್ಚು ಆಗಿದ್ದರೆ, ಸಂಜೆ ಟೀ, ಸ್ನಾಕ್ಸ್ ಪಾರ್ಟಿಗೆ 4,35,001 ರೂ. ಖರ್ಚಾಗಿದೆ. ಪ್ರಮಾಣವಚನ ಹೂಗುಚ್ಚಕ್ಕೆ 65 ಸಾವಿರ ರೂ. ಖರ್ಚಾಗಿತ್ತು.

    ಯಾರಿಗೆ ಎಷ್ಟು ಖರ್ಚು?
    * ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಸಿಎಂ- 8,72,493 ರೂ.
    * ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ – 1,85,287 ರೂ.
    * ಶರದ್ ಯಾದವ್, ಲೋಕತಾಂತ್ರಿಕ ಜನತಾದಳ ಪಾರ್ಟಿ – 1,67,457 ರೂ.
    * ಮಾಯಾವತಿ, ಬಿಎಸ್ ಪಿ ಅಧ್ಯಕ್ಷೆ – 1,41,443 ರೂ.

    * ಪಿಣರಾಯಿ ವಿಜಯನ್, ಕೇರಳ ಸಿಎಂ – 1,02,400 ರೂ.
    * ಅಖಿಲೇಶ್ ಯಾದವ್, ಎಸ್‍ಪಿ ಅಧ್ಯಕ್ಷ – 1,02,000 ರೂ.
    * ಅಶೋಕ್ ಗೆಹ್ಲೋಟ್, ರಾಜಸ್ತಾನ ಮಾಜಿ ಸಿಎಂ – 1,02,400 ರೂ.
    * ತೇಜಸ್ವಿ ಯಾದವ್, ಆರ್ ಜೆಡಿ ನಾಯಕ – 1,02,400 ರೂ.
    * ಕಮಲ್ ಹಾಸನ್, ಎಂಎನ್‍ಎಂ ಸಂಸ್ಥಾಪಕ – 1,02,040 ರೂ
    * ಶರದ್ ಪವಾರ್, ಎನ್‍ಸಿಪಿ ಅಧ್ಯಕ್ಷ – 64,000 ರೂ.

    * ಸೀತಾರಾಂ ಯೆಚೂರಿ, ಸಿಪಿಎಂ – 64,000 ರೂ.
    * ಬಾಬುಲಾಲ್ ಮರಾಂಡಿ, ಜಾರ್ಖಂಡ್ ಮಾಜಿ ಸಿಎಂ – 45,952 ರೂ.
    * ಹೇಮಂತ್ ಸೊರೇನ್, ಜಾರ್ಖಂಡ್ ಮಾಜಿ ಸಿಎಂ – 38,400 ರೂ.
    * ಅಸಾದುದ್ದೀನಿ ಓವೈಸಿ, ಎಐಎಂಐಎಂ ಅಧ್ಯಕ್ಷ – 38,400 ರೂ.
    * ಮಮತಾ ಬ್ಯಾನರ್ಜಿ ಖರ್ಚಿನ ಬಗ್ಗೆ ವಸತಿ ಇಲಾಖೆ ಮಾಹಿತಿ ಕೊಟ್ಟಿಲ್ಲ ( ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು.)

    2013ರ ಮೇ 13 ರಂದು ನಡೆದ ಸಿದ್ದರಾಮಯ್ಯ ಪ್ರಮಾಣವಚನಕ್ಕೂ, ಈ ವರ್ಷದ ಮೇ 17 ರಂದು ನಡೆದ ಯಡಿಯೂರಪ್ಪ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ಅತಿಥಿಗಳ ವಸತಿಗೆ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ವಸತಿ ಇಲಾಖೆ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv