Tag: ಪ್ರಮಾಣ ಪತ್ರ

  • ಎಸ್‍ಟಿ ಪ್ರಮಾಣಪತ್ರ ಸಿಗದ್ದಕ್ಕೆ ತಹಶೀಲ್ದಾರ್ ಕಛೇರಿ ಮುಂದೆ ಆತ್ಮಹತ್ಯೆಗೆ ಯತ್ನ

    ಎಸ್‍ಟಿ ಪ್ರಮಾಣಪತ್ರ ಸಿಗದ್ದಕ್ಕೆ ತಹಶೀಲ್ದಾರ್ ಕಛೇರಿ ಮುಂದೆ ಆತ್ಮಹತ್ಯೆಗೆ ಯತ್ನ

    ಕಲಬುರಗಿ : ಎಸ್ಟಿ ಪ್ರಮಾಣ ಪತ್ರ ಸಿಗದೆ ಇದ್ದಕ್ಕಾಗಿ ಮನನೊಂದ ವ್ಯಕ್ತಿಯೊಬ್ಬ ಅಫಜಲಪೂರ ತಹಶೀಲ್ದಾರ್ ಕಛೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶರಣಪ್ಪ ದಿವಾಣಜಿ ಎಂದು ಗುರುತಿಸಲಾಗಿದೆ. ಈತ ಅಫಜಲಪೂರ ತಾಲೂಕಿನ ಗೌರ ಬಿ ಗ್ರಾಮದವನಾಗಿದ್ದಾರೆ. ಎಸ್ಟಿ ಪ್ರಮಾಣ ಪತ್ರಕ್ಕಾಗಿ ಕೋಲಿ ಸಮಾಜದ ಶರಣಪ್ಪ ದಿವಾಣಜಿ ಅರ್ಜಿ ಸಲ್ಲಿಸಿದ್ದರು. ಪ್ರಮಾಣ ಪತ್ರ ನೀಡದ್ದಕ್ಕೆ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.

    ಶರಣಪ್ಪ ಪತ್ನಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದನು. ಎಸ್ಟಿ ಮೀಸಲು ವಾರ್ಡ್‍ನಿಂದ ಸ್ಪರ್ಧೆ ಬಯಸಿದ್ದ ಶರಣಪ್ಪ ಎಸ್ಟಿ ಪ್ರಮಾಣ ಪತ್ರ ಸಿಗದಿದ್ದಾಗ ತಹಶೀಲ್ದಾರ್ ಕಛೇರಿ ಮುಂದೆ ಕೋಲಿ ಸಮಾಜದವರ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಶರಣಪ್ಪ ಇದ್ದಕ್ಕಿದ್ದಂತೆಯೇ ವಿಷ ಸೇವಿಸಿದ್ದಾರೆ. ಪೊಲೀಸರು ಕೂಡಲೇ ಶರಣಪ್ಪರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

  • ಪೊಲೀಸರ ಸೀಲನ್ನೇ ನಕಲಿ ಮಾಡಿ ಸರ್ಟಿಫಿಕೇಟ್ – ಖತರ್ನಾಕ್ ಗ್ಯಾಂಗ್ ಅಂದರ್

    ಪೊಲೀಸರ ಸೀಲನ್ನೇ ನಕಲಿ ಮಾಡಿ ಸರ್ಟಿಫಿಕೇಟ್ – ಖತರ್ನಾಕ್ ಗ್ಯಾಂಗ್ ಅಂದರ್

    – 5 ರಿಂದ 10 ಸಾವಿರಕ್ಕೆ ಒಂದು ಪ್ರಮಾಣ ಪತ್ರ

    ಹಾಸನ: ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳ ನಕಲಿ ಪೊಲೀಸ್ ಸೀಲು ಬಳಸಿ ಪ್ರಮಾಣಪತ್ರ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಹಾಸನ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

    ಹಾಸನ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪರಮೇಶ್, ಮಹೇಶ, ಶ್ರೀಕಾಂತ್, ಪಾಂಡುರಂಗ ಮತ್ತು ಮಾದಪ್ಪ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಹುದ್ದೆಗೆ ಸೇರಲು ಸ್ಥಳೀಯ ಪೊಲೀಸ್ ಠಾಣೆಯ ಪ್ರಮಾಣಪತ್ರ ಬೇಕಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಪರಮೇಶ್, ಅಭ್ಯರ್ಥಿಗಳಿಂದ ಹಣ ಪಡೆದು ನಕಲಿ ಪೊಲೀಸ್ ಪ್ರಮಾಣಪತ್ರ ತಯಾರಿಸಿ ಕೊಡುತ್ತಿದ್ದ ಎನ್ನಲಾಗಿದೆ.

    ಒಂದು ಪ್ರಮಾಣಪತ್ರಕ್ಕೆ 5 ರಿಂದ 10 ಸಾವಿರ ಹಣ ಪಡೆದು ನಗರದ ಎಲ್ಲಾ ಪೊಲೀಸ್ ಠಾಣೆಯ ನಕಲಿ ಸೀಲ್ ಮಾಡಿಸಿಕೊಂಡು ಪ್ರಮಾಣಪತ್ರ ನೀಡುತ್ತಿದ್ದರು. ಇದಲ್ಲದೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ನಕಲಿ ಸೀಲನ್ನು ಬಳಸಿ ನಕಲಿ ಸಹಿ ಮಾಡಿಕೊಡುತ್ತಿದ್ದರು. ಇದೊಂದು ದೊಡ್ಡ ಜಾಲವೇ ಇದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ಮೇರೆಗೆ ನಾಲ್ವರನ್ನು ವಿಚಾರಣೆ ಮಾಡುತ್ತಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಮಾನ ಪ್ರಯಾಣಕ್ಕೆ ವೈದ್ಯರ ಪ್ರಮಾಣಪತ್ರ, ಮಾಸ್ಕ್, ಗ್ಲೌಸ್ ಕಡ್ಡಾಯ?

    ವಿಮಾನ ಪ್ರಯಾಣಕ್ಕೆ ವೈದ್ಯರ ಪ್ರಮಾಣಪತ್ರ, ಮಾಸ್ಕ್, ಗ್ಲೌಸ್ ಕಡ್ಡಾಯ?

    ನವದೆಹಲಿ: ಮುಂದಿನ ಕೆಲ ತಿಂಗಳುಗಳ ಕಾಲ ವಿಮಾನ ಪ್ರಯಾಣಕ್ಕೆ ವೈದ್ಯರ ಸರ್ಟಿಫಿಕೇಟ್ ಕಡ್ಡಾಯವಾಗುವ ಸಾಧ್ಯತೆಗಳು ಕಂಡು ಬಂದಿದೆ. ಡಾಕ್ಟರ್ ಪ್ರಮಾಣ ಪತ್ರದ ಜೊತೆಗೆ ಪ್ರಯಾಣದ ವೇಳೆ ಗ್ಲೌಸ್, ಮಾಸ್ಕ್ ಕಡ್ಡಾಯ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದಿದೆ.

    ಲಾಕ್‍ಡೌನ್ ಅವಧಿ ಅಂತ್ಯವಾಗಲು ಐದು ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಹಾರಾಟ ಪುನಾರಂಭಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ.

    ನಿಯಮಗಳ ಸಿದ್ಧಪಡಿಸುವ ನಿಟ್ಟಿನಲ್ಲಿ ವೈದ್ಯರು, ವಿಮಾನ ಕಂಪನಿಗಳ ಸಿಇಒಗಳು, ಕೇಂದ್ರ ಸರ್ಕಾರದ ಅಧಿಕಾರಿಗಳಿರುವ ಸಮ್ಮುಖದಲ್ಲಿ ತಾಂತ್ರಿಕ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ಮಾಹಿತಿಗಳ ಪ್ರಕಾರ. ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿದ ಮೇಲೆ ಕನಿಷ್ಠ ಮೂರು ತಿಂಗಳು ಕಾಲ ವೈದ್ಯರ ಪ್ರಮಾಣಪತ್ರ, ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುತೇಕ ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಈ ನಿಯಮಗಳು ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • ವಿವಿಧ ಪ್ರಮಾಣ ಪತ್ರಗಳ ಸೇವೆ ನೀಡುವುದರಲ್ಲಿ ರಾಜ್ಯದಲ್ಲೇ ರಾಮನಗರ ನಂಬರ್ 1

    ವಿವಿಧ ಪ್ರಮಾಣ ಪತ್ರಗಳ ಸೇವೆ ನೀಡುವುದರಲ್ಲಿ ರಾಜ್ಯದಲ್ಲೇ ರಾಮನಗರ ನಂಬರ್ 1

    ರಾಮನಗರ: ರಾಮನಗರ ಜಿಲ್ಲಾಡಳಿತವು ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನು ಸಾಬೀತು ಪಡಿಸುವ ಮೂಲಕ 2019ರ ನವೆಂಬರ್ ತಿಂಗಳಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರದ ಕಾರ್ಯ ಸಾಧನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.

    ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ರಾಜಕಾರಣಿಗಳ ರಾಜಕೀಯದ ಅಬ್ಬರದಿಂದ ಸಾಕಷ್ಟು ಸದ್ದು ಮಾಡಿದ್ದ ರೇಷ್ಮೆ ನಾಡು, ಇದೀಗ ಅರ್ಜಿ ವಿಲೇವಾರಿಯಲ್ಲಿಯು ಹೆಸರು ಮಾಡಿರುವುದು ವಿಶೇಷವಾಗಿದೆ.

    ಅಂದಹಾಗೇ ರಾಮನಗರ ಜಿಲ್ಲೆಯ ನಾಡಕಚೇರಿಗಳಲ್ಲಿ ನವೆಂಬರ್ 2019ರಿಂದ ತಿಂಗಳಿನಲ್ಲಿ ಸ್ವೀಕರಿಸಲಾಗಿರುವ 10,708 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.97.40ರಷ್ಟು ವಿಲೇವಾರಿ ಮಾಡುವ ದಾಖಲೆ ಬರೆದಿದೆ. ಈ ಮೂಲಕ 3.88 ಸಿಗ್ಮಾ ಮೌಲ್ಯವನ್ನು ಪಡೆದಿದ್ದು, 5.0 ವಿಲೇವಾರಿ ಸೂಚ್ಯಂಕದ ಪ್ರಕಾರ ರಾಮನಗರ 6.0 ಪಟ್ಟು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ ಮಾಡಿ ನವೆಂಬರ್ ನಲ್ಲಿ ರಾಜ್ಯದಲ್ಲೇ ನಂಬರ್ 1 ಆಗಿದೆ.

    ಅಂದಹಾಗೇ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ನಾಗರಿಕರಿಗೆ ವಿವಿಧ ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಚೇರಿ) ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು, ಜಾತಿ-ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯೂಟೇಷನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ 25ಕ್ಕೂ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ.

    ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವ ಬಗ್ಗೆ ಮಾಪನ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲಾಕಾರಿಗಳಿಗೆ ಪತ್ರ ಬರೆದಿದ್ದು, ಇದೇ ಮಾದರಿಯಲ್ಲಿ ಸರ್ಕಾರಿ ಯೋಜನೆಗಳು ನಿಗದಿತ ಅವಧಿಗೂ ಮುನ್ನ ಸಾರ್ವಜನಿಕರಿಗೆ ಸೇವೆ ನೀಡಲಿ ಎಂದು ತಿಳಿಸಿದ್ದಾರೆ.

  • ಸರ್ಟಿಫಿಕೇಟ್ ಕೊಡುವಲ್ಲಿ ಕೇಂದ್ರದ ಎಡವಟ್ಟು-ಕೇಳಿದ್ದೊಂದು… ಕೊಟ್ಟಿದೊಂದು..!

    ಸರ್ಟಿಫಿಕೇಟ್ ಕೊಡುವಲ್ಲಿ ಕೇಂದ್ರದ ಎಡವಟ್ಟು-ಕೇಳಿದ್ದೊಂದು… ಕೊಟ್ಟಿದೊಂದು..!

    ಬೆಂಗಳೂರು: ಆ ಕರ್ನಾಟಕದ ಯೋಧ, ಉಗ್ರರ ಎದೆಯಲ್ಲಿ ಭಯ ಹುಟ್ಟಿಸಿದ್ದ. ಎದುರಾಳಿಗಳ ದಾಳಿಗೆ ಹೆದರದೆ, ಮೂವತ್ತಕ್ಕೂ ಹೆಚ್ಚು ಉಗ್ರರನ್ನ ಸದೆಬಡಿದು, ಕೊನೆಗೂ ತಾವು ಅಮರವಾಗಿದ್ದರು. ಕರ್ತವ್ಯದಲ್ಲಿ ಮೃತಪಟ್ಟಿದ್ದ ಆ ಯೋಧನಿಗೆ ಕೇಂದ್ರ ಸರ್ಕಾರ ಹುತಾತ್ಮ ಅಂತ ಪ್ರಮಾಣ ಪತ್ರ ನೀಡಬೇಕಿತ್ತು. ಆದ್ರೆ ಕೇಂದ್ರ ಸರ್ಕಾರ ನೀಡಿದ್ದು ಮಾತ್ರ ಬೇರೆಯದ್ದೇ ಸರ್ಟಿಫಿಕೇಟ್.

    ಅಕ್ಟೋಬರ್ 20 ರಂದು ಮಣಿಪುರದ ಇಂಪಾಲ್ ನಲ್ಲಿ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ಯೋಧ ಉಮೇಶ್ ಎಂ ಹೆಳವರ್ ಉಗ್ರರ ಗ್ರಾನೈಟ್ ದಾಳಿಗೆ ಬಲಿಯಾಗಿದ್ರು. ಕರ್ತವ್ಯದಲ್ಲಿ ಮೃತಪಟ್ಟಿದ್ದ ಉಮೇಶ್ ಗೆ ಹುತಾತ್ಮ ಅಂತ ಸರ್ಟಿಫಿಕೇಟ್ ಕೊಡಬೇಕಿದ್ದ ಕೇಂದ್ರ ಗೃಹ ಇಲಾಖೆ, ಉಮೇಶ್ ಸಾವಿಗೆ ಲೇಟ್ ಡೆತ್ ಅಂತ ಸರ್ಟಿಫಿಕೇಟ್ ಕೊಟ್ಟಿದೆ. ಲೇಟ್ ಡೆತ್ ಅಂದ್ರೆ ಸಹಜ ಸಾವು ಎಂದರ್ಥ. ಕೇಂದ್ರ ಗೃಹ ಇಲಾಖೆ ಸಹಜ ಸಾವು ಅಂತ ಪ್ರಮಾಣ ಪತ್ರ ಕೊಟ್ರೆ, ಸಿಆರ್‍ಪಿಎಫ್‍ನ ಜನರಲ್ ಡೈರಕ್ಟರ್ ರಾಜೀವ್ ರಾಜ್ ಬಾಟ್ನಗರ್, ಶಹೀದ್ ಅಂತ ಪ್ರಮಾಣ ಪತ್ರ ನೀಡಿದ್ದಾರೆ. ಶಹೀದ್ ಅಂದ್ರೆ ಹುತಾತ್ಮ ಎಂದರ್ಥ. ಈ ಮೂಲಕ ಕೇಂದ್ರ ಗೃಹ ಇಲಾಖೆ ಎಡವಟ್ಟು ಮಾಡಿಕೊಂಡಿದೆ.

    ದೇಶಕ್ಕಾಗಿ ಪ್ರಾಣಬಿಟ್ಟ ಉಮೇಶ್ ಕುಟುಂಬಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಉಮೇಶ್ ಕುಟುಂಬ, ಮಗನನ್ನ ಕಳೆದುಕೊಂಡು ಅನಾಥವಾಗಿದೆ. ಇಷ್ಟಾದ್ರೂ ಅವ್ರ ಕುಟುಂಬಕ್ಕೆ ಯಾರು ಸ್ಪಂದಿಸದೇ ಇರೋದು ಬೇಸರದ ಸಂಗತಿ ಅಂತ ಮಾಜಿ ಯೋಧರ ಒಕ್ಕೂಟ ಅರಸೇನಾ ಪಡೆಯ ನಿವೃತ್ತ ಯೋಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೇಶದ ಭದ್ರತೆ, ರಕ್ಷಣೆಗಾಗಿ ಕರ್ತವ್ಯದಲ್ಲಿಯೇ ಮೃತಪಟ್ಟರೂ, ಕೇಂದ್ರ ಸರ್ಕಾರ ಮಾತ್ರ ಉಮೇಶ್ ಕುಟುಂಬಕ್ಕೆ, ಸಹಜ ಸಾವು ಅಂತ ಪ್ರಮಾಣ ಪತ್ರ ನೀಡಿರೋದು ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಕೇಂದ್ರದ ಈ ಎಡವಟ್ಟಿಗೆ ನಿವೃತ್ತ ಯೋಧರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೃತ ಯೋಧ ಉಮೇಶ್ ಕುಟುಂಬಕ್ಕೆ ಸೂಕ್ತ ಸೌಲಭ್ಯಗಳು ಸಿಗದಿದ್ದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv