Tag: ಪ್ರಬಂಧ ಸ್ಪರ್ಧೆ

  • ಸಮಾಜ ನಿರ್ಮಾಣಕ್ಕೆ ಶಿಕ್ಷಣ ಪೂರಕ: ಅಶ್ವತ್ಥ ನಾರಾಯಣ

    ಸಮಾಜ ನಿರ್ಮಾಣಕ್ಕೆ ಶಿಕ್ಷಣ ಪೂರಕ: ಅಶ್ವತ್ಥ ನಾರಾಯಣ

    ಬೆಂಗಳೂರು: ಶಿಕ್ಷಣ, ಸಾಮಾಜಿಕ ಸ್ಥಾನ ಮಾನಕ್ಕೆ ಸೀಮಿತವಾಗದೆ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

    ನಗರದಲ್ಲಿ ಮಿಥಿಕ್ ಸೊಸೈಟಿ ಹಾಗೂ ಸಮರ್ಥ ಭಾರತ ವತಿಯಿಂದ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ‘ಬಿ ಗುಡ್ ಡು ಗುಡ್’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

    ಹಿಂದೆ ಗುರುಕುಲ ಪದ್ಧತಿ ಇದ್ದಾಗ ಪರಿಸರ, ಆಚಾರ ವಿಚಾರಗಳ ಮೂಲಕ ಶಿಕ್ಷಣ ಪಡೆದು ಸಾಕಷ್ಟು ಜ್ಞಾನ, ತಿಳುವಳಿಕೆಯನ್ನು ಹೊಂದಿದ್ದರು. ಈಗ ಶಿಕ್ಷಣ ಸಂಸ್ಥೆಗಳ ಮುಖಾಂತರ ಶಿಕ್ಷಣ ಪಡೆಯುವ ವ್ಯವಸ್ಥೆ ಇದೆ. ಸಾಕಷ್ಟು ಸೌಲಭ್ಯವಿದ್ದರೂ ಒಳ್ಳೆ ಕೆಲಸಗಳ ಜೊತೆಗೆ ಕೆಟ್ಟ ಕೆಲಸವನ್ನು ಹೆಚ್ಚು ಮಾಡುತ್ತಿದ್ದೇವೆ. ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳದೇ ಇರುವುದೇ ಸಮಸ್ಯೆಗಳು ಉದ್ಭವಿಸಲು ಕಾರಣವಾಗಿದೆ ಎಂದರು.

    ಎಷ್ಟೇ ಮೂಲ ಸೌಕರ್ಯಗಳನ್ನು ನೀಡಿದರೂ ಅದು ಕೇವಲ ಭೌತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗುತ್ತದೆ. ವೈಯಕ್ತಿಕ ಜ್ಞಾನ ಬೆಳೆಯಬೇಕಾದರೆ ಯುವಕರು ವಿವೇಕಾನಂದರ ಸ್ಫೂರ್ತಿದಾಯಕ ಬದುಕನ್ನು ಅಳವಡಿಸಿಕೊಳ್ಳಬೇಕು. ವಿದೇಶದವರು ಭಾರತದ ಸಂಸ್ಕೃತಿ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಭಾರತದಲ್ಲಿ ಸಂಶೋಧನೆ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ನಾವು ಶಿಕ್ಷಣವನ್ನು ಪದವಿಗೋಸ್ಕರ ಪಡೆಯುತ್ತಿದ್ದೇವೆ. ಶಿಕ್ಷಣ ಕೇವಲ ಸಾಮಾಜಿಕ ಸ್ಥಾನಮಾನಕ್ಕೆ ಸೀಮಿತವಾಗದೆ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು ಎಂದು ತಿಳಿಸಿದರು.

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿದ್ಯಾಶಂಕರ ಮಾತನಾಡಿ ಭಾರತವನ್ನು ತಿಳಿದುಕೊಳ್ಳಬೇಕಾದರೆ ವಿವೇಕಾನಂದರನ್ನು ಓದಬೇಕು ಎಂದು ರವೀಂದ್ರನಾಥ್ ಠಾಗೋರ್ ಬಣ್ಣಿಸಿದ್ದರು. ಅದರಂತೆ ವಿವೇಕಾನಂದರು ದೇಶದ ಬಗ್ಗೆ ದೂರದೃಷ್ಟಿ ಹೊಂದಿದ್ದರು. ತನ್ನ ಭವಿಷ್ಯವನ್ನು ತನ್ನ ಸಾಮಥ್ರ್ಯದ ಮೂಲಕ ತಾನೆ ಕಟ್ಟಿಕೊಳ್ಳಬೇಕು ಆಗ ಮಾತ್ರ ವ್ಯಕ್ತಿಯು ತನ್ನ ಗುರಿ ತಲುಪಲು ಸಾಧ್ಯ ಎಂಬುದು ವಿವೇಕಾನಂದರ ನಂಬಿಕೆಯಾಗಿತ್ತು. ವಿವೇಕಾನಂದರು ಮಹಿಳೆಯರ ಮೇಲೆ ವಿಶೇಷ ಗೌರವ ಹೊಂದಿದ್ದರು. ಸ್ತ್ರೀಯರನ್ನು ಬಲ ಪಡಿಸಿದರೆ ರಾಷ್ಟ್ರವೂ ಬಲಿಷ್ಠವಾಗುತ್ತದೆ ಎಂಬ ಅವರ ಕನಸಿನಂತೆ ಈಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದರು.

    ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿಯ ಕಿತ್ತೂರಿನ ವಿಜಯಾ ಪಾಟೀಲ್ ಪ್ರಥಮ ಸ್ಥಾನ, ಬೆಂಗಳೂರಿನ ಪೂಜಾ ಡಿ.ಎಸ್ ದ್ವಿತೀಯ, ತುಮಕೂರಿನ ಭಾಗ್ಯಲಕ್ಷ್ಮೀ ಬಿ.ಆರ್ ತೃತೀಯ ಸ್ಥಾನ ಪಡೆದಿದ್ದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಬಹುಮಾನ ವಿತರಿಸಿದರು. ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ.ನಾಗರಾಜ್, ಸಮರ್ಥ ಭಾರತದ ಮಾರ್ಗದರ್ಶಿ ನಾ.ತಿಪ್ಪೇಸ್ವಾಮಿ, ಪ್ರೊ.ನರಹರಿ ಸೇರಿದಂತೆ ಮತ್ತಿತರರು ಹಾಜರಿದ್ದರು.