Tag: ಪ್ರಧಾನಿ ನಿಧಿ

  • ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಮುಂಬೈ: ಐಪಿಎಲ್‍ನಲ್ಲಿ ಕೋಲ್ಕತ್ತಾ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಎರಡನೇ ಅಲೆಯ ನಡುವೆ ಭಾರತದಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನಿಧಿಗೆ 50,000 ಡಾಲರ್ (37 ಲಕ್ಷ ರೂ.) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಕಮ್ಮಿನ್ಸ್, ನಾನು ಭಾರತ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ಕಳೆದ ಹಲವು ವರ್ಷಗಳಿಂದ ನಾನು ಭಾರತಕ್ಕೆ ಬರುತ್ತಿದ್ದೇನೆ. ಬಂದಾಗಲೆಲ್ಲಾ ಇಲ್ಲಿನ ಜನ ಪ್ರೀತಿ, ವಾತ್ಸಲ್ಯದಿಂದ ಸಲಹುತ್ತಿದ್ದಾರೆ. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಜನ ಬಳಲುತ್ತಿದ್ದಾರೆ. ಇದನ್ನು ಕಂಡು ನನಗೆ ತುಂಬಾ ದುಖಃವಾಗುತ್ತಿದೆ ಎಂದಿದ್ದಾರೆ.

    ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ಐಪಿಎಲ್ ಪಂದ್ಯಾಟಗಳು ನಡೆಯುತ್ತಿರುವುದನ್ನು ಕಂಡು ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಭಾರತೀಯರಿಗೆ ಲಾಕ್‍ಡೌನ್ ಮಧ್ಯೆ ಕೆಲ ಕಾಲ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡಲು ಐಪಿಎಲ್ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಾನೊಬ್ಬ ಆಟಗಾರನಾಗಿ ನನ್ನನ್ನು ಇಷ್ಟಪಡುವ ಜನರಿಗೆ ಸಹಾಯದ ಹಸ್ತ ಚಾಚಲು ಬಯಸುತ್ತೇನೆ. ಹಾಗಾಗಿ ಭಾರತದ ಪ್ರಧಾನಿ ಅವರ ನಿಧಿಗೆ ದೇಣಿಗೆ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗಾಗಿ ಈ ಹಣ ನೀಡಲು ಮುಂದಾಗಿದ್ದೇನೆ. ನಾನು ಇತರ ಐಪಿಎಲ್‍ನ ಸಹ ಆಟಗಾರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡುತ್ತೇನೆ. ನಾನು ಈಗಾಗಲೇ 50,000 ಡಾಲರ್‍ ಗಳನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದು ತಿಳಿಸಿದರು.

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕಮ್ಮಿನ್ಸ್ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 5 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ ಒಟ್ಟು 82 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕಮ್ಮಿನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 66ರನ್ (34 ಎಸೆತ, 4 ಬೌಂಡರಿ, 6ಸಿಕ್ಸ್) ಸಿಡಿಸಿ ಮಿಂಚಿದ್ದರು.

  • ಕೊರೊನಾ ವಿರುದ್ಧದ ಹೋರಾಟಕ್ಕೆ 51 ಕೋಟಿ ದೇಣಿಗೆ ನೀಡಿದ ಬಿಸಿಸಿಐ

    ಕೊರೊನಾ ವಿರುದ್ಧದ ಹೋರಾಟಕ್ಕೆ 51 ಕೋಟಿ ದೇಣಿಗೆ ನೀಡಿದ ಬಿಸಿಸಿಐ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ನೆರವಾಗಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಧಾನ ಮಂತ್ರಿ ನಿಧಿಗೆ 51 ಕೋಟಿ ರೂಗಳ ಧನಸಹಾಯ ಮಾಡಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಭೀತಿಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರಗೆ ಲಾಕ್‍ಡೌನ್ ಮಾಡಿದ್ದಾರೆ. ಇದರಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ದೇಶ ಹೊರಬರಲೆಂದು ದೊಡ್ಡ ದೊಡ್ಡ ಉದ್ಯಮಿಗಳು, ಕ್ರಿಕೆಟಿಗರು, ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ಬಿಸಿಸಿಐ ಕೂಡ ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ 51 ಕೋಟಿ ನೀಡಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ, ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ ನಾವು 51 ಕೋಟಿಯನ್ನು ದೇಣಿಗೆ ನೀಡುತ್ತಿದ್ದೇವೆ ಎಂದು ಬರೆದುಕೊಂಡಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಹಲವಾರು ಕ್ರಿಕೆಟಿಗರು ಕೈಜೋಡಿಸುತ್ತಿದ್ದ, ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು, ತಮ್ಮ ಮೂರು ತಿಂಗಳ ಶಾಸಕ ಸಂಭಳ ಮತ್ತು ಬಿಸಿಸಿಐ ಪಿಂಚಣಿಯನ್ನು ದೇಣಿಗೆಯಾಗಿ ನೀಡಿದ್ದರು.

    ಇಂದು ಟ್ವೀಟ್ ಮಾಡಿರುವ ಕ್ರಿಕೆಟಿಗ ಸುರೇಶ್ ರೈನಾ ಅವರು, ಕೊರೊನಾ ವೈರಸ್ ಅನ್ನು ತಡೆಗಟ್ಟಲು ನಮ್ಮ ಕೈಯಲ್ಲಿ ಆದ ಸಹಾಯವನ್ನು ದೇಶಕ್ಕೆ ಮಾಡಬೇಕಿದೆ. ನಾನು ಕೂಡ 52 ಲಕ್ಷ ರೂ. ಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇನೆ. ಅದರಲ್ಲಿ 31 ಲಕ್ಷವನ್ನು ಪ್ರಧಾನಿ ಅವರ ನಿಧಿಗೆ ಮತ್ತು ಉಳಿದ 21 ಲಕ್ಷವನ್ನು ಉತ್ತರ ಪ್ರದೇಶದ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನಿಮ್ಮ ಕೈಯಲ್ಲಿ ಆದ ಸಹಾಯವನ್ನು ನೀವು ಮಾಡಿ ಎಂದು ಟ್ವೀಟ್ ಮಾಡಿದ್ದರು.

    ಕ್ರಿಕೆಟಿಗರ ಜೊತೆಗೆ ಸಿನಿಮಾ ನಟ-ನಟಿಯರು ಕೂಡ ದೇಶಕ್ಕಾಗಿ ಧನಸಹಾಯ ಮಾಡುತ್ತಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 25 ಕೋಟಿ ದೇಣಿಗೆ ನೀಡಿದ್ದಾರೆ. ಇವರಂತೆ ಸೂಪರ್ ಸ್ಟಾರ್ ರಜನೀಕಾಂತ್, ನಟ ಅಲ್ಲು ಅರ್ಜುನ್, ಪ್ರಭಾಸ್, ಪವನ್ ಕಲ್ಯಾಣ್, ನಿತಿನ್, ಮಹೇಶ್ ಬಾಬು, ರಾಮ್ ಚರಣ್, ಹೃತಿಕ್ ರೋಷನ್, ಕಪಿಲ್ ಶರ್ಮಾ ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.