Tag: ಪ್ರತ್ಯೇಕ ಲಿಂಗಾಯತ ಧರ್ಮ

  • ಪ್ರತ್ಯೇಕ ಹೋರಾಟ, ಕೂಗು ಪದಗಳನ್ನು ಬಳಸಿಲ್ಲ: ಎಂ.ಬಿ ಪಾಟೀಲ್

    ಪ್ರತ್ಯೇಕ ಹೋರಾಟ, ಕೂಗು ಪದಗಳನ್ನು ಬಳಸಿಲ್ಲ: ಎಂ.ಬಿ ಪಾಟೀಲ್

    ಬೆಂಗಳೂರು: ಈ ಹಿಂದೆ ನಾವು ವೀರಶೈವ ಒಳಗೊಂಡಂತೆ 99 ಉಪ ಪಂಗಡಗಳನ್ನು ಸೇರಿಸಿ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೇಳಿದ್ದೆವು. ಮುಂದಿನ ಚುನಾವಣೆ ನಂತರ ನಾವೆಲ್ಲ ಒಗ್ಗೂಡಿ ಮುನ್ನಡೆಯುತ್ತೇವೆ ಎಂದು ಹೇಳಿದ್ದೆ. ಇಲ್ಲಿ ಪ್ರತ್ಯೇಕ ಹೋರಾಟ, ಕೂಗು ಈ ಶಬ್ದಗಳನ್ನು ನಾನು ಬಳಸಿಯೇ ಇಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಂಚೆ ಮಾಡಿದರೆ ಇದಕ್ಕೆ ಮತ್ತೆ ರಾಜಕೀಯ ಬಣ್ಣ ನೀಡಿ, ಅಪಪ್ರಚಾರ ಮಾಡುತ್ತಾರೆ. ಈ ಕಾರಣಕ್ಕೆ ಬರುವ ಚುನಾವಣೆ ನಂತರದಲ್ಲಿ ನಾವು ಪಂಚಪೀಠಾಧಿಶರು, ವೀರಕ್ತಮಠಗಳು, ವೀರಶೈವ ಮಹಾಸಭಾ, ಜಾಗತೀಕ ಲಿಂಗಾಯತ ಮಹಾಸಭಾ ಕೂಡಿ ಚರ್ಚೆ ಮಾಡಿ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮುಂದುವರೆಯುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿದ್ದೆ. ಈಗ ನಾವು ಒಂದಾಗುವಾಗ ಅಥವಾ ಒಂದಾದರೆ ಇದು ಯಾರಿಗೆ ಮತ್ತು ಏಕೆ ಸಮಸ್ಯೆ ಎಂದು ಪ್ರಶ್ನಿಸಿದರು.

    ನಾನು ಚುನಾವಣೆ ನಂತರ ಎಂದು ಹೇಳಿದ್ದನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದರಿಂದ ಬೇರೆ ಸಂದೇಶ ಹೋಗಿದೆ. ಈಗ ಯಾವುದೇ ಹೋರಾಟ, ಕೂಗು ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಒಳ್ಳೆಯದಾಗಬೇಕು. ಸಮಾಜದ ಮಠಗಳು, ಶಿಕ್ಷಣ ಸಂಸ್ಥೆಗಳಿಗೂ ಒಳಿತಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಠದ ಎಲ್ಲಾ ಶ್ರೀಗಳು, ಪಂಚಪೀಠಾಧೀಶರು, ವೀರಶೈವ ಮಹಾಸಭೆ, ಜಾಗತೀಕ ಲಿಂಗಾಯತ ಮಹಾಸಭಾ ಸೇರಿದಂತೆ ಸಮಾಜದ ಎಲ್ಲ ಗಣ್ಯರನ್ನು ಒಳಗೊಂಡು ಸಮಾಜಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

    ಸಾಮೂಹಿಕ ನಾಯಕತ್ವ:
    ಈ ವಿಚಾರದಲ್ಲಿ ನಾನು ನಾಯಕತ್ವ ವಹಿಸುವುದಿಲ್ಲ. ನಾನು ಎರಡು ಹೆಜ್ಜೆ ಹಿಂದಿಟ್ಟು, ಸಾಮೂಹಿಕ ನಾಯಕತ್ವದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೂ ಗೊತ್ತಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ನಾವು ಹಿಂದೆ ಹೋರಾಟ ಮಾಡಿದ್ದಾಗ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ, ಅಲ್ಪಸಂಖ್ಯಾತರ ಸ್ಥಾನಮಾನ, ಇತರೆ ಸೌಲಭ್ಯಗಳು ಸಿಗುತ್ತಿದ್ದವು. ಎಂಜಿನಿಯರಿಂಗ್, ಮೆಡಿಕಲ್ ಮತ್ತು ಡೆಂಟಲ್ ಶಿಕ್ಷಣದಲ್ಲಿ ಶೇ.50ರಷ್ಟು ಮೀಸಲಾತಿ ಸಿಗುತ್ತಿತ್ತು. ಯುಪಿಎಸ್‍ಸಿ ಯಿಂದ ಕೆಪಿಎಸ್‍ಸಿ ಯವರಿಗೆ ಕೇಂದ್ರದಿಂದ ರಾಜ್ಯದವರೆಗೆ ಉದ್ಯೋಗಗಳಲ್ಲಿ ಮೀಸಲಾತಿ ದೊರಕುತಿತ್ತು. ಆದರೆ ಅಂದು ಸಮಯದ ಅಭಾವದಿಂದ ಮತ್ತು ಗಡಿಬಿಡಿಯಲ್ಲಿ ನಮ್ಮಿಂದಲೂ ಸಣ್ಣ ಪುಟ್ಟ ಲೋಪದೋಷದಿಂದ ಆ ಕೆಲಸ ಆಗಲಿಲ್ಲ. ಅಂದು ಚುನಾವಣೆ ಹತ್ತಿರವಿದ್ದ ಸಂದರ್ಭದಲ್ಲಿ ಇದಕ್ಕೆ ರಾಜಕೀಯ ಬಣ್ಣ ನೀಡಿದರು ಎಂದು ಹೇಳಿದರು.

    ಈ ಹಿಂದೆ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ವೀರಶೈವ ಮಹಾಸಭೆಯವರು ಮನವಿ ಸಲ್ಲಿಸಿದ್ದರು. ಆದರೆ ಶಬ್ದದ ತಾಂತ್ರಿಕ ಬಳಕೆಯ ತೊಂದರೆಯಿಂದಾಗಿ ಆ ಬೇಡಿಕೆ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಿದ್ದೇವು. ಈ ಹೋರಾಟವನ್ನು ಮೊದಲು ಬೀದರ ಮತ್ತು ಬೆಳಗಾವಿಯಲ್ಲಿ ಆರಂಭ ಮಾಡಲಾಗಿತ್ತು. ಅದರ ನಂತರ ನಾನು ಹೋರಾಟದಲ್ಲಿ ಪಾಲ್ಗೊಂಡಿದ್ದೆ ಹೊರತು ನಾನು ಈ ಹೋರಾಟವನ್ನು ಆರಂಭಿಸಿರಲಿಲ್ಲ ಎಂದರು. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

    ಒಂದು ವೇಳೆ ಈಗಾಗಲೇ ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ನಮ್ಮ ಉಪಪಂಗಡಗಳು 2ಎ ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಪಂಚಮಸಾಲಿ ಸೇರಿದಂತೆ ಬಹುತೇಕ ಎಲ್ಲ ಸಮಾಜಗಳು ಕೃಷಿ ಆಧಾರಿತ ಜೀವನ ಸಾಗಿಸುತ್ತೀವೆ. ಅವರಲ್ಲೂ ಬಡತನವಿದೆ. ಈ ಹಿನ್ನೆಲೆಯಲ್ಲಿ ಕೂಡಲಸಂಗಮ ಮತ್ತು ಹರಿಹರ ಸ್ವಾಮಿಜಿಗಳು ಹೋರಾಟ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಈ ಸ್ವಾಮಿಜಿಗಳು ನಡೆಸಿದ ಹೋರಾಟದಲ್ಲಿ ನಾನು ಕೂಡ ಚಿತ್ರದುರ್ಗಕ್ಕೆ ತೆರಳಿ ಪಾಲ್ಗೊಂಡು, ನ್ಯಾಯಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು.

    ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಬೇಡಿಕೆಗಳಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಈ ಹಿಂದೆಯೂ ಸಂಬಂಧವಿರಲಿಲ್ಲ. ಇಂದೂ ಸಂಬಂಧವಿಲ್ಲ. ಮುಂದೆಯೂ ಸಂಬಂಧವಿರಲ್ಲ. ಈ ವಿಷಯದಲ್ಲಿ ಯಾರಲ್ಲಿಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ನಾವು ಈಗ ಒಗ್ಗಟ್ಟಾಗುತ್ತಿದ್ದೇವೆ. ಇದರಲ್ಲಿ ಯಾರಿಗೆ ತೊಂದರೆ ಆಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೂ ಮಾಹಿತಿ ನೀಡಿದ್ದೇನೆ ಎಂದರು. ಇದನ್ನೂ ಓದಿ: ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ: ಸತೀಶ್ ಜಾರಕಿಹೊಳಿ ವಿಶ್ವಾಸ

    ಈ ಮಧ್ಯೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆ ದೃಷ್ಟಿಯಿಂದ ಈ ವಿಚಾರ ಪ್ರಸ್ತಾಪಿಸುತ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನಲ್ಲಿ 113 ಸ್ಥಾನಗಳನ್ನು ಗೆದ್ದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಸಮುದಾಯ, ಯಾವುದೇ ಪಕ್ಷಗಳಲ್ಲಿ ನಾವೇ ನಾಯಕರಾಗುತ್ತೇವೆ ಎಂದರೆ ಸಾಧ್ಯವಿಲ್ಲ. ಜನ ಒಪ್ಪಿ ಬೆಂಬಲ ನೀಡಿದಾಗ ಮಾತ್ರ ನಾವು ನಾಯಕರಾಗುತ್ತೇವೆ. ನಾನು ಈ ಹಿನ್ನೆಲೆಯಲ್ಲಿಯೇ ಚುನಾವಣೆಯ ನಂತರ ಸಭೆ ಸೇರುತ್ತೇನೆ ಎಂದು ಹೇಳಿದ್ದೇನೆ. ಈಗಲೇ ಹೇಳಿದರೆ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬ ಪರಿಜ್ಞಾನವು ನನಗೆ ಇದೆ ಎಂದು ಉತ್ತರಿಸಿದರು.

    ತಾವು ಹೋರಾಟದಿಂದ ಹೆದರಿ ಹಿಂದೆ ಸರಿಯುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ತಂದೆ-ತಾಯಿ ಬಿಟ್ಟು ಯಾರಿಗೂ ಹೆದರಲ್ಲ. ನಾನು ಈ ಹಿಂದೆಯೂ ತಪ್ಪು ಮಾಡಿಲ್ಲ. ಇಂದು ಮಾಡಿಲ್ಲ. ಮುಂದೆಯೂ ತಪ್ಪು ಮಾಡಲ್ಲ. ಬೀದರನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮನದಾಳದ ಮಾತನ್ನು ಹೇಳಿದ್ದೇನೆ. ಕಳೆದ ಹೋರಾಟದ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳಿಂದ ಪೆಟ್ಟು ತಿಂದಿದ್ದೇನೆ. ಅಧಿಕಾರ ಕಳೆದುಕೊಂಡಿದ್ದೇನೆ ಎಂದು ಅಂದು ಮನದಾಳದ ಮಾತನ್ನು ಹೇಳಿದ್ದೇನೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಅಜಂಡಾ ಇಲ್ಲ ಎಂದು ಸ್ಪಷ್ಟ ಪಡಿಸಿದರು.

    ಈ ಕುರಿತು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೀರಾ? ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ವಿಚಾರವಿಲ್ಲ. ಆದ್ಯಾಗ್ಯೂ ಯಡಿಯೂರಪ್ಪನವರು ನಮ್ಮ ಸಮಾಜದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು. ಚುನಾವಣೆ ನಂತರ ಆ ಸಂದರ್ಭ ಬಂದಾಗ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.  ಇದನ್ನೂ ಓದಿ: ಮಾನಸಿಕವಾಗಿ ಚಿಕ್ಕಮಗಳೂರಿನ ಬಾಲಕಿಗೆ ಎಷ್ಟು ಘಾಸಿಯಾಗಿರಬಹುದು: ರಮ್ಯಾ ಕಿಡಿ

    ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ? ಎಂದು ಕೆಲವರು ನೀಡಿರುವ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮುಜುಗರ ಆಗುವುದಿಲ್ಲ. ಈ ಹಿಂದೆ ನಾನು ಹೋರಾಟ ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಹಿನ್ನೆಡೆ ಆಗಿಲ್ಲ. 2008ರಲ್ಲಿ ಹಾಗೂ 2013ರಲ್ಲಿ ಬಂದಷ್ಟೆ ಲಿಂಗಾಯತ ಮತಗಳು 2018ರಲ್ಲಿಯೂ ಬಂದಿದ್ದನ್ನು ದಾಖಲೆ ಸಮೇತ ಈ ಹಿಂದೆಯೆ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಈ ಹೋರಾಟದಲ್ಲಿ ತಮ್ಮನ್ನು ಕೆಲವರು ಬೆಂಬಲಿಸುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನನ್ನ ಹೇಳಿಕೆ ಸ್ಪಷ್ಟವಾಗಿದೆ. ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬದು ನನಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೂ ನನ್ನ ಹೇಳಿಕೆಗೂ ಈ ಹಿಂದೆಯೂ ಯಾವುದೇ ಸಂಬಂಧವಿಲ್ಲ, ಇಂದು ಸಂಬಂಧವಿಲ್ಲ. ಮುಂದೆಯೂ ಸಂಬಂಧವಿಲ್ಲ. ಡ್ಯಾಮೆಜ್ ಕೂಡ ಆಗಲ್ಲ. ವೀರಶೈವ-ಲಿಂಗಾಯತರು ಒಂದಾಗಿ ಹೋದರೆ ಕಾಂಗ್ರೆಸ್‍ಗೆ ಏನು ಸಮಸ್ಯೆಯಾಗುತ್ತೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಕ್ರಮವಾಗಿ ರಸಗೊಬ್ಬರ ಮಾರಾಟ- 97 ಯೂರಿಯಾ ಚೀಲ ವಶಕ್ಕೆ

  • ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಬಾಗಲಕೋಟೆ: ಪೇಜಾವರ ಶ್ರೀಗಳಿಗೆ ಲಿಂಗಾಯತ ಧರ್ಮದ ಆಳ ಅರಿವು ತಿಳಿದಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂಬ ಪೇಜಾವರಶ್ರೀಗಳ ಹೇಳಿಕೆಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, 40 ವರ್ಷಗಳಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೋರಾಟ ನಡೆಯುತ್ತಿದೆ. ಪೇಜಾವರ ಶ್ರೀಗಳಿಗೆ ಇಂದಿಗೂ ಲಿಂಗಾಯತ ಧರ್ಮದ ಬಗ್ಗೆ ಅರಿವಾಗಿಲ್ಲ ಎಂದು ಹರಿಹಾಯ್ದರು.

    ಲಿಂಗಾಯತ ಧರ್ಮದ ಬಗ್ಗೆ ಲಿಂಗೈಕ್ಯ ಮಾತೆ ಮಹಾದೇವಿ ಅವರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಮಾತೆ ಮಹಾದೇವಿ ಅವರು ಚರ್ಚೆಗೆ ಆಹ್ವಾನಿಸಿದಾಗ ಪೇಜಾವರ ಶ್ರೀಗಳು ಎಂದೂ ಬರಲಿಲ್ಲ. ಈಗ ಮಾತೆ ಮಹಾದೇವಿಯವರು ಬಿತ್ತಿದ ಬೀಜವಾಗಿ ನಾವು ಲಕ್ಷಾಂತರ ಜನರಿದ್ದೇವೆ ಎಂದು ತಿಳಿಸಿದ್ದಾರೆ.

    ಚರ್ಚೆಗೆ ಸಿದ್ಧ: ಪೇಜಾವರ ಶ್ರೀಗಳು ಎಲ್ಲಿಯಾದರೂ ವೇದಿಕೆ ಸಿದ್ದಪಡಿಸಲಿ, ನಾವು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ ಅವರು, ಮಾತೆ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಲಿಂಗಾಯತ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವುಗಳನ್ನು ಪೇಜಾವರ ಶ್ರೀಗಳಿಗೆ ಕೊಡುತ್ತೇವೆ ಅವರು ಅಧ್ಯಯನ ಮಾಡಲಿ ಎಂದು ಕುಟುಕಿದರು.

  • ಸೋನಿಯಾಗೆ ಎಂಬಿಪಿ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅರೆಸ್ಟ್

    ಸೋನಿಯಾಗೆ ಎಂಬಿಪಿ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅರೆಸ್ಟ್

    ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲಿ ಮಾಡಿದ ಪ್ರಕರಣ ಸಂಬಂಧ ಪತ್ರಕರ್ತರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಹಿರಿಯ ಪತ್ರಕರ್ತ ಹೇಮಂತ್ ಕುಮಾರ್ ಬಂಧಿತ ಆರೋಪಿ. ಈ ಪ್ರಕರಣದ ಸಂಬಂಧ ಈಗಾಗಲೇ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಯ ಬಂಧನವಾಗಿತ್ತು. ವಿಚಾರಣೆ ವೇಳೆ ಹೇಮಂತ್ ಕುಮಾರ್ ಸಲಹೆಯಂತೆ ನಕಲಿ ಲೆಡರ್ ಹೆಡ್ ರಚಿಸಲಾಯಿತು ಎಂದು ಮಹೇಶ್ ಹೆಗ್ಡೆ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹೇಮಂತ್ ಕುಮಾರ್ ಬಂಧನವಾಗಿದೆ.

    ಹೇಮಂತ್ ಕುಮಾರ್ ಬಂಧನವನ್ನು ಬಿಜೆಪಿ ಖಂಡಿಸಿದ್ದು, ಶಾಸಕ ಸುರೇಶ್ ಕುಮಾರ್, ಬಿಜೆಪಿ ಮುಖಂಡ ಅಶ್ವಥ್ ನಾರಾಯಣ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.

    ಶಾಸಕ ಸುರೇಶ್ ಕುಮಾರ್ ಅವರು, ಒಡೆಯುವ-ಹೊಡೆಯುವ ಮಾತುಗಳನ್ನೇ ಆಡುವ ಬೇಳೂರು ಗೋಪಾಲಕೃಷ್ಣ,  ಪ್ರೊ. ಭಗವಾನ್ ರಂತಹವರನ್ನು ಬಿಟ್ಟು ನನ್ನ ಪತ್ರಕರ್ತ ಗೆಳೆಯ ಹೇಮಂತ್ ಕುಮಾರ್ ಅವರನ್ನು ಬಂಧಿಸಿರುವ ಗೃಹಸಚಿವರ Conditional ಕಾರ್ಯವೈಖರಿಯನ್ನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಏನಿದು ಪ್ರಕರಣ?:
    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

    ಈ ಪ್ರಕರಣದ ಹಿನ್ನೆಲೆಯಲ್ಲಿ ಪೋಸ್ಟ್ ಕಾರ್ಡ್ ಪತ್ರಿಕೆ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಬಂಧನವಾಗಿತ್ತು. ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಬಂಧನವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

  • ಎಂಬಿಪಿ, ವಿನಯ್ ಕುಲಕರ್ಣಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಯುವತಿ ಅರೆಸ್ಟ್

    ಎಂಬಿಪಿ, ವಿನಯ್ ಕುಲಕರ್ಣಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಯುವತಿ ಅರೆಸ್ಟ್

    ಧಾರವಾಡ: ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಯುವತಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

    ಧಾರವಾಡ ಜಿಲ್ಲೆಯ ಗರಗ ಗ್ರಾಮದ ನಿವಾಸಿ ಶೃತಿ ಬೆಳ್ಳಕ್ಕಿ (24) ಬಂಧಿತ ಯುವತಿ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಶೃತಿ, ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರ ವಿರುದ್ಧ ಮಾತನಾಡಿದ್ದ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಸ್ಥಳೀಯ ಕಾಂಗ್ರೆಸ್ ಮುಖಂಡ ದಶರಥ ದೇಸಾಯಿ ಅವರು ಶೃತಿ ಬೆಳ್ಳಕ್ಕಿ ವಿರುದ್ಧ ಚುನಾವಾಣಾ ಆಯೋಗಕ್ಕೆ ದೂರು ನೀಡಿದ್ದರು. ಮತದಾನಕ್ಕೂ ಮುನ್ನವೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೂಡ ದಾಖಲಾಗಿದೆ. ರಾಜಕೀಯ ನಾಯಕರ ವಿರುದ್ಧ ಶೃತಿ ಬೆಳ್ಳಕ್ಕಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಸಮುದಾಯ, ವರ್ಗ ಹಾಗೂ ಧರ್ಮಗಳ ಮಧ್ಯೆ ವೈರತ್ವ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಡಿಯೋದಲ್ಲಿ ಏನಿತ್ತು?
    ನಾನು ಭಾರತೀಯಳು ಹಾಗೂ ಹಿಂದೂ ವೀರಶೈವ ಲಿಂಗಾಯತ ಧರ್ಮದ ಯುವತಿ. ಸಚಿವ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಅವರು ನಮ್ಮ ಜಾತಿಯವರು. ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರವು ಬಹಿರಂಗವಾಗಿದೆ ಎಂದು ಶೃತಿ ಬೆಳ್ಳಕ್ಕಿ ಹೇಳಿದ್ದಳು.

    ಒಡೆದು ಆಳುವ ನೀತಿಯ ಮೂಲಕ ಹಿಂದೂ ಧರ್ಮವನ್ನು ನಿರ್ನಾಮ ಮಾಡಿ, ಭಾರತವನ್ನು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ರಾಷ್ಟ್ರವಾಗಿ ಮಾರ್ಪಡಿಸುವ ಉದ್ದೇಶವು ಪತ್ರದಲ್ಲಿದೆ. ಹಿಂದೂ ಧರ್ಮದ ಉಪಜಾತಿಯಲ್ಲಿ ಬರುವ ಎಂ.ಬಿ.ಪಾಟೀಲ ಅವರು ಇಂತಹದ್ದಕ್ಕೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಹಿಂದೂ ಧರ್ಮ ನಿರ್ನಾಮವಾಗಲಿದೆ ಎಂದು ತಿಳಿಸಿದ್ದಳು.

    ಎಂ.ಬಿ.ಪಾಟೀಲ್ ಅವರಂತಹ ಸ್ವಾರ್ಥ ರಾಜಕಾರಣಿಗಳಿಂದ ದೇಶ ನಾಶವಾಗುತ್ತಿದೆ. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕೆಲವು ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಹಣ ಸಹಾಯ ಮಾಡಿದ್ದಾರೆ. ಆರ್ ಎಸ್‍ಎಸ್ ದೇಶದಲ್ಲಿ ಹಿಂದುತ್ವವನ್ನು ಬಲಗೊಳಿಸುತ್ತಿದೆ. ಅವರಿಗೆ ಬಿಜೆಪಿ ಬೆಂಬಲ ಸಿಕ್ಕಿದೆ. ಹೀಗಾಗಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಶೃತಿ ಬೆಳ್ಳಕ್ಕಿ ಆರೋಪಿಸಿದ್ದಳು.

  • ಸಿಐಡಿಯಿಂದ ಪೋಸ್ಟ್‌ಕಾರ್ಡ್‌ ಸಂಪಾದಕ ಮಹೇಶ್ ಹೆಗ್ಡೆ ಅರೆಸ್ಟ್

    ಸಿಐಡಿಯಿಂದ ಪೋಸ್ಟ್‌ಕಾರ್ಡ್‌ ಸಂಪಾದಕ ಮಹೇಶ್ ಹೆಗ್ಡೆ ಅರೆಸ್ಟ್

    – ಸರ್ಕಾರದ ವಿರುದ್ಧ ಬಿಜೆಪಿ ಖಂಡನೆ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನಕಲಿ ಪತ್ರ ವೈರಲ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ಘಟಕದ ಪೊಲೀಸರು ಪೋಸ್ಟ್‌ಕಾರ್ಡ್‌.ಕಾಂ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ಆರೋಪಿಯನ್ನು ಬಂಧಿಸಿದೆ.

    ಮಹೇಶ್ ವಿಕ್ರಂ ಹೆಗ್ಡೆ ಈ ಹಿಂದೆ ಜೈನ ಮುನಿ ಯೋರ್ವರ ಕುರಿತು ದೇಶಾದ್ಯಂತ ವೈರಲ್ ಆಗಿದ್ದ ಸುದ್ದಿಯೊಂದನ್ನು ಟ್ವೀಟ್ ಮಾಡಿದ್ದರು. ಆ ಸುದ್ದಿಯ ಕುರಿತಾಗಿ ಗಫರ್ ಬೇಗ್ ಎನ್ನುವವರು ಕೇಸ್ ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಾತ್ರೋರಾತ್ರಿ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಮಹೇಶ್ ಹೆಗ್ಡೆ ಅವರನ್ನು ಕೋರ್ಟ್ ಬಿಡುಗಡೆ ಮಾಡಿತ್ತು.

    ಸರ್ಕಾರದ ವಿರುದ್ಧ ಖಂಡನೆ:
    ಸರ್ಕಾರ ಮಹೇಶ್ ಹೆಗ್ಡೆ ಅವರನ್ನು ಬಂಧಿಸಿದನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ. ಗಾಂಧಿ ಕುಟುಂಬದ ಸುಳ್ಳನ್ನು ಬಹಿರಂಗ ಪಡಿಸಿದ್ದಕ್ಕೆ ಮಹೇಶ್ ಹೆಗ್ಡೆಯನ್ನು ಬಂಧಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

    https://twitter.com/ShobhaBJP/status/1120957950531522560

    ಬಿಜೆಪಿ ಕಾಯಕರ್ತರ ವಿರುದ್ಧ ದುರುದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಸರ್ಕಾರ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿದೆ. ಯಾವುದೇ ಕಾರಣ ಇಲ್ಲದೇ ವಿಕ್ರಂ ಹೆಗ್ಡೆಯನ್ನು ಸರ್ಕಾರ ಬಂಧಿಸಿದೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

  • ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

    ಲಿಂಗಾಯತ ವಿಚಾರದಲ್ಲಿ ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿಕೆಶಿ ಯಾರು: ಎಂ.ಬಿ.ಪಾಟೀಲ್ ಪ್ರಶ್ನೆ

    ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರವಾಗಿ ಮಾತನಾಡಿದ್ದ ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಏನು ಅಧಿಕಾರವಿದೆ? ಕ್ಷಮೆ ಕೇಳಲು ಅವರು ಯಾರು? ಅವರಿಗೂ ಲಿಂಗಾಯತ ಧರ್ಮಕ್ಕೂ ಏನು ಸಂಬಂಧ? ಅವರೇನು ಕೆಪಿಸಿಸಿ ಅಧ್ಯಕ್ಷರೇ? ಡಿ.ಕೆ.ಶಿವಕುಮಾರ್ ಮೊದಲು ತಮ್ಮ ಸಮುದಾಯದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ ಎಂದು ಗುಡುಗಿದರು.

    ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ನಾನು ಚುನಾವಣೆಯಲ್ಲಿ ಬಳಸಿಕೊಂಡಿಲ್ಲ. 2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ಬಗ್ಗೆ ಹೇಳಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ಯಾಕೆ ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ? ಈ ವಿಚಾರವಾಗಿ ಈಗ ಮಾತನಾಡಿ ಪಕ್ಷಕ್ಕೆ ಮುಜುಗುರ ಉಂಟು ಮಾಡುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸುದ್ದಿಗೋಷ್ಠಿ ಕರೆದು ಸರಿಯಾದ ಉತ್ತರ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ನಾಯಕರಿಗೆ, ಹೈಕಮಾಂಡಿಗೆ ದೂರು ನೀಡುತ್ತೇನೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡುತ್ತೇನೆ. ಸಚಿವರು ಈ ಹಿಂದೆಯೂ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಪ್ರತ್ಯೇಕ ಲಿಂಗಾಯದ ಧರ್ಮದ ವಿಚಾರವಾಗಿ ಕ್ಷಮೆ ಕೇಳಿದ್ದರು. ಇದನ್ನು ಬಳ್ಳಾರಿಯಲ್ಲಿ ಪುನರುಚ್ಛರಿಸಿದ್ದಾರೆ. ಹೀಗೆ ಹೇಳಿಕೆ ನೀಡುವುದ ಹಿಂದೆ ಹಿಡನ್ ಅಜೆಂಡಾ ಇದೆ. ಅಷ್ಟೇ ಅಲ್ಲದೆ ಮೂರು ಬಲವಾದ ಕಾರಣಗಳಿವೆ. ಅದನ್ನು ಚುನಾವಣೆ ಬಳಿಕ ಬಹಿರಂಗ ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಿ.ಕೆ.ಶಿವಕುಮಾರ್ ಹೇಳಿದ್ದೇನು?:
    ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿ ಸೋಮವಾರ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದ್ದರು.

    ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.

  • ಜಾತಿ ವಿಚಾರಕ್ಕೆ ಕೈಹಾಕಿದ್ದಕ್ಕೆ ಜನ್ರು ನಮ್ಮ ಕಪಾಳಕ್ಕೆ ಬಾರಿಸಿದ್ರು: ಡಿಕೆಶಿ

    ಜಾತಿ ವಿಚಾರಕ್ಕೆ ಕೈಹಾಕಿದ್ದಕ್ಕೆ ಜನ್ರು ನಮ್ಮ ಕಪಾಳಕ್ಕೆ ಬಾರಿಸಿದ್ರು: ಡಿಕೆಶಿ

    – ಬಹಿರಂಗವಾಗಿ ಕ್ಷಮೆಯಾಚಿಸಿದ ಸಚಿವರು
    – ಇನ್ನು ಯಾವುದೇ ಕಾರಣಕ್ಕೆ ಜಾತಿ ವಿಚಾರದಲ್ಲಿ ಕೈ ಹಾಕಲ್ಲ

    ಬಳ್ಳಾರಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕೈಹಾಕಿದ್ವಿ. ಆದರೆ ಜನರು ನಮ್ಮ ಕಪಾಳಕ್ಕೆ ಬಾರಿಸಿದರು ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಹೂವಿನಹಡಗಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಬಿಜೆಪಿಯವರು ಒಂದು ಧರ್ಮದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರೋ ಏನೋ ಹೇಳಿದರೂ ಅಂತ ನನ್ನ ಸೇರಿದಂತೆ ನಮ್ಮ ಪಕ್ಷದ ಕೆಲವರು ವೀರಶೈವರ ವಿಚಾರಕ್ಕೆ ಕೈ ಹಾಕಿದ್ವಿ. ಈ ಮೂಲಕ ಪ್ರತ್ಯೇಕ ಧರ್ಮ ಮಾಡಲು ತೀರ್ಮಾನ ಮಾಡಿದ್ವಿ. ಅದಕ್ಕೆ ಜನ ನಮ್ಮ ಕಪಾಳಕ್ಕೆ ಹೊಡೆದರು. ಹೀಗಾಗಿ ನಿಮಗೂ ಹಾಗೂ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕ್ಷಮೆಯಾಚಿಸಿದರು.

    ಇನ್ನೆಂದೂ ಕಾಂಗ್ರೆಸ್ ಜಾತಿ, ಧರ್ಮದ ವಿಚಾರದಲ್ಲಿ ಕೈಹಾಕುವುದಿಲ್ಲ. ನಿಮ್ಮ ಕ್ಷಮೆ ಇರಲಿ. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇನೆ. ಹೀಗಾಗಿ ಈ ಹಿಂದೆ ಆಗಿರುವುದನ್ನು ಮರೆತು ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

    ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿಯಾಗಿದೆ. ದೇಶದಲ್ಲಿ ಜಾತ್ಯಾತೀತತೆ ತತ್ವ ಉಳಿಸಲು ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ನಾನು ಹೋಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆಗೆ ಮಾತನಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 22ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಈ ಮೂಲಕ ಬಿಜೆಪಿ ಒಂದು ಅಂಕಿ ದಾಟದಂತೆ ಕಟ್ಟಿ ಹಾಕುತ್ತೇವೆ ಎಂದು ಹೇಳಿದರು.

    ಈಶ್ವರಪ್ಪ ಅಂತ ಒಬ್ಬರಿದ್ದಾರೆ. ಅವರು ವಿರೋಧ ಪಕ್ಷ ನಾಯಕರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಯ ನಂತರ ನೆಗೆದು ಬೀಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಸಂಸ್ಕಾರ, ಸಂಸ್ಕೃತಿ ಇದೆಯಾ ಎಂದು ಪ್ರಶ್ನಿಸಿ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

    ಬಳ್ಳಾರಿ ಜನರು ಬಿಜೆಪಿ ಶಾಸಕರಾದ ಶ್ರೀರಾಮುಲು, ಕರುಣಾಕರ ರೆಡ್ಡಿ, ಜೆ.ಶಾಂತಾ ಅವರನ್ನು ಮೂರು ಬಾರಿ ಗೆಲ್ಲಿಸಿ ಕಳಿಸಿದಿರಿ. ಅವರು ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ? ಈಗ ಶ್ರೀರಾಮುಲು ಅವರು ಕುಸ್ತಿ ಆಡುವುದನ್ನು ಬಿಟ್ಟು ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹೊರಾಟ ಮಾಡಿದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಅವರಿಗೆ ರೆಸ್ಟ್ ನೀಡಿದ್ದಾರೆ. ಅವರಂತೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ರೆಸ್ಟ್ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗುತ್ತೇನೆ ಅಂತ ಕನಸು ಕಾಣುತ್ತಿದ್ದಾರೆ. ನಾವೇನು ಕಡ್ಲೆಕಾಯಿ ತಿನ್ನುತ್ತೇವಾ? ಈ ರಾಜ್ಯದಲ್ಲಿ ಇನ್ನೂ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.

    ಡಿಕೆ ಶಿವಕುಮಾರ್ ಹೇಳಿದ್ದು ಏನು?
    2018ರ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಸಮಯದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆ ಶಿವಕುಮಾರ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತನಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದಿದ್ದರು.

  • ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    – ಮೂರು ಪ್ರಶ್ನೆಗಳಿಗೆ ಪಂಚಪೀಠ ಶ್ರೀಗಳು ಉತ್ತರಿಸಿಲಿ: ಎಸ್.ಎಂ ಜಾಮದಾರ್ ಸವಾಲು

    ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು ಆರೋಪಿಸಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿ ಬಳಿಕ ಮಾತನಾಡಿದ ಶ್ರೀಗಳು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವುದು ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ದೂರಿದರು.

    ಜೈನರು ಹಾಗೂ ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಆದರ ಈಗ ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ? ಲಿಂಗಾಯತರು ದೇಶಪ್ರೇಮಿಗಳು ದೇಶದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

    ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್ ಅವರು ಮಾತನಾಡಿ, ಲಿಂಗಾಯತ ಧರ್ಮ ಹಾಳಾಗಿದ್ದೇ ಪಂಚಪೀಠದ ಶ್ರೀಗಳಿಂದ ಎಂದು ಗಂಭೀರ ಆರೋಪ ಮಾಡಿದರು. ಪಂಚಪೀಠ ಶ್ರೀಗಳಿಗೆ ಜಾಮದಾರ್ 3 ಪ್ರಶ್ನೆಗಳನ್ನು ಉತ್ತರಿಸುವಂತೆ ಕೇಳಿದ್ದಾರೆ.

    ಪಂಚಪೀಠ ಶ್ರೀಗಳು ತಮ್ಮ ಮಠಗಳಲ್ಲಿ ಬಸವಣ್ಣನವರ ಫೋಟೋ ಹಾಕಿಕೊಂಡಿದ್ದಾರೆ. ಕಳೆದ 200 ವರ್ಷಗಳಿಂದ ಸುಮಾರು 160ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಸಿದ್ದಾರೆ. ಆ ಪುಸ್ತಕಗಳ ಮೂಲಕ ಬಸವಣ್ಣನವರ ಹಾಗೂ ಅವರ ಜೊತೆಗಿದ್ದ ಶರಣದ ಚಾರಿತ್ರ್ಯವದೆಯನ್ನು ಮಾಡಿದ್ದಾರೆ. ನೀವು ಹೀಗೆ ಮಾಡಿದ್ದು ಯಾಕೆ? ಇದಕ್ಕೆ ಪಂಚಪೀಠ ಶ್ರೀಗಳು ಉತ್ತರ ನೀಡಿಲಿ ಎಂದು ಆಗ್ರಹಿಸಿದರು.

    ನಿಮ್ಮ ಧರ್ಮ ಪ್ರಚಾರಕ್ಕಾಗಿ ಲಿಂಗಾಯತ ಧರ್ಮವನ್ನು ಭ್ರಷ್ಟಗೊಳಿಸಿದ್ದಿರಿ. ಆದರೆ ಈಗ ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಆಗಬೇಕೆಂದು ಯಾಕೆ ಹೇಳುತ್ತಿರಿ? ಎಂದ ಅವರು, ನನ್ನ ಮೂರನೇ ಪ್ರಶ್ನೆ ನೀವು ಬ್ರಾಹ್ಮಣರೋ, ವೀರಶೈವ ಬ್ರಾಹ್ಮಣರೋ? ಲಿಂಗಾಯತರೋ? ಎನ್ನುದನ್ನು ಸ್ಪಷ್ಟಪಡಿಸಿ ಎಂದು ಪಂಚಪೀಠ ಶ್ರೀಗಳಿಗೆ ಕೇಳಿದರು.

    ನೀವು ಲಿಂಗಾಯತರು ಬಸವಾದಿ ಶರಣರ ತತ್ವ ಒಪ್ಪುವುದಾದರೆ ನಾವು ಗೌರವಯುತವಾಗಿ ಸ್ವಾಗತಿಸುತ್ತೇವೆ. ಆದರೆ ಬಸವಣ್ಣನವರ ಚಾರಿತ್ರ್ಯವದೆ ಮಾಡಿ ಅಮಾಯಕ ಜನರ ದಾರಿತಪ್ಪಿಸುವ ಕೆಲವನ್ನು ಮಾಡಬಾರದು ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಬಸವಣ್ಣನವರ ಅನುಯಾಯಿಗಳ ಎಲ್‍ಟಿಟಿಇ ವರ್ಗಕ್ಕೆ ಸೇರಿದವನು: ಶಾಸಕ ಬಿ.ನಾರಾಯಣ್

    ನಾನು ಬಸವಣ್ಣನವರ ಅನುಯಾಯಿಗಳ ಎಲ್‍ಟಿಟಿಇ ವರ್ಗಕ್ಕೆ ಸೇರಿದವನು: ಶಾಸಕ ಬಿ.ನಾರಾಯಣ್

    ಬೀದರ್: ನಾನು ಬಸವಣ್ಣನವರ ಅನುಯಾಯಿಗಳಲ್ಲಿ ಎಲ್‍ಟಿಟಿಇ ವರ್ಗಕ್ಕೆ ಸೇರಿದವನು ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 17ನೇ ಕಲ್ಯಾಣ ಪರ್ವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಮಾತನಾಡಿದ ಶಾಸಕರು, ಬಸವಣ್ಣನವರ ಅನುಯಾಯಿಗಳಲ್ಲಿ ಹಲವಾರು ವರ್ಗಗಳಿವೆ. ಅದರಲ್ಲಿ ನಾನು ಎಲ್‍ಟಿಟಿಇ ವರ್ಗಕ್ಕೆ ಸೇರಿದವನು. ಪ್ರಾಣ ಕೊಡುತ್ತೇವೆ ಇಲ್ಲವೇ ಗುರಿ ಮುಟ್ಟುತ್ತೇವೆ. ನಾನು ಬಂದು ಹೋಗುವ ಗಿರಾಕಿ ಅಲ್ಲಾ ಎಂದು ಕಿಡಿಕಾರಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಘೋಷಿಸಿದರೆ ರಾಜ್ಯಕ್ಕೆ ಮೊದಲ ಗೌರವ ಸಲ್ಲುತ್ತದೆ. ಕ್ಷತ್ರೀಯರು ಸ್ಥಾಪಿಸಿದ ಬುದ್ಧ, ಜೈನ ಧರ್ಮಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡಲಾಗಿದೆ. ಆದರೆ ಲಿಂಗಾಯತ ಧರ್ಮವನ್ನು ಇಂತಹ ಅವಕಾಶದಿಂದ ದೂರ ಇಡಲಾಗಿದೆ ಎಂದು ಆರೋಪಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದ ಸಚಿವರು, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕುರಿ ಕಾಯುವವನು ಕೈ ಹಾಕಿದ್ದಾನೆ. ಕುರುಬರಿಂದ ಮೊದಲು ಆರಂಭವಾದರೆ ನೂರಕ್ಕೆ ನೂರಷ್ಟು ಕೆಲಸ ಯಶಸ್ವಿಯಾಗುತ್ತದೆ. ಒಂದು ವೇಳೆ ಬೇರೆಯವರು ಕೈ ಹಾಕಿದ್ದರೆ ನಾನು ಭರವಸೆ ನೀಡುತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ಕೈ ಹಾಕಿದ್ದು, ರಾಹು, ಕೇತು ಒಟ್ಟಾಗಿ ಅಡ್ಡಿಯಾದರೂ ಪ್ರತ್ಯೇಕ ಲಿಂಗಾಯತ ಧರ್ಮದ ಚಳುವಳಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿ ಶೋ ಮಾಡೋದು ಬಿಟ್ಟು, ಕೆಲಸ ಮಾಡಿದ್ರೆ ಒಳ್ಳೇದು: ರಮೇಶ್ ಜಾರಕಿಹೊಳಿ

    ಡಿಕೆಶಿ ಶೋ ಮಾಡೋದು ಬಿಟ್ಟು, ಕೆಲಸ ಮಾಡಿದ್ರೆ ಒಳ್ಳೇದು: ರಮೇಶ್ ಜಾರಕಿಹೊಳಿ

    ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಶೋ ಮಾಡುವುದನ್ನು ಬಿಟ್ಟು, ಕೆಲಸ ಮಾಡಿದರೇ ಒಳ್ಳೆಯದಾಗುತ್ತದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

    ಬೆಳಗಾವಿಯಲ್ಲಿ ಆರಂಭವಾದ ಸಚಿವ ಡಿಕೆ ಶಿವಕುಮಾರ ಹಾಗೂ ರಮೇಶ ಜಾರಕಿಹೊಳಿ ಜಟಾಪಟಿ ಬಳ್ಳಾರಿಯಲ್ಲೂ ಮುಂದುವರಿದಿದೆ. ಉಗ್ರಪ್ಪನವರ ಪರ ಕೂಡ್ಲಿಗೆಯಲ್ಲಿ ಪ್ರಚಾರದ ವೇಳೆ ಡಿಕೆ ಶಿವಕುಮಾರ ವಿರುದ್ಧ ಮತ್ತೆ ಜಾರಕಿಹೊಳಿ ಹರಿಹಾಯ್ದರು.

    ಡಿಕೆಶಿ ಶೋ ಆಫ್ ಮಾಡೋದು ಬಿಟ್ಟು, ಕೆಲಸ ಮಾಡಿದರೆ ಒಳ್ಳೆಯದು. ನಾನು ಶಾಸಕ ನಾಗೇಂದ್ರ ಸಹೋದರನಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು ನಿಜ. ಆದರೆ ಕೆಲವರ ಕುತಂತ್ರದಿಂದ ಟಿಕೆಟ್ ಕೈ ತಪ್ಪಿತು. ಉಗ್ರಪ್ಪನವರು ಸಹ ಪ್ರಾಮಾಣಿಕರಾಗಿದ್ದಾರೆಂದು ಹೇಳುವ ಮೂಲಕ ಡಿಕೆಶಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

    ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಅಷ್ಟೇ. ಅವರಿಗೆ ಬಳ್ಳಾರಿ ಜಿಲ್ಲಾ ಚುನಾವಣಾ ಉಸ್ತುವಾರಿ ನೀಡಿಲ್ಲ. ಡಿಕೆಶಿಯ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಅವರಿಗೆ ಈ ಬಗ್ಗೆ ಆಕ್ಷೇಪ ಇದ್ದಿದ್ದರೆ ಕ್ಯಾಬಿನೆಟ್ ಚರ್ಚೆ ವೇಳೆ ಹೇಳಬೇಕಿತ್ತು. ಈಗ ಈ ರೀತಿ ಬಹಿರಂಗ ಹೇಳಿಕೆ ನೀಡುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದರು.

    ಡಿಕೆಶಿಯವರ ಹಿಂಬಾಲಕರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವಾಗ ಅವರು ಎಲ್ಲಿಗೆ ಹೋಗಿದ್ದರು. ಪ್ರತಿ ಸಭೆಯಲ್ಲಿ ಮಾತನಾಡಿದಾಗ ಏಕೆ ತಡೆಯಲಿಲ್ಲ. ಕ್ಯಾಬಿನೆಟ್ ನಲ್ಲಿ ಈಶ್ವರ ಖಂಡ್ರೆ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಮಾತ್ರ ಪರ-ವಿರೋಧ ಚರ್ಚೆ ಮಾಡಿದ್ದರು. ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದಕ್ಕೆ ನಾವು ಪರಿಗಣಿಸಿದ್ದೇವೆ ಅಷ್ಟೇ ಎಂದು ಎಂಬಿ ಪಾಟೀಲ್ ಪರ ಬ್ಯಾಟ್ ಬೀಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv