Tag: ಪ್ರತ್ಯೇಕ ರಾಜ್ಯ

  • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಬಳ್ಳಾರಿ: ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳುವ ಶಾಸಕರು, ಹೋರಾಟಗಾರು ಕಮಂಗಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಆಯೋಜಿಸಿದ್ದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 78 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತ್ಯೇಕ ರಾಜ್ಯ ಕೇಳುವುದು ಹೇಗಿದೆ ಎಂದರೆ ಪತಿಗೆ ಹೆದರಿಸುವುದಕ್ಕೆ ಪತ್ನಿ ಪದೇ ಪದೇ ಬಾವಿಗೆ ಬೀಳುತ್ತೇನೆ ನೋಡು ಎನ್ನುವಂತಿದೆ ಎಂದು ಹೇಳಿ ಪರೋಕ್ಷವಾಗಿ ಶಾಸಕ ಶ್ರೀರಾಮುಲು, ಉಮೇಶ ಕತ್ತಿ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಕರ್ನಾಟಕ ಏಕೀಕರಣವಾಗಿ 70 ವರ್ಷಗಳು ಕಳೆದಿವೆ. ಈಗ ಮತ್ತೇ ಪ್ರತ್ಯೇಕ ಮಾಡುವುದು ಹುಡುಗಾಟಿಕೆ ಅಲ್ಲ. ಒಂದು ವೇಳೆ ಕರ್ನಾಟಕ ಒಡೆಯುವ ಕೆಲಸಕ್ಕೆ ಮುಂದಾದರೆ ಅದು ಮಹಾ ಪಾಪದ ಕೆಲಸವಾಗುತ್ತದೆ. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ, ಹೋರಾಟ ಮಾಡಿ. ಆದರೆ ಅದೂ ಬಿಟ್ಟು ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳಲು ಮುಂದಾಗುವ ರಾಜಕಾರಣಿಗಳು ಕಮಂಗಿಗಳು ಎಂದು ಹೇಳಿದರು.

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಬೆಂಗಳೂರು: ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಬಿಜೆಪಿಯ ಶಾಸಕ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.

    ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಅವರು ಬಿಜೆಪಿ ಗೆಲುವು ಸಾಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಮತ್ತು ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿಯೇ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿರುವೆ ಎಂದರು.

    ಬಜೆಟ್ ಕೇವಲ ಅಣ್ಣ-ತಮ್ಮಂದಿರು ಪ್ರತಿನಿಧಿಸುವ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುಕೂಲ ಆಗುವಾಗುವಂತಿದೆ ಎಂದು ಶ್ರೀರಾಮುಲು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ರಾಮುಲು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ತಾರತಮ್ಯವಿದ್ದರೆ ಅದನ್ನು ಸರಿಪಡಿಸಬೇಕು. ಆದರೆ ರಾಜ್ಯ ಒಡೆಯುವ ಮಾತುಗಳನ್ನು ಆಡಬೇಡಿ. ಸಮಗ್ರ ಕರ್ನಾಟಕದ ಬಗ್ಗೆ ಮಾತ್ರ ಮಾತನಾಡಿ ಎಂದು ಗುಡುಗಿದರು.

    ರಾಜ್ಯ ವಿಭಜನೆಯ ಸಂದೇಶ ಇಲ್ಲಿಂದ ಹೊರ ಹೋಗುವುದು ಬೇಡ. ನಾವೆಲ್ಲ ಒಂದು ಎನ್ನುವ ಸಂದೇಶವಿರಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ನಂತರ ಮಧ್ಯಪ್ರವೇಶ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮಗೂ ಸಮಗ್ರ ಕರ್ನಾಟಕ ಬೇಕು. ಆದರೆ ಉತ್ತರ ಕರ್ನಾಟಕದ ಕುರಿತಾಗಿ ಈ ಭಾಗದ ಜನ ನಾಯಕರ ಧೋರಣೆ ಬದಲಾಗಬೇಕು. ನಮ್ಮ ಭಾಗದ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗಲಿ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.

    ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡರು.

  • ಸಂಪುಟ ರಚನೆಯಲ್ಲಿ ಉ.ಕ ಅನ್ಯಾಯ, ಹೋರಾಟಕ್ಕೆ ನಾನು ಬದ್ಧ: ಸತೀಶ್ ಜಾರಕಿಹೊಳಿ

    ಸಂಪುಟ ರಚನೆಯಲ್ಲಿ ಉ.ಕ ಅನ್ಯಾಯ, ಹೋರಾಟಕ್ಕೆ ನಾನು ಬದ್ಧ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಉತ್ತರ ಕರ್ನಾಟಕದ 4 ಜನ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮಂತ್ರಿಗಿರಿ ನೀಡಿ, ಈ ಭಾಗದ ಶಾಸಕರಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವರು, ಉತ್ತರ ಕರ್ನಾಟಕದಲ್ಲಿ ಒಟ್ಟು 40 ಜನ ಶಾಸಕರಿದ್ದಾರೆ. ಆದರೆ ಕೇವಲ 4 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸಂಪುಟದಲ್ಲಿ ಅನ್ಯಾಯ ಮಾಡಲಾಗಿದೆ. ಈ ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಕಾಲ ಇನ್ನೂ ಕೂಡಿಬಂದಿಲ್ಲ. ದಕ್ಷಿಣ ಕರ್ನಾಟಕದಷ್ಟೇ ಪ್ರಾಮುಖ್ಯತೆ, ಅಧಿಕಾರ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಕ್ಕೂ ಸಿಗಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಇಂತಹ ಅನ್ಯಾಯ ಆಗಬಾರದು. ಉತ್ತರ ಕರ್ನಾಟಕದ ಭಾಗದಲ್ಲಿ ನಾಯಕತ್ವದ ಕೊರತೆಯಿದೆ. ಹೀಗಾಗಿ ಪದೇ ಪದೇ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸಂಸದೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಳೆದಂತೆ ಅನೇಕರು ಈ ಭಾಗದಲ್ಲಿ ಬೆಳೆಯಬೇಕು. ಆದರೆ ಈಗ ಸಚಿವ ಸ್ಥಾನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಒದಗಿಸಲು ನಾನು ಬದ್ಧವಾಗಿರುವೆ ಎಂದು ಹೇಳಿದರು.

    ಉತ್ತರ ಕರ್ನಾಟಕ ಭಾಗದಿಂದ ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶವಿತ್ತು. ಆದರೆ ಸದ್ಯಕ್ಕೆ ನಾನೇ ಬೇಡವೆಂದು, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುವುದಾಗಿ ಹೇಳಿರುವೆ. ಕೆಪಿಸಿಸಿ ಅಧ್ಯಕ್ಷರು ಯಾರೇ ನೇಮಕಗೊಂಡರು ಅವರಿಗೆ ನನ್ನ ಬೆಂಬಲವಿದೆ. ಕೆಪಿಸಿಸಿ ಅಧ್ಯಕ್ಷರಾದರೆ 5 ವರ್ಷ ರಾಜ್ಯ ಸುತ್ತಬೇಕು, ಪಕ್ಷ ಸಂಘಟನೆ ಮಾಡಬೇಕು. ಆದರೆ ಅಧ್ಯಕ್ಷ ಸ್ಥಾನದಲ್ಲಿದ್ದು, ಪಕ್ಷ ಸಂಘಟನೆ ಮಾಡುವ ಅವಶ್ಯಕತೆ ನನಗಿಲ್ಲ. ಸತೀಶ್ ಜಾರಕಿಹೊಳಿ ಅಂದ್ರೆ ಯಾರು ಅಂತಾ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಾಂಗ್ರೆಸ್ಸಿನ ಕೆಲ ನಾಯಕರಿಗೆ ಟಾಂಗ್ ಕೊಟ್ಟರು. ನಿಗಮ ಮಂಡಳಿಗೆ ಬೆಂಬಲಿಗರ ನೇಮಕ ವಿಚಾರವಾಗಿ ಪಟ್ಟಿ ಸಿದ್ಧವಾಗಿದೆ. ಅದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು: ಜಾರಕಿಹೊಳಿ ಸಹೋದರರಲ್ಲಿಯೇ ಭಿನ್ನಮತ

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು: ಜಾರಕಿಹೊಳಿ ಸಹೋದರರಲ್ಲಿಯೇ ಭಿನ್ನಮತ

    ರಾಯಚೂರು: ಅಖಂಡ ಕರ್ನಾಟಕವನ್ನು ಪ್ರತ್ಯೇಕಿಸುವ ಮಾತೇ ಇಲ್ಲ. ಉತ್ತರ ಕರ್ನಾಟಕ ಪತ್ಯೇಕ ರಾಜ್ಯವಾಗಬೇಕು ಎಂಬ ಒತ್ತಾಯ ಇಟ್ಟಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಚಿವರು, ಅನೇಕ ನಾಯಕರ ಪರಿಶ್ರಮದಿಂದ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಕೇಳಿಬರುತ್ತಿರುವುದು ಸರಿಯಲ್ಲ. ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿರುವ ಸಹೋದರ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ನಾನು ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆ ಎಂದು ಅವರು ಭರವಸೆ ನೀಡಿದ ಅವರು ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಎಲ್ಲದಕ್ಕೂ ಪ್ರತಿರೋಧ ವ್ಯಕ್ತಪಡಿಸುತ್ತಾರೆ ಅಂದ್ರು.

    ಇದೇ ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಜಮೀರ್ ಅಹ್ಮದ್ ಅವರ ಚಿಂತನೆ ಅಷ್ಟೇ. ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.