Tag: ಪ್ರತ್ಯೇಕ ರಾಜ್ಯ

  • 35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    35 ವರ್ಷಗಳಲ್ಲಿ ಉ-ಕ ಭಾಗಕ್ಕೆ ನಿಮ್ಮ ಕೊಡುಗೆ ಏನು: ಹೊರಟ್ಟಿಗೆ ದಿಂಗಾಲೇಶ್ವರ ಶ್ರೀ ಸವಾಲು

    ಹುಬ್ಬಳ್ಳಿ: 35 ವರ್ಷಗಳ ರಾಜಕೀಯ ಜೀವನದಲ್ಲಿ ಹೊರಟ್ಟಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರವಯುತ ಸ್ಥಾನದಲ್ಲಿರುವ ಹೊರಟ್ಟಿ ತಮ್ಮ ಘನತೆಗೆ ತಕ್ಕ ಹಾಗೇ ನಾಲಿಗೆ ಮೇಲೆ ಹಿಡಿತ ಇರಬೇಕು. ಪದೇ ಪದೇ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಅವರು ಯಾಕೆ ನಮ್ಮ ತೇಜೋವಧೆ ಮಾಡುತ್ತಾರೆ ಎಂಬುದನ್ನು ಬಹಿರಂಗ ಪಡಿಸಲಿ. ಇದಕ್ಕೂ ಮುನ್ನ ಅವರ 35 ವರ್ಷದ ರಾಜಕೀಯ ಜೀವನದಲ್ಲಿ ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು.

    ಇದೇ ವೇಳೆ ಲಿಂಗಾಯತ ಧರ್ಮವನ್ನು ಒಡೆಯಲು ಒಂದ ರಾಜಕಾರಣಿಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾಕೆ ಒಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕಾರಣ. ಈ ಕೂಗು ನನ್ನದೊಬ್ಬನದ್ದಲ್ಲ, ಈ ಭಾಗದ ಜನರ ಕೂಗು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ನನ್ನ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಭಾನುವಾರ ಮಾತನಾಡಿದ್ದ ಬಸವರಾಜ್ ಹೊರಟ್ಟಿ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ರಾಜಕೀಯ ಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ ಎಂದು ಹೇಳಿದ್ದರು.

  • ಬಿಎಸ್‍ವೈ ಮೇಲೆ ನನಗೆ ಅನುಕಂಪ ಇದೆ, ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ: ರೇವಣ್ಣ

    ಬಿಎಸ್‍ವೈ ಮೇಲೆ ನನಗೆ ಅನುಕಂಪ ಇದೆ, ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ: ರೇವಣ್ಣ

    ಬೆಂಗಳೂರು: ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ ಎನ್ನುವ ಯಡಿಯೂರಪ್ಪನವರ ಮೇಲೆ ನನಗೆ ಅನುಕಂಪವಿದೆ, ಅವರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲಾಗಿ ಅನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕುರಿತು ನಾನು ಮಾತಾಡಲ್ಲ. ಯಡಿಯೂರಪ್ಪ ಬಗ್ಗೆ ಮಾತಾಡಿದರೆ ನಾನು ಪೊಳ್ಳಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಅವರ ಮೇಲೆ ನನಗೆ ಅನುಕಂಪ ಇದೆ. ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಟಾಂಗ್ ನೀಡಿದರು.

    ಶಾಸಕ ಶ್ರೀರಾಮುಲು ಹೇಳಿಕೆ ಬಗ್ಗೆ ನಾನೇನು ಮಾತಾಡೊಲ್ಲ. ಶ್ರೀರಾಮುಲು ಬಗ್ಗೆ ಮಾತಾಡಿದರೆ ನನ್ನನ್ನು ನಾನೇ ಅಗೌರವ ಮಾಡಿಕೊಂಡಂತೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅವಧಿಗಳಲ್ಲಿ ಏನೇನಾಗಿದೆ ಅಂತ ಬಹಿರಂಗ ಚರ್ಚೆ ಆಗಲಿ. ಬಹಿರಂಗ ಚರ್ಚೆಗೆ ನಾವು ಸಿದ್ದ. ಮಠಾಧೀಶರು ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರು ಹಾಗೂ ಮಠಾಧೀಶರಿಗೆ ಸವಾಲು ಹಾಕಿ ಪ್ರತ್ಯೇಕ ರಾಜ್ಯ ರಚನೆಗಾಗಿ ಬಂದ್ ಮಾಡುತ್ತಿರೋರಿಗೆ ಸಚಿವ ರೇವಣ್ಣ ತಿರುಗೇಟು ನೀಡಿದರು.

    ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಅಂತ ಚರ್ಚೆ ನಡೆಯಲಿ. ಮಠಾಧೀಶರ ಪ್ರತಿಭಟನೆ ಕುರಿತು ನಾನು ಮಾತಾಡಲ್ಲ. ಉತ್ತರ ಕರ್ನಾಟಕದವರಿಗೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸುತ್ತೇನೆ ಅಂತ ತಿಳಿಸಿದರು.

  • ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರ ಹೇಳಿಕೆಗಳನ್ನು ಗಮನಿಸಿದರೆ ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ.

    ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕಕ್ಕೆ ಹಿರಿಯರು ರಕ್ತ ಹರಿಸಿದ್ದಾರೆ. ಉತ್ತರ ಕರ್ನಾಟಕದ ಜನತೆಯನ್ನ ಸವತಿ ಮಕ್ಕಳಂತೆ ಸಿಎಂ ಕಾಣುತ್ತಿದ್ದಾರೆ. ನಿಮ್ಮ ಸಾಲಮನ್ನಾ ಮಾಡಲು ನೀವೇನು ನಮಗೆ ವೋಟ್ ಹಾಕಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದು, ಸಿಎಂ ಅವರ ದುರಂಹಕಾರದ ಮಾತಾಗಿದೆ. ಸಿಎಂರವರ ಹೇಳಿಕೆಗಳನ್ನು ಗಮನಿಸಿದರೆ, ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ

    ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಹರಿಹಾಯ್ದ ಅವರು, ಈ ಹಿಂದೆ ವೀರಶೈವ – ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಿಳಿಸಿದರು.

    ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ. ಹೀಗಾಗಿ ಹೋರಾಟಗಾರರ ಮನವೊಲಿಸಲು ನಾನು ಬೆಳಗಾವಿಗೆ ತೆರಳುತ್ತೇನೆ. ರಾಜ್ಯವನ್ನು ವಿಭಜಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

  • ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುವವರು ಸ್ವಾರ್ಥಿಗಳು: ಮಾಜಿ ಸಿಎಂ

    ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುವವರು ಸ್ವಾರ್ಥಿಗಳು: ಮಾಜಿ ಸಿಎಂ

    ಮೈಸೂರು: ಅಖಂಡ ಕರ್ನಾಟಕದ ಹಿನ್ನೆಲೆ ತಿಳಿಯದೇ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವವರು ಸ್ವಾರ್ಥಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

    ಇಂದು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಏನಿಲ್ಲ. ನಮ್ಮದು ಅಖಂಡ ಕರ್ನಾಟಕ. ಏಕೀಕರಣ ಮಹತ್ವ ತಿಳಿದಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವ ಸ್ವಾರ್ಥಿಗಳು. ಕರ್ನಾಟಕ ಏಕೀಕರಣ ಏಕಾಯಿತು ಎಂಬುದು ತಿಳಿದಿಲ್ಲ. ಭಾಷಾವಾರು ಪ್ರಾಂತ್ಯ ಏಕಾಯಿತು ಎಂಬುದರ ಮಾಹಿತಿಯಿಲ್ಲದೇ ಹೇಳಿಕೆ ನೀಡುತ್ತಿರುವುದು ಬಾಲಿಶ ವಾದ ಎಂದು ಕಿಡಿಕಾರಿದರು.

    ನಾನೂ ಸಹ ಉತ್ತರ ಕರ್ನಾಟಕದ ಶಾಸಕನೇ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅಭಿವೃದ್ಧಿಯ ವಿಚಾರವನ್ನು ನಾನು ಒಪ್ಪುತ್ತೇನೆ. ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣ ನೀಡಿದ್ದೇನೆ. ಅಲ್ಲದೇ ಪ್ರತ್ಯೇಕ ರಾಜ್ಯದ ಮಾತನಾಡುತ್ತಿರುವ ಶ್ರೀರಾಮುಲು, ಉಮೇಶ್ ಕತ್ತಿಯವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೂನ್ಯ ಕೊಡುಗೆ ನೀಡಿದೆ ಎಂದು ಆರೋಪಿಸಿದರು.

  • ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಹೊರಟ್ಟಿ ಕಿಡಿ

    ವಿಜಯಪುರ: ರಾಜಕೀಯ ವಿಚಾರಗಳಲ್ಲಿ ಸ್ವಾಮೀಜಿಗಳು ಭಾಗಿಯಾಗಬಾರದು ಎಂದು ಹಂಗಾಮಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗೆ ಮಾಡಲು ಕೆಲಸವಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೂಗು ತೋರಿಸುತ್ತಿದ್ದಾರೆ. ಇನ್ನು ಕೆಲವು ಸ್ವಾಮೀಜಿಗಳು ಅವರ ಹಾಗೆಯೇ ಮಾಡುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ಬೇಕು ರಾಜಕೀಯ ಎಂದು ಪ್ರಶ್ನಿಸಿದರು.

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಪೂರ್ಣ ನನ್ನ ವಿರೋಧವಿದೆ. ಅಖಂಡ ಕರ್ನಾಟಕ ನಿರ್ಮಾಣಕ್ಕೆ ಅನೇಕ ನಾಯಕರು, ಹೋರಾಟಗಾರರು ಶ್ರಮಿಸಿದ್ದಾರೆ. ಈಗ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಈ ಕುರಿತು ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡಿರುವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ ಕೆಲವು ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಸಭೆ ಕರೆಯುವ ನಿರ್ಧಾರ ಕೈಗೊಂಡಿದ್ದಾರೆ. ಆಗ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಿದರು.

    ವಿಜಯಪುರ, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಸಭೆಯನ್ನು ನಡೆಸುವ ನಿರ್ಧಾರ ಮಾಡಲಾಗುತ್ತದೆ. ಸಭೆಯಲ್ಲಿ ಹೋರಾಟಗಾರು, ಮಠಾಧೀಶರು ಭಾಗವಹಿಸುತ್ತಾರೆ. ಆಗ ಚರ್ಚಿಸಿ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜವಾದರೆ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು. ಆದರೆ ವೈಯಕ್ತಿಕ ರಾಜಕಾರಣಕ್ಕಾಗಿ ಪ್ರತ್ಯೇಕ ರಾಜ್ಯ ಬಗ್ಗೆ ವಿಚಾರ ಮಾಡಬಾರದು ಎಂದು ತಿಳಿಸಿದರು.

  • ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲ ಸೂಚಿಸಿದ ಶ್ರೀರಾಮುಲು ವಿರುದ್ಧ ನೆಟ್ಟಿಗರ ಆಕ್ರೋಶ

    ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲ ಸೂಚಿಸಿದ ಶ್ರೀರಾಮುಲು ವಿರುದ್ಧ ನೆಟ್ಟಿಗರ ಆಕ್ರೋಶ

    ಬಳ್ಳಾರಿ: ವಿಧಾನಸಭಾ ಕಲಾಪದಲ್ಲಿ ಹಾಗೂ ಇತ್ತೀಚೆಗೆ ಮಾಧ್ಯಮಗಳ ಮುಂದೆ ಪ್ರತ್ಯೇಕ ರಾಜ್ಯದ ಕುರಿತಾಗಿ ಮಾತನಾಡಿದ್ದ ಶಾಸಕ ಶ್ರೀರಾಮುಲು ಪರ ಹಾಗೂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿಬರುತ್ತಿದೆ.

    ಕನ್ನಡವನ್ನೇ ಸರಿಯಾಗಿ ಮಾತನಾಡಲು ಬಾರದ, ಆಂಧ್ರ ಪ್ರದೇಶದಿಂದ ಈ ವ್ಯಕ್ತಿ ಕರ್ನಾಟಕ ಎರಡು ಭಾಗವಾಗಬೇಕು ಎನ್ನುತ್ತಿದ್ದಾರೆ. ಎಂತಹ ಸುವರ್ಣ ಕಾಲ ಬಂದು ನೋಡಿ ಕನ್ನಡಿಗರಿಗೆ ಎಂದು ಶ್ರೀರಾಮುಲು ಚಿತ್ರ ಬಳಕೆ ಮಾಡಿ, ಬರೆದು ಅಮರನಾಥ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಮರನಾಥ್ ಪೋಸ್ಟ್ ನಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ವಿರೋಧ ಹಾಗೂ ಬೆಂಬಲದ ಕಮೆಂಟ್‍ಗಳು ಹರಿದಾಡುತ್ತಿವೆ.

    ಶ್ರೀರಾಮುಲು ಹೇಳಿದ್ದೇನು?
    ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಶಾಸಕ ಬಿ.ಶ್ರೀರಾಮುಲು ಅವರು ಹೇಳಿದ್ದರು. ವಿಧಾನಸಭೆ ಅಷ್ಟೇ ಅಲ್ಲದೆ ಇತ್ತೀಚೆಗೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟದ ನಾಯಕತ್ವ ವಹಿಸಿಕೊಳ್ಳಲು ನಾನು ಸಿದ್ಧ ಎಂದು ತಿಳಿಸಿದ್ದರು.

  • ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಬೆಂಗಳೂರು: ವಿಧಾನ ಸಭೆ ಚುನಾವಣೆಯ ನೋವು ಮರೆತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾಗಿ ಹೇಳಿಕೊಂಡಿದ್ದು, ಅದನ್ನು ಶನಿವಾರ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

    ಆಗಸ್ಟ್ 9 ಕ್ರಾಂತಿ ದಿನ, ಅವತ್ತೇ ನಮ್ಮ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಟ್ಟು 3 ತಂಡಗಳು ರಚನೆಯಾಗಿವೆ. ಒಂದನೇ ತಂಡದ ನೇತೃತ್ವವನ್ನು ನಾನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ವಹಿಸಿಲಿದ್ದೇವೆ. ನಾವು ಉತ್ತರ ಕರ್ನಾಟಕದ 13 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದೇವೆ. ಉಳಿದಂತೆ ಎರಡನೇ ತಂಡದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಕೊನೆಯ ತಂಡ ನೇತೃತ್ವವನ್ನು ಈಶ್ವರಪ್ಪ, ಸಿ.ಟಿ.ರವಿ, ಲಕ್ಷ್ಮಣ ಸವದಿ ಅವರು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಲೋಕಸಭೆ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆಗೆ ಇಳಿಯಲಿದೆ. ಆದರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಅವರ ಮತಕ್ಷೇತ್ರಗಳ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಡಿಸೆಂಬರ್ ಒಳಗಾಗಿ ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಜಗಳ, ಬಡಿದಾಟದಿಂದ ಸರ್ಕಾರ ಬಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದ ಅವರು, ಪುತ್ರ ವಿಜಯೇಂದ್ರ ಅಗತ್ಯವಿರುವ ಕಡೆ ರಾಜ್ಯ ಪ್ರವಾಸ ಮಾಡುತ್ತಾರೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.

    ಪ್ರತ್ಯೇಕ ರಾಜ್ಯ:
    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಗ್ಗೆ ಬಿಜೆಪಿ ನಾಯಕರು ಬೆಂಬಲ ನೀಡುವುದಿಲ್ಲ. ಶಾಸಕ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿರುವೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವ ನೀತಿಯನ್ನು ಸಿಎಂ ಕುಮಾರಸ್ವಾಮಿ ತೋರುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ತನ್ನ ನಿಲುವುವನ್ನು ಸ್ಪಷ್ಟಪಡಿಸಬೇಕು. ಒಂದು ರೀತಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇರ ಕಾರಣ ಎಂದು ಆರೋಪಿಸಿದರು.

    ಹಿರಿಯ ಸಾಹಿತಿಗಳು, ಹೋರಾಟಗಾರರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಆದರೆ ಕುಮಾರಸ್ವಾಮಿ ಅದನ್ನು ಅಧಿಕಾರ ದಾಹದಿಂದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಕೇವಲ 37 ಕ್ಷೇತ್ರಗಳಿಗೆ ಮಾತ್ರ ಮುಖ್ಯಂಮಂತ್ರಿ ಎನ್ನುವ ರೀತಿ ಇರುವುದು ರಾಜ್ಯದ ದುರ್ದೈವ. ಕುಮಾರಸ್ವಾಮಿ ಕುಟುಂಬದ ಕೆಟ್ಟ ಸ್ವಾರ್ಥಕ್ಕಾಗಿ ಕೈ ಹಿಡಿದವರಿಗೆ ದ್ರೋಹ ಮಾಡಿ, ಈಗ ರಾಜ್ಯ ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಅವರನ್ನು ಎಂದೆಂದೂ ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.

    ಸಂಪೂರ್ಣ ಸಾಲ ಮನ್ನಾದ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವುದಿಲ್ಲ. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಸಾಲಮನ್ನಾ ತಕ್ಷಣ ಆಗಬೇಕು. ಸಂಪೂರ್ಣ ಸಾಲಮನ್ನ ಆಗದೇ ಇರಬಹುದು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಸಾಲಮನ್ನಾ ಶೀಘ್ರವೆ ಮಾಡುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ ಬಿಎಸ್ ಯಡಿಯೂರಪ್ಪ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ಕೊಟ್ಟರು.

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

    ಕಲಬುರಗಿ: ಬಹಳ ಕಷ್ಟಪಟ್ಟು ದೇಶ ಮತ್ತು ಭಾಷಾವಾರು ಪ್ರಾಂತ ರಚನೆಯಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ದಕ್ಷಿಣ ಕರ್ನಾಟಕ ಎ ಕ್ಲಾಸ್, ಬಾಂಬೆ ಕರ್ನಾಟಕ ಬಿ ಕ್ಲಾಸ್, ಹೈದ್ರಾಬಾದ್ ಕರ್ನಾಟಕ ಸಿ ಕ್ಲಾಸ್ ನಲ್ಲಿದೆ. ನಿಜಾಮರ ಆಳ್ವಿಕೆ ಈ ಭಾಗದಲ್ಲಿ ಇದ್ದಿದ್ದರಿಂದ ಹೈದರಾಬಾದ್ ಕರ್ನಾಟಕ ಭಾಗ ಅಷ್ಟೊಂದು ಅಭಿವೃದ್ಧಿ ಆಗಲಿಲ್ಲ. ಆದ್ರೆ ಇದೀಗ 371 ಜೆ ವಿಧಿಯಡಿ ವಿಶೇಷ ಸ್ಥಾನಮಾನ ಸಿಕ್ಕ ನಂತರ ಅಭಿವೃದ್ಧಿ ಕೆಲಸಗಳು ಹೆಚ್ಚಾಗಿವೆ ಎಂದು ತಿಳಿಸಿದರು.

    ಕನ್ನಡ ಮಾತನಾಡುವಂತಹ ಜನ ಒಂದೇ ಕಡೆ ಇರಬೇಕು ಎನ್ನುವ ದೃಷ್ಠಿಯಿಂದ ಅಖಂಡ ಕರ್ನಾಟಕದ ಒಂದು ಕನಸನ್ನು ನನಸು ಮಾಡ್ಕೊಂಡು ನಾವು ಎಲ್ಲರೂ ಇವತ್ತು ಒಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಅಪಸ್ವರ ತೆಗೆದರೆ ಯಾರಿಗೂ ಒಳ್ಳೆಯದು ಆಗುವುದಿಲ್ಲ ಎಂದು ಎಚ್ಚರಿಸಿದರು.

    ಇನ್ನು ಅಭಿವೃದ್ಧಿಯಲ್ಲಿ ಅನ್ಯಾಯವಾದ್ರೆ ಮುಖ್ಯಮಂತ್ರಿಯನ್ನು ಕೇಳಬೇಕು. ಆದ್ರೆ ರಾಜ್ಯವನ್ನು ಇಬ್ಭಾಗ ಮಾಡುವ ಕೆಲಸವನ್ನು ಯಾರು ಮಾಡಬಾರದು. ನಮ್ಮ ಹಿರಿಯರು ಸಾಕಷ್ಟು ಕಷ್ಟಪಟ್ಟು ರಾಜ್ಯವನ್ನು ಒಗ್ಗೂಡಿಸಿದ್ದಾರೆ, ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ನಾವು ಮತ್ತೆ ಬೇರೆಯಾಗುತ್ತೇವೆ ಎಂದರೆ ಅದು ಸರಿಯಲ್ಲ. ಹಾಗಾಗಿ ಸಮಸ್ಯೆಯನ್ನು ಮಾತಾಡಿಕೊಂಡು ಸರಿಪಡಿಸಿಕೊಳ್ಳಬೇಕು ಎಂದು ಖರ್ಗೆ ಸೂಚಿಸಿದರು.

    ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿದ ಅವರು ನಾನು ಕಾಂಗ್ರೆಸ್‍ನವನಾದ ಕಾರಣ ರಾಹುಲ್ ಗಾಂಧಿಯವರೇ ಪ್ರಧಾನ ಮಂತ್ರಿಯಾಗಬೇಕು. ಪ್ರತಿಯೊಬ್ಬರಿಗೂ ಅವರವರ ಪಕ್ಷದ ನಿಯಮ, ಕಾನೂನುಗಳಿರುತ್ತವೆ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಯ ಯೋಜನೆಗಳಿಗೆ, ತತ್ವಗಳಿಗೆ ವಿರುದ್ಧವಾಗಿ ನಿಲ್ಲುವಂತಹ ಪಕ್ಷ ಕಾಂಗ್ರೆಸ್ ಒಂದೇ. ಅಷ್ಟೇ ಅಲ್ಲದೇ ಅಭಿವೃದ್ಧಿ ಮಾಡುವ ಹಾಗೂ ಎಲ್ಲರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಹಾಗಾಗಿ ರಾಹುಲ್ ಗಾಂಧಿಯವರೇ ಪ್ರಧಾನಿಯಾದರೇ ಒಳ್ಳೆಯದು ಎಂದು ತಿಳಿಸಿದರು.

  • ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ಉತ್ತರ ಕರ್ನಾಟಕ ಅಭಿವೃದ್ಧಿ: ಸಿಎಂ ಎಚ್‍ಡಿಕೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

    ದಾವಣಗೆರೆ: ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಎಲ್ಲಾ ಮಠಾಧೀಶರು ಪ್ರತ್ಯೇಕ ರಾಜ್ಯದ ಪರ ನಿಲ್ಲಬೇಕಾಗುತ್ತದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

    ನಗರದ ತೊಗಟಿವೀರಪ್ಪ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಸಿ.ಎಂ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿ, ಸರ್ಕಾರ ರಚನೆಯಾದ ಬಳಿಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಉತ್ತರ ಕರ್ನಾಟಕವನ್ನು ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.

    ಉತ್ತರ ಕರ್ನಾಟಕದಲ್ಲಿ ಕೇವಲ ಇಲ್ಲ, ಇಲ್ಲ ಎನ್ನುವ ಧ್ವನಿ ಕೇಳಿಬರುತ್ತಿದೆ. ಕೇವಲ ದಕ್ಷಿಣ ಕರ್ನಾಟಕದ ಭಾಗಗಳು ಮಾತ್ರ ಅಭಿವೃದ್ಧಿಯಾಗಿವೆ. ಬೆಂಗಳೂರಿನಿಂದ 50 ಕಿ.ಮೀ. ದೂರವಿರುವ ಹಳ್ಳಿಗಳಿಗೂ ಮೂಲಸೌಕರ್ಯ ನೀಡಲಾಗಿದೆ. ಆದರೆ ಉತ್ತರ ಕರ್ನಾಟಕ ನಗರ ಪ್ರದೇಶದಲ್ಲಿ ಇಂತಹ ಮೂಲಸೌಕರ್ಯಗಳಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಬಳಕೆ ಮಾಡಿ ಬಿಟ್ಟ ಬಸ್ಸುಗಳನ್ನು ನಮ್ಮ ಹಳ್ಳಿಗಳಿಗೆ ಬಿಡಲಾಗುತ್ತದೆ. ಇದು ಯಾವ ನ್ಯಾಯ? ತಾರತಮ್ಯ ಹೀಗೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗುತ್ತದೆ ಎಂದು ಕಿಡಿಕಾರಿದರು.

    ಜುಲೈ 31ಕ್ಕೆ ಉ.ಕ ಶ್ರೀಗಳ ಸಭೆ:
    ಇದೇ ವೇಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಜುಲೈ 31ರಂದು ಉತ್ತರ ಕರ್ನಾಟಕ ಸ್ವಾಮೀಜಿಗಳ ಸಭೆ ಆಯೋಜಿಸಲಾಗಿದೆ. ನಮ್ಮ ಪ್ರತಿಭಟನೆ ವ್ಯಾಪಕವಾಗುವ ಮುನ್ನವೇ ಸಂಬಂಧಪಟ್ಟ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ನಿಗಾವಹಿಸಬೇಕು. ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಬೇಕು. ಜೊತೆಗೆ 20 ಮುಖ್ಯ ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ವಿಕೇಂದ್ರೀಕೃತವಾಗಬೇಕು. ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದರೆ ಪ್ರತ್ಯೇಕ ರಾಜ್ಯದ ಕೂಗು ಶಮನವಾಗುತ್ತದೆ. ಇಲ್ಲದಿದ್ದರೇ ಪ್ರತಿಭಟನೆ ಬಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ತಟ್ಟಲಿದೆ ಎಂದು ಖಾರವಾಗಿಯೇ ನುಡಿದರು.

  • ಉತ್ತರ ಕರ್ನಾಟಕವನ್ನ ಕಡೆಗಣಿಸಿದ್ರೆ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸ್ತೇನೆ- ಶಾಸಕ ಶ್ರೀರಾಮಲು

    ಉತ್ತರ ಕರ್ನಾಟಕವನ್ನ ಕಡೆಗಣಿಸಿದ್ರೆ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸ್ತೇನೆ- ಶಾಸಕ ಶ್ರೀರಾಮಲು

    ಕೊಪ್ಪಳ: ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸುತ್ತೇನೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ಇಂದು ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನೀನು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದಾಗ ಹೈದ್ರಾಬಾದ್ ಕರ್ನಾಟಕಕ್ಕೇ ಏನು ಮಾಡಿದ್ದೀಯಾ? ಉತ್ತರ ಕರ್ನಾಟಕವನ್ನು ನೀನು ನಿರ್ಲಕ್ಷಿಸಿದ್ದೀಯಾ? ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಆರಂಭಿಸಿದ್ರು.

    ಈಗಾಗಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಇದೇ ರೀತಿ ತಾರತಮ್ಯ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತೆ. ನನಗೆ ಅಖಂಡ ಕರ್ನಾಟಕ ಬೇಕಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದ್ರೆ ನಾನೇ ಪ್ರತ್ಯೇಕ ರಾಜ್ಯದ ಮುಂದಾಳತ್ವ ವಹಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಈಗಾಗಲೇ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಬಿಜೆಪಿಯವರು ಗೆದ್ದ ಕಡೆ ಅನುದಾನ ಕೊಟ್ಟಿಲ್ಲ. ಹೀಗಾಗಿ ಮೈತ್ರಿ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ ಎಂದು ಗರಂ ಆಗಿ ಹೇಳಿದ್ದಾರೆ.