ನವದೆಹಲಿ/ಬೀಜಿಂಗ್: ಅಮೆರಿಕದ ಪ್ರತಿಸುಂಕಕ್ಕೆ (US tariffs) ವಿರುದ್ಧವಾಗಿ ಚೀನಾ ಸಹ ಸುಂಕ ವಿಧಿಸಿರೋದು ದೊಡ್ಡಮಟ್ಟದ ವಾಣಿಜ್ಯ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕ ಮೂಡಿಸಿದೆ. ಈ ನಡುವೆ ಟ್ರಂಪ್ ಆಡಳಿತ ವಿಧಿಸಿರುವ ಸುಂಕ ನೀತಿಗಳಿಂದಾಗುವ ತೊಂದರೆಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ನಿಲ್ಲಬೇಕು ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ (Chinese embassy) ವಕ್ತಾರರು ಮಂಗಳವಾರ ಕರೆ ನೀಡಿದ್ದಾರೆ.
ಚೀನಾ ರಾಯಭಾರ ಕಚೇರಿ ವಕ್ತಾರೆ ಯು ಜಿಂಗ್ (Yu Jing), ಸುಂಕದ ಕುರಿತು ಸುದೀರ್ಘ ಸಂದೇಶವೊಂದನ್ನ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಚೀನಾ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಉತ್ತಮವಾಗಿದ್ದು, ಪರಸ್ಪರ ಲಾಭವನ್ನು ಆಧರಿಸಿದೆ. ಆದ್ರೆ ಅಮೆರಿಕದ ಸುಂಕ ಇದಕ್ಕೆ ಪೆಟ್ಟು ನೀಡುವಂತಿದೆ. ಹಾಗಾಗಿ ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಸುಂಕದಿಂದ ಆಗುವ ತೊಂದರೆಗಳನ್ನು ನಿವಾರಿಸಲು ಒಟ್ಟಾಗಿ ನಿಲ್ಲಬೇಕು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚೀನಾದ ಆರ್ಥಿಕತೆಯು ಸ್ಥಿರ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ. ಏಕೆಂದರೆ ಚೀನಾದ ಉತ್ಪಾದನೆಯು ಸಂಪೂರ್ಣ ಮತ್ತು ನಿರಂತರವಾಗಿ ನವೀಕರಿಸುವ ಕೈಗಾರಿಕಾ ವ್ಯವಸ್ಥೆಯನ್ನ ಒಳಗೊಂಡಿದೆ. ಆರ್ & ಡಿಯಲ್ಲಿ ನಿರಂತರ ಹೂಡಿಕೆ ಮತ್ತು ನಾವಿನ್ಯತೆಯ ಮೇಲೆ ಗಮನ ಸೆಳೆಯುತ್ತದೆ. ಇಡೀ ವಿಶ್ವದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದ್ದು, ವಾರ್ಷಿಕವಾಗಿ 30 ಪ್ರತಿಶತದಷ್ಟು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ, ಜೊತೆಗೆ ವಿಶ್ವ ವ್ಯಾಪಾರ ಸಂಸ್ಥೆ (WTO) ಜೊತೆಗೆ ಬಹುಪಕ್ಷೀಯ ವ್ಯವಸ್ಥೆಯನ್ನು ರಕ್ಷಿಸಲು ಬೇರೆ ಬೇರೆ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ. ಅದನ್ನು ಮುಂದುವರಿಸುತ್ತದೆ ಕೂಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?
ಅಮೆರಿಕದ ಸುಂಕ ನೀತಿಯು ಆರ್ಥಿಕತೆಯ ಬೆಳವಣಿಗೆಯ ಉದ್ದೇಶವನ್ನು ಒಳಗೊಂಡಿಲ್ಲ. ಹಾಗಾಗಿ ಅಮೆರಿಕದ ಏಕಪಕ್ಷೀಯ ವಾದವನ್ನು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

ಚೀನಾಗೆ 50% ಸುಂಕದ ಎಚ್ಚರಿಕೆ ಕೊಟ್ಟ ಟ್ರಂಪ್:
ಅಮೆರಿಕ ಉತ್ಪನ್ನಗಳ ಮೇಲೆ ಚೀನಾ ಹೆಚ್ಚುವರಿಯಾಗಿ ವಿಧಿಸಿದ 34% ಸುಂಕವನ್ನು ವಾಪಸ್ ಪಡೆಯದಿದ್ರೆ, ಶೇ.50ರಷ್ಟು ಪ್ರತಿ ಸುಂಕ ವಿಧಿಸೋದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಚೀನಾ ಡೋಂಟ್‌ಕೇರ್ ಎಂದಿದೆ. ಟ್ರಂಪ್ ತಪ್ಪು ಮೇಲೆ ತಪ್ಪು ಮಾಡ್ತಿದ್ದಾರೆ. ನಿಮ್ಮ ಬ್ಲಾಕ್‌ಮೇಲ್ ಎಲ್ಲಾ ನಮ್ಮತ್ರ ನಡೆಯಲ್ಲ. ತಮ್ಮ ಹಾದಿಗೆ ಎಲ್ರೂ ಬರಬೇಕು ಎಂದು ಅಮೆರಿಕ ಪಟ್ಟುಹಿಡಿದ್ರೆ ನಾವು ಸುಮ್ನಿರಲ್ಲ. ಕೊನೆವರೆಗೂ ಹೋರಾಡ್ತೇವೆ ಎಂದು ಬೀಜಿಂಗ್ ಗುಟುರು ಹಾಕಿದೆ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ