Tag: ಪ್ರತಿಭಟನೆ

  • ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು ರಾಯಚೂರು ಕೃಷಿ ವಿವಿ ವಿದ್ಯಾರ್ಥಿಗಳಿಂದ ಕರಾಳ ದಿನಾಚರಣೆ

    ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು ರಾಯಚೂರು ಕೃಷಿ ವಿವಿ ವಿದ್ಯಾರ್ಥಿಗಳಿಂದ ಕರಾಳ ದಿನಾಚರಣೆ

    -ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕೈಬಿಟ್ಟ ಹಿನ್ನೆಲೆ ಹೋರಾಟ

    ರಾಯಚೂರು: ನಾಡಿನೆಲ್ಲಡೆ ರಂಗುರಂಗಿನ ಬಣ್ಣ ಹಚ್ಚಿ ಹೋಳಿ ಹಬ್ಬವನ್ನ ಸಂಭ್ರಮಿಸಿದ್ರೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಬಿಟೆಕ್ ವಿದ್ಯಾರ್ಥಿಗಳು ಮಾತ್ರ ಮುಖಕ್ಕೆ ಕಪ್ಪುಬಣ್ಣ ಬಳಿದುಕೊಂಡು ಕರಾಳ ದಿನ ಆಚರಿಸಿದರು.

    ಕಳೆದ 27 ದಿನಗಳಿಂದ ಹೋರಾಟ ನಡೆಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸರ್ಕಾರದ ಧೋರಣೆ ಖಂಡಿಸಿ ಕಪ್ಪು ಬಣ್ಣ ಬಳಿದುಕೊಂಡು ಪ್ರತಿಭಟಿಸಿದರು. ಕಾಮದಹನ ಮಾಡದೇ ಕಾಮಣ್ಣನ ಪ್ರತಿಕೃತಿ ಮುಂದೆ ಇಟ್ಟುಕೊಂಡು ಹೋರಾಟ ಮುಂದುವರೆಸಿದ್ದಾರೆ.

    ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ತಾಂತ್ರಿಕ ವಿದ್ಯಾರ್ಥಿಗಳನ್ನ ಕೈಬಿಟ್ಟಿರುವುದನ್ನ ಖಂಡಿಸಿ ವಿದ್ಯಾರ್ಥಿಗಳು ನಿರಂತರ ಹೋರಾಟ ನಡೆಸಿದ್ದಾರೆ. ಆದ್ರೆ ಇದುವರೆಗೂ ಸರ್ಕಾರ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮನ್ನ ಹುದ್ದೆಗಳಿಗೆ ಪರಿಗಣಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

     

  • ಕೈ ಕೈ ಮಿಲಾಯಿಸಿದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

    ಕೈ ಕೈ ಮಿಲಾಯಿಸಿದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

    ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳ ಮುಸುಕಿನ ಗುದ್ದಾಟಗಳು ಬೀದಿಗೆ ಬರತೊಡಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಕಾಂಗ್ರೆಸ್‍ನ ಎಂ.ಸಿ.ಸುಧಾಕರ್ ಬೆಂಬಲಿಗರು ಇಂದು ಕೈ ಕೈ ಮಿಲಾಯಿಸಿದ್ದಾರೆ.

    ಚಿಂತಾಮಣಿ ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್‍ನ ತಾ.ಪಂ. ಅಧ್ಯಕ್ಷೆ ಶಾಂತಮ್ಮಾ ಅವರು ಜೆಡಿಎಸ್ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಅಂತ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಪ್ರಗತಿ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿದರು.

    ಚಿಂತಾಮಣಿ ತಾಲೂಕು ಪಂಚಾಯತಿ ಕಾಂಗ್ರೆಸ್ ಪಕ್ಷದ ವಶದಲ್ಲಿದೆ. ಜೆಡಿಎಸ್ ಸದಸ್ಯರು ಸಭೆಯಿಂದ ಹೊರಬಂದು ಪ್ರತಿಭಟನಾ ಧರಣಿ ನಡೆಸಲು ಆರಂಭಿಸಿದರು. ಈ ವೇಳೆ ಅಧ್ಯಕ್ಷೆ ಶಾಂತಮ್ಮ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತರ ವರ್ತನೆಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ದಿಕ್ಕಾರ ಕೂಗಲು ಆರಂಭಿಸಿದರು.

    ಈ ವೇಳೆ ಪರಸ್ಪರರು ಶಾಸಕ ಹಾಗೂ ಮಾಜಿ ಶಾಸಕ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಒಬ್ಬರ ಮೇಲೊಬ್ಬರು ಹಲ್ಲೆಗೆ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಚಿಂತಾಮಣಿ ನಗರದಲ್ಲಿ ಎರಡು ಪಕ್ಷಗಳ ಕಿತ್ತಾಟದಿಂದ ಬಿಗುವಿನ ವಾತಾವರಣನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಕೊಳ್ಳಲಾಗಿದೆ.

     

  • ಶಾಸಕ ಬಿ.ಆರ್.ಪಾಟೀಲರಿಂದ ಧಮ್ಕಿ ಪ್ರಕರಣ- ಪತ್ರಕರ್ತರ ಸಂಘದಿಂದ ಪ್ರತಿಭಟನೆ

    ಶಾಸಕ ಬಿ.ಆರ್.ಪಾಟೀಲರಿಂದ ಧಮ್ಕಿ ಪ್ರಕರಣ- ಪತ್ರಕರ್ತರ ಸಂಘದಿಂದ ಪ್ರತಿಭಟನೆ

    ಕಲಬುರಗಿ: ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿ ಮೇಲೆ ಶಾಸಕ ಬಿ.ಆರ್.ಪಾಟೀಲ್ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಇಂದು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

    ಶಾಸಕ ಬಿ.ಆರ್.ಪಾಟೀಲ್ ಮಾಧ್ಯಮಗಳಿಗೆ ನಿಂದಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯ ತಡೆಯಲು ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಸೇರಿದಂತೆ ಶಿವರಂಜನ್ ಸತ್ಯಂಪೇಟೆ, ಪಿಟಿಐ ಜೋಶಿ, ರವಿ ನರೋಣ, ಸಿದ್ದು ಸುಬೇದಾರ, ದೇವಿಂದ್ರಪ್ಪ ಕೊಪ್ಪನೂರು ಮುಂತಾದ ಹಲವು ಪತ್ರಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಬಿ.ಆರ್.ಪಾಟೀಲ್ ಅವರ ಮಾಜಿ ಆಪ್ತ ಸಹಾಯಕ ದೇವೆಂದ್ರ ಬಿರಾದಾರ ಅವರ ಕಾಮದಾಟದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಕೋಪಗೊಂಡ ಶಾಸಕರು ವರದಿಗಾರ ಪ್ರವೀಣ್ ರೆಡ್ಡಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದರು.

     

  • ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಕಾಲುವೆ ನಿರ್ಮಾಣ ವಿರೋಧಿಸಿ ವಿಷಸೇವಿಸಿ ರೈತರಿಂದ ಆತ್ಮಹತ್ಯೆ ಯತ್ನ

    ಹಾವೇರಿ: ಮೂಲನಕ್ಷೆ ಬಿಟ್ಟು ಹಾವೇರಿ ತಾಲೂಕಿನ ಕಳ್ಳಿಹಾಳ ಮತ್ತು ತೋಟದಯಲ್ಲಾಪುರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರಿಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅಜ್ಜಪ್ಪ ಮತ್ತು ಹೊನ್ನಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು. ಕಳೆದ ಎರಡು ವರ್ಷಗಳಿಂದ ಕಳ್ಳಿಹಾಳ ಗ್ರಾಮದ ಬಳಿ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಮೂಲನಕ್ಷೆಯನ್ನ ತೋರಿಸುತ್ತಿಲ್ಲ. ಮೊದಲು ಸರ್ವೇ ಮಾಡಿದ ಜಮೀನು ಬೇರೆ, ಆದ್ರೆ ಈಗ ಕಾಲುವೆ ನಿರ್ಮಾಣ ಮಾಡುತ್ತಿರೋ ಜಮೀನುಗಳು ಬೇರೆ. ಹಾಗಾಗಿ ಅಧಿಕಾರಿಗಳು ಮೂಲನಕ್ಷೆಯನ್ನ ತೋರಿಸಿ ತುಂಗಾಮೇಲ್ದಂಡೆ ಕಾಲುವೆ ನಿರ್ಮಾಣ ಮಾಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.

    ಕಳ್ಳಿಹಾಳ ಹಾಗೂ ತೋಟದಯಲ್ಲಾಪುರ ಗ್ರಾಮದ ರೈತರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಇದೂವರೆಗೂ ಯಾರು ಕಾಲುವೆ ನಿರ್ಮಾಣದ ಮೂಲಕ್ಷೆಯನ್ನು ತೋರಿಸಿಲ್ಲ. ಇನ್ನು ಅಸ್ವಸ್ಥಗೊಂಡ ಅಜ್ಜಪ್ಪ ಹಾಗೂ ಹೊನ್ನಪ್ಪ ರೈತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಜಲ್ಲಾಸ್ಪತ್ರೆ ಮುಂದೆ ರೈತರು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹಿಸಿ ಕಲೆ ಸಮಯ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಇನ್ನಾದ್ರೂ ಅಧಿಕಾರಿಗಳು ಪರಿಶೀಲನೆ ಮಾಡಿ ಮೂಲನಕ್ಷೆ ತೋರಿಸಿ ಕಾಲುವೆ ನಿರ್ಮಾಣ ಮಾಡಬೇಕಿದೆ.

     

  • ಬಳ್ಳಾರಿ ವಿಮ್ಸ್ ಡಾಕ್ಟರ್ ಎಡವಟ್ಟಿಗೆ ಬಾಣಂತಿ, ಮಗು ಸಾವು?

    ಬಳ್ಳಾರಿ ವಿಮ್ಸ್ ಡಾಕ್ಟರ್ ಎಡವಟ್ಟಿಗೆ ಬಾಣಂತಿ, ಮಗು ಸಾವು?

    – ಆಸ್ಪತ್ರೆ ಎದುರು ಶವಗಳನ್ನಿಟ್ಟು ಪ್ರತಿಭಟನೆ
    – ಶವ ನೀಡಲು ಹಣ ಕೇಳಿದ ಸಿಬ್ಬಂದಿ!

    ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮಹಿಳೆ ಹಾಗೂ ಮಗುವೊಂದು ಮೃತಪಟ್ಟಿದೆ.

    ಸಂಡೂರು ತಾಲೂಕಿನ ಕೆರೆ ರಾಂಪುರ ಗ್ರಾಮದ ಸುಜಾತಾರನ್ನು ಭಾನುವಾರ ಸಂಜೆ ಹೆರಿಗೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದ್ರೆ ವಿಮ್ಸ್ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಮಗುವಿನ ಜೊತೆ ಸುಜಾತಾ ಮೃತಪಟ್ಟಿದ್ದಾರೆ. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷ ಖಂಡಿಸಿ ಸುಜಾತಾ ಸಂಬಂಧಿಕರು ವಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಸಂಜೆ ಹೆರಿಗೆಗಾಗಿ ಸುಜಾತಾ ಆಗಮಿಸಿದ ವೇಳೆಯಲ್ಲಿ ಹೆರಿಗೆ ನಂತರ ಮಗು ಮತ್ತು ಬಾಣಂತಿ ಆರೋಗ್ಯವಾಗಿದ್ದಾರೆಂದು ಹೇಳಿದ ವೈದ್ಯರು ನಂತರ ಏಕಾಎಕಿ ಮಗು ಮತ್ತು ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶವ ನೀಡಲು ಹಣ ಕೊಡಿ ಅಂತಾ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷಕ್ಕೆ ಸುಜಾತಾ ಬಲಿಯಾಗಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಇಂದು ಬೆಳಗ್ಗೆಯಿಂದ ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಕೃಷ್ಣಮೂರ್ತಿ ಪ್ರತಿಭಟನಾಕಾರರ ಮನವೊಲಿಸಲು ಹಾರಿಕೆ ಉತ್ತರ ನೀಡಿದ ಪರಿಣಾಮ ಪ್ರತಿಭಟನಾಕಾರರು ಆಕ್ರೋಶ ಮತ್ತಷ್ಟೂ ಹೆಚ್ಚಾಗಿದೆ. ಹೀಗಾಗಿ ಪ್ರತಿಭಟನೆಗೆ ಬೆಚ್ಚಿದ ವಿಮ್ಸ್ ನಿರ್ದೇಶಕರು ಪ್ರತಿಭಟನಾ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದರು. ಆದ್ರೆ ಪ್ರತಿಭಟನಾಕಾರರು ಪಟ್ಟು ಬಿಡದೆ ವಿಮ್ಸ್ ನಿದೇರ್ಶಕರಿಗೆ ದಿಗ್ಬಂಧನ ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

    ಹೀಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ನಾಲ್ಕು ಸಿಬ್ಬಂದಿಯನ್ನು ಅಮಾನತು ಮಾಡಿ ನಿರ್ದೇಶಕ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಆದ್ರೆ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ಕೈಬಿಡಲ್ಲ ಎಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

     

  • ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

    ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

    ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಅವರು ಮಹಿಳಾ ಅಧಿಕಾರಿಗೆ ನೀಡಿರುವ ಮಾನಸಿಕ ಕಿರುಕುಳ ಆರೋಪವನ್ನು ಮುಚ್ಚಿ ಹಾಕಲು, ಗಿರಿಜನರನ್ನು ಬೆದರಿಸಿ ಚಾಮರಾಜನಗರಕ್ಕೆ ಕರೆತಂದು ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳಾ ಅಧಿಕಾರಿ ಸರಸ್ವತಿ ಅವರು ಆರೋಪ ಮಾಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವಿಸ್ತೃತ ವರದಿಯಾಗಿತ್ತು. ಮಂಗಳವಾರ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಘೋಷಣೆ ಕೂಗಿದ್ದರು. ಇದನ್ನು ನೋಡಿದವರು ಸರಸ್ವತಿ ಅವರು ಭ್ರಷ್ಟ ಅಧಿಕಾರಿ ಇರಬಹುದು ಎಂದುಕೊಂಡಿದ್ದರು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಮಾತನಾಡಿಸಿದಾಗ ಇದು ಶಾಸಕ ಪುಟ್ಟರಂಗಶೆಟ್ಟಿ ಅವರ ಕುತಂತ್ರ ಎಂಬುದು ಬಯಲಾಗಿದೆ.

    ಚಾಮರಾಜನಗರದಲ್ಲಿ ಒಂದು ಸಭೆ ಇದೆ ಅಲ್ಲಿಗೆ ಬನ್ನಿ ಎಂದು ಪುಟ್ಟರಂಗಶೆಟ್ಟಿ ಅವರ ಬಂಟರು ಗಿರಿಜನರನ್ನು ಕರೆದಿದ್ದು, ಇದಕ್ಕೆ ಒಪ್ಪದ ಗಿರಿಜನರು ನಾವು ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ನೀವು ಬರಲಿಲ್ಲ ಎಂದರೆ ನಿಮ್ಮ ಮನೆಗಳನ್ನು ಕೆಡುವುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ದಿಕ್ಕು ತೋಚದ ಜನರು ಚಾಮರಾಜನಗರದಲ್ಲಿ ಸಭೆ ಇದೆ ಎಂದು ಬಂದಿದ್ದಾರೆ. ನಗರಕ್ಕೆ ಬಂದ ಮೇಲೆ ಎಲ್ಲರೂ ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹೆದರಿಸಿದ್ದಾರೆ. ಇದಕ್ಕೆ ಹೆದರಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

    ಸರಸ್ವತಿ ಮೇಡಂ ನಮಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೊದಲೇ ವಿಷಯ ತಿಳಿದಿದ್ದರೆ ನಾವು ಪ್ರತಿಭಟನೆಗೆ ಹೋಗುತ್ತಿರಲಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಹೇಳುತ್ತಾರೆ.

  • ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಸಮಗ್ರ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ: ಅಜ್ಜಿಯನ್ನು ಧರಧರನೇ ಎಳೆದೊಯ್ದ ಪೊಲೀಸ್ರು!

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸಮಗ್ರ ನೀರಾವರಿ ಯೋಜನೆಗೆ ಒತ್ತಾಯಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಅಜ್ಜಿಯೊಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದ ಘಟನೆ ನಡೆದಿದೆ.

    ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಎದುರಿನಿಂದ ಮೆರವಣಿಗೆ ಹೋಗಿ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದರು. ಮಾತ್ರವಲ್ಲದೇ ಚಾಲುಕ್ಯ ಸರ್ಕಲ್ ಮಧ್ಯೆಯೇ ಪ್ರತಿಭಟನಾಕಾರರು ಕುಳಿತ ಪರಿಣಾಮ ಸರ್ಕಲ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇದರಿಂದ ಯಾವುದೇ ಅಹಿತರ ಘಟನೆ ನಡೆಯಬಾರದೆಂದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.


    ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಬಯಲುಸೀಮೆಯ ನೀರಿನ ಸಮಸ್ಯೆಗೆ ಏನು ಪರಿಹಾರ ಕೊಟ್ಟಿದ್ದೀರಿ?. ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಚಿಕ್ಕಾಬಳ್ಳಾಪುರ ರೈತರು ಕೂಡ ಇಂದು ಖುದ್ದಾಗಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಬಂದ್ ಸಹ ನಡೆಸುತ್ತೇವೆ. ಕರ್ನಾಟಕ ಬಂದ್ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ ತಜ್ಞರ ಸಮಿತಿ ರಚನೆ ಮಾಡಿ ನೀರಿನ ಪರಿಹಾರ ನೀಡೋದಾಗಿ ಹೇಳಿತ್ತು. ಆದ್ರೇ ಈಗ ಸಿಎಂ ನಿದ್ದೆಗಣ್ಣಲ್ಲಿದ್ದಾರೆ ಅಂತಾ ಇತ್ತ ಚಿಕ್ಕಬಳ್ಳಾಪುರ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯೊಬ್ಬರನ್ನೂ ಕೂಡ ಯಾವುದೇ ಮುಲಾಜಿಲ್ಲದೇ ಧರಧರನೇ ಎಳೆದೊಯ್ದಿದ್ದಾರೆ.

     

  • ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇಂದು ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ಅಸ್ವಸ್ಥರಾಗಿ ಸುಸ್ತಾದಂತೆ ಕಂಡುಬಂದರು.

    ಇಂದು ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಖಂಡಿಸಿ, ಹುನಗುಂದ ತಾಲೂಕು ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಉಮಾಶ್ರೀ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಉಮಾಶ್ರೀ ಅಸ್ವಸ್ಥರಾಗುತ್ತಿದ್ದಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು.

    ಉಮಾಶ್ರೀ ಅವರಿಗೆ ಯಾವುದೇ ತೊಂದರೆಯಿಲ್ಲ, ವಿಶ್ರಾಂತಿ ಅಗತ್ಯವಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಕುಸುಮಾ ಮಾಗಿ ಹೇಳಿದ್ದಾರೆ.

     

  • ಡೈರಿ ಸ್ಫೋಟ- ಮೈಸೂರಿನ ಸಿಎಂ ನಿವಾಸದ ಎದುರು ಬಿಜೆಪಿ ಪ್ರತಿಭಟನೆ

    ಡೈರಿ ಸ್ಫೋಟ- ಮೈಸೂರಿನ ಸಿಎಂ ನಿವಾಸದ ಎದುರು ಬಿಜೆಪಿ ಪ್ರತಿಭಟನೆ

    ಮೈಸೂರು: ರಾಜ್ಯ ನಾಯಕರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ವಿಚಾರ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

    ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

    ಮೈಸೂರಿನಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಮುಖಂಡರಾದ ರಾಮದಾಸ್, ಎಂ.ಶಿವಣ್ಣ ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

     

  • ರಾಯಚೂರು: ಟವರ್ ಏರಿ ಸರ್ಕಾರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿ ಪ್ರತಿಭಟನೆ

    ರಾಯಚೂರು: ಟವರ್ ಏರಿ ಸರ್ಕಾರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿ ಪ್ರತಿಭಟನೆ

    ರಾಯಚೂರು: ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಕೃಷಿ ತಾಂತ್ರಿಕ ಪದವಿಧರರನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರ್ ವಿದ್ಯಾರ್ಥಿಯೋರ್ವ ಮೊಬೈಲ್ ಟವರ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.

    ರಾಯಚೂರು ಕೃಷಿ ವಿವಿಯಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಸಂಕೇತ್ ನಗರದ ಲಿಂಗಸುಗೂರು ರಸ್ತೆಯಲ್ಲಿರುವ ಎಸಿಬಿ ಕಚೇರಿ ಬಳಿಯ ಟವರ್ ಹತ್ತಿ ಸುಮಾರು 2 ಗಂಟೆಗಳ ಕಾಲ ಹೋರಾಟ ನಡೆಸಿದ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಕೊನೆಗೆ ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ಮನವೊಲಿಸಿದ್ದರಿಂದ ಸಂಕೇತ್ ಕೆಳಗಿಳಿದಿದ್ದಾನೆ.

    ಸ್ಥಳಕ್ಕೆ ಧಾವಿಸಿದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕೂಡಲೇ ಸರ್ಕಾರದ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.

    ಕಳೆದ 7 ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬೀಗ ಜಡಿದು ಹೋರಾಟ ನಡೆಸಿದರೂ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ.

    ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಸೆಪ್ಟೆಂಬರ್ 16, 2016 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ರಾಜ್ಯ ಪತ್ರದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನ ಕೈಬಿಡಲಾಗಿದೆ. ಈ ಮೊದಲು ಹೊರಡಿಸಿದ್ದ ಗೆಜೆಟ್ ಅಧಿಸೂಚನೆಗಳಲ್ಲಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ಇಂಜಿನಿಯರಿಂಗ್ ಪದವಿಯನ್ನು ಪರಿಗಣಿಸಲಾಗಿತ್ತು. ಈಗಲೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಫೆಬ್ರವರಿ 23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತಿಮವಾಗಿ ಮನವಿಯನ್ನು ಸಲ್ಲಿಸುತ್ತೇವೆ. ಸಮಸ್ಯೆಗೆ ಸ್ಪಂದಿಸದಿದ್ದರೇ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಅಂತ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.