Tag: ಪ್ರತಿಭಟನೆ

  • ಸಿಎಂ ಗೃಹ ಕಚೇರಿಗೆ ಮುತ್ತಿಗೆ ಭೀತಿ: ರಾತ್ರೋರಾತ್ರಿ ಸಾವಿರಾರು ತುಂಗಭದ್ರಾ ಕಾರ್ಮಿಕರ ಬಂಧನ

    ಸಿಎಂ ಗೃಹ ಕಚೇರಿಗೆ ಮುತ್ತಿಗೆ ಭೀತಿ: ರಾತ್ರೋರಾತ್ರಿ ಸಾವಿರಾರು ತುಂಗಭದ್ರಾ ಕಾರ್ಮಿಕರ ಬಂಧನ

    -ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಹೊರಟಿದ್ದ ಕಾರ್ಮಿಕರು

    ರಾಯಚೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಯಚೂರು ಸೇರಿ ವಿವಿಧೆಡೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದ 800 ಹೆಚ್ಚು ತುಂಗಭದ್ರಾ ವಲಯ ಹಂಗಾಮಿ ಕಾರ್ಮಿಕರನ್ನ ಬಂಧಿಸಲಾಗಿದೆ.

    ಬುಧವಾರ ಮಧ್ಯರಾತ್ರಿ ಬೆಂಗಳೂರಿಗೆ ಹೋಗದಂತೆ ತುಮಕೂರು ಬಳಿ ಬಂಧಿಸಿ ರಾಯಚೂರು ಸೇರಿ ಆಯಾ ಜಿಲ್ಲೆಗಳಿಗೆ ಕರೆತರಲಾಗಿದೆ. ಕಾರ್ಮಿಕ ಮುಖಂಡರನ್ನ ಪೊಲೀಸ್ ಠಾಣೆಗಳಲ್ಲಿ ಬಂಧಿಸಿಡಲಾಗಿದೆ.

    ವೇತನ ಹೆಚ್ಚಳ, ಗುತ್ತಿಗೆ ಕಾರ್ಮಿಕ ಪದ್ದತಿ ರದ್ದತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಏಪ್ರಿಲ್ 4 ರಿಂದ ಬಳ್ಳಾರಿ ಮುನಿರಾಬಾದ್‍ನಿಂದ ಕಾರ್ಮಿಕರು ಬೃಹತ್ ಪಾದಯಾತ್ರೆ ಜಾಥಾ ನಡೆಸಿದ್ದರು. ಅಂಬೇಡ್ಕರ್ ಜಯಂತಿಯಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಮುತ್ತಿಗೆ ಹಮ್ಮಿಕೊಂಡಿದ್ದರು. ಹೀಗಾಗಿ ಮಾರ್ಗ ಮಧ್ಯದಲ್ಲೆ ಕಾರ್ಮಿಕರನ್ನ ಬಂಧಿಸಲಾಗಿದೆ. ಬಂಧನವೇಳೆ ಪೊಲೀಸರು ಕನಿಷ್ಠ ಸೌಜನ್ಯವನ್ನೂ ತೋರಿಸಿಲ್ಲ ಅಂತ ಆರೋಪಿಸಿರುವ ಕಾರ್ಮಿಕರು ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.

     

  • ಅಕ್ರಮ ಮದ್ಯ ಮಾರಾಟಗಾರನ ಬಂಧನಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

    ಅಕ್ರಮ ಮದ್ಯ ಮಾರಾಟಗಾರನ ಬಂಧನಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

    ಹಾವೇರಿ: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದ ಮಹಿಳೆಯರು ಭಾನುವಾರ ರಾತ್ರಿ ಆಡೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.

    ಕಳೆದ ಕೆಲವು ತಿಂಗಳಿನಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮದ ಜನರು ಭಾನುವಾರ ಸಂಜೆ ಹಿಡಿದು ಆಡೂರು ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳದೇ ಅವನನ್ನು ಕಳುಹಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಲವರಕೊಪ್ಪ ಗ್ರಾಮದ ಮಹಿಳೆಯರು ಠಾಣೆಯ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.

    ಈ ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

     

  • ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸ ಬ್ರಹ್ಮಪುರದಲ್ಲಿ ಮಹಿಳೆಯೊಬ್ರು ಇಂದು ಬೆಳ್ಳಂಬೆಳಗ್ಗೆ ನ್ಯಾಯಕ್ಕಾಗಿ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಧರಣಿ ಯಾಕೆ?: ಹುಬ್ಬಳ್ಳಿ ಮೂಲದ ಗೀತಾ, ಹರಿಹರದ ಗೋವಿಂದ ಎಂಬವರನ್ನ 8 ವರ್ಷದ ಹಿಂದೆ ವಿವಾಹ ಆಗಿದ್ದರು. ಬಳಿಕ ಮನೆಯವರ ಕಿರುಕುಳ ತಾಳಲಾರದೇ ತವರು ಮನೆಗೆ ಹೋಗಿದ್ರು. ಅಲ್ಲದೆ ಗಂಡನ ಮೇಲೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆದ್ರೆ ಇದೀಗ ತಮ್ಮ ಮಗುವಿನ ಭವಿಷ್ಯದ ದೃಷ್ಠಿಯಿಂದ ತನಗೆ ಪತಿ ಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯಿಂದ ಗಂಡನ ಮನೆಯ ಮುಂದೆ ಮಗಳ ಜೊತೆ ಧರಣಿ ಕುಳಿತುಕೊಂಡಿದ್ದಾರೆ. ಆದರೆ ಗಂಡನ ಮನೆಯವರು ಮಾತ್ರ ಯಾವುದಕ್ಕೂ ಲೆಕ್ಕ ಹಾಕುತ್ತಿಲ್ಲ. ಗೀತಾ ಪತಿ ಮಾತ್ರ ಬೆಳಗ್ಗೆಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡುತ್ತಿಲ್ಲ.

    ಗಂಡನ ಜೊತೆ ಜೀವನ ಮಾಡದೇ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಮನೆ ಮುಂದೆಯೇ ಮಗುವಿನ ಜೊತೆ ಕುಳಿತು ಗೀತಾ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

     

  • ಪವರ್ ಗ್ರಿಡ್ ಲೈನ್ ಅಳವಡಿಕೆಗೆ ವಿರೋಧಿಸಿ ಪವರ್ ಲೈನ್ ಹಿಡಿದ ರೈತರು

    ಪವರ್ ಗ್ರಿಡ್ ಲೈನ್ ಅಳವಡಿಕೆಗೆ ವಿರೋಧಿಸಿ ಪವರ್ ಲೈನ್ ಹಿಡಿದ ರೈತರು

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ಬಳಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ನೂತನ ಪವರ್ ಗ್ರಿಡ್ ಲೈನ್ ಅಳವಡಿಕೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಪವರ್ ಲೈನ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಬುಚನಹಳ್ಳಿ ಗ್ರಾಮದ ಬಳಿ ಧರ್ಮಪುರಿಯಿಂದ ಮಧುಗಿರಿಯವರೆಗೂ ನೂತನ ಪವರ್ ಗ್ರಿಡ್ ಲೈನ್ ಅಳವಡಿಸಲು ಪವರ್ ಗ್ರಿಡ್ ಕಾರ್ಪೋರೇಷನ್ ಮುಂದಾಗಿದೆ. ಇನ್ನೂ ಲೈನ್ ಅಳವಡಿಕೆಗೆ ರೈತರ ಭಾರೀ ವಿರೋಧ ವ್ಯಕ್ತವಾಗಿದ್ದು, ಕೆಲಸ ಮಾಡುತ್ತಿದ್ದ ಲೈನ್ ಕಾಮಗಾರಿಯನ್ನ ರೈತರು ತಡೆದಿದ್ದಾರೆ. ಅಲ್ಲದೆ ರೈತರು ಸರ್ವೆಯಾಗಿ ಪರಿಹಾರ ನೀಡುವವರೆಗೂ ಲೈನ್ ಕಾಮಗಾರಿಯನ್ನ ಮಾಡಬಾರದೆಂದು ಆಗ್ರಹಿಸಿದ್ದಾರೆ.

    ರೈತರು ಪವರ್ ಗ್ರಿಡ್ ಲೈನ್ ಹಿಡಿದು ಜೋತು ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನ ಹಾಕಿದ್ದಾರೆ. ಬುಚನಹಳ್ಳಿ ಬಳಿಯ ಲೈನ್ ಹಿಡಿದು ರೈತರು ನಮ್ಮ ಪ್ರಾಣ ಬಿಡ್ತೆವೆ, ಲೈನ್ ಅಳವಡಿಕೆಗೆ ಅವಕಾಶ ಯಾವುದೇ ಕಾರಣಕ್ಕೂ ನೀಡಲ್ಲ ಅಂತಾ ಎಚ್ಚರಿಕೆಯನ್ನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪವರ್ ಲೈನ್ ಅಳವಡಿಕೆ ಮಾಡುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.

    ರೈತರ ವಿರೋಧದ ಹಿನ್ನಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪವರ್ ಲೈನ್ ಹಿಡಿದು ವಿನೂತನವಾಗಿ ಪ್ರತಿಭಟನೆಯನ್ನ ನಡೆಸುತ್ತಿರುವ ರೈತರ ಮನವೊಲಿಸಲು ಪೊಲಿಸರು ಹರಸಾಹಸವನ್ನ ಪಡ್ತಿದ್ದಾರೆ. ಅಲ್ಲದೆ ಲೈನ್ ಎಳೆಯುತ್ತಿರುವ ಕಾರ್ಮಿಕರನ್ನ ಕೂಡಲೇ ನಿಲ್ಲಿಸುವಂತೆ ನೂರಾರು ರೈತರು ಒತ್ತಾಯಿಸಿದ್ದಾರೆ.

    https://www.youtube.com/watch?v=wpp66LbFfPc

     

  • ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಅನುಮತಿ ಇಲ್ಲದೇ ಮಂಗಳೂರಿನಲ್ಲಿ ಪ್ರತಿಭಟನೆ: ಪಿಎಫ್‍ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

    ಮಂಗಳೂರು: ಪೊಲೀಸರ ಅನುಮತಿ ಇಲ್ಲದೆ ಮಂಗಳೂರು ಕಮಿಷನರೇಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್‍ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಸುರತ್ಕಲ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಿದ್ದರು. ಆದರೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಅಕ್ರಮವಾಗಿ ಕೂಡಿಟ್ಟು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಇವತ್ತು ಬೆಳಗ್ಗೆ ಕಮಿಷನರೇಟ್ ಮುಂದೆ ಪಿಎಫ್‍ಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿತ್ತು.

    ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ರೂ, ಜಗ್ಗದ ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ನೂರಾರು ಕಾರ್ಯಕರ್ತರು ಸೇರಿದ್ದರಿಂದ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ಬಳಿಕ ಕೆಲವು ಕಾರ್ಯಕರ್ತರನ್ನು ಬಲವಂತವಾಗಿ ಹೊತ್ತೊಯ್ದು ಪೊಲೀಸರು ಬಂಧಿಸಿದರು.

     

  • ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್, ಅಂಪಾರು ಗ್ರಾಮದ ವಿಎ ಕಾಂತರಾಜ್, ಡಿಸಿ ಗನ್ ಮ್ಯಾನ್ ಸೇರಿದಂತೆ 7 ಮಂದಿ ಮೇಲೆ ಮರಳು ದಂಧೆಕೋರರು ಕೊಲೆಗೆ ಯತ್ನ ನಡೆಸಿ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಎಸ್‍ಪಿ ಕೆ.ಟಿ.ಬಾಲಕೃಷ್ಣ ಅವರಲ್ಲಿ ಕಂದಾಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

    ಉಡುಪಿಯ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದ ಪ್ರತಿಭಟನಾ ಕಟ್ಟೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರತಿಭಟಿಸಿದ್ದಾರೆ. ಇಂದು ಕಂದಾಯ ಇಲಾಖೆಯ ಯಾವುದೇ ವಿಭಾಗಗಳಲ್ಲಿ ಸಾರ್ವಜನಿಕರ ಕೆಲಸ ಆಗುವುದಿಲ್ಲ. ಯಾವುದೇ ಫೈಲ್‍ಗಳು ಮೂವ್ ಆಗುವುದಿಲ್ಲ.

    ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಒಂದೇ ದಿನ ತಮ್ಮ ಹಕ್ಕಿನ ರಜೆ ತೆಗೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಆರು ತಾಲೂಕಿನ ಎಲ್ಲಾ ಆಫೀಸರ್‍ಗಳು- ಕಚೇರಿಗಳ ಸಾವಿರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೇಲಾಧಿಕಾರಿಗಳಿಗೆ ಬೆಂಬಲ ನೀಡಿದ್ದಾರೆ.

    ತಪ್ಪಿತಸ್ಥರೆಲ್ಲರ ಬಂಧನವಾಗಬೇಕು, ಮರಳು ಮಾಫಿಯಾದ ಹಿಂದಿರುವ ಶಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ರೂಪುರೇಷೆ ಬದಲಾಯಿಸಿ- ಉಗ್ರ ಹೋರಾಟಕ್ಕೆ ಇಳಿಯಲು ಸರ್ಕಾರಿ ನೌಕರರ ಸಂಘ ನಿರ್ಧಾರ ಮಾಡಿದೆ.

  • ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ: ಉದ್ರಿಕ್ತರಿಂದ ಬಸ್‍ಗೆ ಕಲ್ಲು ತೂರಾಟ

    ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ: ಉದ್ರಿಕ್ತರಿಂದ ಬಸ್‍ಗೆ ಕಲ್ಲು ತೂರಾಟ

    ರಾಯಚೂರು: ವಾಲ್ಮೀಕಿ ವೃತ್ತದ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಎರಚಿರುವ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಇದರಿಂದ ಆಕ್ರೋಶಗೊಂಡ ವಾಲ್ಮೀಕಿ ಸಮಾಜದ ಯುವಕರು ಗ್ರಾಮದ ಮುಖ್ಯ ರಸ್ತೆ ತಡೆದು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಗ್ರಾಮಕ್ಕೆ ಬಂದ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಬಸ್ ಗಾಜನ್ನ ಪುಡಿಪುಡಿ ಮಾಡಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಣಕ್ಕೆ ತಂದಿರುವ ಪೊಲೀಸರು ಪರಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

    ಆರು ತಿಂಗಳ ಹಿಂದೆ ಬಾಗಲವಾಡ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಈಗ ಪುನಃ ಮರುಕಳಿಸಿದಂತಾಗಿದೆ. ಘಟನೆ ಹಿನ್ನೆಲೆಯಲ್ಲಿ ರಾಯಚೂರು ಸಂಸದ ಬಿ.ವಿ.ನಾಯಕ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ತಪ್ಪಿತಸ್ಥರನ್ನ ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ರು.

    ಘಟನೆಯ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸದ್ಯ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

     

  • ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

    ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

    ಯಾದಗಿರಿ: ಕಕ್ಕೇರಾ ಪಟ್ಟಣವನ್ನು ತಾಲೂಕು ಕೇಂದ್ರವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕಕ್ಕೇರಾ ಪಟ್ಟಣವನ್ನು ಬಂದ್ ಮಾಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾದ ಪುರಸಭೆ ಹೊಂದಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣವನ್ನು ಕೈಬಿಟ್ಟು ಹುಣಸಗಿ, ವಡಗೇರಾ ಹಾಗೂ ಗುರುಮಠಕಲ್ ಹೋಬಳಿ ಕೇಂದ್ರಗಳನ್ನು ತಾಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಕಕ್ಕೇರಾವನ್ನು ತಾಲೂಕು ಮಾಡಬೇಕು ಎನ್ನುವುದು ದಶಕಗಳಿಂದ ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ನಮಗೆ ನಿರಾಸೆಯಾಗಿದೆ ಎಂದು ಸರ್ಕಾರದ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದರು.

    ಬೆಳಗ್ಗೆಯಿಂದಲೇ ಕಕ್ಕೇರಾ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ವಿವಿಧ ಸಂಘಟನೆ ಕಾರ್ಯಕರ್ತರು ಹಾಗೂ ಪಟ್ಟಣದ ನಿವಾಸಿಗಳೆಲ್ಲರು ಸೇರಿ ಶಾಂತಪುರ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬಸ್ ಹಾಗೂ ಇನ್ನಿತರ ವಾಹನಗಳು ಕಿಮೀ ಗಟ್ಟಲೆ ರಸ್ತೆಯಲ್ಲಿ ನಿಂತುಕೊಂಡಿದ್ದವು. ವಾಹನ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಮಕ್ಕಳು, ವೃದ್ಧರು, ಹಾಗೂ ದೂರದ ಊರಿಗೆ ತೆರಳುವ ಜನರಿಗೆ ಬೀಸಿಲಿನ ತಾಪ ಜೊತೆ ಪ್ರತಿಭಟನೆ ಬಿಸಿ ತಟ್ಟಿತ್ತು.

    ಸಿಎಂ ಸಿದ್ದರಾಮಯ್ಯ ಹೋರಾಟಕ್ಕೆ ಮಣಿದು ತಾಲೂಕಾ ಕೇಂದ್ರವೆಂದು ಘೋಷಣೆ ಮಾಡಬೇಕು ಇಲ್ಲದ್ದಿದ್ದರೆ ಸಿಎಂ ನಿವಾಸ ಇಲ್ಲವೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದ್ದಾರೆ. ಕಕ್ಕೇರಾ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಹೋರಾಟದಲ್ಲಿ ಭಾಗವಹಿಸಿದ್ದರು.

     

  • ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಎಂಜಿನ್ ದೋಷದಿಂದ ಕೆಟ್ಟು ನಿಂತ ರೈಲು-2 ಗಂಟೆ ಕೊಂಕಣ ರೈಲು ಸಂಚಾರ ಸ್ಥಗಿತ

    ಕಾರವಾರ: ರೈಲ್ವೇ ಎಂಜಿನ್ ನಲ್ಲಿ ಉಂಟಾದ ದೋಷದಿಂದಾಗಿ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮದ ಸಮೀಪ ಮಾರ್ಗ ಮಧ್ಯದಲ್ಲೇ ಕೊಂಕಣ ರೈಲು ಕಟ್ಟು ನಿಂತ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

    ಇಂದು ಬೆಳಗ್ಗೆ 6 ಗಂಟೆಗೆ ಕಾರವಾರ ನಿಲ್ದಾಣದಿಂದ ಪೆರ್ಣಕ್ಕೆ ಪ್ಯಾಸೆಂಜರ್ ರೈಲು ತನ್ನ ಪ್ರಯಾಣವನ್ನು ಆರಂಭಿಸಿತ್ತು. ಮಾರ್ಗ ಮಧ್ಯೆ ಅಸ್ನೋಟಿ ಎಂಬಲ್ಲಿ ಎಂಜಿನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ತನ್ನ ಪ್ರಯಾಣವನ್ನು ನಿಲ್ಲಿಸಿತು.

    ಈ ರೈಲು ಪ್ರತಿದಿನ ಕಾರವಾರದಿಂದ ಗೋವಾ ರಾಜ್ಯದ ಪೆರ್ಣಕ್ಕೆ ಸಂಚರಿಸುತ್ತದೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರತಿದಿನ ಸುಮಾರು 600 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಈ ಹಿಂದೆಯೂ ಇದೇ ರೀತಿಯಲ್ಲಿ ಎಂಜಿನ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಈ ಸಂಬಂಧ ಪ್ರಯಾಣಿಕರು ರೈಲ್ವೆ ಇಲಾಖೆಗೆ ದೂರು ನೀಡಿದ್ರೂ ಇಲಾಖೆ ಮಾತ್ರ ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಇದರಿಂದ ಕೋಪಗೊಂಡ ಜನರು ಕೆಟ್ಟು ನಿಂತಿದ್ದ ರೈಲಿನ ಮುಂದೆ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಬದಲಿ ವ್ಯವಸ್ಥೆ ಮಾಡಿದ್ದ ರೈಲನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

     

  • ಕೂರ್ಮಾ ರಾವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ- ಸಿಇಓ ಪರ ವಿವಿಧ ಸಂಘಟನೆಗಳ ಹೋರಾಟ

    ಕೂರ್ಮಾ ರಾವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ- ಸಿಇಓ ಪರ ವಿವಿಧ ಸಂಘಟನೆಗಳ ಹೋರಾಟ

    ರಾಯಚೂರು: ಜಿಲ್ಲಾ ಪಂಚಾಯ್ತಿ ಸಿಇಓ ಕೂರ್ಮರಾವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಅಂತ ವಿವಿಧ ಸಂಘಟನೆಗಳು ರಾಯಚೂರಿನಲ್ಲಿ ಪ್ರತಿಭಟನೆ ಮಾಡಿವೆ.

    ರಾಯಚೂರು ತಾಲೂಕಿನ ಆತ್ಕೂರಿನಲ್ಲಿ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ವೇಳೆ ಕೊಳಚೆ ನೀರು ದಾಟಲು ಬಿಡದೇ ಗ್ರಾಮಸ್ಥರೇ ಸ್ವತಃ ಸಿಇಓ ಕೂರ್ಮಾ ರಾವ್ ಅವರನ್ನ ಎತ್ತಿಕೊಂಡು ಹೋಗಿದ್ದಾರೆ. ಇದರಲ್ಲಿ ಕೂರ್ಮರಾವ್ ಅವರ ತಪ್ಪಿಲ್ಲ. ಹೀಗಾಗಿ ದಕ್ಷ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬಾರದು. ಮಾಧ್ಯಮಗಳ ವರದಿ ಹಾಗೂ ಸದನದಲ್ಲಿ ನಡೆದ ಚರ್ಚೆಯನ್ನ ನಾವು ಖಂಡಿಸುತ್ತೇವೆ ಅಂತ ರಾಯಚೂರು ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಆತ್ಕೂರು ಗ್ರಾಮಸ್ಥರಾದ ನರಸಪ್ಪ ಹಾಗೂ ದೇವಪ್ಪ ನಾಯಕ್ ನಾವೇ ಕಾಮಗಾರಿ ತೋರಿಸಲು ಎತ್ತಿಕೊಂಡು ಹೋಗಿದ್ದೇವೆ. ಸಿಇಓ ಎತ್ತಿಕೊಂಡು ಹೋಗಲು ಕೇಳಿಲ್ಲ ಎಂದಿದ್ದಾರೆ. ಆತ್ಕೂರು ಗ್ರಾಮಸ್ಥರು, ರಾಜ್ಯ ಸರ್ಕಾರಿ ನೌಕರರ ಸಂಘ, ಪೌರಸೇವಾ ನೌಕರರ ಸಂಘ, ರಾಜ್ಯ ಎಂಜಿನಿಯರಿಂಗ್ ಸೇವಾ ಸಂಘ ಸೇರಿದಂತೆ ವಿವಿಧ ಸಂಘಗಳ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    https://www.youtube.com/watch?v=XtAQK89gdoU