Tag: ಪ್ರತಿಭಟನೆ

  • ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗುಂಡಿಗೆ ಬಿದ್ದ ಪರಿಣಾಮ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ನಾಯಂಡನಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ದುರ್ದೈವಿ ಮಹಿಳೆಯನ್ನು 52 ವರ್ಷದ ರಾಧಾ ಎಂಬುವುದಾಗಿ ಗುರುತಿಸಲಾಗಿದೆ.

    ಬೈಕ್ ನಲ್ಲಿ ತನ್ನ ಅಳಿಯ ರವಿಕುಮಾರ್ ಜೊತೆ ಜೊತೆ ರಾಧಾ ಕಾಡುಗೋಡಿಯಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಗ್ನಲ್ ಬಳಿ ಚಿಕ್ಕ-ಚಿಕ್ಕ ಜಲ್ಲಿಯಿಂದಾಗಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲೇ ನಿರ್ಮಾಣವಾದ ಗುಂಡಿಗೆ ಬಿದ್ದಿದೆ. ಈ ವೇಳೆ ಅಳಿಯ ಎಡಭಾಗಕ್ಕೆ ಬಿದ್ದ ಪರಿಣಾಮ ಸಾವಿನಿಂದ ಪಾರಾಗಿದ್ದಾರೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಅತ್ತೆ ಬಲ ಬದಿಗೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬರುತ್ತಿದ್ದ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ.

    ಘಟನೆಯಿಂದ ಬೈಕ್ ಸವಾರ ರಾಧಾ ಅಳಿಯ ರವಿಕುಮಾರ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾಧಾ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಸಿಟಿ ಮಾರ್ಕೆಟ್ ಮೇಲ್ಸೇತುವೆಯ ರಸ್ತೆ ಗುಂಡಿಯು ಅಕ್ಟೋಬರ್ 2ರಂದು ರಾತ್ರಿ ಎರಡು ಜೀವಗಳನ್ನು ಬಲಿ ಪಡೆದಿತ್ತು. ಮರುದಿನ ಬೆಳಿಗ್ಗೆ ಅದೇ ಪ್ರದೇಶದಲ್ಲಿ ಬೈಕ್‍ನಿಂದ ಬಿದ್ದು ಮತ್ತಿಬ್ಬರು ಗಾಯಗೊಂಡಿದ್ದರು. ಜಗಜೀವನ್ ರಾಮನಗರದ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಗಾಯ್ ಮೇರಿ (52) ಮೃತಪಟ್ಟಿದ್ದು, ಅವರ ಆರು ವರ್ಷದ ಮೊಮ್ಮಗಳು ಅಕ್ಯೂಲಾ ಶೆರಿನ್ ಪ್ರಾಣಾಪಾಯದಿಂದ ಪಾರಾಗಿದ್ದಳು.

     

     

  • ಮದುವೆಗಾಗಿ 60 ಅಡಿ ಮರವೇರಿ ಕುಳಿತ ಯುವಕ!

    ಮದುವೆಗಾಗಿ 60 ಅಡಿ ಮರವೇರಿ ಕುಳಿತ ಯುವಕ!

    ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳೆ ವಡ್ಡರಹಟ್ಟಿ ಗ್ರಾಮದಲ್ಲಿ ಮನೆಯವರು ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಮರವೇರಿ ಕುಳಿತು ವಿಚಿತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾನೆ.

    ಬಸವರಾಜ್ ಮರವೇರಿ ಕುಳಿತ ಯುವಕ. ತನಗೆ 32 ವರ್ಷವಾದರೂ ಮನೆಯವರು ಮದುವೆ ಮಾಡಿಲ್ಲವೆಂದು ಮನನೊಂದು ಬಸವರಾಜ್ ಕಳೆದ ಮೂರು ದಿನಗಳಿಂದ 60 ಅಡಿ ಎತ್ತರದ ಬೃಹತ್ ಮರವೇರಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾನೆ.

    ಮರವೇರಿ ಕುಳಿತ ನಂತರ ಮನೆಯವರು, ಗ್ರಾಮಸ್ಥರು, ಎಷ್ಟೇ ಮನವೊಲಿಸಿದರೂ ಬಸವರಾಜ್ ಮಾತ್ರ ಮರದಿಂದ ಕೆಳಗೆ ಇಳಿದಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಖಾನಾಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸವರಾಜನ ಮನವೊಲಿಸಿ ಮರದಿಂದ ಕೆಳಗೆ ಇಳಿಸಿದ್ದಾರೆ.

  • ಕಾರು ಮತ್ತು ಬೈಕ್ ನಡುವೆ ಅಪಘಾತ, ದಂಪತಿ ಸಾವು -ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

    ಕಾರು ಮತ್ತು ಬೈಕ್ ನಡುವೆ ಅಪಘಾತ, ದಂಪತಿ ಸಾವು -ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಗುಲಸಿಂದ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ರಸ್ತೆ ಕಾಮಗಾರಿ ಸರಿಯಾಗಿ ಮಾಡದೇ ಇರುವುದೇ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಂಜುನಾಥ್(33) ಮತ್ತು ಶೀಲಾ(30) ಅಪಘಾತದಲ್ಲಿ ಸಾವನ್ನಪ್ಪಿದ ದಂಪತಿ. ಅಪಘಾತದಲ್ಲಿ ಮೂರು ವರ್ಷದ ಮಗಳು ಇಂಪನಾ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಗುತ್ತಿಗೆದಾರರ ಬೇಜವಾಬ್ದಾರಿಯೇ ಅಪಘಾತಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆರೋಪ ಮಾಡುತ್ತಿದ್ದಾರೆ.

    ಶವಗಳನ್ನು ಪಟ್ಟಣದ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಇಟ್ಟು ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರು ಟೈರ್ ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಹಾಸನ-ಬೆಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

  • ವ್ಯಂಗ್ಯ ಮಾಡಲು ಹೋಗಿ ಅಗ್ನಿ ಅನಾಹುತ- ಯೂತ್ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಹಿಳೆಗೆ ಗಂಭೀರ ಗಾಯ

    ವ್ಯಂಗ್ಯ ಮಾಡಲು ಹೋಗಿ ಅಗ್ನಿ ಅನಾಹುತ- ಯೂತ್ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಹಿಳೆಗೆ ಗಂಭೀರ ಗಾಯ

    ಬೆಂಗಳೂರು: ಗ್ಯಾಸ್ ದರ ಏರಿಕೆಯ ಬಗ್ಗೆ ಕೇಂದ್ರದ ವಿರುದ್ಧ ಯೂತ್ ಕಾಂಗ್ರೆಸ್ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿ ಓರ್ವ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗ್ಯಾಸ್ ದರ ಏರಿಕೆ ಬಗ್ಗೆ ವ್ಯಂಗ್ಯ ಮಾಡಲು ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಲು ಬೆಂಕಿ ಹಚ್ಚಲು ಹೋದಾಗ ಆಕಸ್ಮಿಕವಾಗಿ ಸುಮಂತಾ ಎಂಬುವರ ಬಟ್ಟೆಗೆ ಬೆಂಕಿ ತಗುಲಿದೆ. ಇದರ ಪರಿಣಾಮ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣವೇ ಅವರನ್ನು ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಸುಮಂತಾ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    ಸರ್ಕಾರ ಎಲ್‍ಪಿಜಿ ದರ ಹಾಗೂ ದಿನಸಿ ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ನೀತಿಗಳ ವಿರುದ್ಧ ಯುವ ಕಾಂಗ್ರೆಸ್‍ನ ಅಧ್ಯಕ್ಷ ರಘುವೀರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ನೂರಾರು ಯುವ ಕಾರ್ಯಕರ್ತರು ಸೇರಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಲ್‍ಪಿಜಿ ಸಿಲಿಂಡರ್ ಹಾಗೂ ತರಕಾರಿ ಪ್ರದರ್ಶಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು. ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ರು.

    ಇಷ್ಟಾದರೂ ಪ್ರತಿಭಟನಾಕಾರರು ಮತ್ತೆ ಕಟ್ಟಿಗೆಗಳಿಂದ ಅಡುಗೆ ಮಾಡಲು ಮುಂದಾದ್ರು. ಅಷ್ಟೇ ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ತೀವ್ರ ಗೊಂದಲ ಉಂಟಾಗಿ, ವರದಿಗಾರರು ಬೆಂಕಿ ಅವಘಡವನ್ನು ವಿಡಿಯೋ ಮಾಡಲು ಬಿಡದೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಮೆರಾವನ್ನು ಒಡೆಯಲು ಯತ್ನಿಸಿದ್ರು.

    https://www.youtube.com/watch?v=qJGyi0cWI70

  • ಖಾಸಗಿ ಶಾಲೆಗಳ ದುಬಾರಿ ಶುಲ್ಕ- ಸಚಿವ ತನ್ವೀರ್ ಸೇಠ್ ಮನೆಯ ಕಿಟಕಿ ಗಾಜು ಪುಡಿಪುಡಿ

    ಖಾಸಗಿ ಶಾಲೆಗಳ ದುಬಾರಿ ಶುಲ್ಕ- ಸಚಿವ ತನ್ವೀರ್ ಸೇಠ್ ಮನೆಯ ಕಿಟಕಿ ಗಾಜು ಪುಡಿಪುಡಿ

    ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಖಂಡಿಸಿ ಕರವೇ ಯುವ ಸೇನೆಯಿಂದ ಇಂದು ಧರಣಿ ನಡೆಸಲಾಗಿದ್ದು, ಈ ವೇಳೆ ಕಾರ್ಯಕರ್ತರು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ನಿವಾಸದ ಮೇಲೆ ಮುತ್ತಿಗೆ ಹಾಕಿ ಮನೆಯಲ್ಲಿರುವ ಪಾಟ್ ಮತ್ತು ಕಿಟಕಿ ಗಾಜುಗಳನ್ನ ಒಡೆದಿದ್ದಾರೆ.

    ಸಚಿವ ತನ್ವೀರ್ ಸೇಠ್ ಮನೆಯ ಮುಂದೆ ಕರವೇ ಪ್ರತಿಭಟನೆ ನಡೆಯುತ್ತಿದ್ದಾಗ ಹೈಗ್ರೌಂಡ್ಸ್ ಠಾಣೆ ಪೊಲೀಸರು ತಡವಾಗಿ ಆಗಮಿಸಿದ್ರು. ಬಳಿಕ ಮನೆ ಮುಂದೆ ಕುಳಿತುಕೊಳ್ಳಲು ಮುಂದಾದ ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ್ರು.

    ಪ್ರತಿಭಟನೆ ನಡೆಯುತ್ತಿದ್ದಂತೆಯೇ ಮನೆಯಿಂದ ಹೊರಬಂದ ಸಚಿವರು ಪ್ರತಿಭಟನಾಕಾರರ ಜೊತೆ ಮಾತನಾಡಿ, ಏಕಾಏಕಿ ಮನಗೆ ನುಗ್ಗೋದು ಪ್ರವೃತ್ತಿ ಅಲ್ಲ. ಬಂದಂತಹ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ನನ್ನ ಕರ್ತವ್ಯ. ನಾವು ಸಾರ್ವಜನಿಕರಿಂದ ಆಯ್ಕೆ ಅಗಿದ್ದೀವಿ. ನನಗೆ ರಕ್ಷಣೆ ಇದೆ. ಲಿಖಿತವಾಗಿ ದೂರು ಕೊಟ್ರೆ ನಾನು ಕ್ರಮ ಕೈಗೊಳ್ತೇನೆ. ಯಾವುದೇ ಸ್ಪಷ್ಟ ಸಮಸ್ಯೆ ಇಲ್ಲದೆ ಪ್ರತಿಭಟನೆ ಮಾಡಿದ್ರೆ ಅದು ವ್ಯರ್ಥ. ಲಿಖಿತವಾಗಿ ಸಮಸ್ಯೆಗಳನ್ನು ನನಗೆ ತಿಳಿಸಿ ನಾನು ಪ್ರಯತ್ನ ಮಾಡ್ತೆನೆ ಅಂತ ಭರವಸೆ ನೀಡಿದ್ರು.

    ಇಲ್ಲಿಯವರೆಗೆ ಈ ಬಗ್ಗೆ ನನಗೆ ಯಾವುದೇ ದೂರುಗಳು ಬಂದಿಲ್ಲ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ವಿರುದ್ಧ ಕ್ರಮ ತೆಗೆದುಕೊಳ್ಳೋ ಭರವಸೆ ನೀಡಿದ್ದೀನಿ. ಇಲಾಖೆಯ ವರದಿಗಳನ್ನು ತರಿಸಿಕೊಂಡು ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಮತ್ತು ಡಿಸಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ರಾಜ್ಯದ ಜೀವ ಭಾಷೆ, ನೆಲದ ಬಗ್ಗೆ ನಾವು ಬದ್ಧರಾಗಿದ್ದೇವೆ ಅಂತ ಹೇಳಿದ್ರು.

  • ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಎನ್‍ಜಿಟಿ ಶಾಕ್

    ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ಎನ್‍ಜಿಟಿ ಶಾಕ್

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ ಯಾರು ಯಾವುದೇ ಪ್ರತಿಭಟನೆಗಳನ್ನು ನಡೆಸುವಂತಿಲ್ಲ.

    ಶಬ್ದ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಆದೇಶ ಹೊರಡಿಸಿದೆ. ಪ್ರತಿಭಟನೆಗಳಿಗೆ ರಾಮಲೀಲಾ ಮೈದಾನ ಅಥಾನ ಅಜ್ಮೀರಿ ಗೇಟ್ ಪರ್ಯಾಯ ಜಾಗ ಕಲ್ಪಿಸುವಂತೆ ದೆಹಲಿ ಸರ್ಕಾರ ಮತ್ತು ಪಾಲಿಕೆಗೆ ಎನ್‍ಜಿಟಿ ಸೂಚಿಸಿದೆ.

    ಈ ಆದೇಶ ಪ್ರಕಟವಾದ ಈ ಕ್ಷಣದಿಂದಲೇ ಈ ಸ್ಥಳದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಯಾವುದೇ ಪ್ರತಿಭಟನೆ, ಧರಣಿ, ಜನರನ್ನು ಉದ್ದೇಶಿಸಿ ಯಾರು ಮಾತನಾಡಕೂಡದು ಎಂದು ಸೂಚಿಸಿದೆ.

    ವರುಣ್ ಸೇಠ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಎನ್‍ಜಿಟಿ ಈ ಆದೇಶ ಹೊರಡಿಸಿದೆ. ಶಾಂತಿ ಮತ್ತು ಆರೋಗ್ಯ ಪೂರ್ಣ ವಾತಾವರಣದಲ್ಲಿ ಜೀವಿಸಬೇಕು. ಆದರೆ ಈ ಪ್ರತಿಭಟನೆಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ನಿದ್ದೆ ಮಾಡುವ ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಭಟನೆಗಳನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ವರುಣ್ ಸೇಠ್ ಮನವಿ ಮಾಡಿಕೊಂಡಿದ್ದರು.

  • ಬನಾರಸ್ ಹಿಂದೂ ವಿವಿಯಲ್ಲಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್

    ಬನಾರಸ್ ಹಿಂದೂ ವಿವಿಯಲ್ಲಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್

    ವಾರಾಣಸಿ: ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‍ಸಿ) ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಪೊಲೀಸರು ಓರ್ವ ವಿದ್ಯಾರ್ಥಿನಿ ಮತ್ತು ಮೂವರು ವಿದ್ಯಾರ್ಥಿ ಸೇರಿದಂತೆ ನಾಲ್ವರಿಗೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ವಿದ್ಯಾರ್ಥಿಗಳ ಜಡೆಯನ್ನು ಹಿಡಿದು ಎಳೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ವಾರಾಣಸಿ ಜಿಲ್ಲಾಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿಯರ ಮನೆಗೆ ಹೋಗಲು ಮುಂದಾಗಿದ್ದು, ಅವರನ್ನು ಭದ್ರತಾ ಪಡೆಗಳು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಆಕ್ರೋಶದಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಏನಿದು ಪ್ರಕರಣ?
    ಗುರುವಾರ ಬಿಎಚ್‍ಸಿ ಕ್ಯಾಂಪಸ್ ಹೊರಗಡೆ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಬೈಕ್‍ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಲು ಹೋಗಿದ್ದರು. ಆದರೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿನಿ ಹಾಸ್ಟೆಲ್‍ಯಿಂದ ಹೋಗುವ ಬರುವ ಸಮಯವನ್ನು ಪ್ರಶ್ನಿಸಿ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿಗಳು ಶುಕ್ರವಾರ ಕ್ಯಾಂಪಸ್‍ನ ಒಳಗಡೆ ಯಾರನ್ನು ಹೋಗಲು ಬಿಡದೆ ಮುಖ್ಯ ಗೇಟ್‍ಅನ್ನು ಮುಚ್ಚಿ ಹೊರಗಡೆ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರು.

    ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಪ್ರಧಾನಿ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನದ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಆದರೆ ಬಿಎಚ್‍ಸಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಾಸ್ತವವಾಗಿ ನೋಡಬೇಕು ಎಂದು ಕೂಗಿ ಕೂಗಿ ಹೇಳುತ್ತಿದ್ದಾರೆ.

  • ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

    ಹುಬ್ಬಳ್ಳಿ: ಇಲ್ಲಿನ ಬಿಸಿಎಮ್ ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

    ಹುಬ್ಬಳ್ಳಿಯ ವಿದ್ಯಾನಗರದಲ್ಲಿರೋ ಬಿಸಿಎಮ್ ಹಾಸ್ಟೆಲ್ ನಲ್ಲಿ ನೀಡ್ತಾಯಿರೋ ಊಟದಲ್ಲಿ ಇಲಿಯ ತ್ಯಾಜ್ಯ, ನುಸಿ, ಹುಳುಗಳು ಬರ್ತಾಯಿದ್ದು, ಈ ಊಟ ಮಾಡಿದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲಿದ್ದಾರೆ. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಕಳಪೆ ಗುಣಮಟ್ಟದ ಆಹಾರ ನೀಡ್ತಾಯಿರೋ ಬಗ್ಗೆ ಮೇಲ್ವಿಚಾರಕರ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ ಅಂತ ವಿದ್ಯಾರ್ಥಿಗಳು ದೂರಿದ್ದಾರೆ.

    ಇನ್ನು ಒಂದು ಹೊತ್ತಿಗೆ ಕೇವಲ ಎರಡು ಚಪಾತಿ ನೀಡುತ್ತಾರೆ. ಆದ್ರೆ ಅದು ನಮಗೆ ಸಾಕಾಗಲ್ಲಾ, ಒಂದು ಚಪಾತಿ ಹೆಚ್ಚಿಗೆ ಕೇಳಿದ್ರೂ ವಾರ್ಡನ್ ಬಾಯಿಂದ ಇಲ್ಲ ಸಲ್ಲದ ಬೈಗುಳಗಳನ್ನು ಕೇಳಬೇಕು ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಹೀಗಾಗಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಊಟ ಮಾಡದೆ ಹೋರಾಟ ಮಾಡುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳು ಸಹ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

  • ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ಬೆಳಗಾವಿ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಅಂತ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಸಾಂಭ್ರಾ ಗ್ರಾಮದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಪಂತಬಾಳೇಕುಂದ್ರಿ ಹಾಗೂ ಸುಳೇಬಾವಿ ಮಾರ್ಗದ ಬಸ್‍ಗಳು ಬೆಳಗ್ಗೆ ನಿಲುಗಡೆಯಾಗುತ್ತಿಲ್ಲ. ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ಕಳೆದ ಹಲವು ತಿಂಗಳಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಒಂದು ಗಂಟೆಗಳ ಕಾಲ ರಸ್ತೆ ತಡೆಯಿಂದ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

    ನಂತರ ಮಾರಿಹಾಳ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು

  • ಗೌರಿ ಲಂಕೇಶ್ ಹತ್ಯೆ: ರಾಜ್ಯದೆಲ್ಲೆಡೆ ಪ್ರತಿಭಟನೆ

    ಗೌರಿ ಲಂಕೇಶ್ ಹತ್ಯೆ: ರಾಜ್ಯದೆಲ್ಲೆಡೆ ಪ್ರತಿಭಟನೆ

    ಬೆಂಗಳೂರು: ಗೌರಿ ಲಂಕೇಶ್ ಅವರ ಹತ್ಯೆಯನ್ನ ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ರಾಜಧಾನಿಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರು ಪ್ರತಿಭಟಿಸಿ ಹಂತಕರ ಬಂಧನಕ್ಕೆ ಆಗ್ರಹಿಸಿದರು.

    ಬಾಗಲಕೋಟೆ: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನ ಖಂಡಿಸಿ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಟಯರ್ ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು. ನಗರದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದುಷ್ಟಶಕ್ತಿಯ ಪ್ರತಿಕೃತಿಯನ್ನ ರೂಪಿಸಿ ಅದಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆ ಮಾಡಿದವರನ್ನ ಶೀಘ್ರವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸಕಾ9ರಕ್ಕೆ ಒತ್ತಾಯಿಸಿದರು.

    ಬಳ್ಳಾರಿ: ಜಿಲ್ಲೆಯ ಪತ್ರಕರ್ತರ ಸಂಘ, ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನಾ ರ್ಯಾಲಿಯನ್ನ ನಡೆಸಿದರು. ಪತ್ರಕರ್ತರ ಕಚೇರಿಯಿಂದ ರಾಯಲ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಟಯರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಪತ್ರಕರ್ತರು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣವಾದ ಶಿಕ್ಷ ನೀಡಬೇಕೆಂದು ಆಗ್ರಹಿಸಿದರು.

    ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಿಂದ ಉಪ ವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪತ್ರಕರ್ತರು ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐಗೆ ಕೊಟ್ಟು ಆದಷ್ಟು ಬೇಗ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದರು.

    ದಾವಣಗೆರೆ: ಜಿಲ್ಲೆಯ ಯುವ ವರದಿಗಾರ ಕೂಟ ಎಸಿ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿತು. ಅಲ್ಲದೆ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜಯದೇವ ವೃತ್ತದ ಬಳಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ನಗರದ ಕೋರ್ಟ್ ಸರ್ಕಲ್ ಬಳಿ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿದರು. ಅಲ್ಲದೆ ಪ್ರತಿಭಟನಾಕಾರರು ಕೆಲ ಕಾಲ ರಸ್ತೆ ತಡೆದು ಕೂಡಲೇ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು 24 ಘಂಟೆಯ ಒಳಗೆ ಬಂಧಿಸುವಂತೆ ಒತ್ತಾಯ ಮಾಡಿದರು.

    ಕೊಪ್ಪಳ: ನಗರದ ಅಶೋಕ ವೃತ್ತದಲ್ಲಿ ಎಸ್‍ಎಪ್‍ಐ ವಿಚಾರ ವಾದಿ ಸಂಘಟನೆ, ಪತ್ರಕರ್ತರ ಸಂಘಟನೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಮಾನವ ಸರಪಳಿ ನಿರ್ಮಿಸಿ, ಟಯರ್ ಗೆ ಬೆಂಕಿ ಹಚ್ಚಿ ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿದರು. ಈ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

    ರಾಯಚೂರು: ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಅಂಬಣ್ಣ ಅರೋಲಿಕರ್ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸಾಹಿತ್ಯ ರಚಿಸಿ ಸ್ವತಃ ಹಾಡುವ ಮೂಲಕ ಪ್ರತಿಭಟಿಸಿದರು.

    ಯಾದಗಿರಿ: ಹತ್ಯೆ ಖಂಡಿಸಿ ಯಾದಗಿರಿ ಜಿಲ್ಲಾ ಪತ್ರಕರ್ತ ಸಂಘದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಹತ್ಯೆಯನ್ನು ಮಾಡಿದ ಕಿಡಿಗೇಡಿಗಳ ದುಷ್ಕೃತ್ಯವನ್ನ ಖಂಡಿಸಿದರು. ವಿಚಾರವಾದಿ, ಚಿಂತಕರು, ಸಾಹಿತಿಗಳ ಕೊಲೆಯಾಗಿದೆ. ಆದರೆ ಇನ್ನೂ ಸಹ ಕೊಲೆಗಾರರು ಪತ್ತೆಯಾಗಿಲ್ಲ. ಕೊಲೆ ಮಾಡಿದರವನ್ನು ಕೊಡಲೇ ಪಬಂಧಿಸುವಂತೆ ಜಿಲ್ಲಾ ಪತ್ರಕರ್ತ ಸಂಘದಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ರಾಮನಗರ: ಗೌರಿ ಲಂಕೇಶ್ ಹತ್ಯೆಯನ್ನ ಖಂಡಿಸಿ ಬೊಂಬೆನಗರಿ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೂಡಲೇ ಗುಂಡಿಟ್ಟು ಕೊಂದವರನ್ನು ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.