Tag: ಪ್ರತಿಭಟನೆ

  • ಕನ್ನಡ ರಾಜ್ಯೋತ್ಸವದ ದಿನವೇ ಪ್ರತ್ಯೇಕ ರಾಜ್ಯಕ್ಕಾಗಿ ಕಲಬುರಗಿಯಲ್ಲಿ ಹೋರಾಟ

    ಕನ್ನಡ ರಾಜ್ಯೋತ್ಸವದ ದಿನವೇ ಪ್ರತ್ಯೇಕ ರಾಜ್ಯಕ್ಕಾಗಿ ಕಲಬುರಗಿಯಲ್ಲಿ ಹೋರಾಟ

    ಕಲಬುರಗಿ: ಇಂದು ನಾಡಿನೆಲ್ಲೆಡೆ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಆದರೆ ಬಿಸಿಲೂರು ಕಲಬುರಗಿಯಲ್ಲಿ ಮಾತ್ರ ಪ್ರತ್ಯೇಕತೆಯ ಕೂಗು ತೀವ್ರಗೊಂಡಿದೆ. ರಾಜ್ಯೋತ್ಸವದ ದಿನವಾದ ಇಂದೇ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟಗಳು ನಡೆದಿವೆ.

    ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ಇಂದು ಬೆಳ್ಳಂ ಬೆಳಿಗ್ಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ಬಳಿ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಮುಂದಾಗಿದ್ದು, ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಹೋರಾಟಗಾರರು ಬಂಧನಕ್ಕೆ ಬೆದರಿ ಓಡಿ ಹೋಗುವ ಮೂಲಕ ನಗೆಪಾಟಲಿಗೀಡಾದರು. ಇನ್ನೊಂದಡೆ ಹೈದರಾಬಾದ್ – ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರೂ ಸಹ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರು. ಈ ಕಾರ್ಯಕರ್ತರನ್ನೂ ಸಹ ಪೊಲೀಸರು ವಶಕ್ಕೆ ತೆಗೆದುಕೊಂಡರು.

  • ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ಬೆಂಗಳೂರು: ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು `ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017′ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3 ರಂದು ಮುಷ್ಕರ ನಡೆಸಲಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ. ರವೀಂದ್ರ, ಇದೇ ವಿಚಾರವಾಗಿ ಜೂನ್ 16 ರಂದೇ ಪ್ರತಿಭಟನೆ ನಡೆಸಿದ್ದೇವೆ. ಅಂದು ಸಿಎಂ ಸೇರಿದಂತೆ ಆರೋಗ್ಯ ಸಚಿವರನ್ನೂ ಸಹ ಭೇಟಿ ಮಾಡಿದ್ದು, ಆದರೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನವೆಂಬರ್ 3 ರಂದು ನಾವು ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

    ಸರ್ಕಾರ ಈಗ ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ಜಾರಿ ತರಲು ನಿರ್ಧಾರ ಮಾಡಿದ್ದಾರೆ. ಆದರೆ ಇದರಲ್ಲಿ ಯಾವ ವೈದ್ಯರ ವಿರುದ್ಧ ದೂರು ಹೂಡಿದ್ದಾರೋ, ಆ ವೈದ್ಯರು ಲಾಯರ್ ನೇಮಕ ಮಾಡುವ ಹಾಗಿಲ್ಲ. ಅಂದರೆ ಕಸಬ್ ನಂತಹ ದೇಶ ದ್ರೋಹಿಗೆ ಲಾಯರ್ ಇಟ್ಟುಕೊಳ್ಳಲು ಅವಕಾಶ ಇರುವ ನಮ್ಮ ದೇಶದಲ್ಲಿ, ವೈದ್ಯರಿಗೆ ಯಾಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

    ವೈದ್ಯರಿಗೆ ದಂಡ ಹಾಗೂ ಜೈಲಿಗಟ್ಟುವ ನೀವು ವೈದ್ಯರಿಗೆ ಯಾವ ರೀತಿ ಗೌರವ ನೀಡುತ್ತೀರಾ? ನವೆಂಬರ್ 3 ರಂದು ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಸರ್ಕಾರ ಆಗಲೂ ಮಾತುಕತೆಗೆ ಮುಂದಾಗದಿದ್ದರೆ. ನವೆಂಬರ್ 9 ಮತ್ತು 10 ರಂದು ವೈದ್ಯ ವೃತ್ತಿಯನ್ನು ತ್ಯಜಿಸುತ್ತೇವೆ. ಕರ್ನಾಟಕದಲ್ಲಿ 40 ರಿಂದ 50 ಸಾವಿರ ಖಾಸಗಿ ಆಸ್ಪತ್ರೆಗಳಿವೆ. ಆದರೆ ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿ ವ್ಯವಸ್ಥಿತವಾಗಿ ಕಾಪಾಡಿಕೊಳ್ಳದ ಸರ್ಕಾರ, ಖಾಸಗಿ ಆಸ್ಪತ್ರೆಯತ್ತ ಬೊಟ್ಟುಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಅವರೂ ವೈದ್ಯರೇ, ನಾನು ಅವರ ಜೊತೆಯಲ್ಲಯೂ ಮಾತನಾಡಿದ್ದೇನೆ. ಆಯಾಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. ಯಾವುದೇ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆ ಸರಿ ಇದ್ದಿದ್ದರೆಜನರು ಏಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ಪ್ರತಿಭಟನೆ ವಿಚಾರವನ್ನು ಯತೀಂದ್ರ ಅವರು ತಂದೆಯ ಜೊತೆಗೆ ಮಾತಾನಾಡೋದಾಗಿ ಹೇಳಿದ್ದಾರೆಂದು ರವೀಂದ್ರ ಅವರು ತಿಳಿಸಿದ್ದಾರೆ.

    ಮಗ ಯತೀಂದ್ರ ಮಾತಿಗೆ ಮಣಿದ ಸಿಎಂ ಸಿದ್ದರಾಮಯ್ಯ ಈಗ ಮಾತುಕತೆಗೆ ಮುಂದಾಗಿದ್ದು, ನವೆಂಬರ್ 2 ರಂದು 10 ಗಂಟೆಯ ವೇಳೆಗೆ ವೈದ್ಯರ ಜೊತೆ ಮಾತುಕತೆಗೆ ಅವಕಾಶ ನೀಡಿದ್ದಾರೆ.

  • ಬೀದರ್‍ನಲ್ಲಿ ಛತ್ರಪತಿ ಶಿವಾಜಿಯ ಪುತ್ಥಳಿ ಧ್ವಂಸ- ಮರಾಠ ಸಮುದಾಯದಿಂದ ಪ್ರತಿಭಟನೆ

    ಬೀದರ್‍ನಲ್ಲಿ ಛತ್ರಪತಿ ಶಿವಾಜಿಯ ಪುತ್ಥಳಿ ಧ್ವಂಸ- ಮರಾಠ ಸಮುದಾಯದಿಂದ ಪ್ರತಿಭಟನೆ

    ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ.

    ಬಾದಲಗಾಂವ ಗ್ರಾಮದ ಸರ್ಕಲ್‍ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇತ್ತು. ಆದರೆ ತಡರಾತ್ರಿ ಸುಮಾರು 1.30 ಕ್ಕೆ ಕೀಡಿಗೇಡಿಗಳು ಶಿವಾಜಿ ಮಹಾರಾಜರ ಪುತ್ಥಳಿಯ ಶಿರವನ್ನ ಧ್ವಂಸ ಮಾಡಿದ್ದಾರೆ. ಮುಂಜಾನೆ ಈ ವಿಚಾರವನ್ನು ತಿಳಿದ ಮರಾಠ ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ.


    ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದಿದ್ದು, ವೈಎಸ್‍ಪಿ ವೇಂಕನಗೌಡ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ, ಆದರೆ ಈ ಕೃತ್ಯವನ್ನು ಮಾಡಿರುವ ಕಿಡಿಗೇಡಿಗಳು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

     

  • ಪರಿಹಾರ ನೀಡಿ ಕೈ ತೊಳೆದುಕೊಂಡ ಸರ್ಕಾರ- ಶಾಖೋತ್ಪನ್ನ ಘಟಕಕ್ಕೆ ಭೂಮಿ ಕೊಟ್ಟ ರೈತರಿಂದ ಧರಣಿ

    ಪರಿಹಾರ ನೀಡಿ ಕೈ ತೊಳೆದುಕೊಂಡ ಸರ್ಕಾರ- ಶಾಖೋತ್ಪನ್ನ ಘಟಕಕ್ಕೆ ಭೂಮಿ ಕೊಟ್ಟ ರೈತರಿಂದ ಧರಣಿ

    ರಾಯಚೂರು: ಜಿಲ್ಲೆಯ ಯರಮರಸ್ ನಲ್ಲಿರುವ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್(ಕೆಪಿಸಿಎಲ್) ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

    ಶಾಖೋತ್ಪನ್ನ ಘಟಕ ಸ್ಥಾಪನೆಯ ವೇಳೆಯಲ್ಲಿ ಸರ್ಕಾರವು, ಭೂಮಿ ಕಳೆದುಕೊಂಡಿದ್ದ ರೈತರಿಗೆ ಪರಿಹಾರವನ್ನು ನೀಡಿ, ಉದ್ಯೋಗ ನೇಮಕಾತಿ ಮಾಡಿಕೊಳ್ಳವ ಭರವಸೆಗಳನ್ನು ನೀಡಿತ್ತು. ಆದರೆ ಸರ್ಕಾರ ಇದೂವರೆಗೂ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಒಂದು ವೇಳೆ ಸರ್ಕಾರ ಇದಕ್ಕೆ ಸ್ಪಂಧಿಸದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ಚಿಕ್ಕಸುಗೂರು, ವಡ್ಲೂರು,ಕುಕನೂರು, ಯರಮರಸ್ ಗ್ರಾಮದ ರೈತರು ಕೆಪಿಸಿಎಲ್ ಗಾಗಿ ಸಾವಿರಾರು ಎಕರೆ ಜಮೀನು ಸರ್ಕಾರಕ್ಕೆ ನೀಡಿದ್ದರು. ಕೆಪಿಸಿಎಲ್ ಸ್ಥಾಪನೆ ವೇಳೆ ನೀಡಲಾಗಿರುವ ಭರವಸೆಗಳನ್ನು ಈಡೇರಿಸುವಂತೆ ನಿರಂತರವಾಗಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕರರು ಆರೋಪಿಸಿದ್ದು, ಹೀಗಾಗಿ ವೈಟಿಪಿಎಸ್ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

    ಕೆಪಿಸಿಎಲ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕೆಲಸಕ್ಕೆ ತೆರಳದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಇದನ್ನೂ ಓದಿ: ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ 

     

     

  • ಮತ್ತೆ ಬಂತು 19 ಬೋಗಿಗಳ ಸ್ವರ್ಣ ಪ್ಯಾಸೆಂಜರ್ ರೈಲು- ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕರು

    ಮತ್ತೆ ಬಂತು 19 ಬೋಗಿಗಳ ಸ್ವರ್ಣ ಪ್ಯಾಸೆಂಜರ್ ರೈಲು- ಸಿಹಿ ಹಂಚಿ ಸಂಭ್ರಮಿಸಿದ ಪ್ರಯಾಣಿಕರು

    ಕೋಲಾರ: ಚಿನ್ನದ ನಾಡಿನ ಜನರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈಲ್ವೇ ಇಲಾಖೆ ತನ್ನ ನಿರ್ಧಾರ ಬದಲಿಸಿಕೊಂಡು ಮತ್ತೆ ಸ್ವರ್ಣ ಪ್ಯಾಸೆಂಜರ್ ರೈಲಿನ ಸಂಚಾರವನ್ನ ಆರಂಭಿಸಿದೆ.

    ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆಗೆ ವಿರೋಧ ವ್ಯಕ್ತವಾಗಿತ್ತು. ಬುಧವಾರದಂದು ಎರಡು ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ ಫಲವಾಗಿ ಮತ್ತೆ 19 ಬೋಗಿಗಳಿರುವ ಸ್ವರ್ಣ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ. ಇದರಿಂದ ಖುಷಿಯಾಗಿರುವ ಕೆಜಿಎಫ್ ಜನರು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ.

    ಮಾರಿಕುಪ್ಪಂ-ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಬುಧವಾರದಂದು ಕಾಂಗ್ರೆಸ್, ಪ್ರಯಾಣಿಕರು ಹಾಗೂ ವಿವಿಧ ಸಂಘಟನೆಯವರು 2 ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಹೋರಾಟ ನೆಡೆಸಿದ್ದರು.

    ಮುಂಜಾನೆಯ 6.30 ರ ಸ್ವರ್ಣ ಪ್ಯಾಸೆಂಜರ್ ರೈಲಿನ ಬದಲಾಗಿ ಪುಷ್ ಪುಲ್ ರೈಲು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಬದಲಾದ ರೈಲಿನ ಬೋಗಿಗಳು ಕಡಿಮೆ ಇರುವ ಕಾರಣ ಪ್ರತಿನಿತ್ಯ ಹೊಟ್ಟೆಪಾಡಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಬಹಳಷ್ಟು ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆ.ಹೆಚ್ ಮುನಿಯಪ್ಪ ಪುತ್ರಿ ರೂಪಾ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಲಘು ಲಾಠಿ ಪ್ರಹಾರ ಕೂಡ ನಡೆದಿತ್ತು.

    ಸ್ವರ್ಣ ಪ್ಯಾಸೆಂಜರ್ ರೈಲು ಕಳೆದ 20 ವರ್ಷಗಳಿಂದ ಮಾರಿಕುಪ್ಪ ಹಾಗೂ ಬೆಂಗಳೂರು ನಡುವೆ ಸಂಚಾರ ಮಾಡುತ್ತಿದ್ದು, ರೈಲನ್ನ ಬದಲಾವಣೆ ಮಾಡಲು ರೈಲ್ವೇ ಇಲಾಖೆ ಮುಂದಾಗಿತ್ತು.

  • ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಮದುವೆ ಮಂಟಪದಲ್ಲೇ ಕೈ ಕೊಟ್ಟ ವರ, ಕಾದು ಕಾದು ಸುಸ್ತಾದ ವಧು – ಇದು ಲವ್ ಸೆಕ್ಸ್ ದೋಖಾ ಕಥೆ

    ಉಡುಪಿ: ಮದುವೆಯಾಗುವುದಾಗಿ ನಂಬಿಸಿ, ದಿನಾಂಕವನ್ನು ಫಿಕ್ಸ್ ಮಾಡಿ ಎಲ್ಲರೂ ಮಂಟಪಕ್ಕೆ ಬಂದಿದ್ದಾರೆ. ಆದರೆ ಮದುವೆ ಗಂಡೇ ಬರಲಿಲ್ಲ. ಇದರಿಂದ ಮದುವೆ ಮಂಟಪದ ಮುಂದೆ ವಧು ಕಾದು ಕಾದು ಸುಸ್ತಾದ್ರೆ ಅತ್ತ ಕೊನೆಗೂ ವರ ಬರದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

    ಲಲಿತಾ ಮದುವೆ ಸಭಾಂಗಣ ಮುಂದೆ ಕಾದು ಕಾದು ಸುಸ್ತಾದ ವಧು. ಮಂಜುನಾಥ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿ ಪರಾರಿಯಾದವನು. ಇವರಿಬ್ಬರೂ ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಿಜಿಸ್ಟರ್ ಮದುವೆ ಕೂಡ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರು ಸೇರಿ ಸಾಂಪ್ರದಾಯಿಕವಾಗಿ ಮದುವೆ ಮಾಡಲು ಮುಂದಾಗಿದ್ದರು. ಆದರೆ ಈ ಸಂದರ್ಭದಲ್ಲಿ ಮಂಜುನಾಥ ಕೈಕೊಟ್ಟು ಪರಾರಿಯಾಗಿದ್ದಾನೆ.

    ಲಲಿತಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದರು. ಅದೇ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕೆಲಸಕ್ಕೆ ಮಂಜುನಾಥ ಬಂದಿದ್ದ. ಆಗಿನಿಂದಲೇ ಅವರ ಮಧ್ಯ ಪ್ರೀತಿ ಪ್ರಾರಂಭವಾಗಿತ್ತು. ಲಲಿತಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮನೆಯಿಂದಲೇ ಊಟವನ್ನೂ ತಂದು ಕೊಡುತ್ತಿದ್ದ. ಇವರಿಬ್ಬರೂ ದೇವಸ್ಥಾನ, ಪಾರ್ಕ್ ಮುಂತಾದ ಕಡೆಗಳಲ್ಲಿ ಸುತ್ತಾಡಿದ್ದರು. ಕೆಲವು ತಿಂಗಳ ಹಿಂದೆ ಇವರಿಬ್ಬರ ನಡುವೆ ದೈಹಿಕ ಸಂಪರ್ಕವು ಕೂಡ ನಡೆದಿತ್ತು.

    ಲಲಿತಾ ಹಾಗೂ ಮಂಜುನಾಥ್ ಒಡನಾಟ ಕುಟುಂಸ್ಥರಿಗೆ ಗೊತ್ತಾದ ನಂತರ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದು, ಸೆಪ್ಟೆಂಬರ್ 25 ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಆದ ಎರಡು ದಿನಗಳ ಬಳಿಕ ಮನೆಗೆ ಹೋಗಿ ಮಂಜುನಾಥ ತನ್ನ ಮದುವೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ್ದ. ಈ ಸಂದರ್ಭದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರ ಕುಟುಂಬದವರು ಸೇರಿ ಅಕ್ಟೋಬರ್ 6 ರಂದು ಅಂಪಾರಿನ ಶ್ರೀ ವಾಸುಕಿ ಸುಬ್ರಹ್ಮಣ್ಯ ಮತ್ತು ನಾಗಯಕ್ಷಿ ದೇವಸ್ಥಾನದಲ್ಲಿ ಮದುವೆ ನಿಗದಿಪಡಿಸಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಲಲಿತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು.

    ಮದುಮಗನೇ ನಾಪತ್ತೆ: ಮದುವೆಗೆ ಎಲ್ಲಾ ತಯಾರಿಯೂ ಆಗಿತ್ತು. ಆದರೆ ಮದುಮಗ ಮಂಜುನಾಥ್ ಮಾತ್ರ ಮದುವೆ ಮಂಟಪಕ್ಕೆ ಬರಲೇ ಇಲ್ಲ. ಮಂಟಪದ ಮುಂದೆ ಕಾದು ಕಾದು ಸುಸ್ತಾದ ಲಲಿತಾ ನಾನು ಕಾನೂನು ರೀತಿಯಲ್ಲಿ ಮದುವೆಯಾಗಿದ್ದೇನೆ. ನನ್ನ ಗಂಡನನ್ನು ಕರೆಸಿ ಎಂದು ಮಂಜುನಾಥನ ಮನೆ ಮುಂದೆ ಧರಣಿ ಕುಳಿತ್ತಿದ್ದಾರೆ. ನನ್ನ ಕುಟುಂಬದವರಿಗೆ ಅನ್ಯಾಯ ಆಗಿದೆ ಎಂದು ಮದುವೆಗೆಂದು ಪ್ರಿಂಟ್ ಮಾಡಿದ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆ ಹಿಡಿದು ನ್ಯಾಯ ಕೊಡಿಸಿ ಎಂದು ಗಂಡನ ಮನೆಯ ಮುಂದೆ ನಿಂತು ಅಂಗಲಾಚಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಕುರಿತು ಮಾತುಕತೆ ನಡೆಸೋಣ. ಮನೆಯ ಮುಂದೆ ಗಲಾಟೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಆದರೂ ಲಲಿತಾ ಮತ್ತು ಕುಟುಂಬಸ್ಥರು ಹಠವಿಡಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥನ ಭಾವ ಚಂದ್ರ ಮತ್ತು ಲಲಿತಾ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಕುಂದಾಪುರ ಠಾಣೆಯಲ್ಲಿ ಯುವತಿ ತನಗೆ ಮೋಸವಾಗಿದೆ ಎಂದು ದೂರು ನೀಡಿದ್ದಾರೆ. ಅತ್ತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಕಾಣೆಯಾಗಿದ್ದಾನೆ ಎಂಬ ದೂರು ಕೂಡ ದಾಖಲಾಗಿದೆ.

  • ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನಲ್ಲಿ ಪ್ರತಿಭಟನೆ

    ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನಲ್ಲಿ ಪ್ರತಿಭಟನೆ

    ಕೋಲಾರ: ಮಾರಿಕುಪ್ಪಂ-ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನಗರದ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಬೆಳಂಬೆಳಗ್ಗೆ ರೈಲು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ಮಾರಿಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪ ಶಶಿಧರ್ ನೇತೃತ್ವದಲ್ಲಿ, ಹಲವು ದಲಿತ ಸಂಘಟನೆಗಳು ಸೇರಿದಂತೆ ನೂರಾರು ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

    ಮುಂಜಾನೆಯ 6.30 ರ ಸ್ವರ್ಣ ಪ್ಯಾಸೆಂಜರ್ ರೈಲು ಬದಲಾಗಿ ಪುಷ್ ಪುಲ್ ರೈಲು ಹಾಕಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅಲ್ಲದೆ ಬದಲಾದ ರೈಲಿನ ಬೋಗಿಗಳು ಕಡಿಮೆ ಇರುವ ಕಾರಣ ಪ್ರತಿನಿತ್ಯ ಹೊಟ್ಟೆಪಾಡಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಬಹಳಷ್ಟು ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

    ಕೆ.ಜಿ.ಎಫ್ ನ ಮಾರಿಕುಪ್ಪಂ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಪ್ರತಿಭಟನೆ ತಡೆಯಲು ಹರಸಾಹಸ ಪಡುತ್ತಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

  • ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯ ಕನ್ಯೆ ವೇಷ ಧರಿಸಿ ಪ್ರತಿಭಟನೆ ನಡೆಸಲಾಯಿತು. ನಟಿ ಸೋನು ಗೌಡ ಮತ್ಸ್ಯ ಕನ್ಯೆಯ ವೇಷ ಧರಿಸಿ ಈ ವಿಚಿತ್ರ ಪ್ರತಿಭಟನೆಗೆ ಸಾಕ್ಷಿಯಾದ್ರು.

    ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತು ತಂಡದಿಂದ ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಯಿತು. ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಸ್ವಿಮ್ಮಿಂಗ್ ಪೂಲ್ ರೀತಿ ಮಾಡಿ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನಿಡಲಾಯಿತು.

    ಈ ಬಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಗರದ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಕೆಲದಿನಗಳಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಹೀಗಾಗಿ ಈ ಎಲ್ಲಾ ವಿಚಾರಗಳು ಹಾಗೂ ರಸ್ತೆಗುಂಡಿಗಳನ್ನು ನೋಡಿದಾಗ ಸಮಸ್ಯೆಯನ್ನು ಸರ್ಕರಕ್ಕೆ ಮುಟ್ಟಿಸುವ ಸಲುವಾಗಿ ವಿಚಿತ್ರವಾಗಿ ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಿದೆ ಅಂದ್ರು.

    ಹಳ್ಳ, ನೀರು ಈ ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಈ ಪ್ರತಿಭಟನೆ ಮಾಡಲು ಉಪಾಯ ಮಾಡಿದೆ. ಹೀಗಾಗಿ ಸೋನು ಅವರ ಬಳಿ ಈ ಬಗ್ಗೆ ಮಾತನಾಡಿ ಅವರನ್ನು ಮತ್ಸ್ಯ ಕನ್ಯೆ ವೇಷ ಧರಿಸುವಂತೆ ಕೇಳಿಕೊಂಡೆ ಅಂತ ಅವರು ತಿಳಿಸಿದ್ರು.

  • ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರಿಂದ ಎಡವಟ್ಟು!

    ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರಿಂದ ಎಡವಟ್ಟು!

    ಬೆಂಗಳೂರು: ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರು ಎಡವಟ್ಟು ಕೆಲಸ ಮಾಡಿದ್ದಾರೆ. ಹೌದು ಕಾಂಗ್ರೆಸ್ ಪಕ್ಷವನ್ನು ಅಣಕಿಸಲು ಹೋಗಿ ಕಾಂಗ್ರೆಸ್ ಗಿಡ ಎಂದೇ ಕರೆಯಲಾಗುವ ಪಾರ್ಥೇನಿಯಂ ಗಿಡಗಳನ್ನು ತಂದು ಬೆಂಗಳೂರಿನ ನಡುರಸ್ತೆಯಲ್ಲಿ ನೆಟ್ಟು ಎಡವಟ್ಟು ಮಾಡಿದ್ದಾರೆ.

    ಗುರುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿ ವಾರ್ಡನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯನ್ನು ಮಾಡಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಅಣಕಿಸುವ ಸಲುವಾಗಿ ಬಿಜೆಪಿ ನಾಯಕರು ರಸ್ತೆಯಲ್ಲಿ ಪಾರ್ಥೇನಿಯಂ ಗಿಡನೆಟ್ಟಿದ್ದಾರೆ.

    ಬೆಂಗಳೂರು ಪ್ರಸ್ತುತ ಪಾರ್ಥೇನಿಯಂ ಮುಕ್ತ ನಗರವಾಗಿದ್ದು, ಇದನ್ನು ಮಾಡಲು ಹಲವು ವರ್ಷಗಳ ಕಾಲ ಬಿಬಿಎಂಪಿ ಮತ್ತು ಬಿಡಿಎ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಆದ್ರೆ ನಿನ್ನೆ ಬಿಜೆಪಿ ಪಕ್ಷದ ಸಿಟಿ ರೌಂಡ್ಸ್ ವೇಳೆ ಪಾರ್ಥೆನಿಯಂ ಗಿಡವನ್ನೆ ರಸ್ತೆ ಮಧ್ಯೆ ನೆಟ್ಟ ಬಿಜೆಪಿ ನಾಯಕರು ಮತ್ತೆ ನಗರಕ್ಕೆ ಪಾರ್ಥೇನಿಯಂ ಕಾಲಿಡುವಂತೆ ಮಾಡಿದ್ದಾರೆ.

    ಈ ಹಿಂದೆ ಪಾರ್ಥೇನಿಯಂ ಎಂಬ ರಕ್ಕಸ ಇಡೀ ಸಿಲಿಕಾನ್ ಸಿಟಿಯನ್ನೇ ಆವರಿಸಿತ್ತು, ಪಾರ್ಥೇನಿಯಂ ಮಾರಿಯಿಂದ ಬೆಂಗಳೂರಿನ ನಿವಾಸಿಗಳನ್ನು ಅಸ್ತಮಾ ಆವರಿಸಿಕೊಂಡಿತ್ತು. ಈ ಒಂದು ಗಿಡ ಬರೋಬ್ಬರಿ 1 ಲಕ್ಷ ಗಿಡವನ್ನು ಹುಟ್ಟು ಹಾಕುವ ಶಕ್ತಿಯನ್ನು ಹೊಂದಿದೆ. ಇದರಿಂದ ಭಾರತದಲ್ಲೇ ನಂಬರ್ ಒನ್ ಅಸ್ತಮಾ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದಿತ್ತು.

    ಆದರೆ ಕಾಂಗ್ರೆಸ್ ಪಕ್ಷವನ್ನು ಅಣಕಿಸುವ ನಡೆದ ಪ್ರತಿಭಟನೆಯಲ್ಲಿ ಈಗ ಬಿಜೆಪಿ ಪಾರ್ಥೇನಿಯಂ ಗಿಡದ ಅಪಾಯವನ್ನು ಅರಿಯಾದೆ ಅದನ್ನು ನಗರದ ರಸ್ತೆಗಳಲ್ಲಿ ನಾಟಿ ಮಾಡಿದೆ. ಪ್ರತಿಭಟನೆ ಮಾಡೋ ಭರದಲ್ಲಿ ಸಿಲಿಕಾನ್ ಸಿಟಿಯನ್ನು ಮತ್ತೆ ಪಾರ್ಥೇನಿಯಂ ಹಬ್ಬಿಸಲು ಬಿಎಸ್‍ವೈ, ಅಶೋಕ್ ನೇತೃತ್ವದಲ್ಲೇ ಸಿಟಿ ರೌಂಡ್‍ಗಳನ್ನು ಮಾಡಿದ್ದಾರೆ.

     

  • ಡಾಕ್ಟರ್ ಎಡವಟ್ಟಿಗೆ ರೋಗಿ ಬಲಿ: ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ

    ಡಾಕ್ಟರ್ ಎಡವಟ್ಟಿಗೆ ರೋಗಿ ಬಲಿ: ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ

    ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾಕ್ಟರ್ ಇಂಜೆಕ್ಷನ್ ನೀಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಣಕಲ್ ಮತ್ತಿಕಟ್ಟೆಯಲ್ಲಿ ನಡೆದಿದೆ.

    ಬಾಳೂರು ಹೊರಟ್ಟಿ ಗ್ರಾಮದ ನಿವಾಸಿ ವಿಜಯ್ ಸಾವನ್ನಪ್ಪಿರುವ ದುರ್ದೈವಿ. ಭಾನುವಾರ ರಾತ್ರಿ ವಾಂತಿ ಭೇದಿ ಆರೋಗ್ಯ ಸಮಸ್ಯೆಯಿಂದ ಬಣಕಲ್ ಮತ್ತಿಕಟ್ಟೆಯ ರಸ್ತೆಯಲ್ಲಿರುವ ಕಾಂಪೌಂಡರ್ ಚನ್ನಪ್ಪ ಅವರ ಖಾಸಗಿ ಕ್ಲಿನಿಕ್‍ಗೆ ಚಿಕಿತ್ಸೆಗಾಗಿ ಬಂದಿದ್ದಾರೆ.

    ಚಿಕಿತ್ಸೆ ಪಡೆದುಕೊಂಡ ಸ್ವಲ್ಪ ಹೊತ್ತಿಗೆ ವಿಜಯ್ ಮೃತಪಟ್ಟಿದ್ದಾರೆ. ಆದರೆ ಡಾಕ್ಟರ್ 3 ಇಂಜೆಕ್ಷನ್ ಕೊಟ್ಟಿರುವುದರಿಂದಲೇ ವಿಜಯ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

    ವಿಜಯ್ ಶವವನ್ನು ಅಸ್ಪತ್ರೆಯ ಮುಂಭಾಗದಲ್ಲಿಟ್ಟು ಸಂಬಂಧಿಕರು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.