Tag: ಪ್ರತಿಭಟನೆ

  • ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಮುಗೀತಿಲ್ಲ ಮಹದಾಯಿ ಹೋರಾಟಗಾರರ ಅಲೆದಾಟ- ಕೇಸ್ ಗಳಿಂದಾಗಿ ಕೋರ್ಟ್ ಕಚೇರಿಗೆ ಅಲೆದು ಅಲೆದು ಸುಸ್ತಾದ ರೈತರು

    ಹುಬ್ಬಳಿ: ಅವರು ನೀರಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದರು. ಹಾಗಾಗಿಯೇ ಪೊಲೀಸರಿಂದ ಲಾಠಿ ರುಚಿ ಕಂಡಿದ್ದರು. ಆದರೆ ಆಗ ಸರ್ಕಾರ ಅವರ ಮೇಲೆ ಹಾಕಿದ ಕೇಸ್ ಗಳಿಂದಾಗಿ ಕೋರ್ಟ್ ಕಚೇರಿ ಎಂದು ಅಲೆದು ಅಲೆದು ಸುಸ್ತಾಗಿದ್ದಾರೆ. ಈಗ ಮತ್ತೇ ಪೊಲೀಸರ ಮೇಲೆ ದಾಖಲಾದ ಕೇಸ್ ಗಳ ವಿಚಾರಣೆಗೆ ಸಾಕ್ಷಿ ಹೇಳಲು ಅಲೆದಾಡುತ್ತಿದ್ದಾರೆ. ಹೀಗಾಗಿ ಇದರಿಂದ ನಮಗೆ ಯಾವಾಗ ಮುಕ್ತಿ ಆ ಜನ ಹೇಳುತ್ತಿದ್ದಾರೆ.

    ಮಹದಾಯಿ ಹೋರಾಟ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ನಡೆದ ಬಹು ದೊಡ್ಡ ಹೋರಾಟ ಎನಿಸಿಕೊಂಡಿದೆ. ಆದರೆ ಹೋರಾಟ ಮಾಡಿದ ರೈತರು ಪೊಲೀಸರ ಲಾಠಿ ರುಚಿಯನ್ನು ಕಂಡಿದ್ದರು. ಕಳೆದ ವರ್ಷ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದಲ್ಲಿ ರೈತರು ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದರು. ಅಂದು ಲಾಠಿ ಏಟು ತಿಂದಿದ್ದ ರೈತರು, ಪೊಲೀಸರು ಹಾಕಿದ ವಿವಿಧ ಪ್ರಕರಣಗಳಿಂದ ಕೋರ್ಟ್ ಗೆ ಅಲೆದು ಸುಸ್ತಾಗಿದ್ದಾರೆ. ಇವಾಗ ಪೊಲೀಸ್ ಮುಂದೆ ಸಾಕ್ಷಿ ಹೇಳಲು ಕೆಲಸ ಬಿಟ್ಟು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.

    ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

    ಕಳೆದ ವರ್ಷ ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಯಮನೂರು ಹಾಗೂ ಅರೇಕುರಟ್ಟಿ ಗ್ರಾಮದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಮನ ಬಂದಂತೆ ಹಲ್ಲೆ ಮಾಡಿದ್ದರು. ಹಲ್ಲೆಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ವಯೋವೃದ್ಧರು ಗಂಭೀರವಾಗಿ ಗಾಯ ಗೊಂಡಿದ್ದರು.

    ಇದನ್ನೂ ಓದಿ: ಮಹದಾಯಿ ಹೋರಾಟಗಾರರಿಗೆ ಸಮನ್ಸ್- ಅಂಬ್ಯುಲೆನ್ಸ್ ಸಿಬ್ಬಂದಿ, ಸೈನಿಕ, ಎಂಜಿನೀಯರ್‍ಗೂ ನೋಟಿಸ್

    ಈ ಸಂಬಂಧ ಸರ್ಕಾರ ಎಡಿಜಿಪಿ ಕಮಲ್ ಪಂತ್ ನೇತ್ರತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿತ್ತು. ಕಾರಣ ಇಂದು ಪ್ರಕರಣದ ವಿಚಾರಣಾ ಅಧಿಕಾರಿ ಎನ್ ಶಿವಪ್ರಸಾದ ಅವರು ಹುಬ್ಬಳ್ಳಿಯ ಸಿ ಆರ್ ಮೈದಾನದಲ್ಲಿ 15 ಕ್ಕೂ ಹೆಚ್ಚು ಜನ ರೈತ ಮಹಿಳೆಯರು ವಯೋವೃದ್ದರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಪದೇ ಪದೇ ಅಲೆದಾಡುವದರಿಂದ ಬಹಳ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಕೆಲಸ ಬಗಸೆ ಬಿಟ್ಟು ಕೋರ್ಟ್ ಕಚೇರಿ ಎಂದು ಅಲೆದಾಡುವಂತಾಗಿದೆ ರೈತಾಪಿ ವರ್ಗದ ಜನರ ಸ್ಥಿತಿ ಏನಾದರೂ ಸರ್ಕಾರ ಇವರ ಅಲೆದಾಟ ತಪ್ಪಿಸಬೇಕಾಗಿದೆ. ಒಟ್ಟಿನಲ್ಲಿ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆಯನ್ನು ಇತ್ಯರ್ಥ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಶ್ರಮಿಸಿ, ಸುದೀರ್ಘ ಹೋರಾಟಕ್ಕೆ ನ್ಯಾಯ ನೀಡಬೇಕಾಗಿದೆ.

     

     

     

     

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕ ಸಾವು

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕ ಸಾವು

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲು ಹತ್ತಲು ಹೋದ ಯುವಕನೊಬ್ಬ ಆಯತಪ್ಪಿ ರೈಲಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಮುದುಗೆರೆ ಗ್ರಾಮದ 25 ವರ್ಷದ ಜಗದೀಶ್ ಮೃತ ಯುವಕ. ಗೌರಿಬಿದನೂರು ಪಟ್ಟಣದಿಂದ ಯಲಹಂಕಕ್ಕೆ ಐಎಎಸ್ ಕೋಚಿಂಗ್ ಗೆ ತೆರಳುತ್ತಿದ್ದ ಜಗದೀಶ್, ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲು ಹತ್ತಲು ಹೋಗಿ ಅಯತಪ್ಪಿ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಘಟನೆ ನಂತರ ರೊಚ್ಚಿಗೆದ್ದ ಪ್ರಯಾಣಿಕರು ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲನ್ನು ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ದುರ್ಗಾ ರೈಲ್ವೆ ಸ್ಟೇಷನ್ ಬಳಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಮೊದಲು 17 ಬೋಗಿಯ ಬೃಹತ್ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಈಗ 10 ಬೋಗಿಗಳುಳ್ಳ ರೈಲು ಸಂಚರಿಸುತ್ತಿದೆ. ಪ್ರಯಾಣಿಕರ ದಟ್ಟಣೆ ಜಾಸ್ತಿ ಇರುವ ಕಾರಣ ಪ್ರಯಾಣಿಕರು ನಾ ಮುಂದು ತಾ ಮುಂದು ಎಂದು ರೈಲು ಏರುವ ಆತುರದಲ್ಲಿ ಈ ತರಹದ ಅವಘಡಗಳು ಆಗುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇನ್ನೂ ಹೆಚ್ಚು ಬೋಗಿಗಳುಳ್ಳ ರೈಲನ್ನು ಪುನಃ ಈ ಭಾಗದಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟು ಪ್ರಯಾಣಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ರೈಲು ತಡೆಯಿಂದ ಇತರೆ ರೈಲುಗಳ ಓಡಾಟದಲ್ಲಿ ವ್ಯತ್ಯಾಸ ಉಂಟಾಗಿ ಹಲವು ಪ್ರಯಾಣಿಕರು ಪರದಾಡುವಂತಾಗಿದೆ.

    ಯಶವಂತಪುರ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕರ್ಣಿ ಸೇನೆಯ ಬೆದರಿಕೆಗೆ ದೀಪಿಕಾ ಹೇಳಿದ್ದು ಹೀಗೆ!

    ಕರ್ಣಿ ಸೇನೆಯ ಬೆದರಿಕೆಗೆ ದೀಪಿಕಾ ಹೇಳಿದ್ದು ಹೀಗೆ!

    ಮುಂಬೈ: ಪದ್ಮಾವತಿ ಚಿತ್ರ ಶುರುವಾದಗಿಂದ ಸಾಕಷ್ಟು ತೊಂದರೆಗಳನ್ನು ಎದರಿಸುತ್ತಾ ಬರುತ್ತಿದೆ. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಪದ್ಮಾವತಿ ಚಿತ್ರ ಸಾಕಷ್ಟು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ರಜಪೂತ ಕರ್ಣಿ ಸೇನಾ ಈ ಮೊದಲು ಜನವರಿ ತಿಂಗಳಲ್ಲಿ ಚಿತ್ರದ ಸೆಟ್ ಮೇಲೆ ದಾಳಿ ನಡೆಸಿದ್ದರು. ಆದರೆ ಈಗ ಹಲವಾರು ಸಂಘಟನೆಗಳಿಂದ ದೀಪಿಕಾ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.

    ರಜಪೂತರು ಯಾವತ್ತೂ ಹೆಣ್ಣಿನ ಮೇಲೆ ಕೈ ಮಾಡುವುದಿಲ್ಲ. ಆದರೆ ಸಂದರ್ಭ ಬಂದಾಗ ಲಕ್ಷ್ಮಣ ಶೂರ್ಪಣಕಿಗೆ ಮಾಡಿದ ರೀತಿಯನ್ನು ನಾವು ದೀಪಿಕಾಗೆ ಮಾಡಬೇಕಾಗುತ್ತದೆ ಎಂದು ರಜಪೂತ್ ಕರ್ಣಿ ಸೇನೆಯ ಮಹಿಪಾಲ್ ಸಿಂಗ್ ಮಕ್ರಾನಾ ತಿಳಿಸಿದ್ದಾರೆ.

    ಇನ್ನೊಂದಡೆ ರಜಪೂತ್ ಸಮುದಾಯದ ಹಿರಿಯ ನಾಯಕರಾದ ಲೋಕೆಂದ್ರ ಸಿಂಗ್ ಕಾಲ್ವಿ ಅವರು ಡಿಸೆಂಬರ್ 1 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದಾರೆ. ನಾವು ಲಕ್ಷಾಂತರ ಮಂದಿ ಸೇರುತ್ತೇವೆ. ನಮ್ಮ ಪೂರ್ವಜರು ಈ ಇತಿಹಾಸವನ್ನು ರಕ್ತದಲ್ಲಿ ಬರೆದಿದ್ದರು. ನಾವು ಈ ಇತಿಹಾಸಕ್ಕೆ ಮಸಿ ಬಳಿಯುವಂತಹ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಮೀರತ್ ನ ನಾಯಕರದ ಠಾಕೂರ್ ಅಭೀಷೇಕ್ ಸೋಮ್ ಅವರು ದೀಪಿಕಾ ತಲೆಯನ್ನು ತೆಗೆಯುವರಿಗೆ 5 ಕೋಟಿ ರೂ. ನೀಡುತ್ತೇವೆ ಎಂದು ಹೇಳಿದ್ದಾರೆ ಅಂತ ವರದಿಯಾಗಿದೆ.

    ಈ ಎಲ್ಲಾ ಸುದ್ದಿ ಹಾಗೂ ಬೆದರಿಕೆಗಳಿಗೆ ಪ್ರತಿಕ್ರಿಯಿಸಿದ ದೀಪಿಕಾ ಈ ಸಂದರ್ಭದಲ್ಲಿ ನಾನು ಒಬ್ಬ ಹೆಣ್ಣಾಗಿ, ಕಲಾವಿದೆಯಾಗಿ ಹಾಗೂ ದೇಶದ ಪ್ರಜೆಯಾಗಿ ನಾನು ಕೋಪಗೊಂಡಿದ್ದೇನೆ, ನಿರಾಶಿತಳಾಗಿದ್ದೇನೆ. ನಾನು ಈಗ ಯಾರಿಗೂ ಹೆದರುವುದಿಲ್ಲ. ಭಯ ಎಂಬ ಭಾವನೆ ನನಲ್ಲಿ ಇಲ್ಲ. ನಾನು ಅದನ್ನು ಗುರುತಿಸುವುದಿಲ್ಲ ಎಂದು ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

    ಚಿತ್ರವನ್ನು ನೋಡದೇ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ ನಾನು ಹೇಳುತ್ತಿದ್ದೇನೆ, ಈ ಚಿತ್ರವನ್ನು ನೋಡಿದ ಮೇಲೆ ಪ್ರತಿಯೊಬ್ಬ ಭಾರತಿಯರು ಹೆಮ್ಮೆ ಪಡುತ್ತಾರೆ. ರಾಣಿ ಪದ್ಮಾವತಿ ಜೀವನ ಪಯಣವನ್ನು ತೋರಿಸುತ್ತಿದ್ದಕ್ಕೆ ನಮಗೆ ಖುಷಿಯಾಗುತ್ತಿದೆ. ಆಕೆಯ ಜೀವನ ಚರಿತ್ರೆಯನ್ನು ಭಾರತದಲ್ಲದೇ ಇಡೀ ವಿಶ್ವಕ್ಕೆ ತಿಳಿಸಬೇಕು ಎಂದು ದೀಪಿಕಾ ತಿಳಿಸಿದ್ದಾರೆ.

     

  • ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

    ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ವಿರೋಧಿಸಿ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಮುಷ್ಕರವನ್ನು ಹೈಕೋರ್ಟ್ ಮನವಿಗೆ ಒಪ್ಪಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

    ನಾಳೆಯಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಲಭ್ಯವಾಗಲಿದ್ದು, ಎಂದಿನಂತೆ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಫನಾ ಮುಖ್ಯಸ್ಥ ಜಯಣ್ಣ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಐಎಂಎನಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ಮನವಿಗೆ ಒಪ್ಪಿ ಮುಷ್ಕರವನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಖಾಸಗಿ ವೈದ್ಯರ ತುರ್ತು ಸಭೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫನಾ ಮುಖ್ಯಸ್ಥ ಜಯಣ್ಣ, ಹೈಕೋರ್ಟ್ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರು ಸೇವೆಗೆ ತೆರಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ತುರ್ತು ಸೇವೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ನಮ್ಮ ಕೆಲ ಪದಾಧಿಕಾರಿಗಳು ಬೆಳಗಾವಿಗೆ ಹೋಗಲಿದ್ದಾರೆ  ಎಂದು ತಿಳಿಸಿದರು.

    ಮುಂದುವರಿದ ಗೊಂದಲ: ಖಾಸಗಿ ಆಸ್ಪತ್ರೆಗಳ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ವೈದ್ಯಕೀಯ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಹೈಕೋರ್ಟ್ ಸೂಚನೆಯನ್ವಯ ಸಭೆ ನಡೆಸಿದ ಫನಾ ಸಂಘಟನೆ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗೋದಾಗಿ ಪ್ರಕಟಿಸಿದೆ. ಆದ್ರೆ ವಿರೋಧ ವ್ಯಕ್ತಪಡಿಸಿದ ಐಎಂಎ ಸಂಘಟನೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದೆ. ಹೀಗಾಗಿ ಮುಷ್ಕರ ವಾಪಸ್ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

    ಇನ್ನು ನಾಳೆ ಮಧ್ಯಾಹ್ನ 2 ಗಂಟೆ ಮುಷ್ಕರ ನಿರತ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಬಾವಿಯಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ತಿದ್ದುಪಡಿ ವಿಧೇಯಕವನ್ನು ಮಂಡಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

     

    https://youtu.be/rAMDIHQ6ZjE

     

     

  • ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ?

    ಬೆಂಗಳೂರು: ರಾಜ್ಯದಲ್ಲಿ ಈಗ ಆರೋಗ್ಯ ಎಮರ್ಜೆನ್ಸಿ ನಿರ್ಮಾಣವಾಗಿದೆ. ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ(ಕೆಪಿಎಂಇ) ವೈದ್ಯರ ಪ್ರತಿರೋಧ ಗುರುವಾರದಿಂದ ಮತ್ತಷ್ಟು ಜೋರಾಗಲಿದೆ. ಅನಿರ್ಧಿಷ್ಟಾವಧಿವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಯ ಒಪಿಡಿಗಳು ಕ್ಲೋಸ್ ಆಗಲಿದ್ದು, ಜನರಿಗೆ ಚಿಕಿತ್ಸೆ ಸಿಗುವುದಿಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್ ಅಂತಾ ವೈದ್ಯರು ರಮೇಶ್ ಕುಮಾರ್ ರತ್ತ ಬೊಟ್ಟು ಮಾಡಿದ್ರೆ, ಸಚಿವರು ಪ್ರಾಣ ಹೋದ್ರು ಕಾಯ್ದೆ ಮಂಡಿಸುತ್ತೇನೆ ಅಂತಾ ಪಟ್ಟು ಹಿಡಿದಿದ್ದಾರೆ.

    ಇಂದು ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರ ವಿಧೇಯಕ ವಾಪಸು ಪಡೆಯುವವರೆಗೆ ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆ ಎಂಟು ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆಯನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಚಿವರ ವಿರುದ್ಧ ಕಿಡಿಕಾರಿರುವ ವೈದ್ಯರು ರಮೇಶ್ ಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಹಠಮಾರಿ ಧೋರಣೆ ಮಾಡಿದ್ದಾರೆ ಜನ್ರ ಸಾವಿನ ಹೊಣೆ ಅವ್ರೇ ವಹಿಸಿಕೊಳ್ಳಲಿ ಅಂತಾ ಹೇಳಿದ್ದಾರೆ.

    ಫನಾ ಕಾರ್ಯದರ್ಶಿ, ಡಾ ರವೀಂದ್ರ ಅವರು ಹೊಸ ಬಾಂಬ್ ಹಾಕಿದ್ದು ಸಚಿವ ರಮೇಶ್ ಕುಮಾರ್ ಈ ಮಸೂದೆ ಜಾರಿಗೆ ಚುನಾವಣೆ ಕಾರಣ. ಇದಕ್ಕೆ ತರಾತುರಿಯಲ್ಲಿ ಮಸೂದೆ ಮಂಡನೆಗೆ ಹೊರಟಿದ್ದಾರೆ ಇದನ್ನು ಖುದ್ದು ನನ್ನ ಬಳಿಯೇ ಹೇಳಿಕೊಂಡಿದ್ದಾರೆ ಎಂದರು.

    ಸರ್ಕಾರ ಮೊದಲು ಆರು ಕೋಟಿ ಕನ್ನಡಿಗರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭರವಸೆ ನೀಡಲಿ ಎಂದು ಆಗ್ರಹಿಸಿದರು.


     

  • ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

    ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ

    ಹಾಸನ: ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುತ್ತಾರೆ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದ್ದಾರೆ.

    ರಾಜ್ಯ ಸರ್ಕಾರದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಈಗ ಮಸೂದೆ ತರುವ ಅವಶ್ಯಕತೆ ಇದೆಯೇ? ಕೆಲವರು ಒಳ್ಳೆಯ ವೈದ್ಯರಿದ್ದಾರೆ. ಕೆಲವರು ಕೆಟ್ಟವರೂ ಇದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗುವುದಿಲ್ಲ ಎಂದು ಹೇಳಿದರು.

    ವೈದ್ಯರಿಗೆ ವಕೀಲರ ನೇಮಕಕ್ಕೂ ಅವಕಾಶ ಇಲ್ಲದಂತಹ ಹೊಸ ಕಾನೂನು ಬೇಕಾ? ಸಾಲ ಮಾಡಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಅದೆಲ್ಲವನ್ನು ದುಡಿಯಬೇಕಲ್ಲವೆ ಎಂದು ಪ್ರಶ್ನಿಸಿದರು. ಔಷಧಿ ಕಂಪನಿಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇದೆ. ಕೆಲವು ಕಡೆ ಗ್ರಾಮಗಳಿಗೆ ವೈದ್ಯರು ಹೋಗುವುದಕ್ಕೆ ಹೆದರುತ್ತಾರೆ. ವೈದ್ಯರಿಗೂ ಹಲವಾರು ಸಮಸ್ಯೆಗಳಿವೆ ಅವೆಲ್ಲವನ್ನೂ ಸರಿದೂಗಿಸುವ ಕಾನೂನು ಮಾಡಲಿ ಎಂದು ತಿಳಿಸಿದರು.

    ಪಕ್ಷಾಂತರ ಆಗುತ್ತೆ: ಈಗಾಗಲೇ ಎರಡೂ ರಾಜಕೀಯ ಪಕ್ಷಗಳ ಬಗ್ಗೆ ಜನರಲ್ಲಿ ನಿರಾಸೆ ಭಾವನೆ ಇದೆ. ಗುಜರಾತ್ ಚುನಾವಣೆಯ ನಂತರ ಯಾರು ಯಾರು ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ನ ಹಲವು ನಾಯಕರು ಪಕ್ಷ ಬಿಡುವ ಸೂಚನೆ ಇದೆ. ನಾವು ವಿಕಾಸ ಯಾತ್ರೆ ಮುಖಾಂತರ ಜನರ ಬಳಿ ತಲುಪುವ ಪ್ರಯತ್ನ ಮಾಡುತಿದ್ದೇವೆ ಎಂದರು.

    ಅಂಬರೀಶ್ ಪಕ್ಷ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು, ಇದೂವರೆಗೂ ನಾವು ಭೇಟಿ ಆಗಿಲ್ಲ. ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾದರೆ ಬಿಜೆಪಿಗೆ ಪಕ್ಷಾಂತರ ಆಗುತ್ತೆ. ಹಾಗೆಯೇ ಬಿಜೆಪಿಗೆ ಹಿನ್ನಡೆ ಆದಲ್ಲಿ ಕಾಂಗ್ರೆಸ್ ಕಡೆ ವಲಸೆ ನಡೆಯುವ ಸಂಭವ ಇರುತ್ತದೆ. ಗುಜರಾತ್ ನಲ್ಲಿ ಎರಡೂ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಮಾತಿಗೂ ಕೃತಿಗೂ ಬಹಳ ವ್ಯತ್ಯಾಸ ಇದೆ ಎಂದು ಹೇಳಿದರು.

    ಮೌಢ್ಯ ಪ್ರತಿಬಂಧಕ ಮಸೂದೆ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಅದೆಲ್ಲ ನಂಬಿಕೆ ಮೇಲೆ ನಡೆಯುತ್ತದೆ. ಶೋಷಣೆ ನಡೆಯದಂತೆ ಕಾನೂನು ತರಲಿ ಎಂದರು.

    ಶ್ರವಣಬೆಳಗೊಳದ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಕೇಂದ್ರದ ಅನುದಾನಕ್ಕೆ ನಾನು ಪ್ರಯತ್ನಿಸಿದೆ. ಆದರೆ ನಿರ್ಲಕ್ಷ್ಯ ಮಾಡಿದ್ದು ಯಾಕೆ ಗೊತ್ತಾಗಿಲ್ಲ ಎಂದು ಹೇಳಿದರು.

     

  • ಸರ್ಕಾರ, ಖಾಸಗಿ ವೈದ್ಯರ ಹಗ್ಗಜಗ್ಗಾಟ – ರಾಜ್ಯದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ

    ಸರ್ಕಾರ, ಖಾಸಗಿ ವೈದ್ಯರ ಹಗ್ಗಜಗ್ಗಾಟ – ರಾಜ್ಯದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ

    ಬೆಂಗಳೂರು: ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರ್ಕಾರ ಹಾಗೂ ವೈದ್ಯರ ಹಗ್ಗ ಜಗ್ಗಾಟದಲ್ಲಿ ವೈದ್ಯರ ಮುಷ್ಕರದಿಂದ ಇದೂವರೆಗೂ 7 ಜನ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರು ವಿಷಾದ ವ್ಯಕ್ತಪಡಿಸುತ್ತಾರೆ ಹೊರತು ಮುಷ್ಕರ ಮಾತ್ರ ಕೈ ಬಿಡುತ್ತಿಲ್ಲ.

    ತಮ್ಮ ಬೇಡಿಕೆ ಈಡೇರಿಸುವರೆಗೂ ಮುಷ್ಕರ ಕೈ ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹಾಗೇ ಸರ್ಕಾರನೂ ಒಂದು ಗಟ್ಟಿ ನಿರ್ಧಾರಕ್ಕೆ ಬರುತ್ತಿಲ್ಲ. ಮಂಗಳವಾರ ಮಕ್ಕಳು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಗದಗದಲ್ಲಿ ಚಿಕಿತ್ಸೆ ಸಿಗದೇ ಹೆರಿಗೆಯಾದ ಬಾಣಂತಿಯೊಬ್ಬರು ಮಗು ಎತ್ಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ದೃಶ್ಯ ಕಂಡು ಬಂತು. ಹೀಗೆ ಹೇಳುತ್ತಾ ಹೋದರೆ ಊರಿಗೆ ಒಂದು ಸಮಸ್ಯೆ ಸಿಗುತ್ತದೆ.

    ಖಾಸಗಿ ವೈದ್ಯರನ್ನ ಕೇಳಿದರೆ ಸರ್ಕಾರ ಫಿಕ್ಸ್ ಮಾಡಿದ ಯೋಜನೆಗಳಲ್ಲಿ ಬಡವರಿಗೆ ಚಿಕಿತ್ಸೆ ಕೊಡ್ತಾ ಇದ್ದೀವಿ. ಹಾಗಂತ ಸರ್ಕಾರ ನಮಗೇನಾದ್ರೂ ಫ್ರಿಯಾಗಿ ನೀರು ಕರಂಟ್ ಕೊಡುತ್ತಿದೆಯಾ, ನಾವು ತೆರಿಗೆ, ಕಮರ್ಶಿಯಲ್ ಚಾರ್ಜ್ ಕಟ್ಟುತ್ತಿದ್ದೇವೆ. ಈಗ ಹೊಸ ಕಾಯ್ದೆ ತಂದು ನಮ್ಮ ಮೇಲೆ ಹೊರೆ ಹಾಕುತ್ತಿದ್ದಾರೆ ಅಂತ ಸರ್ಕಾರವನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಯ ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ? 

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

  • ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವರ್ಗಗಳ ನೌಕರರು ಇಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

    ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 62 ವಿವಿಧ ವರ್ಗಗಳ ಸಾವಿರಾರು ನೌಕರರು ಅಹಿಂಸಾ ಸಂಘಟನೆ(ಅಲ್ಪ ಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ) ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅರಮನೆ ಮೈದಾನದ ವರೆಗೂ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮುಂಬಡ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿ ಮಾಡುವಂತೆ ಎಂದು ಒತ್ತಾಯ ಮಾಡಿದರು. ಅಲ್ಲದೇ ಸುಪ್ರೀಂ ಆದೇಶವಿದ್ದರೂ ರಾಜ್ಯ ಸರ್ಕಾರ ಮುಂಬಡ್ತಿಯನ್ನು ನೀಡಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ಶೇ.82 ರಷ್ಟು ನೌಕರರಿಗೆ ಮುಂಬಡ್ತಿ ನೀಡಬೇಕು ಆಗ್ರಹಿಸಿದರು.

    ಅಲ್ಲದೇ ರಾಜ್ಯ ಸರ್ಕಾರವು ಸುಪ್ರೀಂ ಆದೇಶಕ್ಕೆ ತದ್ವಿರುದ್ಧವಾಗಿ ಕಾನೂನು ಜಾರಿಗೆ ಮಾಡಲು ನಿರ್ಧರಿಸಿದೆ. ಆದರಿಂದಲೇ ಈ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯಪಾಲರಿಗೆ ಕಡತ ರವಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಟಿಪ್ಪುವನ್ನು ಬ್ರಿಟಿಷರು ಹತ್ಯೆ ಮಾಡಿದ್ದರಿಂದ ರಾಜ್ಯಕ್ಕೆ ಲಾಭವಾಗಿದೆ: ಪ್ರತಾಪ್ ಸಿಂಹ

    ಟಿಪ್ಪುವನ್ನು ಬ್ರಿಟಿಷರು ಹತ್ಯೆ ಮಾಡಿದ್ದರಿಂದ ರಾಜ್ಯಕ್ಕೆ ಲಾಭವಾಗಿದೆ: ಪ್ರತಾಪ್ ಸಿಂಹ

    ಮೈಸೂರು: ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿ ಯದುವಂಶಕ್ಕೆ ಅಧಿಕಾರ ಕೊಟ್ಟಿದ್ದರಿಂದ ರಾಜ್ಯಕ್ಕೆ ಲಾಭವಾಗಿದೆ. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಹತ್ಯೆಯಾಗದಿದ್ದರೆ ಕನ್ನಂಬಾಡಿ ಕಟ್ಟೆ ನಿರ್ಮಾಣವಾಗುತ್ತಿತ್ತಾ? ಮೈಸೂರು ವಿವಿ ನಿರ್ಮಿಸಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸುವ ಮೂಲಕ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡರು.


    ಟಿಪ್ಪು ಧಾರಾವಾಹಿ ತೆಗೆಯಲು ಮೈಸೂರಿಗೆ ಬಂದಿದ್ದ ಬಾಲಿವುಡ್ ನಟ ಮೈ ಸುಟ್ಟುಕೊಂಡ. ಅಷ್ಟೇ ಅಲ್ಲದೇ ಟಿಪ್ಪು ಖಡ್ಗವನ್ನು ತಂದ ವಿಜಯ್ ಮಲ್ಯ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡ. ಮುಂದಿನ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ಸುಟ್ಟುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

    ಇದೀಗ ಟಿಪ್ಪು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಹೆಸರು ತೆಗೆಯುವ ಮೂಲಕ ಸಿಎಂ ನಮ್ಮ ಹೋರಾಟಕ್ಕೆ ಹೆದರಿದ್ದಾರೆ. ನಾವು ಕಾರ್ಯಕ್ರಮಕ್ಕೆ ಬಂದರೆ ಟಿಪ್ಪುವಿನ ನಿಜಬಣ್ಣ ಬಯಲಾಗುತ್ತದೆ ಎಂಬ ಭಯ ಅವರಿಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ವ್ಯಂಗ್ಯವಾಡಿದರು.

    ಟಿಪ್ಪು ಜಯಂತಿಯನ್ನು ವಿರೋಧಿಸಿ ಮಹಿಳೆಯರು ಕೈಯಲ್ಲಿ ಒನಕೆ ಹಿಡಿದು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಎಸ್.ಎ. ರಾಮದಾಸ್, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

     

  • ಸ್ಕೂಟಿಗೆ KSRTC ಬಸ್ ಡಿಕ್ಕಿ- ಸ್ಥಳದಲ್ಲೇ ಅಕ್ಕ ತಮ್ಮ ದಾರುಣ ಸಾವು

    ಸ್ಕೂಟಿಗೆ KSRTC ಬಸ್ ಡಿಕ್ಕಿ- ಸ್ಥಳದಲ್ಲೇ ಅಕ್ಕ ತಮ್ಮ ದಾರುಣ ಸಾವು

    ಚಿಕ್ಕಬಳ್ಳಾಪುರ: ಸ್ಕೂಟಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಕ್ಕ-ತಮ್ಮ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೆ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ.

    35 ವರ್ಷದ ಭಾಗ್ಯಮ್ಮ ಹಾಗೂ 30 ವರ್ಷದ ಮುರುಳಿ ಮೃತ ದುರ್ದೈವಿಗಳು. ಮೃತ ಭಾಗ್ಯಮ್ಮ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

    ಎಂದಿನಂತೆ ಇಂದು ಭಾಗ್ಯಮ್ಮ ಅವರನ್ನು ಸಹೋದರ ಸ್ಕೂಟಿಯಲ್ಲಿ ವಿಜಯಪುರ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಕೆಎಸ್‍ಆರ್‍ಟಿಸಿ ಬಸ್ ಬಂದಿದ್ದು, ರಸ್ತೆಯಲ್ಲಿ ಹಳ್ಳ ಇದೆ ಎಂದು ಚಾಲಕ ಎಡಗಡೆಯಿಂದ ಬಲಡೆಗೆ ವೇಗವಾಗಿ ಬಂದಿದ್ದಾನೆ. ಪರಿಣಾಮ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯಲ್ಲಿದ್ದ ಇಬ್ಬರೂ ರಸ್ತೆಯ ಪಕ್ಕಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಕೂಟಿ ಸಂಪೂರ್ಣವಾಗಿ ಬಸ್ ನ ಕೆಳಭಾಗದಲ್ಲಿ ತೂರಿಕೊಂಡಿದೆ.

    ಈ ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥರು ಕೋಲಾರ-ವಿಜಯಪುರ-ಚಿಕ್ಕಬಳ್ಳಾಪುರ ಮಾರ್ಗದ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಬಸ್ ಚಾಲಕ ಪರಾರಿಯಾಗಿದ್ದಾನೆ.