Tag: ಪ್ರತಿಭಟನೆ

  • ಪರಿಸರ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಶಿವಣ್ಣ

    ಪರಿಸರ ಪ್ರೇಮಿಗಳಲ್ಲಿ ಕ್ಷಮೆ ಕೇಳಿದ ಶಿವಣ್ಣ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪರಿಸರ ಪ್ರೇಮಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.

    ನಟ ಶಿವರಾಜ್ ಕುಮಾರ್ ಮಲ್ಲೇಶ್ವರಂ ನಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ನ ಹೊಸ ಶೋರೂಂನ ಉದ್ಘಾಟನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶೋರೂಂಗೆ ಅಡ್ಡಲಾಗಿದ್ದ ಎರಡು ಮರಗಳನ್ನು ಶೋರೂಂ ಅವರು ಅಂಗಡಿ ಕಾಣುವುದಿಲ್ಲ ಎಂದು ಕಡಿಸಿದ್ದಾರೆ. ಇದರಿಂದ ಪರಿಸರ ಪ್ರೇಮಿಗಳು ಆಕ್ರೋಶಗೊಂಡು ಪ್ರತಿಭಟನೆಯನ್ನು ಮಾಡಲು ಆರಂಭಿಸಿದ್ದರು.

    ಉದ್ಘಾಟನೆ ಮಾಡಲು ಸಮಾರಂಭಕ್ಕೆ ಆಗಮಿಸಿದ ಶಿವಣ್ಣಗೂ ಪ್ರತಿಭಟನೆಯ ಬಿಸಿ ತಟ್ಟಿದೆ. ಆದ್ದರಿಂದ ಪ್ರತಿಭಟನಕಾರರ ಮನವೊಲಿಸಿ ಕಲ್ಯಾಣ್ ಜ್ಯುವೆಲರ್ಸ್ ಪರವಾಗಿ ಕ್ಷಮೆಯನ್ನು ಕೇಳಿದ್ದಾರೆ. ಅಷ್ಟೇ ಅಲ್ಲದೇ ಜ್ಯುವೆಲ್ಲರ್ಸ್ ಅಂಗಡಿ ಮುಂದೆ ಗಿಡವೊಂದನ್ನು ನೆಟ್ಟು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಒಂದು ಸಣ್ಣ ತಪ್ಪಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗೋದು ಬೇಡ. ಇವತ್ತು ಒಂದು ಗಿಡ ನೆಟ್ಟಿದ್ದೇವೆ. ಇನ್ನೂ ನೂರು ಗಿಡ ನೆಡುತ್ತೇವೆ. ನಾನು ನಿಮ್ಮೆಲ್ಲರ ಮುಂದೆ ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರಿಗೂ ಬೇಜರಾಗಿದ್ದರಿಂದ ಕ್ಷಮಿಸಿ, ಕ್ಷಮಿಸಿ ಎಂದು ಪರಿಸರ ಪ್ರೇಮಿಗಳಲ್ಲಿ ಎರಡು ಬಾರಿ ಕ್ಷಮೆ ಕೇಳಿದ್ದಾರೆ.

  • ಯೋಗಿಯನ್ನು ವರಿಸಿದ ಅಂಗನವಾಡಿ ಕಾರ್ಯಕರ್ತೆ!

    ಯೋಗಿಯನ್ನು ವರಿಸಿದ ಅಂಗನವಾಡಿ ಕಾರ್ಯಕರ್ತೆ!

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಂಗನವಾಡಿ ಕಾರ್ಯಕರ್ತೆ ಒಬ್ಬರು ವಿವಾಹವಾಗಿದ್ದಾರೆ.

    ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ. ರಾಜ್ಯ ಸರ್ಕಾರದ ಗಮನ ಸೆಳೆಯಲು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಯೋಗಿ ಆದಿತ್ಯನಾಥ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಸೀತಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಮಹಿಳಾ ಅಂಗನವಾಡಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ಅವರು ಆದಿತ್ಯನಾಥ್ ಅವರನ್ನು ವರಿಸಿದ್ದಾರೆ.

    ಪ್ರತಿಭಟನಾ ನಿರತ ಸಾವಿರಾರು ಕಾರ್ಯಕರ್ತೆಯರ ಮಧ್ಯೆ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಕ್ಕೆ ಹಾರ ಹಾಕಿ ಅವರನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ನೀತು ಸಿಂಗ್ ಪ್ರತಿಕ್ರಿಯಿಸಿ, ಶುಕ್ರವಾರ ಯೋಗಿ ಆದಿತ್ಯನಾಥ್ ಅವರು ಸೀತಾಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ನಮ್ಮ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆಯಿದೆ. ಸಮಸ್ಯೆ ಬಗೆಹರಿದರೆ 4 ಲಕ್ಷ ಮಹಿಳಾ ಕಾರ್ಯಕರ್ತೆಯರಿಗೆ ಸಹಾಯವಾಗಲಿದೆ ಎಂದು ಹೇಳಿದರು.

    ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಸಮಸ್ಯೆಯನ್ನು ಬಗೆ ಹರಿಸಲು ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ 4 ತಿಂಗಳ ಡೆಡ್ ಲೈನ್ ನೀಡಿದ್ದರು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ.ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

    ಗುಜರಾತ್ ನಲ್ಲಿ ಯೋಗಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಗುಜರಾತ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

  • ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಮಂಗಳೂರು/ಉಡುಪಿ: ದೇಶಾದ್ಯಂತ ಸದ್ದು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ದೇಶದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿದೆ.

    ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಕರಾಳ ದಿನಾಚರಣೆ, ಸಂಭ್ರಮಾಚರಣೆ ನಡೆಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಬಹಿರಂಗ ಸಭೆ, ಪ್ರತಿಭಟನೆ, ರ‍್ಯಾಲಿಗೆ ನಿರ್ಬಂಧ ವಿಧಿಸಲಾಗಿದೆ.

    ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ತಮಗೆ ವಿರುದ್ಧವಾಗಿ ತೀರ್ಪು ಬಂದರೂ, ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯಗೋಪಾಲ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇನ್ನು ಹೈದರಾಬಾದ್‍ನಲ್ಲಿ ಮಾತಾಡಿದ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪದ್ಮಾವತಿ ಸಿನಿಮಾ ಬಿಡುಗಡೆಯಾಗೋದನ್ನು ತಡೆದಿದ್ದೀರಾ. ಈಗ ಅಯೋಧ್ಯ ರಾಮ ಮಂದಿರ ನಿರ್ಮಾಣ ಪ್ರಕರಣದ ಅರ್ಜಿ ವಿಚಾರಣೆಯನ್ನು 2019ರಲ್ಲಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಉಡುಪಿ ಕೃಷ್ಣಮಠದ ಪೇಜಾವರಶ್ರೀಗಳೂ ಮಸೀದಿ ಧ್ವಂಸದ ಕರೆ ನೀಡಿದ್ದರು ಎಂಬ ಆರೋಪ ಅಂದಿನಿಂದ ಇಂದಿನವರೆಗೂ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಶ್ರೀಗಳು, ಬಾಬ್ರೀ ಮಸೀದಿ ನನ್ನ ನೇತೃತ್ವದಲ್ಲಿ ಧ್ವಂಸವಾದದ್ದಲ್ಲ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ರಾಮಜನ್ಮಭೂಮಿ ಸ್ವಚ್ಛತಾ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೆ. ರಾಮಭೂಮಿ ಸರ್ವೋಚ್ಛ ಸಮಿತಿ ನೇತೃತ್ವವಿತ್ತು. ಆದ್ದರಿಂದ ಹೋಮ, ಹವನಗಳು, ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಕಲ್ಲುಗಳು ಬಿದ್ದವು. ಕರಸೇವಕರು ಮಸೀದಿಯ ಗುಂಬಜ್ ಹತ್ತಿದ್ದರು. ಸಂಭ್ರಮಿಸಿದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿದ್ದೆ. ಅದೊಂದು ವಿಷಾಧದ ಘಟನೆ ಎಂದು ಪೇಜಾವರಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

    ಸ್ವಾಮೀಜಿಯಾಗಿ ಹೊಡೆಯುವುದು ತಪ್ಪು ಅಂತ ಗೊತ್ತಿದೆ. ಆದರೆ ಮಸೀದಿ ಧ್ವಂಸ ಮಾಡಬೇಡಿ ಎಂದು ಕೇಳಿಕೊಂಡೆ. ಮಸೀದಿ ಇದ್ದ ಜಾಗದಲ್ಲಿ ಮಂದಿರವಿತ್ತು ಅನ್ನುವುದಕ್ಕೆ ಕುರುಹುಗಳಿವೆ, ದಾಖಲೆ ಪತ್ತೆಯಾಗಿದೆ. ಮುಸಲ್ಮಾನ ಬಂಧುಗಳು ಬೇರೆಡೆ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾದರೆ ನಾನು ಆರ್ಥಿಕ ಸಹಾಯ ಮಾಡಲು ಈಗಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಅಶೋಕ್ ಸಿಂಘಾಲ್‍ಗೂ ಧ್ವಂಸದ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ಮೇಲೆ ಕೆಲ ಬುದ್ಧಿಜೀವಿಗಳು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ನನಗೆ ಅರಿವೇ ಇಲ್ಲದೆ ಮಸೀದಿ ಧ್ವಂಸವಾಯಿತು. ಈ ಘಟನೆ ನಡೆದ ಮಾರನೇ ದಿನ ವಿದಾಯಸಭೆ ಮಾಡಿದ್ದೆವು. ಸುಮ್ಮನೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪೇಜಾವರಶ್ರೀಗಳು ಪ್ರಶ್ನೆ ಮಾಡಿದ್ದಾರೆ.

  • ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನಿಂದ ಹಣ ಹಂಚಿಕೆ

    ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನಿಂದ ಹಣ ಹಂಚಿಕೆ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಬಗ್ಗೆ ಕೀಳುಮಟ್ಟದ ಪೋಸ್ಟ್ ಹಂಚಿದ್ದನ್ನು ಖಂಡಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್ ಹಣ ಹಂಚಿಕೆ ಮಾಡಿದೆ.

    ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಸಿದ ನಂತರ ಬಿಜೆಪಿ ಹಾಗೂ ಪ್ರತಾಪ್ ಸಿಂಹ ಅವರ ವಿರುದ್ಧ ಧಿಕ್ಕಾರ ಕೂಗಿದವರಿಗೆ ಕೆಪಿಸಿಸಿ ವತಿಯಿಂದ ಹಣ ಹಂಚಿಕೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ 100 ರೂ. ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಹಂಚಿಕೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. (ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಬೆಂಬಲಿಗರ ವಿರುದ್ಧ ದೂರು ದಾಖಲು )

    ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ನಾಡಿನ ಇತಿಹಾಸ ಗೊತ್ತಿಲ್ಲದೇ ಏನೇನೋ ಮಾತನಾಡುತ್ತಿರುವ ಬಿಜೆಪಿ ನಾಯಕರು ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ನಾಚಿಕೆಯಾಗ್ಬೇಕು. ಇಡೀ ದೇಶಕ್ಕೆ, ರಾಜ್ಯಕ್ಕೆ ವೀರ ವನಿತೆ ಒಬವ್ವ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಯಾರು ಎನ್ನುವುದು ಗೊತ್ತು. ಬಿಜೆಪಿಯವರು ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. (ಇದನ್ನೂ ಓದಿ: ಓಬವ್ವ, ಕಿತ್ತೂರು ರಾಣಿ ಬಗ್ಗೆ ಪ್ರಕಟವಾದ ಪೋಸ್ಟಿಗೂ ನನಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ )

    ಈ ಹಿಂದೆ ನೋಟ್ ಬ್ಯಾನ್ ಆದ ಸಂದರ್ಭಲ್ಲಿ ಕಳೆದ ವರ್ಷ ಕಾಂಗ್ರೆಸ್ ನವೆಂಬರ್ ತಿಂಗಳಿನಲ್ಲಿ ಆಕ್ರೋಶ್ ದಿನವನ್ನು ಆಚರಿಸಲು ಕರೆ ಕೊಟ್ಟಿತ್ತು. ಈ ವೇಳೆ ಪ್ರತಿಭಟನೆಗೆ ಆಗಮಿಸಿದ್ದ ಜನರಿಗೆ ಹಣವನ್ನು ಹಂಚಿಕೆ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    https://www.youtube.com/watch?v=EkN6SRtlWtY

  • ನಟ ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಹರಿದು ಅಜಾದ್ ಹಿಂದ್ ಸೇನಾ ಕಾರ್ಯಕರ್ತರ ಪ್ರತಿಭಟನೆ

    ನಟ ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಹರಿದು ಅಜಾದ್ ಹಿಂದ್ ಸೇನಾ ಕಾರ್ಯಕರ್ತರ ಪ್ರತಿಭಟನೆ

    ಚಾಮರಾಜನಗರ: ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಎಂದು ಚಾಮರಾಜನಗರದಲ್ಲಿ ಅಜಾದ್ ಹಿಂದ್ ಸೇನಾ ಕಾರ್ಯಕರ್ತರು ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.

    ನಗರದ ಸಿಂಹ ಮೂವಿ ಪ್ಯಾರಡೈಸ್ ನಲ್ಲಿ ಶುಕ್ರವಾರ ತೆರೆ ಕಂಡ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ನಟ ಚೇತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಶಿವಕುಮಾರಸ್ವಾಮೀಜಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಇದಲ್ಲದೇ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

    ಇವರು ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಇವರ ನಟನೆಯ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಅಜಾದ್ ಹಿಂದ್ ಸೇನೆಯ ಕಾರ್ಯಕರ್ತರು ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

  • ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಉಡುಪಿ ಪೇಜಾವರ ಶ್ರೀ ವಿರುದ್ಧ ದೂರು ದಾಖಲು

    ಬೆಂಗಳೂರು: ಉಡುಪಿ ಮಠದ ಪೇಜಾವರಶ್ರೀ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಶನಿವಾರ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಅನ್ನೋ ಹೇಳಿಕೆ ವಿರುದ್ಧ ಈ ದೂರು ದಾಖಲಾಗಿದೆ.

    ಇದನ್ನೂ ಓದಿ: ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲ ದೇವಾಲಯ ಸರ್ಕಾರೀಕರಣ ಆಗುತ್ತೆ: ಕಾಂಗ್ರೆಸ್ ವಿರುದ್ಧ ವಿಎಚ್‍ಪಿ ವಾಗ್ದಾಳಿ

    ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಕಾನೂನು, ಬಹುಸಂಖ್ಯಾತರಿಗೆ ಒಂದು ಕಾನೂನಿದೆ ಅದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿದ್ರೆ ತಪ್ಪೇನಿಲ್ಲ ಅಂತಾ ಹೇಳಿಕೆ ನೀಡಿದ್ದರು.

    ಇದನ್ನೂ ಓದಿ: 2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್

    ಈ ಹೇಳಿಕೆಯನ್ನು ಖಂಡಿಸಿ ಇದೀಗ ಬೆಂಗಳೂರು ಸ್ನಾತಕೋತ್ತರ ವಿವಿ ವಿದ್ಯಾರ್ಥಿಗಳು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಪೇಜಾವರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    https://twitter.com/ShobhaBJP/status/934479849241980928

    https://twitter.com/ShobhaBJP/status/934302285286457345

  • ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ.

    ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ  3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಳಗೆ ಆಟವಾಡ್ತಿದ್ದ ಮಕ್ಕಳ ಮೇಲೆ ಅಲಂಕಾರಿಕ ಗ್ಲಾಸ್ ಬಿದ್ದು ತಲೆಗೆ ಗಾಯವಾಗಿದೆ. ವಾಟ್ಸಪ್ ಮೂಲಕ ಮಕ್ಕಳ ಪೋಷಕರ ಗಮನಕ್ಕೆ ಈ ಬಗ್ಗೆ ಮಾಹಿತಿ ತಿಳಿದುಬಂದ ನಂತರ ಪೋಷಕರು ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಗಾಜು ಬಿದ್ದ ಪ್ರಕರಣ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಸಮಸ್ಯೆಗಳೂ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳಿಗೆ ಈ ಶಾಲೆಯಲ್ಲಿ ರಕ್ಷಣೆ ಇಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ನಮಗೆ ಭಯವಾಗುತ್ತಿದೆ. ಈ ಹಿಂದೆಯೂ ಕೂಡ ಇಂಥದ್ದೇ ಅನಾಹುತಗಳು ನಡೆದಿದ್ದರೂ ಶಾಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಕಳಿಸಿ ನಂತರ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಆವರಣದಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ವಿರುದ್ಧ ಪೊಲೀಸರ ಮೊರೆ ಹೋಗಲು ಪೋಷಕರು ಚಿಂತನೆ ಮಾಡಿದ್ದಾರೆ.

    ಪ್ರತಿಭಟನೆ ನಡೆಸುತ್ತಿರುವ ಪೋಷಕರ ಜೊತೆಗೆ ರಾಯಲ್ ಕಾನ್‍ಕಾರ್ಡ್ ಚೇರ್ಮನ್ ಎಲ್.ಆರ್ ಶಿವರಾಮೇಗೌಡ ಮಾತುಕತೆ ನಡೆಸಿದ್ದು, ಶಾಲೆಗೆ ಇಂದಿನಿಂದ ಮೂರು ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೇ ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಒಟ್ಟು ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಗೊಂಡಿರುವರಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

     

  • ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಯುವತಿ ಆತ್ಮಹತ್ಯೆ- ಹಾಸ್ಟೆಲ್‍ನಲ್ಲಿ ಬೆಂಕಿ ಹಚ್ಚಿ ವಿದ್ಯಾಥಿಗಳ ಪ್ರತಿಭಟನೆ

    ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಯುವತಿ ಆತ್ಮಹತ್ಯೆ- ಹಾಸ್ಟೆಲ್‍ನಲ್ಲಿ ಬೆಂಕಿ ಹಚ್ಚಿ ವಿದ್ಯಾಥಿಗಳ ಪ್ರತಿಭಟನೆ

    ಚೆನ್ನೈ: ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಯುವತಿ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.

    ಇಲ್ಲಿನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಧಾ ಮೌನಿಕ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದಳು. ಸೋಮವಾರದಂದು ಆಕೆ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಕಾರಣ ಪರೀಕ್ಷಾ ಮೇಲ್ವಿಚಾರಕರು ಆಕೆಯನ್ನು ಹೊರಗೆ ಕಳಿಸಿದ್ದರು. ಇತರೆ ಪರೀಕ್ಷೆಗೂ ಹಾಜರಾಗದಂತೆ ತಡೆದಿದ್ದರು ಎಂದು ವರದಿಯಾಗಿದೆ.

    ಇದರಿಂದ ಅವಮಾನಿತಳಾಗಿ ರಾಧಾ ಮೌನಿಕ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ರೂಮಿನಲ್ಲಿ ಸಣ್ಣ ಸ್ಯೂಸೈಡ್ ನೋಟ್ ಪತ್ತೆಯಾಗಿದ್ದು, “ಲವ್ ಯು ಆಲ್, ಮಿಸ್ ಯು ಆಲ್” ಎಂದು ಬರೆಯಲಾಗಿದೆ.

    ಯುವತಿ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಸ್ಟೆಲ್‍ನ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ ನಡೆದ ಪ್ರತಿಭಟನೆಯ ವಿಡಿಯೋವನ್ನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಟೆಲ್‍ನ ಹಾಸಿಗೆಗಳಿಗೆ ಬೆಂಕಿ ಹಚ್ಚಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಬೆಂಕಿ ನಂದಿಸದಂತೆ ಅಗ್ನಿಶಾಮಕ ಸಿಬ್ಬಂದಿಯನ್ನ ತಡೆದರು ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿತ್ತಿದ್ದೇವೆ. ಯುವತಿ ಆಂಧ್ರ ಮೂಲದವಳಾಗಿದ್ದು, ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದಿದ್ದರಿಂದ ಮೇಲ್ವಿಚಾರಕರು ಆಕೆಯನ್ನು ಹೊರಗೆ ಕಳಿಸಿದ್ದರು ಎಂದು ತಿಳಿದುಬಂದಿದೆ. ಆಕೆಯ ರಾಜ್ಯದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ರಾಧಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರೋಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    https://www.youtube.com/watch?v=Pyz_ZnTzQNg

  • ಮಹಾರಾಷ್ಟ್ರದಲ್ಲಿ ಲ್ಯಾಂಡ್ ಆಗಬೇಕಿದ್ದ ರೈಲು ನಿಂತಿದ್ದು ಮಧ್ಯಪ್ರದೇಶದಲ್ಲಿ!

    ಮಹಾರಾಷ್ಟ್ರದಲ್ಲಿ ಲ್ಯಾಂಡ್ ಆಗಬೇಕಿದ್ದ ರೈಲು ನಿಂತಿದ್ದು ಮಧ್ಯಪ್ರದೇಶದಲ್ಲಿ!

    ನವದೆಹಲಿ: ಸೋಮವಾರ ಸಂಸತ್ ಭವನದ ಬಳಿ ಕಿಸಾನ್ ಯಾತ್ರೆ ಪ್ರತಿಭಟನೆ ನಡೆಸಲು ಮಹಾರಾಷ್ಟ್ರದ 1500 ಕ್ಕೂ ಹೆಚ್ಚು ರೈತರು ದೆಹಲಿಗೆ ಆಗಮಿಸಿದ್ದರು. ಆದರೆ ಪ್ರತಿಭಟನೆ ಮುಗಿಸಿ ಮರಳಿ ತವರು ರಾಜ್ಯಕ್ಕೆ ಹೊರಟ ರೈತರು ಮಧ್ಯಪ್ರದೇಶದಲ್ಲಿ ಲ್ಯಾಂಡ್ ಆಗಿದ್ದಾರೆ.

    ರೈಲ್ವೇ ಇಲಾಖೆಯಲ್ಲಿರುವ ಬೇಜವಾಬ್ದಾರಿ ಸಿಬ್ಬಂದಿಯಿಂದಾಗಿ ಮಹಾರಾಷ್ಟ್ರ ತೆಳಬೇಕಿದ್ದ ಸ್ವಾಭಿಮಾನಿ ಎಕ್ಸ್ ಪ್ರೆಸ್  ರೈಲು ಮಧ್ಯಪ್ರದೇಶ ನಿಲ್ದಾಣ ತಲುಪಿದ ಕತೆಯಿದು.

    ಮಂಗಳವಾರ ರಾತ್ರಿ 10 ಗಂಟೆಗೆ ದೆಹಲಿಯಿಂದ ಹೊರಟಿದ್ದ ರೈಲು ರಾತ್ರಿ 2 ಗಂಟೆಗೆ ಮಥುರಾ ತಲುಪಿತ್ತು. ಮಥುರಾದಿಂದ ಮಹಾರಾಷ್ಟ್ರ ತೆರಳಬೇಕಿದ್ದ ರೈಲು 160 ಕಿ.ಮೀ ಸುತ್ತಿ ಮಧ್ಯಪ್ರದೇಶ ಬಾನ್ಮೋರ್ ನಿಲ್ದಾಣಕ್ಕೆ ಬಂದು ತಲುಪಿದೆ.

    ರೈಲು ದಾರಿ ತಪ್ಪಿ ಬಾನ್ಮೋರಿಗೆ ಬಂದಿರುವುದನ್ನು ಗಮನಿಸಿದ ರೈಲ್ವೇ ಅಧಿಕಾರಿಗಳು ಬೇರೊಂದು ರೈಲಿನಲ್ಲಿ ರೈತರನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ. ಮಥುರಾದಲ್ಲಿ ತಪ್ಪು ಸಿಗ್ನಲ್ ತೋರಿಸಿದ್ದಕ್ಕೆ ಈ ಎಡವಟ್ಟು ಆಗಿದೆ ಎಂದು ಕೇಂದ್ರದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರೈಲಿನಲ್ಲಿ 200 ಮಹಿಳೆಯರು ಸೇರಿದಂತೆ 1494 ಮಂದಿ ರೈತರು ಪ್ರಯಾಣಿಸುತ್ತಿದ್ದರು. ಇವರಿಗೆಲ್ಲ ಕೊಲ್ಲಾಪುರದಿಂದ 39 ಲಕ್ಷ ರೂ. ಪಾವತಿಸಿ ಟಿಕೆಟ್ ಬುಕ್ ಮಾಡಲಾಗಿತ್ತು.

    ಮಂಗಳವಾರ ರಾತ್ರಿ 10 ಗಂಟೆಗೆ ನಾವು ದೆಹಲಿಯನ್ನು ಬಿಟ್ಟಿದ್ದೆವು. ಆದರೆ ಬೆಳಗ್ಗೆ 6 ಗಂಟೆಗೆ ನಾವು ಗ್ವಾಲಿಯರ್ ಸಮೀಪದ ಬಾನ್ಮೋರ್ ರೈಲ್ವೆ ನಿಲ್ದಾಣವನ್ನು ತಲುಪಿದ್ದೆವು. ಆಗ್ರಾ ನಂತರ ರಾಜಸ್ಥಾನ ಕೋಟಾದ ಮೂಲಕ ನಾವು ಪ್ರಯಾಣಿಸಿದ್ದೇವೆ. ರೈಲ್ವೇ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನಾವು ಮಧ್ಯಪ್ರದೇಶಕ್ಕೆ ಬಂದಿದ್ದೇವೆ ಎಂದು ಪ್ರಯಾಣಿಕ ಮಹಾವೀರ್ ಪ್ರಸಾದ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

     

    https://youtu.be/2VAOXwvxZc8

  • ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಹಾವೇರಿ: ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಮೊದಲ ಪತ್ನಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಮೃತ್ಯುಂಜಯ ನಗರದಲ್ಲಿ ನಡೆದಿದೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‍ಐ ಟಿ.ಮಂಜಣ್ಣ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಲಾಗಿದೆ. ಮಂಜಣ್ಣ ಅವರ ಮೊದಲ ಪತ್ನಿ ಸ್ವಪ್ನಾ ಈ ಆರೋಪ ಮಾಡಿದ್ದು, ಮಕ್ಕಳು ಮತ್ತು ಸಂಬಂಧಿಕರ ಸಮೇತ ತನ್ನ ಗಂಡನ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಪಿಎಸ್‍ಐ ಮಂಜಣ್ಣ ಸ್ವಪ್ನಾ ಅವರ ಆರೋಪ ಅಲ್ಲಗಳೆದಿದ್ದಾರೆ. ಮನೆಗೆ ಸಂಬಂಧಿಕರು ಬಂದಿದ್ದರೂ ಅಕ್ರಮ ಸಂಬಂಧದ ಪಟ್ಟವನ್ನು ಸ್ವಪ್ನಾ ಕಟ್ಟುತ್ತಿದ್ದಾಳೆ. ಕೋರ್ಟಿನಲ್ಲಿ ವಿಚ್ಛೇದನ ಆಗಿದೆ ಹಾಗೂ ಕೆವಿಟ್ ಕೂಡ ಸಲ್ಲಿಸಿದ್ದೇನೆ. ಆದರೂ ಪದೇ ಪದೇ ಸ್ವಪ್ನಾ ಗಲಾಟೆ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ತಿಳಿಸಿದ್ದಾರೆ.

    ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಸಿಪಿಐ ಮಂಜುನಾಥ ನಲವಾಗಿಲ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.