Tag: ಪ್ರತಿಭಟನೆ

  • ಸಿಎಂ ಮೆಚ್ಚಿಸಲು ಪೊಲೀಸರ ಕ್ರೌರ್ಯ – ಕ್ಯಾಮರಾ ಕಿತ್ಕೊಂಡು ಮಾಧ್ಯಮಗಳ ಮೇಲೆ ದರ್ಪ

    ಸಿಎಂ ಮೆಚ್ಚಿಸಲು ಪೊಲೀಸರ ಕ್ರೌರ್ಯ – ಕ್ಯಾಮರಾ ಕಿತ್ಕೊಂಡು ಮಾಧ್ಯಮಗಳ ಮೇಲೆ ದರ್ಪ

    ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ನಾನಾ ಕಡೆ ನಡೆಸುತ್ತಿರುವ ಸಾಧನಾ ಸಮಾವೇಶದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ಹೋಗಿದೆ.

    ಪ್ರತಿಭಟನೆ ನಡೆದರೂ ಯಾವುದೇ ಮಾಧ್ಯಮಗಳಲ್ಲಿ ಅದು ಬರದಂತೆ ನೋಡಿಕೊಳ್ಳುವ ಹೊಣೆಯನ್ನೂ ಪೊಲೀಸ್ ಇಲಾಖೆಗೆ ವಹಿಸಲಾಗಿದೆ. ಈ ವಿಷಯ ಶಿವಮೊಗ್ಗದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರು.

    ಅಷ್ಟೇ ಅಲ್ಲ ಶಿವಮೊಗ್ಗದಲ್ಲಿ ಕರ್ತವ್ಯ ನಿರತರಾಗಿದ್ದ ದಾವಣಗೆರೆ ಎಸ್ ಪಿ ಭೀಮಾಶಂಕರ ಗುಳೇದ ಅವರು ಬಿಜೆಪಿ ಕಾರ್ಯಕರ್ತರನ್ನು ಕಾಲಿನಿಂದಲೂ ಒದ್ದರು. ಇದನ್ನು ಚಿತ್ರೀಕರಣ ಮಾಡಿದ ಚಾನಲ್ ನ ಕ್ಯಾಮರಾಮನ್ ಗೆ ಧಮ್ಕಿ ಹಾಕಿ, ಕ್ಯಾಮರಾ ಕಿತ್ತುಕೊಂಡು ತಮ್ಮ ಕಾರಿನಲ್ಲಿ ಹಾಕಿಕೊಂಡರು. ಈ ಬಗ್ಗೆ ಇನ್ನೊಬ್ಬ ಹಿರಿಯ ಪತ್ರಿಕಾ ಛಾಯಾಗ್ರಾಹಕರು ತೀವ್ರವಾಗಿ ಖಂಡಿಸಿದಾಗ ಕ್ಯಾಮರಾ ಹಿಂತಿರುಗಿಸಿದರು.

    ಬೆನ್ನು ಹತ್ತಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಈ ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯ ಹೇರಿದರು. ಕಾಲಿನಿಂದ ಒದ್ದಿದ್ದನ್ನು ಚಿತ್ರೀಕರಣ ಮಾಡಿದ್ದಕ್ಕೆ ಗರಂ ಆಗಿ ಈ ಕೃತ್ಯವೆಸಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಮಾಧ್ಯಮ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ಇದಕ್ಕೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿವೆ. ಪ್ರತಿಭಟನೆ ಸುದ್ದಿ ಮಾಡದಂತೆ ಪೊಲೀಸರ ಮೇಲೆ ಒತ್ತಡ ಹೇರಿರುವುದೇ ಈ ಅಧಿಕಾರಿ ಇಷ್ಟು ವೀರಾವೇಷ ತೋರಲು ಕಾರಣ ಎಂದು ಇಲಾಖೆ ಮೂಲಗಳು ತಿಳಿಸಿವೆ.

  • ಟಾಟಾ ಸುಮೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು- ರಸ್ತೆಯಲ್ಲಿ ಬಾಲಕಿ ಮೃತದೇಹವಿಟ್ಟು ಪೋಷಕರ ಪ್ರತಿಭಟನೆ

    ಟಾಟಾ ಸುಮೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು- ರಸ್ತೆಯಲ್ಲಿ ಬಾಲಕಿ ಮೃತದೇಹವಿಟ್ಟು ಪೋಷಕರ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಶಾಲೆಗೆ ಹೋಗುತ್ತಿದ್ದಾಗ ಟಾಟಾ ಸುಮೋ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗೇಟ್ ಬಳಿ ನಡೆದಿದೆ.

    9ನೇ ತರಗತಿ ಓದುತ್ತಿದ್ದ ಹರ್ಶಿತಾ(14) ಮೃತ ದುರ್ದೈವಿ. ಬಾಲಕಿ ಗ್ರಾಮದಿಂದ ದೊಡ್ಡಬಳ್ಳಾಪುರದ ಶಾಲೆಗೆ ತೆರಳುತ್ತಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗೇಟ್ ಬಳಿ ವೇಗವಾಗಿ ಬಂದ ಟಾಟಾ ಸುಮೋ ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

    ಗ್ರಾಮಸ್ಥರು ಹಲವು ಬಾರಿ ಗೇಟ್ ಬಳಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಗಳನ್ನ ಅಳವಡಿಸುವಂತೆ ಮನವಿ ಮಾಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರಿ ಅಳವಡಿಸಿಲ್ಲ. ಇದರಿಂದ ಅಪಘಾತಗಳಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಲಕಿಯ ಮೃತದೇಹವನ್ನು ರಸ್ತೆಯಲ್ಲಿ ಇಟ್ಟು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿ ಬೀರಸಂದ್ರ ಗೇಟ್ ಬಳಿ ಹೊಸೂರು ದಾಬಸ್‍ಪೇಟೆ ಹೆದ್ದಾರಿ ತಡೆದು ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತಿದ್ದಾರೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ದೇವನಹಳ್ಳಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಕಳೆದ ಒಂದು ಗಂಟೆಯಿಂದ ಟ್ರಾಫಿಕ್ ಜಾಮ್ ಆಗಿದೆ. ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದು, ವಿಶ್ವನಾಥಪುರ ಪೊಲೀಸರಿಂದ ಪ್ರತಿಭಟನಾಕಾರರ ಮನವೊಲಿಕೆ ಯತ್ನ ನಡೆಯುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಕಾರ್ಕಳದಲ್ಲಿ ಹಸಿರು ಬಾವುಟ ಕಿತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಕಾರ್ಕಳದಲ್ಲಿ ಹಸಿರು ಬಾವುಟ ಕಿತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗಿದೆ. ಹಸಿರು ಬಾವುಟವನ್ನು ಕಿತ್ತು ವ್ಯಕ್ತಿಗೆ ಹಲ್ಲೆ ಹಾಗೂ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

    ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರನ್ನು ಶೇಖ್ ಮೊಹಸಿನ್ ಹಾಗೂ ಮಹಮ್ಮದ್ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಾವಿರಾರು ಮುಸ್ಲಿಮರು ಜಮಾಯಿಸಿ ಘಟನೆಯನ್ನು ಖಂಡಿಸಿದ್ದಾರೆ.

    ಏನಿದು ಘಟನೆ?: ಗುರುವಾರ ರಾತ್ರಿ ಕಾರ್ಕಳ ಹೊರವಲಯದ ಬಂಗ್ಲೆಗುಡ್ಡೆಯಲ್ಲಿ ದುಷ್ಕರ್ಮಿಗಳು ಹಸಿರು ಬಾವುಟ ಕೆಡವಿ ಶೇಖ್ ಮೊಹಸಿನ್ ಎಂಬವರ ಮೇಲೆ ಮನಬಂದಂತೆ ಸೋಡಾ ಬಾಟಲಿ ಎಸೆದು, ತಲ್ವಾರ್ ಮತ್ತು ಇತರೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಭಜರಂಗದಳದ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಹಲ್ಲೆಗೊಳಗಾದ ಶೇಖ್ ಮೊಹಸಿನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಮಹಮ್ಮದ್ ಎಂಬವರ ಮೇಲೆಯೂ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.

    ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿಯ ಕಡೆಯಿಂದ ಕಾರ್ ನಂಬರ್ ಸಹಿತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಕಾರ್ ನಂಬರ್ ಪರಿಶೀಲಿಸಿದಾಗ ಅದು ಭಜರಂಗದಳದ ಮಹೇಶ್ ಶೆಣೈ ಕಾರ್ ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮಹೇಶ್ ಶೆಣೈ, ಗಣೇಶ್ ಪೂಜಾರಿ ಮತ್ತು ಇತರೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

    ಆದ್ರೆ ಬರೀ ಕೇಸ್ ಹಾಕಿದ್ರೆ ಸಾಲದು ಬಂಧಿಸಬೇಕು. ಶಿಕ್ಷೆಗೆ ಒಳಪಡಿಸಬೇಕು ಎಂದು ಮುಸ್ಲಿಮರು ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಇತ್ತ ಮಹೇಶ್ ಶೆಣೈ, ತನ್ನ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.

    https://www.youtube.com/watch?v=0oezUYrEqQI

     

  • ಮಾರಿಹಬ್ಬಕ್ಕೆ ತಂದಿದ್ದ ಕೋಣಗಳಿಗೆ ರಾತ್ರಿಯಿಡೀ ಪೊಲೀಸ್ ಕಾವಲು

    ಮಾರಿಹಬ್ಬಕ್ಕೆ ತಂದಿದ್ದ ಕೋಣಗಳಿಗೆ ರಾತ್ರಿಯಿಡೀ ಪೊಲೀಸ್ ಕಾವಲು

    ಶಿವಮೊಗ್ಗ: ಮಾರಿಹಬ್ಬಕ್ಕೆ ಬಲಿ ಕೊಡುತ್ತಾರೆ ಎಂಬ ಕಾರಣದಿಂದ ಎರಡು ಕೋಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ನಡೆದಿದೆ. ಪೊಲೀಸರು ಕೋಣಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ.

    ಕೋಮಾರನಹಳ್ಳಿಯಲ್ಲಿ ಮೂರು ದಿನಗಳ ಕಾಲ ಮಾರಿಹಬ್ಬ ನಡೆಯಲಿದೆ. ಗ್ರಾಮಸ್ಥರು ಹಬ್ಬಕ್ಕಾಗಿ ಎರಡು ಕೋಣಗಳನ್ನು ತಂದಿದ್ದರು. ಈ ಕೋಣಗಳನ್ನು ಹಬ್ಬಕ್ಕೆ ಬಲಿ ಕೊಡ್ತಾರೆ ಎಂಬ ವಿಷಯ ತಿಳಿದ ಕೆಲ ಸಂಘಟನೆಗಳ ಕಾರ್ಯಕರರ್ತರು ದೂರು ಸಲ್ಲಿಸಿದ್ರು. ದೂರಿನನ್ವಯ ಪೊಲೀಸರು ಗ್ರಾಮಕ್ಕೆ ಬಂದು ಕೋಣಗಳನ್ನು ವಶಪಡಿಸಿಕೊಂಡು ಲಾರಿಗೆ ಹಾಕಿಕೊಂಡಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ಆರಂಭಿಸಿದರು.

    ಪೂಜೆಗಾಗಿ ಈ ಕೋಣಗಳು ಬೇಕೇ ಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮದ ಮುಖಂಡರ ಜೊತೆ ಮಾತುಕತೆ ನಡೆಸಿದರು. ಕೋಣಗಳನ್ನು ಪೂಜೆಗೆ ಮಾತ್ರ ಬಳಸಬೇಕು. ನಂತರ ಪೊಲೀಸರಿಗೆ ಹಿಂದಿರುಗಿಸಬೇಕು ಎಂಬ ಷರತ್ತಿನ ಮೇಲೆ ಕೋಣಗಳನ್ನು ಗ್ರಾಮಸ್ಥರಿಗೆ ನೀಡಲಾಯಿತು. ಪೂಜೆ ಕಾರಣಕ್ಕಾಗಿ ಗ್ರಾಮದಲ್ಲೇ ಬಿಟ್ಟ ಕೋಣಗಳಿಗೆ ರಾತ್ರಿ ಇಡೀ ಪೊಲೀಸರ ಕಾವಲು ಹಾಕಲಾಗಿತ್ತು.

    ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದರಿಂದ ಕೋಣಗಳು ತಮ್ಮ ಜೀವವನ್ನು ಉಳಿಸಿಕೊಂಡವು. ಹೀಗಾಗಿ ಗ್ರಾಮಸ್ಥರು ಕೋಣಗಳನ್ನು ಬಲಿ ನೀಡದೇ ಮಾರಿ ಹಬ್ಬ ಆಚರಿಸಿದರು.

  • ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಬಂದ ಶಾಸಕರಿಂದಲೇ ಪ್ರತಿಭಟನೆಗೆ ಸಾಥ್!

    ಕೋಲಾರ: ರಸ್ತೆ ದುರಸ್ಥಿಗೆ ಆಗ್ರಹಿಸಿ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯ ಅಹವಾಲು ಸ್ವೀಕರಿಸಲು ಬಂದ ಶಾಸಕರೇ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ಹೊರ ವಲಯದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಆರಂಭವಾಗಿ ನಾಲ್ಕು ಗಂಟೆಗಳಾದರೂ ಯಾವ ಅಧಿಕಾರಿಗಳು, ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಈ ವೇಳೆ ಮಾಲೂರು ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ರಸ್ತೆ ದುರಸ್ಥಿಗೊಳಿಸುವ ಭರವಸೆ ನೀಡಿದರು.

    ಆದರೆ ಶಾಸಕರ ಭರವಸೆಗೆ ತೃಪ್ತರಾಗದ ಪ್ರತಿಭಟನಾಕಾರರು ಪ್ರಶ್ನೆಗಳ ಸುರಿಮಳೆಗೈದರು. ಈ ವೇಳೆ ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದ್ದರು.

    ಶಾಸಕರ ಉತ್ತರಕ್ಕೆ ತೃಪ್ತರಾಗದ ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದರಿಂದ ಶಾಸಕ ಮಂಜುನಾಥ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೋಲಾರ ಕಾಂಗ್ರೆಸ್ ಸಂಸದ ಕೆ.ಎಚ್ ಮುನಿಯಪ್ಪ ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಲೂರು – ಹೊಸಕೋಟೆ ಮುಖ್ಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು.

  • NMC ವಿಧೇಯಕಕ್ಕೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ- ಎಂದಿನಂತೆ ಕಾರ್ಯನಿರ್ವಹಿಸಲಿವೆ ಸರ್ಕಾರಿ ಆಸ್ಪತ್ರೆಗಳು

    NMC ವಿಧೇಯಕಕ್ಕೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ- ಎಂದಿನಂತೆ ಕಾರ್ಯನಿರ್ವಹಿಸಲಿವೆ ಸರ್ಕಾರಿ ಆಸ್ಪತ್ರೆಗಳು

    ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ-2017ನ್ನು ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ವೈದ್ಯಕೀಯ ಪರಿಷತ್ ಮುಷ್ಕರಕ್ಕೆ ಕರೆ ನೀಡಿದೆ.

    ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸತತ 12 ಗಂಟೆಗಳ ಕಾಲ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಬಂದ್ ಇರಲಿದೆ. ಇನ್ನು ರಾಜ್ಯದಲ್ಲೂ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಆದ್ರೆ ತುರ್ತು ಚಿಕಿತ್ಸಾ ವಿಭಾಗ, ಮೆಡಿಕಲ್ ಸ್ಟೋರ್  ಗಳು ಮತ್ತು ಒಳರೋಗಿಗಳ ವಿಭಾಗ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

    ಈ ವಿಚಾರವಾಗಿ ಸೋಮವಾರ ಕೇಂದ್ರ ವೈದ್ಯಕೀಯ ಸಚಿವ ಜೆಪಿ ನಡ್ಡಾರೊಂದಿಗೆ ವೈದ್ಯಕೀಯ ಸಂಘ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಭಾರತೀಯ ವೈದ್ಯಕೀಯ ಪರಿಷತ್ ಮೇಲಿತ್ತು. ಆದ್ರೆ ಎಂಸಿಐ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಈ ಹಿಂದೆ ಚೇರ್‍ಮನ್ ಆಗಿದ್ದ ಕೇತನ್ ದೇಸಾಯಿಯವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದಲೂ ಈ ಸಂಸ್ಥೆಯ ಜಾಗದಲ್ಲಿ ಹೊಸ ಸಂಸ್ಥೆ ಸ್ಥಾಪನೆಗೆ ಬೇಡಿಕೆ ಇತ್ತು. ಹೀಗಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರ ಮತ್ತು ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಮುಂದಾಗಿದೆ.

    ಡಿಸೆಂಬರ್ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಬೆಂಬಲ ದೊರೆತಿದ್ದು, ಕಳೆದ ಡಿಸೆಂಬರ್ 19ರಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇನ್ನು ಇಂದು ಈ ಮಸೂದೆ ಸಂಬಂಧ ಚರ್ಚೆ ನಡೆಯಲಿದ್ದು, ಖಾಸಗಿ ವೈದ್ಯರು ಕರಾಳ ದಿನ ಆಚರಣೆಗೆ ಕರೆ ಕೊಟ್ಟಿದ್ದಾರೆ.

  • ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ

    ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ

    ಉಡುಪಿ: ಗಲ್ಲು ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಅವಮಾನ ಮಾಡಿದ ಪಾಕ್ ಸರ್ಕಾರದ ವಿರುದ್ಧ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್ ಆಕ್ರೋಷ ವ್ಯಕ್ತ ಪಡಿಸಿದೆ.

    ನಗರದ ಹುತಾತ್ಮ ಯುದ್ಧ ಸ್ಮಾಕರದ ಬಳಿ ಈ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿ ಪಾಕ್ ನಡೆಯನ್ನು ಖಂಡಿಸಿದರು. ಪ್ರತಿಭಟನೆಯ ವೇಳೆ ಪಾಕಿಸ್ತಾನ ಧ್ವಜದ ಮೇಲೆ ನಿಂತು ಬಳಿಕ ಧ್ವಜವನ್ನು ಸುಟ್ಟಿದ್ದಾರೆ.

    ಭಜರಂಗದಳ ಸಂಚಾಲಕರ ಕೆ. ಆರ್ ಸುನೀಲ್ ಮಾತನಾಡಿ, ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳದ ಇಂದು ಇಡೀ ರಾಜ್ಯಾದ್ಯಂತ ಪಾಕಿಸ್ತಾನದ ಧ್ವಜವನ್ನು ಸುಡುವ ಮೂಲಕ ಆಕ್ರೋಷ ವ್ಯಕ್ತಪಡಿಸುತ್ತಿದೆ. ಮೂರು ದಿನಗಳ ಹಿಂದೆ ನಮ್ಮ ದೇಶದ ತಾಯಿ, ಅವರು ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಸುಮಾರು 22 ತಿಂಗಳಿನಿಂದ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಹೋದಾಗ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.

    ಪಾಕಿಸ್ತಾನ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದ್ದು, ಈ ದೇಶದ ಪವಿತ್ರವಾಗಿರುವಂತಹ ತಾಳಿ ಮತ್ತು ಬಳೆಗಳನ್ನು ತೆಗೆಸಿ ಭೇಟಿ ಮಾಡಿಸಿದೆ. ಅಷ್ಟೇ ಅಲ್ಲದೇ ಅವರ ಪಾದರಕ್ಷೆಯಲ್ಲಿ ಚಿಪ್ ಇರಬಹುದು ಎಂದು ಅದನ್ನು ತೆಗೆಸಿದ್ದಾರೆ. ಇದು ಪಾಕ್ ಸರ್ಕಾರದಿಂದ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ. ಇಡೀ ಪ್ರಪಂಚಕ್ಕೆ ಪಾಕಿಸ್ತಾನ ತಲೆನೋವು ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಸೇನೆಗೆ ಪಾಪಿ ಪಾಕಿಸ್ತಾನವನ್ನು ಇಡೀ ಜಗತ್ತಿನ ನಕ್ಷೆಯಲ್ಲಿ ಇಲ್ಲದಂತೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು. ಇದನ್ನು ಓದಿ: ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಜಾಧವ್ ಭೇಟಿ ಮಾಡಿದ ಪತ್ನಿ, ತಾಯಿ  ಇದನ್ನು ಓದಿ: ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

  • ಮೈಸೂರಿನಲ್ಲಿ ಅರೆಬೆತ್ತಲೆಯಾಗಿ ಪರೀಕ್ಷೆ ಬರೆದು ವಿನೂತನವಾಗಿ ಪ್ರತಿಭಟಿಸಿದ ಕಾನೂನು ವಿದ್ಯಾರ್ಥಿಗಳು

    ಮೈಸೂರಿನಲ್ಲಿ ಅರೆಬೆತ್ತಲೆಯಾಗಿ ಪರೀಕ್ಷೆ ಬರೆದು ವಿನೂತನವಾಗಿ ಪ್ರತಿಭಟಿಸಿದ ಕಾನೂನು ವಿದ್ಯಾರ್ಥಿಗಳು

    ಮೈಸೂರು: ಕಾಲೇಜಿನ ಆಡಳಿತ ಮಂಡಳಿಯ ಕ್ರಮಗಳು ಹಾಗೂ ಪ್ರಾಂಶುಪಾಲರ ವರ್ತನೆ ಖಂಡಿಸಿ ವಿದ್ಯಾರ್ಥಿಗಳು ಅರೆ ಬೆತ್ತಲೆಯಾಗಿ ಕುಳಿತು ಪರೀಕ್ಷೆ ಬರೆದ ಘಟನೆ ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ನಡೆದಿದೆ.

    ಶುಕ್ರವಾರ ಕಾನೂನು ಶಾಸ್ತ್ರದ ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆ ನಡೆದಿದೆ. ಈ ಸಂದರ್ಭದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ, ಶರ್ಟ್ ತೆಗೆದು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಪ್ರತಿಭಟನೆ ಯಾಕೆ?
    ಕಾಲೇಜಿಗೆ ಬಾರದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಿರುವುದು, ಸರ್ಕಾರಿ ನೌಕರರಿಗೂ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರುವುದು, ಹಣ ಪಡೆದು ಅನರ್ಹರಿಗೆ ಪರೀಕ್ಷೆಗೆ ಬರೆಯಲು ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಅನುಮತಿ ನೀಡಿದ್ದಾರೆ. ಈ ಕ್ರಮವನ್ನು ಖಂಡಿಸಿ ಈ ರೀತಿಯಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    5-6 ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಉಳಿದ ವಿದ್ಯಾರ್ಥಿಗಳು ಬೇರೆ ಕೊಠಡಿಯಲ್ಲಿ ಅರೆಬೆತ್ತಲೆಯಾಗಿ ಪರೀಕ್ಷೆ ಬರೆದಿದ್ದಾರೆ. ಬೇರೆ ವಿದ್ಯಾರ್ಥಿಗಳ ದೃಶ್ಯವನ್ನು ಚಿತ್ರಕರಣ ಮಾಡಲು ಕಾಲೇಜಿನ ಆಡಳಿತ ಮಂಡಳಿ ಅನುಮತಿ ನೀಡಿಲ್ಲ.

  • ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಬೆಂಗಳೂರು: ಮಹದಾಯಿಗಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಳತ್ವದಲ್ಲಿ ಇಂದು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಕರಾಳ ದಿನಾಚರಣೆ ನಡೆಯಲಿದೆ.

    ಇದರಲ್ಲಿ ಚಿತ್ರರಂಗದವರು ಕೂಡ ಪಾಲ್ಗೊಳ್ಳಲಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ಹೋರಾಟಕ್ಕೆ ಸಾಥ್ ಕೊಡಲಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜಕೀಯ ಖಂಡಿಸಿ ಈ ಹೋರಾಟ ನಡೆಯಲಿದೆ.

    ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಸೇರಿದಂತೆ ರಾಜಕಾರಣಿಗಳ ವಚನ ಭ್ರಷ್ಟತೆ ಖಂಡಿಸಿ ಬುಧವಾರ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಅದರಲ್ಲೂ ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ನೀಡೋಕೆ ಹೋದರೆ ಅಲ್ಲಿ ಅವಮಾನ ಆಯ್ತು. ಒಂದು ಕಡೆ ರಾಜಕಾರಣಿಗಳಿಂದ ಭರವಸೆ ಸಿಗಲಿಲ್ಲ. ಮತ್ತೊಂದು ಕಡೆ ರಾಜ್ಯದ ಪ್ರಥಮ ಪ್ರಜೆ ಭೇಟಿಗೆ ಅವಕಾಶ ಕೊಡಲಿಲ್ಲ.

    ಇದರಿಂದ ನಿರಾಶಿತರಾದ ಮಹದಾಯಿ ಹೋರಾಟಗಾರರು ರಾತ್ರಿಯೇ ತಮ್ಮ ಊರುಗಳತ್ತ ತೆರಳಿದ್ದು, ಕೆಲವರು ಈಗಲೂ ತೆರಳುತ್ತಿದ್ದಾರೆ. ಐದು ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದ ರೈತರು ನಿರಾಸೆಯಿಂದಲೇ ಹೋಗುತ್ತಿದ್ದಾರೆ.

  • ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಪ್ರತಿಭಟನೆ

    ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಪ್ರತಿಭಟನೆ

    ತುಮಕೂರು: ರಾಜ್ಯದಲ್ಲಿ ಮಹದಾಯಿ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಟೊಮೆಟೊ ಬೆಲೆ ಪಾತಾಳಕ್ಕಿಳಿದಿದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಪಾವಗಡದ ರೈತರು ರಸ್ತೆ ಮೇಲೆ ಟೊಮೆಟೊ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಟೊಮೆಟೊ ಬೆಲೆ ಕೆಜಿಗೆ 5-6 ರೂ. ಗೆ ಕುಸಿದಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಧ್ಯಪ್ರವೇಶ ಮಾಡಿ ಟೊಮೆಟೊಗೆ 30-40 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬೇಕೆ ಬೇಕು ನ್ಯಾಯ ಬೇಕು ಎಂದು ಕೂಗುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ.

    ಪಾವಗಡ ತಾಲೂಕಿನಲ್ಲಿ ನೂರಾರು ರೈತರು ಟೊಮೆಟೊ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಟೊಮೆಟೊಗೆ ನಿಗದಿತ ಬೆಲೆ ಸಿಗದೇ ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ಸಂಕಷ್ಟ ದೂರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.