Tag: ಪ್ರತಿಭಟನೆ

  • ಮಹದಾಯಿಗಾಗಿ ಕರ್ನಾಟಕ ಬಂದ್: ಕರವೇ ಕಾರ್ಯಕರ್ತಯರಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ

    ಮಹದಾಯಿಗಾಗಿ ಕರ್ನಾಟಕ ಬಂದ್: ಕರವೇ ಕಾರ್ಯಕರ್ತಯರಿಂದ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ

    ಬೆಂಗಳೂರು: ಮಹದಾಯಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೂ ಬಂದ್ ಬಿಸಿ ತಟ್ಟಿದೆ.

    ದಿನ ನಿತ್ಯಕ್ಕಿಂತ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದ್ದು, ರೈಲ್ವೇ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮಹದಾಯಿ ಹೋರಾಟವನ್ನು ಬೆಂಬಲಿಸಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಬಣದಿಂದ ಮುತ್ತಿಗೆ ಹಾಕಿದ್ದಾರೆ.

    ರೈಲ್ವೇ ಸ್ಟೇಷನ್ ಗೆ ಕರವೇ ಮುತ್ತಿಗೆ ಹಿನ್ನೆಲೆಯಲ್ಲಿ ಸ್ಟೇಷನ್ ಫ್ರಂಟ್ ಮತ್ತು ಬ್ಯಾಕ್ ಗೇಟಲ್ಲಿ ಪೊಲೀಸ್ ಫುಲ್ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರೈಲ್ವೇ ಸ್ಟೇಷನ್ ಮುಂಭಾಗ ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್ ಮಾಡಿದ್ದಾರೆ. 150ಕ್ಕೂ ಹೆಚ್ಚು ಪೊಲೀಸರನ್ನು ಆಯೋಜಿಸಲಾಗಿದೆ.

    ರೈಲ್ವೇ ಸ್ಟೇಷನ್‍ಗೆ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಮುತ್ತಿಗೆ ನಡೆದಿದ್ದು, ಪೊಲೀಸರು ಕರವೇ ಕಾರ್ಯಕರ್ತರನ್ನ ತಡೆಯುತ್ತಿದ್ದಾರೆ. ಮಹದಾಯಿ ನಮ್ಮದು, ಮಹದಾಯಿ ನಮ್ಮದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕರವೇ ಕಾರ್ಯಕರ್ತರ ಘೋಷಣೆ ಕೂಗುತ್ತಿದ್ದಾರೆ.

    ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈಲ್ವೆ ನಿಲ್ದಾಣಕ್ಕೆ ಹೋಗಿ ರಾಜ್ಯದ ಎಲ್ಲಾ ರೈಲ್ವೇ ನಿಲ್ದಾಣಗಳಿಗೂ ಮುತ್ತಿಗೆ ಹಾಕಲಾಗಿದೆ. ಕುಡಿಯೋ ನೀರಿಗಾಗಿ ಇಂದು ಹೋರಾಟ ಮಾಡಲಾಗ್ತಿದೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

    ರೈಲ್ವೇ ಸ್ಟೇಷನ್‍ಗೆ ಕರವೇ ಮುತ್ತಿಗೆ ಹಾಕಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಬಂಧಿಸಿದ್ದಾರೆ. ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಅಧ್ಯಕ್ಷ ನಾರಾಯಣಗೌಡನನ್ನು ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಕರ್ತರು ರಸ್ತೆಗಳಲ್ಲೇ ಮಲಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

  • ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಮೈ-ಕೈ ಮುಟ್ಟಿ, ಎಷ್ಟು ಮಕ್ಕಳಿಗೆ ಜನ್ಮ ನೀಡ್ತೀರಾ?- ಮಕ್ಕಳಿಗೆ ಶಾಲಾ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ

    ಬಳ್ಳಾರಿ: ಇಲ್ಲಿನ ಮೊರಾರ್ಜಿ ಶಾಲೆಯ ಪ್ರಾಂಶುಪಾಲರ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಬಳಿ ಮುರಾರ್ಜಿ ಶಾಲೆಯ ನೂರಾರು ಮಕ್ಕಳು ಮಂಗಳವಾರ ಪ್ರಾಂಶುಪಾಲ ಶಶಿಧರ್, ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಭೋದನೆ ಮಾಡುತ್ತಾನೆ ಎಂದು ರೊಚಿಗೆದ್ದು ಪ್ರತಿಭಟನೆ ನಡೆಸಿದರು.

    ನಮ್ಮ ಮಾಸ್ಟರ್ ನಮ್ಮ ಮೈ-ಕೈ ಮುಟ್ಟಿ ಮಾತನಾಡಿಸ್ತಾನೆ. ಕೆಟ್ಟ ದೃಷ್ಠಿಯಿಂದ ನೋಡುತ್ತಾ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತೀರಾ? ಎಂದು ಕೇಳುತ್ತಾನೆ ಅಂತ ಮಕ್ಕಳು ಪ್ರಾಂಶುಪಾಲರ ವಿರುದ್ಧ ಧ್ವನಿಯೆತ್ತಿದ್ದಾರೆ. ಜೊತೆಗೆ ಕೂಡಲೇ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿ ಎಂದು ಮಕ್ಕಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

    ಮುಂಜಾನೆ 11 ಗಂಟೆಯಿಂದ ಶಾಲೆಯ ಮುಂದೆಯೇ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಮಗಾಗುತ್ತಿರುವ ಕಿರುಕುಳದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

    ಈ ಶಾಲೆಯ ಪ್ರಾಂಶುಪಾಲ ಶಶಿಧರ್ ಈ ಹಿಂದೆ ಹಡಗಲಿಯ ಶಾಲೆಯಲ್ಲೂ ಇದೇ ರೀತಿಯಾಗಿ ವರ್ತನೆ ಮಾಡಿದ ಪರಿಣಾಮ ಇವರನ್ನು ಹಗರಿಬೊಮ್ಮನಹಳ್ಳಿಯ ಅಂಬಳಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಪಲ್ಸರ್ ಬೈಕ್ ಡಿಕ್ಕಿಯಾಗಿ ಬಾಲಕ ಸಾವು- ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

    ಪಲ್ಸರ್ ಬೈಕ್ ಡಿಕ್ಕಿಯಾಗಿ ಬಾಲಕ ಸಾವು- ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

    ವಿಜಯಪುರ: ಪಲ್ಸರ್ ಬೈಕ್ ಡಿಕ್ಕಿಯಾದ ಪರಿಣಾಮ 7 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಮಪ್ಪ ಪಟ್ಟಣದ ಬಳಿ ನಡೆದಿದೆ.

    ಸುದೀಪ್ ಪಟ್ಟಣ್(7) ಮೃತ ಬಾಲಕ. ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ರಾಮಪ್ಪ ಪಟ್ಟಣ್ ಅವರ ಮಗನಾಗಿದ್ದು, ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದೆ.

    ಕನ್ನೋಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯ ಸಂಬಂಧಿಕರ ಬೈಕ್‍ನಿಂದ ಈ ಅಪಘಾತ ಸಂಭವಿಸಿದೆ. ಬಾಲಕ ಸುದೀಪ್ ತಂದೆ ಜೊತೆ ಹೊರ ಹೋಗಿ ಮನೆಗೆ ಹಿಂದಿರುಗಿದ್ದನು. ಬಳಿಕ ಬೈಕ್ ಇಳಿದು ಮನೆಕಡೆ ಹೋಗುವಾಗ ವೇಗವಾಗಿ ಬಂದ ಪಲ್ಸರ್ ಬೈಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಅಪಘಾತವಾದ ಬೈಕ್ ಬದಲಿಸಲು ಸದಸ್ಯೆಯ ಪತಿ ಪ್ರಯತ್ನಿಸಿದ್ದು, ಸದಸ್ಯೆ ಪತಿಯ ದುರ್ನಡತೆಯನ್ನು ಖಂಡಸಿ ಮಗುವಿನ ಶವನಿಟ್ಟು ಗ್ರಾಮಸ್ಥರು ಪ್ರತಭಟನೆ ಮಾಡುತ್ತಿದ್ದಾರೆ. ರಾಜಕೀಯ ಪ್ರಾಬಲ್ಯದಿಂದ ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡದೆ ಅಂತ್ಯಸಂಸ್ಕಾರಕ್ಕೆ ಸದಸ್ಯೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಗ್ರಾಮಸ್ಥರು ಮಗುವಿನ ಶವವನ್ನು ರಸ್ತೆಯಲ್ಲಿ ಇಟ್ಟು ನ್ಯಾಯ ಸಿಗುವರೆಗೂ ಅಂತ್ಯಸಂಸ್ಕಾರಕ್ಕೆ ಅವಕಾಶ ನಿಡುವುದಿಲ್ಲವೆಂದು ಪಟ್ಟು ಹಿಡಿದ್ದಾರೆ.

    ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಧ್ಯ ರಾತ್ರಿ ಕಳೆದರೂ ಗ್ರಾಮಸ್ಥರು ಪಟ್ಟು ಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಗು ಕಳೆದುಕೊಂಡ ತಂದೆ- ತಾಯಿ ಮತ್ತು ಸಂಬಂಧಿಗಳ ರೋಧನೆ ಮುಗಿಲು ಮುಟ್ಟಿದೆ.

     

  • ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರಿಂದ ಕೇಶ ಮುಂಡನ

    ಭೋಪಾಲ್: ಸಮಾನ ವೇತನಕ್ಕಾಗಿ ಆಗ್ರಹಿಸಿ ಶಿಕ್ಷಕಿಯರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಪುರುಷರಿಗಿಂತ ಕಡಿಮೆ ವೇತನ ನೀಡಲಾಗುತ್ತಿದ್ದು, ಸಂಬಳದಲ್ಲಿ ಸಮಾನತೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಶನಿವಾರ ರಾಜಧಾನಿ ಭೋಪಾಲ್ ಸೇರಿದಂತೆ ರಾಜ್ಯಾದ್ಯಂತ ‘ಅಧ್ಯಾಪಕ ಅಧಿಕಾರ ಯಾತ್ರಾ’ ಎಂಬ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‍ನ ಜಂಬೂರಿ ಮೈದಾನದಲ್ಲಿ ಸೇರಿದ ಪ್ರತಿಭಟನಾಕರರು ಸರ್ಕಾರಕ್ಕೆ ತಮ್ಮ ಕೇಶವನ್ನು ಮುಡಿಯಾಗಿ ಕೊಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕೆಲವು ಶಿಕ್ಷಕರು ತಮ್ಮ ಕೇಶ ಮುಂಡನ ಮಾಡಿಕೊಳ್ಳುವ ಮೂಲಕ ಪ್ರತಿಭಟನಾ ನಿರತ ಶಿಕ್ಷಕಿಯರಿಗೆ ಸಾಥ್ ನೀಡಿದ್ರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಕ ವರ್ಗ ಪ್ರತಿಭಟನೆ ನಡೆಸಿದೆ.

    ಬೇಡಿಕೆಗಳೇನು?: ಪ್ರತಿಭಟನಾನಿರತರು ಸಮಾನ ವೇತನ, ಇತರೆ ಸರ್ಕಾರಿ ಉದ್ಯೋಗಸ್ಥರಿಗೆ ದೊರೆಯುವ ಸವಲತ್ತುಗಳು, ಉದ್ಯೋಗ ಭದ್ರತೆ, ಕ್ರಮಬದ್ಧ ವರ್ಗಾವಣೆಯ ಪಾಲಿಸಿ ಸೇರಿದಂತೆ ಮುಂತಾದ ಬೇಡಿಕೆಗಳನ್ನು ಪೂರ್ಣಗೊಳಿಸಬೇಕೆಂದು ಪ್ರತಿಭಟನೆ ಮಾಡಿದ್ದಾರೆ.

    ಪ್ರತಿಭಟನೆಯಲ್ಲಿ ಮುಂಡನದಿಂದ ಸಂಗ್ರಹವಾಗಿರುವ ಕೇಶವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪತ್ನಿ ಸಾಧನಾ ಸಿಂಗ್ ಅವರಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಆಜಾದ್ ಅಧ್ಯಾಪಕ ಸಂಘದ ಅಧ್ಯಕ್ಷ ಶಿವರಾಜ್ ವರ್ಮಾ ತಿಳಿಸಿದ್ದಾರೆ.

  • ಕಾರವಾರ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು- ಹೆರಿಗೆ ಮಾಡಿಸೋ ವೇಳೆ ಹಲ್ಲೆ ಆರೋಪ

    ಕಾರವಾರ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು- ಹೆರಿಗೆ ಮಾಡಿಸೋ ವೇಳೆ ಹಲ್ಲೆ ಆರೋಪ

    ದಾವಣಗೆರೆ: ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಆಯೇಷಾ ಗೌಸ್ ಅಕ್ತರ್(32) ಮೃತ ಮಹಿಳೆ. ಇವರನ್ನು ಹೆರಿಗಾಗಿ  ಇತ್ತೀಚೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಹೆರಿಗೆ ಮಾಡಿಸುವಾಗ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಮಹಿಳೆಯ ದೇಹದಿಂದ ರಕ್ತಸ್ರಾವವಾಗಿತ್ತು. ಇದಲ್ಲದೇ ಹೆರಿಗೆ ಸಂದರ್ಭದಲ್ಲಿ ವೈದ್ಯರು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಗೆ ಕರೆತರಲಾಗಿದ್ದು, ಇಲ್ಲಿ ಮಗುವನ್ನು ಮಾತ್ರ ರಕ್ಷಣೆ ಮಾಡಲಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಶವವನ್ನು ತಂದು ನ್ಯಾಯಕ್ಕಾಗಿ ಆಹೋರಾತ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಘಟನೆ ಸಂಬಂಧ ಹಳಿಯಾಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ ಹರಿದು ಮಹಿಳೆ ಸಾವು – ಉದ್ರಿಕ್ತರಿಂದ ಕಲ್ಲು ತೂರಾಟ

    ಲಾರಿ ಹರಿದು ಮಹಿಳೆ ಸಾವು – ಉದ್ರಿಕ್ತರಿಂದ ಕಲ್ಲು ತೂರಾಟ

    ಹಾವೇರಿ: ವೇಗವಾಗಿ ಬಂದ ಲಾರಿ ಪಾದಚಾರಿ ಮಹಿಳೆಗೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಅಂಚೆ ಕಚೇರಿ ಬಳಿ ನಡೆದಿದೆ.

    ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಶಾಂತಮ್ಮ ಬಾಣಾಪುರ (48) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮಹಿಳೆ ಮೃತಪಟ್ಟ ವಿಷಯದ ತಿಳಿದ ಸಂಬಂಧಿಕರು ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ರಸ್ತೆ ಇಡೀ ಕಲ್ಲು ಅಡ್ಡ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

    ಅಪಘಾತ ಸಂಭವಿಸಿದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರನ್ನ ಮನವೊಲಿಸಲು ಹರಸಹಾಸ ಪಟ್ಟಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮೊದಲು ಬಿಜೆಪಿ, ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು, ಜಿಹಾದಿಗಳು ನೀವು: ದಿನೇಶ್ ಗುಂಡೂರಾವ್

    ಮೊದಲು ಬಿಜೆಪಿ, ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು, ಜಿಹಾದಿಗಳು ನೀವು: ದಿನೇಶ್ ಗುಂಡೂರಾವ್

    ಬೆಂಗಳೂರು: ಮೂಡಿಗೆರೆ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎನ್‍ಎಸ್‍ಯುಐ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ.

    ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಧನ್ಯಶ್ರೀ ಆತ್ಮಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಧನ್ಯಶ್ರೀ ಹಿಂದೂ ಅಲ್ಲವೇ. ದೀಪಕ್ ರಾವ್ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಪ್ರವೀಣ್ ಪೂಜಾರಿ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಆದರೆ ಧನ್ಯಶ್ರೀ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಇರುವುದರಿಂದ ಮಾತನಾಡುತ್ತಿಲ್ವಾ. ದೀಪಕ್ ರಾವ್ ಬಗ್ಗೆ ಒಂದು ಧನ್ಯಶ್ರೀ ಬಗ್ಗೆ ಒಂದು ಸಿದ್ಧಾಂತ ನಿಮ್ಮದು. ಮೊದಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು ಜಿಹಾದಿಗಳು ನೀವು ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಕುರಿತಂತೆ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧನ್ಯಶ್ರೀ ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಅನಿಲ್ ಕೈವಾಡ ಇದೆ. ಆದ್ದರಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಈ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾರ್ಯಕರ್ತರು ಬಿಜೆಪಿ ನಾಯಕರನ್ನು ದೂಷಿಸಿದರು.

  • ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಹೋದ ಅಂಬುಲೆನ್ಸ್ ಚಾಲಕ!

    ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಹೋದ ಅಂಬುಲೆನ್ಸ್ ಚಾಲಕ!

    ದಾವಣಗೆರೆ: ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಾವನ್ನಪ್ಪಿದ್ದಾನೆ ಎಂದು ಅಂಬುಲೆನ್ಸ್ ಸಿಬ್ಬಂದಿ ಘಟನಾ ಸ್ಥಳದಲ್ಲಿಯೇ ಬಿಟ್ಟುಬಂದ ಘಟನೆ ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಳಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ವೇಳೆ ಕಾರ್ಮಿಕರ ಮೇಲೆ ಮಣ್ಣು ಕುಸಿದು ಬಿದ್ದು ಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್(32), ನಜೀರ್(30) ಹಾಗೂ ಸಿದ್ದಪ್ಪರ ನಾಗರಾಜ್(28) ರನ್ನು ರಕ್ಷಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

    ಈ ವೇಳೆ ಬಂದ ಅಂಬುಲೆನ್ಸ್ ಇಬ್ಬರನ್ನು ಕರೆತಂದು ನಾಗರಾಜ್ ಸತ್ತಿದ್ದಾನೆಂದು ಸ್ಥಳದಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಗ್ರಾಮಸ್ಥರು ನಾಗರಾಜ್ ರನ್ನು ಖಾಸಗಿ ಕಾರ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಬರುವಷ್ಟರಲ್ಲಿ ನಾಗರಾಜ್ ಸಾವನ್ನಪ್ಪಿದ್ದಾರೆ.

    ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಸ್ಪತ್ರೆಯ ಮುಂದೆ ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು.

  • ದಲಿತ ಕುಟುಂಬಗಳಿಗೆ ಅನ್ನಭಾಗ್ಯ ಅಕ್ಕಿ ರದ್ದು- ಸೊಪ್ಪು ತಿಂದು ಕೊರೆಯುವ ಚಳಿಯಲ್ಲೂ ಪ್ರತಿಭಟನೆ

    ದಲಿತ ಕುಟುಂಬಗಳಿಗೆ ಅನ್ನಭಾಗ್ಯ ಅಕ್ಕಿ ರದ್ದು- ಸೊಪ್ಪು ತಿಂದು ಕೊರೆಯುವ ಚಳಿಯಲ್ಲೂ ಪ್ರತಿಭಟನೆ

    ಚಿಕ್ಕಬಳ್ಳಾಪುರ: ಅನ್ನಭಾಗ್ಯದ ಅಕ್ಕಿಗಾಗಿ ದಲಿತ ಸಮುದಾಯದ ಜನ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮ ತೊರೆದು ಬಂದು ಸೊಪ್ಪು ಸೆದೆ ತಿನ್ನುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚೌಡದೇನಹಳ್ಳಿಯ ದಲಿತರು ವಿನೂತನವಾಗಿ ಪ್ರತಿಭಟಿಸಿದ್ದಾರೆ.


    ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅಂತ ದಲಿತರಿಗೆ ಸಿಗಬೇಕಾದ ಪಡಿತರ ಚೀಟಿ ರದ್ದು ಪಡಿಸಲಾಗಿತ್ತು. ಹೀಗಾಗಿ ಅಲ್ಲಿನ ಗ್ರಾಮದ ಜನ ಕಳೆದ ಒಂದು ವರ್ಷದಿಂದ ಪಡಿತರ ಸಿಗದೆ ಪರದಾಡುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಗ್ರಾಮ ತೊರೆದು ಗ್ರಾಮದ ಹೊರವಲಯದಲ್ಲೇ ವಾಸ್ತವ್ಯ ಹೂಡಿ ಪ್ರತಿಭಟನೆ ಮಾಡಿದ್ದಾರೆ. ತಮಗೆ ಸಿಗಬೇಕಾದ ಸೌಲಭ್ಯಗಳು ಒದಗಿಸುವಂತೆ ಆಗ್ರಹಿಸಿ ಕಳೆದ ರಾತ್ರಿಯಿಡೀ ಕೊರೆಯುವ ಚಳಿಯನ್ನು ಲೆಕ್ಕಿಸದೇ ದಲಿತ ಕುಟುಂಬಗಳು ಪ್ರತಿಭಟನೆ ನಡೆಸಿವೆ.

  • ಹುಬ್ಬಳ್ಳಿ ಧಾರವಾಡ ಬಂದ್- KSRTC  ಬಸ್ ನಿಲ್ದಾಣದ ಟಿಕೆಟ್ ಕೌಂಟರ್ ಕಲ್ಲು, ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

    ಹುಬ್ಬಳ್ಳಿ ಧಾರವಾಡ ಬಂದ್- KSRTC ಬಸ್ ನಿಲ್ದಾಣದ ಟಿಕೆಟ್ ಕೌಂಟರ್ ಕಲ್ಲು, ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

    ಹುಬ್ಬಳ್ಳಿ: ವಿಜಯಪುರ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಕೊರೆಗಾಂವ್ ಗಲಭೆ ಹಾಗೂ ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿಕೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದ್ದು, ಪ್ರತಿಭಟನೆ ನಡೆಯುತ್ತಿದೆ.

    ನಗರದಲ್ಲಿ ಪ್ರತಿಭಟನಾಕಾರರು ಕಲ್ಲು ತೂರುತ್ತಿದ್ದು, ಹಳೇ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿದ್ದ ಟಿಕೆಟ್ ಕೌಂಟರ್ ಧ್ವಂಸ ಮಾಡಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ಟೈರ್ ಗೆ  ಬೆಂಕಿ ಹಚ್ಚಿ ಹೋರಾಟ ಮಾಡುತ್ತಿದ್ದಾರೆ.

    ಮಹಾರಾಷ್ಟ್ರದ ಕೊರೆಗಾಂವ್‍ನಲ್ಲಿ ದಲಿತನ ಹತ್ಯೆ ಖಂಡಿಸಿ ಧಾರವಾಡದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ನಗರದ ಜುಬ್ಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೀನಿ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆಯನ್ನು ದಲಿತ ಸಂಘಟನೆಗಳು ಖಂಡಿಸಿವೆ.

    ಚಿಕ್ಕೋಡಿ, ಕಲಬುರಗಿ, ಆಳಂದದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.