ಚಿಕ್ಕಬಳ್ಳಾಪುರ: ಗ್ರಾಮದೇವತೆ, ಉತ್ಸವಮೂರ್ತಿಗಳ ಮೆರವಣಿಗೆ ಮಾಡುತ್ತಿದ್ದ ವೇಳೆ ಲಾರಿಯೊಂದು ಹರಿದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ನಡೆದಿದೆ.
ಗೌತಮ್ (11) ಶ್ರೇಯಸ್ (17) ಮೃತ ದುರ್ದೈವಿಗಳು. ಶನಿವಾರ ರಾತ್ರಿ ಸುಮಾರು 1.30ರ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 9 ಮಂದಿಗೆ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಉಳಿದಂತೆ 7 ಮಂದಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ ಗ್ರಾಮದಲ್ಲಿ ವಿನಾಕರಾಣ ಜನ ಸಾವನ್ನಪ್ಪುತ್ತಿದ್ದಾರೆ ಎಂದು ಶಾಂತಿಗಾಗಿ ಗ್ರಾಮಸ್ಥರು ಗ್ರಾಮದೇವತೆಗಳ ಉತ್ಸವಮೂರ್ತಿಗಳ ಮೆರವಣಿಗೆ ನಡೆಸಿದ್ದರು. ಆದರೆ ಉತ್ಸವಮೂರ್ತಿ ಕೊಂಡೊಯ್ಯುತ್ತಿದ್ದ ಮಿನಿ ಟ್ರಾಕ್ಟರ್ ಗೆ ಲಾರಿ ಗುದ್ದಿದೆ. ಪರಿಣಾಮ ಲಾರಿ ಹರಿದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತ ಖಂಡಿಸಿ ಹೊಸಹುಡ್ಯ ಗ್ರಾಮಸ್ಥರು, ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ.
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪರವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಇಂದು ನಡೆಯಲಿದೆ. ಹೀಗಾಗಿ ಬಿಜೆಪಿ ನಾಯಕರು ಪ್ರಧಾನಿಯವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳನ್ನು ನಡೆಸಿದ್ದರೆ, ಇತ್ತ ಮಹದಾಯಿ ಹೋರಾಟಗಾರರು ಮೋದಿಗೆ ಪ್ರತಿಭಟನೆಯ ಬಿಸಿ ನೀಡಲು ರೆಡಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಹಸಿರು ಶಾಲು ತೆಗೆದು ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದು, ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.
ಕನ್ನಡ ಒಕ್ಕೂಟದ ಜಾಥಾದಲ್ಲಿ ಮಹದಾಯಿ ಹೋರಾಟಗಾರರು ಭಾಗವಹಿಸಲಿದ್ದಾರೆ. ಫ್ರೀಡಂಪಾರ್ಕ್‍ನಿಂದ ಅರಮನೆ ಮೈದಾನದವರೆಗೆ ಕನ್ನಡ ಒಕ್ಕೂಟದ ವಾಟಾಳ್ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು ಮೆಜೆಸ್ಟಿಕ್, ಫ್ರೀಡಂಪಾರ್ಕ್ ಬಳಿಯೂ ಟ್ರಾಫಿಕ್ ಜಾಮ್ ಉಂಟಾಗಲಿದೆ. ಹೀಗಾಗಿ ಇಂದು ಬೆಂಗಳೂರು ರೋಡ್‍ಲ್ಲಿ ಸಂಚರಿಸಿದ್ರೆ ಟ್ರಾಫಿಕ್ ಬಿಸಿಯಲ್ಲಿ ತಗ್ಲಾಕ್ಕೊಳ್ಳೋದು ಗ್ಯಾರಂಟಿಯಾಗಿದೆ.
ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಈ ಹಿಂದೆ ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಕೇಂದ್ರ ಬಜೆಟ್ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವಿದೇಶಗಳಲ್ಲಿರುವ ಎನ್‍ಆರ್‍ಐಗಳಿಗೆ ಮೋದಿ ಭಾಷಣ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಬಿಜೆಪಿ ಕರ್ನಾಟಕ, ಬಿಜೆಪಿ ಇಂಡಿಯಾ, ಬಿಜೆಪಿ ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾಷಣ ಪ್ರಸಾರ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 200 ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಂದ ಫೇಸ್ ಬುಕ್ ಮೂಲಕ ಲೈವ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಮೋದಿ ಭಾಷಣ ಲೈವ್ ಪ್ರಸಾರ ಮಾಡಲೆಂದೇ ಆಯ್ದ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ.
ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬವರ ಕೊಲೆಯಾಗಿತ್ತು. ಸಂತೋಷರನ್ನು ಕೊಲೆ ಮಾಡಲು ದುಷ್ಕರ್ಮಿಗಳು ಸ್ಕ್ರೂ ಡ್ರೈವರ್ ಬಳಕೆ ಮಾಡಿದ್ದರು ಅಷ್ಟೇ ಎಂದು ಹೇಳಿಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ವಿರುದ್ಧ ಯುವ ಮೋರ್ಚಾ ವಿನೂತನ ಪ್ರತಿಭಟನೆ ಆರಂಭಿಸಿದೆ.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಕ್ರೂ ಡ್ರೈವರ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಗೃಹ ಸಚಿವರಿಗೆ ಸ್ಕ್ರೂ ಡ್ರೈವರ್ ಕಳಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆಗೆ ಸ್ಕ್ರೂಡ್ ಅಪ್ ಹೋಮ್ ಮಿನಿಸ್ಟರ್ (#ScrewedUpHomeMinister) ಎಂದು ಹೆಸರಿಟ್ಟಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟಕದಲ್ಲಿ ಸ್ಟೇಟ್ ಸ್ಪಾನ್ಸರ್ ಟೆರರಿಸಂ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಗೃಹ ಸಚಿವರು ಸಂವೇದನಾ ರಹಿತ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ 24 ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಡೆದಿದೆ. ರಾಮಲಿಂಗಾರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದೆ. ಮಂಗಳೂರು ದೀಪಕ್ ರಾವ್ ಹತ್ಯೆಯಾದಾಗ ತಮ್ಮ ಕಾರ್ಯದಕ್ಷತೆ ಬಗ್ಗೆ ಗೃಹ ಸಚಿವರಿಗೆ ಅನುಮಾನ ಬರಬೇಕಿತ್ತು. ಸಂತೋಷ್ ಹತ್ಯೆಯಾದಾಗ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಬೇಕಿತ್ತು. ಆದರೆ ಆರೋಪಿಯನ್ನು ಸಮರ್ಥಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರೋಪಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪ್ರತಿಭಟನೆ ಅಂದೋಲನದ ಮೂಲಕ ಗೃಹ ಸಚಿವರಿಗೆ ಸ್ಕ್ರೂ ಡ್ರೈವರ್ ಕೊರಿಯರ್ ಮಾಡಲಾಗುತ್ತದೆ. ನಾವು ಕಳುಹಿಸಿದ ಸ್ಕ್ರೂ ಡೈವರ್ ನೋಡಿದಾಗ 24 ಹರೆಯದ ಸಂತೋಷ್ ನೆನಪಾಗಬೇಕು. ತನ್ನ ಮಗಳ ಪ್ರಾಯದ ವಿಧವೆ ಹೆಣ್ಣು, ಇನ್ನೂ ಜಗತ್ತು ಕಾಣದ ಮಗುವಿನ ಚಿತ್ರ ಕಾಣಬೇಕು. ತಮ್ಮ ಹೇಳಿಕೆಯ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
The insensitive, irresponsible Home Minister of Karnataka @RLR_BTM under whose watch Karnataka is fast turning into sorts of a Taliban rule must immediately resign. Yuva Morcha launches#ScrewedUpHomeMinister campaign.
BJP karyakartas and other concerned citizens from across the state may use the below mentioned address to send a screw driver to Home Min Ramalinga Reddy.
ಮುಂಬೈ: ಪದ್ಮಾವತ್ ಸಿನಿಮಾದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಶ್ರೀ ರಜಪೂತ ಕರ್ಣಿ ಸೇನಾ ತನ್ನ ನಿರ್ಧಾರವನ್ನು ಶುಕ್ರವಾರ ತಿಳಿಸಿದೆ.
ಮುಂಬೈನ ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ನಾಯಕ ಯೋಗೇಂದ್ರ ಸಿಂಗ್ ಖಟರ್ ಈ ಬಗ್ಗ ನಿರ್ಣಯ ತೆಗೆದುಕೊಂಡಿದ್ದಾರೆ. ಯೋಗೇಂದ್ರ ಸಿಂಗ್ ತಮ್ಮ ನಿರ್ಧಾರವನ್ನು ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಅಧ್ಯಕ್ಷ ಸುಖ್ ದೇವ್ ಸಿಂಗ್ ಗೋಮಾಡಿ ಅವರಿಗೆ ರವಾನಿಸಿದ್ದಾರೆ. ಶುಕ್ರವಾರದಂದು ಮುಂಬೈನಲ್ಲಿ ಕರ್ಣಿ ಸೇನಾದ ಕೆಲವು ಸದಸ್ಯರು ಪದ್ಮಾವತ್ ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರದ ವಿವಾದಗಳಿಂದ ಮುಕ್ತವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ರಜಪೂತ ವ್ಯಕ್ತಿ ಹೆಮ್ಮೆ ಪಡುತ್ತಾರೆ ಎಂದು ಹೇಳಿದ್ದಾರೆ.
ಚಿತ್ರ ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಹೊಂದಿಲ್ಲ. ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿ ದೃಶ್ಯಗಳು ಎಲ್ಲಿಯೂ ರಜಪೂತ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವ ಪತ್ರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಪತ್ರ ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಹರಿಯಾಣ ಮತ್ತು ದೇಶದ ಚಿತ್ರಮಂದಿರಗಳ ಮಾಲೀಕರಿಗೆ ಸಿನಿಮಾ ರಿಲೀಸ್ ಮಾಡಲು ಒಪ್ಪಿಗೆ ನೀಡಿದಂತಾಗುತ್ತದೆ ಎಂದು ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.
ಕರ್ಣಿ ಸೇನಾ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಸಿನಿಮಾವನ್ನು ಬ್ಯಾನ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಆದ್ರೆ ಸುಪ್ರೀಂ ಕೋರ್ಟ್ ಕರ್ಣಿ ಸೇನಾದ ಅರ್ಜಿಯನ್ನ ರದ್ದುಗೊಳಿಸಿ, ಪದ್ಮಾವತ್ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಕರ್ಣಿ ಸೇನಾ ಮಾತ್ರ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್ ಗೆ ಬೆಂಕಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕರ್ಣಿ ಸೇನಾದ ಬೆದರಿಕೆ ಹೆದರಿದ ಕೆಲವು ಚಿತ್ರಮಂದಿರಗಳ ಮಾಲೀಕರು ‘ಪದ್ಮಾವತ್’ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರು. ಕರ್ಣಿ ಸೇನಾ ಪ್ರತಿಭಟನೆಯನ್ನು ಹಿಂದೆ ಪಡೆದಿರುವದರಿಂದ ಚಿತ್ರಮಂದಿರಗಳ ಮಾಲೀಕರು ನಿರ್ಭಯವಾಗಿ `ಪದ್ಮಾವತ್’ ಸಿನಿಮಾ ರಿಲೀಸ್ ಮಾಡಬಹುದಾಗಿದೆ.
ಪದ್ಮಾವತ್ ಸಿನಿಮಾ ಜನವರಿ 25ರಂದು ಬಿಡುಗೊಡೆ ಆಗಿದ್ದು, ಈಗಾಗಲೇ 200 ಕೋಟಿ ಅಧಿಕ ಹಣವನ್ನು ತನ್ನ ಗಲ್ಲಾಪೆಟ್ಟಿಗೆಯಲ್ಲಿ ತುಂಬಿಸಿಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಭದ್ರತೆ ನೀಡಲಾಗಿತ್ತು. 2017 ಡಿಸೆಂಬರ್ 01 ರಂದು ಪದ್ಮಾವತ್ ಸಿನಿಮಾ ಬಿಡುಗೊಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿರೋಧ ಮಾಡುತ್ತಿದ್ದ ಕರ್ಣಿ ಸೇನಾ ದೇಶಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಬೋರ್ಡ್ ಚಿತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿ ಸಿನಿಮಾದ ಟೈಟಲ್ ಸೇರಿದಂತೆ ಕೆಲವು ಬದಲಾವಣೆ ಮಾಡುವಂತೆ ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದಂತೆ ಚಿತ್ರತಂಡ ಸಿನಿಮಾದಲ್ಲಿ ಮಾರ್ಪಡು ಮಾಡಿಕೊಂಡು ಬಿಡುಗೊಡೆ ಮಾಡಿದೆ.
ಬೀದರ್: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಕರೆನೀಡಿದ್ದ ಬೀದರ್ ಬಂದ್ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಇಂದು ಎಬಿವಿಪಿ, ಎಸ್‍ಎಫ್‍ಐ ಸೇರಿದಂತೆ ವಿವಿಧ ಸಂಘಟನೆಗಳು ಬೀದರ್ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ ಅತ್ಯಾಚಾರ ಕೃತ್ಯ ಖಂಡಿಸಿ 2 ಸಾವಿರಕ್ಕೂ ಹೆಚ್ಚಿನ ಜನರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನಾಕಾರರು ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸರ್ಕಲ್ ನ ಒಂದು ಭಾಗದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದ್ದು ಮತ್ತೊಂದು ಭಾಗದಲ್ಲಿ ಸಂಚಾರ ಸುಗಮ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು.
ಲಾಠಿ ಚಾರ್ಜ್ ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಭಗವಂತ ಖೂಬಾ ಅವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ರೇಪ್ ಪ್ರಕರಣ?
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇದೇ ತಿಂಗಳ 27 ರಂದು ಭಾಲ್ಕಿ ತಾಲೂಕಿ ಕೋಸಮ್ ಗ್ರಾಮದ ಪೂಜಾ (20) ವಿದ್ಯಾರ್ಥಿನಿ ಕೊಲೆಯಾಗಿತ್ತು. ವಿದ್ಯಾರ್ಥಿನಿ ಪೂಜಾ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿಎ ಎರಡನೇಯ ವರ್ಷದಲ್ಲಿ ಓದುತ್ತಿದ್ದಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿ ಶಂಶುದ್ದೀನ್ (24) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೊಲೆಯಾದ ವಿದ್ಯಾರ್ಥಿನಿ ಪೂಜಾಳನ್ನು ಆರೋಪಿ ಕಳೆದ ಎರಡು ವರ್ಷದಿಂದ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಆರೋಪಿಯ ಪ್ರೀತಿಯನ್ನು ನಿರಾಕರಿಸಿದಾಗ ಒತ್ತಾಯ ಪೂರ್ವಕವಾಗಿ ಪೂಜಾಳನ್ನು ಅರಣ್ಯ ಪ್ರದಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ.
ವಿವಿದ ಸಂಘಟನೆಗಳ ಹೋರಾಟಗಾರರು ಬಂದ್ ನಡೆಸಿದ್ದರು ನಗರದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಅಲ್ಲದೇ ಸಾರಿಗೆ ಬಸ್ ಸಂಚಾರ ಎಂದಿನಂತೆ ನಡೆಯಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ಥಿಗೆ ಒತ್ತಾಯಿಸಿ ಪೆಟ್ರೋಲ್ ಪೂರೈಕೆ ಮಾಡೋ ಟ್ಯಾಂಕರ್ ಚಾಲಕರು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ನಗರಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ನಾಳೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುವ ಸಾಧ್ಯತೆ ಕಡಿಮೆ ಇದೆ.
ಕಳೆದ ಎರಡು ವರ್ಷಗಳ ಹಿಂದೆಯೂ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ. ಪ್ರಸ್ತುತ ನಗರದಲ್ಲಿ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಶೇಖರಣೆ ಮಾಡಿರುವ ತೈಲವನ್ನಷ್ಟೇ ಪೂರೈಕೆ ಮಾಡಲು ಸಾಧ್ಯವಿದೆ. ಇದರ ನಂತರ ಮತ್ತೆ ತೈಲ ಪೂರೈಕೆ ಮಾಡುವವರೆಗೂ ಇಂಧನ ಲಭ್ಯವಾಗುವ ಸಾಧ್ಯತೆಗಳು ಕಡಿಮೆ ಇದೆ.
ಪ್ರತಿಭಟನೆ ನಡೆಸುತ್ತಿರುವ ಟ್ಯಾಂಕರ್ ಚಾಲಕರ ಮನವೊಲಿಸಲು ಈಗಾಗಲೇ ತೈಲ ಕಂಪನಿಗಳು ಸಭೆ ನಡೆಸಿವೆ. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದಾರೆ. ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ.
ದಾವಣಗೆರೆ: ಮಹದಾಯಿಗಾಗಿ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬ್ಯಾಟ್ ತಾಗಿ ಕಾರ್ಯಕರ್ತರ ತಲೆಗೆ ಗಂಭೀರ ಪೆಟ್ಟಾಗಿದೆ.
ಜಯದೇವ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಟವಾಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬ್ಯಾಟ್ ತಾಗಿ ಕರವೇ ಶಿವರಾಮೆ ಗೌಡರ ಬಣದ ಚನ್ನಗಿರಿ ತಾಲೂಕಿನ ಅಧ್ಯಕ್ಷ ಲೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುವಾಗ ಪಕ್ಕದಲ್ಲಿದ್ದ ಲೋಹಿತ್ ತಲೆಗೆ ಬ್ಯಾಟ್ ತಾಗಿದೆ.
ಬೆಂಗಳೂರು: ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬಂದ್ ಗೆ ಬೆಂಬಲ ನೀಡದ ಐಟಿ ಕಂಪನಿಗಳಿಗೆ ಬೀಗ ಹಾಕುವ ಎಚ್ಚರಿಕೆ ಹಿನ್ನಲೆಯಲ್ಲಿ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಅಂಗಡಿ ಮುಚ್ಚಿಸಲು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಒಳಗೆ ಐಟಿ ಉದ್ಯೋಗಿಗಳು ಹಾಗೂ ವಾಹನಗಳನ್ನು ಬಿಡದೆ ರಸ್ತೆಯಲ್ಲಿಯೇ ತಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ, ರಸ್ತೆಯಲ್ಲೇ ಧರಣಿ ನಡೆಸುತ್ತಿದ್ದಾರೆ.
ಐಟಿ ಕಂಪನಿ ಬಂದ್ ಮಾಡೋದಕ್ಕೆ ಹೇಳಿ ಎಂದು ಕರವೇ ಆಗ್ರಹಿಸಿದ್ದಾರೆ. ಆದ್ರೆ ಐಟಿ ಕಂಪನಿಯವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ, ಬಂದ್ ಮಾಡಿದರೆ ಅರೆಸ್ಟ್ ಮಾಡುತ್ತೀವಿ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪ್ರವೀಶ್ ಶೆಟ್ಟಿ ಹಾಗೂ ಪೊಲೀಸರ ಮಧ್ಯೆ ಗಲಾಟೆ ನಡೆದಿದೆ. ಅದ್ಹೇಗೆ ಅರೆಸ್ಟ್ ಮಾಡ್ತೀರಾ? ನಾವೇನ್ ಕಲ್ಲು ಹೊಡೆದಿದ್ವಾ, ನೀವೆನೂ ಹೇಳಿದ ಹಾಗೆ ಮಾಡೋದಕ್ಕೆ ಆಗಲ್ಲ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಐಟಿ ಕಂಪನಿ ವಿರುದ್ಧ ಪ್ರವೀಣ್ ಶೆಟ್ಟಿ ವಾಗ್ಧಾಳಿ ನಡೆಸಿ ಇಲ್ಲಿನ ನೀರು, ಜಮೀನು, ಕರೆಂಟು ಎಲ್ಲವೂ ಬೇಕು. ಆದರೆ ಐಟಿಯವರು ನಮ್ಮ ಹೋರಾಟಕ್ಕೆ ಬೆಂಬಲ ಮಾತ್ರ ಕೊಡಲ್ಲ. ಬಾಗಿಲು ಮುಚ್ಚಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬಂದ್ ಗೆ ಬೆಂಬಲಿಸದೆ ಇದ್ದರೆ ಮುಂದಿನ ಪರಿಸ್ಥಿತಿ ಗೆ ಅವರೇ ಹೊಣೆ ಎಂದು ಹೇಳಿದ್ದಾರೆ.
ಇದಕ್ಕೆ ಮಾನ್ಯತಾ ಟೆಕ್ ಪಾರ್ಕ್ ಮ್ಯಾನೇಜರ್ ಪ್ರತಿಕ್ರಿಯಿಸಿ, ಐಟಿ ಕಂಪನಿ ಕ್ಲೋಸ್ ಇದೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ನೀರಿನ, ನಾಡಿನ ಸಮಸ್ಯೆ ಬಂದಾಗ ಐಟಿಬಿಟಿ ಬೆಂಬಲವಿದೆ ಎಂದು ಹೇಳಿದ್ದಾರೆ.
ರಾಮನಗರ: ಮಹದಾಯಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಮುಂಜಾನೆಯಿಂದಲೇ ಪ್ರತಿಭಟನೆಗಳು ಶುರುವಾಗಿವೆ.
ರಾಮನಗರದಲ್ಲಿ ಮೊದಲಿಗೆ ಕರುನಾಡ ಸೇನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕನ್ನಡ ಜನಮನ ವೇದಿಕೆ ಕಾರ್ಯಕರ್ತರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಗೋವಾ ಸಿಎಂ ಪರಿಕ್ಕರ್ ಹಾಗೂ ನೀರಾವರಿ ಸಚಿವ ಪಾಲೇಕರ್ ಪ್ರತಿಕೃತಿಗಳನ್ನು ಚಟ್ಟಗಳಲ್ಲಿ ಮೆರವಣಿಗೆ ನಡೆಸಿದರು.
ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೋವಾ ಸಿಎಂ ಹಾಗೂ ನೀರಾವರಿ ಸಚಿವರ ಪ್ರತಿಕೃತಿಗಳಿಗೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಾಕಿ ದಹಿಸಿದರು. ಇದೇ ವೇಳೆ ಶಿವಣ್ಣ ಹಾಗೂ ಶಿವಶಂಕರ್ ಎಂಬ ಇಬ್ಬರು ಕಾರ್ಯಕರ್ತರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸಿದರು.
ಬೆಳಗಾವಿ: ರಾಜ್ಯಾದ್ಯಂತ ಇಂದು ಕರವೇ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಯುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ.
ಬೆಳಗಾವಿಯ ಪೀರನವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಗಳನ್ನು ತಡೆಯಲು ಕರವೇ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ನಗರದಲ್ಲಿ ಬಸ್‍ಗಳು ರಸ್ತೆಗೆ ಇಳಿಯದಿದ್ದರಿಂದ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಗೋವಾದಿಂದ ಯಾವುದೇ ಬಸ್ ಗಳು ರಾಜ್ಯದತ್ತ ಬಂದಿಲ್ಲ. ಕರ್ನಾಟಕದ ಬಸ್ ಗಳು ಮಾತ್ರ ರಾಜ್ಯದತ್ತ ಆಗಮಿಸುತ್ತಿವೆ.