Tag: ಪ್ರತಿಭಟನೆ

  • ಜಾರ್ಖಂಡ್ ನಲ್ಲಿ ಪಿಎಫ್‍ಐ ಸಂಘಟನೆ ನಿಷೇಧ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

    ಜಾರ್ಖಂಡ್ ನಲ್ಲಿ ಪಿಎಫ್‍ಐ ಸಂಘಟನೆ ನಿಷೇಧ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

    ಮಂಗಳೂರು: ಜಾರ್ಖಂಡ್ ಸರ್ಕಾರ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿ ದಕ್ಷಿಣ ಕನ್ನಡ ಪಿಎಫ್‍ಐ ಜಿಲ್ಲಾ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.

    ಪ್ರತಿಭಟನೆ ವೇಳೆ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಭಟನಕಾರರು ಸರ್ಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

    ಪಿಎಫ್‍ಐ ಸಂಘಟನೆ ಯಾವುದೇ ರಾಷ್ಟ್ರವಿರೋಧಿ ಕೃತ್ಯವನ್ನು ನಡೆಸಿಲ್ಲ. ಈ ಕುರಿತು ಯಾವುದೇ ಸಾಕ್ಷ್ಯಧಾರಗಳು ಇಲ್ಲ. ಆದರೆ ಜಾರ್ಖಂಡ್ ಸರ್ಕಾರ ಮಾತ್ರ ಕೇಂದ್ರದ ಒತ್ತಡದಿಂದ ಸಂಘಟನೆಯನ್ನ ನಿಷೇಧಿಸಿದೆ ಎಂದು ಆರೋಪಿಸಿದರು.

    ದೇಶದಲ್ಲಿ ಬಿಜೆಪಿ ಸರ್ಕಾರ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದೆ. ಮನುಸಂಸ್ಕೃತಿಯನ್ನು ಜಾರಿಗೊಳಿಸಿ ಹುನ್ನಾರವನ್ನು ಮಾಡುತ್ತಿದೆ. ಆರ್ ಎಸ್‍ಎಸ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಜಾತ್ಯಾತೀತ ನೀತಿಗೆ ಹೋರಾಟ ನಡೆಸುತ್ತಿರುವ ಪಿಎಫ್‍ಐ ಸಂಘಟನೆ ಗೆ ಇಂತಹ ಕ್ರಮಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಪಿಎಫ್‍ಐ ರಾಜ್ಯ ಕಾರ್ಯದರ್ಶಿ ಯಾಸಿರ್ ಹಸನ್, ಎಸ್‍ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ದಕ್ಷಿಣ ಕನ್ನಡ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ರಫೀಕ್ ದಾರಿಮಿ, ಪಿಎಫ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಜಿಲ್ಲಾ ಸಮಿತಿ ಸದಸ್ಯ ಸಿರಾಜುದ್ದೀನ್, ದಲಿತ ಮುಖಂಡ ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

  • ನೇಣು ಬಿಗಿದುಕೊಂಡು 1ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

    ನೇಣು ಬಿಗಿದುಕೊಂಡು 1ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

    ವಿಜಯಪುರ: ಒಂದನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿಪಟ್ಟಣದಲ್ಲಿ ನಡೆದಿದೆ.

    ಪ್ರಕಾಶಸಿಂಗ ಸಿದ್ದರಾಮಸಿಂಗ ಜಮಾದಾರ(6) ನೇಣಿಗೆ ಶರಣಾದ ವಿದ್ಯಾರ್ಥಿ. ಸಿಂದಗಿ ಪಟ್ಟಣದಲ್ಲಿರುವ ಶಣ್ಮುಖೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಶಾಲೆಯವರ ಬೇಜವಾಬ್ದಾರಿಗೆ ಶಾಲೆಯ ಎದುರು ಬಾಲಕನ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಶಾಲಾ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!

    ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಸಮಾವೇಶವೊಂದರಲ್ಲಿ ಪಕೋಡಾ ಮಾರಾಟ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಬಂದಿದೆ.

    ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಮಾರಾಟ ಮಾಡೋ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರು ಹಾಗೂ ಜನರಿಗೆ ಉಚಿತವಾಗಿ ಸಮೋಸಾ ಹಾಗೂ ಬನ್ ದೊರೆಯುತ್ತಿದೆ.

    ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರಿಗಾಗೆ ಲಕ್ಷಾಂತರ ಸಮೋಸಾ ಹಾಗೂ ಬನ್ ವ್ಯವಸ್ಥೆ ಮಾಡಿದ್ದಾರೆ. ಪ್ರತಿಯೊಬ್ಬರಿಗೆ ನಾಲ್ಕು ಬನ್ ಹಾಗೂ 6 ಸಮೋಸಾದ ಪ್ಯಾಕೆಟ್ ನೀಡುತ್ತಿರುವುದು ವಿಶೇಷವಾಗಿದೆ.

  • ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ಚಿಕ್ಕಮಗಳೂರು: ಕೆರೆ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದ್ದು, ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

    ಸಖರಾಯಪಟ್ಟಣದ ಅಯ್ಯನಕೆರೆ ನೀರನ್ನು ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಗಲಾಟೆ ನಡೆದು, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪ್ರಸ್ತುತ ತಹಶೀಲ್ದಾರ್ ಭಾಗ್ಯ ಅವರು ಈ ಪ್ರದೇಶದಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಇದೀಗ ಸಖರಾಯಪಟ್ಟಣ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಿದರೆ ಬೋರ್‍ವೆಲ್‍ಗಳು ಅಂತರ್ಜಾಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಹೊಲಗದ್ದೆಗಳಿಗೂ ನೀರು ಲಭಿಸಲಿದೆ ಎಂದು ಗುರುವಾರ ಜಿಗಣೇಹಳ್ಳಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

    https://www.youtube.com/watch?v=AmB7U5-ug8o

  • 4ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ- ಹೆಚ್‍ಡಿಕೆ ಜೊತೆ ಚರ್ಚಿಸುತ್ತೇನೆ ಅಂದ್ರು ಶಾಸಕ ಕೋನರೆಡ್ಡಿ

    4ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ- ಹೆಚ್‍ಡಿಕೆ ಜೊತೆ ಚರ್ಚಿಸುತ್ತೇನೆ ಅಂದ್ರು ಶಾಸಕ ಕೋನರೆಡ್ಡಿ

    ಬೆಂಗಳೂರು: ಕನಿಷ್ಟ ವೇತನ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಇಂದು ರಾಜ್ಯ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಲಿದೆ. ಗುರುವಾರ ರಾತ್ರಿ ಶಾಸಕ ಕೋನರೆಡ್ಡಿ ಪ್ರತಿಭಟನಾಕಾರರನ್ನು ಭೇಟಿ ಮಾಡಿದ್ರು. ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಖುದ್ದು ಅವರಿಂದಲೇ ಮಾಹಿತಿ ಪಡೆದ್ರು. ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಇಂದು ಅಧಿವೇಶದನಲ್ಲಿ ಖುದ್ದು ನಾನೇ ಈ ಕುರಿತು ಪ್ರಸ್ತಾಪ ಮಾಡುತ್ತೇನೆ ಅಂದ್ರು. ಇದನ್ನೂ ಓದಿ:  ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

  • 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ

    3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ

    ಬೆಂಗಳೂರು: ಕನಿಷ್ಠ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

    ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ 2ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದ್ರು. ಇಂದು ರಾಜ್ಯಾದ್ಯಂತ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಲಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ.

    ಮೊದಲಿಗೆ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಜಾಥಾ ನಡೆಸಲಿರುವ ಕಾರ್ಯಕರ್ತೆಯರು, ಸಿಐಟಿಯು ಸಂಘಟನೆಯ ಅಧ್ಯಕ್ಷೆ ವರಲಕ್ಷ್ಮಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

    ಇಷ್ಟೆಲ್ಲಾ ಆಗ್ತಿದ್ರು ರಾಜ್ಯ ಸರ್ಕಾರ ಮಾತ್ರ ತನ್ನ ಜಾಣಕುರುಡುತನವನ್ನು ಮುಂದುವರಿಸಿದೆ. ಈ ಮಧ್ಯೆ ಧರಣಿನಿರತ ಕಾರ್ಯಕರ್ತೆಯರಿಗೆ ಮಹಿಳಾ ಎಂಪವರ್‍ಮೆಂಟ್ ಪಕ್ಷ ಬೆಂಬಲ ಸೂಚಿಸಿದ್ದು, ರಾತ್ರಿ ಮಹಿಳೆಯರಿಗೆ ಹೊದಿಕೆಗಳನ್ನ ನೀಡಿದ್ರು.

     

  • ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬೆಂಗಳೂರು: ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮತ್ತೆ ಮಂಗಳವಾರ ಕೂಡ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಳಿದ್ದು, ಇಂದೂ ಕೂಡ ಮುಂದುವರೆಯುವ ಸಾಧ್ಯತೆಗಳಿವೆ.

    ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬೀದಿಗಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ರು. ಮಂಗಳವಾರ ಸ್ವತಃ ಸಚಿವ ತನ್ವೀರ್ ಸೇಠ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಜೊತೆ ಮಾತಾನಾಡಿ ಸಂಜೆ 6 ಗಂಟೆಯೊಳಗೆ ಬೇಡಿಕೆ ಈಡೆರಿಸುತ್ತೇವೆ ಅಂತಾ ಭರವಸೆ ನೀಡಿದ್ರು.

    ಆದ್ರೆ ಭರವಸೆ ನೀಡಿ ತೆರಳಿದ ಸಚಿವ ತನ್ವೀರ್ ಸೇಠ್ ಆ ಕಡೆ ತಲೆ ಹಾಕಲೇ ಇಲ್ಲ. ಹೀಗಾಗಿ ಇದೀಗ ಪ್ರತಿಭಟನಾಕಾರರು ಸುಳ್ಳು ಭರವಸೆ ನೀಡಿ ಓಡುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 15 ಸಾವಿರ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ 2100 ರೂ. ಸಂಬಳ ನೀಡುತ್ತಿರುವ ಸರ್ಕಾರ, ಕಳೆದ ಎರಡು ತಿಂಗಳಿನಿಂದ ಸಂಬಳವೂ ಪಾವತಿ ಮಾಡಿಲ್ಲ. ಹೀಗಾಗಿ ಲಿಖಿತ ಭರವಸೆ ಕೊಟ್ಟರೆ ಮಾತ್ರ ಧರಣಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಈ ಹಿಂದೆ ಹಲವು ಬಾರಿ ಕನಿಷ್ಠ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗೆ ಇಳಿದ್ರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೀಗಾಗಿ ಬಿಸಿಯೂಟ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೇ ಅಹೋರತ್ರಿ ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇಂದು ರಾಜ್ಯದ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ.

  • ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್- ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳಿಂದ ನಟನ ವಿರುದ್ಧ ಆಕ್ರೋಶ

    ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್- ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳಿಂದ ನಟನ ವಿರುದ್ಧ ಆಕ್ರೋಶ

    ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ನಟ ಜಗ್ಗೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುವ ಮೂಲಕ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಭಿಮಾನಿಗಳು ಇಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಈ ಪ್ರತಿಭಟನೆ ನಡೆದಿದ್ದು, ನಿನ್ನೆಯಿಂದ ರಮ್ಯಾ ಪರ ಮತ್ತು ವಿರೋಧವಾಗಿ ಮಂಡ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಇದೇ ಜಾಗದಲ್ಲಿ ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ತಂಪು ಪಾನೀಯವನ್ನು ರಮ್ ರೀತಿ ಕುಡಿದು ಪ್ರತಿಭಟಿಸಿದ್ರು.

    ಇಂದು ಮತ್ತೆ ಅದೇ ಜಾಗದಲ್ಲಿ ಅಭಿಮಾನಿಗಳಿಂದ ರಮ್ಯಾ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್ ಎಂದು ನಟ ಜಗ್ಗೆಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕೆ ಈ ಪ್ರತಿಭಟನೆ?: ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದ ಬಳಿಕ ಟಿಟ್ವರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿತ್ತು. ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.

    ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು.

    ರಮ್ಯಾ ಟ್ವೀಟ್‍ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ಮಾತಾಡುವ ಮಂದಿಗೆ ವಯಸ್ಸು, ಅನುಭವ, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆ ನಿರ್ಣಯಸುತ್ತಾರೆ ಜನ. ವಿಶ್ವದ ಬಲಿಷ್ಟ ರಾಷ್ಟ್ರದ ನಾಯಕರೇ ಮೋದಿ ಅವರನ್ನ ಒಪ್ಪಿ ಮೆಚ್ಚದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿ ರಮ್ಯಾ ಹೇಳಿಕೆಗೆ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಮ್ಯಾ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಬೆಂಗಳೂರು: ಬಿಸಿಯೂಟ ಸಿಬ್ಬಂದಿಗಳಿಂದ ಇವತ್ತು ನಗರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ನಡೆಸಲು ರಾಜ್ಯದ ವಿವಿಧ ಜಿಲ್ಲೆ ಗಳಿಂದ ಬಿಸಿಯೂಟ ತಯಾರಕರು ಬೆಂಗಳೂರಿಗೆ ಅಗಮಿಸಿದ್ದು, ಐವತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಲು ಬಿಸಿಯೂಟ ಕಾರ್ಯಕರ್ತೆಯರು ಮುಂದಾಗಿದ್ದು, ಫ್ರೀಡಂ ಪಾರ್ಕ್ ನಿಂದ ತನ್ವೀರ್ ಸೇಠ್ ನಿವಾಸದ ಕಡೆ ಹೊರಟಿದ್ದರು. ಮುತ್ತಿಗೆಗೆ ಹೊರಟ ರ‍್ಯಾಲಿಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ , ಬ್ಯಾರಿಕೇಡ್ ಗಳನ್ನ ತಳ್ಳಿದ್ದಾರೆ.

    ಸಚಿವ ತನ್ವೀರ್‍ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮೆಲ್ಲರ ಕಷ್ಟ ಅವರಿಗೆ ಅರ್ಥವಾಗ್ತಿಲ್ವಾ? ನಾವು ನಮ್ಮ ಹಕ್ಕನ್ನ ಕೇಳ್ತಿದ್ದೀವಿ. ಕನಿಷ್ಟ ವೇತನ ಕೊಡಿ. ನ್ಯಾಯಯುತವಾಗಿ ನಮಗೆ ಕೊಡಬೇಕಾದ ವೇತನ ಕೊಡಿ. ಸಚಿವರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಭರವಸೆ ನೀಡೋವರಗೆ ಪ್ರತಿಭಟನೆ ಹಿಂಪಡೆಯವುದಿಲ್ಲ ಎಂದು ಆಗ್ರಹಿಸಿದ್ದಾರೆ. ರಸ್ತೆ ಮಧ್ಯಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನೆ ಯಾಕೆ?: ಕನಿಷ್ಠ ವೇತನ, ಕೆಲಸ ಖಾಯಂ, ಪಿಎಫ್, ಐಎಸ್‍ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಬಿಸಿಯೂಟ ತಯಾರಕರ ಸಂಘ ಹಾಗೂ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇವತ್ತು ಬಿಸಿಯೂಟ ಇರುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಜಿಲ್ಲಾ ಅಡುಗೆ ಸಹಾಯಕರು ಪ್ರತಿಭಟನೆ ಮಾಡ್ತಿರೋದ್ರಿಂದ ಜಿಲ್ಲೆಗಳಲ್ಲಿ ಮಾತ್ರ ಇಂದು ಬಿಸಿಯೂಟದ ಸಮಸ್ಯೆ ಎದುರಾಗಲಿದೆ.

    ಈ ಹಿಂದೆ ಸಾಕಷ್ಟು ಭಾರಿ ಪ್ರತಿಭಟನೆ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಪ್ರತಿಭಟನೆಯಲ್ಲಿ ಇಲಾಖೆ 5200 ರೂ. ಕನಿಷ್ಟ ವೇತನ ನೀಡುವ ಭರವಸೆ ನೀಡಿತ್ತು. ಪ್ರಸಕ್ತ ವರ್ಷದಿಂದ ಪ್ರತಿ ತಿಂಗಳು 5200 ರೂ. ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದ್ರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

    ಈ ವೇಳೆ ಪ್ರತಿಭಟನೆಗೆ ಬಂದಿದ್ದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದು, ಸ್ಥಳದಲ್ಲೇ ಅವರನ್ನ ಸಹೋದ್ಯೋಗಿಗಳು ಆರೈಕೆ ಮಾಡಿದ್ದಾರೆ.

     

  • ಮಹದಾಯಿ ಹೋರಾಟಗಾರರಿಂದ ಮೋದಿ ಫೋಟೋಗೆ ವಿಶೇಷ ಪೂಜೆ

    ಮಹದಾಯಿ ಹೋರಾಟಗಾರರಿಂದ ಮೋದಿ ಫೋಟೋಗೆ ವಿಶೇಷ ಪೂಜೆ

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ಇಂದು ಪ್ರಧಾನಿಯವರು ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಮೋದಿ ವಿರುದ್ಧ ಪ್ರತಿಭಟನೆ ಡನೆಸುತ್ತಿದ್ದಾರೆ.

    ಮಹದಾಯಿ ವಿಚಾರದಲ್ಲಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೇ ಇದೇ ವೇಳೆ ಫ್ರೀಡಂಪಾರ್ಕ್ ನಲ್ಲಿ ಮೋದಿ ಭಾವಚಿತ್ರ ಕ್ಕೆ ಹೂವು ಹಾಕಿದ್ದಾರೆ. `ಮೋದಿ ಜಿ ಗೆಟ್ ವೆಲ್ ಸೂನ್ ಫಾರ್ ಮಹದಾಯಿ’ ಅಂತಾ ಭಾವಚಿತ್ರ ದ ಮೇಲೆ ಬರೆದಿದ್ದಾರೆ.

    ಸಮಾವೇಶದಲ್ಲಿ ಮಾತನಾಡುವ ಪ್ರಧಾನಿ ಅವರು ಮಹದಾಯಿ ವಿಚಾರವನ್ನು ಪ್ರಸ್ತಾಪ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆದರೆ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾತ್ರ ಮೋದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಭಾಷಣದ ವೇಳೆ ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಕೇಂದ್ರ ಬಜೆಟ್ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವಿದೇಶಗಳಲ್ಲಿರುವ ಎನ್‍ಆರ್‍ಐಗಳಿಗೆ ಮೋದಿ ಭಾಷಣ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಬಿಜೆಪಿ ಕರ್ನಾಟಕ, ಬಿಜೆಪಿ ಇಂಡಿಯಾ, ಬಿಜೆಪಿ ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾಷಣ ಪ್ರಸಾರ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 200 ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಂದ ಫೇಸ್ ಬುಕ್ ಮೂಲಕ ಲೈವ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಮೋದಿ ಭಾಷಣ ಲೈವ್ ಪ್ರಸಾರ ಮಾಡಲೆಂದೇ ಆಯ್ದ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ.