Tag: ಪ್ರತಿಭಟನೆ

  • ಪ್ರತಿಭಟನೆ ವೇಳೆ ಮಹಿಳೆ ಸಾವು- ರಾಯಬಾಗ ಪಟ್ಟಣ ಅಘೋಷಿತ ಬಂದ್

    ಪ್ರತಿಭಟನೆ ವೇಳೆ ಮಹಿಳೆ ಸಾವು- ರಾಯಬಾಗ ಪಟ್ಟಣ ಅಘೋಷಿತ ಬಂದ್

    ಬೆಳಗಾವಿ: ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಮಾಲೀಕರೇ ಮಹಿಳೆಯನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಹೊರ ವಲಯದಲ್ಲಿರುವ ಕಲ್ಲು ಗಣಿಗಾರಿಕೆ ಯಂತ್ರವನ್ನು ಸ್ಥಗಿತಗೊಳಿಸಬೇಕು ಎಂದು ಬಹು ದಿನಗಳಿಂದ ಹೋರಾಟ ನಡೆಯುತ್ತಿದೆ. ಆದ್ರೆ ಮಂಗಳವಾರ ತಡರಾತ್ರಿ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಡೆದ ಗಲಾಟೆಯಲ್ಲಿ ರಹಮತ ಮುಲ್ತಾನಿ 34 ಎಂಬ ಮಹಿಳೆ ಕಾಲು ಜಾರಿ ಬಿದ್ದು ಗಾಯಗೊಂಡು ರಾಯಬಾಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ಇದರಿಂದ ಆಕ್ರೋಶಗೊಂಡ ರಹಮತ ಸಂಬಂಧಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕರೇ ಮಹಿಳೆಯನ್ನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಯಬಾಗ ಪಟ್ಟಣದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ರಾಯಬಾಗ ತಾಲೂಕಾ ಆಸ್ಪತ್ರೆ ಎದುರು ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಪ್ರಕರಣದ ತೀವ್ರತೆಯನ್ನ ಅರಿತ ಬೆಳಗಾವಿ ಎಸ್ ಪಿ ಸುಧೀರ ಕುಮಾರ್ ರೆಡ್ಡಿ ತಕ್ಷಣವೇ ರಾಯಬಾಗ ಪಟ್ಟಣಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

    ಬೆಳಗ್ಗೆ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಗಮನಿಸಿ ಮಹಿಳೆ ಕೊಲೆಯಾಗಿಲ್ಲ. ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್ ಪಿ ಅವರ ಹೇಳಿಕೆಯಿಂದ ಆಕ್ರೋಶಗೊಂಡ ಒಂದು ಕೋಮಿನ ಪ್ರತಿಭಟನಕಾರರು ನಮಗೆ ನ್ಯಾಯ ಸಿಗಲಿಲ್ಲ ಎಂದು ರಾಯಬಾಗ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಲಾಠಿ ಚಾರ್ಜ್ ನಡೆಸಿ 20 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಿಂದ ರಾಯಬಾಗ ಪಟ್ಟಣ ಅಘೋಷಿತ ಬಂದ್ ಆಗಿದ್ದು ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದೆ.

    ರಾಯಬಾಗ ಪಟ್ಟಣದಾದ್ಯಂತ ಎಸ್ ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ  ಬೆಂಕಿ ಹಚ್ಚಿ ಪ್ರತಿಭಟನೆ

    ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

    ಹೈದರಾಬಾದ್: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿಯೂ ತೆಲಗು ದೇಶಂ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

    ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ಟಿಡಿಪಿ ಕಾರ್ಯಕರ್ತರು ತಮ್ಮ ಸ್ಕೂಟರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದ್ರು. ಕಾರ್ಯಕರ್ತರು ಸ್ಕೂಟರ್‍ಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‍ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.

    2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.

    ಬೆಲೆ ಏರಿಕೆ ಆಗುತ್ತಿರೋದು ಯಾಕೆ?
    ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ ಈಗ ಈ ರಾಷ್ಟ್ರಗಳ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

  • ಗ್ರಾಮದಲ್ಲಿದ್ದ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್: ರೊಚ್ಚಿಗೆದ್ದ ಉಡುಪಿ ಗ್ರಾಮಸ್ಥರಿಂದ ಪ್ರತಿಭಟನೆ

    ಗ್ರಾಮದಲ್ಲಿದ್ದ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್: ರೊಚ್ಚಿಗೆದ್ದ ಉಡುಪಿ ಗ್ರಾಮಸ್ಥರಿಂದ ಪ್ರತಿಭಟನೆ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ವಿಜಯ ಬ್ಯಾಂಕ್ ನ ಆಲೂರು ಶಾಖೆಯನ್ನು ಬೇರೆ ಗ್ರಾಮಕ್ಕೆ ಶಿಫ್ಟ್ ಮಾಡುವ ಕುರಿತು ಭಾರೀ ಜನಾಕ್ರೋಶ ವ್ಯಕ್ತವಾಗಿದೆ.

    ಆಲೂರು ಗ್ರಾಮದಿಂದ ನಾಡ ಗ್ರಾಮಕ್ಕೆ ವಿಜಯಬ್ಯಾಂಕ್ ಶಾಖೆಯನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಗ್ರಾಹಕರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನೂರಾರು ಗ್ರಾಮಸ್ಥರು ಬ್ಯಾಂಕ್ ಮುಂಭಾಗ ಜಮಾಯಿಸಿದ್ದರು. ಬ್ಯಾಂಕ್ ಶಿಫ್ಟ್ ಮಾಡುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬ್ಯಾಂಕ್ ನಲ್ಲಿ ತಿಂಗಳಿಗೆ 25 ಕೋಟಿಗೂ ಹೆಚ್ಚು ವ್ಯವಹಾರವಿದೆ. ಬ್ಯಾಂಕ್ ನಾಡ ಗ್ರಾಮಕ್ಕೆ ಶಿಫ್ಟಾದರೆ ವ್ಯವಹಾರ ಮಾಡಲು ಗ್ರಾಹಕರು 10 ಕಿಲೋಮೀಟರ್ ನಷ್ಟು ದೂರ ಹೋಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಹಕರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ರು.

    ಪ್ರಧಾನಿ ಮೋದಿ ಡಿಜಿಟಲ್ ವ್ಯವಹಾರ ಮಾಡಲು ಒಂದೆಡೆ ಉತ್ತೇಜನ ಕೊಡುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳು ಈ ಯೋಜನೆಗೆ ಸ್ಪಂದನೆ ನೀಡುತ್ತಿಲ್ಲ ಅಂತ ಆರೋಪಿಸಿದರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದರು. ಪ್ರತಿಭಟನಾಕಾರರಿಗೆ ಬ್ಯಾಂಕ್ ಉಳಿಸಿಕೊಡುವ ಭರವಸೆ ನೀಡಿದರು.

    ಬ್ಯಾಂಕ್ ಗ್ರಾಹಕ ಜಯರಾಂ ಆಲೂರು ಮಾತನಾಡಿ, ನಮಗೆ ನಮ್ಮ ಬ್ಯಾಂಕ್ ಉಳಿಸಿಕೊಡಿ. ದೂರದ ಊರಿಗೆ ವ್ಯವಹಾರಕ್ಕೆ ಹೋಗಲು ಕಷ್ಟವಾಗುತ್ತದೆ. ಬ್ಯಾಂಕ್ ಶಿಫ್ಟ್ ಆದ್ರೆ ನಮ್ಮ ಅಕೌಂಟ್ ಕ್ಲೋಸ್ ಮಾಡಬೇಕಾಗುತ್ತದೆ ಎಂದು ಹೇಳಿದರು.

  • ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಲ್ಲು ಹೊತ್ತು ಶಾಸಕ ಶಿವಾನಂದ ಪಾಟೀಲ್ ಬೆಂಬಲಿಗನಿಂದ ಪ್ರತಿಭಟನೆ

    ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಲ್ಲು ಹೊತ್ತು ಶಾಸಕ ಶಿವಾನಂದ ಪಾಟೀಲ್ ಬೆಂಬಲಿಗನಿಂದ ಪ್ರತಿಭಟನೆ

    ವಿಜಯಪುರ: ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆದ ಭಾರೀ ಹೈಡ್ರಾಮಾಕ್ಕೆ ಕೊನೆಗೂ ತೆರೆಬಿದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

    ಈ ಮಧ್ಯೆ ಸದ್ಯ ಸಚಿವ ಸ್ಥಾನ ಯಾರು ಯಾರಿಗೆಲ್ಲ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮೈತ್ರಿ ಸರ್ಕಾರ ರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಶಿವಾನಂದ ಪಾಟೀಲಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.

    ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಬಲಿಗ ತಮ್ಮಣ್ಣ ಕಾನಗಡ್ಡಿ ಅವರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಲ್ಲು ಹೊತ್ತು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಸಾಥ್ ನೀಡಿದ್ದಾರೆ.

  • ಬಿಎಸ್‍ವೈ ಪ್ರಮಾಣವಚನ: ಶುಕ್ರವಾರ ದೇಶದ್ಯಾಂತ ಕಾಂಗ್ರೆಸ್ ಪ್ರತಿಭಟನೆ

    ಬಿಎಸ್‍ವೈ ಪ್ರಮಾಣವಚನ: ಶುಕ್ರವಾರ ದೇಶದ್ಯಾಂತ ಕಾಂಗ್ರೆಸ್ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ದೊರೆಯದಿದ್ದರೂ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ನಡೆಸಲು ಅವಕಾಶ ನೀಡಿರುವ ನಿರ್ಧಾರದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.

    ಪ್ರಜಾಪ್ರಭುತ್ವ ಉಳಿಸಿ ಹೆಸರಿನಲ್ಲಿ ನಾಳೆ ಎಲ್ಲಾ ರಾಜ್ಯಗಳ ರಾಜಧಾನಿ ಹಾಗೂ ಜಿಲ್ಲಾ ಘಟಕಗಳಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

    ಈ ಕುರಿತು ನವದೆಹಲಿ ಮಾತನಾಡಿದ ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ್ ಪ್ರಮುಖವಾಗಿ ಕರ್ನಾಟಕ ರಾಜ್ಯಪಾಲರದ ವಜುಭಾಯಿವಾಲಾ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಡೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

    ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಎಸ್ ಯಡಿಯೂರಪ್ಪ ಒಂದು ದಿನದ ಮುಖ್ಯಮಂತ್ರಿ. ರಾಜ್ಯಪಾಲರಿಗೆ ನೀಡಿರುವ ಪತ್ರ ಸಲ್ಲಿಸುವಂತೆ ಸುಪ್ರಿಂಕೋರ್ಟ್ ಸೂಚಿಸಿದೆ. ಬಿಜೆಪಿಗೆ ಬಹುಮತ ಇಲ್ಲ ಹಾಗಾಗೀ ನಾಳೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಇದೇ ವೇಳೆ ರಾಜ್ಯಪಾಲರ ವಿರುದ್ಧವು ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿಗಾಗಿ ವಜುಬಾಯಿವಾಲ ಅವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಈ ಹಿಂದೆ ಗುಜುರಾತ್ ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದರು. ಸದ್ಯ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನ ತ್ಯಾಗ ಮಾಡಿದ್ದಾರೆ. ಸಂವಿಧಾನವನ್ನು ಕೊಂದು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿಗಾಗಿ ವಾಲಾ ಸಂವಿಧಾನದ ಎನ್ ಕೌಂಟರ್ ಮಾಡಿದ್ದಾರೆ. ನಿಮ್ಮಗೆ ಧೈರ್ಯ, ಸಂವಿಧಾನಿಕ ವ್ಯವಸ್ಥೆ ಮೇಲೆ ಗೌರವ ಇದ್ರೆ ನಾಳೆ ಬಹುಮತ ಸಾಬೀತು ಮಾಡಿ ಎಂದು ಬಿಜೆಪಿ ನಾಯಕರಿಗೆ ಅವರು ಸವಾಲು ಎಸೆದಿದ್ದಾರೆ.

  • ಕರ್ಮ ಅಂದರೆ ಇದು: ಮಾಜಿ ಸಿಎಂ ವಿರುದ್ಧ ಶೋಭಾ ವ್ಯಂಗ್ಯ

    ಕರ್ಮ ಅಂದರೆ ಇದು: ಮಾಜಿ ಸಿಎಂ ವಿರುದ್ಧ ಶೋಭಾ ವ್ಯಂಗ್ಯ

    ಬೆಂಗಳೂರು: ಅಂದು ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ತಮ್ಮ ಮಗನ ಸಾವಿನ ನ್ಯಾಯಕ್ಕಾಗಿ ವಿಧಾನಸೌಧದ ಬಳಿ ಪ್ರತಿಭಟನೆ ಮಾಡಿದ್ದರು. ಇಂದು ನೀವು ಅದೇ ಸ್ಥಿತಿಯಲ್ಲಿದ್ದೀರಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಇಂದು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾನವಚನ ಸ್ವೀಕಾರ ಮಾಡಿದ್ದ ಬೆನ್ನಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದಾರೆ.

    ಸಿದ್ದರಾಮಯ್ಯ ವಿಧಾನಸೌಧದ ಮುಂದೆ ಕುಳಿತ್ತಿದ್ದ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿ ಟ್ವೀಟ್ ಮಾಡಿ, “ಡಿಯರ್ ಸಿದ್ದರಾಮಯ್ಯ ಅವರೇ ಇದು ಕರ್ಮ ಅಂದರೆ. ಅಂದು ಡಿ.ಕೆ ರವಿ ಅವರ ತಾಯಿ ಗೌರಮ್ಮ ತನ್ನ ಮಗನ ಸಾವಿನ ನ್ಯಾಯಕ್ಕಾಗಿ ಕಣ್ಣೀರಿಟ್ಟು ಪ್ರತಿಭಟನೆ ಮಾಡಿದ್ದರು. ಇಂದು ನೀವು ಅವರ ಮಾರ್ಗವನ್ನೇ ಅನುಸರಿಸಿದ್ದೀರಿ” ಎಂದು ಬರೆದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಡಿ.ಕೆ ರವಿ ಪೋಷಕರು ಮಗನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಮಗನ ಸಾವಿನ ಪ್ರಕರಣವನ್ನು ನ್ಯಾಯವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆರಂಭಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿ ರವಿ ಅವರ ತಾಯಿ ಗೌರಮ್ಮ ಜೊತೆ ಮಾತನಾಡಿ ಸಿಬಿಐ ತನಿಖೆಗೆ ವಹಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

    https://twitter.com/ShobhaBJP/status/996987838850678784

  • ಕಾನೂನು ಕ್ರಮ ಕೈಗೊಳ್ಳುತ್ತೇವೆ: ಜಿ ಪರಮೇಶ್ವರ್

    ಕಾನೂನು ಕ್ರಮ ಕೈಗೊಳ್ಳುತ್ತೇವೆ: ಜಿ ಪರಮೇಶ್ವರ್

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡುತ್ತಿದ್ದು, ಒಂದೆಡೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾನ ವಚನ ಸ್ವೀಕಾರ ಮಾಡಿದ್ದಾರೆ. ಇನ್ನೊಂದೆಡೆ ಜೆಡಿಎಸ್- ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ.

    ಈ ಕುರಿತು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ರಾಜ್ಯಪಾಲರು ಮತ್ತು ಸುಪ್ರೀಂ ಕೋರ್ಟ್ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಬಿಜೆಪಿಯವರು ಬಹುಮತ ಸಾಧಿಸಿದ್ದೇವೆ ಅಂತ ಹೇಳುತ್ತಿದ್ದಾರೆ. ನಮ್ಮಲ್ಲೂ ಎರಡು ಪಕ್ಷ ಸೇರಿದಾಗ ಸಂಖ್ಯಾಬಲ ಜಾಸ್ತಿಯಾಗುತ್ತದೆ. ಹೀಗಾಗಿ ಎರಡೂ ಪಕ್ಷದವರೂ ಕೂಡ ಲಿಖಿತ ಪತ್ರದ ಮೂಲಕ ತಿಳಿಸಿದ್ದೆವು. ಈ ವೇಳೆ ಸಂವಿಧಾನಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ರಾಜ್ಯಪಾಲರು ನಮಗೆ ಆಶ್ವಾಸನೆ ಕೊಟ್ಟಿದ್ರು. ಆದ್ರೆ ಇದೀಗ ರಾಜ್ಯಪಾಲರು 104 ಜನ ಇದ್ರು ಕೂಡ ಯಡಿಯೂರಪ್ಪನವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನವರು ಸೇರಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಆ ಬಳಿಕ ನಾವು ಕಾನೂನಾತ್ಮಕವಾಗಿ ಹೋರಾಟಕ್ಕೆ ಕ್ರಮಕೈಗೊಳ್ಳುತ್ತೇವೆ.

    ಅವರಿಗೆ 15 ದಿನ ಕಾಲಾವಕಾಶ ನೀಡಿದ್ದಾರೆ. ಈ 15 ದಿವಸದೊಳಗೆ ಅವರು ನಮ್ಮವರನ್ನು ಹಾಗೂ ನಮ್ಮ ಶಾಸಕರನ್ನು ಅವರು ಕರೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಂತ ಅವರು ಹೇಳಿದ್ರು.

    ಚುನಾವಣಾ ಫಲಿತಾಂಶಕ್ಕೂ ಮೊದಲೇ ತಾನೇ ಸಿಎಂ ಆಗುವುದು ಅಂತ ಹೇಳುತ್ತಿದ್ದ ಬಿಎಸ್‍ವೈ ಯಡಿಯೂರಪ್ಪ ಅವರು ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಗಳಿಸಿದ್ರೂ, ಜೆಡಿಎಸ್- ಕಾಂಗ್ರೆಸ್ ಮೈತ್ರಿಯ ಕಾರಣದಿಂದ ಸಾಧ್ಯವಾಗಿಲ್ಲ. ಆದ್ರೂ ಇಂದು ಬಿಎಸ್ ವೈ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ಇದೀಗ ಕಾಂಗ್ರೆಸ್ಸಿಗೆ ಭಾರೀ ಹೊಡೆತವೇ ಬಿದ್ದಿದೆ.

  • ವಿಕಾಸಸೌಧದ ಎದುರು ಕಾಂಗ್ರೆಸ್, ಜೆಡಿಎಸ್ ನಿಂದ ಪ್ರತಿಭಟನೆ

    ವಿಕಾಸಸೌಧದ ಎದುರು ಕಾಂಗ್ರೆಸ್, ಜೆಡಿಎಸ್ ನಿಂದ ಪ್ರತಿಭಟನೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರು ವಿಕಾಸ ಸೌಧದ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

    ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್‍ನಲ್ಲಿದ್ದು, ಸುಮಾರು 8 ಗಂಟೆಗೆ ಈಗಲ್ ಟನ್ ರೆಸಾರ್ಟ್ ನಿಂದ ಹೊರಡಲಿದ್ದಾರೆ. ಕಾಂಗ್ರೆಸ್ ಶಾಸಕರು ಇಂದು ಮುಂಜಾನೆ ಎದ್ದು ಪ್ರತಿಭಟನೆಗೆ ರೆಡಿಯಾಗುತ್ತಿದ್ದಾರೆ. ಶಾಸಕರನ್ನು ಕರೆದೊಯ್ಯಲು ಎರಡು ಬಸ್ ಆಗಮಿಸಿದೆ.

    ಜೆಡಿಎಸ್ ಶಾಸಕರು ಹೋಟೆಲ್ ಶಾಂಗ್ರಿಲಾದಲ್ಲಿ ತಮ್ಮ ರಾತ್ರಿಯನ್ನು ಕಳೆದಿದ್ದು, ತಡರಾತ್ರಿವರೆಗೂ ಸುಪ್ರೀಂಕೋರ್ಟ್ ಬೆಳವಣಿಗೆಗಳನ್ನ ಗಮನಿಸಿದ್ದಾರೆ. ಬಿಎಸ್ ವೈ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಪ್ರತಿಭಟನೆ ಮಾಡಲು ಜೆಡಿಎಸ್ ನಿರ್ಧರಿಸಿದೆ. ನಂತರ ಶಾಂಗ್ರಿಲಾದಿಂದ ಬೇರೆ ರೆಸಾರ್ಟ್‍ಗೆ ಜೆಡಿಎಸ್ ಶಾಸಕರು ಶಿಫ್ಟ್ ಆಗಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಈಗಾಗಲೇ ಶಾಸಕರನ್ನ ಕರೆದೊಯ್ಯಲು ಶಾಂಗ್ರಿಲಾ ಮುಂದೆ ಬಸ್ ಕೂಡ ಬಂದು ನಿಂತಿದೆ. ಅಲ್ಲದೆ ಬಟ್ಟೆ ಬರೆ ರೆಡಿ ಮಾಡಿಟ್ಟುಕೊಳ್ಳುವಂತೆ ಜೆಡಿಎಸ್ ಶಾಸಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

  • ರಾಜಕೀಯ ಸ್ವರೂಪ ಪಡೆದ ಪೋಕ್ಸೋ ಕೇಸ್ – ಹಿಂಸೆಗೆ ಕುಮ್ಮಕ್ಕು ನೀಡಿದ್ರಾ ಕಾಂಗ್ರೆಸ್ ನಾಯಕಿ!

    ರಾಜಕೀಯ ಸ್ವರೂಪ ಪಡೆದ ಪೋಕ್ಸೋ ಕೇಸ್ – ಹಿಂಸೆಗೆ ಕುಮ್ಮಕ್ಕು ನೀಡಿದ್ರಾ ಕಾಂಗ್ರೆಸ್ ನಾಯಕಿ!

    ಚಿತ್ರದುರ್ಗ: ಅತ್ಯಾಚಾರ ಆರೋಪ ಪ್ರಕರಣವೊಂದು ರಾಜಕೀಯ ಸ್ವರೂಪ ಪಡೆದು ಹಿಂಸೆಗೆ ತಿರುಗಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

    ಅಪ್ರಾಪ್ತ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಕಾಂಗ್ರೆಸ್ ನಾಯಕಿ ಮುನಿರಾ ಎಂಬವರು ಪೊಲೀಸರ ಮೇಲೆ ಕಲ್ಲು ತೂರುವಂತೆ ಪ್ರತಿಭಟನಾಗಾರರಿಗೆ ಪ್ರಚೋದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 200ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆಗ ಇನ್ನಷ್ಟು ಆಕ್ರೋಶಗೊಂಡ ಯುವಕರು, ಸರ್ಕಾರಿ ಬಸ್, ಆಂಬ್ಯುಲನ್ಸ್, ಪೊಲೀಸರ ವಾಹನ, ಬೈಕ್‍ಗಳ ಮೇಲೆ ಕಲ್ಲುಗಳನ್ನು ತೂರಿದ್ದಾರೆ.

    ಪ್ರಚೋದನೆ ನೀಡಿದ್ದ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಮುನಿರಾ ಸೇರಿದಂತೆ 150ಕ್ಕೂ ಹೆಚ್ಚು ಜನರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

  • ಆಸಿಫಾ ಅತ್ಯಾಚಾರ ಖಂಡಿಸಿ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಉದಯಗಿರಿಯಲ್ಲಿ ನಿಷೇಧಾಜ್ಞೆ

    ಆಸಿಫಾ ಅತ್ಯಾಚಾರ ಖಂಡಿಸಿ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಉದಯಗಿರಿಯಲ್ಲಿ ನಿಷೇಧಾಜ್ಞೆ

    ಮೈಸೂರು: ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಆಸಿಫಾ ಅತ್ಯಾಚಾರ ಘಟನೆ ಖಂಡಿಸಿ ಜಿಲ್ಲೆಯ ಉದಯಗಿರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಗರ ಪೊಲೀಸ್ ಆಯುಕ್ತರು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

    ಕಲ್ಲು ತೂರಾಟ ವೇಳೆ ಎಂಟು ಮಂದಿಗೆ ಗಾಯವಾಗಿದ್ದು, ಘಟನೆಯಲ್ಲಿ ಎಸ್‍ಐ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಸದ್ಯ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ.

    ನಡೆದಿದ್ದು ಏನು?
    ಇಂದು ನಗರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದ ಸಂಘಟನೆ ಬಳಿಕ ಮಧ್ಯಾಹ್ನದ ವೇಳೆಗೆ ಬಂದ್ ಗೆ ಕರೆ ನೀಡಿದೆ. ಅಲ್ಲದೇ ಒತ್ತಾಯ ಪೂರ್ವಕವಾಗಿ ನಗರದ ಅಂಗಡಿ ಮುಂಗಟ್ಟು ಮುಚ್ಚಲು ಯತ್ನಿಸಿದ್ದ ವೇಳೆ ಮಾಲೀಕರ ಜೊತೆ ವಾಗ್ವಾದ ನಡೆದಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ತರಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಆದರೆ ಈ ವೇಳೆ ಏಕಾಏಕಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ.

    ಘಟನೆ ಬಳಿಕ ಮಾಹಿತಿ ಪಡೆದ ಹಿಂದೂ ಸಂಘಟನೆಯ ಹಲವು ಕಾರ್ಯಕರ್ತರು ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಘಟನೆಗೆ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದ ಎಸ್‍ಡಿಪಿಐ ಸಂಘಟನೆ ಕಾರಣ ಎಂದು ಆರೋಪಿಸಿದರು.

    ಪ್ರತಿಭಟನೆ ನಡೆಸುವ ಹೆಸರಿನಲ್ಲಿ ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಈ ಹಿಂದೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದ ವೇಳೆ ಎಲ್ಲಿಯೂ ಪ್ರತಿಭಟನೆ ನಡೆಸಿರಲಿಲ್ಲ. ಆಗ ಇವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.