Tag: ಪ್ರತಿಭಟನೆ

  • ಕರ್ನಾಟಕ ಬಿಟ್ಟು ವಿಶ್ವದಾದ್ಯಂತ ಕಾಳಾ ತೆರೆಗೆ – ಬೆಂಗಳೂರಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಕನ್ನಡಿಗರ ತಡೆ

    ಕರ್ನಾಟಕ ಬಿಟ್ಟು ವಿಶ್ವದಾದ್ಯಂತ ಕಾಳಾ ತೆರೆಗೆ – ಬೆಂಗಳೂರಲ್ಲಿ ಮಧ್ಯರಾತ್ರಿ ಪ್ರದರ್ಶನಕ್ಕೆ ಕನ್ನಡಿಗರ ತಡೆ

    ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಾಳಾ ಕರಿಕಾಳನ್ ಸಿನಿಮಾ ರಿಲೀಸ್ ಗೆ ಬಿಡುಗಡೆಗೆ ರಾಜ್ಯದಲ್ಲಿ ಬ್ರೇಕ್ ಬಿದ್ದಿದೆ. ಆದ್ರೆ ವಿಶ್ವದಾದ್ಯಂತ ಕಾಳಾ ಸಿನಿಮಾ ರಿಲೀಸ್ ಆಗಿದ್ದು, ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.

    ಬೆಂಗಳೂರಿನ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

    ರಾತ್ರಿ ನಗರದ ಲಾಲ್‍ಭಾಗ್ ರಸ್ತೆಯ ಊರ್ವಶಿ ಚಿತ್ರಮಂದಿರದ ಎದುರು ಕನ್ನಡಪರ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ರು.. ಚಿತ್ರ ಪ್ರದರ್ಶನ ರದ್ದುಗೊಳಿಸಬೇಕು. ಕಾವೇರಿ ನಮ್ಮದು. ನಮಗೆ ತಮಿಳು ಚಿತ್ರಗಳ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಮಧ್ಯೆ ಕಾಳಾ ಬೆಳಗಿನ ಪ್ರದರ್ಶನದ ಟಿಕೆಟ್ ನೀಡಲಾಗ್ತಿದೆ ಎಂಬ ಮಾಹಿತಿ ಹರಿದಾಡ್ತಿದ್ದ ಹಿನ್ನೆಲೆ ಚಿತ್ರದ ಕೆಲ ಅಭಿಮಾನಿಗಳು ಊರ್ವಶಿ ಚಿತ್ರಮಂದಿರದ ಎದುರು ಜಮಾಯಿಸಿದ್ರು.

    ಇದೇ ವೇಳೆ ಪ್ರತಿಭಟನಾಕಾರರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕ-ಮಕಿ ಸಹ ನಡೆಯಿತು. ಯಾವುದೇ ಕಾರಣಕ್ಕೂ ಕಾಳಾ ಚಿತ್ರವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಒಂದು ವೇಳೆ ಚಿತ್ರ ಮಂದಿರದ ಮಾಲೀಕರು ಕಾಳಾ ಚಿತ್ರ ಪ್ರದರ್ಶಿಸುವ ಧೈರ್ಯ ತೆಗೆದುಕೊಂಡರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ರು ಎಲ್ಲರನ್ನೂ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿ ಚಿತ್ರಮಂದಿರದ ಗೇಟ್ ಮುಚ್ಚಿಸಿದ್ರು.

  • ಕನ್ನಡ ಅಭಿಮಾನವಿಲ್ಲದ ಜಮೀರ್ ಕರ್ನಾಟಕದಿಂದ ತೊಲಗಲಿ: ಕನ್ನಡಿಗರ ಆಕ್ರೋಶ

    ಕನ್ನಡ ಅಭಿಮಾನವಿಲ್ಲದ ಜಮೀರ್ ಕರ್ನಾಟಕದಿಂದ ತೊಲಗಲಿ: ಕನ್ನಡಿಗರ ಆಕ್ರೋಶ

    ಬೆಂಗಳೂರು: ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.

    ಚಾಮರಾಜಪೇಟೆ ಕ್ಷೇತ್ರದ ಕಾಂಗ್ರಸ್ ಶಾಸಕ ಜಮೀರ್ ಅಹ್ಮದ್ ನೂತನ ಸಚಿವರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬದಲು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ನ 25 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ಅದರಲ್ಲಿ 24 ಶಾಸಕರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದ ಸಚಿವ ಜಮೀರ್ ಅಹ್ಮದ್ ರನ್ನು ನಾಡದ್ರೋಹಿ. ಅವರಿಗೆ ಕನ್ನಡದ ಬಗ್ಗೆ ಯಾವ ಕಾಳಜಿಯು ಇಲ್ಲ, ಕರ್ನಾಟಕದಲ್ಲಿ ರಾಜಕಾರಣ ಮಾಡಲು ಯೋಗ್ಯರಲ್ಲ. ಕರ್ನಾಟಕದವರೇ ಆಗಿದ್ದು ಕನ್ನಡ ಅಭಿಮಾನವಿಲ್ಲದ ಜಮೀರ್ ರವರು ಕರ್ನಾಟಕದಿಂದ ತೊಲಗಲಿ ಎಂದು ಬರೆದು ಟೀಕಿಸಿದ್ದಾರೆ.

  • ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ವಾಹನಗಳಿಗೆ ಬೆಂಕಿ! ಪರಿಸ್ಥಿತಿ ಉದ್ವಿಗ್ನ

    ಲಕ್ನೋ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಖಾಲಿ ಮಾಡುವಂತೆ ಹೇಳಿದ್ದಕ್ಕೆ, ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಿದೆ.

    sಅಲಹಾಬಾದ್ ವಿಶ್ವವಿದ್ಯಾನಿಲಯದ ಅಧಿಕಾರಿ ರಾಮ್ ಸೇವಕ್ ಸುಬೇರವರು ಹಾಸ್ಟೆಲ್‍ನ ವಿದ್ಯಾರ್ಥಿಗಳಿಗೆ ತಮ್ಮ ಕೊಠಡಿಗಳನ್ನು ಖಾಲಿ ಮಾಡುವಂತೆ ಸೋಮವಾರ ತಿಳಿಸಿದ್ದರು. ಒಂದು ವಾರದೊಳಗೆ ತಮ್ಮ ಎಲ್ಲಾ ವಸ್ತುಗಳ ಸಮೇತ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಪೊಲೀಸರ ಸಹಾಯದಿಂದ ಜೂನ್ 12ರಂದು ಹೊರಹಾಕಲಾಗುತ್ತದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಹಾಸ್ಟೆಲ್‍ನ ವಿದ್ಯಾರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ಮಧ್ಯಾಹ್ನ ಯೂನಿಯನ್ ಆವರಣದ ಬಳಿ ವಿಶ್ವವಿದ್ಯಾನಿಲಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿದೆ. ಆವರಣದಿಂದ ಹೊರಗಡೆ ಬಂದ ಪ್ರತಿಭಟನಾಕಾರರು ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಶಸ್ತ್ರ ಮೀಸಲು ಪಡೆ ತಂಡ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಇವರು ಪ್ರತಿಭಟನಾಕಾರನ್ನು ಬೆನ್ನಟ್ಟಿ ಚದುರಿಹೋಗುವಂತೆ ಮಾಡಿದ್ದಾರೆ. ಅಲ್ಲದೇ ಹಾಸ್ಟೆಲ್‍ನಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಪ್ರತಿಭಟನೆ ನಡೆಸಿದ ಎಲ್ಲಾ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಅಲಹಾಬಾದ್ ಎಸ್ಪಿ ಬ್ರಿಜೇಶ್ ಶ್ರೀವತ್ಸವ್‍ರವರು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಶೀಘ್ರವೇ ಬಂಧಿಸಲಾಗುವುದೆಂದು ತಿಳಿಸಿದ್ದಾರೆ. ಈ ಗಲಭೆಯಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಸಂಪೂರ್ಣ ಜಖಂಗೊಂಡಿದ್ದು, ಪೊಲೀಸ್ ಜೀಪ್ ಮತ್ತು ಬೈಕ್‍ಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ವಿಶ್ವವಿದ್ಯಾನಿಲಯವು ಅಲಹಾಬಾದ್ ಹೈಕೋರ್ಟ್ ನಿರ್ದೇಶನದಂತೆ ಹಲವು ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರಹಾಕಿತ್ತು. ಈ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್ ಸೇರಿದ ವಸ್ತುಗಳಿಗೆ ಹಾನಿಮಾಡಿ ಹೋಗಿದ್ದರು. ಈ ವರ್ಷ ಪುನಃ ಅದೇ ರೀತಿ ತೊಂದರೆ ಆದರೆ ಕ್ರಮ ಕೈಗೊಳ್ಳಲಾಗುತ್ತದೆ ವಿವಿ ತಿಳಿಸಿತ್ತು ಎಂದು ತಿಳಿದು ಬಂದಿದೆ.

  • ಗಮನಿಸಿ.. ನಾಳೆ ಮಧ್ಯಾಹ್ನದಿಂದ ನಮ್ಮ ಮೆಟ್ರೋ ಓಡಾಟ ಡೌಟ್

    ಗಮನಿಸಿ.. ನಾಳೆ ಮಧ್ಯಾಹ್ನದಿಂದ ನಮ್ಮ ಮೆಟ್ರೋ ಓಡಾಟ ಡೌಟ್

    ಬೆಂಗಳೂರು: ಮೆಟ್ರೋದಲ್ಲಿ ಓಡಾಡೋರಿಗೊಂದು ಬ್ಯಾಡ್ ನ್ಯೂಸ್. ಹೈಕೋರ್ಟ್ ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆಯನ್ನು ಬಗೆಹರಿಸದಿದ್ದರೆ ಸೋಮವಾರ ಮಧ್ಯಾಹ್ನದಿಂದ ಮೆಟ್ರೋ ಬಂದ್ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.

    ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆ ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆಯಿಂದ ನಮ್ಮ ಮೆಟ್ರೋ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದಾರೆ. ಈ ಹಿಂದೆನೂ ಮೆಟ್ರೋ ಸಿಬ್ಬಂದಿ ಪ್ರತಿಭಟನೆಗೆ ಕರೆ ಕೊಟ್ಟಾಗ ಹೈಕೋರ್ಟ್ ಮಧ್ಯೆ ಪ್ರವೇಶಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಹೇಳಿತ್ತು.

    ಕೋರ್ಟ್ ಕೊಟ್ಟ ಗಡುವು ಮುಗಿದರೂ ಬಿಎಂಆರ್ ಸಿಎಲ್ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಇದರಿಂದ ನೌಕರರ ಸಂಘ ನಾಳೆ(ಸೋಮವಾರ) ಮತ್ತೆ ಬಂದ್ ಗೆ ಕರೆ ಕೊಟ್ಟಿದೆ. ಆದ್ರೆ ಪ್ರತಿಭಟನೆಗೆ ಭಾಗಿಯಾಗಲ್ಲ ಅಂತ ಶನಿವಾರವೇ ಅಧಿಕಾರಿಗಳು ನೌಕರರಿಂದ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ಅಧಿಕಾರಿಗಳ ದೌರ್ಜನ್ಯಕ್ಕೆ ನಾವು ಬಗ್ಗಲ್ಲ ನಾಳೆ 900 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಬಂದ್ ನಡೆಸುತ್ತೇವೆ ಅಂತ ನೌಕರರ ಸಂಘ ಹೇಳಿದೆ.

    ಈ ಮಧ್ಯೆ ಪ್ರತಿಭಟನೆಗೆ ಇಳಿದರೆ ಅಮಾನತು ಮಾಡುವುದಾಗಿ ಮೆಟ್ರೋ ಸಿಬ್ಬಂದಿಗೆ ಬಿಎಂಆರ್ ಸಿಎಲ್ ಎಚ್ವರಿಕೆ ರವಾನಿಸಿದೆ.

    ಬೆಳಗ್ಗೆ ಮೆಟ್ರೋ ಸಂಚಾರವಿದೆ:
    ಸೋಮವಾರ ಬೆಳಗ್ಗೆ ಹೈಕೋರ್ಟ್‍ನಲ್ಲಿ ಮೆಟ್ರೋ ಎಸ್ಮಾದ ಕುರಿತು ವಿಚಾರಣೆ ನಡೆಯಲಿದ್ದು, ಪ್ರಕರಣ ವಿಚಾರಣೆ ಮುಗಿದ ಬಳಿಕ ಪ್ರತಿಭಟನೆಗೆ ಮೆಟ್ರೋ ನೌಕಕರ ಸಂಘ ನಿರ್ಧಾರ ಮಾಡಲಿದೆ. ಹಾಗಾಗಿ ನಾಳೆ ಬೆಳಗ್ಗೆ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ. ಹೈಕೋರ್ಟ್ ಕೇಸ್ ಮುಗಿದ ಬಳಿಕ ಮಧ್ಯಾಹ್ನ ಪ್ರತಿಭಟನೆ ಮುಂದುವರೆಯಲಿದೆ ಎಂದು ಮೆಟ್ರೋ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ್ ಹೇಳಿದ್ದಾರೆ.

  • ಕರ್ನಾಟಕ ಸೇರಿದಂತೆ 7 ರಾಜ್ಯಗಳಿಂದ 10 ದಿನಗಳ ಪ್ರತಿಭಟನೆ- ಜೂನ್ 6ರಂದು ಬೀದಿಗಿಳಿಯಲಿರುವ ರೈತರು

    ಕರ್ನಾಟಕ ಸೇರಿದಂತೆ 7 ರಾಜ್ಯಗಳಿಂದ 10 ದಿನಗಳ ಪ್ರತಿಭಟನೆ- ಜೂನ್ 6ರಂದು ಬೀದಿಗಿಳಿಯಲಿರುವ ರೈತರು

    ಬೆಂಗಳೂರು: ಬೆಳೆದ ಬೆಳೆಗೆ ಸೂಕ್ತ ಬೆಲೆ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಗಾಂಧಿಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಅಂತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

    ಈ ಕುರಿತು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೇಶದಾದ್ಯಂತ 10 ದಿನಗಳ 7 ರಾಜ್ಯಗಳ ರೈತರು ಶುಕ್ರವಾರ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಹೀಗಾಗಿ ಜೂನ್ 6ರಂದು ಕರ್ನಾಟಕ ರೈತರು ಬೀದಿಗೆ ಇಳಿಯಲಿದ್ದಾರೆ. ಇದನ್ನೂ ಓದಿ: ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಜೂನ್ 6ರಂದು ಕರ್ನಾಟಕದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. ರಾಷ್ಟ್ರೀಯ ಕಿಸಾನ್ ಮಹಾಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕರ್ನಾಟಕ ರೈತರ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ದೇಶದ್ಯಾಂತ 130ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ ಅಂದ್ರು. ಇದನ್ನೂ ಓದಿ: ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ರೈತರು ಬೆಳೆದ ತರಕಾರಿ ಹಾಗೂ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರದಿರಲು ನಿರ್ಧರಿಸಿದ್ದಾರೆ. ಆದ್ರೆ ಕರ್ನಾಟಕದ ರೈತರು ಉತ್ಪನ್ನ ಮಾಡುತ್ತಾರೆ. ಸಾಂಕೇತಿಕ ಧರಣಿಗೆ ಬೆಂಬಲ ನೀಡಲಿದ್ದಾರೆ. ಸಾವಿರಾರು ರೈತರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಅಂತ ಅವರು ಹೇಳಿದ್ರು.

  • ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

    ಚಂಡೀಗಢ: ಇಂಧನ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರವ್ಯಾಪಿ ರೈತ ಸಂಘಟನೆಗಳು ಕೈಗೊಂಡಿರುವ ಪ್ರತಿಭಟನೆ ಮೊದಲ ದಿನ ರೈತರು ರಸ್ತೆ ಮೇಲೆ ಹಾಲು ಚಲ್ಲಿ, ತರಕಾರಿ ಹಾಗೂ ಹಣ್ಣುಗಳನ್ನು ಸುರಿದು ಮುಷ್ಕರ ಪ್ರಾರಂಭಿಸಿದ್ದಾರೆ.

    ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. 130 ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ರಸ್ತೆ ತಡೆ ನಡೆಸುವುದಿಲ್ಲ ಹಾಗೂ ಶಾಂತಿಯುತವಾಗಿ ಮುಷ್ಕರ ನಡೆಸುವುದಾಗಿದೆ ಭರವಸೆ ನೀಡಿವೆ.

    ಪಂಜಾಬ್‍ನಲ್ಲಿ ರೈತರು ರಸ್ತೆಗೆ ಹಾಲು ಚಲ್ಲಿದರೆ, ಮಹಾರಾಷ್ಟ್ರದ ನಾಸಿಕ್‍ನಲ್ಲಿ ಟೊಮೊಟೊವನ್ನು ರಸ್ತೆಯ ಮೇಲೆ ಸುರಿದು ಪ್ರತಿಭಟಿಸಲಾಗಿದೆ. ನಾಸಿಕ್ ನಿಂದ ಮುಂಬೈವರೆಗೆ 35 ಸಾವಿರ ರೈತರು ಕಾಲ್ನಡಿ ಮೂಲಕ 180 ಕಿ.ಮೀ. ಕ್ರಮಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನು ಓದಿ: ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಕಾಂಗ್ರೆಸ್‍ನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಹೀಗೆ ಮಾಡುತ್ತಿದ್ದಾರೆ. ಬಿಜೆಪಿ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಹಾಗೂ ಅವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಭೋಪಾಲ್‍ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆ ದೇಶದಲ್ಲಿ ಪ್ರಾರಂಭವಾಗಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

    ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

  • ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

    ಬ್ರೇಕ್ ಫೇಲ್ ಆಗಿ ಪಾದಚಾರಿಗೆ ಗುದ್ದಿ ಅಂಗಡಿಗೆ ನುಗ್ಗಿತು ಬಸ್!

    ಕೊಡಗು: ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ಸೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಘಟನೆ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

     

    ಕುಶಾಲನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್ ವೇಗವಾಗಿ ಬರುತಿತ್ತು. ಬಸ್ ನಿಯಂತ್ರಣ ಕಳೆದುಕೊಂಡಿದೆ ಎನ್ನುವ ವಿಚಾರ ತಿಳಿದು ಜನ ಕೂಡಲೇ ಚದುರಿದ್ದಾರೆ. ಈ ವೇಳೆ ರಾಜೇಶ್ ಪಾರಾಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಬಸ್ ರಾಜೇಶ್ ಗೆ ಗುದ್ದಿದೆ.

    ಬಸ್ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ದಾರಿಯ ಮಧ್ಯದಲ್ಲಿಯೇ ಬಸ್ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಸಾರ್ವಜನಿಕರು ಬಸ್ ಅನ್ನು ಸ್ಥಳಾಂತರಗೊಳಿಸಿದ್ದಾರೆ.

    ಈ ಕುರಿತು ಕುಶಾಲನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್ ಶವವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಬಸ್ ಮಾಲೀಕರು ಆಸ್ಪತ್ರೆಗೆ ಆಗಮಿಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.

  • ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

    ಚಂಡಿಗಢ: ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆಯೊಂದು ಶುಕ್ರವಾರದಿಂದ ದೇಶದಲ್ಲಿ ಕಾಣಿಸಿಕೊಳ್ಳಲಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿವೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

    ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

    ಏನಿದು ಪ್ರತಿಭಟನೆ?

    “ಗ್ರಾಮಗಳು ಮುಚ್ಚಿವೆ ಹಾಗೂ ರೈತರು ರಜೆಯಲ್ಲಿದ್ದಾರೆ” ಎನ್ನುವ ಘೋಷಣೆ ಮೇಲೆ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಪಂಜಾಬ್ ಘಟಕದ ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಪ್ರತಿಭಟನೆ ಮುಂದಾಳತ್ವ ವಹಿಸಿದ್ದಾರೆ.

    ಕೃಷಿ ಭೂಮಿ ಉಳುಮೆ ಮಾಡಲು, ನೀರಾವರಿಗೆ ಇಂಧನದ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ಇಂಧನ ದರ ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 15 ದಿನಗಳಲ್ಲಿ ಡೀಸೆಲ್ ದರ ಗಗನಕ್ಕೆರಿದೆ. ಟ್ರ್ಯಾಕ್ಟರ್, ನೀರಾವರಿ ಹಾಗೂ ಯಂತ್ರೋಪಕರಣ ಚಾಲನೆಗೆ ಡೀಸೆಲ್ ಅಗತ್ಯವಾಗಿದೆ. ದಿನದಿಂದ ದಿನಕ್ಕೆ ಕೃಷಿ ಖರ್ಚು ಹೆಚ್ಚಾಗುತ್ತಿದೆ. ಇಂಧನ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗಿದೆ ಎಂದು ಬಲ್ಬೀರ್ ಸಿಂಗ್ ರಾಜೆವಾಲ್ ಹೇಳಿದ್ದಾರೆ.

    ಪ್ರತಿಭಟನೆಯಿಂದ ರೈತರು ತಾವು ಇರುವಲ್ಲಿಯೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ ಮಾರಬಹುದು. ಇದರಿಂದ ರೈತರು ಲಾಭ ಪಡೆಯುತ್ತಾರೆ ಮತ್ತು ನಗರದ ಜನರು ಕಡಿಮೆ ಬೆಲೆಯಲ್ಲಿ ಹಾಲು ಹಾಗೂ ತರಕಾರಿ ಪಡೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪನ್ನ ಕಡಿಮೆಯಾಗುತ್ತದೆ. ಆಗ ಹಾಲಿನ ಬೆಲೆಯಲ್ಲಿ 7 ರೂ. ಕಡಿಮೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್ ಗೆ 22 ರೂ. ನೀಡಿ ಖರೀದಿಸಿದ ಹಾಲನ್ನು 45 ರೂ. ಮಾರುಕಟ್ಟೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

    ರೈತರು ಟೊಮಾಟೊ ಹಾಗೂ ಕುಂಬಳಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಪ್ರತಿ ಕೆ.ಜಿಗೆ ಕೇವಲ 1 ರೂ., ಈರುಳ್ಳಿ 50 ಪೈಸೆ, 35 ಕೆ.ಜಿ ಕ್ಯಾಪ್ಸಿಕಂಗೆ 25 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವು ರೈತರು ಒಂದು ಲಾಟ್ ಮೆಣಸಿನಕಾಯಿಯನ್ನು 1,700 ರೂ. ಮಾರುತ್ತಾರೆ. ಅದರಲ್ಲಿ ಇಂಧನ ದರ ಹೊರತುಪಡೆಸಿ ಕೃಷಿ ಕಾರ್ಮಿಕರ ಕೂಲಿಯೇ 1,450 ರೂ. ಆಗುತ್ತದೆ ಎಂದು ರಾಜೇವಾಲ್ ಹೇಳಿದರು.

    ಪ್ರತಿಭಟನೆಯಿಂದ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗುತ್ತದೆ, ರೈತರ ಸಾಲ ಮನ್ನಾ, ಕನಿಷ್ಠ ಆದಾಯದ ಭದ್ರತೆ ಸಿಗುತ್ತದೆ. ಭಾರತದ ಎಲ್ಲ ರೈತರು ಒಂದೇ ಕುಟುಂಬದವರು ಒಂದೇ ಧ್ವನಿ ಹೊಂದಿದ್ದಾರೆ. ದೇಶದ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಿವೆ ಎಂದು ರಾಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.

  • ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ – ಅತ್ಯಾಚಾರವೆಸಗಿ ಕೊಲೆ ಆರೋಪ, ಪ್ರತಿಭಟನೆ

    ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ – ಅತ್ಯಾಚಾರವೆಸಗಿ ಕೊಲೆ ಆರೋಪ, ಪ್ರತಿಭಟನೆ

    ವಿಜಯಪುರ: ಮಕ್ಕಳ ಕಳ್ಳರ ಹಾವಳಿ ಮಧ್ಯದಲ್ಲೆ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ವಿದ್ಯಾ ನಗರದ ನಿವಾಸಿ 8 ವರ್ಷದ ಜ್ಯೋತಿ ಕೊರೆ ಶವವಾಗಿ ಪತ್ತೆಯಾದ ಬಾಲಕಿ. ಮಂಗಳವಾರ ಸಾಯಂಕಾಲ 6 ಗಂಟೆಗೆ ಮನೆಯಿಂದ ಆಡಲು ಹೋಗಿದ್ದ ಬಾಲಕಿ ರಾತ್ರಿಯಾದರೂ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡು ಪೋಷಕರು ತಡ ರಾತ್ರಿಯವರೆಗೂ ಹುಡುಕಾಟ ನಡೆಸಿ ನಂತರ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಬುಧವಾರ ಬೆಳಗ್ಗೆ ವಿದ್ಯಾನಗರ ಸಮೀಪದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾಲಕಿ ಜ್ಯೋತಿ ಶವ ಪತ್ತೆಯಾಗಿದೆ. ಸದ್ಯ ಸ್ಥಳದಲ್ಲಿ ಜ್ಯೋತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂದಗಿ ಪಟ್ಟಣದಲ್ಲಿ ಉದ್ದದ ಗಡ್ಡ ಬಿಟ್ಟುಕೊಂಡ ಕೆಲ ಅಪರಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಮಕ್ಕಳ ಕಳ್ಳರು ಬಂದಿದ್ದಾರೆ ಅಂತ ಹಾವಳಿ ಬೆನ್ನಲ್ಲೆ ಬಾಲಕಿ ನಾಪತ್ತೆಯಾಗಿ ಏಕಾಏಕಿ ಶವವಾಗಿ ಪತ್ತೆಯಾಗಿರೋದು ಅನುಮಾನಕ್ಕೆ ಕಾರಣವಾಗಿದೆ.

    ಅನುಮಾನಾಸ್ಪದ ವ್ಯಕ್ತಿಗಳು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಅಸಡ್ಯೆ ತೋರಿದ್ದಾರೆ ಎಂದು ಉದ್ರಿಕ್ತಗೊಂಡ ಜನರು ಸಿಂಧಗಿಯಲ್ಲಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಅಂತ ಪೋಷಕರ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಸವೇಶ್ವರ ವೃತ್ತದಲ್ಲಿ ದಲಿತರ ಸಂಘಟನೆಯವರು ಟಯರ್ ಗೆ  ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.

    ಇನ್ನು ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಂಧಗಿ ಸಿಪಿಐ ದ್ಯಾಮನ್ನವರ್ ತನಿಖೆ ಮುಂದುವರೆಸಿದ್ದಾರೆ.

  • ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ತೂತುಕುಡಿ ತಾಮ್ರ ಘಟಕಕ್ಕೆ ಬೀಗ – 30,000 ಮಂದಿ ಉದ್ಯೋಗಕ್ಕೆ ಕುತ್ತು!

    ಚೆನ್ನೈ: ವೇದಾಂತ ಕಂಪನಿಯ ಸ್ಟೆರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಈ ತೀರ್ಮಾನದಿಂದಾಗಿ ಸುಮಾರು 30 ಸಾವಿರ ಮಂದಿಗೆ ಉದ್ಯೋಗ ಕಳೆದು ಕೊಳ್ಳುವ ಭೀತಿ ಎದುರಾಗಿದೆ.

    ಸರ್ಕಾರವು ಹಠಾತ್ತಾಗಿ ತಾಮ್ರ ಘಟಕವನ್ನು ಮುಚ್ಚುವ ನಿರ್ಧಾರದಿಂದಾಗಿ ಸುಮಾರು 30 ಸಾವಿರ ಮಂದಿ ಉದ್ಯೋಗ ಕಳೆದುಕೊಂಡು, ದೇಶಕ್ಕೆ 200 ಕೋಟಿ ರೂ. ನಷ್ಟವುಂಟಾಗಿದೆ. ಹಾಗೆಯೇ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುವಂತೆ ಮಾಡಿದ್ದಾರೆಂದು ಸ್ಟೆರ್ಲೈಟ್ ಕಂಪನಿಯ ಮುಖ್ಯಸ್ಥ ಪಿ ರಾಮನಾಥ್ ತಿಳಿಸಿದ್ದಾರೆ.

    ಈ ಘಟಕಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಪನ್ಮೂಲಗಳನ್ನು ಪೂರೈಕೆ ಮಾಡುತ್ತಿದ್ದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಲ್ಲಿನ ಸುಮಾರು 30,000 ಮಂದಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

    ತೂತುಕುಡಿ ಘಟಕವು ಸುಮಾರು 40 ಲಕ್ಷ ಟನ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು, ದೇಶದಲ್ಲಿಯೇ ಅತಿಹೆಚ್ಚು ತಾಮ್ರ ಉತ್ಪಾದಿಸುತ್ತಿದ್ದ ಘಟಕವಾಗಿತ್ತು. ವಾರ್ಷಿಕವಾಗಿ ಘಟಕವು 200 ಕೋಟಿಗಳಷ್ಟು ವ್ಯವಹಾರ ನಡೆಸುತ್ತಿತ್ತು. ಕಂಪೆನಿಯು ಇದಲ್ಲದೆ ಪಶ್ಚಿಮ ಭಾರತದಲ್ಲಿ ಫಾಸ್ಪೋರಿಕ್ ಆಮ್ಲ ಘಟಕ, ಸಲ್ಫೂರಿಕ್ ಆ್ಯಸಿಡ್ ಘಟಕ, ತಾಮ್ರ ಘಟಕ ಹಾಗೂ 2 ಬೃಹತ್ ವಿದ್ಯುಸ್ಥಾವರನ್ನು ಹೊಂದಿದೆ.

    ತೂತುಕುಡಿ ಘಟಕದಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆಗಾಗಿ ಕಂಪನಿಯು ಸುಮಾರು 70 ಕೋಟಿ ಬಂಡವಾಳವನ್ನು ಹೂಡಿ 14 ಕೋಟಿ ಹಣವನ್ನು ಖರ್ಚುಮಾಡಿತ್ತು. ಈ ಯೋಜನೆ ಪೂರ್ಣಗೊಂಡಿದ್ದಲ್ಲಿ ಈ ಘಟಕದಲ್ಲಿ ಒಟ್ಟು 80 ಲಕ್ಷ ಟನ್ ತಾಮ್ರ ಉತ್ಪಾದನೆಯಾಗುತಿತ್ತು.

    ತಾಮ್ರ ಘಟಕದಿಂದ ಪರಿಸರದ ಮೇಲೆ ಮಾರಕವಾಗಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಗೋಲಿಬಾರ್‍ಗೆ 13 ಮಂದಿ ಮೃತಪಟ್ಟಿದ್ದರು. ಇದಾದ ನಂತರ ತಮಿಳುನಾಡು ಸರ್ಕಾರ ಸ್ಟೆರ್ಲೈಟ್ ತಾಮ್ರ ಘಟಕವನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನ ಕೈಗೊಂಡಿದೆ.