ಚಿಕ್ಕಬಳ್ಳಾಪುರ: ಕುಡಿಯುವ ನೀರು ನೀಡದ ಕಾರಣಕ್ಕೆ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಗ್ರಾಮದ ಮಹಿಳೆಯರು ಬೀಗ ಜಡಿದ ಘಟನೆ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ನಡೆದಿದೆ.
ಆವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಪಾಳ್ಯ ಗ್ರಾಮದಲ್ಲಿ ಕೊಳವೆ ಬಾವಿ ವೈಫಲ್ಯ ಹಿನ್ನೆಲೆ ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಗ್ರಾಮ ಪಂಚಾಯತ್ ಅಧಿಕಾರಿಗಳು ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರು.

ಈ ಗ್ರಾಮದಲ್ಲಿ ಒಟ್ಟು 1200 ಜನಸಂಖ್ಯೆ ಇದೆ. ಇಡೀ ಗ್ರಾಮದ ಜನರಿಗೆ ಒಂದು ಟ್ಯಾಂಕರ್ ನೀರು ಸಾಕಾಗದ ಹಿನ್ನೆಲೆಯಲ್ಲಿ ಮಹಿಳೆಯರು, ಗ್ರಾಮಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನ ಕಚೇರಿಯಲ್ಲಿ ಕೂಡಿ ಹಾಕಿ ಬೀಗ ಜಡಿದು, ಕುಡಿಯುವ ನೀರು ಕೊಡುವವರೆಗೂ ಬೀಗ ತೆಗೆಯಲ್ಲ ಅಂತ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಮಣಿದ ಗ್ರಾಮ ಪಂಚಾಯತ್ ಅಧಿಕಾರಿಗಳು ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಬಿಡುತ್ತೇವೆ ಎಂದರು. ಅಲ್ಲದೇ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಹೊಸ ಬೋರ್ ವೆಲ್ ಕೊರೆಸಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.



















