Tag: ಪ್ರತಿಭಟನೆ

  • `ಆನೆ ಬೇಡ- ನ್ಯಾಯ ಬೇಕು’- ಆಗುಂಬೆಯಲ್ಲಿ ಪ್ರತಿಭಟನೆ

    `ಆನೆ ಬೇಡ- ನ್ಯಾಯ ಬೇಕು’- ಆಗುಂಬೆಯಲ್ಲಿ ಪ್ರತಿಭಟನೆ

    ಶಿವಮೊಗ್ಗ: ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಇಂದು ಸಂಪೂರ್ಣ ಬಂದ್ ಆಚರಿಸಲಾಗಿದ್ದು, ಸದ್ಯ ವಾಹನ ಸಂಚಾರ ಆರಂಭವಾಗಿದೆ.

    `ಆನೆ ಬೇಡ- ನ್ಯಾಯ ಬೇಕು’ ಎಂದು ಆಗುಂಬೆ ವೃತ್ತದಲ್ಲಿ ಟೈಯರಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಆಗುಂಬೆಯ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಸಕರು ಸ್ಥಳಕ್ಕೆ ಬಂದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.

    ಆನೆ ಹಾವಳಿಯಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಹಲವರು ಗಾಯಾಗೊಂಡಿದ್ದಾರೆ. ಅಷ್ಟೇ ಅಲ್ಲದೇ ಆನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಕ್ರಮ ತೆಗೆದುಕೊಳ್ಳವಂತೆ ಮನವಿ ಮಾಡಿದ್ದರು. ಇದುವರೆಗೂ ಯಾವುದೇ ರೀತಿಯ ಪರಿಹಾರವನ್ನು ನೀಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ದೂರಿದ್ದರು.

    ಪ್ರತಿಭಟನೆಯಲ್ಲಿ ಆಗುಂಬೆ ಹಾಗೂ ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಪಾಲ್ಗೊಂಡಿದ್ದರು. ಇದರಿಂದ ಸೊಲ್ಲಾಪುರ-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರಣ ನೂರಾರು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಶಾಸಕರು ಬಂದು ಭರವಸೆ ನಿಡಿದ ಬಳಿಕ ಬಂದ್ ಕೈ ಬಿಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಿನ್ಸಿಪಾಲ್ ವರ್ಗಾವಣೆ ಖಂಡಿಸಿ ಶಾಲಾ ಮಕ್ಕಳಿಂದ ಪ್ರತಿಭಟನೆ

    ಪ್ರಿನ್ಸಿಪಾಲ್ ವರ್ಗಾವಣೆ ಖಂಡಿಸಿ ಶಾಲಾ ಮಕ್ಕಳಿಂದ ಪ್ರತಿಭಟನೆ

    ಹಾವೇರಿ: ಮುಖ್ಯೋಪಾಧ್ಯಾಯರ ವರ್ಗಾವಣೆಗೆ ವಿರೋಧಿಸಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರಕಾರಿ ಪ್ರೌಢಶಾಲೆ ಹೆಡ್ ಮಾಸ್ಟರ್ ಆಗಿ ಆರ್ ಮಂಜಪ್ಪ ಕಾರ್ಯನಿಹಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ಮಂಜಪ್ಪ ಶಾಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ರೆ ಇದೀಗ ಅವರು ಇಚ್ಚಂಗಿಯಿಂದ ಹಾವೇರಿಗೆ ವರ್ಗಾವಣೆಗೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಹೆಡ್ ಮಾಸ್ಟರ್ ಮಂಜಪ್ಪರನ್ನು ಶಾಲೆಯಲ್ಲೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

    ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನು ಓದಿ: ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

  • ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಗುರುವಾರ ಕರೆ ನೀಡಿದ್ದ 13 ಜಿಲ್ಲೆಗಳ ಬಂದ್‍ಗೆ ಒಮ್ಮತ ಮೂಡದ ಕಾರಣ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

    ಬಂದ್ ಆಚರಣೆ ವಿಷಯದಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳ ಮಧ್ಯೆಯೇ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಮುಖಂಡರ ಜೊತೆಗೆ ಮಹದಾಯಿ ಹೋರಾಟಗಾರರೂ ಕೂಡ ಬಂದ್‍ನಿಂದ ದೂರ ಸರಿದಿದ್ದಾರೆ. ಮುಖ್ಯಮಂತ್ರಿಗಳು ನಿನ್ನೆ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕೂಡ ಬಂದ್ ಹಿಂಪಡೆಯಲು ಬಯಸಿದೆ.

    ಇದರ ನಡುವೆ ಉತ್ತರ ಕರ್ನಾಟಕ ರೈತ ಸಂಘ ಮಾತ್ರ ನಾಳೆ ಬಂದ್ ಆಚರಿಸುವುದಾಗಿ ಘೋಷಿಸಿತ್ತು. ಆದರೆ, ಸಂಜೆ ವೇಳೆಗೆ ಬಹುತೇಕ ಸಂಘಟನೆಗಳು ಬಂದ್ ವಾಪಸ್ ಪಡೆದಿರುವುದಾಗಿ ಘೋಷಿಸಿದವು. ಬಂದ್ ಬದಲಾಗಿ ನಾಳೆ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿವೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಸಹ ನಾಳೆ ಯಾವುದೇ ಕಾರಣಕ್ಕೂ ಬಂದ್ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

    ಒಮ್ಮತ ಮೂಡದಿರಲು ಕಾರಣವೇನು?
    ನಾಳಿನ ಬಂದ್ ಆಚರಣೆ ವಿಚಾರದಲ್ಲಿ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರಲ್ಲೇ ಭಿನ್ನಮತಕ್ಕೆ ಉಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ನೋಡುವುದಾದರೆ ಹೈದರಬಾದ್ ಕರ್ನಾಟಕದ ಸವಲತ್ತನ್ನು ಮುಂಬೈ ಕರ್ನಾಟಕ ಪಡೆದ ಆರೋಪವಿದೆ. ಈ ಹಿಂದೆ ಹೈ-ಕ ಹೋರಾಟಕ್ಕೆ ಮುಂಬೈ ಕರ್ನಾಟಕ ಸ್ಪಂದಿಸಿರಲಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದೆ. ಹೈದ್ರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ವಿರೋಧಿಸಿ ಮುಂಬೈ ಕರ್ನಾಟಕ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ವೇಳೆಯೂ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರ ನಡುವೆ ಘರ್ಷಣೆ ನಡೆದಿತ್ತು.

    ಪರ-ವಿರೋಧ ಪ್ರತಿಭಟನೆ: ಬಂದ್ ವಿಚಾರದಲ್ಲಿ ಅಪಸ್ವರ ವ್ಯಕ್ತವಾಗಿದ್ದರ ಬೆನ್ನಲ್ಲೇ ರಾಜ್ಯ ಹಲವೆಡೆ ಪರ-ವಿರೋಧ ಪ್ರತಿಭಟನೆಗಳೂ ನಡೆದಿವು. ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿಸಿದವು. ಮತ್ತೊಂದೆಡೆ ಪ್ರತ್ಯೇಕ ರಾಜ್ಯ ಒತ್ತಾಯವನ್ನು ವಿರೋಧಿಸಿ ದಾವಣಗೆರೆ ಹಾಗೂ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

  • ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

    ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

    ಮೈಸೂರು: ಜಿಲ್ಲೆಯ ಟಿ.ನರಸೀಪುರದ ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಗ್ರಾಮಸ್ಥರೇ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪುರಾತತ್ವ ಇಲಾಖೆಯ ವಿರುದ್ಧ ಅನಿರ್ಧಿಷ್ಟ ಪ್ರತಿಭಟನೆ ಆರಂಭಿಸಿದ್ದು, ದೇಗುಲದ ಮುಂಭಾಗವೇ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಬಂದ ಹಣವನ್ನ ಬಿಡುಗಡೆ ಮಾಡಿಲ್ಲ. ಮನೆ ನಿರ್ಮಾಣಕ್ಕೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

    ದೇಗುಲದ ಸುತ್ತಲಿನ ಯಾವುದೇ ದಿಕ್ಕಿನಲ್ಲಿ 100ಮೀ. ವ್ಯಾಪ್ತಿಯಲ್ಲಿ ಯಾರೂ ಮನೆ ಕಟ್ಟುವಂತಿಲ್ಲ ಎಂದು 2010ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿ. ಆದರೆ 100 ಮೀ. ವ್ಯಾಪ್ತಿಯ ಹೊರತುಪಡಿಸಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇದಕ್ಕೆ ವಿವಿಧ ಯೋಜನೆಯಡಿ ಬಂದ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

    ಸೋಮನಾಥೇಶ್ವರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ಇಂದು ಸಹ ಅನೇಕ ವಿದೇಶಿಗರ ಆಗಮನವಾಗಿದೆ. ಆದರೆ ಗೇಟ್‍ಗೆ ಬೀಗ ಹಾಕಿರುವುದನ್ನ ಕಂಡು ವಾಪಾಸ್ ಹೋಗುತ್ತಿದ್ದಾರೆ.

  • ಶ್ರೀರಾಮುಲು ಫೋಟೋಗೆ ಹಾಲು, ಕುಂಕುಮ, ಅರಿಶಿಣ ಅಭಿಷೇಕ – ಇನ್ನೊಂದಕ್ಕೆ ಸಗಣಿ, ಪೊರಕೆ ಸೇವೆ

    ಶ್ರೀರಾಮುಲು ಫೋಟೋಗೆ ಹಾಲು, ಕುಂಕುಮ, ಅರಿಶಿಣ ಅಭಿಷೇಕ – ಇನ್ನೊಂದಕ್ಕೆ ಸಗಣಿ, ಪೊರಕೆ ಸೇವೆ

    ರಾಮನಗರ: ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಶಾಸಕ ಶ್ರೀರಾಮುಲು ವಿರುದ್ಧ ಚನ್ನಪಟ್ಟಣದಲ್ಲಿ ಇಂದು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

    ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಚರ್ಚ್ ರಸ್ತೆಯಲ್ಲಿ ಶಾಸಕ ಶ್ರೀರಾಮುಲು ಅವರ ಎರಡು ಭಾವಚಿತ್ರಗಳನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ.

    ಒಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ, ಕುಂಕುಮ ಮತ್ತು ಅರಿಶಿಣ ಅಭಿಷೇಕ ಮಾಡಿ ಜೈಕಾರ ಹಾಕಿದ್ದಾರೆ. ನಂತರ ಮತ್ತೊಂದು ಭಾವಚಿತ್ರಕ್ಕೆ ಸಗಣಿ ನೀರು ಸುರಿದು ಪೊರಕೆ ಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಖಂಡ ಕರ್ನಾಟಕಕ್ಕೆ ಒತ್ತು ನೀಡಿ ರಾಜ್ಯವನ್ನ ಇಬ್ಬಾಗ ಮಾಡದಿದ್ದರೆ ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕುತ್ತೇವೆ. ರಾಜ್ಯವನ್ನ ಇಬ್ಬಾಗ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ನೇರವಾಗಿಯೇ ಸಗಣಿ ನೀರನ್ನ ಹಾಕಿ ಪೊರಕೆ ಸೇವೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಮಹಾರಾಷ್ಟ್ರದ ಮರಾಠ ಮೀಸಲು ಹೋರಾಟಕ್ಕೆ ಬೆಂಬಲ ಸೂಚಿಸಿ ವ್ಯಕ್ತಿ ಆತ್ಮಹತ್ಯೆ

    ಮಹಾರಾಷ್ಟ್ರದ ಮರಾಠ ಮೀಸಲು ಹೋರಾಟಕ್ಕೆ ಬೆಂಬಲ ಸೂಚಿಸಿ ವ್ಯಕ್ತಿ ಆತ್ಮಹತ್ಯೆ

    ಮುಂಬೈ: ಮರಾಠ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ, ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದಿದೆ.

    ಪ್ರಮೋದ್ ಜೈಸಿಂಗ್ ಹೋರೆ (35) ಆತ್ಯಹತ್ಯೆ ಮಾಡಿಕೊಂಡ ವ್ಯಕ್ತಿ. ಮರಾಠ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿ, ಪ್ರಮೋದ್ ಚಲಿಸುತ್ತಿದ್ದ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಭಾನುವಾರವಷ್ಟೇ ಮೃತ ಪ್ರಮೋದ್, ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ಬೆಂಬಲ ಸೂಚಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಫೇಸ್‍ಬುಕ್ ಮತ್ತು ವಾಟ್ಸಪ್ ನಲ್ಲಿ ಬರೆದುಕೊಂಡಿದ್ದ ಎಂದು ಮುಕುಂಗ್‍ವಾಡಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ನಾಥಾ ಜಾಧವ್ ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಮುಕುಂದವಾಡಿ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಮೋದ್ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಪ್ರಮೋದ್ ಆತ್ಮಹತ್ಯೆಗೂ ಮುನ್ನ ತನ್ನ ಫೇಸ್‍ಬುಕ್ ಹಾಗೂ ವಾಟ್ಸಪ್ ಗಳಲ್ಲಿ “ಇಂದು ಮರಾಠ ಸಮುದಾಯದ ಒಬ್ಬರು ಹೋಗುತ್ತಿದ್ದಾರೆ. ಮರಾಠ ಸಮುದಾಯಕ್ಕೆ ಮೀಸಲಾತಿ ಕೊಡಿ. ಮರಾಠ ಮೀಸಲಾತಿ ಒಂದು ಜೀವವನ್ನು ತೆಗೆದುಕೊಳ್ಳುತ್ತದೆ” ಎಂದು ಬರೆದುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಪೋಸ್ಟ್ ನೋಡಿ ಹಲವಾರು ಸ್ನೇಹಿತರು ಪ್ರಮೋದ್ ಬಳಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಮರುದಿನ ಪ್ರಮೋದ್ ಶವ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.

  • ಕನ್ನಡದ ಬಗ್ಗೆ ನೀವೇನು ಮಾತನಾಡೋದು: ಪ್ರತಿಭಟನೆ ವೇಳೆ ಮಹಿಳೆಯಿಂದ ವಾಟಾಳ್‍ಗೆ ಕ್ಲಾಸ್

    ಕನ್ನಡದ ಬಗ್ಗೆ ನೀವೇನು ಮಾತನಾಡೋದು: ಪ್ರತಿಭಟನೆ ವೇಳೆ ಮಹಿಳೆಯಿಂದ ವಾಟಾಳ್‍ಗೆ ಕ್ಲಾಸ್

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡ ಎಂದು ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿ ಅಪರಿಚಿತ ಮಹಿಳೆಯೊಬ್ಬಳು ಕ್ಲಾಸ್ ತೆಗೆದುಕೊಂಡಿದ್ದಾಳೆ.

    ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಮಹಿಳೆಯೊಬ್ಬಳು ಆಗಮಿಸಿ, ಕನ್ನಡದ ಬಗ್ಗೆ ನೀವೇನು ಮಾತನಾಡೋದು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾಳೆ.

    ನಾನು ಉಪ್ಪಿನ ಸತ್ಯಾಗ್ರಹ ಮಾಡಿದ್ದೀನಿ, ಕರಾಳ ಸತ್ಯಾಗ್ರಹ ಮಾಡಿದ್ದೀನಿ. ಕನ್ನಡದ ಬಗ್ಗೆ ನೀವೇನು ಮಾತನಾಡುವುದು ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಆಕೆಯನ್ನು ಹಿಡಿದು ಹೊರಗಡೆ ಕಳುಹಿಸಲು ಮುಂದಾದ ಬೆಂಬಲಿಗನಿಗೆ ಡೊಂಟ್ ಟಚ್ ಮೈ ಎಂದು ಹೇಳಿದ್ದಾಳೆ.

    ಜೋಳದ ರೊಟ್ಟಿ ಉತ್ತರ ಕರ್ನಾಟಕ, ರಾಗಿ ಮುದ್ದೆ ದಕ್ಷಿಣ ಕರ್ನಾಟಕ ಇದರ ಸಂಕೇತವಾಗಿ ಬಹಿರಂಗವಾಗಿ ಕುಳಿತು ಊಟ ಮಾಡುವ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗನ್ನ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

    ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ನಿಜ. ಆದ್ರೆ ಕರ್ನಾಟಕವನ್ನ ಯಾವುದೇ ಕಾರಣಕ್ಕೂ ಎರಡು ಭಾಗ ಮಾಡಬೇಡಿ. ಅಖಂಡ ಕರ್ನಾಟಕ ಎಲ್ಲರಿಗೂ ಬೇಕಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ನಿಜ. ಈ ಕುರಿತು ಬಿಜೆಪಿಯವರು ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಅವರಿಗೆ ಇಷ್ಟು ದಿನ ಮಹಾದಾಯಿ ವಿಚಾರ ಕುರಿತು ಏಕೆ ಮಾತನಾಡಲಿಲ್ಲ, ಉತ್ತರ ಕರ್ನಾಟಕ ಜನರ ನೋವು ನಿಮಗೆ ಗೊತ್ತಾಗಲ್ವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಇಬ್ಭಾಗ ಮಾಡಿದ್ರೆ ಬೀದರ್ ನಿಂದ ಚಾಮರಾಜನಗರದಿಂದ ಪ್ರತಿಭಟನೆ ಮಾಡ್ತೇವೆ. ನಾಳೆ ಬೆಳಿಗ್ಗೆ ಈ ಬಗ್ಗೆ ಸಭೆ ಸೇರಿ ಅಖಂಡ ಕರ್ನಾಟಕ ಬಂದ್ ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು.

  • ಕಾಲೇಜು ಮುಚ್ಚುವ ಪ್ರಯತ್ನ-ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕಾಲೇಜು ಮುಚ್ಚುವ ಪ್ರಯತ್ನ-ವಿದ್ಯಾರ್ಥಿಗಳಿಂದ ಪ್ರತಿಭಟನೆ

    ತುಮಕೂರು: ಜಿಲ್ಲೆಯ ಕೊರಟೆಗೆರೆ ತಾಲೂಕಿನಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಿದ್ದ ಪಾಲಿಟೆಕ್ನಿಕ್ ಕಾಲೇಜು ಮುಚ್ಚುವ ಸ್ಥಿತಿಯಲ್ಲಿದೆ. ಆದ್ರೆ ದಿಡೀರ್ ಅಂತಾ ಕಾಲೇಜು ಮುಚ್ಚುವದರಿಂದ ತೊಂದರೆ ಆಗುತ್ತಿದೆ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಕಾಲೇಜು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುವ ನೆಪವೊಡ್ಡಿ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಹಾಗಾಗಿ ಪ್ರಥಮ ವರ್ಷದ ಡಿಪ್ಲೋಮಾಗೆ ಪ್ರವೇಶಾತಿ ಪ್ರಕ್ರಿಯೆ ರದ್ದು ಮಾಡಲಾಗಿದೆ. ಇದರ ಜೊತೆಗೆ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೂ ಟಿ.ಸಿ.ಕೊಟ್ಟು ಕಳುಹಿಸಿಲು ಮುಂದಾಗಿದೆ. ಪರಿಣಾಮ ಪರೀಕ್ಷೆ ಬರೆಯಬೇಕಿದ್ದ ಸುಮಾರು 120 ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ 30 ಜನ ಸಿಬ್ಬಂದಿಗಳ ಭವಿಷ್ಯವೂ ಡೋಲಾಯಮಾನವಾಗಿದೆ. ಬೇರೆ ಕಾಲೇಜಿಗೆ ಹೋಗೋಣ ಅಂದರೂ ಎಲ್ಲಾ ಕಾಲೇಜುಗಳಲ್ಲಿ ಅಡ್ಮಿಷನ್ ಕ್ಲೋಸ್ ಆಗಿದೆ. ಇದರಿಂದ ವಿದ್ಯಾರ್ಥಿಗಳು ಕಾಲೇಜು ಮುಚ್ಚದಂತೆ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

    ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಮಧುಗಿರಿ ಎ.ಸಿ. ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಯನ್ನು ಸರ್ಕಾರದ ಆದೇಶ ಪುನರ್ ಆರಂಭಿಸುವ ಭರವಸೆ ಕೊಟ್ಟಿದ್ದಾರೆ. ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ ವಿದ್ಯಾರ್ಥಿಗಳು ಜಿಲ್ಲಾಡಳಿತ ನಡುನೀರಿನಲ್ಲಿ ಕೈ ಬಿಡಲಿದೆ ಎಂಬ ಭಯದಿಂದ ಹೋರಾಟ ಮುಂದುವರೆಸಿದ್ದಾರೆ.

  • ಶನಿವಾರ ಪೂರ್ಣಾವಧಿ ಕೆಲಸಕ್ಕೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಚನೆ

    ಶನಿವಾರ ಪೂರ್ಣಾವಧಿ ಕೆಲಸಕ್ಕೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಚನೆ

    ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

    ಸಾರ್ವಜನಿಕರಿಗೆ ತೊಂದರೆ ಆಗದಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದು, ಎಲ್ಲಾ ಸಿಬ್ಬಂದಿ ಶನಿವಾರ ಪೂರ್ಣಾವಧಿ ಕೆಲಸ ಮಾಡಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿದೆ.

    ಪ್ರತಿಭಟನೆ ಏಕೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಬಂದ್‍ಗೆ ಕರೆ ನೀಡಿದೆ. ಬಂದ್ ನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಸೇವೆ ಹೊರತುಪಡಿಸಿ, ಉಳಿದ ಒಪಿಡಿ, ಪ್ರಯೋಗಾಲಯ ಸೇರಿದಂತೆ ವೈದ್ಯಕೀಯ ಸೇವೆ ಅಲಭ್ಯವಾಗಲಿದೆ.

    ಏನಿದು ಎನ್‍ಎಂಸಿ ಮಸೂದೆ?: ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ-2017’ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

  • ಆಸ್ತಿ ವಿಚಾರವಾಗಿ ಮನೆ ಮುಂಭಾಗ ಪ್ರತಿಭಟನೆಗೆ ಕುಳಿತ ಮಾಜಿ ಶಾಸಕರ ಮಗ, ಸೊಸೆ

    ಆಸ್ತಿ ವಿಚಾರವಾಗಿ ಮನೆ ಮುಂಭಾಗ ಪ್ರತಿಭಟನೆಗೆ ಕುಳಿತ ಮಾಜಿ ಶಾಸಕರ ಮಗ, ಸೊಸೆ

    ದಾವಣಗೆರೆ: ಆಸ್ತಿ ವಿಚಾರಕ್ಕೆ ಕುಟುಂಭಸ್ತರು ಹಾಗೂ ಸಹೋದರರು ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಮಾಜಿ ಶಾಸಕರ ಮಗ ಹಾಗೂ ಸೊಸೆ ಮನೆ ಮುಂಭಾಗ ಪ್ರತಿಭಟನೆಗೆ ಕುಳಿತ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣನವರ ಕೊನೆಯ ಮಗ ರುದ್ರಪ್ರಸಾದ್ ಹಾಗೂ ಪತ್ನಿ ಮೇಘಾ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ಸಹೋದರನಿಂದ ಪ್ರಾಣ ಬೆದರಿಕೆ ಇದೆ. ಆಸ್ತಿ ಪಾಲಾದ್ರು ಸಹ ನಮ್ಮ ಪಾಲಿಗೆ ಬಂದ ಆಸ್ತಿಯನ್ನು ದೌರ್ಜನ್ಯ ಮಾಡಿ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಈಗಾಗಲೇ ವಾಸವಿರುವ ಮನೆಗೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನಮಗೆ ಕಿರುಕುಳ ಕೊಟ್ಟಿದಲ್ಲದೆ, ನಾವು ಓಡಾಡುವ ಗೇಟ್ ಗೆ ವೆಲ್ಡಿಂಗ್ ಮಾಡಿದ್ದಾರೆ. ಇದನ್ನು ಕೇಳಲು ಹೋದ್ರೆ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ನಮಗೆ ರಕ್ಷಣೆ ಕೋರಿದ್ರು ಪೊಲೀಸ್ ಇಲಾಖೆಯಿಂದಲೂ ಸಹ ಯಾವುದೇ ಸಹಾಯ ಸಿಗುತ್ತಿಲ್ಲ. ಹಾಗಾಗಿ ರಕ್ಷಣೆ ಕೋರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮೋತಿ ವೀರಣ್ಣನವರ ಕೊನೆಯ ಮಗ ಹೇಳಿದ್ದಾರೆ.

    ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋತಿ ವೀರಣ್ಣನವರ ದ್ವಿತೀಯ ಪುತ್ರ ಯಜಮಾನ್ ರಾಜೇಂದ್ರ, ನಾವು ಯಾವುದೇ ಕಿರುಕುಳ ಕೊಟ್ಟಿಲ್ಲ. ಆಸ್ತಿ ವಿಚಾರ ಕೋರ್ಟ್ ನಲ್ಲಿ ಇದೆ. ನನ್ನ ತಮ್ಮನಿಗೆ ಬಂದಂತಹ ಮನೆಯಲ್ಲಿ ಯಾರು ಸಹ ವಾಸ ಮಾಡುತ್ತಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಾವು ಹಲ್ಲೆ ನಡೆಸಿದ್ದೆ ಆದರೆ, ಇಲ್ಲ ಅವರಿಗೆ ಕಿರುಕುಳ ಕೊಡುತ್ತಿರುವುದಾಗಲಿ ಸಾಕ್ಷಿ ಸಮೇತ ತೋರಿಸಲಿ. ಆಸ್ತಿಗಾಗಿ ನಮ್ಮ ತಂದೆಯ ಮರ್ಯಾದೆ ಮೂರುಕಾಸಿಗೆ ಹರಾಜು ಹಾಕುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.