Tag: ಪ್ರತಿಭಟನೆ

  • ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಕೈ ಕಾರ್ಯಕರ್ತನ ಮೇಲೆ ಹಲ್ಲೆ- ಶಿವಾಜಿನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

    ಬೆಂಗಳೂರು: ಕಾರ್ಯಕರ್ತನ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶಿವಾಜಿನಗರದಲ್ಲಿ ನಡೆದಿದೆ.

    ಚರ್ಚ್ ರಸ್ತೆಯಲ್ಲಿ ಸಂಚಾರ ಪೊಲೀಸರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಕಾರ್ಯ ಮಾಡುತ್ತಿದ್ದರು. ಈ ವೇಳೆ  ಆ ಏರಿಯಾದ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಆಗಮಿಸಿ ವ್ಯಾಪಾರಸ್ಥರ ಪರವಾಗಿ ಮಾತನಾಡಿದ್ದಾರೆ.

    ಈ ಸಂದರ್ಭದಲ್ಲಿ ಪರಸ್ಪರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಸಾದಿಕ್ ಎಂಬಾತನ ಮೇಲೆ ಪೊಲೀಸರು ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಬಳಿಕ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಶಿವಾಜಿನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ಸಂಚಾರ ಪೊಲೀಸರು ಗಾಯಗೊಂಡಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ಠಾಣೆಯ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=IpETJy-IqIA

  • ಕೊಡಗು ನೆರೆ – ಖಾಲಿ ಹಂಡೆ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ

    ಕೊಡಗು ನೆರೆ – ಖಾಲಿ ಹಂಡೆ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ

    ಬೆಂಗಳೂರು: ಮಂಜಿನ ನಗರಿ ಕೊಡಗು ಪ್ರವಾಹಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

    ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಲಿ ಹಂಡೆಗಳೊಂದಿಗೆ ಆಗಮಿಸಿದ ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೊಡಗಿನ ವಿಚಾರದಲ್ಲಿ ರಾಜ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಜನರ ಸಂಕಷ್ಟಕ್ಕೆ ಕೂಡಲೇ ನೆರವು ನೀಡಬೇಕು. ಜನರ ಪರಿಸ್ಥಿತಿ ನರಕ ದೃಶ್ಯವಾಗಿದ್ದು, ಸರ್ಕಾರದ ನೆರವು ನಿಧಾನವಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ
    ಕೊಡಗಿನಲ್ಲಿ ಮರಣ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ. ಇತ್ತ ವರುಣನ ಅಬ್ಬರದಿಂದ ಗುಡ್ಡ ಕುಸಿಯೋದು ನಿಂತಿಲ್ಲ. ತಿನ್ನಲು ಆಹಾರವಿಲ್ಲ. ಕಾಲಿನ ಅಡಿಯಲ್ಲಿ ನೀರಿದ್ರೂ ಕುಡಿಯೋ ನೀರಿಗಾಗಿ ಪರದಾಟ. ಕರೆಂಟೂ ಇಲ್ಲ. ಕೊಡವರ ಬದುಕಲ್ಲಿ ಕತ್ತಲು ಆವರಿಸಿದೆ. ಹೌದು ಮಹಾ ರಣಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ತತ್ತರಿಸಿಹೋಗಿದೆ.

    ಮರಣ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ನೂರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಭೋರ್ಗರೆಯುತ್ತಿರೋ ನದಿಗಳು, ಮನೆ, ಶಾಲೆ ತೋಟ, ರಸ್ತೆ ಹೀಗೆ ಎಲ್ಲವನ್ನ ಆಪೋಷನ ತೆಗೆದುಕೊಳ್ತಿವೆ. ಮಳೆಯಿಂದ ಸಂಪರ್ಕ ಕಳೆದುಕೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 31 ಕಡೆ ಗಂಜಿಕೇಂದ್ರ ತೆರೆಯಲಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳು ಖಾಲಿಯಾಗಿದೆ. 845 ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.

    ಸೋಮವಾರಪೇಟೆಯ ಮುಕ್ಕೋಡ್ಲು ಗ್ರಾಮವಂತೂ ವರುಣನ ಅಬ್ಬರಕ್ಕೆ ಹೈರಾಣಾಗಿದೆ. ಗಂಟೆಗಂಟೆಗೂ ಗುಡ್ಡ ಕುಸಿಯುತ್ತಿದೆ. ಗುಡ್ಡದ ಜೊತೆ ಮನೆಗಳು ಧರಾಶಾಹಿಯಾಗ್ತಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ನದಿಯಂತೆ ಭಾಸವಾಗ್ತಿದೆ. ಮಕ್ಕಂದೂರು, ಕಾಡನಕೊಲ್ಲಿ, ಮಂದಲಪಟ್ಟಿ, ಕಾಟಿಕೇರಿ, ಮಕ್ಕಳಗುಡಿಯಲ್ಲಿ ಗುಡ್ಡಗಳ ಕುಸಿತ ಮುಂದುವರೆದಿದೆ. ಗುಡ್ಡದ ಕೆಳಗಿನ ಕಟ್ಟಡಗಳು ಭೂಸಮಾಧಿಯಾಗ್ತಿವೆ. ಕಾಡುಗಳು ನೆಲಸಮವಾಗ್ತಿವೆ.

    ಮುಕ್ಕೋಡ್ಲು, ಇಗೋಡ್ಲು ಹಾಗೂ ಹಟ್ಟಿ ಹೊಳೆಯಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್.ಡಿ.ಆರ್.ಎಫ್ ತಂಡಗಳು ಹರಸಾಹಸ ಪಡುತ್ತಿವೆ. ಈ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಡ್ಡಿಯುಂಟಾಗಿದೆ. ಅಲ್ಲದೇ ಮುಕ್ಕೋಡ್ಲು ಗ್ರಾಮವೊಂದರಲ್ಲೇ ಸುಮಾರು 60ಕ್ಕೂ ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿದ್ದು, ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.

    ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಕೇವಲ ಹೆಲಿಕಾಪ್ಟರ್ ಮೂಲಕವೇ ಸಂತ್ರಸ್ಥರನ್ನು ರಕ್ಷಣೆಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಸುರಿಯುತ್ತಿರುವ ಭಾರೀ ಮಳೆಯಿಂದ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಿಲಿಟರಿ ಅಧಿಕಾರಿಗಳು ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಲಿಕಾಪ್ಟರ್‍ಗಳನ್ನು ಇಳಿಸಲು ಸಹ ಕಷ್ಟವಾಗುತ್ತಿದೆ ಎಂದು ವಾಯುಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಮೀಟರ್ ಬಡ್ಡಿವ್ಯವಹಾರ ಮಾಡುತ್ತಾ ಶಾಲೆಗೆ ಬಾರದ ಶಿಕ್ಷಕನ ವಿರುದ್ಧ ಪ್ರತಿಭಟನೆ!

    ಕೋಲಾರ: ಮೀಟರ್ ಬಡ್ಡಿವ್ಯವಹಾರ ಮಾಡಿಕೊಂಡು ಶಾಲೆಗೆ ಬಾರದ ಶಿಕ್ಷಕನನ್ನು ವರ್ಗಾವಣೆ ಮಾಡಿ, ಬೇರೆ ಶಿಕ್ಷರನ್ನು ನೇಮಿಸುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಕೋಲಾರ ತಾಲೂಕಿನ ನಂದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಂಜುಂಡಗೌಡ, ಊರಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಅಲ್ಲದೇ ಕಳೆದ 5 ವರ್ಷಗಳಿಂದಲೂ ಶಿಕ್ಷಕ ಶಾಲೆಗೆ ಸರಿಯಾಗಿ ಬಾರದೆ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಶಾಲೆಯಲ್ಲಿ ಸುಮಾರು 70 ಮಕ್ಕಳು ಕಲಿಯುತ್ತಿದ್ದು, ಶಿಕ್ಷಕನ ವರ್ತನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೈರಾಣಾಗಿದ್ದಾರೆ. ಅಲ್ಲದೇ ಇದನ್ನು ಪ್ರಶ್ನಿಸುವ ಸಹ ಶಿಕ್ಷಕರ ಮೇಲೆಯೂ ರಾಜಕೀಯ ಪ್ರಭಾವ ಬಳಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಶಿಕ್ಷಕನ ವರ್ತನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಶಿಕ್ಷಕನನ್ನು ಕೂಡಲೇ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೆಚ್ಚಿನ ಶಿಕ್ಷಕರನ್ನು ಅಮಾನತು ಮಾಡಿದ್ದಕ್ಕೆ, ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ನೆಚ್ಚಿನ ಶಿಕ್ಷಕರನ್ನು ಅಮಾನತು ಮಾಡಿದ್ದಕ್ಕೆ, ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕೊಪ್ಪಳ: ನೆಚ್ಚಿನ ಶಾಲಾ ಶಿಕ್ಷಕನನ್ನು ಅಮಾನತು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ಜಾಪಾಳ ಅಮಾತುಗೊಂಡ ಶಿಕ್ಷಕರಾಗಿದ್ದಾರೆ. ಇವರು ವಿದ್ಯಾರ್ಥಿಗಳಿಂದ ಮನೆ ಕೆಲಸವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಂದ್ರಶೇಖರ್ ರವರನ್ನು ಅಮಾನತು ಮಾಡಿದ್ದರು. ಆದರೆ ಇದರಿಂದ ಆಕ್ರೋಶಗೊಂಡ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು, ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಶಾಲೆಯ ಮುಂದಿರುವ ತಿಪ್ಪೆಯನ್ನು ತೆಗೆಯುವ ವಿಚಾರಕ್ಕೆ ಕೆಲವರು ಒತ್ತಡ ಬಳಸಿ, ಸುಳ್ಳು ಆರೋಪ ಮಾಡಿ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಕೂಡಲೇ ನಮ್ಮ ಶಿಕ್ಷಕರು ಮರಳಿ ನಮ್ಮ ಶಾಲೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

    ಶಿಕ್ಷಕರನ್ನು ಮರು ನೇಮಕಾತಿ ಮಾಡದಿದ್ದರೆ ಆಗಸ್ಟ್ 15 ರಂದು ನಡೆಯುವ ಧ್ವಜರೋಹಣವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿಗಳು ಬಿಸಿ ಮುಟ್ಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅನ್ನದ ಮೇಲೆ ಜೇನುಗೂಡಿನಂತೆ ಕುಳಿತುಕೊಳ್ತವೆ ನೋಣಗಳು: ಡಿಸಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

    ಅನ್ನದ ಮೇಲೆ ಜೇನುಗೂಡಿನಂತೆ ಕುಳಿತುಕೊಳ್ತವೆ ನೋಣಗಳು: ಡಿಸಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

    ದಾವಣಗೆರೆ: ನೋಣಗಳ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿ ಪೌಲ್ಟ್ರಿ ಫಾರಂ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹರಿಹರ ತಾಲೂಕಿನ ಕೆಂಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ನೋಣಗಳ ಹಾವಳಿಯಿಂದ ಕಂಗಾಲಾಗಿದ್ದು, ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು, ಕೋಳಿ ಫಾರಂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕೆಂಚನಹಳ್ಳಿ ಸಮೀಪದ ಗಿರೀಜಾ ರಮಣ್ ಪೌಲ್ಟ್ರಿ ಫಾರಂನಿಂದ ಗ್ರಾಮದಲ್ಲಿ ನೋಣ ಹೆಚ್ಚಾಗಿದ್ದು, ನಿತ್ಯವೂ ಅವುಗಳ ಕಾಟದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಊಟ ಮಾಡಲು ಕುಳಿತರೂ, ನಿದ್ರೆಗೆ ಜಾರಿದರೂ, ಮನೆಯಿಂದ ಹೊರಗೆ, ಒಳಗೆ ಎಲ್ಲಿ ಇದ್ದರೂ ನೋಣ ಬಿಟ್ಟು ಬಿಡದೇ ಕಾಡುತ್ತಿವೆ.

    20 ವರ್ಷಗಳ ಹಿಂದೆ ರಮಣ ರೆಡ್ಡಿ ಎಂಬವರು ಬಿಸ್ಕೇಟ್ ಫ್ಯಾಕ್ಟರಿ ನೆಪ ಹೇಳಿ, ಕೋಳಿ ಫಾರಂ ಆರಂಭಿಸಿದರು. ವರ್ಷದಲ್ಲಿ ಎರಡ್ಮೂರು ತಿಂಗಳು ನೋಣಗಳ ಕಾಟ ಹೆಚ್ಚಾಗುತ್ತದೆ. ಇದರಿಂದಾಗಿ ಸಾಂಕ್ರಾಮಿಕ ಕಾಯಿಲೆ ಹರಡುತ್ತದೆ ಎನ್ನುವ ಭೀತಿ ಎದುರಾಗಿದ್ದು, ಗ್ರಾಮ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ಶಾಲೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಬಿಸಿಯೂಟದಲ್ಲಿ ನೋಣ ಬೀಳದಂತೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಕ್ಕಳಂತು ಗೊತ್ತಿಲ್ಲದೆ ನೋಣಗಳು ಬಿದ್ದ ಆಹಾರವನ್ನು ಸೇವನೆ ಮಾಡವಂತಾಗಿದೆ. ಮನೆಗಳಲ್ಲಿ ಅಡುಗೆ ಸಿದ್ಧಪಡಿಸಿ, ಕೆಳಗೆ ಇಟ್ಟರೆ ಸಾಕು, ಪಾತ್ರೆಗಳ ಮೇಲೆ ಜೇನುಗೂಡಿನಂತೆ ನೋಣಗಳು ಕುಳಿತುಕೊಳ್ಳುತ್ತವೆ. ನಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

  • ಮೈಸೂರಿನಲ್ಲಿ ಶುರುವಾಯ್ತು ನೈಟ್ರೋಜನ್ ಐಸ್ ಕ್ರೀಂ ಹಾವಳಿ!

    ಮೈಸೂರಿನಲ್ಲಿ ಶುರುವಾಯ್ತು ನೈಟ್ರೋಜನ್ ಐಸ್ ಕ್ರೀಂ ಹಾವಳಿ!

    ಮೈಸೂರು: ನಗರದಲ್ಲಿ ಅಪಾಯಕಾರಿ ಕಿಕಿ ಡ್ಯಾನ್ಸ್ ಹಾವಳಿಯ ಬೆನ್ನಲ್ಲೇ ಇದೀಗ ನೈಟ್ರೋಜನ್ ಐಸ್ ಕ್ರೀಮ್ ಪಾರ್ಲರ್ ಹಾವಳಿಯ ಆತಂಕ ಮೈಸೂರಲ್ಲಿ ಸೃಷ್ಟಿಯಾಗಿದೆ.

    ನಗರದಲ್ಲಿ ನೈಟ್ರೊಜೆನ್ ಐಸ್ ಕ್ರೀಮ್ ಪಾರ್ಲರ್ ಗಳು ತಲೆ ಎತ್ತಿವೆ. ದೇಶದಲ್ಲಿ ನೈಟ್ರೋಜನ್ ಐಸ್ ಕ್ರೀಮ್ ಬ್ಯಾನ್ ಆಗಿದ್ದರೂ ಮೈಸೂರಿನಲ್ಲಿ ಮಾತ್ರ ಇದರ ಹವಾ ಬಲು ಜೋರಾಗಿದೆ. ಹೀಗಾಗಿ ನೈಟ್ರೋಜನ್ ಐಸ್ ಕ್ರೀಮ್ ಪಾರ್ಲರ್ ವಿರುದ್ಧ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ ಎತ್ತಿದೆ.

    ಮೈಸೂರಿನ ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿರುವ ಮೈನಸ್ 21 ಡಿಗ್ರಿ ಕೆಫೆ ಬಳಿ, ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನುಷ್ಯನ ಆರೋಗ್ಯಕ್ಕೆ ಮಾರಕವಾಗಿರುವ ಡ್ರಾಗನ್ ಬ್ರೀತ್ ಐಸ್ ಕ್ರೀಮ್ ಇದಾಗಿದ್ದು, ಅಕ್ರಮವಾಗಿ ನಡೆಸುತ್ತಿರುವ ಇಂತಹ ಐಸ್ ಕ್ರೀಂ ಪಾರ್ಲರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅಕ್ರಮ ಬಾಂಗ್ಲಾನಿವಾಸಿಗಳನ್ನು ಗಡಿಪಾರು ಮಾಡಿ: ಶ್ರೀರಾಮ ಸೇನೆ

    ಅಕ್ರಮ ಬಾಂಗ್ಲಾನಿವಾಸಿಗಳನ್ನು ಗಡಿಪಾರು ಮಾಡಿ: ಶ್ರೀರಾಮ ಸೇನೆ

    ಯಾದಗಿರಿ: ದೇಶದಲ್ಲಿರುವ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಗಡಿಪಾರು ಮಾಡುವಂತೆ ನಗರದ ಜಿಲ್ಲಾಡಳಿತ ಕಚೇರಿ ಮುಂಭಾಗ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ದೇಶದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ದೇಶದ ವಲಸಿಗರು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಕೊಲೆ, ದರೋಡೆ ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನೆಲ್ಲಾ ಗಡಿ ಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಬಾಂಗ್ಲಾ ವಲಸಿಗರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಅಕ್ರಮ ವಲಸಿಗರು ನಮ್ಮ ದೇಶದಲ್ಲಿದ್ದರೆ ನಮ್ಮ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನಲೆಯಲ್ಲಿ ಅವರನ್ನು ನಮ್ಮ ರಾಜ್ಯ, ದೇಶದಿಂದ ಹೊರಹಾಕಬೇಕು, ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.

    ರಾಜ್ಯ ಸರ್ಕಾರ ಬಾಂಗ್ಲಾ ನಿವಾಸಿಗಳಿಗೆ ವೀಸಾ ನೀಡಬಾರದು. ಇನ್ನಷ್ಟು ಜನರನ್ನು ಹಾಳು ಮಾಡುವ ಮುನ್ನ ಅವರನ್ನು ರಾಜ್ಯದಿಂದ ಮತ್ತು ದೇಶದಿಂದ ಗಡಿಪಾರು ಮಾಡಬೇಕೆಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪೊಲೀಸರಿಂದ ದೌರ್ಜನ್ಯ: ಪರಮೇಶ್ವರ್ ವಾಹನ ತಡೆಯಲು ಮುಂದಾದ ಗ್ರಾಮಸ್ಥರು!

    ಪೊಲೀಸರಿಂದ ದೌರ್ಜನ್ಯ: ಪರಮೇಶ್ವರ್ ವಾಹನ ತಡೆಯಲು ಮುಂದಾದ ಗ್ರಾಮಸ್ಥರು!

    ತುಮಕೂರು: ಪೊಲೀಸರು ಅಮಾಯಕ ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ, ಹುಲಿಯೂರು ದುರ್ಗದ ಗ್ರಾಮಸ್ಥರು ಗೃಹ ಸಚಿವ ಜಿ ಪರಮೇಶ್ವರ್ ಅವರ ವಾಹನ ತಡೆಯಲು ಮುಂದಾದ ಘಟನೆ ಸೋಮವಾರ ನಡೆದಿದೆ.

    ಪರಮೇಶ್ವರ್ ತಮ್ಮ ಸಹೋದರ ಮೃತ ಡಾ ಶಿವಪ್ರಸಾದ್ ಅವರ ಅಸ್ತಿಯನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಬಿಡಲು ವೋಲ್ವೋ ಬಸ್ಸಿನಲ್ಲಿ ತೆರಳುತ್ತಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಬಸ್ ಹುಲಿಯೂರು ದುರ್ಗದ ಬಳಿ ಬಂದಾಗ ಅಡ್ಡಗಟ್ಟಲು ಪ್ರಯತ್ನಿಸಿದರು.

    ಈ ವೇಳೆ ಅಲ್ಲೇ ಇದ್ದ ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಿ, ಡಿಸಿಎಂ ವಾಹನ ಸಾಗಲು ಯಾವುದೇ ತೊಂದರೆ ಆಗದಂತೆ ಅನುವು ಮಾಡಿಕೊಟ್ಟರು.

    ಅಡ್ಡ ಹಾಕಿದ್ದು ಯಾಕೆ?
    ಕ್ಷುಲ್ಲಕ ಕಾರಣಕ್ಕೆ ರಾತ್ರಿವೇಳೆ ಮನೆ ಮುಂದೆ ಶಟಲ್ ಕಾಕ್ ಆಡುತ್ತಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 40 ವರ್ಷದ ಪದ್ಮನಾಭ ಅವರು ತನ್ನ ಮನೆ ಮುಂದೆ ಶಟಲ್ ಆಡುತ್ತಿದ್ದರು. ಆಟ ನಿಲ್ಲಿಸಿ ಮನೆಯೊಳಗೆ ಹೋಗುವಂತೆ ಪೊಲೀಸರು ಗದರಿದ್ದಾರೆ. ತನ್ನ ಮನೆ ಎದುರಲ್ಲೇ ಆಟವಾಡುತ್ತಿದ್ದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದು ಪದ್ಮನಾಭ, ಇದೇ ವೇಳೆ ಪೊಲೀಸರ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಎ.ಎಸ್.ಐ ನಾರಾಯಣಸ್ವಾಮಿ, ಹಾಗೂ ಪೇದೆ ರಂಗಸ್ವಾಮಿ, ಪದ್ಮನಾಭನ ಮನೆಗೆ ನುಗ್ಗಿ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಪೃಷ್ಠ ಭಾಗದಲ್ಲಿ ಬಾಸುಂಡೆ ಬರುವಂತೆ ಲಾಠಿ ಏಟು ಕೊಟ್ಟಿದ್ದಾರೆ. ಮೈ ತುಂಬಾ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪದ್ಮನಾಭ ವಿರುದ್ಧ ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಿಸಿ ಕುಣಿಗಲ್ ಜೆಎಂಎಫ್ ಸಿ ಕಿರಿಯ ಶ್ರೇಣಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಪದ್ಮನಾಭ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರೈಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಪ್ರಯಾಣಿಕರಿಂದ ಪ್ರತಿಭಟನೆ!

    ರೈಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಪ್ರಯಾಣಿಕರಿಂದ ಪ್ರತಿಭಟನೆ!

    ತುಮಕೂರು: ರೈಲೊಂದು ಕ್ರಾಸಿಂಗ್ ಮಾಡಲು ಸುಮಾರು ಒಂದೂವರೆ ಗಂಟೆ ಕಾದಿದ್ದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೇಲ್ವೇ ಹಳಿ ಮೇಲೆ ಪ್ರತಿಭಟನೆ ನಡೆಸಿ, ರೈಲು ಇಂಜಿನ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.

    ತುಮಕೂರಿನ ಮಲ್ಲಸಂದ್ರದಲ್ಲಿ ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್ ಪ್ರಯಾಣಿಕರು ಈ ರೀತಿ ರೊಚ್ಚಿಗೆದ್ದಿದ್ದಾರೆ. ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲು ರಾತ್ರಿ 8-30ಕ್ಕೆ ಕ್ರಾಸ್ ಮಾಡಬೇಕಿತ್ತು. ಆದರೆ ರಾತ್ರಿ 10 ಗಂಟೆಯಾದರೂ ಕ್ರಾಸ್ ಮಾಡಿರಲಿಲ್ಲ. ಒಂದೂವರೆ ಗಂಟೆಗಳ ಕಾಲ ವಿಳಂಬವಾದ್ದರಿಂದ ರೊಚ್ಚಿಗೆದ್ದ ಅರಸಿಕೆರೆ ಪ್ರಯಾಣಿಕರು ರೇಲ್ವೇ ಇಲಾಖೆ ವಿರುದ್ಧ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

    ಬಳಿಕ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 10 ಗಂಟೆಗೆ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ರೈಲು ಕ್ರಾಸ್ ಆದ ಬಳಿಕ ಅರಸಿಕೆರೆ ರೈಲು ಹೊರಟಿತು.

  • ಕುಡಿಯುವ ನೀರಿಗಾಗಿ ಪಿಡಿಓಗೆ ಘೇರಾವ್ ಹಾಕಿದ ಗ್ರಾಮಸ್ಥರು!

    ಕುಡಿಯುವ ನೀರಿಗಾಗಿ ಪಿಡಿಓಗೆ ಘೇರಾವ್ ಹಾಕಿದ ಗ್ರಾಮಸ್ಥರು!

    ಬೀದರ್: ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ಪಿಡಿಓಗೆ ಘೇರಾವ್ ಹಾಕಿದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಚಳಕಾಪುರ ಗ್ರಾಮದಲ್ಲಿ ಜನರು ಕಳೆದ ಮೂರು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತ ಗ್ರಾಮಸ್ಥರು ಇಂದು ಖಾಲಿ ಕೊಡಗಳನ್ನು ಹಿಡಿದು ಪಂಚಾಯಿತಿಯ ಪಿಡಿಓ ಹಾಗೂ ಅಧ್ಯಕ್ಷರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ಗಲಿಬಿಲಿಯಾದ ಪಂಚಾಯಿತಿ ಪಿಡಿಓ ಗೀತಾ ನಿಡಮುಡಿ ಹಾಗೂ ಅಧ್ಯಕ್ಷ ರಾಮು ಕೊರವಿ, ಸಮಸ್ಯೆ ಭಗೆಹರಿಸುವುದಾಗಿ ಮನವಿ ಮಾಡಿಕೊಂಡರು. 8 ದಿನಗಳಲ್ಲಿ ಕುಡಿಯುವ ನೀರು ಪೂರೈಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews