ಭೋಪಾಲ್: ಕ್ಷಮೆ ಕೇಳುವಂತೆ ಪ್ರತಿಭಟನೆ ನಡೆಸಿದ್ದ ಎಬಿವಿಪಿ ವಿದ್ಯಾರ್ಥಿಗಳ ಕಾಲನ್ನು ಉಪನ್ಯಾಸಕರು ಮುಟ್ಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಮಥುರಾದ ರಾಜೀವ್ ಗಾಂಧಿ ಸ್ನಾತಕೋತ್ತರ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಬುಧವಾರ ಉಪನ್ಯಾಸಕ ವಿರುದ್ಧ ಘೋಷಣೆ ಕೂಗುತ್ತಿದ್ದರು. ಅಲ್ಲದೆ ಅವರು ನಮ್ಮನ್ನು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಅಲ್ಲಿಗೆ ಬಂದ ಉಪನ್ಯಾಸಕರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕಾಲಿಗೆ ಬಿದ್ದಿದ್ದಾರೆ.
ಕ್ಷಮೆ ಕೇಳಿದ್ದು ಏಕೆ?
ಎಬಿವಿಪಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದರು. ಆಗ ಅಲ್ಲಿದೆ ಬಂದ ಉಪನ್ಯಾಸಕರು ಘೋಷಣೆಯನ್ನು ನಿಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಇದರಿಂದಾಗಿ ಉಪನ್ಯಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು, ತರಗತಿ ಬಿಟ್ಟು ಹೊರಬಂದು ಪ್ರತಿಭಟನೆ ಪ್ರಾರಂಭಿಸಿದ್ದರು. ‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ಕೂಗದಂತೆ ಹೇಳಿ, ದೇಶ ವಿರೋಧಿ ಧೋರಣೆ ತೋರಿದ್ದಾರೆ. ಹೀಗಾಗಿ ಅವರು ನಮಗೆ ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದರು.
ವಿಡಿಯೋದಲ್ಲಿ ಏನಿದೆ?
ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಬಳಿ ಬಂದ ಉಪನ್ಯಾಸಕರು, ಸಹೋದ್ಯೋಗಿಗಳ ಮಾತನ್ನು ಲೆಕ್ಕಿಸದೇ ವಿದ್ಯಾರ್ಥಿಗಳ ಕಾಲು ಮುಟ್ಟಿ ಕ್ಷಮೆಯಾಚನೆಗೆ ಮುಂದಾದರು. ಬನ್ನಿ ಕ್ಷಮೆ ಕೇಳುತ್ತೇನೆ ಅಂತ ಸಾಲಾಗಿ ನಿಂತಿದ್ದ ಕೆಲವರ ಕಾಲಿಗೆ ಬಿದ್ದರು. ಅವರ ವರ್ತನೆಯಿಂದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಮುಂದಾದರು. ಬಳಿಕ ನಾನು ತಪ್ಪು ಮಾಡಿದ್ದೇನೆಯೇ ಅಂತ ಪ್ರಶ್ನಿಸಿ, ದೇಶ ವಿರೋಧಿ ಅಂತ ಕರೆಯಬೇಡಿ ಅಂತ ಉಪನ್ಯಾಸಕರು ಹೇಳಿದ್ದಾರೆ.
ಈ ವಿಡಿಯೋದ ಬಗ್ಗೆ ಜನ ತಮ್ಮದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಉಪನ್ಯಾಸಕರು ಕಾಲಿಗೆ ಬಿದ್ದಿದ್ದಾರೆ ಎಂದು ಕೆಲವರು ಹೇಳಿದರೆ, ಕೆಲವರು ವಿದ್ಯಾರ್ಥಿಗಳ ಪ್ರತಿಟಭಟನೆ ಸರಿ ಇದೆ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv