Tag: ಪ್ರತಿಭಟನೆ

  • ರಜಿನಿ ಸಿನಿಮಾ ವಿರುದ್ಧ ವಾಟಾಳ್ ಪ್ರತಿಭಟನೆ – ಅಂಬಿ ಇಲ್ಲದ ಹೊತ್ತಲ್ಲೇ ತಲೈವಾಗೆ ಸಂಕಷ್ಟನಾ?

    ರಜಿನಿ ಸಿನಿಮಾ ವಿರುದ್ಧ ವಾಟಾಳ್ ಪ್ರತಿಭಟನೆ – ಅಂಬಿ ಇಲ್ಲದ ಹೊತ್ತಲ್ಲೇ ತಲೈವಾಗೆ ಸಂಕಷ್ಟನಾ?

    ಬೆಂಗಳೂರು: ತಲೈವಾ ರಜನಿಕಾಂತ್ ಅಭಿನಯದ 2.0 ಸಿನಿಮಾವನ್ನು ಬೆಂಗಳೂರಲ್ಲಿ ಬಿಡುಗಡೆ ಮಾಡಿದಕ್ಕೆ ಕನ್ನಡಪರ ಹೋರಾಟ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.

    ರಜನಿ ಸಿನಿಮಾ ವಿರುದ್ಧ ಊವರ್ಶಿ ಥಿಯೇಟರ್ ಮುಂಭಾಗ ಪ್ರತಿಭಟಿಸಿ ವಾಟಾಳ್ ನಾಗರಾಜ್, ಕನ್ನಡ ಚಿತ್ರಗಳು ಬಿಟ್ಟು ಪರಭಾಷಾ ಚಿತ್ರಗಳ ಪ್ರದರ್ಶನ ಬೇಡ. ನವೆಂಬರ್ ತಿಂಗಳಲ್ಲಿ ಬೇರೆ ಭಾಷೆ ಸಿನಿಮಾಗಳು ರಿಲೀಸ್ ಆಗಬಾರದು. ಇದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗುತ್ತದೆ. ಇದರ ವಿರುದ್ಧ ಡಿಸೆಂಬರ್ 1 ರಂದು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುತ್ತೇವೆ ಎಂದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ವಶಕ್ಕೆ ಪಡೆದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಊರ್ವಶಿ ಚಿತ್ರ ಮಂದಿರ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ವಹಿಸಲಾಗಿತ್ತು. ಅಲ್ಲದೇ ಚಿತ್ರ ಮಂದಿರ ಮುಂದೆ ಯಾವುದೇ ಕಟೌಟ್ ಮತ್ತು ಬ್ಯಾನರ್ಸ್ ಹಾಕದೆ ಎಚ್ಚರ ವಹಿಸಲಾಗಿತ್ತು. ಚಿತ್ರ ಮಂದಿರ ಬಳಿಕ ಒಂದು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಿ 60ಕ್ಕೂ ಹೆಚ್ಚು ಪೊಲೀಸರ ರಕ್ಷಣೆ ನೀಡಿದ್ದರು.

    ರೋಬೋ ಚಿತ್ರದ ಮುಂದುವರಿದ ಭಾಗವಾದ 2.0 ಎಸ್. ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಬಿಡುಗಡೆ ಆಗಿದೆ. ಸಿನಿಮಾದ ಟೀಸರ್, ಫಸ್ಟ್ ಲುಕ್ ಮತ್ತು ಮೇಕಿಂಗ್ ವಿಡಿಯೋಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. 2010ರಲ್ಲಿ ರೋಬೋ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಗಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀಮ್ಸ್ ವೈದ್ಯರ ನಿರ್ಲಕ್ಷ್ಯ- ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಸಾವು

    ಬೀಮ್ಸ್ ವೈದ್ಯರ ನಿರ್ಲಕ್ಷ್ಯ- ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಸಾವು

    ಬೀದರ್: ಬೀಮ್ಸ್ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು.

    ಕಮಲಮ್ಮ (32) ಮೃತ ಗರ್ಭಿಣಿ. ಮೂಲತಃ ಹುಮನಾಬಾದ್ ತಾಲೂಕಿನ ಸಿಂದನಕೇರಾ ಗ್ರಾಮದರಾಗಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಮಲಮ್ಮರನ್ನು ಕುಟುಂಬದವರು ಬೀಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರು ಹೆರಿಗೆ ಬಂದಿದ್ದ ಗರ್ಭಿಣಿಗೆ ಚಿಕಿತ್ಸೆ ನೀಡದ್ದರಿಂದ, ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಗರ್ಭಿಣಿ ಸಾವಿಗೆ ಬೀಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆಯ ಬಳಿ ಮೃತ ಕಮಲಮ್ಮರ ಶವವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಶವದ ಮುಂದೆ ಪತಿ ಹಾಗೂ ಕುಟುಂಬಸ್ಥರು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ. ಪ್ರತಿಭಟನೆ ನಡೆಸುತ್ತಿರುವ ಕುಟುಂಬಸ್ಥರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಾಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.

    ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಪೇದೆಯಿಂದ ಹಲ್ಲೆ- ವೈದ್ಯರಿಂದ ಪ್ರತಿಭಟನೆ

    ಪೊಲೀಸ್ ಪೇದೆಯಿಂದ ಹಲ್ಲೆ- ವೈದ್ಯರಿಂದ ಪ್ರತಿಭಟನೆ

    ಕಲಬುರಗಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಪೊಲೀಸ್‌ ಪೇದೆಯೊಬ್ಬ ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಇಂದು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.

    ಆನಂದ್ ಹಲ್ಲೆ ನಡೆಸಿರುವ ಡಿಎಆರ್ ಪೊಲೀಸ್ ಪೇದೆ. ಡಾ. ಚಂದ್ರು ಹಲ್ಲೆಗೊಳಗಾದ ವೈದ್ಯ. ಆನಂದ್ ಅವರು ಚಿಂಚೋಳಿ ತಾಲೂಕಿನ ನೀಮಾಹೊಸಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.

    ಆನಂದ್ ಅವರ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲವೆಂದು ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ರಾತ್ರಿ ವೈದ್ಯರು ರೋಗಿಗೆ ಚಿಕಿತ್ಸೆ ನೀಡಲು ತಡವಾಗಿ ಬಂದರೆಂದು ಕೊಪಗೊಂಡ ಪೊಲೀಸ್ ಪೇದೆ, ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೆ ಅಲ್ಲದೆ ಆಸ್ಪತ್ರೆ ಸಿಬ್ಬಂದಿ ರತ್ನಮ್ಮ, ಸತ್ಯಮ್ಮ ಎಂಬವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.

    ವೈದ್ಯರ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ ಇಂದು ಚಿಂಚೋಳಿ ಸರ್ಕಾರಿ ಆಸ್ಪತ್ರೆಯ ವೈದ್ಯರೆಲ್ಲ ಸೇರಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮೂಲಕ ಹಲ್ಲೆ ಮಾಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಂತರ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಭದ್ರತೆಯನ್ನು ನೀಡುವ ಭರವಸೆ ಕೊಟ್ಟ ಬಳಿಕ ವೈದ್ಯರೆಲ್ಲ ಪ್ರತಿಭಟನೆ ಹಿಂಪಡೆದಿದ್ದಾರೆ.

    ಘಟನೆ ಕುರಿತು ಡಾ. ಚಂದ್ರು ಪೊಲೀಸ್ ಪೇದೆ ಆನಂದ್ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಿಫ್ಟ್ ನಲ್ಲಿ ವಿದ್ಯಾರ್ಥಿನಿಯನ್ನ ಅಡ್ಡಗಟ್ಟಿ ಸಿಬ್ಬಂದಿಯಿಂದ ಹಸ್ತಮೈಥುನ

    ಲಿಫ್ಟ್ ನಲ್ಲಿ ವಿದ್ಯಾರ್ಥಿನಿಯನ್ನ ಅಡ್ಡಗಟ್ಟಿ ಸಿಬ್ಬಂದಿಯಿಂದ ಹಸ್ತಮೈಥುನ

    ಚೆನ್ನೈ: ಹಾಸ್ಟೆಲ್ ಲಿಫ್ಟಿನಲ್ಲಿ ವಿದ್ಯಾರ್ಥಿನಿಯನ್ನು ಹಿಡಿದುಕೊಂಡು ಸ್ವಚ್ಛತಾ ಸಿಬ್ಬಂದಿಯೊಬ್ಬ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿದ್ದನು. ಇದರಿಂದ ಆಕ್ರೋಶಗೊಂಡ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಚೆನ್ನೈನ ಹೊರವಲಯದಲ್ಲಿರುವ ಎಸ್‍ಆರ್‍ಎಂ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ 28 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸ್ವಚ್ಛತಾ ಸಿಬ್ಬಂದಿ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?
    ಈ ಘಟನೆ ಗುರುವಾರ ಮಧ್ಯಾಹ್ನ ಚೆನ್ನೈನ ಹೊರವಲಯದಲ್ಲಿರುವ ವಿವಿ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಲಿಫ್ಟ್ ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಲಿಫ್ಟ್ ನಲ್ಲಿ ಹೋಗುತ್ತಿದ್ದಳು. ಈ ವೇಳೆ ಲಿಫ್ಟ್ ಗೆ ಆರೋಪಿ ಬಂದಿದ್ದಾನೆ. ಮೊದಲು ವಿದ್ಯಾರ್ಥಿನಿ 4ನೇ ಮಹಡಿಯ ಬಟನ್ ಒತ್ತಿದ್ದಾಳೆ. ಆಗ ವ್ಯಕ್ತಿ 6ನೇ ಮಹಡಿಯ ಬಟನ್ ಒತ್ತಿ, ಬಳಿಕ 8ನೇ ಬಟನ್ ಒತ್ತಿದ್ದಾನೆ. ನಂತರ ವಿದ್ಯಾರ್ಥಿನಿ ಪರಾರಿಯಾಗಲು ಯತ್ನಿಸಿದ್ದಾಳೆ. ಆಗ ಆರೋಪಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಆಕೆಯ ಮುಂದೆಯೇ ಹಸ್ತಮೃಥುನ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ.

    ಕೂಡಲೇ ವಿದ್ಯಾರ್ಥಿನಿ ಈ ಘಟನೆ ಬಗ್ಗೆ ಹಾಸ್ಟೆಲ್ ವಾರ್ಡನ್ ಗೆ ದೂರು ನೀಡಿದ್ದಾರೆ. ಬಳಿಕ  ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಘಟನೆಯ ದೃಶ್ಯಾವಳಿಯನ್ನು ನೀಡಿದ್ದರೂ, ಎರಡು ಗಂಟೆ ತಡಮಾಡಿ ದೂರು ತೆಗೆದುಕೊಂಡಿದ್ದಾರೆ. ಅಲ್ಲದೇ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರು ಧರಿಸುವ ಡ್ರೆಸ್‍ನಿಂದಾಗಿ ಈ ರೀತಿಯ ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳನ್ನೇ ದೂರಿದ್ದು, ನಾವು ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ.

    ಸದ್ಯಕ್ಕೆ ನಾವು ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಿದ್ದೇವೆ. ಘಟನೆಯ ಸಂಪೂರ್ಣ ವಿವರವನ್ನು ಪಡೆಯುತ್ತಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ವಿವಿ ಹೇಳಿದೆ.

    ಬಂಧಿತ ಆರೋಪಿ ಇತ್ತೀಚೆಗೆ ಹಾಸ್ಟೆಲ್ ಮೆಸ್ ನಿಂದ ಆಹಾರ ತ್ಯಾಜ್ಯವನ್ನು ಸ್ವಚ್ಛ ಮಾಡಲು ನೇಮಕಗೊಂಡಿದ್ದನು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಎಂ.ಎಸ್.ಎಂ. ವಲ್ಲವನ್ ತಿಳಿಸಿದರು. ಜೊತೆಗೆ ಮಹಿಳಾ ಹಾಸ್ಟೆಲ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಮಾತ್ರ ನೇಮಿಸಲು ಕಾಲೇಜು ಆಡಳಿತಕ್ಕೆ ಪೊಲೀಸ್ ಸಲಹೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಗದಗ: ಶಿಕ್ಷಕನ ಅನುಚಿತ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಭೋಪಳಾಪೂರ ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಂ ಹೋನಕೇರಿ ಎಂಬ ಶಿಕ್ಷಕ ಶಾಲೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು. ಕೆಲವೊಮ್ಮೆ ಅಸಭ್ಯದಿಂದ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಜಡಿದು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಷಯ ತಿಳಿದು ಆರೋಪಿತ ಶಿಕ್ಷಕ ಶಾಲೆಗೆ ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಥಳಕ್ಕೆ ರೋಣ ಬಿಇಓ ನಂಜುಂಡಯ್ಯ ಹಾಗೂ ಸಿಆರ್ ಪಿ ಅಧಿಕಾರಿಗಳು ಆಗಮಿಸಿದ್ದು, ಸಮಸ್ಯೆ ಆಲಿಸಲು ಬಂದ ಬಿಇಓಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

    ಶಿಕ್ಷಕನ ಅನುಚಿತ ವರ್ತನೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಿಮಗೆ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಶಿಕ್ಷಕನ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ ಅಂತ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕ ವಿ.ಎಂ ಹೊನಕೇರಿ ಅಮಾನತ್ತುಗೊಳಿಸುವಂತೆ ರೋಣ ಬಿಇಓ ನಂಜುಂಡಯ್ಯಗೆ ಕೆಲಕಾಲ ದಿಗ್ಭಂದನ ಹಾಕಿದ್ದರು. ಕೊನೆಗೆ ಶಿಕ್ಷಕ ಹೊನಕೇರಿ ಗ್ರಾಮಸ್ಥರ ಎದುರು ಕೈಮುಗಿದು ಕ್ಷಮೆ ಕೇಳಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸರ್ಕಾರ & ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು -ಮುಂದುವರೆದ ಪ್ರತಿಭಟನೆ

    ಸರ್ಕಾರ & ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು -ಮುಂದುವರೆದ ಪ್ರತಿಭಟನೆ

    ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಸಕ್ಕರೆ ಸಮಸ್ಯೆ ಜಾಸ್ತಿಯಾಗುವ ಲಕ್ಷಣ ಕಾಣಿಸುತ್ತಿದೆ. ಸಕ್ಕರೆ ಕಾರ್ಖಾನೆಗಳ ಸಾಹುಕಾರರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಸಂಧಾನ ಸಭೆಯೇನೋ ಸಕ್ಸಸ್ ಆಗಿದೆ. ಸರ್ಕಾರ ಫಿಫ್ಟಿ ಫಿಫ್ಟಿ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಅಸ್ತು ಎಂದಿದ್ದಾರೆ. ಅಂತೂ ಕಬ್ಬು ಬೆಳೆಗಾರರ ಕಣ್ಣೀರು ಒರೆಸಿದಂತಾಯ್ತು ಅಂತಾ ಸಿಎಂ ನಿಟ್ಟುಸಿರು ಬಿಟ್ಟರು. ಆದರೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

    ಸಂಧಾನ ಸಭೆಯ ನಿರ್ಣಯ:
    ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.

    ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡರು ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ತೇವೆ. ಅಲ್ಲಿವರೆಗೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಅಂತಾ ಹೇಳಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರನ್ನು ಭೇಟಿಯಾದ ಜೆಡಿಎಸ್ ಮುಖಂಡ ಪ್ರಕಾಶ್ ಸೋನಾವಲಕರ, ರೈತರ ಮನವೊಲಿಕೆಗೆ ವಿಫಲ ಯತ್ನ ನಡೆಸಿದ್ರು. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಸರ್ಕಾರ ರೈತರ ಪರವಿದ್ದು, ರೈತರನ್ನು ಕೈ ಬಿಡುವ ಪ್ರಶ್ನೆಯೆ ಇಲ್ಲ ಅಂದರು.

    ಈ ನಡುವೆ ನವೆಂಬರ್ 20ರಂದು ನಡೆದ ಸಭೆಯ ಅನುಸಾರವಾಗಿ ರೈತರ ಬಾಕಿ ಹಣ ಪಾವತಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ ಇಂದು ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಕಬ್ಬಿನ ಸಂಘರ್ಷ ಯಾವ ಹಂತಕ್ಕೆ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    ಸಕ್ಕರೆ ಸಾಹುಕಾರರ ಜೊತೆ ಸಿಎಂ 50:50 ಸಂಧಾನ

    – ರೈತರಿಗೆ ಹೆಚ್ಚುವರಿ ಸಿಗಲಿದೆ 300 ರೂ.

    ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿಟ್ಟ 50:50 ಸೂತ್ರಕ್ಕೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಬ್ಬು ಬೆಳೆದು ಕಣ್ಣೀರು ಸುರಿಸಿದ್ದ ರೈತರ ಕಣ್ಣೀರನ್ನು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.

    ಸಂಧಾನ ಸಭೆಯ ನಿರ್ಣಯ:
    ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.

    ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.

    ಬರೀ ರೈತರ ವಾದ ಕೇಳಿದರೆ ನಮ್ಮದೂ ಸಮಸ್ಯೆ ಇದೆ. ಅದನ್ನು ಸ್ವಲ್ಪ ಕೇಳಿ ಎಂದು ಮಾಲೀಕರು ತಮ್ಮ ವಾದವನ್ನು ಸಿಎಂ ಕುಮಾರಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ.

    ಸಕ್ಕರೆ ಸಾಹುಕಾರರ ವಾದವೇನು?: ಎಫ್.ಆರ್.ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕೆಜಿಗೆ 35 ರಷ್ಟಿತ್ತು, ಈಗ 27ಕ್ಕೆ ಇಳಿದಿದೆ. ಟನ್‍ಗೆ 2,900 ರೂ. ಒಪ್ಪಂದ ಆಗಿದ್ದೂ ಲಾಭ ಬಂದ ಸಂದರ್ಭದಲ್ಲಿ 3,400 ರೂ. ನೀಡಿದ್ದೇವೆ. ಕಂಪೆನಿಗಳಿಂದ ವಿದ್ಯುತ್ ಖರೀದಿಯಲ್ಲಿ ಸರ್ಕಾರ ಮೋಸ ಮಾಡಿದೆ. ಪ್ರತಿ ಯೂನಿಟ್‍ಗೆ 5.87 ರೂ. ಒಪ್ಪಂದ ಮಾಡಿಕೊಂಡಿತ್ತು, ಈಗ 3.87 ರೂ. ನೀಡುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಕಾರ್ಖಾನೆಗಳು ಉತ್ತಮ ದರದಲ್ಲಿ ವಿದ್ಯುತ್ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.

    ಬರಗಾಲದಿಂದ ಕೇವಲ 8ರಿಂದ 10 ಲಕ್ಷ ಟನ್ ಕಬ್ಬು ಅರೆಯುತ್ತಿದ್ದೇವೆ. ಇದಕ್ಕೂ ಮೊದಲು 30 ರಿಂದ 40 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಇಥೆನಾಲ್‍ಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟಿದೆ. ರಾಜ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲ. ನೆರೆ ರಾಜ್ಯಗಳು ಬಡ್ಡಿ ರಹಿತ ಸಾಲ ನೀಡಿ ಸಹಾಯಕ್ಕೆ ಬಂದಿವೆ, ರಾಜ್ಯದಲ್ಲಿ ಏನೂ ಆಗಿಲ್ಲ. 6-8 ತಿಂಗಳಾದ್ರೂ ಕಾರ್ಖಾನೆ ಖರೀದಿಸಿದ ವಿದ್ಯುತ್‍ಗೆ ಸರ್ಕಾರ ಹಣ ಪಾವತಿಸಿಲ್ಲ. 15 ದಿನದೊಳಗೆ ಪಾವತಿಸಿ ಅಂದರೆ ಹೇಗೆ? ಸರ್ಕಾರವೂ ಬಾಕಿಯನ್ನು 15 ದಿನದಲ್ಲಿ ಪಾವತಿಸಲಿ. 10 ತಿಂಗಳಾದರೂ ಹೈಲೆವೆಲ್ ಕಮಿಟಿ ಸಭೆ ನಡೆಸಿಲ್ಲ. ಕಾರ್ಖಾನೆಗಳಿಗೆ ಬೇಕಾದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಮಾಲೀಕರು ಸಿಎಂಗೆ ತಿಳಿಸಿದ್ದಾರೆ.

    ಸಭೆ ಬಳಿಕ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕ ಬಾಲಚಂದ್ರ ಜಾರಕಿಹೊಳಿ, ಮೇಜರ್ ಸಮಸ್ಯೆ ಬಾಗಲಕೋಟೆಯದ್ದು. ನಾವು ಎಫ್.ಆರ್.ಪಿಗಿಂತ ಹೆಚ್ಚು ದರ ಕೊಟ್ಟಿದ್ದೇವೆ. ನಮ್ಮದು ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕೆಲವರು ಬಾಕಿ ಪಾವತಿಗೆ ಸಮಯ ಕೇಳಿದ್ದಾರೆ. ಎಲ್ಲ ಸರಿ ಹೋಗುತ್ತೆ ಅಂದ್ರು. ಆದರೆ ಸಭೆಯಲ್ಲಿ ನಡೆದ ಚರ್ಚೆ ವಿಷಯದಲ್ಲಿ ಗೊಂದಲವಿದೆ. ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಬೆಳಗಾವಿಯಲ್ಲಿ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.

    ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಶಾಸಕರಾಗಿರುವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಆರ್.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಆನಂದ ನ್ಯಾಮಗೌಡ ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ಯದ ಖಾಲಿ ಬಾಟಲಿಗಳು ಹಾಗೂ ಮಹಿಳೆಯರ ಚಪ್ಪಲಿಗಳನ್ನು ಪೋಸ್ಟ್ ಮಾಡುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಾಜನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ರೈತರು, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಸಿಎಂ ಕುಮಾರಸ್ವಾಮಿ ಕುಡಿದ ನಶೆಯಲ್ಲಿ ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಎಂದು ಕೇಳುತ್ತಾರೆ. ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಹೀಯಾಳಿಸುತ್ತಾರೆ. ಇವರ ಹೇಳಿಕೆಯಿಂದ ಇಡೀ ರೈತ ಸಮುದಾಯಕ್ಕೆ ಹಾಗು ರೈತ ಮಹಿಳೆಯರಿಗೆ ಅವಮಾನವಾಗಿದ್ದು, ಕೂಡಲೇ ಅವರು ರೈತರ ಕ್ಷಮೆ ಕೇಳಬೇಕೆಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಗುರುಪ್ರಸಾದ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಪರ ರೈತರಲ್ಲಿ ಕ್ಷಮೆ ಕೇಳಿದ ಸಚಿವ ಬಂಡೆಪ್ಪ ಕಾಶೆಂಪುರ್

    ಸಿಎಂ ಪರ ರೈತರಲ್ಲಿ ಕ್ಷಮೆ ಕೇಳಿದ ಸಚಿವ ಬಂಡೆಪ್ಪ ಕಾಶೆಂಪುರ್

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ನಿರತ ರೈತರಲ್ಲಿ ಕ್ಷಮೆ ಕೇಳಿದ್ದಾರೆ.

    ಕ್ಷಮೆ ಕೇಳಿ ಮಾತನಾಡಿದ ಅವರು, ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇ ಸಭೆ ಕರೆಯಲಾಗುತ್ತದೆ. ಕೊಡಗು ಸಂತ್ರಸ್ತ ರೈತರು, ಬರಗಾಲ ಪೀಡಿದ ಪ್ರದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಸಂಬಂಧ ರೈತ ಮುಖಂಡರ ಜೊತೆಗೆ ಪ್ರತ್ಯೇಕ ಸಭೆ ನಡೆಸುವಂತೆ ಕುಮಾರಸ್ವಾಮಿ ಅವರಿಗೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

    ನಮ್ಮ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದೆ. ರಾಷ್ಟ್ರೀಯ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುತ್ತೇವೆ ಅಂತ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇವತ್ತು ಸರ್ಕಾರ ಒಳ್ಳೆಯ ರೀತಿ ನಡೆಯುತ್ತಿದೆ. ಹಂತ ಹಂತವಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಸಚಿವರು ತಿಳಿಸಿದರು.

    ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ಮಹಿಳೆಗೆ ತಾಯಿ ಅಂತಾ ಕರೆದಿದ್ದಾರೆ. ಯಾವುದೇ ರೀತಿಯ ನಿಂದನೆ ಮಾಡಿಲ್ಲ. ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಸಚಿವರು, ರೈತರ 36 ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪಡೆದರು. ಇತ್ತ ರೈತರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬಂದು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 124 ಸೀಟ್‍ನಲ್ಲಿ ನೀವು ಗೆದ್ದಿರುವುದು ಕೇವಲ 37, ಸಿಎಂ ಸ್ಥಾನ ಏಕೆ ಒಪ್ಪಿಕೊಂಡಿದ್ದೀರಿ – ಬಿಎಸ್‍ವೈ

    124 ಸೀಟ್‍ನಲ್ಲಿ ನೀವು ಗೆದ್ದಿರುವುದು ಕೇವಲ 37, ಸಿಎಂ ಸ್ಥಾನ ಏಕೆ ಒಪ್ಪಿಕೊಂಡಿದ್ದೀರಿ – ಬಿಎಸ್‍ವೈ

    ಬೆಂಗಳೂರು: ಕಬ್ಬು ಹೋರಾಟಗಾರರ ಪರವಾಗಿ ಕೀಳಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

    ರೈತರ ಸಮಸ್ಯೆಗೆ ಬಗ್ಗೆ ಮಾತನಾಡಿದ ಬಿಎಸ್‍ವೈ ಅವರು, “ಮಾತು ಎತ್ತಿದ್ದರೆ ಅವರಿಗೆ ವೋಟ್ ನೀಡಿ. ನನಗೆ ಏಕೆ ಕೇಳುತ್ತೀರಾ ಎಂದು ಹೇಳುತ್ತೀರಿ. ನಿಮಗೆ ವೋಟ್ ಕೊಟ್ಟಿಲ್ಲ ತಾನೇ. 124 ಸೀಟ್‍ನಲ್ಲಿ ನೀವು ಗೆದ್ದಿರುವುದು ಕೇವಲ 37 ಸೀಟ್. ಹಾಗಾದ್ರೆ ಮುಖ್ಯಮಂತ್ರಿ ಸ್ಥಾನ ಏಕೆ ಒಪ್ಪಿಕೊಂಡಿದ್ದೀರಿ” ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

    ನಿಮಗೆ ಸಿಎಂ ಕುರ್ಚಿ ಬೇಕು. ಆದರೆ ರೈತರ ಸಮಸ್ಯೆ ಬಗ್ಗೆಹರಿಸಲು ನೀವು ಸಿದ್ಧರಿಲ್ಲ. ಇಂದು ಬೆಳಗಾವಿಯಲ್ಲಿರುವಂತಹ ರೈತರಿಗೆ ಬೆಂಬಲ ಬೆಲೆ ಬೇಕು ಎಂದು ಅನೇಕ ಹೋರಾಟಗಾರರಿಗೆ ನಾನೇ ಬೆಳಗಾವಿಗೆ ಬಂದು ರೈತರ ಸಮಸ್ಯೆಯನ್ನು ಬಗೆ ಹರಿಸುತ್ತೇನೆ ಎಂದು ಹೇಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

    ಮುಖ್ಯಮಂತ್ರಿಯಾಗಿ ಪ್ರತಿ ತಿಂಗಳು ರೈತರ ಸಭೆ ನಡೆಸುತ್ತೇನೆ ಎಂದು ಹೇಳಿದ್ದೀರಿ. ಆದರೆ ಇದೂವರೆಗೂ ನೀವು ಸಭೆ ಮಾಡಲಿಲ್ಲ. ರೈತರ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಯೋಗ್ಯತೆಯಿಲ್ಲ. ರೈತರಿಗೆ ಕಬ್ಬಿನ ಬೆಲೆ ಬಗ್ಗೆ ಕೇಂದ್ರ ಸರ್ಕಾರ ಕಬ್ಬಿನ ಕಾರ್ಖಾನೆಗೆ ಅನೇಕ ಸಹಕಾರ ನೀಡಿದರೂ ಸಹ ಸರಿಯಾದ ಬೆಂಬಲ ಬೆಲೆ ನಿರ್ಧಾರ ಮಾಡಿ ಬಾಕಿ ಹಣ ಪಾವತಿಸುವ ಕೆಲಸಕ್ಕೆ ನೀವು ಸಿದ್ಧರಿಲ್ಲ ಬಿಎಸ್‍ವೈ ಆಕ್ರೋಶ ವ್ಯಕ್ತಪಡಿಸಿದರು.

    ಸಂಸದ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ನಿಮ್ಮ ಗುಪ್ತಚರ ಇಲಾಖೆಯಲ್ಲಿ ನಿಮಗೆ ಸಾಕ್ಷಿ ಆಧಾರವಿದ್ದರೆ ಕೈವಾಡ ಮಾಡಿದ್ದವರನ್ನು ಅರೆಸ್ಟ್ ಮಾಡಿ. ಸಾಮಾನ್ಯ ರೈತರನ್ನು ಯಾಕೆ ಬಂಧಿಸುತ್ತಿದ್ದೀರಿ. ನೀವು ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಆದರೆ ಟಿಪ್ಪು ಜಯಂತಿಗೆ ತೋರಿಸಿದ ಆಸಕ್ತಿಯನ್ನು ನೀವು ಯಾಕೆ ರೈತರ ಸಾಲಮನ್ನಾ ಬಗ್ಗೆ ಏಕೆ ತೋರಿಸುತ್ತಿಲ್ಲ. ಇದುವರೆಗೂ ರೈತರಿಗೆ ನೋಟಿಸ್ ನೀಡುವವರಿಗೆ ಏಕೆ ನೋಟಿಸ್ ನೀಡಿಲ್ಲ. ಸುಳ್ಳು ಹೇಳುವುದು ಅವರ ರಕ್ತದಲ್ಲೇ ಬಂದಿದೆ. ರಾಜಕೀಯ ವಿರೋಧಿಗಳನ್ನು ಸಿಸಿಬಿ ಮೂಲಕ ಹೆದರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews