Tag: ಪ್ರತಿಕಾ ಗೋಷ್ಠಿ

  • ಹಣ ಕಳೆದುಕೊಂಡವರಿಗಾಗಿ ನನ್ನ ಹೃದಯ ಬಡಿದುಕೊಳ್ಳುತ್ತಿದೆ: ಶಾಸಕ ಬೇಗ್

    ಹಣ ಕಳೆದುಕೊಂಡವರಿಗಾಗಿ ನನ್ನ ಹೃದಯ ಬಡಿದುಕೊಳ್ಳುತ್ತಿದೆ: ಶಾಸಕ ಬೇಗ್

    – ಐಎಂಎ ಸಿಬಿಐ ತನಿಖೆಗೆ ನೀಡಲು ಆಗ್ರಹ

    ನವದೆಹಲಿ: ಐಎಂಎ ಪ್ರಕರಣದಲ್ಲಿ ಬಿಡುಗಡೆ ಆಗಿರುವ ಆಡಿಯೋದಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಲು ನಾನು ಸಿಎಂ ಕುಮಾರಸ್ವಾಮಿ ಅವರು ಒತ್ತಾಯ ಮಾಡುತ್ತೇನೆ. ಕೇವಲ ಐಎಂಎ ಅಲ್ಲದೇ ಕ್ಯಾಪಿಟಲ್, ಅಲಾ, ಅಜ್ಮೇರಾ, ಅಂಬಿಡೆಂಟ್ ಸೇರಿದಂತೆ ಇತರೇ ಸಂಸ್ಥೆಗಳ ಮೇಲೂ ತನಿಖೆ ನಡೆಯಬೇಕಿದೆ ಎಂದು ಶಾಸಕ ರೋಷನ್ ಬೇಗ್ ಆಗ್ರಹಿಸಿದ್ದಾರೆ.

    ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವನೋ ಒಬ್ಬ ಫ್ರಾಡ್ ನನ್ನ ಹೆಸರು ಹೇಳಿದ ತಕ್ಷಣ ಆರೋಪ ಆಗುತ್ತದೆ ಅಷ್ಟೇ. ಆರೋಪ ಮಾಡಿ ಜನರಿಗೆ ಮೋಸ ಮಾಡಿ ಪರಾರಿಯಾಗಿರುವ ಆತನ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದು ಅಗತ್ಯ. ಆತನನ್ನು ಕೂಡಲೇ ಪತ್ತೆ ಮಾಡಿ ತನಿಖೆ ನಡೆಸಬೇಕಿದೆ. ಹಗರಣ ಮಾಡಿದಾತ 400 ಕೋಟಿ ರೂ. ಆರೋಪ ಮಾಡಿ ಓಡಿ ಹೋದರೆ ಎಷ್ಟು ಸಮಂಜಸ. ಅಲ್ಲದೇ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಹೆಚ್ಚಿನ ಅಧಿಕಾರ ಇರುವುದಿಂದ ತನಿಖೆ ಸಂಪೂರ್ಣವಾಗಿ ವೇಗವಾಗಿ ನಡೆಯುತ್ತದೆ ಎಂದು ಹೇಳಿದರು.

    ನನಗೆ ಐಎಂಎ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕ ಇಲ್ಲ. ನನ್ನ ಕ್ಷೇತ್ರದಲ್ಲಿ ನಾನು ಓದಿದ ಶಾಲೆಯನ್ನ ಅಭಿವೃದ್ಧಿ ಪಡಿಸಲು ಮುಂದಾದ ವೇಳೆ ಈ ಸಂಸ್ಥೆ ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಿದೆ ಅಷ್ಟೇ. ಈ ಕಾರ್ಯಕ್ಕೆ ಸಿಎಂ ಕುಮಾರಸ್ವಾಮಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ಎಲ್ಲರಿಗೂ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.

    ಸದ್ಯ ಹಗರಣದಲ್ಲಿ ಮೋಸ ಹೋಗಿ ಪರದಾಡುತ್ತಿರುವವರ ಹಣ ಅವರಿಗೆ ಕೊಡಿಸುವ ಕಾರ್ಯ ಮೊದಲು ಆಗಬೇಕು. ಪ್ರಕರಣ ಸತ್ಯಾಂಶ ಹೊರ ಬರಬೇಕು ಎಂದರೆ ಆತ ನಾಪತ್ತೆಯಾಗುವ ಮುನ್ನ 48 ಗಂಟೆಗಳ ಅವಧಿಯಲ್ಲಿ ಯಾರಿಗೆ ಕಡೆ ಮಾಡಿದ್ದ. ಆತನ ಮೊಬೈಲ್ ವಾಟ್ಸಾಪ್ ಗೆ ಯಾವ ಸಂದೇಶಗಳು ಬಂದಿತ್ತು. ಅಲ್ಲದೇ ಯಾರೊಂದಿಗೆ ಆತ ಸಂಪರ್ಕದಲ್ಲಿ ಇದ್ದ ಎಂಬುದರ ಮಾಹಿತಿ ತನಿಖೆ ವೇಳೆ ಸಿಗಲಿದೆ. ನಾನು ಪ್ರಕರಣ ವಿಚಾರಣೆ ಸಂಬಂಧ ಎಸ್‍ಐಟಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ಹೃದಯ ಮೋಸ ಹೋದವರ ಪರ ಬಡಿದುಕೊಳ್ಳುತ್ತಿದೆ ಎಂದರು.

    ಬೆಳಗಾವಿಯಲ್ಲಿಯೂ ಇಂತಹದ್ದೆ ಪ್ರಕರಣ ನಡೆದಿತ್ತು, ಇದರಲ್ಲಿ ಕೆಲ ಮಂದಿ ನಾಪತ್ತೆಯಾಗಿದ್ದರೆ ಕೆಲವರು ಜಾಮೀನು ಪಡೆದು ಹೊರಗಿದ್ದರೆ. ಯಾವುದೇ ಪ್ರಕರಣವಾದರೂ ಹಣ ಕಳೆದುಕೊಂಡ ಜನರಿಗೆ ಅದಷ್ಟು ಬೇಗ ಹಣ ವಾಪಸ್ ಮಾಡಬೇಕು. ವಂಚನೆ ಮಾಡಿರುವ ವ್ಯಕ್ತಿಯ ಬ್ಯಾಂಕ್ ಖಾತೆ ಜಪ್ತಿ ಮಾಡಬೇಕಿದೆ. ನಾನು ಯಾವಾಗ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದೆನೋ ಆಗಲೇ ನನ್ನ ಮೇಲೆ ಆರೋಪ ಬಂದಿದೆ. ನಾನು ನನ್ನ ಕುಟುಂಬದ ಯಾವುದೇ ಸದಸ್ಯರು ಸಂಸ್ಥೆಯೊಂದಿಗೆ ವ್ಯವಹಾರ ನಡೆಸಿಲ್ಲ ಎಂದು ತಿಳಿಸಿದರು.