Tag: ಪ್ರತಾಪ್ ಗೌಡ ಪಾಟೀಲ್

  • ಗೆದ್ದ 11 ಜನರಿಗೆ ಮಾತ್ರ ಸಚಿವ ಸ್ಥಾನ, ಸೋತವರಿಗೆ ಸದ್ಯಕ್ಕಿಲ್ಲ: ಪ್ರತಾಪ್ ಗೌಡ ಪಾಟೀಲ್

    ಗೆದ್ದ 11 ಜನರಿಗೆ ಮಾತ್ರ ಸಚಿವ ಸ್ಥಾನ, ಸೋತವರಿಗೆ ಸದ್ಯಕ್ಕಿಲ್ಲ: ಪ್ರತಾಪ್ ಗೌಡ ಪಾಟೀಲ್

    -ಮತ್ತೆ ಬಂಡಾಯ ಏಳಲ್ಲ

    ರಾಯಚೂರು: ಎರಡು ಮೂರು ದಿನದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದ್ದು, ಮೊದಲಿಗೆ ಗೆದ್ದ 11 ಶಾಸಕರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆ ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ಇಲ್ಲ ಅಂತ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

    ರಾಯಚೂರಿನ ಮಸ್ಕಿಯಲ್ಲಿ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್, ಮಸ್ಕಿ ಹಾಗೂ ಆರ್ ಆರ್ ನಗರದ ಚುನಾವಣೆ ಬಳಿಕ ಇಬ್ಬರಿಗೂ ಸಚಿವ ಸ್ಥಾನ ನೀಡುತ್ತಾರೆ. ಎರಡು ಸಚಿವ ಸ್ಥಾನ ಹಾಗೆ ಉಳಿಸುವುದಾಗಿ ಬಿಎಸ್ ವೈ ಹೇಳಿದ್ದಾರೆ ಎಂದರು. ನಾವು 17 ಜನ ಒಟ್ಟಾಗಿಯೇ ಇದ್ದೇವೆ. ಆದರೆ ಒಂದು ಬಾರಿಯೂ ಸಭೆ ಮಾಡಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ಬಂಡಾಯದ ಪ್ರಶ್ನೆಯೇ ಇಲ್ಲ. ಒಂದು ಪಕ್ಷ ಬಿಟ್ಟು ಬಂದವರು ಮತ್ತೆ ಬಂಡಾಯ ಏಳಲು ಸಾಧ್ಯವಿಲ್ಲ ಎಂದರು.

    11 ಜನ ಗೆದ್ದ ಶಾಸಕರನ್ನ ಮಂತ್ರಿಗಳನ್ನಾಗಿ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಅನ್ನೋ ವಿಶ್ವಾಸವಿದೆ. ಪಕ್ಷದಲ್ಲಿ ಶಿಸ್ತಿದೆ ಹೈಕಮಾಂಡ್ ಇದೆ. ಹೀಗಾಗಿ ಯಡಿಯೂರಪ್ಪನವರು ಸ್ವತಂತ್ರವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಸಂಕ್ರಾಂತಿವರೆಗೆ ಶೂನ್ಯ ಮಾಸ ಇದ್ದಿದ್ದರಿಂದ ಸಂಪುಟ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಈಗಲೂ ವಿಳಂಬವಾಗಿದೆ ಇನ್ನೂ ಎರಡು ಮೂರು ದಿನದಲ್ಲಿ ವಿಸ್ತರಣೆಯಾಗುವ ನಿರೀಕ್ಷೆ ಇದೆ ಅಂತ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

  • ಉಪಚುನಾವಣೆ ಫಲಿತಾಂಶದಿಂದ ಮಹತ್ವ ಕಳೆದುಕೊಂಡ್ವಾ 2 ಕ್ಷೇತ್ರಗಳು?

    ಉಪಚುನಾವಣೆ ಫಲಿತಾಂಶದಿಂದ ಮಹತ್ವ ಕಳೆದುಕೊಂಡ್ವಾ 2 ಕ್ಷೇತ್ರಗಳು?

    ರಾಯಚೂರು: ಉಪಚುನಾವಣೆಯ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಆದರೆ ಚುನಾವಣೆಯನ್ನ ಇನ್ನೂ ಎದುರಿಸದ ಎರಡು ಕ್ಷೇತ್ರಗಳ ಅನರ್ಹ ಶಾಸಕರ ಪರಸ್ಥಿತಿ ಈಗಲೂ ಅತಂತ್ರವಾಗಿದೆ. ಆ ಎರಡೂ ಕ್ಷೇತ್ರಗಳ ಉಪಚುನಾವಣೆಗೂ ಅಷ್ಟೇನೂ ಮಹತ್ವ ಇಲ್ಲದ ಕಾರಣ ಇಲ್ಲಿನ ಟಿಕೆಟ್ ಆಕಾಂಕ್ಷಿಗಳಲ್ಲೇ ಉತ್ಸಾಹ ಕುಂದಿದಂತಾಗಿದೆ. ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಂತೂ ಇಷ್ಟುದಿನ ಇದ್ದ ಕುತೂಹಲವೇ ಈಗ ಮಾಯವಾದಂತೆ ಕಾಣುತ್ತಿದೆ.

    ಕಳೆದ ವಿಧಾನಸಭಾ ಚುನಾವಣಾ ವೇಳೆ ಅಕ್ರಮ ಮತದಾನ ನಡೆದಿದೆ ಅಂತ ಅಂದಿನ ಬಿಜೆಪಿ ಅಭ್ಯರ್ಥಿಗಳು ನ್ಯಾಯಾಲಯ ಮೆಟ್ಟಿಲು ಏರಿದ್ದಕ್ಕೆ ರಾಯಚೂರಿನ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ಇನ್ನೂ ನಡೆದಿಲ್ಲ. ಈಗ ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಮೂಲಕ ಬಿಜೆಪಿ ಸಂಖ್ಯಾಬಲದಿಂದ ಭದ್ರವಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಚುನಾವಣೆಗೂ ಅಷ್ಟೊಂದು ಮಹತ್ವವಿಲ್ಲ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಆರ್ ಆರ್ ನಗರದ ಅನರ್ಹ ಶಾಸಕ ಮುನಿರತ್ನ ಚುನಾವಣೆ ಎದುರಿಸಲು ಇನ್ನಷ್ಟು ಸಮಯ ಕಾಯಬೇಕಿದೆ.

    ಇಷ್ಟು ದಿನ ದೂರನ್ನ ವಾಪಸ್ ಪಡೆಯಲ್ಲ, ನಾನೂ ಟಿಕೆಟ್ ಆಕಾಂಕ್ಷಿ ಎನ್ನುತ್ತಿದ್ದ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ ಈಗ ದೂರನ್ನ ವಾಪಸ್ ಪಡೆದು ಯಾರೇ ಅಭ್ಯರ್ಥಿಯಾದರೂ ಪಕ್ಷಕ್ಕೆ ಬೆಂಬಲಿಸುತ್ತೇನೆ ಅಂತಿದ್ದಾರೆ. ಟಿಕೆಟ್ ಬೇಡಿಕೆಯಿಂದಲೇ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಸನಗೌಡ, ಈಗ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ, ಅಕ್ರಮ ಮತದಾನ ನಡೆದಿದೆ ಅಂತ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಎಂ ಯಡಿಯೂರಪ್ಪನವರ ಮಾತಿಗೆ ಒಪ್ಪಿ ದೂರು ಹಿಂಪಡೆಯಲು ಮುಂದಾಗಿದ್ದಾರಂತೆ. ಆದರೆ ಅವರಿಗೆ ಟಿಕೆಟ್ ಗ್ಯಾರೆಂಟಿಯಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟ ಬಸನಗೌಡ ತುರ್ವಿಹಾಳ

    ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಹಾರಿದ ಮೇಲೆ ಕಾಂಗ್ರೆಸ್ಸಿಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಾಗಿ ಉಪಚುನಾವಣೆ ಈಗಲೇ ಎದುರಾದ್ರೂ ಚುನಾವಣೆ ಎದುರಿಸಲು ಕಾಂಗ್ರೆಸ್ ಸದೃಢವಾಗಿಲ್ಲ. ಬಿಜೆಪಿ ಟಿಕೆಟ್ ಕೈತಪ್ಪಿದರೆ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಕದ ತಟ್ಟಬಹುದು ಅನ್ನೋ ವಿಚಾರವೂ ಸದ್ಯಕ್ಕೆ ಮುಗಿದ ಅಧ್ಯಾಯದಂತೆ ಕಾಣುತ್ತಿದೆ. ಕಾಂಗ್ರೆಸ್ ಮಾತ್ರ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ನಾನಾ ಕಸರತ್ತು ನಡೆಸಿದೆ.

    ಒಟ್ಟಿನಲ್ಲಿ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಈ ಎರಡೂ ಕ್ಷೇತ್ರಗಳನ್ನ ಗೌಣವಾಗಿಸಿದೆ. ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಗಂತೂ ಚುನಾವಣೆ ಬೇಡವಾಗಿದ್ದು ಎಂ.ಎಲ್.ಸಿ ನಿರೀಕ್ಷೆಯಲ್ಲಿದ್ದಾರೆ ಅನ್ನೋದು ಅವರ ಆಪ್ತವಲಯದ ಮಾತು. ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುವ ಬಸನಗೌಡ ತುರ್ವಿಹಾಳ ಈ ಬಾರಿಯಾದ್ರೂ ದೂರು ವಾಪಸ್ ತೆಗೆದುಕೊಳ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಮಸ್ಕಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಯಾಕಿಲ್ಲ ಎಲೆಕ್ಷನ್? – ಸಂಜೀವ್ ಕುಮಾರ್ ಸ್ಪಷ್ಟನೆ

  • ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದು, ಬೇರೆಯವರ ಮೇಲೆ ಆರೋಪ ಮಾಡಲ್ಲ: ಪ್ರತಾಪ್ ಗೌಡ

    ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದು, ಬೇರೆಯವರ ಮೇಲೆ ಆರೋಪ ಮಾಡಲ್ಲ: ಪ್ರತಾಪ್ ಗೌಡ

    ರಾಯಚೂರು: ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಬೇರೆಯವರ ಮೇಲೆ ಆರೋಪ ಮಾಡಲ್ಲ ಎಂದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಅಂಗಿಕಾರವಾದ ಮೇಲೆಯೇ ಮುಂಬೈ ಬಿಡುತ್ತೇವೆ. ಶಿವರಾಮ್ ಹೆಬ್ಬಾರ್ ಹೇಳಿಕೆ ಅವರ ವೈಯಕ್ತಿಕ ವಿಚಾರ. ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಬೇರೆ ಯಾರದ್ದೋ ಹೆಸರು ತಂದು ಆರೋಪ ಮಾಡಲ್ಲ, ಅದು ಸರಿಯಲ್ಲ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿಗೆ ಹೋಗುತ್ತೇನೋ ಇಲ್ಲವೋ ಎನ್ನುವ ವಿಚಾರ ಮುಂದೆ ತಿಳಿಸುತ್ತೇನೆ. ರಾಜೀನಾಮೆ ಅಂಗೀಕಾರವಾದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇನೆ. ಸದ್ಯ ಮುಂಬೈ ಬಿಟ್ಟು ಕ್ಷೇತ್ರಕ್ಕೆ ಬರುವುದಿಲ್ಲ. ಇನ್ನೆರಡು ದಿನದಲ್ಲಿ ರಾಜೀನಾಮೆ ಅಂಗೀಕಾರವಾದರೆ ಬೆಂಗಳೂರಿಗೆ ಬರುತ್ತೇವೆ ಎಂದು ತಿಳಿಸಿದರು.

    ಹೆಬ್ಬಾರ್ ನಿನ್ನೆ ನಮ್ಮ ಜೊತೆಯಲ್ಲೇ ಇದ್ದರು. ಆದರೆ ಸದ್ಯ ಅವರು ತಮ್ಮ ಸ್ವಕ್ಷೇತ್ರಕ್ಕೆ ಹೋಗಿದ್ದಾರೆ. ಅವರ ಹೇಳಿಕೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದರು.

  • ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ಮುಂಬೈನ ಐಷಾರಾಮಿ ಹೋಟೆಲಿನಲ್ಲಿ ಪ್ರತಾಪ್ ಗೌಡ ಪಾಟೀಲ್-ಜೋಪಡಿಯಲ್ಲಿ ಶಾಲಾ ಮಕ್ಕಳು

    ರಾಯಚೂರು: ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಏನೋ ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಅವರದೇ ಕ್ಷೇತ್ರದ ಈ ಶಾಲೆಯ ಮಕ್ಕಳು ಮಾತ್ರ ಕಟ್ಟಡವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

    ಸಿಂಧನೂರು ತಾಲೂಕಿನ ಗಣೇಶ ನಗರ ಗ್ರಾಮದ ಪ್ರಾಥಮಿಕ ಶಾಲೆಗೆ ಕಟ್ಟಡವೇ ಇಲ್ಲದೆ ಕಳೆದ 12 ವರ್ಷಗಳಿಂದ ಜೋಪಡಿಯಲ್ಲಿ ನಡೆಯುತ್ತಿದೆ. ಇಷ್ಟು ದಿನ ಬಿಸಿಲಿಗೆ ತತ್ತರಿಸಿದ ಒಂದರಿಂದ 6 ನೇ ತರಗತಿ ಮಕ್ಕಳು ಈಗ ಮಳೆಯಿಂದಾಗಿ ಶಾಲೆಗೆ ಹೋಗದಂತಹ ಸ್ಥಿತಿಯಲ್ಲಿದ್ದಾರೆ.

    ಖಾಸಗಿಯವರ ಜೋಪಡಿಯಲ್ಲಿ ಪಾಠ ನಡೆಸುತ್ತಿದ್ದ ಶಿಕ್ಷಕರು ಮಳೆಯಿಂದಾಗಿ ಶಾಲೆಯನ್ನ ನಡೆಸದಂತಾಗಿದೆ. ಕಷ್ಟಪಟ್ಟು ಶಾಲೆಗೆ ಬರುತ್ತಿದ್ದ 16 ಮಕ್ಕಳ ಭವಿಷ್ಯ ಈಗ ಅತಂತ್ರವಾಗಿದೆ. ಕನಿಷ್ಠ ಕಟ್ಟಡದಿಂದ ಹಿಡಿದು ಯಾವುದೇ ಸೌಲಭ್ಯಗಳಿಲ್ಲದೇ ಈ ಗ್ರಾಮದ ಶಾಲೆ ಇದ್ದರೂ ಇಲ್ಲದಂತಾಗಿದೆ.

    ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಶಾಸಕ ಪ್ರತಾಪ್ ಗೌಡ ಪಾಟೀಲ್‍ಗೆ ನೂರು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮೊದಲು ಪಬ್ಲಿಕ್ ಟಿವಿ ಸಹ ಶಾಲೆ ಕುರಿತು ವರದಿ ಪ್ರಸಾರ ಮಾಡಿತ್ತು, ಆದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ವಿದ್ಯಾರ್ಥಿಗಳ ಕಷ್ಟಕ್ಕೆ ಇನ್ನೂ ಸ್ಪಂದಿಸಿಲ್ಲ.

  • ಇನ್ನೂ 7-8 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಪ್ರತಾಪ್ ಗೌಡ ಪಾಟೀಲ್

    ಇನ್ನೂ 7-8 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಪ್ರತಾಪ್ ಗೌಡ ಪಾಟೀಲ್

    ರಾಯಚೂರು: ಇಂದು ಅಥವಾ ನಾಳೆ ಇನ್ನೂ 7 ರಿಂದ 8 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಮುಂಬೈನಲ್ಲಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

    ಕಳೆದ ದಿನ ಅತೃಪ್ತ ಶಾಸಕರೊಂದಿಗೆ ರಾಜೀನಾಮೆ ನೀಡಿರುವ ಪ್ರತಾಪ್‍ಗೌಡ ಪಾಟೀಲ್, ಈಗ ರಾಜೀನಾಮೆ ಸರಣಿ ಮುಂದುವರಿಯಲಿದೆ ಅನ್ನೋದನ್ನ ತಿಳಿಸಿದ್ದಾರೆ. ಲಿಸ್ಟ್ ನಲ್ಲಿ ಯ್ಯಾರ್ಯಾರು ಇದ್ದಾರೆ ಗೊತ್ತಿಲ್ಲ ರಾಜೀನಾಮೆಯಂತೂ ಕೊಡುತ್ತಾರೆ. ಇಂದು ಭಾನುವಾರ ಸ್ಪೀಕರ್ ಸಿಗಲ್ಲ. ಹೀಗಾಗಿ ನಾಳೆ(ಸೋಮವಾರ) 7 ರಿಂದ 8 ಜನ ರಾಜೀನಾಮೆ ಕೊಡುವುದು ಪಕ್ಕಾ ಎಂದು ಹೇಳಿದ್ದಾರೆ.

    ನಮ್ಮ ಕ್ಷೇತ್ರದಲ್ಲಿ ನಾವು ಎಷ್ಟೇ ಕೆಲಸ ಮಾಡಿದರೂ ಜನರ ಮನಸ್ಸು ಬಿಜೆಪಿ ಪರ ಇದೆ. ಲೋಕಸಭಾ ಚುನಾವಣೆಯಲ್ಲಿ ನಾವು ನೋಡಿದ್ದೀವಿ. ಜನರು ಒಟ್ಟಾಗಿರುವುದರಿಂದ ನಮ್ಮ ಮುಂದಿನ ಭವಿಷ್ಯದ ಪ್ರಶ್ನೆ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಯಿತು. ರಾಜೀನಾಮೆ ಅಂಗೀಕಾರವಾದ ಮೇಲೆ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇವೆ ಎಂದು ಪ್ರತಾಪ್‍ಗೌಡ ತಿಳಿಸಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಂದ ಮೇಲೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಹಿರಿತನ ಗುರುತಿಸುವ ಕೆಲಸ ಆಗಲಿಲ್ಲ. ಮೂರು ಬಾರಿ ಶಾಸಕರಾಗಿದರೂ ಸಚಿವ ಸ್ಥಾನ ನೀಡುವಲ್ಲಿ ಅನ್ಯಾಯ ಮಾಡಿದರು. ಪಕ್ಷದ ಹಿರಿಯರು ಸಹ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅವರು ರಾಜೀನಾಮೆಗೆ ಕಾರಣ ತಿಳಿಸಿದರು.

    ಪಬ್ಲಿಕ್ ಟಿವಿ ವರದಿಗಾರನ ಜೊತೆ ಪಾಟೀಲ್ ಸಂಭಾಚಣೆ ಇಂತಿದೆ:
    ವರದಿಗಾರ – ರಾಜಿನಾಮೆಗೆ ಮುಖ್ಯ ಕಾರಣವೇನು?
    ಪ್ರತಾಪ ಗೌಡ ಪಾಟೀಲ್ – ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕೆಲಸ ಆಗುತ್ತಿಲ್ಲ. ಹಿರಿಯ ಶಾಸಕರಿಗೆ ಗೌರವ ಸಿಗುತ್ತಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ನಾವು ಎಷ್ಟೇ ಕೆಲಸ ಮಾಡಿದರೂ ಜನರ ಮನಸ್ಸು ಬಿಜೆಪಿ ಪರ ಇದೆ. ಭವಿಷ್ಯದ ದೃಷ್ಟಿಯಿಂದ ನಾವು ಪಕ್ಷಕ್ಕೆ ರಾಜೀನಾಮೆ ನೀಡಬೇಕಾಗಿದೆ.
    ವರದಿಗಾರ – ಸರ್, ಮುಂದೆ ನೀವು ಬಿಜೆಪಿಗೆ ಸೇರುತ್ತೀರಾ?
    ಪ್ರತಾಪ ಗೌಡ ಪಾಟೀಲ್ – ರಾಜೀನಾಮೆ ಅಂಗೀಕಾರವಾದ ನಂತರ ಬಿಜೆಪಿ ಸೇರುತ್ತೇವೆ.
    ವರದಿಗಾರ – ಇನ್ನೂ ಶಾಸಕರು ರಾಜೀನಾಮೆ ಕೊಡುತ್ತಾರಾ ಸರ್.
    ಪ್ರತಾಪ ಗೌಡ ಪಾಟೀಲ್ – ಇನ್ನೂ 7-8 ಜನರು ರಾಜಿನಾಮೆ ನೀಡುತ್ತಾರೆ. ಅದು ಸಹ ಇಂದು ಅಥವಾ ನಾಳೆ ಆಗುತ್ತೆ.
    ವರದಿಗಾರ – ಲೀಸ್ಟ್ ನಲ್ಲಿ ಯಾರ-ಯಾರ ಹೆಸರು ಇದೆ ಸರ್
    ಪ್ರತಾಪ ಗೌಡ ಪಾಟೀಲ್ – ನನಗೆ ಗೊತ್ತಿಲ್ಲ, ರಾಜೀನಾಮೆ ನೀಡುವುದು ಖಚಿತ.

  • ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಅತೃಪ್ತರ ರಾಜೀನಾಮೆ ಬೆನ್ನಲ್ಲೇ ಬೆಂಗ್ಳೂರಿಗೆ ಆಗಮಿಸಿದ ‘ಕೈ’ ಮೂವರು ಶಾಸಕರು

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿಯ ರಾಜೀನಾಮೆ ಇಂದು ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಈ ಹಿಂದಿನಿಂದಲೂ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್, ಪ್ರತಾಪ್ ಗೌಡ ಪಾಟೀಲ್, ಅಮರೇಗೌಡ ಬಯ್ಯಾಪುರ ಇಂದು ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮೂವರು ಶಾಸಕ ನಡೆ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭೀಮಾನಾಯ್ಕ್ ಅವರು, ಸಾಕಷ್ಟು ಬಾರಿ ನಾನು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಆನಂದ್ ಸಿಂಗ್ ಅವರು ಬೆಳಗ್ಗೆ ರಾಜೀನಾಮೆ ನೀಡಿದ ಬಳಿಕವೂ ನಾನು ಸ್ಪಷ್ಟನೆ ನೀಡಿದ್ದೆ. ಅವರ ಮನವೊಲಿಕೆ ಮಾಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ಇಂದಿಗೂ ಮಾಧ್ಯಮಗಳ ಅತೃಪ್ತ ಪಟ್ಟಿಯಲ್ಲಿ ನಮ್ಮ ಹೆಸರಿದೆ. ನಾವು ಕಾಂಗ್ರೆಸ್‍ನಲ್ಲಿಯೇ ಮುಂದುವರಿಯುತ್ತೇವೆ ಎಂದು ಹೇಳುತ್ತೇನೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಆಪರೇಷನ್ ಕಮಲ ಹೆಸರಿನಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಬೇಡಿ ಎಂದರು.

    ನಮಗೂ ಮಾನ, ಮರ್ಯಾದೆ ಇದೆ:
    ಈ ವೇಳೆ ಮಾತನಾಡಿದ ಅಮರೇಗೌಡ ಬಯ್ಯಾಪುರ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರ ಹಕ್ಕು. ಆದರೆ ರಾಜೀನಾಮೆ ನೀಡಿದ ಬಳಿಕ ಎಲ್ಲಿ ಹೋಗುತ್ತಾರೆ ಎಂಬುವುದು ಕೂಡ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಶಾಸಕರ ರಾಜೀನಾಮೆ ಹಿಂದೆ ನನ್ನ ಕೈವಾಡ ಇದೆ. ನಾನು ರಾಜೀನಾಮೆ ನೀಡುತ್ತೇನೆ ಎಂಬುವುದು ಸುಳ್ಳು. ಆದ್ದರಿಂದ ಮಾಧ್ಯಮಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ ನನ್ನ ಹೆಸರನ್ನು ಆತೃಪ್ತರ ಪಟ್ಟಿಯಲ್ಲಿ ಪ್ರಸ್ತಾಪ ಮಾಡಬೇಡಿ ಎಂದು ಮನವಿ ಮಾಡಿದರು.

    ಸದ್ಯ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ರಾಜೀನಾಮೆ ಅವರು ವೈಯಕ್ತಿಕ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ನಾವು ನಾವು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡು ಬಂದಿದೆ. ಆದ್ದರಿಂದ ಪಕ್ಷದಲ್ಲೇ ಮುಂದುವರಿಯುತ್ತೇವೆ. ಯಾವುದೇ ಅತೃಪ್ತರ ಗುಂಪಿನಲ್ಲಿ ನಾವಿಲ್ಲ. ನಮಗೆ ಮಾನ ಮಾರ್ಯದೆ. ಇದೇ ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದರು.

  • ಕಾಂಗ್ರೆಸ್‍ನಲ್ಲಿ ಬಿರುಸುಗೊಂಡಿತು ಅತೃಪ್ತ ಶಾಸಕರ ರಣತಂತ್ರ

    ಕಾಂಗ್ರೆಸ್‍ನಲ್ಲಿ ಬಿರುಸುಗೊಂಡಿತು ಅತೃಪ್ತ ಶಾಸಕರ ರಣತಂತ್ರ

    ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟದಲ್ಲಿ ಪಕ್ಷೇತರರಿಬ್ಬರಿಗೆ ಸಚಿವ ಸ್ಥಾನ ಸಿಕ್ಕ ಬೆನ್ನಲ್ಲಿಯೇ ಕಾಂಗ್ರೆಸ್‍ನಲ್ಲಿ ಅತೃಪ್ತ ಶಾಸಕರ ರಣತಂತ್ರ ಬಿರುಸುಗೊಂಡಿದೆ.

    ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಅವರ ಮನೆಗೆ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್‍ಗೌಡ ಪಾಟೀಲ್ ಬೆಳ್ಳಂಬೆಳಗ್ಗೆ ಭೇಟಿ ನೀಡಿದ್ದಾರೆ. ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿ ಅವರು ಕೂಡ ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಈ ಎಲ್ಲ ಬೆಳವಣಿಗೆ ಕಾಂಗ್ರೆಸ್ ನಾಯಕರಲ್ಲಿ ಆತಂಕ ಹುಟ್ಟಿಸಿದೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೆವನ್ ಮಿನಿಸ್ಟರ್ ಕ್ವಾರ್ಟರ್ಸ್ ನಿವಾಸದಿಂದ ಹೊರ ಬರುತ್ತಿಲ್ಲ. ಹೀಗಾಗಿ ಮಾಜಿ ಸಚಿವರ ನಿವಾಸಕ್ಕೆ ಅತೃಪ್ತರ ಗುಂಪಿನಲ್ಲಿ ಸೇರಿರುವ ಪ್ರತಾಪ್ ಗೌಡ ಪಾಟೀಲ್ ರಹಸ್ಯ ಭೇಟಿ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಜೊತೆಗೆ ಮಾತುಕತೆ ನಡೆಸಿ, ಬಳಿಕ ಹಿಂದಿನ ಗೇಟ್‍ನಿಂದ ಹೊರ ಬಂದಿದ್ದಾರೆ. ಈ ವೇಳೆ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

    ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಪ್ರತಾಪ್ ಗೌಡ ಪಾಟೀಲ್ ಅವರಿಗೆ ರಮೇಶ್ ಜಾರಕಿಹೊಳಿ ತಾಕೀತು ಮಾಡಿದ್ದಾರೆ. ಇದೇ ಕಾರಣಕ್ಕೆ ಮಾಧ್ಯಮಗಳಿಂದ ಶಾಸಕರು ದೂರ ಉಳಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ಗ್ರಾಮಸ್ಥರ ಮನವಿಗೆ ಮೂಕನಾದ ಶಾಸಕ -ಯುವಕರೇ ನಿರ್ಮಿಸಿಕೊಂಡ್ರು ಬಸ್‍ನಿಲ್ದಾಣ

    ರಾಯಚೂರು: ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಬೇಸತ್ತು ರಾಯಚೂರಿನ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮಸ್ಥರು ತಾವೇ ಸ್ವತಃ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.

    ಬಿಸಿಲನಾಡು ರಾಯಚೂರಿನಲ್ಲಿ ಈಗ ಬೆಳಗ್ಗೆ ಹೊತ್ತಲ್ಲೇ ಹೊರಗಡೆ ಓಡಾಡುವುದು ಕಷ್ಟ, ಅಂಥದ್ದರಲ್ಲಿ ಮಲ್ಲದಗುಡ್ಡ ಗ್ರಾಮಸ್ಥರು ಬಿಸಿಲಿನಲ್ಲೇ ಪ್ರತಿದಿನ ಬಸ್‍ಗಾಗಿ ಕಾಯಬೇಕಿದೆ. ನಾಲ್ಕು ವರ್ಷಗಳ ಹಿಂದೆ ಸಿಂಧನೂರು-ಕುಷ್ಟಗಿ ರಸ್ತೆ ಕಾಮಗಾರಿಗಾಗಿ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಆದರೆ ಇದುವರೆಗೂ ಪುನಃ ಬಸ್ ನಿಲ್ದಾಣ ನಿರ್ಮಿಸಿಲ್ಲ.

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಲ್ಲದಗುಡ್ಡ ಗ್ರಾಮದಲ್ಲಿ ಪ್ರತಿಯೊಂದಕ್ಕೂ ಸಮಸ್ಯೆಗಳಿದ್ದು, ಸಾಕಷ್ಟು ಬಾರಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗ್ರಾಮಸ್ಥರು ಸುಸ್ತಾಗಿದ್ದಾರೆ. ಆದರೆ ಇದುವರೆಗೂ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮದ ಸರ್ದಾರ್ ವಲ್ಲಭಬಾಯಿ ಪಟೇಲ್ ಯುವಕರ ಸಂಘ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿಕೊಂಡಿದೆ.

    ಯುವಕರು ನಿರ್ಮಿಸಿರುವ ಈ ನಿಲ್ದಾಣ ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಬೇಕಿದೆ. ಹೀಗಾಗಿ ಗ್ರಾಮಸ್ಥರು ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ.

  • ಇಬ್ಬರು ಕೈ ಶಾಸಕರಿಗೆ `ಪವರ್’ ಫುಲ್ ಭದ್ರತೆ!

    ಇಬ್ಬರು ಕೈ ಶಾಸಕರಿಗೆ `ಪವರ್’ ಫುಲ್ ಭದ್ರತೆ!

    ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಇನ್ನೂ ಕಾಡುತ್ತಿದೆಯಾ ಆಪರೇಷನ್ ಕಮಲ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿಬರುತ್ತಿದೆ. ಯಾಕಂದ್ರೆ ಇಬ್ಬರು ಕೈ ಶಾಸಕರಿಗೆ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಭದ್ರತೆ ಒದಗಿಸುತ್ತಿದ್ದಾರೆ ಎಂಬ ವಿಚಾರವೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಕಾಂಗ್ರೆಸ್ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ರಾತ್ರಿ ಮಾಜಿ ಸಚಿವ ಡಿಕೆಶಿ ತಾವು ವಾಸ್ತವ್ಯವಿದ್ದ ಹೋಟೆಲಿಗೆ ಇಬ್ಬರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಮೂಲಕ ಈ ಇಬ್ಬರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ವಿಶ್ವಾಸಮತ ಸಾಬೀತು ಪಡಿಸುವವರೆಗೆ ಡಿಕೆಶಿ ಕಣ್ಗಾವಲಿನಲ್ಲಿ ಪ್ರತಾಪ್ ಗೌಡ ಮತ್ತು ಆನಂದ್ ಸಿಂಗ್ ಇರಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರಿದ್ದ ಹೋಟೆಲ್ ನಲ್ಲಿ ಈ ಇಬ್ಬರು ಶಾಸಕರೂ ಕೂಡ ವಾಸ್ತವ್ಯ ಹೂಡಲಿದ್ದಾರೆ. ಮತ್ತೆ ಬಿಜೆಪಿ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ ಅಂತ ಡಿಕೆಶಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ದೊರೆತಿದೆ.

    ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಜಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೂ ನಾನೇ ಸಿಎಂ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರು ರಾಜ್ಯಪಾಲರ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡು ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ಭಾರೀ ಹೈಡ್ರಾಮಾವೇ ನಡೆದಿತ್ತು.

    ಇತ್ತ ವಿಧಾನಸಭಾ ಕಲಾಪ ನಡೆಯುತ್ತಿದ್ದಂತೆಯೇ ಶಾಸಕ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಬಾರದೇ ಇರುವುದು ಕಾಂಗ್ರೆಸ್ ಗೆ ಭಾರೀ ಆತಂಕವೇ ಎದುರಾಗಿತ್ತು. ಕೊನೆಗೆ ಡಿಕೆಶಿ ಅವರೇ ಈ ಇಬ್ಬರು ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ವಿಶ್ವಾಸ ಮತ ಸಾಬೀತು ಪಡಿಸುವವರೆಗೆ ಆಪರೇಷನ್ ಕಮಲದ ಭೀತಿಯಿದ್ದು, ಪರಿಣಾಮ ಇಬ್ಬರು ಶಾಸಕರು `ಕೈ’ ಬಿಟ್ಟು ಹೋಗದಂತೆ ಕಾಂಗ್ರೆಸ್ ನಾಯಕರು ನೋಡಿಕೊಳ್ಳುತ್ತಿದ್ದಾರೆ.

  • ಕಾಂಗ್ರೆಸ್‍ನಿಂದ ಉಚ್ಛಾಟನೆಗೊಳಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು

    ಕಾಂಗ್ರೆಸ್‍ನಿಂದ ಉಚ್ಛಾಟನೆಗೊಳಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು

    ರಾಯಚೂರು: ವಿಶ್ವಾಸ ಸಂದರ್ಭದಲ್ಲಿ ಸಕಾಲಕ್ಕೆ ಕೆಪಿಸಿಸಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ರಾಯಚೂರಿನ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪ್ತರು ಉಚ್ಚಾಟನೆಗೆ ಒಳಗಾಗಿದ್ದಾರೆ.

    ಮಸ್ಕಿ ನಗರ ಘಟಕ ಅಧ್ಯಕ್ಷ ಬಸವಂತರಾಯ ಕುರಿ, ಗ್ರಾಮಾಂತರ ಅಧ್ಯಕ್ಷ ಬಸವರಾಜಸ್ವಾಮಿ ಉಚ್ಛಾಟನೆಯಾಗಿದ್ದಾರೆ. ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಚ್ಚಾಟನೆಗೆ ಮುಂದಾಗಿತ್ತು ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ, ಘೋರ್ಪಡೆ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಶಾಸಕ ಪ್ರತಾಪ್ ಗೌಡ ನಾಪತ್ತೆಯಾಗಿದ್ದಾಗ ಅವರ ಜೊತೆಗಿದ್ದ ಬೆಂಬಲಿಗರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಇಬ್ಬರನ್ನೂ ಉಚ್ಚಾಟನೆ ಮಾಡಿದೆ.