Tag: ಪ್ರತಾಪ್ ಗೌಡ ಪಾಟೀಲ್

  • ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು: ಸೋಮಣ್ಣ

    ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು: ಸೋಮಣ್ಣ

    ಬೆಂಗಳೂರು: ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸ್ಕಿಯಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 200 ಓಟ್ ನಲ್ಲಿ ಸೋತಿದ್ದರು. ಯಡಿಯೂರಪ್ಪ ಆಡಳಿತ ಮೆಚ್ಚಿ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿಗೆ ಬಂದ್ರು. ಕೆಲವೊಂದು ಸಾರಿ ಒಳ್ಳೆ ಕೆಲಸ ಮಾಡಿದ್ರು ಸೋಲ್ತಾರೆ. ನಾನು 2009ರಲ್ಲಿ ಸೋತಿದ್ದೆ. ಸೋಲು-ಗೆಲುವು ಒಟ್ಟಾಗಿ ಸ್ವೀಕಾರ ಮಾಡಬೇಕು ಎಂದರು.

    ಬಿಜೆಪಿ ಅವರು ಸೋಲಿಗೆ ಕಾರಣ ಅನ್ನೋ ಪ್ರತಾಪ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾಕೆ ಹಾಗೆ ಮಾತಾಡಿದ್ರು ಗೊತ್ತಿಲ್ಲ. ಅವರ ಜೊತೆ ಮಾತಾಡ್ತೀನಿ. ಇದು ವಿಜಯೇಂದ್ರ ಅಥವಾ ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ತಿಳಿಸಿದರು.

    ಯಡಿಯೂರಪ್ಪ ಕೂಡಾ ಎರಡು ದಿನ ಪ್ರಚಾರ ಮಾಡಿದ್ರು. ಜನ ಬದಲಾವಣೆ ಬೇಕು ಅಂತ ಹೀಗೆ ಮಾಡಿರಬಹುದು. ಮುಂದೆ ತಪ್ಪು ತಿದ್ದುಪಡಿ ಮಾಡಿಕೊಳ್ತೀವಿ. ಸೋಲು-ಗೆಲುವು ಸಹಜ. ಪಾರ್ಟಿ ಕೆಲಸ ಎಲ್ಲರೂ ಮಾಡಿದ್ದಾರೆ. ಜವಾಬ್ದಾರಿ ನಿಭಾಯಿಸಿದ್ದೇವೆ. ಸೋತಾಗ ವಿಜಯೇಂದ್ರ ಸೋಲು ಅನ್ನೋದು ಸರಿಯಲ್ಲ ಎಂದು ಹೇಳಿದರು.

    ಬಸವ ಕಲ್ಯಾಣದಲ್ಲಿ ನಾವು ಟೀಂ ವರ್ಕ್ ಮಾಡಿದ್ದೇವೆ. ಟೀಂ ವರ್ಕ್ ಮಾಡಿದ್ದಕ್ಕೆ ಗೆಲುವು ಆಯ್ತು. ಭಿನ್ನಾಭಿಪ್ರಾಯ ಸರಿ ಮಾಡಿ ಟೀಂ ವರ್ಕ್ ಮಾಡಿ ಗೆದ್ದೆವು. ಕಟೀಲು ಎರಡು ಬಾರಿ ಪ್ರಚಾರ ಮಾಡಿದ್ರು. ನಾನು, ಸವದಿ, ಬೊಮ್ಮಾಯಿ 3 ಜನ 6 ಜಿಲ್ಲಾ ಪಂಚಾಯ್ತಿ ಆಯ್ಕೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ವಿ. ನಾನು ಚುನಾವಣೆಗೆ ಇಳಿದ್ರೆ ಹಿಂದೆ ತಿರುಗಿ ನೋಡೊಲ್ಲ. ಯಾರು ನಿರೀಕ್ಷೆ ಮಾಡದ ಗೆಲುವನ್ನು ನಾವು ಗೆದ್ದಿದ್ದೇವೆ. ಯಡಿಯೂರಪ್ಪ, ಮೋದಿ ಅವ್ರ ಮೇಲೆ ಭರವಸೆ ಇಟ್ಟು ಜನ ಮತ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಆಕ್ಟೀವ್ ಆಗಿದ್ದಾರೆ. ಟೀಂ ವರ್ಕ್ ಮಾಡಿದ್ರೆ ಗೆಲುವು ಶತಸಿದ್ಧ ಅಂತ ಈ ಕ್ಷೇತ್ರದ ಗೆಲುವಿಂದ ಗೊತ್ತಾಗಿದೆ ಎಂದು ನುಡಿದರು.

    ನಾನು ಸತ್ಯ ಮಾತಾಡ್ತೀನಿ. ನಾನು ಎಕೆ 47 ಇದ್ದ ಹಾಗೇ. ಇರೋದನ್ನ ಹೇಳ್ತೀನಿ. ಮಸ್ಕಿಯಲ್ಲಿ ಏನ್ ಆಗಿದೆ ಗೊತ್ತಿಲ್ಲ. ನಾನು ಅ ಕಡೆ ಹೋಗಿಲ್ಲ. ಎಲ್ಲವನ್ನು ವಿಜಯೇಂದ್ರ ಮೇಲೆ ಹಾಕೋದು ಸರಿಯಲ್ಲ. ಕೆಲವರಲ್ಲಿ ದೌರ್ಬಲ್ಯ ಇದೆ. ಅದನ್ನ ಸರಿ ಮಾಡಿಕೊಂಡು ಹೋಗಬೇಕು. ನನಗೂ ಕೆಲ ದೌರ್ಬಲ್ಯ ಇರುತ್ತೆ. ಅದನ್ನ ಸರಿ ಮಾಡಿಕೊಳ್ಳಬೇಕು.

    ಕೊರೊನಾ ಕಾರ್ಯವೈಖರಿಯಲ್ಲಿ ನಾವು ಎಡವಿಲ್ಲ. ಆದರೆ ಹೆಚ್ಚು ಕೇಸ್ ಆಗಿರೋದ್ರೀಂದ ಸ್ವಲ್ಪ ಹಿನ್ನಡೆ ಆಗಿದೆ. ಉಪ ಚುನಾವಣೆ ಮೇಲೆ ಕೊರೊನಾ ನಿರ್ವಹಣೆಯೂ ಸ್ವಲ್ಪ ಪರಿಣಾಮ ಬೀರಿದೆ. ಜನರ ಕಷ್ಟಕ್ಕೆ ಶೇ.100 ಸಹಕಾರ ಕೊಡಲು ಆಗಿಲ್ಲ. ಹೀಗಾಗಿ ಇದು ನಮಗೆ ಹಿನ್ನಡೆ ಆಗಿದೆ. ಇದನ್ನ ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳೊ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

    ಅಣ್ಣಮ್ಮ ತಾಯಿಯಲ್ಲಿ ನಾನು ಬೇಡಿ ಕೊಳ್ತೀನಿ. ಈ ಸಂಕಷ್ಟ ವನ್ನ ನಿಭಾಯಿಸಬೇಕು. ಭಗವಂತನ ಆಶೀರ್ವಾದ ಇರದೆ ಇದನ್ನ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಪ್ರಯತ್ನಗಳು ಮಾಡ್ತಿದ್ದೇನೆ. ಭಗವಂತ ಆಶೀರ್ವಾದ ಮಾಡಬೇಕು. ಇಲ್ಲದೆ ಹೋದ್ರೆ ಕಷ್ಟ ಆಗುತ್ತೆ. ನಾವು ಮಾಡೋ ಕೆಲಸ ಮಾಡ್ತಿದ್ದೇವೆ. ಆದ್ರು ಕಡಿಮೆ ಆಗ್ತಿಲ್ಲ. ದೇವರ ಅನುಗ್ರಹ ನಮಗೆ ಬೇಕಿದೆ. ಖಾಸಗಿ ಆಸ್ಪತ್ರೆಗಳ ನಡೆ ಕರುಳಿ ಕಿತ್ತುಹೋಗುತ್ತೆ. ಜೀವನ ಕಟ್ಟುಕೊಳ್ಳಲು ಜನ ಬೆಂಗಳೂರಿಗೆ ಬಂದಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಕೆಲಸ ಸರ್ಕಾರ ಮಾಡ್ತಿದೆ. ಕೊರೊನಾ ನಿಯಂತ್ರಣಕ್ಕೆ ದೇವರೇ ಕಾಪಾಡಬೇಕು. ಸರ್ಕಾರದ ಸಾಧ್ಯವಾದಷ್ಟು ಕೆಲಸ ಮಾಡ್ತಿದೆ. ಆದ್ರು ಕೊರೊನಾ ನಿಯಂತ್ರಣ ಆಗಿಲ್ಲ. ದೇವರ ಅನುಗ್ರಹ ಇದ್ದರೇನೆ ಇದನ್ನ ನಿಯಂತ್ರಣ ಮಾಡಲು ಸಾಧ್ಯ ಎಂದು ಸೋಮಣ್ಣ ಹೇಳಿದರು.

  • ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ: ಬಿ.ವೈ ವಿಜಯೇಂದ್ರ

    ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ: ಬಿ.ವೈ ವಿಜಯೇಂದ್ರ

    ಬೆಂಗಳೂರು: ಮಸ್ಕಿ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು ಹೋರಬೀಳಲಿದ್ದು, ಇದಕ್ಕೂ ಮುನ್ನೇ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲೋಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮಮೇಲಿದೆ. ಕಾರ್ಯಕರ್ತನಾಗಿ ಸದಾ ನಿಮ್ಮೊಂದಿಗಿರುವೆ. ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ ಎಮದು ಬರೆದುಕೊಂಡಿದ್ದಾರೆ.

    ಪ್ರತಾಪ್ ಗೌಡ ಹೇಳಿದ್ದೇನು..?
    ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ಸಿಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

    9ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪಾಟೀಲ್ ತುರ್ವಿಹಾಳ 10,311 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಸನಗೌಡ ಪಾಟೀಲ್ 29,366 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪ ಗೌಡ ಪಾಟೀಲ್ 19,942 ಮತಗಳನ್ನು ಪಡೆದಿದ್ದಾರೆ.

  • ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

    ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

    ರಾಯಚೂರು: ಮಸ್ಕಿ ಉಪ ಚುನಾವಣಾ ಸಮರ ದಿನೇ ದಿನೇ ರಂಗೇರುತ್ತಿದೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಮತ ನೀಡುವಂತೆ ಬಿಜೆಪಿ ಮಾಜಿ ಶಾಸಕ ಎನ್.ಎಸ್. ನಂದೀಶ್ ಹಣ ಹಂಚಿಕೆ ಮಾಡಿದ್ದಾರೆ. ಹಣ ಹಂಚಿಕೆ ಮಾಡಿದವರ ಹಾಗೂ ಹಣ ಪಡೆದವರ ವಿರುದ್ಧ ಮಸ್ಕಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

    ಬಿಜೆಪಿ ಕಾರ್ಯಕರ್ತ ಅಮಿತ್, ಚಿಟ್ಟಿಬಾಬು, ಹಣ ಪಡೆದ ವೃದ್ದೆ ತಾಯಮ್ಮ ಮೂವರನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ 1 ಸಾವಿರ ನೀಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ವಿಡಿಯೋ ಆಧಾರಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಏಪ್ರಿಲ್ 10 ರಂದು ಹರ್ವಾಪುರದಲ್ಲಿ ಹಣ ಹಂಚಿದ ಆರೋಪದಡಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

  • ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌- ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ನಿವೃತ್ತ ಸಿಎಸ್‌ ರತ್ನಪ್ರಭಾ

    ನವದೆಹಲಿ: ಬೆಳಗಾವಿ ಉಪಚುನಾವಣೆಯಲ್ಲಿ ದಿ. ಸುರೇಶ್‌ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

    ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಂಗಳಾ ಸುರೇಶ್‌ ಅಂಗಡಿ, ಬಸವಕಲ್ಯಾಣಕ್ಕೆ ಶರಣು ಸಲಗಾರ್‌, ಮಸ್ಕಿಗೆ ಪ್ರತಾಪ್‌ ಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ನೀಡಿದೆ.

    ದಿವಂಗತ ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಅವರಿಗೆ ಟಿಕೆಟ್ ಸಿಗಬಹುದು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಅಚ್ಚರಿ ನಡೆ ಅನುಸರಿಸಿದ್ದು ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌ ನೀಡಿದೆ.

    ಬಸವಕಲ್ಯಾಣಕ್ಕೆ ಶರಣು ಸಲಗಾರ್ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರು. ಕಳೆದ ಬಾರಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಏ.17 ರಂದು ಉಪಚುನಾವಣೆ ನಡೆಯಲಿದೆ.

    ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನ ಪ್ರಭಾಗೆ ಬಿಜೆಪಿ ಟಿಕೆಟ್‌ ನೀಡಿದ್ದು, ತಿರುಪತಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

  • ಮಸ್ಕಿ ಉಪ ಚುನಾವಣೆ – ಕೈ, ಕಮಲದಿಂದ 5ಎ ಕಾಲುವೆ ಅಸ್ತ್ರ

    ಮಸ್ಕಿ ಉಪ ಚುನಾವಣೆ – ಕೈ, ಕಮಲದಿಂದ 5ಎ ಕಾಲುವೆ ಅಸ್ತ್ರ

    – 5ಎ ಕಾಲುವೆಗಾಗಿ ನಿಲ್ಲದ ರೈತರ ಹೋರಾಟ

    ರಾಯಚೂರು: ಮಸ್ಕಿ ಉಪಚುನಾವಣಾ ಅಖಾಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ನೀರಾವರಿ ಯೋಜನೆಗಳೆ ಎರಡೂ ಪಕ್ಷದ ಪ್ರಚಾರದ ಅಸ್ತ್ರವಾಗಿದೆ. 5 ಎ ಕಾಲುವೆ ಅಸ್ತ್ರದೊಂದಿಗೆ ರಾಜಕಾರಣಿಗಳು ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿದ್ದಾರೆ. ಆದರೆ ರೈತರು ಮಾತ್ರ ಯಾವ ರಾಜಕಾರಣಿಗಳನ್ನೂ ನಂಬದೇ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದಾರೆ.

    ಮಸ್ಕಿ ಕ್ಷೇತ್ರದ ಎಡಕ್ಕೆ ತುಂಗಭದ್ರಾ ನದಿ ಇದ್ರೆ, ಬಲಕ್ಕೆ ನಾರಾಯಣಪುರ ಜಲಾಶಯ ಇದೆ. ರಾಜ್ಯದ ಪ್ರಮುಖ ನದಿಗಳು ಮಸ್ಕಿ ಕ್ಷೇತ್ರಕ್ಕೆ ಹೊಂದಿಕೊಂಡೇ ಹರಿಯುತ್ತಿದ್ರೂ ದಶಕಗಳಿಂದ ಈ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಮಾಡಿಕೊಡುವಲ್ಲಿ ಸರ್ಕಾರಗಳು ವಿಫವಾಗಿವೆ. ಎನ್.ಆರ್.ಬಿ.ಸಿ. 5 ಎ ಕಾಲುವೆಗಾಗಿ ರೈತರು 2008 ರಿಂದ ಹೋರಾಟ ನಡೆಸಿದ್ದರು ಯೋಜನೆ ಜಾರಿಯಾಗಿಲ್ಲ. ಪ್ರತಾಪ್ ಗೌಡ ಪಾಟೀಲ್ ಒಂದು ಬಾರಿ ಬಿಜೆಪಿ ಎರಡು ಬಾರಿ ಕಾಂಗ್ರೆಸ್ ನಿಂದ ಶಾಸಕರಾದ್ರೂ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿಲ್ಲ. ಆದ್ರೆ ಈಗ ರೈತರ ಹೋರಾಟ ತೀವ್ರ ಸ್ಪರೂಪ ಪಡೆಯುತ್ತಿರುವುದರಿಂದ ಉಪಚುನಾವಣೆಗೆ 5 ಎ ಕಾಲುವೆಯನ್ನೇ ಅಸ್ತ್ರಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದಾರೆ. ಇತ್ತೀಚಗೆ ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 5ಎ ಕಾಲುವೆ ಬಗ್ಗೆ ಪ್ರತಾಪಗೌಡ ಪಾಟೀಲ್ ಗೆ ಆಸಕ್ತಿಯೇ ಇರಲಿಲ್ಲ. ಕಾಲುವೆ ಬಗ್ಗೆ ಮಾತನಾಡಲು ಕರೆದರೆ ಇಚ್ಛಾಶಕ್ತಿಯನ್ನೇ ತೋರಿಸಿಲ್ಲ ಅಂತ ಆರೋಪಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ 5 ಎ ಕಾಲುವೆಯನ್ನೆ ಪ್ರಚಾರ ವಸ್ತು ಮಾಡಿಕೊಂಡಿದ್ದಾರೆ.

    ನಾವು ಯಾವ ರಾಜಕಾರಣಿಯನ್ನೂ ನಂಬಲ್ಲ ಮೊದಲು ಕಾಲುವೆ ಆರಂಭಿಸಿ ಅಂತ ರೈತರು ಮಾತ್ರ ನಿರಂತರ ಹೋರಾಟ ನಡೆಸಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯಿಂದ ಲಿಂಗಸುಗೂರಿನ ಕಾಳಾಪುರದಿಂದ 5ಎ ಕಾಲುವೆ ಕಾಮಗಾರಿ ಆರಂಭವಾಗಬೇಕಿದೆ. ಮಸ್ಕಿ, ಮಾನ್ವಿ, ಸಿರವಾರ, ರಾಯಚೂರು ತಾಲೂಕು ಹಾಗೂ ಕೊಪ್ಪಳ ಜಿಲ್ಲೆಯ ಕೆಲ ಹಳ್ಳಿಗಳು ಸೇರಿಕೊಂಡು ಒಟ್ಟಾರೆ 107 ಹಳ್ಳಿಗಳ 1 ಲಕ್ಷ 77 ಸಾವಿರದ 912 ಎಕರೆ ನೀರಾವರಿ ನೀರಾವರಿ ವಂಚಿತವಾಗಿದೆ. ಮಸ್ಕಿ ತಾಲೂಕಿನ ಒಂದರಲ್ಲೇ 58 ಹಳ್ಳಿಗಳ 77 ಸಾವಿರ ಎಕರೆ ಭೂಮಿ ನೀರಾವರಿ ವಂಚಿತವಾಗಿದೆ. ಅಲ್ಲದೇ ಈ ಯೋಜನೆ ಪ್ರಾರಂಭ ಆದ್ರೆ ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ 5 ಕೆರೆಗಳನ್ನ ತುಂಬಿಸುವ ಯೋಜನೆಯೂ ಇದರಲ್ಲಿ ಒಳಪಡುತ್ತೆ. ಇದುವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿಲ್ಲ. ಹೀಗಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.

    ಕಳೆದ ಒಂದು ದಶಕದಿಂದ 5 ಎ ಕಾಲುವೆಗಾಗಿ ರೈತರು ನಾನಾ ಹೋರಾಟಗಳನ್ನ ಮಾಡಿದರೂ ಕೃಷ್ಣಾ ಭಾಗ್ಯ ಜಲಾ ನಿಗಮ ನಿಯಮಿತದ ಅಧಿಕಾರಿಗಳು, ಶಾಸಕ, ಸಂಸದರು ಸೇರಿದಂತೆ ಸರ್ಕಾರದಿಂದಲೂ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಕಾಲುವೆ ನಿರ್ಮಿಸಲು ಡಿಪಿಆರ್ ತಯಾರಾಗಿ ವರ್ಷಗಳೇ ಉರುಳಿದ್ರೂ 5ಎ ಕಾಮಗಾರಿ ಆರಂಭಗೊಂಡಿಲ್ಲ. ಉಪಚುನಾವಣೆಯ ಪ್ರಚಾರದಲ್ಲಿ ಮಾತ್ರ ಕಾಲುವೆಯದ್ದೇ ಮಾತು.

  • ಯುವಕರೊಂದಿಗೆ ಕಬಡ್ಡಿ ಆಡಿದ ಪ್ರತಾಪ್ ಗೌಡ ಪಾಟೀಲ್

    ಯುವಕರೊಂದಿಗೆ ಕಬಡ್ಡಿ ಆಡಿದ ಪ್ರತಾಪ್ ಗೌಡ ಪಾಟೀಲ್

    ರಾಯಚೂರು: ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಯುವಕರೊಂದಿಗೆ ಕಬಡ್ಡಿ ಆಡಿದ್ದಾರೆ.

    ರಾಯಚೂರಿನ ಮಸ್ಕಿ ಉಪಚುನಾವಣೆ ಅಖಾಡ ಸಿದ್ಧವಾಗುತ್ತಿದೆ. ಒಂದೆಡೆ ರಾಜಕಾರಣಿಗಳು ಚುನಾವಣಾ ಕಬಡ್ಡಿಗೆ ಸಿದ್ಧವಾಗುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನೇರವಾಗಿ ಕಬಡ್ಡಿ ಮೈದಾನದಲ್ಲಿ ಆಟವಾಡಿ ಕ್ರೀಡೋತ್ಸಾಹ ತೋರಿದ್ದಾರೆ.

    ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ ದೈಹಿಕ ಶಿಕ್ಷಕ ಮಹಾದೇವಪ್ಪ ಸ್ಮರಣಾರ್ಥ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪ್ರತಾಪಗೌಡ ಪಾಟೀಲ್ ಭಾಗಿಯಾಗಿದ್ದರು. ಚುನಾವಣಾ ಪ್ರಚಾರದ ಮಧ್ಯೆ ಪ್ರತಾಪ್ ಗೌಡ ಪಾಟೀಲ್ ಪಂದ್ಯಾವಳಿ ಉದ್ಘಾಟನೆಯ ಭಾಗವಾಗಿ ಯುವಕರೊಂದಿಗೆ ಕಬಡ್ಡಿ ಆಡಿದರು.

  • ಬಸನಗೌಡ ತುರವಿಹಾಳ ಕಾಂಗ್ರೆಸ್‍ಗೆ ಸೇರ್ಪಡೆ- ರಂಗೇರಿದ ಮಸ್ಕಿ ಉಪಚುನಾವಣಾ ಕಣ

    ಬಸನಗೌಡ ತುರವಿಹಾಳ ಕಾಂಗ್ರೆಸ್‍ಗೆ ಸೇರ್ಪಡೆ- ರಂಗೇರಿದ ಮಸ್ಕಿ ಉಪಚುನಾವಣಾ ಕಣ

    – ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಪ್ರಚಾರ

    ರಾಯಚೂರು: ಮಸ್ಕಿ ಉಪ ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಅಘೋಷಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಪಕ್ಷಾಂತರದಿಂದ ತೆರವಾಗಿರುವ ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ರಾಜಕೀಯ ಚುರುಕುಗೊಂಡಿದೆ. ಉಪ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿಯ ವಾತಾವರಣ ನಿರ್ಮಾಣವಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಸನಗೌಡ ತುರವಿಹಾಳ ಈಗ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪ್ರತಾಪ್ ಗೌಡ ವಿರುದ್ಧ ಅಕ್ರಮ ಮತದಾನದ ಪ್ರಕರಣ ದಾಖಲಿಸಿದ್ದ ಬಸನಗೌಡರನ್ನು ಬಿಜೆಪಿ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ. ಹೀಗಾಗಿ ಚುನಾವಣಾ ಕಣ ರಂಗೇರಿದೆ.

    ಬಿಜೆಪಿ ಟಿಕೆಟ್ ಬಹುತೇಕ ಪ್ರತಾಪ್ ಗೌಡ ಅವರಿಗೆ ಖಾಯಂ ಆಗಿರುವುದರಿಂದ ಬಸನಗೌಡ ತುರವಿಹಾಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ್ ಸೇರಿ ಹಲವು ಮುಖಂಡರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಮಸ್ಕಿ ಉಪ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಸನಗೌಡ ನಡುವೆ ತುರುಸಿನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ. ಆದರೆ ಇಬ್ಬರು ಅಭ್ಯರ್ಥಿಗಳ ಪಕ್ಷಗಳು ಮಾತ್ರ ಬದಲಾಗಲಿವೆ.

    ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ರಾಜೀನಾಮೆ ನೀಡಿದ ಪತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇನ್ನೂ ಪ್ರತಾಪ್ ಗೌಡ ಪಾಟೀಲ್ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಕಾರ್ಯಕರ್ತರೊಂದಿಗೆ ಮಸ್ಕಿಯಲ್ಲಿ ಬೈಕ್ ರ್ಯಾಲಿ ಮಾಡಿದ್ದಾರೆ. ನೂರಾರು ಕಾರ್ಯಕರ್ತರನ್ನ ಸೇರಿ ಪಕ್ಷದ ಕಾರ್ಯಕ್ರಮವನ್ನು ಮಾಡಿದ್ದಾರೆ. ಆದರೆ ಪ್ರತಾಪ್ ಗೌಡ ವಿರುದ್ಧದ ಪ್ರಕರಣ ವಜಾಗೊಂಡಿರುವ ತೀರ್ಪಿನ ಪ್ರತಿ ಇನ್ನೂ ಕೈ ಸೇರಿಲ್ಲ. ತೀರ್ಪಿನ ಪ್ರತಿ ಸಿಕ್ಕ ನಂತರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುವುದು ಅಂತ ಪ್ರತಾಪ್ ಗೌಡ ಹೇಳಿದ್ದಾರೆ.

    ಬಸವಕಲ್ಯಾಣ, ಬೆಳಗಾವಿ ಚುನಾವಣೆಯೊಂದಿಗೆ ಮಸ್ಕಿ ಉಪ ಚುನಾವಣೆ ನಡೆಯುವ ಸಾಧ್ಯತೆಯಿದೆ. ಡಿಸೆಂಬರ್ ಕೊನೆಯಲ್ಲಿ ಚುನಾವಣೆ ಬರಬಹುದು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಅಂತ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಜೋರಾಗಿದೆ. ಕಾಂಗ್ರೆಸ್ ಬಿಜೆಪಿಗೂ ಮಸ್ಕಿ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಟಿಕೆಟ್ ಬಸನಗೌಡಗೆ ಬಹುತೇಕ ಖಚಿತವಾಗಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷೆಯಿದೆ.

  • ಅಕ್ರಮ ಮತದಾನ ಆರೋಪ ಅರ್ಜಿ ವಜಾ: ಪ್ರತಾಪ್ ಗೌಡ ಪಾಟೀಲ್ ನಿರಾಳ

    ಅಕ್ರಮ ಮತದಾನ ಆರೋಪ ಅರ್ಜಿ ವಜಾ: ಪ್ರತಾಪ್ ಗೌಡ ಪಾಟೀಲ್ ನಿರಾಳ

    ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಮತದಾನ ಮೂಲಕ ಗೆಲುವು ಸಾಧಿಸಿರುವ ಆರೋಪದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿರುವ ಹಿನ್ನೆಲೆ ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನಿರಾಳರಾಗಿದ್ದಾರೆ.

    ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತೊಡಕಾಗಿದ್ದ ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪು ಪ್ರತಾಪ್ ಗೌಡ ಪರ ಬಂದಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ವಿಜೇತರಾಗಿದ್ದ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದದಲ್ಲಿದ್ದ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ದಾಖಲೆಗಳ ಕೊರತೆ ಹಿನ್ನೆಲೆ ವಿಚಾರಣಾ ಅರ್ಜಿ ವಜಾಗೊಳಿಸಲಾಗಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದಲ್ಲಿ ಸೋತಿದ್ದ ಬಸನಗೌಡ ತುರವಿಹಾಳ ಅಕ್ರಮ ಮತದಾನದ ಆರೋಪ ಮಾಡಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಶಾಸಕ ಸ್ಥಾನ ಬಿಟ್ಟು ಬಿಜೆಪಿಗೆ ಹಾರಿ ಬಂದರು. ಸದ್ಯ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿರುವ ಬಸನಗೌಡ ತುರವಿಹಾಳ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಪುನಃ ಮೊರೆ ಹೋಗಿದ್ದರು. ಆದ್ರೆ ನ್ಯಾಯಾಲಯ ಪ್ರಕರಣ ಮುಂದುವರೆಸಿ ಇಂದು ತೀರ್ಪು ಪ್ರಕಟಿಸಿದೆ.

    ಈಗ ಆರೋಪದಿಂದ ಮುಕ್ತರಾಗಿರುವ ಪ್ರತಾಪ್ ಗೌಡ ಪಾಟೀಲ್ ಗೆ ಮುಂಬರುವ ಮಸ್ಕಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಹಾದಿ ಸುಲಭವಾಗಲಿದೆ. ಶಿರಾ ಉಪಚುನಾವಣೆ ವೇಳೆ ಮಸ್ಕಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿವೆ.

  • ಲಾಕ್‍ಡೌನ್ ಮಧ್ಯೆಯೂ ಮಹಾರುದ್ರಯಾಗದಲ್ಲಿ ಭಾಗಿಯಾದ ಮಾಜಿ ಶಾಸಕ

    ಲಾಕ್‍ಡೌನ್ ಮಧ್ಯೆಯೂ ಮಹಾರುದ್ರಯಾಗದಲ್ಲಿ ಭಾಗಿಯಾದ ಮಾಜಿ ಶಾಸಕ

    ರಾಯಚೂರು: ಲಾಕ್‍ಡೌನ್ ಮಧ್ಯೆಯೂ ದೇವಾಲಯಗಳಲ್ಲಿ ಜನ ಪೂಜೆ, ಸಾಮೂಹಿಕ ಪ್ರಾರ್ಥನೆ ಮಾಡುವುದನ್ನ ನಿಲ್ಲಿಸಿಲ್ಲ. ಜಿಲ್ಲೆಯ ಮಸ್ಕಿ ಪಟ್ಟಣದ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೊರೊನಾ ನಿಗ್ರಹಕ್ಕಾಗಿ ಮಹಾರುದ್ರಯಾಗ ಮಾಡಲಾಗಿದೆ.

    ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಯಾಗ ನಡೆದಿದೆ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಅವರ ಬೆಂಬಲಿಗರು ಈ ಯಾಗದಲ್ಲಿ ಭಾಗವಹಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಡೆದ ಮಹಾರುದ್ರಯಾಗದಲ್ಲಿ ಪ್ರತಾಪ್ ಗೌಡರು ಸೇರಿದಂತೆ 30ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ.

    ಅಷ್ಟೇ ಅಲ್ಲದೇ ಮಾಜಿ ಶಾಸಕರ ಬೆಂಬಲಿಗರು ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶವಿಲ್ಲದಿದ್ದರೂ ಲಾಕ್‍ಡೌನ್ ನಿಯಮ ಮೀರಿ ಮಾಜಿ ಶಾಸಕ ಯಾಗದಲ್ಲಿ ಭಾಗಿಯಾಗಿದ್ದಾರೆ.

  • ಪ್ರತಾಪ್ ಗೌಡ ಪಾಟೀಲ್ ಜೂನ್‍ನಲ್ಲಿ ಮಂತ್ರಿಯಾಗೋದು ಪಕ್ಕಾ: ರಮೇಶ್ ಜಾರಕಿಹೊಳಿ

    ಪ್ರತಾಪ್ ಗೌಡ ಪಾಟೀಲ್ ಜೂನ್‍ನಲ್ಲಿ ಮಂತ್ರಿಯಾಗೋದು ಪಕ್ಕಾ: ರಮೇಶ್ ಜಾರಕಿಹೊಳಿ

    ರಾಯಚೂರು: ಪ್ರತಾಪ್ ಗೌಡ ಪಾಟೀಲ್ ಜೂನ್‍ನಲ್ಲಿ ಮಂತ್ರಿಯಾಗುವುದು ಪಕ್ಕಾ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ರಾಯಚೂರಿನ ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಸಚಿವ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್ ಅವರ ಪ್ರಕರಣದ ಕೋರ್ಟ್ ತೀರ್ಪು ಬಾಕಿ ಇದೆ. ಆ ತೀರ್ಪು ಪ್ರಕಟವಾಗುವುದಕ್ಕೆ ವಿಳಂಬವಾಗಿದೆ ಆದ್ರೆ ಜೂನ್‍ನಲ್ಲಿ ಮಂತ್ರಿಯಾಗುವುದು ಪಕ್ಕಾ ಎಂದರು.

    ಜೂನ್‍ನಲ್ಲಿ ಆರ್.ಶಂಕರ್, ಪ್ರತಾಪ್ ಗೌಡ ಹಾಗೂ ಮುನಿರತ್ನ ಮೂರು ಜನ ಮಂತ್ರಿಯಾಗಲಿದ್ದಾರೆ ಅಂತ ಭವಿಷ್ಯ ನುಡಿದರು. ಮಸ್ಕಿ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಮಸ್ಕಿ ಕ್ಷೇತ್ರಕ್ಕೆ ಶಾಸಕರು ಇಲ್ಲದಂತಾಗಿದೆ ಎಂದರು.

    ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪ್ ಗೌಡ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿ, ಹಾಲಿ ಕಾಡಾ ಅಧ್ಯಕ್ಷ ಬಸನಗೌಡ ತುರವಿಹಾಳ ಇಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಪ್ರತಾಪ್ ಗೌಡ ಅವರೊಂದಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರತಾಪಗೌಡ ಪಾಟೀಲ್ ವಿರುದ್ಧ ಅಕ್ರಮ ಮತದಾನದ ದೂರು ದಾಖಲಿಸಿದ್ದ ಬಸನಗೌಡ ಪ್ರಕರಣವನ್ನು ಹಿಂಪಡೆದಿದ್ದರು.