Tag: ಪ್ರತಾಪ್ ಗೌಡ

  • ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ ಫಲಿತಾಂಶಕ್ಕೆ ಮೊದಲೇ ಸೋಲು ಒಪ್ಪಿಕೊಂಡ ಪ್ರತಾಪ್ ಗೌಡ

    ಮಸ್ಕಿ: ಚುನಾವಣಾ ಮತ ಎಣಿಕೆಯ ಹಲಲು ಸುತ್ತುಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ.

    ನಮ್ಮವರೇ ನಮಗೆ ಮೋಸ ಮಾಡಿದರು. ಈ ಪರಿಸ್ಥಿತಿ ಕಾಂಗ್ರೆಸ್ ಗೆ ಅನುಕೂಲವಾಗಿದೆ. ಕ್ಷೇತ್ರದಲ್ಲಿ ನನ್ನ ಮೇಲೆ ವಿರೋಧಿ ಅಲೆ ಸೃಷ್ಟಿಯಾಗಿದೆ ಎಂದು ಪ್ರತಾಪ್ ಗೌಡ ಪಾಟೀಲ್ ದೂರಿದ್ದಾರೆ.

    9ನೇ ಸುತ್ತಿನ ಮತ ಏಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪಾಟೀಲ್ ತುರ್ವಿಹಾಳ 10,311 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಸನಗೌಡ ಪಾಟೀಲ್ 29,366 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪ ಗೌಡ ಪಾಟೀಲ್ 19,942 ಮತಗಳನ್ನು ಪಡೆದಿದ್ದಾರೆ.

    2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು 60,387 ಮತಗಳನ್ನು ಪಡೆದಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅವರಿಗೆ 60,174 ಮತಗಳು ಬಿದ್ದಿತ್ತು. 213 ಮತಗಳ ಅಂತರದಿಂದ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರು. ನಂತರ ನಡೆದ ಆಪರೇಷನ್ ಕಮಲದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಕಾಂಗ್ರೆಸ್ ಸೇರಿದ್ದರು.

  • ರಮೇಶ್ ಜಾರಕಿಹೊಳಿ ಪಕ್ಷ ಬಿಟ್ರೂ ನಾನು ಹೋಗೋದಿಲ್ಲ- ಪ್ರತಾಪ್ ಗೌಡ ಪಾಟೀಲ್

    ರಮೇಶ್ ಜಾರಕಿಹೊಳಿ ಪಕ್ಷ ಬಿಟ್ರೂ ನಾನು ಹೋಗೋದಿಲ್ಲ- ಪ್ರತಾಪ್ ಗೌಡ ಪಾಟೀಲ್

    – ಹಿರಿಯ ನಾಯಕರಲ್ಲಿ ಸಮನ್ವಯತೆ ಇಲ್ಲ

    ರಾಯಚೂರು: ರಾಜೀನಾಮೆ ನೀಡಲು ಹೊರಟಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಟ್ಟರೂ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರು ನಮ್ಮ ಸಂಬಂಧಿಗಳಿಗೆ ಅವರೊಂದಿಗೆ ಉತ್ತಮ ಸ್ನೇಹವಿದೆ. ಇದೇ ಕಾರಣಕ್ಕೆ ರಾಜೀನಾಮೆ ನೀಡುವ ಕುರಿತು ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತದೆ ಎಂದು ಹೇಳಿದರು.

    ಮಧ್ಯಂತರ ಚುನಾವಣೆ ಬರಬಹುದು. ನಾನು ಈಗಲೂ ಸ್ಪಷ್ಟಪಡಿಸುತ್ತೇನೆ ನಾನು ಕ್ಷೇತ್ರದ ಜನತೆಯ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟರೂ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಈಗ ಹಿರಿಯ ನಾಯಕರಿಂದ ಸಮನ್ವಯತೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದೇ ರೀತಿ ಸಮನ್ವಯ ಕೊರತೆ ಇದ್ದರೆ ಸರ್ಕಾರದಲ್ಲಿ ಯಾಕೆ ಇರಬೇಕು. ಹಿರಿಯ ಮುಖಂಡರು ಈಗ ಸಮನ್ವಯತೆ ಸಾಧಿಸಲು ಯತ್ನಿಸಬೇಕು. ಸಮಿಶ್ರ ಸರಕಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಇದ್ದ ಸಮನ್ವಯತೆ ಈಗ ಇಲ್ಲದಂತಾಗಿದೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

  • ಶಾಸಕ ಆನಂದ್ ಸಿಂಗ್‍ ರನ್ನ ಹುಡುಕಿ ಕೊಡಿ-ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ದಾಖಲು!

    ಶಾಸಕ ಆನಂದ್ ಸಿಂಗ್‍ ರನ್ನ ಹುಡುಕಿ ಕೊಡಿ-ಕಾಂಗ್ರೆಸ್ ಕಾರ್ಯಕರ್ತರಿಂದ ದೂರು ದಾಖಲು!

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದ್ದು, ದಿನೇ ದಿನೇ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಇತ್ತ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ನಾಪತ್ತೆಯಾಗಿದ್ದು, ಈಗ ಅವರ ಪತ್ತೆಗಾಗಿ ಕಾಂಗ್ರೆಸ್ ಶಾಸಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

    ಆನಂದ್ ಸಿಂಗ್ ಬುಧವಾರ ಬಳ್ಳಾರಿಯಿಂದ ರೆಸಾರ್ಟ್ ರಾಜಕಾರಣಕ್ಕೆಂದು ಹೊರಟ್ಟಿದ್ದರು. ಆದರೆ ಇದೂವರೆಗೂ ಬೆಂಗಳೂರು ತಲುಪಿಲ್ಲ. ಕಾಂಗ್ರೆಸ್ ಮುಖಂಡರಿಗೆ ಖುದ್ದು ಕರೆ ಮಾಡಿ ಬೆಂಗಳೂರಿಗೆ ಬರುತ್ತೀದ್ದೀನಿ ಅಂತ ಹೇಳಿದ್ದರು. ಆದರೆ ಅವರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಹೀಗಾಗಿ ಆನಂದ್ ಸಿಂಗ್ ಹುಡುಕಿಕೊಡುವಂತೆ ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಹೊಸಪೇಟೆ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟು ಹುಡುಕಿಕೊಡಿ ಎಂದು ಮನವಿ ಸಲ್ಲಿಸಲಿದ್ದಾರೆ.

    ಅತ್ತ ರಾಯಚೂರಿನ ಮಸ್ಕಿಯಲ್ಲಿಯೂ ಶಾಸಕ ಪ್ರತಾಪ್ ಗೌಡರನ್ನು ಹುಡುಕಿಕೊಡಿ ಎಂದು ಅಭಿಯಾನ ನಡೆಯಲಿದೆ. ಪ್ರತಾಪ್ ಗೌಡ, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಾರದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಸ್ಥಳೀಯ ಕಾಂಗ್ರೆಸ್ಸಿಗರು ಎಚ್ಚರಿಸಿದ್ದಾರೆ.

    ಸದ್ಯಕ್ಕೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇನ್ನೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರನ್ನು ಬಿಜೆಪಿ ಹೈಜಾಕ್ ಮಾಡಿರೋ ಶಂಕೆಯನ್ನು ಕಾಂಗ್ರೆಸ್ ಪಾಳಯ ವ್ಯಕ್ತಪಡಿಸುತ್ತಿದೆ.

    ಒಟ್ಟಿನಲ್ಲಿ ಬಳ್ಳಾರಿಯಿಂದ 3 ಶಾಸಕರು ಒಟ್ಟಾಗಿದ್ದು, ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರೂ ಕೂಡ ಖಚಿತ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ದೂರ ಉಳಿದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.