Tag: ಪ್ರತಾಪಗೌಡ ಪಾಟೀಲ್

  • ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ಮಸ್ಕಿ ಉಪಚುನಾವಣಾ ಕಣದಲ್ಲಿ ಕೋಟ್ಯಧೀಶ ಅಭ್ಯರ್ಥಿಗಳು

    ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ಕೋಟ್ಯಧೀಶರಾಗಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯ ಪ್ರತಾಪಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ಬಸನಗೌಡ ತುರವಿಹಾಳ ಇಬ್ಬರು ಕೋಟ್ಯಾಧೀಶರು.

    ಪ್ರತಾಪಗೌಡ ಪಾಟೀಲ್ ಒಟ್ಟು 5.92 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಪ್ರತಾಪಗೌಡ ಹೆಸರಿನಲ್ಲಿ 30.33 ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ 26 ಎಕರೆ ಜಮೀನು ಹೊಂದಿದ್ದಾರೆ. 33 ಲಕ್ಷ ಸಾಲ ಹೊಂದಿದ್ದಾರೆ. 8.45 ಲಕ್ಷ ನಗದು, ಬ್ಯಾಂಕ್ ಗಳಲ್ಲಿ 1.19 ಕೋಟಿ ರೂಪಾಯಿ ಎಫ್ ಡಿ ಇಟ್ಟಿದ್ದಾರೆ. ವಿವಿಧ ಕಂಪನಿಗಳಲ್ಲಿ 39.48 ಲಕ್ಷ ರೂಪಾಯಿ ಷೇರು ಹೊಂದಿದ್ದಾರೆ. 62.71 ಲಕ್ಷ ರೂಪಾಯಿ ಮೌಲ್ಯದ 3 ಕಾರುಗಳಿವೆ. ಪ್ರತಾಪಗೌಡ ಬಳಿ 275 ಗ್ರಾಂ, ಪತ್ನಿ 650 ಗ್ರಾಂ ಚಿನ್ನ ಹೊಂದಿದ್ದಾರೆ. ಒಟ್ಟು ಸ್ಥಿರಾಸ್ತಿ 3.22 ಕೋಟಿ ರೂಪಾಯಿ.

    ಇನ್ನೂ ಬಸನಗೌಡ ತುರ್ವಿಹಾಳ ಒಟ್ಟು 1.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸ್ವಂತ ಹೆಸರಿನಲ್ಲಿ 19.13 ಎಕರೆ ಜಮೀನು, ಪತ್ನಿ ಹೆಸರಿನಲ್ಲಿ 5.34 ಎಕರೆ ಭೂಮಿ ಹೊಂದಿದ್ದಾರೆ. ಬಸನಗೌಡ 2 ಲಕ್ಷ ರೂಪಾಯಿ ತಮ್ಮ ಬಳಿ, ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ ಒಂದು ಲಕ್ಷ ನಗದು ಹೊಂದಿದ್ದಾರೆ. 26 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರು, 150 ಗ್ರಾಂ ಚಿನ್ನ ಹಾಗೂ ಒಂದು ಕೆಜಿ ಬೆಳ್ಳಿಯಿದೆ. ತುರ್ವಿಹಾಳದ ಯುಕೋ ಬ್ಯಾಂಕಿನಲ್ಲಿ 2.72 ಲಕ್ಷ ರೂಪಾಯಿ ಸಾಲ, 3.67 ಲಕ್ಷ ರೂಪಾಯಿ ಬೆಳೆ ಸಾಲ ಮಹೇಂದ್ರ ಫೈನಾನ್ಸ್ ನಲ್ಲಿ 7 ಲಕ್ಷ ರೂಪಾಯಿ ಸಾಲ ಸೇರಿ ಒಟ್ಟು 19.39 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ.

    ನಿನ್ನೆ ಇಬ್ಬರು ಅಭ್ಯರ್ಥಿ ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸುವಾಗ ನೀಡಿದ ಆಸ್ತಿ ವಿವರ ಪ್ರಕಾರ ಇಬ್ಬರೂ ಅಭ್ಯರ್ಥಿಗಳು ಕೋಟ್ಯಧಿಪತಿಗಳು ಆಗಿದ್ದಾರೆ.

  • ಮಸ್ಕಿ ಎಂಟ್ರಿ ಮೊದಲ ದಿನವೇ ಬಿ.ವೈ.ವಿಜಯೇಂದ್ರ ರಣತಂತ್ರ

    ಮಸ್ಕಿ ಎಂಟ್ರಿ ಮೊದಲ ದಿನವೇ ಬಿ.ವೈ.ವಿಜಯೇಂದ್ರ ರಣತಂತ್ರ

    – ವಿಜಯೇಂದ್ರ ಪೊಲಿಟಿಕಲ್ ಗೇಮ್ ಇನ್‍ಸೈಡ್ ಸ್ಟೋರಿ

    ರಾಯಚೂರು: ಉಪಚುನಾಣೆ ಘೋಷಣೆ ಬಳಿಕ ಮಸ್ಕಿ ಅಖಾಡಕ್ಕೆ ಎಂಟ್ರಿ ನೀಡಿದ ಮೊದಲ ದಿನವೇ ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಪೊಲಿಟಿಕಲ್ ಸ್ಟ್ಯಾಟರ್ಜಿಯನ್ನು ನಡೆಸಿದರು.

    ಮಸ್ಕಿಯ ಪೊಲೀಸ್ ಠಾಣೆ ಪಕ್ಕದ ಖಾಲಿ ಜಾಗದಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ನಿರ್ಮಾಣ ಮಾಡಲಾಗಿತ್ತು. ಕೆ.ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಬ್ಬರು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಹುತೇಕ ರಾಜಕೀಯ ಮುಖಂಡರೆಲ್ಲರೂ ನೇರವಾಗಿ ಸಿಂಧನೂರು ಮೂಲಕ ಮಸ್ಕಿ ಕಾರ್ಯಕ್ರಮಕ್ಕೆ ಅಗಮಿಸಿದರು. ಆದ್ರೆ ವಿಜಯೇಂದ್ರ ಮಾತ್ರ ಭಿನ್ನ ಹಾದಿ ಮೂಲಕ ಮಸ್ಕಿ ಪ್ರವೇಶಿಸಿ ಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಈ ಮೂಲಕ ಮಸ್ಕಿಯಲ್ಲಿ ಬಿಜೆಪಿ ಪ್ರಚಾರದ ಸಂಚಲನ ಮೂಡಿಸಿದರು.

    ಏಲ್ಲೆಲ್ಲಿ ಪ್ರಚಾರ? ಗಂಗಾವತಿ, ಕನಕಗಿರಿ ಮೂಲಕ ಮಸ್ಕಿ ಕ್ಷೇತ್ರದ ಕಲ್ಮಂಗಿ, ಉಮಲೂಟಿ ಗ್ರಾಮ ಪ್ರವೇಶ ಮಾಡಿದ ಬಿ.ವೈ.ವಿಜಯೇಂದ್ರ ಮೊದಲ ದಿನವೇ ಮತಬೇಟೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಅವರ ತವರೂರಾದ ತುರುವಿಹಾಳ, ತಿಡಿಗೋಳ ಭಾಗದಲ್ಲಿನ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಜತೆಗಿಟ್ಟುಕೊಂಡೇ ಮತ ಪ್ರಚಾರ ಆರಂಭಿಸಿದರು. ತುರುವಿಹಾಳ ಭಾಗದ ಪ್ರಮುಖ ಮುಖಂಡರ ಸಭೆ ನಡೆಸುವ ಮೂಲಕ ವಿಶೇಷವಾಗಿ ಲಿಂಗಾಯತ ಸಮುದಾಯದ ಮುಖಂಡರ ಮತಗಳನ್ನು ಸೆಳೆಯುವ ಕಸರತ್ತು ನಡೆಸಿದರು.

    ಮಸ್ಕಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಕಾರ್ಯಕ್ರಮ ಸಂಜೆ 5 ಗಂಟೆಗೆ ನಿಗದಿಯಾಗಿದ್ದರಿಂದ ಬಿ.ವೈ.ವಿಜಯೇಂದ್ರ ನೇರವಾಗಿ ಮಸ್ಕಿ ಕ್ಷೇತ್ರದ ಉಮಲೂಟಿ ಗ್ರಾಮಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದರು. ಬೈಕ್ ರ‍್ಯಾಲಿಯ ಮೂಲಕ ಪ್ರಚಾರ ನಡೆಸಿ ಉಮಲೂಟಿ ಗ್ರಾಮದ ಶ್ರೀ ಮಹಿಮಾಂಬುಕಾ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಬಳಿಕ ಗುಂಡಾ ಗ್ರಾಮಕ್ಕೆ ಭೇಟಿ ನೀಡಿದ ವಿಜಯೇಂದ್ರ, ಗುಂಡಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗಿಯಾದರು. ನಂತರ ಗ್ರಾಮದ ಅಮರೇಶ್ವರ ಮಠದ ಚನ್ನಸಿದ್ದರಾಮೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಅಲ್ಲಿಂದಲೇ ಚಿಕ್ಕಬೇರ್ಗಿ, ಹಿರೇಬೇರಗಿಯಲ್ಲಿ ಮತಯಾಚನೆ ಮಾಡಿ ತುರುವಿಹಾಳ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಬಸವೇಶ್ವರ ಮೂರ್ತಿಗೆ ಮಾಲರ್ಪಣೆ ಮಾಡಿ ಹಲವು ಮುಖಂಡರ ಜತೆ ಮಾತುಕತೆ ನಡೆಸಿದರು.

    ಮುಖಂಡರ ಪಟ್ಟಿ: ತುರುವಿಹಾಳ, ತಿಡಿಗೋಳ ಜಿ.ಪಂ ಕ್ಷೇತ್ರದಲ್ಲಿ ಸಂಚಾರ ಮಾಡಿದ ಬಿ.ವೈ.ವಿಜಯೇಂದ್ರ ಈ ಭಾಗದ ಪ್ರಮುಖ ನಾಯರ ಪಟ್ಟಿ ಮಾಡಿ ಹೆಸರು ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡರು ಎಂದು ತಿಳಿದು ಬಂದಿದೆ. ಯಾವುದೇ ಪಕ್ಷ ಎನ್ನದೇ ಎಲ್ಲ ಪಾರ್ಟಿಯಲ್ಲಿರುವ ಆಯಾ ಜಾತಿಯ ಮುಖಂಡರ ಪಟ್ಟಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಜಾತಿವಾರು ಪ್ರಬಲ ನಾಯಕರನ್ನು ಸೆಳೆಯುವ ಲೆಕ್ಕಾಚಾರ ಎಂದು ತಿಳಿದು ಬಂದಿದೆ.

    ಬಾಕ್ಸ್-01 ಹಿಂದೆ ಹಿನ್ನಡೆಯಾಗಿತ್ತು: 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ರಿಗೆ ಲಿಂಗಾಯತ ಸಮುದಾಯದ ಮತಗಳು ಕೈ ತಪ್ಪಿದ್ದವು. ಹೀಗಾಗಿ ಈ ಬಾರಿ ಈ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಮೊದಲ ಭಾಗವಾಗಿಯೇ ಬಿ.ವೈ.ವಿಜಯೇಂದ್ರ ತುರುವಿಹಾಳ, ತಿಡಿಗೋಳ ಭಾಗದಲ್ಲಿ ಸಂಚಾರ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಉಪಚುನಾವಣೆ ಘೋಷಣೆ ಮೊದಲ ದಿನವೇ ವಿಜಯೇಂದ್ರ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದೇ ನೇರವಾಗಿ ಪ್ರಚಾರಕ್ಕೆ ಇಳಿದಿದ್ದರು.

  • ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ಉಪಚುನಾವಣೆಗೆ ಸಿದ್ಧವಾದ ಮಸ್ಕಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್

    ರಾಯಚೂರು: ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ಸರ್ಕಾರದಿಂದ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಮಸ್ಕಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಒಟ್ಟು 17 ಕೆರೆಗಳಿಗೆ ನೀರು ತುಂಬಿಸುವ 457.18 ಕೋಟಿ ರೂಪಾಯಿಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಮೊದಲ ಕಂತಾಗಿ ಆರ್ಥಿಕ ಇಲಾಖೆ 82.33 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ತಕ್ಷಣ ಟೆಂಡರ್ ಕರೆಯುವಂತೆಯೂ ಸೂಚನೆ ನೀಡಲಾಗಿದೆ.

    ಇತ್ತೀಚಿಗೆ ಕನಕ ಹಾಗು ಹೇಮರಡ್ಡಿ ಮಲ್ಲಮ್ಮ ಭವನಕ್ಕೆ 2.50 ಕೋಟಿ ರೂಪಾಯಿ ಮಂಜೂರಾತಿ ನೀಡಲಾಗಿತ್ತು. ನಿರ್ಮಾಣವಾಗಿರುವ ಕಟ್ಟಡಗಳು ವಿವಿಧ ಕಾಮಗಾರಿಗಳಿಗೆ ಈಗ ಒಂದೊಂದಾಗೆ ಚಾಲನೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಕ್ಷೇತ್ರದ ವಟಗಲ್ ನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಇಂದಿರಾಗಾಂಧಿ ವಸತಿ ಶಾಲೆ ಆರಂಭಿಸಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಇಷ್ಟರಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದ್ದು, ಚುನಾವಣೆ ಗೆಲ್ಲಲು ಬಿಜೆಪಿ ಕಾರ್ಯತಂತ್ರ ನಡೆಸಿದೆ.

    ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮತ ಸೆಳೆಯುವ ತಂತ್ರಗಾರಿಕೆಯಂತೂ ನಡೆದಿದೆ. ಮಸ್ಕಿ ಬೈ ಎಲೆಕ್ಷನ್ ನಲ್ಲಿ ಪ್ರತಾಪಗೌಡ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಚುನಾವಣಾ ಉಸ್ತುವಾರಿಯನ್ನ ಬಿ.ವೈ.ವಿಜಯೇಂದ್ರ, ಶ್ರೀರಾಮುಲು, ರವಿಕುಮಾರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ನೇಮಿರಾಜ್ ನಾಯಕ್ ವಹಿಸಿಕೊಂಡಿದ್ದಾರೆ.

    ಒಂದೆಡೆ ಎನ್‍ಆರ್ ಬಿ ಸಿ 5 ಎ ಕಾಲುವೆಗಾಗಿ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಹೋರಾಟ 80 ನೆಯ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟದ ಮಧ್ಯೆಯೇ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

  • ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಬಿಎಸ್‍ವೈ ಷರತ್ತಿನ ವ್ಯೂಹ!

    ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಬಿಎಸ್‍ವೈ ಷರತ್ತಿನ ವ್ಯೂಹ!

    ಬೆಂಗಳೂರು: ನನ್ನ ಕಂಡೀಷನ್‍ಗೆ ಮಾತ್ರ ನಾನು ಓಕೆ..! ಇದನ್ನ ಹೇಳಿರೋರು ಬೇರೆ ಯಾರೂ ಅಲ್ಲ. ಅವರೇ ಸಿಎಂ ಯಡಿಯೂರಪ್ಪ ಅವರು. 6 ಸಚಿವ ಸ್ಥಾನ ತುಂಬುವ ಸೂತ್ರಕ್ಕೆ ಹೈಕಮಾಂಡ್‍ಗೆ ಚಕ್ರವ್ಯೂಹ ಹೆಣೆದಿದ್ದಾರೆ. ರಾಜಾಹುಲಿಯ ಚಾಣಕ್ಯ ನಡೆಯಿಂದ ಯಾರಿಗೇ ಎಷ್ಟು ಲಾಭ-ನಷ್ಟ ಅನ್ನೋ ಕುತೂಹಲ ಗರಿಗೆದರಿದೆ. ನಿಮ್ ಸೂತ್ರಕ್ಕೆ ನನ್ ಕಂಡೀಶನ್ ಅಸಲಿ ಇನ್ ಸೈಡ್ ಸ್ಟೋರಿ ಬಗ್ಗೆಯೇ ಈಗ ದೊಡ್ಡ ಚರ್ಚೆ.

    ಅಂದಹಾಗೆ ಬಜೆಟ್‍ಗೂ ಮುನ್ನ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಹೈಕಮಾಂಡ್ ಸಲಹೆಗೆ ಸಿಎಂ ಯಡಿಯೂರಪ್ಪ ಅವರು ಬತ್ತಳಿಕೆಯಿಂದ ಕಂಡೀಶನ್ ಅಸ್ತ್ರ ಪ್ರಯೋಗವಾಗಿದೆ ಅನ್ನೋದು ಲೇಟೆಸ್ಟ್ ಸುದ್ದಿ. ವಲಸಿಗ ಹಕ್ಕಿಗಳಿಗೆ ಸರಿಯಾದ ಗೂಡು ಭದ್ರವಾದರೆ ಮಾತ್ರ 6 ಸ್ಥಾನಗಳನ್ನು ತುಂಬಲು ಯಡಿಯೂರಪ್ಪ ಒಪ್ಪಿಗೆ ಸೂಚಿಸುತ್ತಾರೆ ಅಂತಾ ಆಪ್ತ ವಲಯ ಹೇಳಿದೆ. ಹಾಗಾಗಿಯೇ ಸೋತಿರುವ ಹೆಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ಕೊಡಬೇಕು.


    ಮುನಿರತ್ನ, ಪ್ರತಾಪಗೌಡ ಪಾಟೀಲ್, ಆರ್.ಶಂಕರ್ ಅವರಿಗೂ ಸಚಿವ ಸ್ಥಾನ ಭದ್ರಪಡಿಸಬೇಕು. ಯಾರೂ ಏನೇ ಅನ್ನಲಿ ಜೂನ್ ಬಳಿಕ ಈ ಐದು ಜನರಿಗೆ ಸ್ಥಾನಮಾನ ಕಲ್ಪಿಸಬೇಕು. ಹಾಗಾದ್ರೆ ಮಾತ್ರ ಬಜೆಟ್‍ಗೂ ಮುನ್ನ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಿಬಿಡ್ತೀನಿ. ನೀವು ಹೇಳಿದಂತೆ 6 ಸಚಿವ ಸ್ಥಾನಗಳನ್ನು ತುಂಬಿಬಿಡ್ತೀನಿ ಅಂತಾ ಬಿಜೆಪಿ ಹೈಕಮಾಂಡ್‍ಗೆ ಸಿಎಂ ಯಡಿಯೂರಪ್ಪ ತಮ್ಮ ಅಭಿಪ್ರಾಯ ತಿಳಿಸಿದ್ದಾರಂತೆ.

    ಇನ್ನೊಂದೆಡೆ ಜೂನ್ ಬಳಿಕ ಪುನಾರಚನೆ ಪಕ್ಕಾ ಆಗ್ಬೇಕು ಅನ್ನೋದು ಯಡಿಯೂರಪ್ಪ ಅವರ ವಾದ ಎನ್ನಲಾಗಿದೆ. ಪುನಾರಚನೆಯ ಸಂದರ್ಭದಲ್ಲಿ ಮೊದಲ ಹಂತದಲ್ಲಿ ಕ್ಯಾಬಿನೆಟ್‍ಗೆ ಸೇರಿದವರ ಕಾರ್ಯವೈಖರಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನದಲ್ಲಿ ಪಾಸ್ ಆದವರನ್ನ ಸಂಪುಟದಲ್ಲಿ ಇರಿಸಿಕೊಳ್ಳಿ, ಫೇಲ್ ಆದವರನ್ನ ಸಂಪುಟದಿಂದ ಕೈ ಬಿಡಬಹುದು. ಹೈಕಮಾಂಡ್ ಇದಕ್ಕೆ ಬದ್ಧವಾದ್ರೆ ನನ್ನದೇನೂ ತಕರಾರಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

  • ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಬೆಂಗಳೂರು: ಹೇಗಾದ್ರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಅತೃಪ್ತ ಶಾಸಕ ಡಾ.ಉಮೇಶ್ ಜಾಧವ್‍ಗೆ ಬಿಸಿ ಮುಟ್ಟಿಸಿದ್ದಾರೆ.

    ರಾಜ್ಯ ಉಗ್ರಾಣ ನಿಗಮಕ್ಕೆ ಉಮೇಶ್ ಜಾಧವ್ ನೇಮಕಾತಿಯನ್ನ ರದ್ದು ಮಾಡಿದ್ದಾರೆ. ಉಮೇಶ್ ಜಾಧವ್ ಬದಲಾಗಿ ಉಗ್ರಾಣ ನಿಗಮಕ್ಕೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‍ರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಅತೃಪ್ತರ ಓಲೈಕೆಗೂ ಸಿಎಂ ಮುಂದಾಗಿದ್ದಾರೆ.

    ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್‍ಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರತಾಪ್‍ಗೌಡ ಹಾಗೂ ಬಸವನಗೌಡ ಈ ಇಬ್ಬರೂ ಶಾಸಕರು ಬಿಜೆಪಿ ಕಡೆಗೆ ವಾಲುವ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ.  

    ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್‍ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಮರೀಚಿಕೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಸಸ್ಪೆನ್ಸ್ ಇರಿಸಿದ್ದು, ಸುಧಾಕರ್ ನಡೆ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv