Tag: ಪ್ರಣಾಮ್ ದೇವರಾಜ್

  • ಪ್ರಣಾಮನ ಕುಮಾರಿ – ಕುದಿ ರಕ್ತದ ಹದವರಿತ ಸ್ಟೋರಿ!

    ಪ್ರಣಾಮನ ಕುಮಾರಿ – ಕುದಿ ರಕ್ತದ ಹದವರಿತ ಸ್ಟೋರಿ!

    ಬೆಂಗಳೂರು: ಪ್ರಣಾಮ್ ಅಭಿನಯದ ಕುಮಾರಿ21 ಎಫ್ ಚಿತ್ರ ಥೇಟರುಗಳಿಗೆ ಎಂಟ್ರಿ ಕೊಟ್ಟಿದೆ. ಮುಗ್ಧತೆ, ಪ್ರೀತಿ, ದ್ರೋಹ, ಕ್ರೈಮುಗಳು ತುಂಬಿದ ಕಟಾಂಜನದಂತಿರೋ ಈ ಚಿತ್ರ ಪಕ್ಕಾ ಕಮರ್ಷಿಯಲ್ ಸೂತ್ರಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಓರ್ವ ಸಾಮಾನ್ಯ ಹುಡುಗನಾಗಿ, ಪ್ರೇಮಿಯಾಗಿ, ಯಾವುದೋ ಸಂದರ್ಭಗಳಿಗೆ ದಾಳವಾಗಿಯೂ ದೇವರಾಜ್ ಪುತ್ರ ಪ್ರಣಾಮ್ ಮೊದಲ ಚಿತ್ರದಲ್ಲಿಯೇ ತಕ್ಕಮಟ್ಟಿಗೆ ಭರವಸೆ ಹುಟ್ಟಿಸಿದ್ದಾರೆ!

    ಬಹುಶಃ ಮೊದಲ ಚಿತ್ರವಾದ ಕಾರಣ ತಮ್ಮ ಮಿತಿಗಳನ್ನು ಅರ್ಥ ಮಾಡಿಕೊಂಡೇ ಪ್ರಣಾಮ್ ಈ ಕಥೆಯನ್ನು ಒಪ್ಪಿಕೊಂಡಿರಲೂ ಬಹುದು. ಇಲ್ಲಿ ಪ್ರಣಾಮ್ ಸಿದ್ದು ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆತನಿಗೆ ವಿದೇಶದಲ್ಲಿನ ದೊಡ್ಡ ಗಾತ್ರದ ಕ್ರೂಸರ್ ನಲ್ಲಿ ಅಡುಗೆಯವನಾಗಬೇಕೆಂಬುದು ಮಹಾ ಕನಸು. ಅದಕ್ಕೆ ಕಾಸು ಬೇಕಲ್ಲಾ? ಅದನ್ನು ಹೇಗಾದರೂ ಹೊಂದಿಸಿಕೊಳ್ಳಲು ಪಡಿಪಾಟಲು ಪಡುವ ಸಿದ್ದನಿಗೆ ಅಲ್ಲಿಲ್ಲಿ ಪುಡಿಗಾಸು ಕಿತ್ತು ತಿನ್ನೋ ಜಾಯಮಾನದ ಮೂವರು ಗೆಳೆಯರೂ ಸಾಥ್ ನೀಡುತ್ತಾರೆ. ಈ ಗೆಳೆಯರು ಅವರಿವರಿಂದ ಕಿತ್ತುಕೊಂಡ ಬಿಡಿಗಾಸಲ್ಲಿ ಸಿದ್ದನೂ ಪಾಲುದಾರ. ಹೀಗಿರುವಾಗಲೇ ಮಾಡೆಲಿಂಗ್ ಲೋಕದ ಮಿಂಚುಳ್ಳಿಯಂಥಾ ನಾಯಕಿಯ ಪರಿಚಯ, ಲವ್ವು ಇತ್ಯಾದಿ…

    ಬರೀ ಇಷ್ಟೇ ಆಗಿದ್ದರೆ ಮಾಮೂಲಾಗಿ ಬಿಡುತ್ತಿತ್ತು. ಆದರೆ ಪಕ್ಕಾ ಪೋಲಿ ಮೂಡಿನ ಜಾಲಿ ಜಾಲಿ ಮಾಡೆಲ್ ಹುಡುಗಿಗೂ ಮತ್ಯಾವುದಕ್ಕೋ ಲಿಂಕಿರುತ್ತೆ. ಈಕೆಯ ಬಗ್ಗೆ ಅತೀವ ಪ್ರೀತಿಯಿದ್ದರೂ ಸಿದ್ದು ಮನದಲ್ಲಿ ಸದಾ ಒಂದು ಅನುಮಾನ ಜಾರಿಯಲ್ಲಿರೋದೂ ಕೂಡಾ ಇದೇ ಕಾರಣಕ್ಕೆ. ಇದೆಲ್ಲವನ್ನೂ ಮೀರಿ ನಾಯಕಿಯಲ್ಲಿ ಲೀನವಾಗಲು ಸಿದ್ದು ಹೊರಟಾಗಲೇ ಮತ್ತೊಂದು ಭಯಾನಕ ಟ್ವಿಸ್ಟು!

    ಒಟ್ಟಾರೆ ಕಥೆ ಪ್ರೇಕ್ಷಕರನ್ನು ಒಂದಷ್ಟಾದರೂ ಹಿಡಿದಿಟ್ಟುಕೊಂಡಿರೋದೇ ಈ ಕಾರಣದಿಂದ. ಪ್ರೀತಿಯ ಜೊತೆಗೇ ಕ್ರೈಮೂ ಅಡಕವಾಗಿರೋ ಈ ಚಿತ್ರದ ಕಥಾ ಹಂದರ ಪಕ್ಕಾ ಈಗಿನ ಯುವ ಸಮುದಾಯಕ್ಕೆ ಹಿಡಿದ ಕನ್ನಡಿ ಎನ್ನಲಡ್ಡಿಯಿಲ್ಲ. ಈ ಚಿತ್ರದಲ್ಲಿ ಅಂಥಾ ಟ್ವಿಸ್ಟುಗಳು ಏನೇನಿವೆ ಅನ್ನೋ ಕುತೂಹಲವಿದ್ದರೆ ಒಮ್ಮೆ ಥೇಟರು ಹೊಕ್ಕು ನೋಡಬಹುದು.

    ಪ್ರಣಾಮ್ ಇನ್ನಷ್ಟು ಪಳಗಿಕೊಂಡರೆ ನಾಯಕನಾಗಿ ನೆಲೆ ನಿಲ್ಲಬಹುದಾದ ಲಕ್ಷಣಗಳು ಆತನ ನಟನೆಯಲ್ಲಿ ಕಾಣಿಸುತ್ತವೆ. ನಾಯಕಿಯಾಗಿ ಬೋಲ್ಡ್ ಅವತಾರದಲ್ಲಿ ಪೋಲಿ ಡೈಲಾಗುಗಳ ಮೂಲಕವೂ ಬೆಚ್ಚಿ ಬೀಳಿಸುವ ನಿಧಿ ಕುಶಾಲಪ್ಪ ಅವರ ಪಾತ್ರಕ್ಕೆ ನ್ಯಾಯ ಸಿಲ್ಲಿಸಿದ್ದಾರೆ. ಚಿತ್ರದುದ್ದಕ್ಕೂ ಮೈ ನವಿರೇಳಿಸೋ ದೃಶ್ಯಗಳ ಜೊತೆಗೆ ಮೈ ಬಿಸಿ ಮಾಡುವಂಥಾ ದೃಶ್ಯಾವಳಿಗಳೂ ಯಥೇಚ್ಛವಾಗಿವೆ. ಇನ್ನುಳಿದ ಕಲಾವಿದರದ್ದೂ ಕೂಡಾ ಅಚ್ಚುಕಟ್ಟಾದ ನಟನೆ. ಒಟ್ಟಾರೆಯಾಗಿ ನಿರ್ದೇಶಕ ಶ್ರೀಮಾನ್ ವೇಮುಲ ಇನ್ನೊಂದಷ್ಟು ಎಚ್ಚರ ವಹಿಸಿ ರೂಪಿಸಿದ್ದರೆ ಕುಮಾರಿ ಮತ್ತಷ್ಟು ಆಪ್ತಳಾಗುತ್ತಿದ್ದಳು!

    ರೇಟಿಂಗ್: 3.5/5

  • ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ ಕನ್ನಡಕ್ಕೆ ಬರಲು ಕಾರಣ ರಾಜಮೌಳಿಯ ಅಪ್ಪ!

    ಕುಮಾರಿ 21 ಎಫ್ ಚಿತ್ರದ ಮೂಲಕ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರದ ರೀಮೇಕ್ ಆಗಿರೋ ಕುಮಾರಿ ಕನ್ನಡಕ್ಕೆ ಬರಲು ಮೂಲ ಕಾರಣ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಎಂಬ ವಿಚಾರ ಇದೀಗ ಬಯಲಾಗಿದೆ!

    ಇದು ತೆಲುಗಿನ ಕುಮಾರಿ 21 ಎಫ್ ಚಿತ್ರದ ರೀಮೇಕ್. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದರು. ಸುಕುಮಾರ್ ಅವರ ಅಣ್ಣ ವಿಜಯ ಕುಮಾರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಸದರಿ ಚಿತ್ರ ಹಿಟ್ ಆಗುತ್ತಲೇ ನಿರ್ಮಾಪಕ ವಿಜಯ ಕುಮಾರ್ ಈ ಚಿತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದರು. ಈ ವಿಚಾರವನ್ನು ನಿರ್ದೇಶಕ ಶ್ರೀಮಾನ್ ಗೆ ಹೇಳಿದ ಸುಕುಮಾರ್, ಅದನ್ನು ಕನ್ನಡಕ್ಕೆ ತಾವೇ ನಿರ್ದೇಶನ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಆದರೆ ಅದುವರೆಗೂ ಈ ಚಿತ್ರವನ್ನು ನೋಡಿರದ ಶ್ರೀಮಾನ್ ಹಿಂದೇಟು ಹಾಕಿ ಅಲ್ಲಿಂದ ಎಸ್ಕೇಪಾಗಿದ್ದರಂತೆ.

    ಅದಾಗಿ ಕೆಲ ದಿನಗಳ ನಂತರ ಈ ವಿಚಾರವನ್ನು ಶ್ರೀಮಾನ್ ತಮ್ಮ ಗುರುಗಳಾದ ವಿಜಯೇಂದ್ರ ಪ್ರಸಾದ್ ಅವರ ಬಳಿ ಹೇಳಿದ್ದಾರೆ. ಅದಕ್ಕವರು ಯಾವ ಕಾರಣಕ್ಕೂ ಈ ಅವಕಾಶವನ್ನು ಬಿಡಬಾರದಾಗಿ ಸಲಹೆ ಕೊಟ್ಟ ನಂತರ ಶ್ರೀಮಾನ್ ಅಖಾಡಕ್ಕಿಳಿದಿದ್ದರು. ಆ ಬಳಿಕ ಮಿಂಚಿನ ವೇಗದಲ್ಲಿ ತಯಾರಿ ಮಾಡಿಕೊಂಡು, ದೇವರಾಜ್ ಅವರ ಬಳಿಯೇ ಮಾತಾಡಿ ಪ್ರಣಾಮ್ ನಟಿಸುವಂತೆ ಮಾಡುವಲ್ಲಿಯೂ ಶ್ರೀಮಾನ್ ಯಶಸ್ವಿಯಾಗಿದ್ದರು.

    ಅಂದಹಾಗೆ ಇದು ಈ ದಿನಮಾನದಲ್ಲಿನ ಯುವಕರ ಕಥೆ. ಈ ಚಿತ್ರ ನೋಡಿದರೆ ಬೇರೆ ಬೇರೆ ಪಾತ್ರಗಳಲ್ಲಿ, ಸನ್ನಿವೇಶಗಳಲ್ಲಿ ಇದು ತಮ್ಮದೇ ಕಥೆ ಎಂಬಂಥಾ ಆಪ್ತ ಭಾವ ಹುಟ್ಟಿಕೊಳ್ಳಲಿದೆಯಂತೆ. ಕನ್ನಡದ ನೇಟಿವಿಟಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕುದಾಗಿ ಈ ಚಿತ್ರವನ್ನು ರೂಪಿಸಿರೋ ನಿರ್ದೇಶಕ ಶ್ರೀಮಾನ್ ದೊಡ್ಡ ಗೆಲುವೊಂದು ಸಿಕ್ಕುವ ಭರವಸೆಯಿಂದಿದ್ದಾರೆ.

  • ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಕುಮಾರಿಯ ಬಗ್ಗೆ ಯಾಕಿಂಥಾ ಕುತೂಹಲ?

    ಬೆಂಗಳೂರು: ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ‘ಕುಮಾರಿ 21 ಎಫ್’ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿಚಾರ ಎಲ್ಲರಿಗೂ ತಿಳಿದದ್ದೇ. ಆದರೆ, ಈ ಚಿತ್ರದ ಟೈಟಲ್ಲಿನ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಇದರ ಅಸಲೀ ನಿಗೂಢ ಏನಿರಬಹುದೆಂಬ ಬಗ್ಗೆ ಪ್ರೇಕ್ಷಕರಲ್ಲೊಂದು ಗಾಢವಾದ ಕುತೂಹಲವೂ ಇದೆ!

    ಇದು ನಿಜಕ್ಕೂ ಆಲೋಚನೆಗೆ ಹಚ್ಚುವ ಟೈಟಲ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಗಿನ ಯಾವ ವಿಚಾರಗಳನ್ನೂ ಬಿಟ್ಟುಕೊಡದ ಚಿತ್ರ ತಂಡ ಥೇಟರಿನಲ್ಲಿಯೇ ಅದನ್ನು ಪ್ರೇಕ್ಷಕರ ಮುಂದೆ ತೆರೆದಿಡೋ ನಿರ್ಧಾರ ಮಾಡಿದಂತಿದೆ. ನಾಯಕ ಪ್ರಣಾಮ್ ಮಾತುಗಳಲ್ಲಿಯೇ ಈ ಚಿತ್ರ ವಿಭಿನ್ನವಾದೊಂದು ಕಥೆ ಹೊಂದಿದೆ ಎಂಬ ವಿಚಾರ ಮಾತ್ರ ಜಾಹೀರಾಗಿದೆ.

    ಹೇಳಿ ಕೇಳಿ ಪ್ರಣಾಮ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪುತ್ರ. ಆದ್ದರಿಂದಲೇ ಆತನ ಎಂಟ್ರಿಯ ಬಗ್ಗೆ ಪ್ರೇಕ್ಷಕರಲ್ಲೊಂದು ಮಾಸ್ ಆದ ನಿರೀಕ್ಷೆ ಇದ್ದೇ ಇತ್ತು. ಪ್ರಣಾಮ್ ಆಕ್ಷನ್ ಓರಿಯಂಟೆಡ್ ಕಥೆಯ ಮೂಲಕವೇ ಎಂಟ್ರಿ ಕೊಡುತ್ತಾರೆಂಬ ಬಗೆಗೂ ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ಪ್ರಣಾಮ್ ಎಲ್ಲ ಹೀರೋಯಿಸಮ್ಮಿನ ಅಬ್ಬರದಾಚೆಗೆ ನಟನೆಗೆ ಸವಾಲಾಗಿರುವ ಪಾತ್ರವನ್ನೇ ಆರಿಸಿಕೊಳ್ಳುವ ಮೂಲಕ ಭರವಸೆ ಹುಟ್ಟಿಸಿದ್ದಾರೆ.

    ಪ್ರಣಾಮ್ ಅವರದ್ದಿಲ್ಲಿ ತನ್ನ ಪಾಡಿಗೆ ತಾನಿರುವ, ಸಣ್ಣ ಕನಸೇ ಆದರೂ ಕಷ್ಟಪಟ್ಟು ನನಸು ಮಾಡಿಕೊಳ್ಳುವ ಪಾತ್ರವಂತೆ. ಇಂಥಾ ಹುಡುಗನ ಬಾಳಲ್ಲಿ ಬಿಂದಾಸ್ ಹುಡುಗಿಯೊಬ್ಬಳ ಪ್ರವೇಶವಾದ ನಂತರದಲ್ಲಿ ನಡೆಯುವ ರಸವತ್ತಾದ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈಗಾಗಲೇ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ ಬಂದಿದೆ. ಪ್ರಣಾಮ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರೋ ದಿನಗಳೂ ಹತ್ತಿರಾಗಿವೆ.

  • ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಶ್ರೀ ಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ `ಕುಮಾರಿ 21 ಎಫ್` ಚಿತ್ರದ ಟ್ರೇಲರನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಯೂಟ್ಯೂಬ್ ನಲ್ಲಿ ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಶ್ರೀಮಾನ್ ವೆಮುಲ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಸಾಗರ್ ಮಹತಿ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ರಾಮಿ ರೆಡ್ಡಿ ಅವರ ಛಾಯಾಗ್ರಹಣ ಹಾಗೂ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿ ಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

     

     

  • ಮಗ ಪ್ರಣಾಮ್ ಗೆ ಪೊಲೀಸ್ ನೋಟಿಸ್ ಬಂದಿದ್ದರ ಬಗ್ಗೆ ದೇವರಾಜ್ ಹೇಳಿದ್ದು ಹೀಗೆ

    ಮಗ ಪ್ರಣಾಮ್ ಗೆ ಪೊಲೀಸ್ ನೋಟಿಸ್ ಬಂದಿದ್ದರ ಬಗ್ಗೆ ದೇವರಾಜ್ ಹೇಳಿದ್ದು ಹೀಗೆ

    ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದೇವರಾಜ್ ಕಿರಿಯ ಪುತ್ರ ಪ್ರಣಾಮ್ ಅವರಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ದೇವರಾಜ್, ಮನೆಗೆ ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ ಅಪಘಾತ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿಲ್ಲ. ಪ್ರಣಾಮ್ ಮತ್ತು ವಿಷ್ಣು ಇಬ್ಬರು ಗೆಳಯರಾಗಿದ್ದಾರೆ. ಅಪಘಾತದ ನಡೆದ ಸ್ಥಳದಲ್ಲಿ ನೀವು ಇದ್ದಿದ್ದೀರಿ. ಹಾಗಾಗಿ ಹೇಳಿಕೆಯನ್ನು ಪಡೆಯಲು ಪೊಲೀಸರಿಂದ ನೋಟಿಸ್ ಬಂದಿದೆ ಅಂತಾ ಹೇಳಿದ್ದಾರೆ.

    ಅಪಘಾತದ ವಿಷಯ ತಿಳಿದ ಮೇಲೆ ಗೆಳೆಯನನ್ನು ನೋಡಲು ಪ್ರಣಾಮ್ ಘಟನಾ ಸ್ಥಳಕ್ಕೆ ಹೋಗಿದ್ದರು. ಅಪಘಾತ ನಡೆಯುವ ಮುಂಚೆ ಪ್ರಣಾಮ್ ಅಲ್ಲಿ ಇರಲಿಲ್ಲ. ಅಪಘಾತದ ಯಾವುದೇ ಮಾಹಿತಿ ಗೊತ್ತಿಲ್ಲ, ಫೋನ್ ಬಂದ ಮೇಲೆಯೇ ಪ್ರಣಾಮ್ ಹೋಗಿದ್ದಾನೆ. ಈಗಾಗಲೇ ಪ್ರಣಾಮ್ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ವಿಷ್ಣು ಹೇಳಿಕೆಯನ್ನು ನೀಡಿದಾಗ ಮಾತ್ರ ಎಲ್ಲ ಸತ್ಯ ಬಹಿರಂಗವಾಗಲಿದೆ ಎಂದು ದೇವರಾಜ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್

    ಘಟನೆ ನಡೆದ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಸ್ಯಾಂಡಲ್‍ವುಡ್ ನಟರು ಇದ್ದರು ಎಂದು ತಿಳಿದು ಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಕಾರಿನಲ್ಲಿ ಇದ್ದರೆಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದನ್ನು ಅಲ್ಲಗಳೆದಿದ್ದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣದಲ್ಲಿ ವಿಷ್ಣುವಿಗಾಗಿ ತೀವ್ರ ಶೋಧದ ಬೆನ್ನಲ್ಲೇ ಪೊಲೀಸರು ಈಗ ಫುಲ್ ಆಕ್ಟೀವ್ ಆಗಿದ್ದಾರೆ.

    ಇದನ್ನೂ ಓದಿ: ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    https://www.youtube.com/watch?v=XkSGJRHTDEw

  • ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಬೆಂಗಳೂರು: ನಗರದಲ್ಲಿ ಉದ್ಯಮಿ ಮೊಮ್ಮಗನ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ.

    ಘಟನೆ ನಡೆದ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಸ್ಯಾಂಡಲ್‍ವುಡ್ ನಟರು ಇದ್ದರು ಎಂದು ತಿಳಿದುಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಕಾರಿನಲ್ಲಿ ಇದ್ದರೆಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದನ್ನು ಅಲ್ಲಗಳೆದಿದ್ದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದ್ರೆ ಆದಿಕೇಶವುಲು ಮೊಮ್ಮಗನ ಜೊತೆ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ದೇವರಾಜ್ ಅಲ್ಲ, ಅವರ ಸಹೋದರ ಪ್ರಣಾಮ್ ದೇವರಾಜ್ ಎಂದು ತಿಳಿದುಬಂದಿದೆ.

     

    ಪ್ರಜ್ವಲ್ ಸಹೋದರ ಪ್ರಣಾಮ್ ದೇವರಾಜ್‍ನನ್ನು ನೋಡಿ ಜನರು ಗೊಂದಲಕ್ಕೀಡಾದರು. ನೋಡೋದಕ್ಕೆ ಇಬ್ಬರೂ ಒಂದೇ ರೀತಿ ಇದ್ದ ಹಿನ್ನೆಲೆಯಲ್ಲಿ ಜನ ಗೊಂದಲಕ್ಕೀಡಾಗಿದ್ದರು. ನಂತರ ಪ್ರಜ್ವಲ್ ದೇವರಾಜು ಅಂತ ತಪ್ಪಾಗಿ ಗ್ರಹಿಸಿದ್ದರು.

    ಇದನ್ನೂ ಓದಿ: ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್

    ಪ್ರಣಾಮ್ ದೇವರಾಜು ಕೂಡ ನಟರಾಗಿದ್ದು, ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಣಾಮ್ ದೇವರಾಜ್ ಘಟನೆ ನಡೆದ ದಿನದಂದು ಸ್ಥಳದಲ್ಲೇ ಇದ್ದರು ಎಂಬ ಬಗ್ಗೆ ತಾಂತ್ರಿಕವಾಗಿ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಣಾಮ್‍ಗೆ ಈಗ ನೋಟಿಸ್ ಜಾರಿ ಮಾಡಿದ್ದಾರೆ ನಾಳೆಯೊಳಗಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

    ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣದಲ್ಲಿ ವಿಷ್ಣುವಿಗಾಗಿ ತೀವ್ರ ಶೋಧದ ಬೆನ್ನಲ್ಲೆ ಪೊಲೀಸರು ಆಕ್ಟೀವ್ ಆಗಿದ್ದಾರೆ.

    ಇದನ್ನೂ ಓದಿ: ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    https://www.youtube.com/watch?v=XkSGJRHTDEw