Tag: ಪ್ರಣಬ್ ಮುಖರ್ಜಿ

  • ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    ತಂದೆಯ ಆರೋಗ್ಯ ಸ್ಥಿರವಾಗಿದೆ- ಪ್ರಣಬ್ ಮುಖರ್ಜಿ ಪುತ್ರ

    – ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆರೋಗ್ಯದಲ್ಲಿ ಸುಧಾರಣೆಯಾಗಿದೆ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಅವರ ಆರೋಗ್ಯ ಸುಧಾರಿಸುತ್ತಿದ್ದು, ಸ್ಥಿರವಾಗಿದ್ದಾರೆ ಎಂದು ಅವರ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಭಿಜಿತ್ ಬ್ಯಾನರ್ಜಿ, ನಾನು ಆಸ್ಪತ್ರೆಗೆ ಭೇಟಿ ನೀಡಿದ್ದು, ದೇವರ ಆಶೀರ್ವಾದದಿಂದಾಗಿ ನಿಮ್ಮೆಲ್ಲರ ಹಾರೈಕೆಯಿಂದ ಈ ಹಿಂದಿನ ದಿನಗಳಿಗಿಂತ ಇದೀ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸ್ಥಿರವಾಗಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಅವರು ಮತ್ತೆ ನಮ್ಮನ್ನು ಸೇರಲಿದ್ದಾರೆ ಎಂದು ನಾವು ಬಲವಾಗಿ ನಂಬಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ಸೋಮವಾರ ರಾತ್ರಿಯಿಂದಲೇ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಚಿಕಿತ್ಸೆ ಮುಂದುವರಿಸಿದ್ದು, ವೆಂಟಿಲೇಟರ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ. ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ, ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

  • ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

    ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

    ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.

  • ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ: ವೈದ್ಯರು ಮಾಹಿತಿ

    ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ: ವೈದ್ಯರು ಮಾಹಿತಿ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಇಂದು ಕೂಡ ಯಾವುದೇ ಬದಲಾವಣೆಯಿಲ್ಲ. ವೆಂಟಿಲೇಟರ್ ಬಳಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ದೆಹಲಿ ಆರ್ಮಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಇತ್ತ ಪ್ರಣಬ್ ಮಗ ಟ್ವೀಟ್ ಮಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಪ್ರಣಬ್ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಪೂಜೆ ಮಾಡುತ್ತಿದ್ದಾರೆ.

    ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಆ ಬಳಿಕ ಸೋಮವಾರ ರಾತ್ರಿಯಿಂದಲೇ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು.

    ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಬದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ, ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ನವದೆಹಲಿ : ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ, ಚಿಂತಾಜನಕ ಪರಿಸ್ಥಿತಿ ಮುಂದುವರಿದಿದೆ ಎಂದು ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಪ್ರಣಬ್ ಮುಖರ್ಜಿ ಪುತ್ರಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

    ಸದ್ಯ ಪ್ರಣಬ್ ಮುಖರ್ಜಿ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಚಿಕಿತ್ಸೆ ಪೂರಕವಾದ ಸ್ಪಂದನೆ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಆರೋಗ್ಯ ವರದಿಯಲ್ಲಿ ಉಲ್ಲೇಖಿಸಿದೆ.

    ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಟ್ವಿಟರ್ ನಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ದೇವರು ಉತ್ತಮ ಮಾರ್ಗವನ್ನೇ ತೋರಿಸುತ್ತಾನೆ ಅದನ್ನು ಸ್ವೀಕರಿಸುವ ಶಕ್ತಿಯನ್ನು ದಯಪಾಲಿಸಲಿದ್ದಾನೆ. ಕಳೆದ ವರ್ಷ ಅಗಸ್ಟ್ 8 ರಂದು ಭಾರತ ರತ್ನ ಗೌರವ ನೀಡಲಾಗಿತ್ತು. ಇದು ಜೀವನ ಅತ್ಯಂತ ಖುಷಿಯ ಕ್ಷಣವಾಗಿತ್ತು. ಇದಾಗಿ ಸರಿಯಾಗಿ ಒಂದು ವರ್ಷಕ್ಕೆ ಅಗಸ್ಟ್ 10 ರಿಂದ ಅವರ ಆರೋಗ್ಯ ಗಂಭೀರವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

    84 ವರ್ಷದ ಪ್ರಣಬ್ ಮುಖರ್ಜಿ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಸ್ಪತ್ರೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಮೆದುಳು ಸಂಬಂಧಿಸಿದ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಬಂದ ಹಿನ್ನೆಲೆ ಆಪರೇಷನ್ ಕೂಡಾ ಮಾಡಲಾಗಿದ್ದು ಸದ್ಯ ಆರೋಗ್ಯ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದೆ.

  • ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿಯವರಿಗೆ ಸೋಮವಾರ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ನಿನ್ನೆ ಮಧ್ಯಾಹ್ನದ ಬಳಿಕ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ಗೆ ಒಳಗಾಗಿ ಎಂದು ತಿಳಿಸಿದ್ದರು.

    ಮಾಜಿ ರಾಷ್ಟ್ರಪತಿಗಳಿಗೂ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರದಂತೆ ಹಲವಾರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮುಖರ್ಜಿಯವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ ಅಂತ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನ ಸಂಪರ್ಕದಲ್ಲಿ ಇದ್ದವರು ಈ ಕೂಡಲೇ ಕೋವಿಡ್ 19 ಟೆಸ್ಟ್ ಮಾಡಿಕೊಂಡು ಸ್ವತಃ ಐಸೋಲೇಷನ್ ಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಅಂದರೆ ಆಗಸ್ಟ್ 2ರಂದು ಅಮಿತ್ ಶಾ ಅವರು ಕೊರೊನಾ ದೃಢವಾಗಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದರು. ಅಲ್ಲದೆ ಅದೇ ದಿನ ದೆಹಲಿ ಹೊರವಲಯದ ಗುರುಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಬಿಜೆಪಿ ಸಂಸದ ಮನೋಜ್ ತಿವಾರಿ, ಅಮಿತ್ ಶಾಗೆ ಎರಡನೇ ಬಾರಿ ಕೋವಿಡ್ 19 ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಭಾನುವಾರ ಟ್ವೀಟ್ ಮಾಡಿದ್ದರು. ಈ ಸಂಬಂಧ ಗೃಹ ಸಚಿವಾಲಯ 2ನೇ ಬಾರಿ ಟೆಸ್ಟ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ತಿವಾರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಶಾ ಅವರು ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದುಕೊಂಡೇ ಶುಭಹಾರೈಸಿದ್ದರು.

  • ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ಪ್ರಣಬ್ ಮುಖರ್ಜಿಗೆ ಭಾರತರತ್ನ ಪ್ರದಾನ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಭಾರತ ರತ್ನ ಗೌರವವನ್ನು ಪ್ರದಾನ ಮಾಡಿದರು.

    ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಅವರ ಜತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್‍ಮುಖ್ ಹಾಗೂ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತರತ್ನವನ್ನು ನೀಡಿ ಗೌರವಿಸಲಾಯಿತು. ನಾನಾಜಿ ದೇಶ್‍ಮುಕ್ ಮತ್ತು ಭೂಪೇನ್ ಹಜಾರಿಕಾ ಅವರ ಪರವಾಗಿ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

    ದಶಕಗಳ ಕಾಲ ದೇಶಕ್ಕೆ ಪ್ರಣಬ್ ಮುಖರ್ಜಿ ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರ್ಕಾರ ಈ ವರ್ಷದ ಜನವರಿಯಲ್ಲಿ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಖಾತೆ ಸೇರಿದಂತೆ ನಾನಾ ಬಗೆಯ ಖಾತೆಗಳನ್ನು ನಿಭಾಯಿಸಿದ ಮುಖರ್ಜಿ ಅವರು 2012ರಲ್ಲಿ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2017ರವರೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಜವಾಬ್ದಾರಿ ವಹಿಸಿದ್ದರು.

    ಜನಸಂಘದ ಪ್ರಮುಖ ನಾಯಕ ನಾನಾಜಿ ದೇಶ್‍ಮುಖ್ ನಾಗರಿಕರಿಗೆ ಶಿಕ್ಷಣ, ಆರೋಗ್ಯ ಕ್ಷೇತ್ರ ಸಿಗಬೇಕೆಂದು ಹೋರಾಡಿದ ಸಾಮಾಜಿಕ ಕಾರ್ಯಕರ್ತರು. ರಾಜ್ಯಸಭಾ ಸದಸ್ಯರಾಗಿಯೂ ನಾನಾಜಿ ಹೊಣೆ ನಿಭಾಯಿಸಿದ್ದರು. 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ನಾನಾಜಿ ಭಾಜನರಾಗಿದ್ದರು.

    ಅಸ್ಸಾಂನ ಸಾದಿಯಾ ಗ್ರಾಮದ ಭೂಪೇನ್ ದೊಡ್ಡ ಸಾಧಕರಾಗಿದ್ದು, ಗೀತೆರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1975ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ, 1985ರಲ್ಲಿ ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, 1977 ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ, 1992 ದಾದಾ ಸಾಹೇಬ್ ಫಾಲ್ಕೆ, 2012ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿತ್ತು.

  • ಕಳಪೆ ಕೆಲಸಗಾರ ಮಾತ್ರ ಸಲಕರಣೆಯನ್ನು ದೂಷಿಸುತ್ತಾನೆ – ಆಯೋಗವನ್ನು ಹೊಗಳಿದ ಪ್ರಣಬ್

    ಕಳಪೆ ಕೆಲಸಗಾರ ಮಾತ್ರ ಸಲಕರಣೆಯನ್ನು ದೂಷಿಸುತ್ತಾನೆ – ಆಯೋಗವನ್ನು ಹೊಗಳಿದ ಪ್ರಣಬ್

    ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಯೋಗ ಮೋದಿ ಪರವಾಗಿ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಯೋಗದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

    ಎನ್‍ಡಿ ಟಿವಿಯ ಸಂಪಾದಕೀಯ ನಿರ್ದೇಶಕಿ ಸೋನಿಯಾ ಸಿಂಗ್ ಅವರು ಬರೆದಿದ್ದ “ಡಿಫೈನಿಂಗ್ ಇಂಡಿಯಾ ಥ್ರೂ ದೇರ್ ಐಸ್” ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯು ಚುನಾವಣಾ ಆಯೋಗದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಮ್ಮ ಸಂಸ್ಥೆಗಳು ಉತ್ತಮವಾಗಿದೆ. ಈ ಸಂಸ್ಥೆಗಳು ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ನನ್ನ ಪ್ರಕಾರ ಕಳಪೆ ಕೆಲಸಗಾರ ಮಾತ್ರ ತನ್ನ ಸಲಕರಣೆಗಳನ್ನು ದೂಷಿಸುತ್ತಾನೆ. ಉತ್ತಮ ಕೆಲಸಗಾರ ಈ ಸಲಕರಣೆಗಳನ್ನು ಹೇಗೆ ಬಳಕೆ ಮಾಡುವುದು ಎಂದು ಯೋಚನೆ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರಿಂದ ಹಿಡಿದು ಇಂದಿನ ಆಯುಕ್ತರವರೆಗೆ ಆಯೋಗ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇವತ್ತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಈ ಸಂಸ್ಥೆಗಳೇ ಕಾರಣ. ಆ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ಉತ್ತಮವಾಗಿ ಕೆಲಸ ಮಾಡಿದೆ. ಈ ಕೆಲಸವನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಕೊನೆಯ ಸುತ್ತು ಮಗಿದ ಬಳಿಕ ರಾಹುಲ್ ಗಾಂಧಿ, “ಚುನಾವಣೆ ವೇಳಾಪಟ್ಟಿ, ನಮೋ ಟಿವಿ, ಮೋದಿ ಸೈನ್ಯ ಮತ್ತು ಈಗ ಕೇದಾರನಾಥದಲ್ಲಿ ಮೋದಿ ನಾಟಕ ಈ ಇಲ್ಲಾ ವಿಚಾರದಲ್ಲೂ ಚುನಾವಣಾ ಆಯೋಗ ಮೋದಿಗೆ ಬೆಂಬಲ ನೀಡಿದೆ ಎಂದು ಭಾರತೀಯರಿಗೆ ಸ್ಪಷ್ಟವಾಗಿದೆ” ಎಂದು ಟ್ಟೀಟ್ ಮಾಡಿ ಚುನಾವಣಾ ಆಯೋಗದ ಮೇಲೆ ಕಿಡಿಕಾರಿದ್ದರು.

  • ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಭಾರತ ರತ್ನ ನೀಡಿ ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕ್ಕಾಗಲ್ಲ: ಜಯಮಾಲಾ

    ಉಡುಪಿ: ನಡೆದಾಡುವ ದೇವರಿಗೆ ನೆಪ ಮಾತ್ರಕ್ಕೆ ಭಾರತ ರತ್ನ ಸಿಗಬೇಕು ಅಷ್ಟೆ ಯಾಕೆಂದರೆ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತಲೂ ಮೀರಿ ಬೆಳೆದವರು. ಹಾಗೆಯೇ ಪ್ರಣಬ್ ಮುಖರ್ಜಿಗೆ ಭಾರತ ರತ್ನ ನೀಡಿ ಅವರನ್ನು ಬಿಜೆಪಿ ಹೈಜಾಕ್ ಮಾಡಕ್ಕಾಗಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಬಿಜೆಪಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವರ್ಷವಾದರೂ ಶ್ರೀಗಳಿಗೆ ಪ್ರಶಸ್ತಿ ಬರಲಿ ಅಂತ ಆಶಿಸುತ್ತೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು, ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಶಸ್ತಿ ಕೊಟ್ಟು ಪ್ರಣಬ್ ಮುಖರ್ಜಿಯನ್ನು ಹೈಜಾಕ್ ಮಾಡಕಾಗಲ್ಲ. ಕಾಂಗ್ರೆಸ್ ನಾಯಕರನ್ನು ಯಾವ ಬಿಜೆಪಿಯವರಿಗೂ ಏನೂ ಮಾಡಕಾಗಲ್ಲ. ಪ್ರಣಬ್ ಮುಖರ್ಜಿ ಭಾರತ ರತ್ನಕ್ಕೆ ಅರ್ಹರು, ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ ಎಂದು ಹೇಳಿದರು.

    ಕರ್ನಾಟಕದ ಸಾಲುಮರದ ತಿಮ್ಮಕ್ಕ, ನೃತ್ಯ ನಿರ್ದೇಶಕ ಪ್ರಭುದೇವಗೆ ಪದ್ಮ ಪ್ರಶಸ್ತಿ ಬಂದಿದೆ. ಕಲಾವಿದರಿಗೆ ಭಾಷೆಯ ಗಡಿಯಿಲ್ಲ, ಚಿತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು ಹೀಗಾಗಿ ಅವರಿಗೆ ಪ್ರಶಸ್ತಿ ಬಂದದ್ದು ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ ಶಾಸಕರ ಹೊಡೆದಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕ ಗಣೇಶ್ ಸಿಕ್ಕೇ ಸಿಗ್ತಾರೆ. ಅಧಿಕಾರಿಗಳು ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಗಲಾಟೆ ನಡೆದ ವೇಳೆ ನಾನು ರೆಸಾರ್ಟಿನಲ್ಲಿ ಇರ್ಲಿಲ್ಲ. ಈ ಬಗ್ಗೆ ನನ್ನನ್ನು ಏನೂ ಹೆಚ್ಚು ಕೇಳ್ಬೇಡಿ. ಮಾಧ್ಯಮದವರಿಗೆ ಯಾಕೆ ಆತುರ? ಸಿಕ್ತಾರೆ ಬಿಡಿ ಎಂದು ಹೇಳಿ ಜಯಮಾಲಾ ನುಣುಚಿಕೊಂಡರು.

    ರಾಜಕಾರಣಿಗಳ ಕಾಟಾಚಾರದ ಬರಪ್ರವಾಸ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಬರ ಪ್ರವಾಸ ವಿಚಾರ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿದೆ. ಕೃಷ್ಣೆಬೈರೇಗೌಡರ ಬರ ಪ್ರವಾಸ ಸರಿಯಾಗಿಯೆ ಮಾಡಿದ್ದಾರೆ. ಬರ ಪ್ರವಾಸಕ್ಕೆ ಹೋದಾಗ ಅರಣ್ಯ ನೋಡ್ಕೋಂಡು ಬಂದಿರ್ತಾರೆ. ಬರ ಪರಿಹಾರ ಕೆಲಸ ಮಾಡೋಕೆ ವಿಪಕ್ಷ ಏನೂ ಹೇಳ್ಬೇಕಾಗಿಲ್ಲ. ಎಲ್ಲಾ ನಮ್ಮ ಸರ್ಕಾರವೇ ಮಾಡುತ್ತೆ, ನಮಗೆ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು.

    ಅಷ್ಟೇ ಅಲ್ಲದೆ ಬರ ಪ್ರವಾಸ ಮಾಡದೆ ಮಗನ ಸಿನಿಮಾವನ್ನು ನಾಲ್ಕಾರು ಬಾರಿ ನೋಡಿದ ಸಿಎಂ ನಡೆಯನ್ನೂ ಜಯಮಾಲಾ ಸಮರ್ಥಿಸಿದರು. ನಿಖಿಲ್ ಕುಮಾರಸ್ವಾಮಿ ಕಷ್ಟಪಟ್ಟು ಸಿನೆಮಾ ಮಾಡಿದ್ದಾರೆ. ಸಿನಿಮಾ ನೋಡೋಕೂ ಲೆಕ್ಕಾಚಾರ ಹಾಕ್ಬೇಡಿ. ಅಪ್ಪನಿಗೆ ಮಕ್ಕಳ ಬೆಳವಣಿಗೆ ಬೇಡ್ವ? ಬರ ಅಂತ ಹೇಳಿ ಊಟ ಮಾಡದೆ ಇರೋದಕ್ಕಾಗುತ್ತಾ ಅಂತ ಪ್ರಶ್ನೆ ಮಾಡಿ ಸಿಎಂ ಕುಮಾರಸ್ವಾಮಿಯವರ ಪರವಹಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಬೆಂಗಳೂರು: ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

    ಮೌಲಾನ ಅಬ್ದುಲ್ ಕಲಾಮ್ ಆಝಾದ್ ಅವರ `ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಕೃತಿಯನ್ನು ಜಾಫರ್ ಶರೀಫ್ ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದರು. ಆ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪ್ರಣವ್ ಮುಖರ್ಜಿಯನ್ನು ಪುಸ್ತಕದ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಪುಸ್ತಕದ ಲೋಕಾರ್ಪಣೆಗೆ ಮುನ್ನ ಜಾಫರ್ ಶರೀಫ್ ಇಹಲೋಕ ತ್ಯಜಿಸಿದರು.

    ಈ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರಣವ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಜಾಫರ್ ಶರೀಫ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಜಾಫರ್ ಶರೀಫ್ ಕುಟುಂಬದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv