Tag: ಪ್ರಣಬ್ ಮುಖರ್ಜಿ

  • ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಇಹಲೋಕ ತ್ಯಜಿಸಿ, ಬಾರದ ಲೋಕಕ್ಕೆ ತೆರಳಿದ್ದಾರೆ. ಇಂದು ದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಸೋಮವಾರ ನಿಧರಾಗಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿದೇಶಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶ್ರೇಷ್ಠ ವಿದ್ವಾಂಸ ಪ್ರಣಬ್‌ ಮುಖರ್ಜಿಯವರ ಸಲಹೆಯನ್ನು ಎಂದಿಗೂ ಮರೆಯಲ್ಲ- ಮೋದಿ

    ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆಯನ್ನು ಇಂದು ದೆಹಲಿಯಲ್ಲಿಯೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊದಲಿಗೆ ಹುಟ್ಟೂರು ಬಂಗಾಳದಲ್ಲಿಯೇ ಅಂತ್ಯಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಕುಟುಂಬ ಸದಸ್ಯರ ತೀರ್ಮಾನದಂತೆ ದೆಹಲಿಯ ಲೋಧಿ ರಸ್ತೆಯ ನಿಗಮ್ ಬೋಧ್ ಘಾಟ್‍ನಲ್ಲಿ ಪ್ರಣಬ್ ಅವರ ಅಂತ್ಯಕ್ರಿಯೆ ನಡೆಯಲಿದೆ.

    ಪ್ರಣಬ್ ಅವರ ಪಾರ್ಥೀವ ಶರೀರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿಯೇ ಇದ್ದು, ಇಂದು ಬೆಳಗ್ಗೆ 9 ಗಂಟೆಗೆ ರಾಜಾಜಿಮಾರ್ಗ್ ನಿವಾಸಕ್ಕೆ ರವಾನೆ ಮಾಡಲಾಗುತ್ತೆ. ಬೆಳಗ್ಗೆ 9.15ರಿಂದ 10.15ರವರೆಗೆ ಪಿಎಂ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15ರಿಂದ 11.15ರವರೆಗೆ ಇತರ ಪ್ರಮುಖ ಗಣ್ಯರಿಂದ ಅಂತಿಮ ನಮನ ಅಲ್ಲಿಸಲಾಗುತ್ತದೆ. ಪ್ರಣಬ್ ಮುಖರ್ಜಿ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಇರುವುದರಿಂದ ಗಣ್ಯರು ಹೆಚ್ಚಿನ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ತೀರ ವಿರಳವಾಗಿದೆ.

    ಮಧ್ಯಾಹ್ನದ ಬಳಿಕ ಲೋಧಿ ರಸ್ತೆಯಲ್ಲಿರುವ ನಿಗಮ್ ಬೋದ್ ಘಾಟ್‍ನಲ್ಲಿ ಸುಮಾರು 2.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದಿರುವ ಸಾಧ್ಯತೆ ಹೆಚ್ಚಿದೆ. ಪ್ರಣಬ್ ಮುಖರ್ಜಿ ಅವರ ಸಾವಿಗೆ ಗೌರವಾರ್ಥವಾಗಿ ಕೇಂದ್ರ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

    ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಆಗಸ್ಟ್ 31 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಶೋಕಾಚರಣೆಯ ಅವಧಿಯಲ್ಲಿ, ರಾಷ್ಟ್ರಧ್ವಜವು ಎಲ್ಲಾ ಕಟ್ಟಡಗಳ ಮೇಲೆ ಅರ್ಧದಷ್ಟು ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

  • ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ದು ಅಕ್ಟೋಬರ್ 31, 1984. ಕೋಲ್ಕತ್ತಾದಿಂದ ದೆಹಲಿಗೆ ಇಂಡಿಯನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಹೊರಟಿತು. ರಾಜೀವ್ ಗಾಂಧಿ, ಪ್ರಣಬ್ ಮುಖರ್ಜಿ, ಶೀಲಾ ದೀಕ್ಷಿತ್, ಉಮಾಶಂಕರ್ ದೀಕ್ಷಿತ್, ಬಲರಾಮ್ ಜಖರ್, ಲೋಕಸಭಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಎ.ಬಿ ಅಗ್ನಿ ಖಾನ್ ಚೌಧರಿ ವಿಮಾನದಲ್ಲಿದ್ದರು‌.

    ಅರ್ಧ ಘಂಟೆಯ ಹೊತ್ತಿಗೆ ರಾಜೀವ್ ಗಾಂಧಿ ಇಂದಿರಾ ಗಾಂಧಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆರಂಭಿಕ ಆಘಾತದ ಸ್ವಲ್ಪ ಸಮಯದ ನಂತರ, ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಯಿತು.

    ಪ್ರಣಬ್ ಮುಖರ್ಜಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸುವಾಗ, ನೆಹರೂ ಕಾಲದಿಂದಲೂ, ಇಂತಹ ಪರಿಸ್ಥಿತಿಯಲ್ಲಿ ಮಧ್ಯಂತರ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಂಪ್ರದಾಯವಿದೆ ಎಂದು ಹೇಳಿದರು. ನೆಹರೂ ಅವರ ನಿಧನದ ನಂತರ, ಸಂಪುಟದಲ್ಲಿ ಅತ್ಯಂತ ಹಿರಿಯ ಮಂತ್ರಿ ಗುಲ್ಜಾರಿ ಲಾಲ್ ನಂದಾ ಅವರನ್ನು ಹಂಗಾಮಿ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು ಎಂದು ವಿವರಿಸಿದರು.

    ಖ್ಯಾತ ಪತ್ರಕರ್ತ ರಶೀದ್ ಕಿಡ್ವಾಯ್ ಅವರು ತಮ್ಮ ಬರೆದ ’24 ಅಕ್ಬರ್ ರಸ್ತೆ ‘ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ಪ್ರಣಬ್ ಮುಖರ್ಜಿ ವಿಮಾನದ ಶೌಚಾಲಯದಲ್ಲಿ ಅಳಲು ಪ್ರಾರಂಭಿಸಿದರು. ಇಂದಿರಾ ಗಾಂಧಿಯವರ ಸಾವಿನಿಂದ ದುಃಖಿತರಾಗಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು, ಆದ್ದರಿಂದ ಅವರು ವಿಮಾನದ ಹಿಂಭಾಗದಲ್ಲಿ ಕುಳಿತರು. ಇದಕ್ಕೂ ಮುನ್ನ ತಮ್ಮ ಅಭಿಪ್ರಾಯದಲ್ಲಿ ಪ್ರಣಬ್ ತಮ್ಮ ಹಿರಿತನವನ್ನು ರಾಜೀವ್‌ಗಾಂಧಿ ಅವರಿಗೆ ಒತ್ತಿ ಹೇಳಿದರು. ಈ ಮೂಲಕ ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿದರು.

    ಆದರೆ, ಇಂದಿರಾ ಗಾಂಧಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಸಿ ಅಲೆಕ್ಸಾಂಡರ್ ತಮ್ಮ ಆತ್ಮಚರಿತ್ರೆಯಲ್ಲಿ ‘ಥ್ರೂ ದಿ ಕಾರಿಡಾರ್ಸ್ ಆಫ್ ಪವರ್: ಆನ್ ಇನ್ಸೈಡರ್ಸ್ ಸ್ಟೋರಿ’ ಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದು ರಾಜೀವ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಪ್ರಸ್ತಾಪವಾದ ಕೂಡಲೇ ಅವರನ್ನು ಬಲವಾಗಿ ಬೆಂಬಲಿಸಿದ ಮೊದಲ ವ್ಯಕ್ತಿ ಪ್ರಣಬ್ ಮುಖರ್ಜಿ.

    ರಾಜೀವ್ ಗಾಂಧಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ತಮ್ಮ ಸಂಪುಟವನ್ನು ರಚಿಸಿದಾಗ, ಪ್ರಣಬ್ ಮುಖರ್ಜಿ ಅವರಿಗೆ ಅಥವಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಯಾವುದೇ ಸ್ಥಾನವನ್ನು ನೀಡಲಾಗಲಿಲ್ಲ. ಅವರು ಪ್ರತ್ಯೇಕ ಪಕ್ಷವಾದ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ರಚಿಸಲು 1986 ರಲ್ಲಿ ಪಕ್ಷದಿಂದ ಹೊರಹೋಗಬೇಕಾಯಿತು. ಕಾಲಾಂತರದಲ್ಲಿ ಇದು ಕಾಂಗ್ರೆಸ್‌ನೊಂದಿಗೆ ವೀಲಿನವಾಯಿತು.

    ಮೊದಲ ಬಾರಿ ರಾಜೀವ್ ಗಾಂಧಿ ಅವರಿಂದ ಪ್ರಧಾನಿ ಹುದ್ದೆಯಿಂದ ವಂಚಿತಗೊಂಡಿದ್ದ ಪ್ರಣಬ್ ಮುಖರ್ಜಿ ಎರಡನೇ ಬಾರಿ ಸೋನಿಯಗಾಂಧಿ ಅವರಿಂದ ವಂಚಿತರಾದರು. ಎರಡನೇ ಬಾರಿ ಬಹುತೇಕ ಪ್ರಣಬ್ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ, ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಆಯ್ಕೆ‌ ಮಾಡಿದ್ದರು. ಇಂದಿರಾಗಾಂಧಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಡಾ.ಮನಮೋಹನ್ ಸಿಂಗ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದರು.

    ಪ್ರಣಬ್ ಮುಖರ್ಜಿ ತಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡಿದ್ದರು. ರಾಜಕೀಯ ಜೀವನದ ಬಹುದೊಡ್ಡ ಭಾಗವನ್ನು ರಾಜ್ಯ ಸಭೆಯಲ್ಲಿ ಕಳೆದಿದ್ದೇ‌ನೆ, ಹಿಂದಿ ಮಾತನಾಡುವಾಗ ಉಂಟಾಗುತ್ತಿದ್ದ ತೊಡಕುಗಳು ತಮ್ಮ ತವರು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎನ್ನುವ ಬಗ್ಗೆ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು‌. ಪ್ರಧಾನಿ ಹುದ್ದೆಗೆ ಇವರು ಹೆಸರು ಕೇಳಿ ಬಂದು ಮತ್ತೊಬ್ಬರು ಪ್ರಧಾನಿಯಾದಗ, ‘ ಪ್ರಧಾನಿಗಳು ಬಂದು ಹೋಗುತ್ತಾರೆ ನಾನು ಯಾವಗಲೀ ಪ್ರಧಾನಿ ಎಂದು ಎಂದು ಆಪ್ತರ ಮುಂದೆ ತಮ್ಮನ್ನು ತಾವು ಗೇಲಿ‌ ಮಾಡಿಕೊಂಡಿದರಂತೆ. ಸುಮಾರು 50 ವರ್ಷಗಳ ರಾಜಕೀಯ ಜೀವನದಲ್ಲಿ, ಪ್ರಧಾನ ಮಂತ್ರಿಯನ್ನು ಹೊರತುಪಡಿಸಿ ಪ್ರತಿಯೊಂದು ಪ್ರಮುಖ ಹುದ್ದೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ‌.

    ರಾಷ್ಟ್ರಪತಿಯಾಗುವುದು ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ
    2012 ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಬ್ ಮುಖರ್ಜಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿತು. ಆದಾಗ್ಯೂ, ರಾಜಕೀಯ ವ್ಯಾಖ್ಯಾನಕಾರರು ಹೇಳುವಂತೆ ಆರಂಭದಲ್ಲಿ ಸೋನಿಯಾ ಗಾಂಧಿ ರಾಷ್ಟ್ರಪತಿ ಹುದ್ದೆಗೆ ಉಪಾಧ್ಯಕ್ಷರಾಗಿದ್ದ ಹಮೀದ್ ಅನ್ಸಾರಿ ಆಯ್ಕೆ ಮಾಡುವ ಇರಾದೆಯಲ್ಲಿದ್ದರು.

    ಪ್ರಣಬ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸದಿರಲು ಎರಡು ಕಾರಣಗಳಿವೆ. ಒಂದು, ಸರ್ಕಾರದಲ್ಲಿ ಪ್ರಣಬ್ ಮುಖರ್ಜಿ ಪಾತ್ರ ಅನಿವಾರ್ಯವಾಗಿತ್ತು. ಮತ್ತೊಂದು ಕಾರಣ ಸೋನಿಯಾ ಗಾಂಧಿಗೆ ಅವರ ನಿಷ್ಠೆಯ ಬಗ್ಗೆ ಇನ್ನೂ ನಂಬಿಕೆಯಿಲ್ಲ ಇರಲಿಲ್ಲ ಎನ್ನಲಾಗಿದೆ.

    ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದಂತೆ “ರಾಷ್ಟ್ರಪತಿ ಹುದ್ದೆಗೆ ನೀವು ಹೆಚ್ಚು ಅರ್ಹ ವ್ಯಕ್ತಿ ಎಂದು ಸೋನಿಯಾ ಹೇಳಿದ್ದರು. ಆದರೆ ಸರ್ಕಾರವನ್ನು ನಡೆಸುವಲ್ಲಿ ನಿಮಗೂ ಪ್ರಮುಖ ಪಾತ್ರವಿದೆ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಯಾವುದೇ ಆಯ್ಕೆಗಳನ್ನು ನೀವು ಸೂಚಿಸಬಹುದೇ” ಎಂದು ಸೋನಿಯಗಾಂಧಿ ಕೇಳಿದರಂತೆ. ಇದನ್ನು ಕೇಳಿದ ಪ್ರಣಬ್ ಮುಖರ್ಜಿ ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿಯನ್ನಾಗಿ ತಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬಹುದು ಎಂದು ಯೋಚಿಸಿದರಂತೆ. ಆದರೆ ಮರುದಿನ ಮನಮೋಹನ್‌ ಸಿಂಗ್‌, ಕಾಂಗ್ರೆಸ್ ಕೋರ್ ಸಮಿತಿ ಸಭೆ ನಿಮ್ಮನ್ನು ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಪ್ರಣಬ್‌ ಅವರಿಗೆ ತಿಳಿಸಿದರಂತೆ.

  • ಪ್ರಣಬ್ ಮುಖರ್ಜಿಯ ತೀಕ್ಷ್ಣವಾದ ಬುದ್ಧಿಶಕ್ತಿ, ಕಠಿಣ ಶ್ರಮವನ್ನು ಸದಾ ಮೆಚ್ಚಿದ್ದೆ: ಹೆಚ್‍ಡಿಡಿ

    ಪ್ರಣಬ್ ಮುಖರ್ಜಿಯ ತೀಕ್ಷ್ಣವಾದ ಬುದ್ಧಿಶಕ್ತಿ, ಕಠಿಣ ಶ್ರಮವನ್ನು ಸದಾ ಮೆಚ್ಚಿದ್ದೆ: ಹೆಚ್‍ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಕಂಬನಿ ಮಿಡಿದಿದ್ದಾರೆ.

    ಭಾರತದ 13ನೇ ರಾಷ್ಟ್ರಪತಿ ಮತ್ತು ದೇಶಕಂಡ ಒಳ್ಳೆಯ ರಾಜಕಾರಣಿ ಪ್ರಣಬ್ ಮುಖರ್ಜಿಯವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು, ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಹೆಚ್‍ಡಿಡಿ, ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ತಿಳಿದು ನನಗೆ ಬೇಸರವಾಗಿದೆ. ನಾವು ದಶಕಗಳಿಂದ ಸುದೀರ್ಘ ಸಂಪರ್ಕವನ್ನು ಹೊಂದಿದ್ದವು. ಅವರ ತೀಕ್ಷ್ಣವಾದ ಬುದ್ಧಿಶಕ್ತಿ, ಕಠಿಣ ಶ್ರಮವನ್ನು ನಾನು ಮೆಚ್ಚಿಕೊಂಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಂಡಿದ್ದಾರೆ.

  • ಪ್ರಣಬ್ ಮುಖರ್ಜಿ ಸಾಧನೆಗೆ ದೇಶ ಸದಾ ಋಣಿಯಾಗಿದೆ: ಸಿದ್ದರಾಮಯ್ಯ

    ಪ್ರಣಬ್ ಮುಖರ್ಜಿ ಸಾಧನೆಗೆ ದೇಶ ಸದಾ ಋಣಿಯಾಗಿದೆ: ಸಿದ್ದರಾಮಯ್ಯ

    ಬೆಂಗಳೂರು: ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರು ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾಜಿ ರಾಷ್ಟ್ರಪತಿಗಳು, ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳ ಸಚಿವರಾಗಿ ಅವರು ಮಾಡಿರುವ ಸಾಧನೆಗೆ ದೇಶ ಸದಾ ಋಣಿಯಾಗಿದೆ. ಅವರ ಕುಟುಂಬ ಮತ್ತು ಬಂಧು ಮಿತ್ರರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಣಬ್ ಮುಖರ್ಜಿ ಅವರು ಕೆಲ ದಿನಗಳ ಹಿಂದಷ್ಟೇ ಕೋಮಾಗೆ ಜಾರಿದ್ದರು. ಈ ವೇಳೆ ದೇಶದ ಕೋಟ್ಯಂತರ ಜನರು ಪ್ರಣಬ್ ಅವರು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದರು. ಆದರೆ ದುರಾದೃಷ್ಟವಶಾತ್ ಜನರ ಪ್ರಾರ್ಥನೆ ಫಲಿಸದೆ ಇಂದು ಸಾವನ್ನಪ್ಪಿದ್ದರು.

  • ಪ್ರಣಬ್‍ರವರ ಸೇವೆ, ಸಾಧನೆಗಳು ಅನನ್ಯ – ಸಿಎಂ ಬಿಎಸ್‍ವೈ ಸಂತಾಪ

    ಪ್ರಣಬ್‍ರವರ ಸೇವೆ, ಸಾಧನೆಗಳು ಅನನ್ಯ – ಸಿಎಂ ಬಿಎಸ್‍ವೈ ಸಂತಾಪ

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

    ಆಗಸ್ಟ್ 10ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಪ್ರಣಬ್ ಮುಖರ್ಜಿಯವರು, ಇಂದು ಸಂಜೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನು ಅವರ ಮಗ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಹೀಗಾಗಿ ಪ್ರಣಬ್‍ರವರ ಸೇವೆ, ಸಾಧನೆಗಳು ಅನನ್ಯ ಎಂದು ಬಿಎಸ್‍ವೈ ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಎಸ್‍ವೈ ಧೀಮಂತ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಅನಾಥಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ. ಅವರೊಂದಿಗೆ ನನ್ನ ಒಡನಾಟದ ಕ್ಷಣಗಳನ್ನು ನೆನೆಯುತ್ತಾ, ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ.

    ಪ್ರಣಬ್‍ರಷ್ಟು ಸುದೀರ್ಘ ಕಾಲ ಆಡಳಿತದ ಕೇಂದ್ರ ಸ್ಥಾನದಲ್ಲಿದ್ದು, ಪ್ರಾಮಾಣಿಕವಾಗಿ, ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಮತ್ತೋರ್ವ ಸರ್ವಾದರಣೀಯ ನಾಯಕ ಇರಲಾರರು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬಿಎಸ್‍ವೈ ಇನ್ನೊಂದು ಟ್ವೀಟ್ ಮಾಡಿದ್ದಾರೆ.

    ಪ್ರಣಬ್ ರವರ ಸೇವೆ, ಸಾಧನೆಗಳು ಅನನ್ಯ. ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವರಾಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು ಎಂದು ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

  • ಶ್ರೇಷ್ಠ ವಿದ್ವಾಂಸ ಪ್ರಣಬ್‌ ಮುಖರ್ಜಿಯವರ ಸಲಹೆಯನ್ನು ಎಂದಿಗೂ ಮರೆಯಲ್ಲ- ಮೋದಿ

    ಶ್ರೇಷ್ಠ ವಿದ್ವಾಂಸ ಪ್ರಣಬ್‌ ಮುಖರ್ಜಿಯವರ ಸಲಹೆಯನ್ನು ಎಂದಿಗೂ ಮರೆಯಲ್ಲ- ಮೋದಿ

    ನವದೆಹಲಿ: 2014ರಲ್ಲಿ ದೆಹಲಿ ನನಗೆ ಹೊಸದಾಗಿತ್ತು. ಮೊದಲ ದಿನದಿಂದಲೂ ನನಗೆ ಪ್ರಣಬ್‌ ಮುಖರ್ಜಿಯವರ ಮಾರ್ಗದರ್ಶನ ಸಿಕ್ಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ರಾಷ್ಟ್ರಪತಿಗಳನ್ನು ನೆನಪಿಸಿಕೊಂಡಿದ್ದಾರೆ.

    ಪ್ರಧಾನಿ ಮೋದಿಯವರು ಮೂರು ಫೋಟೋ, 4 ಟ್ವೀಟ್‌ ಮಾಡಿ ಪ್ರಣಬ್‌ ಮುಖರ್ಜಿಯವರ ಜೊತೆಗಿನ ಸಂಬಂಧವನ್ನು ಬಣ್ಣಿಸಿದ್ದಾರೆ.

    ರಾಷ್ಟ್ರಪತಿ ಆಗಿದ್ದ ವೇಳೆ ಅವರ ಆಶೀರ್ವಾದವನ್ನು ಪಡೆಯುತ್ತಿರುವ ಫೋಟೋವನ್ನು ಹಾಕಿದ ಮೋದಿಯವರು, ಭಾರತ್ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನ ಭಾರತಕ್ಕೆ ದು:ಖ ತಂದಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಹಾಕಿದ್ದಾರೆ. ಶ್ರೇಷ್ಠ ವಿದ್ವಾಂಸ, ಉನ್ನತ ರಾಜಕಾರಣಿ ಮತ್ತು ಎಲ್ಲ ವರ್ಗದ ರಾಜಕಾರಣಿಗಳು ಅವರನ್ನು ಮೆಚ್ಚಿದ್ದರು ಎಂದು ಬರೆದುಕೊಂಡಿದ್ದಾರೆ.

    ರಾಜಕೀಯ ಜೀವನದಲ್ಲಿ ಪ್ರಮುಖವಾಗಿ ಆರ್ಥಿಕ ಮತ್ತು ವಿವಿಧ ಸಚಿವಾಲಯಗಳನ್ನು ನಿರ್ವಹಿಸಿ ಕೊಡುಗೆಗಳನ್ನು ನೀಡಿದ್ದಾರೆ. ಅವರು ಅತ್ಯುತ್ತಮ ಸಂಸದರಾಗಿದ್ದರು, ಯಾವಾಗಲೂ ಸಿದ್ಧರಾಗಿಯೇ ಬರುತ್ತಿದ್ದರು. ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದರು ಮತ್ತು ಹಾಸ್ಯಮಯರಾಗಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

    ಪ್ರಣಬ್ ಮುಖರ್ಜಿಯವರು ಭಾರತದ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರು ಪ್ರವೇಶಿಸುವಂತೆ ಮಾಡಿದರು. ತಮ್ಮ ನಿವಾಸವನ್ನು ಕಲಿಕೆ, ನಾವೀನ್ಯತೆ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿ ಮಾಡಿದರು. ಪ್ರಮುಖ ನೀತಿ ವಿಷಯಗಳಲ್ಲಿ ಅವರು ನೀಡಿದ ಬುದ್ಧಿವಂತ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮೋದಿ ಸ್ಮರಿಸಿದ್ದಾರೆ.

    2014 ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ ಮೊದಲ ದಿನದಿಂದ ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದ ಸಿಕ್ಕಿತ್ತು. ಅವರೊಂದಿಗಿನ ಸಂವಹನ ನನಗೆ ಬಹಳ ಇಷ್ಟವಾಗುತ್ತಿತ್ತು. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದು:ಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಟ್ವೀಟ್‌ ಮಾಡಿ ಪ್ರಾರ್ಥಿಸಿದ್ದಾರೆ.

  • ‘Man for All Seasons’ – ಪ್ರಣಬ್‍ರನ್ನು ಬಣ್ಣಿಸಿದ ಡಿಕೆಶಿ

    ‘Man for All Seasons’ – ಪ್ರಣಬ್‍ರನ್ನು ಬಣ್ಣಿಸಿದ ಡಿಕೆಶಿ

    ಬೆಂಗಳೂರು: ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

    ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸೇವೆ ಸಲ್ಲಿಸಿದ ಮಹಾನ್ ನಾಯಕ ಎಂದು ಡಿಕೆಶಿ ಬಣ್ಣಿಸಿದ್ದಾರೆ.

    ಯುಪಿಎ ಸರ್ಕಾರದಲ್ಲಿ ಪ್ರಮುಖ ಸಚಿವಾಲಯದ ಹುದ್ದೆ ಅಲಂಕರಿಸಿ, ನಂತರ ದೇಶದ 13ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಚಿಂತನೆ, ಕೆಲಸ ಹಾಗೂ ಸೇವೆಯಿಂದ ದೇಶದ ಸರ್ವಶ್ರೇಷ್ಠ ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದವರು. ಗಾಂಧಿ ಅವರ ಚಿಂತನೆಯನ್ನು ಅಳವಡಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಅವರನ್ನು ‘Man for All Seasons’ ಎಂದೇ ಬಣ್ಣಿಸಲಾಗುತ್ತಿತ್ತು. ದೇಶದ ಇತಿಹಾಸ, ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಮಹಾನ್ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ.

    ಅವರ ಅಗಲಿಕೆಯ ನೋವನ್ನು ಅವರ ಕುಟುಂಬ ಸದಸ್ಯರು ಸೇರಿದಂತೆ ಅವರ ಅಪಾರ ಅಭಿಮಾನಿ ಬಳಗಕ್ಕೆ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ನಮ್ಮ ದೇಶದ ಇತಿಹಾಸ, ಸಂವಿಧಾನ ಮತ್ತು ಕಾನೂನಗಳ ಬಗ್ಗೆ ಅಪಾರ ಜ್ಞಾನವಿದ್ದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ದೇಶವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ- ಕೋವಿಂದ್, ರಾಜನಾಥ್ ಸಿಂಗ್ ಸಂತಾಪ

    ದೇಶವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ- ಕೋವಿಂದ್, ರಾಜನಾಥ್ ಸಿಂಗ್ ಸಂತಾಪ

    ನವದೆಹಲಿ: ದೇಶದ ಚತುರ ರಾಜಕಾರಿಣಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಭಾರತ ರತ್ನ ಪ್ರಶಸ್ತಿ ಪಡೆದಿದ್ದ 84 ವರ್ಷದ ಪ್ರಣಬ್ ಮುಖರ್ಜಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಆಗಸ್ಟ್ 10 ರಿಂದ ಶ್ವಾಸಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಕೋಮಾಗೆ ಜಾರಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಇಲ್ಲ ಎಂದು ಕೇಳಲು ಬೇಸರವಾಗುತ್ತಿದೆ. ಅವರ ನಿಧನ ಒಂದು ಯುಗದ ಹಾದುಹೋಗುವಿಕೆ. ಸಾರ್ವಜನಿಕ ಜೀವನದಲ್ಲಿ ಮಾತೃ ದೇವತೆ ಭಾರತಕ್ಕೆ ಸ್ಫೂರ್ತಿಯ ಮನೋಭಾವದಿಂದ ಸೇವೆ ಸಲ್ಲಿಸಿದ್ದರು. ದೇಶವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ದೇಶದ ನಾಗರಿಕರಿಗೆ ಸಂತಾಪ ಸಂತಾಪ ಸೂಚಿಸುತ್ತಿದ್ದೇನೆ. ದೇಶದ ಪ್ರಥಮ ಪ್ರಜೆಯಾಗಿ ಅವರು ರಾಷ್ಟ್ರಪತಿ ಭವನವನ್ನು ಜನರ ಹತ್ತಿರ ತಂದು ಎಲ್ಲರೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಸಾರ್ವಜನಿಕರ ಭೇಟಿಗಾಗಿ ಸದಾ ದ್ವಾರಗಳನ್ನು ತೆರೆದಿಟ್ಟಿದ್ದರು ಎಂದು ತಿಳಿಸಿದ್ದಾರೆ.

    ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ನೋವಾಗಿದೆ. ಅವರನ್ನು ಸಮಾಜದ ಎಲ್ಲಾ ವರ್ಗಗಳ ಜನರು ವ್ಯಾಪಕವಾಗಿ ಗೌರವಿಸುತ್ತಿದ್ದರು. ಅವರ ನಿಧನದಿಂದ ವೈಯುಕ್ತಿಕವಾಗಿ ನಷ್ಟವಾಗಿದೆ. ಅವರು ಭಾರತ ಇತಿಹಾಸ, ರಾಜತಾಂತ್ರಿಕತೆ, ಸಾರ್ವಜನಿಕ ನೀತಿ ಮತ್ತು ರಕ್ಷಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

    ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರ ಅಭಿಜಿತ್ ಮುಖರ್ಜಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

    ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಣಬ್ ಮುಖರ್ಜಿ ತೀರ್ವ ಅಸ್ವಸ್ಥರಾಗಿದ್ದರು. ಆಗಸ್ಟ್ 10 ರಂದು ಬ್ರೇನ್ ಸರ್ಜರಿಯಾದ ನಂತರ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಕಳೆದೊಂದು ವಾರದಿಂದ ಅವರು ಕೋಮಾಗೆ ಜಾರಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿರಲಿಲ್ಲ.

    ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬರುತ್ತಿಲ್ಲ ಎಂದು ದೆಹಲಿ ಆರ್ಮಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದರು. ಅಲ್ಲದೆ ಪ್ರಣಬ್ ಮಗ ಅಭಿಷೇಕ್ ಮುಖರ್ಜಿ ಟ್ವೀಟ್ ಮಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆಯ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡು ಬರುತ್ತಿದ್ದು, ಅವರು ಆದಷ್ಟು ಬೇಗ ಗುಣಮುಖವಾಗುವಂತೆ ಹಾರೈಸಿ ಎಂದು ಬರೆದುಕೊಂಡಿದ್ದರು.


    ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು.

    ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ. ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ, ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

    ಪ್ರಣಬ್ ಮುಖರ್ಜಿ ಅವರು ಜುಲೈ 25, 2012ರಿಂದ ಜುಲೈ 12, 2017ರ ವರೆಗೆ ರಾಷ್ಟ್ರಪತಿಯಾಗಿದ್ದರು. ಪ್ರಣಬ್ ಅವರಿಗೆ 2008ರಲ್ಲಿ ಪದ್ಮ ವಿಭೂಷಣ ಹಾಗೂ 2019ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.

    ಡಿಸೆಂಬರ್ 11, 1935ರಲ್ಲಿ ಜನಸಿದ್ದ ಪ್ರಣಬ್ ಮುಖರ್ಜಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಮಕ್ಕಳಾದ ಶರ್ಮಿಷ್ಠ ಮುಖರ್ಜಿ, ಅಭಿಜಿತ್ ಮುಖರ್ಜಿ, ಇಂದ್ರಜಿತ್ ಮುಖರ್ಜಿ ಅವರನ್ನು ಅಗಲಿದ್ದಾರೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಮತ್ತಷ್ಟು ಕ್ಷೀಣ

    ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ನಿನ್ನೆಯಿಂದ ತೀರಾ ಹದಗೆಟ್ಟಿದ್ದು, ಕೋಮಾದಲ್ಲಿದ್ದಾರೆ ಎಂದು ಸೇನಾ ಆಸ್ಪತ್ರೆ ತಿಳಿಸಿದೆ.

    ಪ್ರಣಬ್ ಅವರ ಆರೋಗ್ಯದ ಸ್ಥಿತಿಗತಿ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಆರ್ಮಿ ಆಸ್ಪತ್ರೆ, ಪ್ರಣಬ್ ಮುಖರ್ಜಿ ಅವರು ಆಸ್ಪತ್ರೆಗೆ ದಾಖಲಾಗಿ 20 ದಿನಗಳಾಗಿದ್ದು, ಕೋಮಾ ಹಂತವನ್ನು ತಲುಪಿದ್ದಾರೆ. ಶ್ವಾಸಕೋಸದ ಸೋಂಕಿ(ಲಂಗ್ ಇನ್ಫೆಕ್ಷನ್)ನಿಂದಾಗಿ ಅವರು ಸೆಪ್ಟಿಕ್ ಶಾಕ್‍ಗೆ ಒಳಗಾಗಿದ್ದಾರೆ. ಹೀಗಾಗಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

    ನಿನ್ನೆಯಿಂದ ಪ್ರಣಬ್ ಆರೋಗ್ಯದಲ್ಲಿ ಮತ್ತಷ್ಟು ಕುಸಿತ ಕಂಡಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಅವರು ಕೋಮಾದಲ್ಲಿದ್ದು, ವೆಂಟಿಲೇಟರ್‍ನಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

    84 ವರ್ಷದ ಪ್ರಣಬ್ ಮುಖರ್ಜಿ, ಆಗಸ್ಟ್ 10ರಂದು ದೆಹಲಿ ಕಂಟೋನ್ಮೆಂಟ್‍ನ ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆದುಳು ಹೆಪ್ಪುಗಟ್ಟುವಿಕೆಯನ್ನು ತಡೆಯಲಾಗಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಕುರಿತು ನಿಗಾ ವಹಿಸಿದ್ದಾರೆ.

    ಪ್ರಣಬ್ ಮುಖರ್ಜಿ ಅವರು ಆಸ್ಪತ್ರೆಗೆ ದಾಖಲಾದಾಗ ಕೊರೊನಾ ಸೋಂಕು ತಗುಲಿರುವುದು ಸಹ ಪತ್ತೆಯಾಗಿತ್ತು. ನಂತರ ಶ್ವಾಸಕೋಶದಲ್ಲಿ ಸೋಂಕು ಹಾಗೂ ಕಿಡ್ನಿ ನಿಷ್ಕ್ರಿಯತೆಯಿಂದ ಬಳಲುತ್ತಿದ್ದಾರೆ.