Tag: ಪ್ರಚಾರ

  • ದೆಹಲಿ ವಿಧಾನಸಭೆ ಚುನಾವಣೆ – ಪ್ರಚಾರಕ್ಕೆ ಖರ್ಚು ಮಾಡ್ತಿರುವುದು ಎಷ್ಟು ಗೊತ್ತಾ?

    ದೆಹಲಿ ವಿಧಾನಸಭೆ ಚುನಾವಣೆ – ಪ್ರಚಾರಕ್ಕೆ ಖರ್ಚು ಮಾಡ್ತಿರುವುದು ಎಷ್ಟು ಗೊತ್ತಾ?

    ನವದೆಹಲಿ: ದೆಹಲಿ ಚುನಾವಣೆ ರಂಗೇರುತ್ತಿದೆ. ಆಡಳಿತರೂಢ ಪಕ್ಷ ಆಮ್ ಅದ್ಮಿ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಈ ಮೂರು ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ 150-170 ಕೋಟಿ ವರೆಗೂ ಹಣ ಖರ್ಚು ಮಾಡುತ್ತಿದೆ ಎಂದು ವರದಿಯೊಂದು ಹೇಳಿದೆ.

    ಈ ಬಾರಿ ದೊಡ್ಡ ಪ್ರಚಾರಗಳಿಗಿಂತ ಹೆಚ್ಚಾಗಿ ಮನೆ ಮನೆ ಪ್ರಚಾರ, ಕರಪತ್ರ ಮುದ್ರಣ, ಸೋಶಿಯಲ್ ಮೀಡಿಯಾಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ದೊಡ್ಡ ದೊಡ್ಡ ಜಾಹೀರಾತು ಸಂಸ್ಥೆಗಳಿಗೆ ಈ ಬಾರಿ ಮಣೆ ಹಾಕದೇ ಮಧ್ಯಮ ಗಾತ್ರದ ಜಾಹೀರಾತು ಏಜೆನ್ಸಿಗಳಿಗೆ ಈ ಬಾರಿ ಚುನಾವಣಾ ಪ್ರಚಾರ ಕಾರ್ಯಗಳ ಜವಾಬ್ದಾರಿ ವಹಿಸಲಾಗಿದೆ.

    ಈ ಮಧ್ಯಮ ಜಾಹೀರಾತು ಸಂಸ್ಥೆಗಳ ಮೂಲಕ ಹೊರಾಂಗಣ ಜಾಹೀರಾತು, ಫ್ಲೆಕ್ಸ್, ಹೊರ್ಡಿಂಗ್ಸ್ ಕಟೌಟ್‍ಗಳ ತಯಾರಿಕೆಗೆ ಆದ್ಯತೆ ನೀಡಿದೆ. ರಾಜಕೀಯ ಜಾಹೀರಾತಿನ ಮೇಲೆ ನಿರ್ಬಂಧಗಳ ಹೊರತಾಗಿಯೂ, ಟ್ವಿಟ್ಟರ್, ವಾಟ್ಸಪ್ ಗ್ರೂಪ್ಸ್, ಫೇಸ್‍ಬುಕ್, ಬ್ಲಾಗ್‍ಗಳು, ಟಿಕ್‍ಟಾಕ್ ಮತ್ತು ಪರೋಕ್ಷ ಜಾಹೀರಾತುಗಳನ್ನು ವ್ಯಾಪಕವಾಗಿ ದೆಹಲಿ ಚುನಾವಣೆಯಲ್ಲಿ ಬಳಸಲಾಗುತ್ತಿದ್ದು ಇದಕ್ಕೆ ಖರ್ಚು ಮಾಡಿರುವ ಹಣದ ಲೆಕ್ಕ ಹಾಕಲು ಸಾಧ್ಯವಾಗಿಲ್ಲ.

  • ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಇಂದು ಸಹ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಬ್ರಹ್ಮಾನಂದಂ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬ್ರಹ್ಮಾನಂದಂ ಕಾರನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ, ಪುರ, ಜರಬಂಡಹಳ್ಳಿ ಸೇರಿದಂತೆ ಮಂಚೇನಹಳ್ಳಿ ಪಟ್ಟಣದಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಬ್ರಹ್ಮಾನಂದಂ, ಎಲ್ಲರಿಗೂ ನಮಸ್ಕಾರ, ಇಂದು ನಾನು ಹೈದರಾಬಾದಿನಿಂದ ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಅದಕ್ಕೆ ಸುಧಾಕರ್ ಅವರೇ ಕಾರಣ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬುದ್ಧಿವಂತರು ಮತ್ತು ವಿದ್ಯಾವಂತರು. ಹೀಗಾಗಿ ಜನರಿಗಾಗಿ ಯಾವ ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದಿರುತ್ತದೆ. ಸುಧಾಕರ್ ಅವರು ನನ್ನ ಒಳ್ಳೆಯ ಸ್ನೇಹಿತ. ಅವರು ತುಂಬಾ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮ ಸಿನಿಮಾ ಸ್ಟೈಲಿನಲ್ಲಿ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿದ್ದಾರೆ. ಈ ವೇಳೆ ಹಾಸ್ಯ ನಟ ಬ್ರಹ್ಮಾನಂದಂ ನೋಡಲು ಜನರು ಮುಗಿಬಿದ್ದಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರದಲ್ಲಿ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರಕ್ಕಾಗಿ ಚಂದನವನದ ನಟ ನಟಿಯರು ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗೆ ಟಾಲಿವುಡ್‍ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಸಹ ಸಾಥ್ ನೀಡಲಿದ್ದು, ಕ್ಷೇತ್ರದಲ್ಲಿ ಸುಧಾಕರ್ ಪರ ಶನಿವಾರ ಮತಯಾಚನೆ ಮಾಡಲಿದ್ದಾರೆ.

    ಟಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರ ನಟನೆಗೆ ಅಭಿಮಾನಿಗಳು ನಕ್ಕು ನಕ್ಕು ಸುಸ್ತಾಗುತ್ತಾರೆ. ಬ್ರಹ್ಮಾನಂದಂ ಅವರ ಹಾಸ್ಯ ನಟನೆಗೆ ಮನಸೋಲದವರೇ ಇಲ್ಲ. ಇಂತಹ ಖ್ಯಾತ ನಟ ಹಾಸ್ಯ ಕಲಾವಿದ ಬ್ರಹ್ಮಾನಂದಂ ನಾಳೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಬ್ರಹ್ಮಾನಂದಂ ಅವರು ಶನಿವಾರ ಬೆಳಗ್ಗೆ 9 ಗಂಟೆಗೆ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಕ್ರಾಸ್‍ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳಿಕ 9 ಗಂಟೆ 45 ನಿಮಿಷಕ್ಕೆ ಕಮ್ಮಗುಟ್ಟಹಳ್ಳಿ ಕ್ರಾಸ್, 10 ಗಂಟೆ 30 ನಿಮಿಷಕ್ಕೆ ಮಂಡಿಕಲ್ ಗ್ರಾಮ ಸೇರಿದಂತೆ 11 ಗಂಟೆಗೆ ಚಿಕ್ಕಪೈಲಗುರ್ಕಿಯ ಸುಧಾಕರ್ ಅವರ ಮನೆ ದೇವರು ಚನ್ನಕೇಶವಸ್ವಾಮಿ ದೇವಾಲಯದ ಬಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಸ್ಯಾಂಡಲ್‍ವುಡ್ ನಟಿ-ನಟಿಯರಾದ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ, ನಟರಾದ ದಿಗಂತ್ ಹಾಗೂ ಭುವನ್ ಅವರು ಕಳೆದ ಒಂದು ವಾರದಿಂದ ಸುಧಾಕರ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮನೆ ಮೆನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ-ನಟಿಯರಿಗೆ ಬ್ರಹ್ಮಾನಂದಂ ಸಹ ಸಾಥ್ ನೀಡುತ್ತಿದ್ದಾರೆ.

    ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು. ಹೀಗಾಗಿ ಈ ಬಾರಿಯೂ ತೆಲುಗು ಭಾಷಿಕ ಮತದಾರರ ಮನಸೆಳೆಯುವುದಕ್ಕೆ ಸುಧಾಕರ್ ಅವರು ಮುಂದಾಗಿದ್ದಾರೆ.

    ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

  • ಭವಿಷ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ: ಶ್ರೀರಾಮುಲು

    ಭವಿಷ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ: ಶ್ರೀರಾಮುಲು

    ದಾವಣಗೆರೆ: ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಒಂದು ಕಡೆ ನಾನು ಈ ಸರ್ಕಾರವನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ನಾನು ಯಾವ ಸರ್ಕಾರ ಉಳಿಸುತ್ತೇನೆ ಎಂದು ಹೇಳಿದ್ದೆ ಎಂದು ಹೇಳುತ್ತಾರೆ. ಇಲ್ಲಿ ದ್ವಂದ್ವ ನೀತಿಯಿಂದ ಚುನಾವಣೆ ರಾಜಕಾರಣ ಪ್ರಾರಂಭವಾಗಿದೆ. ಈ ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರುವುದಿಲ್ಲ. ಈಗ ಬಿಜೆಪಿ ದೇಶದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ನಮ್ಮ ಸರ್ಕಾರ 105 ಸೀಟ್ ಗೆದ್ದರೂ ಅಧಿಕಾರಕ್ಕೆ ಬರಲು ಆಗಲಿಲ್ಲ. ಶಾಸಕರು ರಾಜೀನಾಮೆ ಕೊಟ್ಟ ಕಾರಣ ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಶಾಸಕರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿಯವರು ಚುನಾವಣೆಯಲ್ಲಿ ಕೋಟ್ಯಂತರ ರೂ. ಹಣ ಚೆಲ್ಲುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮುಲು ಅವರು, ಇದೆಲ್ಲ ಬಡಾಯಿಗೋಸ್ಕರ ಮಾತನಾಡುವಂತ ಮಾತುಗಳಿದು. ಬುಧವಾರ ಹುಣಸೂರಿನಲ್ಲಿ ಕಾಂಗ್ರೆಸ್‍ನ ಕೋಟ್ಯಂತರ ರೂ. ಸೀಜ್ ಆಯಿತು. ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿ ಅದರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹತ್ತು ವರ್ಷದ ಭ್ರಷ್ಟಾಚಾರದ ಹಣ ಇಡೀ 15 ಕ್ಷೇತ್ರದಲ್ಲಿ ಓಡಾಡುತ್ತಿದೆ ಎಂದು ತಿರುಗೇಟು ನೀಡಿದರು.

    ನಾನು ಬುಧವಾರ ಮಾಜಿ ಪ್ರಧಾನಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ತಮ್ಮ ಮಗನ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಉಪಚುನಾವಣೆ ನಂತರ ಮಧ್ಯಂತರ ಚುನಾವಣಾ ಬರುತ್ತೆ ಎನ್ನುವುದು ಸರಿಯಲ್ಲ. ಈಗ ವಾತಾವರಣ ಬೇರೆ ಇದೆ. ಅವರು ಹಿರಿಯರು, ನಾನು ಅವರಿಗೆ ಟೀಕೆ ಮಾಡುವುದಿಲ್ಲ. ನನ್ನ ಪ್ರಕಾರ ಯಾವುದೇ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.

    ನಾನು ಸಿದ್ದರಾಮಯ್ಯ ಅವರನ್ನು ಅತ್ಯಂತ ಗೌರವದಿಂದ ವಿನಂತಿ ಮಾಡಿಕೊಳ್ಳುತ್ತೇನೆ. ಏಕೆಂದರೆ ಇಂದು ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕರು. ಶ್ರೀರಾಮುಲು ಅವರು ಖುರ್ಚಿಗೆ ಅಂಟಿಕೊಂಡು ಇರುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಖುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸುವುದು ನನ್ನ ಆದ್ಯತೆ. ನಾನು ಇದನ್ನು ಮಾಡಿಯೇ ಮಾಡುವೆ. ಅನಗತ್ಯವಾಗಿ ನನ್ನ ವಿರುದ್ಧ ವಾಗ್ದಾಳಿ ಸರಿಯಲ್ಲ ಎಂದು ತಿಳಿಸಿದರು.

    ಇದೇ ವೇಳೆ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಅವರು, ನಾನು ಡಿಕೆಶಿ ಅಂತಹವರನ್ನು ನೋಡಿದ್ದೇನೆ. ದೊಡ್ಡ ಶ್ರೀಮಂತರೆ ಯಾವ ರೀತಿ ಆಗಿದ್ದಾರೆ ಎಂಬ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಡಿಕೆಶಿ ಅವರು ಬುಗುರಿ ರೀತಿ ಅಲ್ಲ ಬೇರೆ ರೀತಿ ಆಡಿಸಿದರೂ ಜನರು ಅವರನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಅವರು ಮಾಡಿದ ಕೆಲಸಗಳನ್ನು ಜನರು ಗಮನಿಸಿದ್ದಾರೆ. ಈಗಾಗಲೇ ಅವರು ಪಶ್ಚಾತಾಪ ಪಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.

  • ಕೆಆರ್ ಪೇಟೆಯಲ್ಲಿಂದು ಒಂಟೆತ್ತುಗಳ ಪ್ರತ್ಯೇಕ ಪ್ರಚಾರ – ಕಾಂಗ್ರೆಸ್ ಪರ ಡಿಕೆ, ಜೆಡಿಎಸ್ ಪರ ಹೆಚ್‍ಡಿಕೆ ಕ್ಯಾಂಪೇನ್

    ಕೆಆರ್ ಪೇಟೆಯಲ್ಲಿಂದು ಒಂಟೆತ್ತುಗಳ ಪ್ರತ್ಯೇಕ ಪ್ರಚಾರ – ಕಾಂಗ್ರೆಸ್ ಪರ ಡಿಕೆ, ಜೆಡಿಎಸ್ ಪರ ಹೆಚ್‍ಡಿಕೆ ಕ್ಯಾಂಪೇನ್

    ಮಂಡ್ಯ: ಕೆಆರ್ ಪೇಟೆ ಉಪಚುನಾವಣೆಯನ್ನು ಬಿಜೆಪಿ ಸ್ವಾಭಿಮಾನ ಮತ್ತು ಅಭಿವೃದ್ಧಿಯ ಹೆಸರು ಹೇಳಿಕೊಂಡು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಬ್ಬರದಿಂದ ಪ್ರಚಾರ ಮಾಡುತ್ತಿದೆ. ಈ ಪ್ರಚಾರದಿಂದ ಆಗುತ್ತಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಇಬ್ಬರೂ ಒಕ್ಕಲಿಗ ಸಮುದಾಯ ಐಕಾನ್‍ ನನ್ನು ತಮ್ಮ ತಮ್ಮ ಪಕ್ಷಗಳ ಪರವಾಗಿ ಕೆಆರ್ ಪೇಟೆ ಅಖಾಡಕ್ಕೆ ಧುಮುಕುತ್ತಿದ್ದಾರೆ.

    ಕೆಆರ್ ಪೇಟೆಯ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಲು ಸ್ವಾಭಿಮಾನ ಮತ್ತು ಅಭಿವೃದ್ಧಿಯ ಎರಡು ಮಂತ್ರಗಳನ್ನು ಜಪ ಮಾಡುತ್ತಾ ಮತದಾರರನ್ನು ಒಲಿಸಿಕೊಳ್ಳಲು ಅಬ್ಬರದ ಪ್ರಚಾರ ಮಾಡುತ್ತಿವೆ. ಈಗಾಗಲೇ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಲವು ಘಟಾನುಘಟಿಗಳು ಕೆಆರ್ ಪೇಟೆ ಅಖಾಡಕ್ಕೆ ಇಳಿದು ಅಬ್ಬರ ಪ್ರಚಾರವನ್ನು ನಡೆಸುತ್ತಿವೆ.

    ಈ ಮಧ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಮುಖ ನಾಯಕರು ಕೆಆರ್ ಪೇಟೆ ಅಖಾಡಕ್ಕೆ ಧುಮುಕದೇ ಇರುವುದು ಸದ್ಯ ಎರಡು ಪಕ್ಷಗಳಿಗೂ ಪ್ರಚಾರದಲ್ಲಿ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಡ್ಯಾಮೆಜ್ ಕಂಟ್ರೋಲ್ ಮಾಡಲು ಇಂದು ಜೆಡಿಎಸ್‍ನ ಒಕ್ಕಲಿಗ ಐಕಾನ್ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಇಂದು ಕೆಆರ್ ಪೇಟೆ ಅಖಾಡಕ್ಕೆ ಧುಮುಕಲಿದ್ದಾರೆ. ಈ ಹಿಂದೆ ಜೋಡೆತ್ತುಗಳು ಎಂದು ಕೈ ಎತ್ತಿದ್ದ ಹೆಚ್‍ಡಿಕೆ ಹಾಗೂ ಡಿಕೆಶಿ ಈಗ ಒಂಟೆತ್ತುಗಳಾಗಿ ತಮ್ಮ ಅಭ್ಯರ್ಥಿಗಳ ಪರ ಒಂದೇ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

    ಸದ್ಯ ಬಿಜೆಪಿ ಅಬ್ಬರ ಪ್ರಚಾರದ ನಡುವೆ ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಂಚ ಮಟ್ಟಿಗೆ ಸೊರಗಿರುವುದಂತೂ ಸುಳ್ಳಲ್ಲ. ಜೆಡಿಎಸ್ ಪಕ್ಷದಿಂದ ಇಲ್ಲಿಯವರೆಗೆ ಮಾಜಿ ಸಚಿವ ರೇವಣ್ಣ, ಮಂಡ್ಯ ಸ್ಥಳೀಯ ನಾಯಕರು ಹಾಗೂ ನಿಖಿಲ್ ಪ್ರಚಾರ ಮಾಡಿದ್ದು ಬಿಟ್ಟರೆ ಪ್ರಮುಖ ಐಕಾನ್‍ಗಳು ಎಂಟ್ರಿ ಕೊಟ್ಟಿರಲಿಲ್ಲ. ಇದರಿಂದ ಚುನಾವಣಾ ಪ್ರಚಾರದಲ್ಲಿ ಹಿನ್ನಡೆಯಾಗುತ್ತಿರುವುದನ್ನು ಎಚ್ಚೆತ್ತ ನಾಯಕರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೆಆರ್ ಪೇಟೆ ಅಖಾಡಕ್ಕೆ ಇಂದು ಇಳಿಸಲಿದ್ದಾರೆ. ಇಂದು ಕೆಆರ್ ಪೇಟೆಯ ಕಿಕ್ಕೇರಿ ಹೋಬಳಿ ಸೇರಿದಂತೆ ಹಲವು ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪ್ರಚಾರ ನಡೆಸಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ದಿನ ಪ್ರಚಾರ ಮಾಡಿದ್ದು ಬಿಟ್ಟರೆ ಬೇರೆ ಯಾರು ಕೂಡ ಅಷ್ಟರ ಮಟ್ಟಿಗೆ ಪ್ರಚಾರ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಲೀಡರ್ ಡಿ.ಕೆ ಶಿವಕುಮಾರ್ ಅವರನ್ನು ಇಂದು ಅಖಾಡಕ್ಕೆ ಧುಮುಕಿಸಿ ಮತಬೇಟೆ ಆಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇಂದು ಡಿಕೆ ಕಾಂಗ್ರೆಸ್ ಅಭ್ಯರ್ಥಿ ಪರ ಶಿಳನೆರೆ ಹೋಬಳಿ ಸೇರಿದಂತೆ ಇತರೆ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.

  • ಜೆಡಿಎಸ್‍ನವರು ಕೋತಿಯಂತೆ, ಒಂದ್ಕಡೆ ಇರಲ್ಲ-ಇಂಥಾವ್ರನ್ನ ಕಟ್ಕೊಂಡು ಎಲ್ಲಿ ಸಾಯೋಣ: ಮಾಜಿ ಡಿಸಿಎಂ

    ಜೆಡಿಎಸ್‍ನವರು ಕೋತಿಯಂತೆ, ಒಂದ್ಕಡೆ ಇರಲ್ಲ-ಇಂಥಾವ್ರನ್ನ ಕಟ್ಕೊಂಡು ಎಲ್ಲಿ ಸಾಯೋಣ: ಮಾಜಿ ಡಿಸಿಎಂ

    ಮೈಸೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರು ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ್ದಾರೆ.

    ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಪರಮೇಶ್ವರ್, ಜೆಡಿಎಸ್‍ನವರು ಕೋತಿಯಂತೆ. ಒಂದು ಕಡೆ ಇರೋದೇ ಇಲ್ಲ. ಮರದಿಂದ ಮರಕ್ಕೆ ಕೋತಿಗಳ ರೀತಿ ಜಿಗಿಯುತ್ತಲೇ ಇರುತ್ತಾರೆ. ಇದೆಲ್ಲ ನಮ್ಮೂರಿನ ಕಡೆ ಮಾಮೂಲಿ. ಅದೇ ರೀತಿ ಜೆಡಿಎಸ್‍ನವರ ಕತೆಯಾಗಿದೆ. ಬೆಳಗ್ಗೆ ಒಂದು, ಸಂಜೆ ಒಂದು ಮಾತು. ಇಂತಹ ಜೆಡಿಎಸ್‍ನವರನ್ನು ಕಟ್ಟಿಕೊಂಡು ನಾವೆಲ್ಲೋಗಿ ಸಾಯೋಣ ಎಂದು ವ್ಯಂಗ್ಯವಾಡಿದ್ದಾರೆ.

    ಅಲ್ಲದೆ ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಜೆಡಿಎಸ್‍ನವರು ಇರಲ್ಲ. ಅವರ ಜೊತೆಗಾದರೂ ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೂ ಕೇಳಲ್ಲ. ಇಂತವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಬಿಜೆಪಿ ಜೊತೆ ಜೆಡಿಎಸ್‍ನವರನ್ನು ತಿರಸ್ಕರಿಸಿ ಎಂದು ಪರಮೇಶ್ವರ್ ಕರೆ ನೀಡಿದರು.

    ಇದೇ ವೇಳೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಇದನ್ನು ನಾನು ನಿಮಗೆ ಬರೆದು ಕೊಡುತ್ತೇನೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರ: ಉಪಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರ ನಡೆಯಲಿದೆ. ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಒಂದೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕ್ಷೇತ್ರದ ಮತದಾರರ ಮನಗೆಲುವುದಕ್ಕೆ ಇಬ್ಬರು ನಾಯಕರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ ಸುಧಾಕರ್ ಬಿಜೆಪಿ ಪಕ್ಷದಿಂದ ಅಖಾಡಕ್ಕಿಳಿದಿದ್ದು, ಜೆಡಿಎಸ್‍ನಿಂದ ರಾಧಾಕೃಷ್ಣ ಹಾಗೂ ಕಾಂಗ್ರೆಸ್‍ನಿಂದ ಎಂ ಅಂಜಿನಪ್ಪ ಅಖಾಡದಲ್ಲಿದ್ದಾರೆ. ಈಗಾಗಲೇ ಶತಾಯಗತಾಯ ಗೆಲ್ಲಲೆಬೇಕು ಎಂದು ಪಣ ತೊಟ್ಟಿರುವ ಸುಧಾಕರ್, ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ ಸಹ ಎರಡು ಬಾರಿ ಚಿಕ್ಕಬಳ್ಳಾಪುರಕ್ಕೆ ಬಂದು ಸುಧಾಕರ್ ಪರ ಪ್ರಚಾರ ನಡೆಸಿ, ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಸೇರಿದಂತೆ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದರು. ಈಗ ಮೂರನೇ ಬಾರಿ ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪ ಮಂಚೇನಹಳ್ಳಿ ಪಟ್ಟಣದಲ್ಲಿ 3 ಗಂಟೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ.

    ಇತ್ತ ಜೆಡಿಎಸ್‍ನಿಂದ ಬೆಳ್ಳಂಬೆಳಗ್ಗೆಯೇ ಚುನಾವಣಾ ಅಖಾಡಕ್ಕೆ ಧುಮಕಲಿರುವ ಎಚ್.ಡಿ ಕುಮಾರಸ್ವಾಮಿ, ಮೊದಲಿಗೆ ನಂದಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬಿಜೆಪಿ ಅಭ್ಯರ್ಥಿ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಸರ್ಕಲ್‍ನಲ್ಲಿ ಬಹಿರಂಗ ಭಾಷಣ ಮಾಡಿ, ತದನಂತರ ಪ್ರತಿಷ್ಠೆಯ ವಿಷಯವಾಗಿರುವ ಮಂಚೇನಹಳ್ಳಿಗೆ ತೆರಳಲಿದ್ದು, ಅಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಎಚ್.ಡಿ ಕುಮಾರಸ್ವಾಮಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇಡೀ ದಿನ ಕ್ಷೇತ್ರದ್ಯಾಂತ ಎಚ್‍ಡಿಕೆ ಪ್ರಚಾರ ನಡೆಸಲಿದ್ದಾರೆ.

    ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಮುಂದೆಯೇ ಮಂಚೇನಹಳ್ಳಿಯಲ್ಲಿ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ಸ್ವಾಗತ ಕೋರಿ ಸನ್ಮಾನಿಸುವುದಕ್ಕೆ ಸುಧಾಕರ್ ಸಿದ್ಧರಾಗಿದ್ದಾರೆ.

  • ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕೆ. ಕುಟುಂಬ ರಾಜಕಾರಣದಿಂದಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಸೋತರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರ ಪುಟ್ಟಸ್ವಾಮಿ ಚುನಾವಣಾ ಪ್ರಚಾರ ಸಭೆಗೆ ಇಳಿದಿದ್ದರು. ಈ ವೇಳೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ರೇವಣ್ಣ ಅಘೋಷಿತ ಸಿಎಂ, ಸಂಬಂಧಿಗಳಾದ ತಮ್ಮಣ್ಣ ಹಾಗೂ ಸಾರಾ ಮಹೇಶ್ ಸಚಿವರಾದರು. ಹೀಗಾಗಿ ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವಗಳಿಗೆ ಅವಮಾನ ಮಾಡಿದೆ ಎಂದರು.

    ಅಲ್ಲದೆ ಪಕ್ಷವನ್ನು ನಂಬಿದ ಜನರೇ ಜೆಡಿಎಸ್ ಬಗ್ಗೆ ಅಸಹ್ಯಪಡುತ್ತಿದ್ದು, ನಿಖಿಲ್ ಹಾಗೂ ಎಚ್.ಡಿ ದೇವೇಗೌಡ ಅವರನ್ನು ಸೋಲಿಸಿದರು. ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎರಡು ಭಾಗಗಳಾಗಿವೆ. ಉಪಚುನಾವಣಾ ಪ್ರಚಾರಕ್ಕೆ ಮೂಲ ಕಾಂಗ್ರೆಸ್ಸಿಗರು ಬರುತ್ತಿಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗಳಿಸಲಿದ್ದು, ಇದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದರೂ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

  • ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಸತೀಶ್ ಜಾರಕಿಹೊಳಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದ ಮಹಿಳೆಯರು

    ಬೆಳಗಾವಿ: ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರಕ್ಕೆ ತೆರೆಳಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅಂಕಲಗಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು. ಅದರಲ್ಲೂ ಸತೀಶ್ ಅವರಿಗೆ ಮಹಿಳೆಯರು ಆರತಿ ಬೆಳಗಿ, ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ತಮ್ಮ ಲಖನ್ ಪರ ಉಪಚುನಾವಣಾ ಪ್ರಚಾರಕ್ಕೆ ಸತೀಶ್ ಜಾರಕಿಹೊಳಿ ತೆರೆಳಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಸತೀಶ್ ಜಾರಕಿಹೊಳಿಗೆ ಹೂಮಳೆಗೈದು ಜನರು ಸ್ವಾಗತ ಕೋರಿದರು. ಬಳಿಕ ಗ್ರಾಮದ ಮಹಿಳೆಯರು ಸತೀಶ್ ಜಾರಕಿಹೊಳಿ ಅವರಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಖತ್ ವೈರಲ್ ಆಗಿದೆ.

    ಡಿಸೆಂಬರ್ 5ರಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಕೇವಲ 10 ದಿನ ಬಾಕಿ ಇದೆ. ಅದರಲ್ಲೂ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ನಡುವೆಯೇ ಸ್ಪರ್ಧೆ ನಡೆಯುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಕಾಂಗ್ರೆಸ್ಸಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್‍ನಿಂದ ಅಶೋಕ್ ಪೂಜಾರಿ ಟಕ್ಕರ್ ಕೊಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

  • ಅಖಾಡದ ಕಲಿಗಳಿಗೆ ಸಿಗ್ತಿಲ್ಲ ಕಾರ್ಯಕರ್ತರು- ಕೂಲಿ ಕಾರ್ಮಿಕರು, ಮನೆ ಕೆಲಸದವ್ರಿಗೆ ಫುಲ್ ಡಿಮ್ಯಾಂಡ್

    ಅಖಾಡದ ಕಲಿಗಳಿಗೆ ಸಿಗ್ತಿಲ್ಲ ಕಾರ್ಯಕರ್ತರು- ಕೂಲಿ ಕಾರ್ಮಿಕರು, ಮನೆ ಕೆಲಸದವ್ರಿಗೆ ಫುಲ್ ಡಿಮ್ಯಾಂಡ್

    ಬೆಂಗಳೂರು: ಉಪ ಚುನಾವಣೆಯ ರಣಕಣ ರಂಗೇರುತ್ತಿದ್ದು ಕಾರ್ಯಕರ್ತರ ಆಟ ಈಗ ಅರಿವಾಗುತ್ತಿದೆ. ಹಾಗಾಗಿ ಕೂಲಿ ಕಾರ್ಮಿಕರಿಗೆ, ಮನೆ ಕೆಲಸ ಮಾಡೋರಿಗೆ ಸಖತ್ ಬೇಡಿಕೆ. ತಲೆಗೆ ಇಷ್ಟು ಅಂತ ಹಣ ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿರುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಅನರ್ಹ ಶಾಸಕರು ಕಮಲ ಬಾವುಟ ಹಿಡಿದರೂ ತಳಮಟ್ಟದಲ್ಲಿ ಇನ್ನೂ ಕಾರ್ಯಕರ್ತರು ರಾಜೀಯಾಗಿಲ್ಲ. ಹಿಂದೆ ಅವರಿಂದಲೇ ತೊಂದರೆ ಅನುಭವಿಸಿ ಈಗ ಮತ್ತೆ ಅವರನ್ನೇ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ. ಮೂಲ ಪಕ್ಷದಲ್ಲಿದ್ದವರು ಈಗ ಪ್ರಚಾರ ಮಾಡಲು ಆಸಕ್ತಿ ತೋರುತ್ತಿಲ್ಲ. ಹಾಗಾಗಿ ಈಗ ಅಖಾಡದಲ್ಲಿ ಕಾರ್ಯಕತರೇ ಸಿಗುತ್ತಿಲ್ಲವಂತೆ.

    ಎಲೆಕ್ಷನ್ ಬಂತಂದ್ರೆ ಬರೀ ರಾಜಕಾರಣಿಗಳಿಗೆ ಮಾತ್ರವಲ್ಲ ಪಕ್ಷದ ಕಾರ್ಯಕರ್ತರಿಗೂ ಹಬ್ಬವೋ ಹಬ್ಬ. ಆದರೆ ಈ ಬಾರಿಯ ಬೈಎಲೆಕ್ಷನ್ ಬರೀ ರಾಜಕಾರಣಿಗಳಿಗೆ ಮಾತ್ರ ಹಬ್ಬವಾಗಿದೆ. ಕಾರ್ಯಕರ್ತರು ಸೈಲೆಂಟಾಗಿದ್ದಾರೆ. ಅಖಾಡದಲ್ಲಿ ಅಸಲಿ ಕಾರ್ಯಕರ್ತರೇ ಮಾಯವಾಗಿದ್ದಾರೆ. ಹಾಗಾಗಿ ಈಗ ಕೂಲಿ ಕಾರ್ಮಿಕರಿಗೆ, ಮನೆ ಕೆಲಸದವರಿಗೆ, ವಯಸ್ಸಾದ ಅಜ್ಜ ಅಜ್ಜಿಯರಿಗೆ ಡಿಮ್ಯಾಂಡ್ ಬಂದಿದೆ. ಅಂದರೆ ತಲೆಗಿಷ್ಟು ಅಂತ ಹಣ ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.

    ಉಪಸಮರ ಆರಂಭ ಆದಾಗಿಂದನೂ ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೆ ಕಾರ್ಯಕರ್ತರ ಕೊರತೆ ಎದ್ದು ಕಾಣ್ತಾ ಇದೆ. ಅಖಾಡದ ಕಲಿಗಳಿಗೆ ಅಸಲಿ ಕಾರ್ಯಕರ್ತರ ಬಿಸಿ ಜೋರಾಗಿಯೇ ತಟ್ಟಿದ್ದು ಅಸಲಿ ಕಾರ್ಯಕರ್ತರು ಯಾರು ಕೂಡ ಪ್ರಚಾರಕ್ಕೆ ಬರ್ತಿಲ್ಲ. ಕೂಲಿ ಕಾರ್ಮಿಕರನ್ನ, ಮನೆಕೆಲಸ ಮಾಡೋರನ್ನ ತಲೆಗೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಿ ಪ್ರಚಾರಕ್ಕೆ ಕರೆದುಕೊಂಡು ಹೋಗ್ತಾ ಇರೋದು ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಪ್ರತಿನಿಧಿ : ಒಂದು ತಲೆಗೆ ಎಷ್ಟು ಸರ್..?
    ಪ್ರಚಾರಕ್ಕೆ ಬಂದವರು : 500 ರೂಪಾಯಿ
    ಪ್ರತಿನಿಧಿ : ಎಷ್ಟು 500 ರೂಪಾಯಿ ಸರ್, 50 ಜನ ಬಂದಿದ್ದೀರಾ…?
    ಉಸ್ತುವಾರಿ : ನನ್ನ ಹತ್ತಿರ ಒಂದು ಲಿಸ್ಟ್ ಇದೆ… ಯಾರು ಯಾರು?
    ಬಂದವರು : ಅವರಲ್ಲಿ ಬರ್ತಾರೆ..
    ಉಸ್ತುವಾರಿ : ಯಾರ್ಯಾರು ಹೆಸರು ಕೊಟ್ಟಿದ್ದೀರಾ..? ಇಲ್ಲಿ ಅವರು ಕರೆಯುತ್ತಿದ್ದಾರೆ
    ಬಂದವರು : ಅವರೇ ಬರ್ತಾ ಇದ್ದಾರೆ…
    ಉಸ್ತುವಾರಿ : ಯಾರು..?
    ಬಂದವರು : ಲಕ್ಷ್ಮೀ ಅನ್ನೋರು…
    ಉಸ್ತುವಾರಿ : ಅವರ ಹೆಸರೇ ಇಲ್ಲ ಇಲ್ಲಿ..
    ಬಂದವರು : ಇದೆ.. ಬರ್ತಾ ಇದ್ದಾರೆ..

    ಉಸ್ತುವಾರಿ : ಅವರೆಲ್ಲಾ ಇರಲಿ…
    ಬಂದವರು : ಎಲ್ಲಾ ಲಿಸ್ಟ್ ಇದೆ
    ಉಸ್ತುವಾರಿ : ಅಮ್ಮೋ ಲೇಡಿಸ್ ಎಲ್ಲಾ ಅಲ್ಲಿ ಇದ್ದಾರೆ ಅಲ್ಲಿ ಹೋಗಿ…
    ಬಂದವರು : ಬನ್ರೀ.. ಬನ್ರೀ…
    ಉಸ್ತುವಾರಿ : ಎಲ್ಲಾ ಸೇರಿಸಿ..
    ಬಂದವರು : ಎಷ್ಟು ಕೊಡ್ತಾರೆ..?
    ಬಂದವರು : ದುಡ್ಡು ಎಷ್ಟು ಕೊಡ್ತಾರೆ..?
    ಬಂದವರು : ಕೊಡ್ತಾರಂತೆ…

    ಹೀಗೆ ದುಡ್ಡು ಕೊಟ್ಟು ಮನೆಕೆಲಸಗಾರರನ್ನ, ಕೂಲಿ ಕಾರ್ಮಿಕರನ್ನ ದುಡ್ಡು ಕೊಟ್ಟು ಕ್ಯಾಂಪೇನ್‍ಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಹಣ ಕೊಟ್ಟು ಮತದಾರರನ್ನ ಸೆಳೆಯುವುದಕ್ಕೆ ಮುಂದಾಗಿದ್ದಾರೆ.