Tag: ಪ್ರಗ್ಯಾನ್ ಓಜಾ

  • 2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    – ಐಪಿಎಲ್ 2ನೇ ಆವೃತ್ತಿಯ ಫೈನಲ್ ಕಥೆ ಬಿಚ್ಚಿಟ್ಟ ಓಜಾ

    ನವದೆಹಲಿ: 2009ರ ಐಪಿಎಲ್ ಸಮಯದಲ್ಲಿ ಅಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಐಪಿಎಲ್‍ನ ಮೊದಲ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯಲ್ಲಿ ಇದ್ದ ಡೆಕ್ಕನ್ ಚಾರ್ಜರ್ಸ್ ತಂಡ, ಐಪಿಎಲ್ ಎರಡನೇ ಅವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದು ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಬೆಂಗಳೂರು ತಂಡವನ್ನು ಬಗ್ಗುಬಡಿದ ಡೆಕ್ಕನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಅಂದು ತಂಡ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಆಡಿತ್ತು ಎಂದು ಅಂದು ತಂಡದಲ್ಲಿದ್ದ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಈ ವಿಚಾರವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಜಾ, ನಮ್ಮ ತಂಡ ಐಪಿಎಲ್ ಒಂದನೇ ಅವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಕಾರಣದಿಂದ ನಮ್ಮ ತಂಡಕ್ಕೆ ಸ್ಪಾನ್ಸರ್ ಮಾಡಲು ಯಾರು ಮುಂದೆ ಬಂದಿರಲಿಲ್ಲ. ನಮಗೆ ಆಡಲು ತಂಡದಲ್ಲಿ ಬಟ್ಟೆ ಮತ್ತು ಕಿಟ್‍ಗಳ ಬಹಳ ತೊಂದರೆಯಾಗಿತ್ತು. ಆದರೂ ನಾವು ಪಂದ್ಯಗಳನ್ನು ಆಡಲು ಸೌಥ್ ಆಫ್ರಿಕಾಗೆ ಹೋಗಿದ್ದವು ಎಂದು ಹೇಳಿದ್ದಾರೆ.

    ಅಂದು ಸೌಥ್ ಆಫ್ರಿಕಾ ತಲುಪಿದ ನಮಗೆ ತಂಡದ ನಾಯಕ ಆಡಮ್ ಗಿಲ್‍ಕ್ರಿಸ್ಟ್ ಒಂದು ಮಾತನ್ನು ಹೇಳಿದ್ದರು. ಆದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಂದು ನಮ್ಮ ಬಳಿ ಬಂದ ಗಿಲ್ಲಿ, ಒಂದು ಬಾರಿ ನಾವು ಚಾಂಪಿಯನ್ ಆದರೆ ಈಗ ತಂಡದಲ್ಲಿ ಇರುವ ತೊಂದರೆಗಳು ನಮಗೆ ಕಾಣಿಸುವುದಿಲ್ಲ. ಒಂದು ಬಾರಿ ಕಪ್ ಗೆದ್ದರೆ ಈ ಎಲ್ಲವೂ ಬದಲಾಗುತ್ತವೆ ಎಂದು ನಮ್ಮನ್ನು ಹುರಿದುಂಬಿಸಿದ್ದರು ಎಂದು ಓಜಾ ತಿಳಿಸಿದ್ದಾರೆ.

    2009ರಲ್ಲಿ ಸೌಥ್ ಅಫ್ರಿಕಾದಲ್ಲಿ ನಡೆದ ಐಪಿಎಲ್‍ನ ಎರಡನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಉತ್ತಮ ಲಯದಲ್ಲಿ ಇತ್ತು. ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಗಿಲ್‍ಕ್ರಿಸ್ಟ್ ನೇತೃತ್ವದ ತಂಡ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಅಂದು ತಂಡದಲ್ಲಿದ್ದ ಹರ್ಷಲ್ ಗಿಬ್ಸ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಪ್ರಗ್ಯಾನ್ ಓಜಾ ಉತ್ತಮ ಲಯದಲ್ಲಿ ಇದ್ದರು.

    ಸರಣಿ ಉದ್ದಕ್ಕೂ ಅತ್ಯುತ್ತಮವಾಗಿ ಆಡಿಕೊಂಡು ಬಂದಿದ್ದ ಡೆಕ್ಕನ್‍ಗೆ ಸೆಮಿಪೈನಲ್‍ನಲ್ಲಿ ಡೆಲ್ಲಿ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು 6 ವಿಕೆಟ್ ಅಂತರದಲ್ಲಿ ಗೆದ್ದ ಗಿಲ್ಲಿಪಡೆಗೆ ಫೈನಲ್‍ನಲ್ಲಿ ಬೆಂಗಳೂರು ತಂಡ ಎದುರಾಳಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗಿಬ್ಸ್ ಅವರ ಅರ್ಧಶತಕದ ಸಲುವಾಗಿ 143 ರನ್ ಗಳನ್ನು ಸೇರಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಬೆಂಗಳೂರು ತಂಡ ಓಜಾ ಅವರ ಮಾರಕ ದಾಳಿಗೆ ನಲುಗಿ 137 ರನ್‍ಗೆ ಆಟ ಮುಗಿಸಿತ್ತು. ಈ ಮೂಲಕ 6 ರನ್‍ಗಳ ಅಂತರದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ ಓಜಾ ಮೂರು ವಿಕೆಟ್ ಪಡೆದಿದ್ದರು.

  • ಕ್ರಿಕೆಟ್‍ನಿಂದ ನಿವೃತ್ತಿ ಪಡೆದ ಓಜಾ -ಸಚಿನ್ ನಿವೃತ್ತಿಯ ಪಂದ್ಯದಲ್ಲಿ 5 ವಿಕೆಟ್ ಕಿತ್ತಿದ್ದ ಪ್ರಗ್ಯಾನ್

    ಕ್ರಿಕೆಟ್‍ನಿಂದ ನಿವೃತ್ತಿ ಪಡೆದ ಓಜಾ -ಸಚಿನ್ ನಿವೃತ್ತಿಯ ಪಂದ್ಯದಲ್ಲಿ 5 ವಿಕೆಟ್ ಕಿತ್ತಿದ್ದ ಪ್ರಗ್ಯಾನ್

    ಮುಂಬೈ: ಟೀಂ ಇಂಡಿಯಾ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ನಿವೃತ್ತ ಘೋಷಿಸಿದ್ದಾರೆ.

    ಪ್ರಗ್ಯಾನ್ ಓಜಾ ಅವರು ಈ ವಿಚಾರವನ್ನು ಟ್ವಿಟರ್‍ನಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ. ‘ಜೀವನದ ಮುಂದಿನ ಹಂತಕ್ಕೆ ಸಾಗಲು ಇದು ಸೂಕ್ತ ಸಮಯ. ನನ್ನ ವೃತ್ತಿ ಬದುಕಿನುದ್ದಕ್ಕೂ ಪ್ರೀತಿ ನೀಡಿ ಬೆಂಬಲಿಸಿ, ಪ್ರೇರೇಪಿಸಿದ ಪ್ರತಿಯೊಬ್ಬರೂ ನನ್ನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

    ಓಜಾ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಇದು ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಟೆಸ್ಟ್ ಪಂದ್ಯವೂ ಆಗಿತ್ತು. ಈ ಪಂದ್ಯದಲ್ಲಿ ಓಜಾ ಎರಡೂ ಇನ್ನಿಂಗ್ಸ್ ಗಳಲ್ಲಿ ಐದು ವಿಕೆಟ್‍ಗಳನ್ನು ಪಡೆದು ಮಿಂಚಿದ್ದರು.

    33 ವರ್ಷದ ಓಜಾ ಪ್ರಸ್ತುತ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಪ್ರಗ್ಯಾನ್ ಓಜಾ 2009ರಲ್ಲಿ ಚೊಚ್ಚಲ ಟೆಸ್ಟ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 24 ಟೆಸ್ಟ್, 18 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಓಜಾ ಆಡಿದ್ದಾರೆ. ಅವರನ್ನು ಭಾರತದ ಅತ್ಯುತ್ತಮ ಎಡಗೈ ಸ್ಪಿನ್ನರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

    2009ರಲ್ಲಿ ಹರ್ಭಜನ್ ಸಿಂಗ್ ಫಾರ್ಮ್ ಕಳೆದುಕೊಳ್ಳುತ್ತಿದ್ದಾಗ ಓಜಾ ಟೀಂ ಇಂಡಿಯಾದ ಭಾಗವಾದರು. ಭಾರತ ಕ್ರಿಕೆಟ್ ತಂಡದ ಸ್ಪಿನ್ ದಾಳಿಗೆ ಓಜಾ ಮತ್ತು ರವಿಚಂದ್ರನ್ ಅಶ್ವಿನ್ ಹೊಸ ನಿರ್ದೇಶನ ನೀಡಿದ್ದರು. 2012ರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-1ರಲ್ಲಿ ಕಳೆದುಕೊಂಡಿತ್ತು. ಆ ಸರಣಿಯಲ್ಲೂ ಓಜಾ 20 ವಿಕೆಟ್ ಪಡೆದಿದ್ದರು. ಆದರೆ, ನಂತರದ ವರ್ಷ 2013ರಲ್ಲಿ ರವೀಂದ್ರ ಜಡೇಜಾ ಆಲ್‍ರೌಂಡರ್ ಆಗಿ ಟೀಂ ಇಂಡಿಯಾಗೆ ಸೇರಿದ ಬಳಿಕ ಓಜಾ ತಂಡದಿಂದ ಹೊರ ಬಿದ್ದರು. ಮುಂದೆ ಎಂದಿಗೂ ಟೆಸ್ಟ್ ತಂಡದ ಭಾಗವಾಗಲಿಲ್ಲ.

    ವೃತ್ತಿಜೀವನದ ದಾಖಲೆ:
    ಓಜಾ 24 ಟೆಸ್ಟ್ ಪಂದ್ಯಗಳಲ್ಲಿ 113 ವಿಕೆಟ್, 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್ ಹಾಗೂ 6 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಒಟ್ಟು 424 ವಿಕೆಟ್‍ಗಳನ್ನು ಓಜಾ ಹೊಂದಿದ್ದಾರೆ. ಇದಕ್ಕಾಗಿ ಅವರು 108 ಪಂದ್ಯಗಳನ್ನು ಆಡಿದ್ದಾರೆ. 2018ರಲ್ಲಿ ಅವರು ಬಿಹಾರಕ್ಕಾಗಿ ಉತ್ತರಾಖಂಡ್ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು.

    ಐಪಿಎಲ್‍ನಲ್ಲಿ ಓಜಾ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆದರೆ 2015ರಿಂದ ಯಾವುದೇ ಐಪಿಎಲ್ ತಂಡದ ಭಾಗವಾಗಲಿಲ್ಲ. ಐಪಿಎಲ್‍ನಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿದ ಅವರು 89 ವಿಕೆಟ್‍ಗಳನ್ನು ಪಡೆದಿದ್ದರು.

    ಪ್ರಗ್ಯಾನ್ ಓಜಾ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಿಗೆ ಅಂತಿಮ ಟೆಸ್ಟ್ ಆಡಿದ್ದು ಕಾಕತಾಳೀಯ. ಸಚಿನ್ 2017ರಲ್ಲೇ ನಿವೃತ್ತಿ ಘೋಷಿಸಿದ್ದರು. ಆದರೆ ಓಜಾ ಆನಂತರ ಟೀಂ ಇಂಡಿಯಾ ಪರ ಟೆಸ್ಟ್ ಆಡಲಿಲ್ಲ. ಪ್ರಜ್ಞಾನ್ 2013ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದರು. ಎರಡೂ ಇನ್ನಿಂಗ್ಸ್ ಗಳಲ್ಲಿ 5-5 ವಿಕೆಟ್‍ಗಳನ್ನು ಪಡೆದಿದ್ದರು.