Tag: ಪ್ರಕೃತಿ

  • ಪ್ರಕೃತಿಯ ಮಡಿಲು, ಗಿರಿಶಿಖರ ಕಡಲು – ಕಣ್ಮನ ಸೆಳೆಯುತ್ತಿವೆ ಮಡಿಕೇರಿಯ ಮತಗಟ್ಟೆಗಳು

    ಪ್ರಕೃತಿಯ ಮಡಿಲು, ಗಿರಿಶಿಖರ ಕಡಲು – ಕಣ್ಮನ ಸೆಳೆಯುತ್ತಿವೆ ಮಡಿಕೇರಿಯ ಮತಗಟ್ಟೆಗಳು

    – ಬುಡಕಟ್ಟು ಜನರ ಮತದಾನ ಜಾಗೃತಿಗೆ ವಿಭಿನ್ನ ಪ್ರಯತ್ನ
    – ಚುನಾವಣೆಗೆ ಸಕಲ ಸಿದ್ಧತೆ; ಒಟ್ಟು 546 ಮತಗಟ್ಟೆ; 4.70 ಲಕ್ಷ ಮತದಾರರು

    ಮಡಿಕೇರಿ: ಕೊಡಗು ಜಿಲ್ಲೆಯ ಕಾಡಂಚಿನ ಭಾಗದಲ್ಲಿರುವ ಬುಡಕಟ್ಟು ಹಾಗೂ ಆದಿವಾಸಿ ಜನರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಕೊಡಗು (Kodagu) ಜಿಲ್ಲಾಡಳಿತ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು (Polling Booths) ನಿರ್ಮಾಣಮಾಡಿದೆ. ಬುಡಕಟ್ಟು ಜನರ ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ಅಲಂಕಾರ, ಹಸಿರು ಪ್ರಕೃತಿಯ ಸಂಪನ್ಮೂಲ ಹೊಂದಿದ ಚಿತ್ರಪಟಗಳನ್ನು ಬಿಡಿಸಿ ಪ್ರತಿಯೊಬ್ಬರಿಂದಲೂ ಮತದಾನ ಮಾಡಿಸಲು ಮುಂದಾಗಿದೆ.

    ʻಕಾಫಿ ಅರಣ್ಯ ವನ್ಯಜೀವಿʼ ಥೀಮ್ ನಲ್ಲಿ ಮತಗಟ್ಟೆ:
    ಈ ಬಾರಿ ಕೊಡಗು ಜಿಲ್ಲಾಡಳಿತ ʻಕಾಫಿ ಅರಣ್ಯ ವನ್ಯಜೀವಿʼ ಥೀಮ್‌ನಲ್ಲಿ ಮತಗಟ್ಟೆಗಳನ್ನ ಸ್ಥಾಪನೆ ಮಾಡಿದ್ದು, ಮಡಿಕೇರಿ ನಗರ ಹಿಂದೂಸ್ತಾನಿ ಶಾಲೆಯಲ್ಲಿ ಹೊಸ ಪ್ರಯೋಗ ಮಾಡಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಶಾಲೆಗಳ ಆವರಣದಲ್ಲಿ ಬಾಳೆ ಕಂಬ, ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಇದು ಮತದಾನ ಜಾಗೃತಿಯೊಂದಿಗೆ ವನ್ಯಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಉದ್ದೇಶವೂ ಆಗಿದೆ. ಇದನ್ನೂ ಓದಿ: ಏಪ್ರಿಲ್‌ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ ಮಾಹಿತಿ ಪಡೆದುಕೊಳ್ಳಿ

    ಕೊಡಗಿನಲ್ಲಿ 546 ಮತಗಟ್ಟೆ- 4.70 ಲಕ್ಷ ಮತದಾರರು:
    ಕೊಡಗು ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ‌. ಈಗಾಗಲೇ ಮತಗಟ್ಟೆಗಳಲ್ಲಿ ಸ್ವಚ್ಛಾ ಕಾರ್ಯಗಳನ್ನೂ ನಡೆಸಲಾಗಿದೆ. ಏಪ್ರಿಲ್‌ 26ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,70,766 ಮತದಾರರು ಮತದಾನಕ್ಕೆ ಅರ್ಹರಿದ್ದು, ಮಡಿಕೇರಿ ಕ್ಷೇತ್ರದಲ್ಲಿ 1,16,143 ಪುರುಷ, 1,14,425 ಮಹಿಳೆ, 9 ಇತರರು ಸೇರಿ 2,30,568 ಮಂದಿ, ವೀರಾಜಪೇಟೆ ಕ್ಷೇತ್ರದಲ್ಲಿ 1,14,425 ಪುರುಷರು, 1,17,601 ಮಹಿಳೆಯರು, 7 ಇತರರು ಸೇರಿ 2,32,033 ಮಂದಿ ಮತದಾರರಿದ್ದಾರೆ. 2 ಕ್ಷೇತ್ರಗಳಲ್ಲಿ ತಲಾ 273 ರಂತೆ ಒಟ್ಟು 546 ಮತಗಟ್ಟೆಗಳಿವೆ. 2 ಕ್ಷೇತ್ರಗಳು ಒಳಗೊಂಡಂತೆ 604 ಪಿಆರ್‌ಒ, 604 ಎಪಿಆರ್‌ಒ, 1,208 ಪಿಓ ಗಳು ಸೇರಿ ಒಟ್ಟು 2,416 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಒಟ್ಟು 108 ಮತಗಟ್ಟೆಗಳನ್ನು ವಲ್ನರೇಬಲ್, ಕ್ರಿಟಿಕಲ್ ಎಂದು ಗುರುತಿಸಲಾಗಿದೆ.

    ಒಟ್ಟು 14 ಚೆಕ್‌ಪೋಸ್ಟ್‌ಗಳಿವೆ, 23 ವಿಶೇಷ ಮತಗಟ್ಟೆಗಳನ್ನೂ ರಚನೆ ಮಾಡಲಾಗಿದೆ. 10 ಸಖಿ ಬೂತ್, 6 ಸಾಂಪ್ರದಾಯಿಕ ಮತಗಟ್ಟೆ, 2 ದಿವ್ಯಾಂಗ ಮತಗಟ್ಟೆ, 2 ಯುವಮತದಾರರ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಬಿಜೆಪಿ ಸೇರ್ಪಡೆ

  • ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ಆ ಸಾಲಿಗೆ ’ಡಾನ್ ಕುಮಾರ’ (Don Kumar) ಸಿನಿಮಾ ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರಕ್ಕೆ ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿದ್ದು, ಎನ್.ನಾಗೇಶ್‌ಕುಮಾರ್ (Nagesh Kumar) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್  (Trailer)ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

    ನಿರ್ದೇಶಕರು ಹೇಳುವಂತೆ, ‘ನಮ್ಮ ಸಿನಿಮಾವು ರೆಗ್ಯುಲರ್ ತರಹ ಇರಲ್ಲ. ನಿರೂಪಣೆ ಎಲ್ಲವೂ ವಿಶೇಷವಾಗಿರುತ್ತದೆ. 15 ಸಾಹಸ ದೃಶ್ಯಗಳಿವೆ. ಎಲ್ಲವು ರಿಯಲ್ ಫೈಟ್ಸ್ ಆಗಿದ್ದು, ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ, ನಾಟಕೀಯದಂತೆ ಇರದೆ  ಸಂಯೋಜನೆ ಮಾಡಲಾಗಿದೆ. ಭೂಗತ ಲೋಕದ ಸನ್ನಿವೇಶಗಳು ಇದ್ದರೂ, ಲವ್, ರೋಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ. ರೌಡಿಸಂ ಯಾಕೆ ಆಗುತ್ತೆ. 1990-2000 ನಡೆದಂತಹ ಒಂದಷ್ಟು ಘಟನೆಗಳನ್ನು ಬಳಸಲಾಗಿದೆ. ಆದರೆ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ’ ಎನ್ನುತ್ತಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಶೀರ್ಷಿಕೆ ಹೆಸರಿನಲ್ಲಿ ಚಂದ್ರಶೇಖರ್ (Chandrasekhar) ನಾಯಕ. ಸಹನಾ (Sahana) ಮತ್ತು ಪ್ರಕೃತಿ (Prakruti) ನಾಯಕಿಯರು. ಐಟಂ ಹಾಡಿಗೆ ನಮೃತಾಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿಗೋಪಿ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರವ್‌ ಋಷಿಕ್ ಸಂಗೀತದ ಐದು ಗೀತೆಗಳಿಗೆ ಅನಿರುದ್‌ ಶಾಸ್ತ್ರಿ, ಅನುರಾಧ ಭಟ್, ನಿಮಿಕಾ ರತ್ನಾಕರ್, ಅವಿನಾಶ್‌ ಛಬ್ಬಿ ಕಂಠದಾನ ಮಾಡಿದ್ದಾರೆ.

     

    ಆನಂದ್‌ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಾಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಶ್ವಾನದ ಪ್ರೀತಿ ಕಥೆ

    ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಶ್ವಾನದ ಪ್ರೀತಿ ಕಥೆ

    ವಿ ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಯಾವ ಮೋಹನ ಮುರಳಿ ಕರೆಯಿತು’ (Yaava Mohana Murali Kareyitu) ಎಂಬ ಹಾಡು ಬಹಳ ಜನಪ್ರಿಯ. ಈಗ ಈ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚಿಗೆ ‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

    ಯಾವ ಮೋಹನ ಮುರಳಿ ಕರೆಯಿತು ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಮೂರು ಹಾಡುಗಳಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರವೆಂದರು ನಿರ್ದೇಶಕ (Vishwas Krishna) ವಿಶ್ವಾಸ್ ಕೃಷ್ಣ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಮದುವೆ : ಭಾಗಿಯಾಗಲಿದೆ ತಾರಾ ದಂಡು

    ನಾನು ಉದ್ಯಮಿ‌. ಕಿಕ್ ಬಾಕ್ಸಿಂಗ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದೇನೆ.  ಸಿನಿಮಾ ಬಗ್ಗೆ ಅಷ್ಟು ಗೊತ್ತಿಲ್ಲ. ಸಾಹಿತಿ ಗೌಸ್ ಫಿರ್ ಅವರ ಮೂಲಕ ನಿರ್ದೇಶಕರ ಪರಿಚಯವಾಯಿತು. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ(Sharanappa Gouramma)  ತಿಳಿಸಿದರು.

    ಚಿತ್ರದ ಪ್ರಮುಖ ಪಾತ್ರಧಾರಿ ಬೇಬಿ ಪ್ರಕೃತಿ, ನಾಯಕ ಮಾಧವ, ನಾಯಕಿ ಸ್ವಪ್ನಾ ಶೆಟ್ಟಿಗಾರ್, ಪಟೇಲ್ ವರುಣ್ ರಾಜ್ ಹಾಗೂ ಸಂಗೀತ ನಿರ್ದೇಶಕ ಅನಿಲ್ ಸಿ ಜೆ ಚಿತ್ರದ ಕುರಿತು ಮಾತನಾಡಿದರು. ಪತ್ರಿಕಾಗೋಷ್ಠಿಗೆ ರಾಕಿ(ಶ್ವಾನ) ಕೂಡ ಆಗಮಿಸಿತ್ತು. ರಾಕಿ ಟ್ರೈನರ್ ಸ್ವಾಮಿ, ರಾಕಿಯ ದಿನಚರಿ ಬಗ್ಗೆ ವಿವರಣೆ ನೀಡಿದರು.

  • ಪ್ರಕೃತಿ ಉಳಿವಿಗಾಗಿ ಗಿಡ ನೆಡಿ : ವಿಜ್ಞಾನಿ ಡಾ.ಚಂದ್ರಶೇಖರ್

    ಪ್ರಕೃತಿ ಉಳಿವಿಗಾಗಿ ಗಿಡ ನೆಡಿ : ವಿಜ್ಞಾನಿ ಡಾ.ಚಂದ್ರಶೇಖರ್

    ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇ.1ರಷ್ಟು ಜನ ಮಾತ್ರ ಪ್ರಯತ್ನಗಳನ್ನು ನಡೆಸಿದ್ದು, ಶೇ.99 ಜನರು ಪ್ರಕೃತಿಯ ವಿನಾಶದ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇ.1ರ ಜನ ಸಂಖ್ಯೆಯನ್ನು ಪ್ರತಿಶತ 10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಾಗಿ ವಿಕೋಪಗಳು ತಪ್ಪುತ್ತವೆ. ಪ್ರಕೃತಿ ಉಳಿವಿಗಾಗಿ ಗಿಡ ನೆಡಿ ಎಂದು ಕೃಷಿ, ಅರಣ್ಯ ವಿಜ್ಞಾನಿ ಡಾ. ಚಂದ್ರಶೇಖರ್ ಬಿರಾದಾರ್ ಅಭಿಪ್ರಾಯಪಟ್ಟಿದ್ದಾರೆ.

    ಮುದ್ದೇಬಿಹಾಳ ಢವಳಗಿ ಮೂಲದ ಡಾ.ಚಂದ್ರಶೇಖರ್ ಬಿರಾದಾರ್ ಸದ್ಯ ಈಜಿಪ್ಟ್‍ನಲ್ಲಿ ನೆಲೆಸಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯ್ನಾಡಿನ ಪ್ರವಾಸದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ನಿವಾಸದಲ್ಲಿ ಇಂದು ಪರಿಸರ ಆಸಕ್ತರ ಉಪಹಾರ ಕೂಟ ಏರ್ಪಡಿಸಿದ ಸಂದರ್ಭದಲ್ಲಿ ಮಾತನಾಡಿದ ಡಾ.ಚಂದ್ರಶೇಖರ್ ಬಿರಾದಾರ್ ಅವರು, ಪ್ರಕೃತಿ ನಾಶಮಾಡುತ್ತಿರುವುದರಿಂದ ಮಣ್ಣು, ನೀರು, ಹವಾಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿ, ವಿಷಮಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮೊದಲು ನಾವು ತಿನ್ನುವ ಆಹಾರವೇ ವಿಷವಾಗಿದೆ. ಇದನ್ನು ಬದಲಾಯಿಸಬೇಕು. ಯುವಕರಿಂದ ಮಾತ್ರ ಈ ಬದಲಾವಣೆ ಸಾಧ್ಯ. ನಾನು ಜಗತ್ತಿನ 50 ರಾಷ್ಟ್ರಗಳಲ್ಲಿ ಈ ಬದಲಾವಣೆ ಪ್ರಯೋಗವನ್ನು ಮಾಡಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ನನ್ನ ತಾಯ್ನಾಡಿನ ನನ್ನ ಹೆಮ್ಮೆಯ ವಿಜಯಪುರ ಜಿಲ್ಲೆಯಲ್ಲಿ ಈ ಬದಲಾವಣೆ ತರುವ ಕಾರ್ಯವನ್ನು ಎಂ.ಬಿ.ಪಾಟೀಲ್ ರವರು ಕೋಟಿ ವೃಕ್ಷ ಅಭಿಯಾನದ ಮೂಲಕ ಯಶಸ್ವಿಯಾಗಿ ಮಾಡುತ್ತಿದ್ದು, ಭೂತನಾಳದ ಕಲ್ಲನ್ನು ಕೊರೆದು ಸಸಿ ನೆಟ್ಟು ಬೆಳೆಸಿದ್ದು ಸಣ್ಣ ಸಾಧನೆಯಲ್ಲ. ಅದು ಮಹಾನ್ ಕ್ರಾಂತಿಕಾರಿ ಕೆಲಸ ಎಂದು ನಾನು ಭಾವಿಸುತ್ತೇನೆ ಎಂದರು.

    ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ, ಯುನೆಸ್ಕೋ ಜೀವವಿಜ್ಞಾನ ಪೀಠದ ಮುಖ್ಯಸ್ಥ ಡಾ.ಕುಶಾಲ್ ದಾಸ್ ಮಾತನಾಡಿ, ಪ್ರಕೃತಿಯ ರಕ್ಷಣೆಯ ಸಂಶೋಧನೆಗಳಲ್ಲಿ ಅಮೇರಿಕ, ಯೂರೋಪಿಯನ್ ರಾಷ್ಟ್ರಗಳು ಮುಂದಿದ್ದರೂ, ಆ ರಕ್ಷಣೆಯ ಕಾರ್ಯದಲ್ಲಿ ಅವರು ಮುಂದಾಗಿರುವುದು ಕಡಿಮೆ. ಏಷ್ಯಾದ, ಆಫ್ರಿಕಾದ ಕಾಡಿನ ಜನರೇ ಈ ಪ್ರಕೃತಿಯ ರಕ್ಷಕರು. ಏಕೆಂದರೆ ಅವರ ಹೃದಯದಲ್ಲಿಯೇ ಪ್ರಕೃತಿ ತುಂಬಿಕೊಂಡಿರುತ್ತದೆ. ಜಾಗತಿಕ ತಾಪಮಾನ ಸೇರಿದಂತೆ ಜಗತ್ತಿನ ಹಲವು ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಅಮೇರಿಕಾ ಅಧ್ಯಕ್ಷರೇ ಯೂಟರ್ನ್ ತೆಗೆದುಕೊಂಡಿರುವುದು ಅವರ ದ್ವಂಧ್ವ ನೀತಿಯನ್ನು ತೋರುತ್ತದೆ ಎಂದರು. ಇದನ್ನೂ ಓದಿ: ಮೋದಿ ಚಪ್ಪಾಳೆ, ತಟ್ಟೆ ಹೊಡೆಯೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ: ಡಿಕೆಶಿ

    ಮಾಜಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಜಗತ್ತಿನ ಹಲವು ರಾಷ್ಟ್ರಗಳ ಪ್ರಯೋಗಕ್ಕೂ ಭಾರತಕ್ಕೂ ತೀವ್ರ ವ್ಯತ್ಯಾಸವಿದೆ. 130 ಕೋಟಿ ಜನಸಂಖ್ಯೆಯ ಇಲ್ಲಿನ ಪರಿಸ್ಥಿತಿಗಳಲ್ಲಿ ನಾವು ಪರಿಸರ ಅಳಿವು-ಉಳಿವು ಕುರಿತು ಮಾತನಾಡುವುದೇ ದುಸ್ಥರವಾಗಿದೆ. ಅಧಿಕಾರ ನಡೆಸುವ ನಾಯಕರು, ಇಲಾಖೆ ಮುಖ್ಯಸ್ಥರು ಹೇಗೆ ಕ್ರೀಯಾಶೀಲರಾಗಿ ಕಾರ್ಯ ಮಾಡುತ್ತಾರೆಯೋ ಹಾಗೆಯೇ ಆ ಇಲಾಖೆ, ಅಧಿಕಾರಿಗಳು ಅದನ್ನು ಅನುಸರಿಸುತ್ತಾರೆ. ಆದರೆ ಇಲ್ಲಿನ ಸ್ಥಿತಿಗತಿಗಳು ಸರಿ ಇಲ್ಲ ಎಂದು ನಾವು ಭಾವಿಸದೇ ಆಶಾವಾದದಿಂದ ಪ್ರಯತ್ನಕ್ಕೆ ಮುಂದಾಗಬೇಕು. ಆಗ ಯಶಸ್ಸು ಖಂಡಿತ ಸಾಧ್ಯ. ಕೋಟಿವೃಕ್ಷ ಅಭಿಯಾನವೇ ಇದಕ್ಕೆ ಉತ್ತಮ ಉದಾಹರಣೆ. 5 ವರ್ಷಗಳ ಹಿಂದೆ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆದ ಸಸಿಗಳನ್ನು ತೆಗೆದುಕೊಂಡು ಹೋಗುವವರು ಇರಲಿಲ್ಲ. ಇತ್ತೀಚಿಗೆ ಸಸಿಗಳನ್ನು ಹಂಚಲು ಆರಂಭಿಸಿದ 2-3 ದಿನಗಳಲ್ಲಿ ಹತ್ತಾರು ಲಕ್ಷ ಸಸಿಗಳು ಖಾಲಿಯಾಗುತ್ತಿವೆ. ಇದರಿಂದ ಜಿಲ್ಲೆಯ ಪರಿಸರದಲ್ಲಿ ಉತ್ತಮ ಬದಲಾವಣೆ ಬಂದಿದೆ ಎಂದರು.

    ವಿಜ್ಞಾನಿ ಚಂದ್ರಶೇಖರ ಅವರು ಜಿಲ್ಲೆಯ, ರಾಜ್ಯದ ಪರಿಸರ ಪೂರಕವಾಗಿ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ, ಆದ್ಯತೆಯ ಮೆರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಗಮನ ಸೆಳೆಯಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.

    ಅರಣ್ಯ ಇಲಾಖೆ ಅಧಿಕಾರಿಗಳಾದ ಪಿ.ಕೆ.ಪೈ, ಎನ್.ಕೆ.ಬಾಗಯತ್, ಮಹೇಶ್ ಪಾಟೀಲ್, ಪ್ರಭುಲಿಂಗ, ಎನ್.ಡಿ.ಪಾಟೀಲ್ ಡೋಮನಾಳ, ಶರದ ರೂಡಗಿ, ಡಾ.ಮಹಾಂತೇಶ್ ಬಿರಾದಾರ್, ಡಾ.ಮುರುಗೇಶ್ ಪಟ್ಟಣಶೆಟ್ಟಿ, ಬಸವರಾಜ್ ಬಿರಾದಾರ್, ಪರುಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

  • ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಧುಮ್ಮುಕಿ ಹರಿಯುತ್ತಿದೆ.

    ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ, ನೈಜ ಸೌಂದರ್ಯದ ಕೊಡಗಿನಲ್ಲಿಗ ಜಲಸುಂದರಿಯರದ್ದೇ ದರ್ಬಾರ್ ಆಗಿದೆ.

    ಕೊಡಗಿನಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿಯ ಚೆಟ್ಟಳ್ಳಿ ರಸ್ತೆ ಬದಿಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ.

    ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರವಾಸಿಗರು ಸ್ಥಳೀಯರು ಇದೀಗ ಜಲಪಾತದತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ:ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

  • ಪ್ರಕೃತಿ ಜೀವನ ಕಲಿಸಿದ ಸುಂದರ ಪಾಠ: ಸುದೀಪ್

    ಪ್ರಕೃತಿ ಜೀವನ ಕಲಿಸಿದ ಸುಂದರ ಪಾಠ: ಸುದೀಪ್

    ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ಪ್ರತಿದಿನವನ್ನು ನೀವು ಕಾಣುತ್ತಿದ್ದೀರಾ ಎಂದರೇ ಅದು ಆಶೀರ್ವಾದ. ಪ್ರತಿಕ್ಷಣ ನೀವು ಖುಷಿಯಾಗಿರುತ್ತೀರಾ ಎಂದರೆ ಅದು ನಿಮಗೆ ಸಿಕ್ಕ ದೊಡ್ಡ ಉಡುಗೊರೆ ಎನ್ನುವ ಮೂಲಕ ಪ್ರಸ್ತುಕ ಸ್ಥಿತಿಯ ಬಗ್ಗೆ ನಟ ಕಿಚ್ಚ ಸುದೀಪ್ ಎರಡೇ ಅಕ್ಷರದಲ್ಲಿ ಬದುಕಿನ ಸತ್ಯವನ್ನು ತಿಳಿಸಿದ್ದಾರೆ.

    ಸದ್ಯದ ಪರಿಸ್ಥಿತಿ ಎಲ್ಲರಲ್ಲೂ ಒಂದು ರೀತಿಯ ಆತಂಕ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನವನ್ನು ಸಂತೋಷದಿಂದ ಕಳೆಯಬೇಕು. ಪ್ರಕೃತಿ ಮತ್ತು ಜೀವನವನ್ನು ಯಾರು ಕೂಡ ನಿಯಂತ್ರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಚಾರಿಸಲು ಸಂದೇಶ ಅಥವಾ ಕರೆ ಬರುತ್ತಿದ್ದರೇ ಅದು ಅವರಿಗೆ ನಿಮ್ಮ ಬಗ್ಗೆ ಇರುವ ಕಾಳಜಿ ಎನ್ನುವ ಮೂಲಕ ಆ ಕಾಳಜಿಯನ್ನು ಕಾಪಾಡಿಕೊಳ್ಳಿ ಎಂದು ಬಾದಾಷಾ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಜೀವನದ ಪಾಠವನ್ನು ಮಾಡಿದ್ದಾರೆ.

     

    View this post on Instagram

     

    A post shared by KicchaSudeepa (@kichchasudeepa)

    ಇತ್ತೀಚೆಗಷ್ಟೇ ಅನಾರೋಗ್ಯಕ್ಕೆ ನಟ ಕಿಚ್ಚ ಸುದೀಪ್ ಒಳಗಾಗಿದ್ದರು. ಆರೋಗ್ಯ ಸರಿಯಿಲ್ಲದ ಕಾರಣ ಬಿಗ್‍ಬಾಸ್‍ನ ವಾರಾಂತ್ಯ ಕಾರ್ಯಕ್ರಮದಲ್ಲಿಯೂ ಹಲವು ವಾರಗಳಿಂದ ಭಾಗಿಯಾಗಿಲ್ಲ. ಈ ವಾರಾಂತ್ಯದಲ್ಲೂ ಕೂಡ ನಟ ಕಿಚ್ಚ ಸುದೀಪ್ ಬಿಗ್‍ಬಾಸ್ ನಡೆಸಿಕೊಡುವುದು ಬಹುತೇಕ ಅನುಮಾನವಾಗಿದೆ. ಕಿಚ್ಚ ಸುದೀಪ್‍ಗಾಗಿ ವಾರವೀಡಿ ಕಾಯುತ್ತಿದ್ದ ಬಿಗ್‍ಬಾಸ್ ಸ್ಪರ್ಧಿಗಳು ಮತ್ತು ಅಭಿಮಾನಿಗಳಿಗೆ ಇದರಿಂದ ಭಾರೀ ಬೇಸರ ಉಂಟಾಗಿದೆ. ಕಿಚ್ಚಾ ಆದಷ್ಟು ಬೇಗ ಹುಷಾರಾಗಿ ಬರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

  • ನಿಸರ್ಗಧಾಮದಲ್ಲಿ ಕಬ್ಬಿಣದ ಕಾಡು ನಿರ್ಮಾಣ ಪರಿಸರ ಪ್ರೇಮಿಗಳ ಅಕ್ರೋಶ

    ನಿಸರ್ಗಧಾಮದಲ್ಲಿ ಕಬ್ಬಿಣದ ಕಾಡು ನಿರ್ಮಾಣ ಪರಿಸರ ಪ್ರೇಮಿಗಳ ಅಕ್ರೋಶ

    ಮಡಿಕೇರಿ : ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದೇ ಹೊರ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ಹೆಸರಿನಲ್ಲಿ ನಿಸರ್ಗದತ್ತವಾಗಿದ್ದ ನಿಸರ್ಗಧಾಮದಲ್ಲಿ ಅಡ್ವಂಚರ್ಸ್ ಗೇಮ್ ಗಳ ಪರಿಕರಗಳನ್ನು ನಿರ್ಮಿಸಿ ಕಬ್ಬಿಣದ ಕಾಡು ಸೃಷ್ಟಿಸುತ್ತಿದ್ದಾರೆ ಎಂದು ಪರಿಸರ ಪ್ರೇಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದಲ್ಲೇ ಕಾವೇರಿ ನದಿ ದಂಡೆಯ ಮೇಲೆ ಕಾವೇರಿ ನಿಸರ್ಗಧಾಮವಿದೆ. ಇದರೊಳಗಿರುವ ಬಿದಿರು, ಸಹಜವಾಗಿಯೇ ಬೆಳೆದಿರುವ ಅರಣ್ಯದ ಮರಗಳು ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರಿಗೆ ಅರಣ್ಯದೊಳಗೆ ಸುತ್ತಾಡಿದ ಅನುಭವ ನೀಡುತ್ತಿದ್ದವು. ಆದರೆ ಕೆಲವು ವರ್ಷಗಳ ಹಿಂದೆಯಷ್ಟೇ ಇಲ್ಲಿನ ಬಿದಿರು ಮೆಳೆಗಾಲದಲ್ಲಿ ಕಟ್ಟೆ ರೋಗಬಂದು ಎಲ್ಲವೂ ಒಣಗಿ ಹೋಗಿ ಈಗಷ್ಟೇ ಹೊಸ ಬಿದಿರು ಬೆಳೆಯುತ್ತಿದೆ. ಇದರ ಜೊತೆಗೆ ಇನ್ನಷ್ಟು ಮರ ಗಿಡಗಳನ್ನು ಬೆಳೆಸಿ ಈಗ ಬರುತ್ತಿರುವ ಬಿದಿರನ್ನು ಪೋಷಣೆ ಮಾಡಿ ಹಿಂದಿನ ಸಹಜ ಸೌಂದರ್ಯ ಮರುಕಳಿಸುವಂತೆ ಅರಣ್ಯ ಇಲಾಖೆ ಮಾಡಬೇಕಾಗಿತ್ತು. ಅದರ ಬದಲಿಗೆ ಲೋರೋಫ್ ಕೋರ್ಸ್ ಗಳನ್ನು ಮಾಡಲಾಗುತ್ತಿದೆ.

    ಅಡ್ವೆಂಚರ್ಸ್ ಗೇಮ್ಸ್ ಗಳಿಗಾಗಿ ಹತ್ತಾರು ಎಕರೆ ಪ್ರದೇಶದಲ್ಲಿ ಕಬ್ಬಿಣಗಳಿಂದ ದೊಡ್ಡ ದೊಡ್ಡ ಡೇರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎರಡು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಸುತ್ತಲೂ ಕಬ್ಬಿಣದ ಗ್ರಿಲ್ಸ್ ಗಳ ಬೇಲಿಯನ್ನು ನಿರ್ಮಿಸಲಾಗಿದ್ದು, ಅದರೊಳಗೆ ಅಡ್ವೆಂಚರ್ಸ್ ಗೇಮ್‍ಗಳಿಗೆ ಬೇಕಾದ ವಿವಿಧ ಪರಿಕರಗಳನ್ನು ಮರಗಳಿಗೆ ಕಟ್ಟಲಾಗಿದೆ. ಹೀಗಾಗಿ ನಿಸರ್ಗಧಾಮ ಈಗ ಸೈಸರ್ಗಿಕ ಸೌಂದರ್ಯವನ್ನು ಸಂಪೂರ್ಣ ಕಳೆದುಕೊಳ್ಳುತ್ತಿದೆ ಎಂದು ಪರಿಸರ ಪ್ರೇಮಿಗಳ ವಾದವಾಗಿದೆ.

    ಈ ಅಡ್ವೆಂಚರ್ಸ್ ಗೇಮ್ ಗಳ ಪರಿಕರಗಳನ್ನು ಮರಗಳಿಗೆ ಕಟ್ಟಲಾಗಿದ್ದು ಅದಕ್ಕಾಗಿ ಮರಗಳಿಗೆ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆಯಲಾಗಿದೆ. ಇದೆಲ್ಲವೂ ಪರಿಸರ ಪ್ರಿಯರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಇದೆಲ್ಲವನ್ನೂ ಕೊಡಗು ಮಾನವ ಮತ್ತು ವನ್ಯಜೀವಿ ಸಂರಕ್ಷಣಾ ಫೌಂಡೇಷನ್ ನಿಂದ ಸಂಪೂರ್ಣ ಖಾಸಗಿಯವರಿಂದಲೇ ಇದನ್ನು ಮಾಡಲಾಗುತ್ತಿದೆಯಂತೆ. ಇದಕ್ಕೆ ಅರಣ್ಯ ಸಚಿವರೇ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಇದೆಲ್ಲವನ್ನೂ ನಿರ್ಮಿಸುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆಯಂತೆ. ಖಾಸಗೀ ಸಂಸ್ಥೆಯು ಸಂಪೂರ್ಣ ಬಂಡವಾಳ ಹೂಡುತ್ತಿದ್ದು, ಇದರಿಂದ ಬರುವ ಆದಾಯದಲ್ಲಿ ಅರಣ್ಯ ಇಲಾಖೆಗೆ ಅರ್ಧಪಾಲು ಕೊಡಬೇಕೆಂದು ನಿರ್ಧರವಾಗಿದೆ ಎಂಬ ಮಾಹಿತಿ ಇದೆ.

  • ಹೆಲಿಕಾಪ್ಟರ್‌ ಏರಿ ಮಡಿಕೇರಿಯ ಸೌಂದರ್ಯವನ್ನು ಸವಿಯಿರಿ

    ಹೆಲಿಕಾಪ್ಟರ್‌ ಏರಿ ಮಡಿಕೇರಿಯ ಸೌಂದರ್ಯವನ್ನು ಸವಿಯಿರಿ

    ಮಡಿಕೇರಿ : ಮಂಜಿನನಗರಿ ಮಡಿಕೇರಿಯನ್ನು ಹೆಲಿಕಾಪ್ಟರ್‌‌ ಮೂಲಕ ಸುತ್ತಾಡಬೇಕು ಎಂದು ಕನಸು ಕಾಣುವ ಮಂದಿಗೆ ಗುಡ್‌ನ್ಯೂಸ್‌. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲವು ದಿನಗಳ ಮಟ್ಟಿಗೆ ಹೆಲಿಟೂರಿಸಂಗೆ ಅವಕಾಶ ನೀಡಲಾಗಿದೆ.

    ತುಂಬೆ ಏವಿಯೇಷನ್ ಸಂಸ್ಥೆ ಮಡಿಕೇರಿಯಲ್ಲಿ ಇಂದಿನಿಂದ ಜನವರಿ 1 ವರೆಗೆ ಹೆಲಿಕಾಪ್ಟರ್‌‌ ಮೂಲಕ ಮಡಿಕೇರಿ ವೀಕ್ಷಣೆ ಮಾಡಿಸಲಿದೆ. ಸಂಪೂರ್ಣ ಬೆಟ್ಟಗುಡ್ಡಗಳು, ಹಸಿರು ಕಾನನಗಳಿಂದಲೇ ತುಂಬಿರುವ ಮಡಿಕೇರಿಯ ಸೌಂದರ್ಯವನ್ನು ರಸ್ತೆಗಳ ಮೂಲಕವಷ್ಟೇ ಸವಿದಿದ್ದ ಪ್ರವಾಸಿಗರು ಇನ್ನು ಒಂದು ವಾರಗಳ ಕಾಲ ಆಕಾಶದಲ್ಲಿ ತೇಲಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

     

    ಮ್ಯಾನ್ಸ್ ಕಾಂಪೌಡ್ ಮೈದಾನದಿಂದ ಹಾರಾಟ ನಡೆಸುವ ಹೆಲಿಕಾಪ್ಟರ್‌‌ ಮಡಿಕೇರಿಯ ನಗರ ಸೇರಿದಂತೆ ಮಡಿಕೇರಿ ಹೊರವಲಯದಲ್ಲೂ ಹಾರಾಟ ನಡೆಸಲಿದೆ. ಆದರೆ ಆಕಾಶದಲ್ಲಿ ಹಾರಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಮೂರು ಸಾವಿರ ಭರಿಸಬೇಕು. ಎಂಟು ನಿಮಿಷಗಳ ಕಾಲ ನೀವು ಆಕಾಶದಲ್ಲಿ ಸುತ್ತಾಡಲು ಮೂರು ಸಾವಿರ ರೂಪಾಯಿ ಶುಲ್ಕ ಕಟ್ಟಬೇಕು.

    ಒಟ್ಟಿನಲ್ಲಿ ಕೋವಿಡ್ ನಿಂದ ಟೂರಿಸಂ ಕುಗ್ಗಿರುವ ಸಂದರ್ಭದಲ್ಲಿ ಪ್ರವಾಸಿಗರನ್ನು ಕೊಡಗಿಗೆ ಸೆಳೆದು ಕೊಡಗಿನ ಆರ್ಥಿಕತೆಯನ್ನು ವೃದ್ಧಿ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸೀಮಿತ ಅವಧಿಯ ಈ ಹೆಲಿಟೂರಿಸಂ ಅನುಕೂಲವಾಗುತ್ತಾ ಎನ್ನೋದನ್ನು ಕಾದು ನೋಡಬೇಕಾಗಿದೆ.

  • ಮುಂಗಾರಿನ ಅಭಿಷೇಕಕ್ಕೆ ಹಸಿರು ಹೊದಿಕೆಹೊತ್ತ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ

    ಮುಂಗಾರಿನ ಅಭಿಷೇಕಕ್ಕೆ ಹಸಿರು ಹೊದಿಕೆಹೊತ್ತ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ

    ಚಾಮರಾಜನಗರ: ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಎನ್ನುತ್ತಾರೆ. ಈ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹಸಿರು ಸೀರೆಯುಟ್ಟ ನಾರಿಯಂತೆ ಕಾಣುತ್ತಿದ್ದು, ಅಚ್ಚಹಸಿರಾದ ಬೆಟ್ಟ, ಬೆಟ್ಟಕ್ಕೆ ತಾಕೋ ಮೋಡಗಳು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದ್ದು, ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

    ಹೌದು. ಇಂತದೊಂದು ಅಪರೂಪವಾದ, ರಮ್ಯ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರೋದು ಚಾಮರಾಜನಗರ ಜಿಲ್ಲೆಯಲ್ಲಿ. ಪ್ರಕೃತಿ ಸೊಬಗನ್ನ ಹೊದ್ದು ಮಲಗಿದಂತೆ ಕಾಣುವ ಈ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೇ ಈಗ ಸ್ವರ್ಗದಂತೆ ಕಾಣುತ್ತಿದೆ. ಕರ್ನಾಟಕದ ತಿರುಪತಿ, ಶ್ವೇತಾದ್ರಿ ಪರ್ವತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಬಿಳಿಗಿರಿ ರಂಗನಾಥ ಸ್ವಾಮಿ ಸೋಲಿಗರ ಆರಾದ್ಯ ದೈವ. ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತೆ ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಅಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಇದನ್ನೂ ಓದಿ:ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ

    ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟ ನಗರವಾಸಿಗಳ ಸ್ವರ್ಗ. ಇದು ಯಾವಾಗಲೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿನ ವಾತಾವರಣ, ತಣ್ಣಗೆ ಬೀಸುವ ತಂಗಾಳಿ ಪ್ರತಿಯೊಬ್ಬರ ಮೈಸೋಕಿ ಉಲ್ಲಾಸಗೊಳಿಸುತ್ತದೆ. ಇಲ್ಲಿ ಕನಿಷ್ಠ ಎಂದರೆ 7 ರಿಂದ 8 ಡಿಗ್ರಿವರೆಗೆ ತಾಪಮಾನ ಇರುತ್ತದೆ. ಇದನ್ನೂ ಓದಿ:ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ

    ಕಡು ಬೇಸಿಗೆಯಲ್ಲಿ ಇಲ್ಲಿನ ತಪಾಮಾನ 28 ರಿಂದ 30 ಡಿಗ್ರಿ ಸೆಲ್ಸಿಯಸ್ ಮಾತ್ರ ಇರುತ್ತದೆ. ಹೀಗಾಗಿಯೇ ಇಲ್ಲಿನ ವಾತಾರಣವನ್ನ ಎಸಿಯ ಮನೆ ಎಂದು ಪ್ರವಾಸಿಗರು ಕರೆಯುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರು ಪದೇ ಪದೇ ಇಲ್ಲಿಗೆ ಬಂದು ಪ್ರಕೃತಿಯ ಸವಿ ಸವಿಯುತ್ತಾರೆ. ಶ್ವೇತಾದ್ರಿ ಪರ್ವತ ಎಂದು ಕರೆಯಲ್ಪಡುವ ಬಿಳಿಗಿರಿ ರಂಗನಾಥ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹರಿಸಿನಿಂದ ಕಂಗೊಳಿಸುತ್ತಿದೆ. ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರ ಮನಸಿಗೆ ಮುದ ನೀಡುತ್ತಿದೆ.

    ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಎರಡು ಕಡೆಯಿಂದ ಪ್ರವೇಶ ಪಡೆಯಬಹುದು. ಒಂದು ಯಳಂದೂರು ಮಾರ್ಗದಿಂದ ಮತ್ತೊಂದು ಚಾಮರಾಜನಗರ ಭಾಗದಿಂದ ಹೋಗಲು ಹೊಂಡರಬಾಳು ಬಳಿ ಪ್ರವೇಶ ದ್ವಾರಗಳಿವೆ. ಈ ಎರಡು ಪ್ರವೇಶದ್ವಾರಗಳು ಪ್ರವಾಸಿಗರನ್ನ ಆಕರ್ಷಿಸದೇ ಬಿಡಲಾರವು. ಬರುವ ಪ್ರವಾಸಿಗರನ್ನ ಆನೆ, ಹುಲಿ, ಚಿರತೆ, ಕಾಡಮ್ಮೆಯಂತಹ ವನ್ಯಜೀವಿಗಳೇ ಸ್ವಾಗತ ಕೋರುತ್ತವೆ. ಹೌದು. ನೋಡುವುದಕ್ಕೆ ವನ್ಯಜೀವಿಗಳೇ ಎದ್ದು ಬರುತ್ತಿರುವ ಹಾಗೆ ಕಾಣುವಂತೆ ದ್ವಾರದಲ್ಲಿ ಚಿತ್ರಿಸಲಾಗಿದೆ.

    ನಗರ ಪ್ರದೇಶಗಳಿಂದ ಬರುವ ಜನರು ಇವುಗಳನ್ನ ನೋಡಿ ಖುಷಿಪಟ್ಟು, ನಂತರ ನಿಧಾನವಾಗಿ ಇಳಿದು ಚಿತ್ರಿಸಿದ ವನ್ಯಪ್ರಾಣಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಹೋಗುವುದಿಲ್ಲ. ಎರಡು ಕಡೆಯಿಂದ ಬರುವ ಪ್ರವಾಸಿಗರಿಗೆ ವನ್ಯಜೀವಿಗಳ ದರ್ಶನ ಮಾತ್ರ ಉಚಿತ. ಕಾಡೆಮ್ಮೆ, ಆನೆ, ಜಿಂಕೆ, ಕಡವೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ.

    ಅದೇನೆ ಇರಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಿಂದಲೇ ಖ್ಯಾತಿಗಳಿಸಿದ್ದ ಬಿಆರ್‌ಟಿ ಈಗ ಹುಲಿ ಸಂರಕ್ಷಿತ ಪ್ರದೇಶವಾಗಿ ಖ್ಯಾತಿಗಳಿಸಿದೆ. ಈ ಮಧ್ಯೆ ಈ ಮೋಡ ಕವಿದ ವಾತಾವರಣವು ಎಂಥವರನ್ನು ಮಂತ್ರ ಮುಗ್ಧಗೊಳಿಸಿರೋದಂತೂ ಸುಳ್ಳಲ್ಲ.

  • ವರ್ಷಧಾರೆಗೆ ಮೈದುಂಬಿ ಹರಿಯುತ್ತಿದೆ ಕೊಡಗಿನ ಮಲ್ಲಳ್ಳಿ ಜಲಪಾತ: ವಿಡಿಯೋ ನೋಡಿ

    ವರ್ಷಧಾರೆಗೆ ಮೈದುಂಬಿ ಹರಿಯುತ್ತಿದೆ ಕೊಡಗಿನ ಮಲ್ಲಳ್ಳಿ ಜಲಪಾತ: ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು ಗಿರಿಕಾನನದ ನಡುವಿನಿಂದ ಧುಮ್ಮುಕ್ಕೊ ಜಲಧಾರೆಗಳ ವಯ್ಯಾರವನ್ನ ನೋಡೋಕೆ ಎರಡು ಕಣ್ಣುಗಳು ಸಾಲುವುದಿಲ್ಲ. ಈ ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಹೌದು, ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ ನೋಡಲು ಬಲು ಸುಂದರವಾಗಿದೆ. ಕಳೆದ ವಾರ ಸುರಿದ ವರ್ಷಧಾರೆಗೆ ಮೈದುಂಬಿ ಹರಿಯುತ್ತಿರುವ ಈ ಜಲಪಾತವನ್ನ ನೋಡುಗರ ಕಣ್ಣು ಸಾಲದಂತಾಗಿದೆ. ಮುಗಿಲೆತ್ತರದಿಂದ ಹಾಲ್ನೊರೆಯಂತೆ ಇಳಿಯುವ ಈ ಜಲಪಾತದ ಸೌಂದರ್ಯವನ್ನು ಬಣ್ಣಿಸಲು ಸಾಲದು. ಹಸಿರ ನಡುವಿನಿಂದ ಭೋರ್ಗರೆಯುತ್ತಾ ಕರಿಕಲ್ಲುಗಳನ್ನು ಸೀಳಿಕೊಂಡು ಈ ರುದ್ರರಮಣೀಯ ಜಲಪಾತವನ್ನು ನೋಡುವುದೆ ಅಂದ.

    ಇಲ್ಲಿನ ನಿಸರ್ಗದ ಸೌಂದರ್ಯ ಹಾಗೂ ಪ್ರಪಾತದಲ್ಲಿ ಕಾಣುವ ಜಲರಾಶಿಯನ್ನು ಪ್ರವಾಸಿಗರ ಮನಸ್ಸಿಗೆ ಮುದನೀಡುತ್ತದೆ. ಈ ಅಪರೂಪದ ಜಲಧಾರೆ ಬಳುಕುತ್ತಿರುವುದನ್ನು ನೋಡಿದರೆ ಕಣ್ಣುಗಳಿಗೆ ಹಿತ ನೀಡುತ್ತದೆ. ಹರಿಯೋ ನೀರಝರಿ ದಣಿದ ಮನಕ್ಕೆ ನೆಮ್ಮದಿನೀಡುತ್ತೆ. ಹಾಗೆ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ.

    ಎಲ್ಲಿದೆ? ಈ ಮಲ್ಲಳ್ಳಿ ಜಲಪಾತ ಮಡಿಕೇರಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ಇದೆ. ಸೋಮವಾರಪೇಟೆ ತಾಲೂಕಿನಿಂದ ಸುಮಾರು 30 ಕಿ.ಮೀ ಕ್ರಮಿಸಿದ್ದರೆ ಈ ಜಲಪಾತವನ್ನು ನೋಡಲು ಸಿಗುತ್ತದೆ. ಕೊಡಗು ಜಿಲ್ಲೆಗೆ ಅಗಮಿಸುವ ಪ್ರವಾಸಿಗರು ಈ ಜಲಪಾತಕ್ಕೆ ಭೇಟಿ ನೀಡಿ ಎಂಜಾಯ್ ಮಾಡಬಹುದು.

    ಒಟ್ಟಿನಲ್ಲಿ ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿಪ್ರಿಯರನ್ನ ಮನತಣಿಸುವ ಈ ನಿಸರ್ಗದ ಸೊಬಗು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಈ ಮಲ್ಲಳ್ಳಿ ಅದ್ಭುತ ಜಲಪಾತಕ್ಕೆ ನೀವು ಒಮ್ಮೆ ಭೇಟಿನೀಡಿ ಈ ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಳ್ಳಿ.

    ಮಲ್ಲಳ್ಳಿ ಜಲಪಾತದ ಸುಂದರ ವಿಡಿಯೋವನ್ನು ವಿಜಯ್ ಕುಮಾರ್ ಅವರು ಕ್ಯಾಮೆರಾ ಸೆರೆ ಹಿಡಿದಿದ್ದು ಇಲ್ಲಿ ನೀಡಲಾಗಿದೆ.