Tag: ಪ್ರಕರಣಗಳು

  • ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇ ತಡ, ರಾಜ್ಯದಲ್ಲಿ 50 ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ ಅಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ಅಪರಾಧಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಹಲವು ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು

    ತಲೆಮರೆಸಿಕೊಂಡಿದ್ದ ಅನೇಕ ಕ್ರಿಮಿನಲ್‍ಗಳು ನಾನು ಶರಣಾಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಶೂಟ್ ಮಾಡಬೇಡಿ ಎಂಬ ಸಂದೇಶಗಳಿರುವ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಪೊಲೀಸ್ ಠಾಣೆಗೆ ಹಿಂತಿರುಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಕಳೆದ ವಾರ ರೈಲ್ವೆ ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಪತ್ತೆ ಕಾರ್ಯ ಕಷ್ಟವಾಗಿತ್ತು. ಹೀಗಾಗಿ ಆರೋಪಿಯ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಲಾಗಿತ್ತು. 24 ಗಂಟೆಯ ಒಳಗಡೆ ಶರಣಾಗದೇ ಇದ್ದರೆ ಮನೆಯನ್ನು ಕೆಡವಲಾಗುತ್ತದೆ ಎಂದು ಸಂದೇಶವನ್ನು ಅಧಿಕಾರಿಗಳು ರವಾನೆ ಮಾಡಿದ್ದರು. ಈ ವಿಚಾರ ತಿಳಿದಿದ್ದೇ ತಡ ಆರೋಪಿ ಠಾಣೆಗೆ ಬಂದು ಶರಣಾಗಿದ್ದ.

     

    ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿ ಹಾಕಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ ಬುಲ್ಡೋಜರ್ ಬಾಬಾ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    ಯೋಗಿ ಆದಿತ್ಯನಾಥ್ ಬುಲ್ಡೋಜರ್ ಅನ್ನು ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತ ಎಂದು ಬಿಂಬಿಸಿದ್ದರು. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಅನಧಿಕೃತ, ಅಕ್ರಮ ಕಟ್ಟಡಗಳನ್ನು ಕೆಡವುವ ಮೂಲಕ ಭೂಮಾಫಿಯಾಗೆ ಬಿಸಿ ಮುಟ್ಟಿಸುವ ಹಾಗೂ ಎಕ್ಸ್‌ಪ್ರೆಸ್ ಹೈವೇಗಳನ್ನು ಕಟ್ಟುವ ಸಾಧನವಾಗಿ ಅದನ್ನು ಬಿಂಬಿಸಿತ್ತು.

     

  • ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    – 4,950 ಕೇಸ್ ಇತ್ಯರ್ಥ

    ಗದಗ: ಜಿಲ್ಲೆಯಲ್ಲಿ ಭಾನುವಾರ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಈ ಬಾರಿಯ ಅದಾಲತ್‍ಗೆ 6,124 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.

    39 ಮೋಟಾರು ಅಪಘಾತ ಪ್ರಕರಣಗಳು, 123 ಚೆಕ್‍ಬೌನ್ಸ್, 72 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 257 ಅಸಲು ದಾವೆ, 24 ಭೂಸ್ವಾಧೀನ ದರಖಾಸ್ತು, 4,230 ಇತರೆ ಕ್ರಿಮಿನಲ್, 58 ಎಂಎಂಆರ್‍ಡಿ, 5 ವೈವಾಹಿಕ ಪ್ರಕರಣಗಳು, 14 ವಿದ್ಯುಚ್ಛಕ್ತಿ ಪ್ರಕರಣಗಳು, 1 ಕಾರ್ಮಿಕ ಪ್ರಕರಣ, ಎರಡು ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 4,823 ಚಾಲ್ತಿ ಪ್ರಕರಣಗಳನ್ನು 9,79,71,050 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು. ಅದೇ ರೀತಿ, 127 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು 1,40,38,435 ರಾಜಿ ಸಂಧಾನ ಮಾಡಲಾಯಿತು. ಹೀಗೆ ಒಟ್ಟು 4,950 ಪ್ರಕರಣಗಳನ್ನು 11,20,09,485 ರೂ.ಗೆ ರಾಜಿ ಸಂಧಾನಗೊಳಿಸಲಾಯಿತು.

    ಸಾವಿರಾರು ಜನರ ಮಧ್ಯೆ ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು ತಾಳಿಕಟ್ಟಿ ಜೀವನ ನಡೆಸುತ್ತಿದ್ದ ಜೋಡಿಗಳು ದೂರವಾಗಿದ್ದರು. ವಿರಹ ವೇದನೆಯಿಂದ ನಾನೊಂದು ತೀರ, ನೀನೊಂದು ತೀರ ಅಂತಿದ್ದ ಜೋಡಿಗಳು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಈಗ ಕೋರ್ಟ್‍ನಲ್ಲಿ ತಿಳುವಳಿಕೆ ಹೇಳಿ ರಾಜಿ ಮಾಡಿಸಿರುವುದರಿಂದ ಗದಗ ಜಿಲ್ಲೆಯ 5 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಅವರಿಗೆ ಒಬ್ಬರಿಗೊಬ್ಬರು ಹಾರ ಬದಲಾಯಿಸಿ, ಸಿಹಿ ತಿನಿಸಿದರು. ನೆರೆದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಸಂಬಂಧಿ ಎಲ್ಲರೂ ಪುಷ್ಪ ಎರಚುವ ಮೂಲಕ ಶುಭ ಹಾರೈಸಿದರು. ಜೋಡಿಗಳ ಮತ್ತೆ ನಗುವಿನ ಚೆಲುವು ಚಿಮ್ಮಿ ಒಂದಾದರು.

    ಮೆಗಾ ಲೋಕ್ ಅದಾಲತ್‍ನಲ್ಲಿ ಪ್ರಧಾನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನರಶಿಂಸಾ ಎಂ.ವಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರಪ್ಪ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ್, ಜಂಟಿ ಕಾರ್ಯದರ್ಶಿ ಕುಮಾರ್ ಜಿ.ವಿ. ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದರು. ಎಲ್ಲ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು ಕೂಡ ಆಯಾ ತಾಲೂಕು ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‍ದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ದೆಹಲಿಯಲ್ಲಿ ಪ್ರತಿದಿನ ದಾಖಲಾಗ್ತಿದೆ 20ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು

    ದೆಹಲಿಯಲ್ಲಿ ಪ್ರತಿದಿನ ದಾಖಲಾಗ್ತಿದೆ 20ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು

    ನವದೆಹಲಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರತಿದಿನ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳ ದಾಖಲಾಗುತ್ತಿದೆ ಎಂದು ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ವಿ. ಪದ್ಮ ಶ್ರೀವಾಸ್ತವರವರು ತಿಳಿಸಿದ್ದಾರೆ.

    ಇಂದು ಗಂಭೀರ ಸ್ಥಿತಿಯಲ್ಲಿ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ಇಮ್ಯುನೊಕಾಂಪ್ರೊಮೈಸ್ಡ್, ಡಯಾಬಿಟಿಸ್, ಹೈ ಸ್ಟೀರಾಯ್ಡ್ ಡೋಸ್ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಮುನ್ನ ಇಷ್ಟು ಸಂಖ್ಯೆಯಲ್ಲಿ ಎಂದಿಗೂ ಇರಲಿಲ್ಲ. ಕೇವಲ ಬೆರಳೆಣಿಕೆಯಷ್ಟಿತ್ತು. ಆದರೆ ಈಗ ಬ್ಲ್ಯಾಕ್ ಫಂಗಸ್ ರೋಗದ ಮಿತಿ ಮೀರುತ್ತಿದ್ದು, ಪ್ರತಿನಿತ್ಯ 20ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿದೆ. ಈ ಕಾಯಿಲೆಗೆ ನಾವು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಏಮ್ಸ್ ಜಾಜ್ಜರ್ ಎಂದು ಪ್ರತ್ಯೇಕ ವಾರ್ಡ್‍ಗಳನ್ನು ನಿರ್ಮಿಸಿದ್ದೇವೆ ಎಂದಿದ್ದಾರೆ.

    ದೇಶಾದ್ಯಂತ ಮ್ಯಾಕ್ಸ್ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 25 ಮಂದಿಗೆ ಬ್ಯ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಕೋವಿಡ್-19-ಗೆ ಆಯಾಸ ಕೂಡ ಕಾರಣವಾಗಬಹುದು ಮತ್ತು ಈ ರೋಗವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನಾವು ಜಿನೋಮ್ ಸೀಕ್ವನ್ಸಿಂಗ್ ಮಾಡಿಸಬೇಕಾಗುತ್ತದೆ ಎಂದು ಡಾ. ಎಂ.ವಿ. ಪದ್ಮ ಶ್ರೀವಾಸ್ತವರವರು ಹೇಳಿದ್ದಾರೆ.

  • ಕಾವೇರಿ ರೈತರು ಸೇರಿ 51 ಕ್ರಿಮಿನಲ್ ಕೇಸ್ ವಾಪಸ್- ರಾಘವೇಶ್ವರ ಸ್ವಾಮೀಜಿಗಳ ಸಿಡಿ ಪ್ರಕರಣ ರೀ ಓಪನ್

    ಕಾವೇರಿ ರೈತರು ಸೇರಿ 51 ಕ್ರಿಮಿನಲ್ ಕೇಸ್ ವಾಪಸ್- ರಾಘವೇಶ್ವರ ಸ್ವಾಮೀಜಿಗಳ ಸಿಡಿ ಪ್ರಕರಣ ರೀ ಓಪನ್

    ಬೆಂಗಳೂರು: ಕಾವೇರಿ, ಎತ್ತಿನಹೊಳೆ, ಕಳಸಾ ಬಂಡೂರಿ ಹೋರಾಟಗಾರರು ಸೇರಿದಂತೆ ಹಲವು ರೈತರ ಮೇಲೆ ದಾಖಲಾಗಿದ್ದ 51 ಕ್ರಿಮಿನಲ್ ಕೇಸ್‍ಗಳನ್ನು ಕೈಬಿಡಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

    51 ಕೇಸ್‍ಗಳ ಪೈಕಿ ಮಂಡ್ಯ ಜಿಲ್ಲೆಯ ಕಾವೇರಿ ಹಿತರಕ್ಷಣಾ ಸಮಿತಿ ಹೋರಾಟಗಾರರ ಮೇಲೆಯೇ 35 ಕೇಸ್‍ಗಳಿವೆ. ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ವಿರುದ್ಧ ದಾಖಲಾಗಿದ್ದ ಕೇಸನ್ನು ಸಹ ಸರ್ಕಾರ ಹಿಂಪಡೆದಿದೆ. ಈ ಮಧ್ಯೆ 2010ರಲ್ಲಿ ರಾಘವೇಶ್ವರ ಸ್ವಾಮೀಜಿಗಳ ಸಿಡಿಯನ್ನು ತಯಾರಿಸಿ ಹಂಚಿಕೆ ಮಾಡಿದ್ದ 12 ಮಂದಿ ವಿರುದ್ಧ 2015ರಲ್ಲಿ ಕೈಬಿಡಲಾಗಿದ್ದ ಪ್ರಕರಣವನ್ನು ರೀ ಓಪನ್ ಮಾಡಲು ಸರ್ಕಾರ ನಿರ್ಧರಿಸಿದೆ.

    ಮಾಹಿತಿ:
    2010ರಲ್ಲಿ ಗೋಕರ್ಣ ಠಾಣೆಯಲ್ಲಿ ಸ್ವಾಮೀಜಿಯ ನಕಲಿ ಸೆಕ್ಸ್ ಸಿ.ಡಿ ಮಾಡಿದ ಕುರಿತು ಹಾಗೂ ಗೋಕರ್ಣದಲ್ಲಿ ಹಂಚಿಕೆ ಮಾಡಿದ ಆರೋಪದ ಮೇಲೆ 12 ಜನರ ಮೇಲೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಮಟಾ ಕೋರ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಿತ್ತು. ಆದರೆ 2015ರಲ್ಲಿ ಅಂದಿನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆದಿತ್ತು.

    ಜನಸೇವೆಗಳನ್ನು ಮನೆ ಮನೆಗೆ ತಲುಪಿಸುವ ಜನಸೇವಕ ಯೋಜನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಸರ್ಕಾರಿ ಸೇವೆ ಬೇಕಾದರೆ ಜನಸೇವಕ ಕೇಂದ್ರದ ಸಂಖ್ಯೆ 080-44554455ಗೆ ಕರೆ ಮಾಡಿದರೆ 53 ಸೇವೆಗಳು ಲಭ್ಯ ಆಗಲಿವೆ. ಪ್ರಾಯೋಗಿಕವಾಗಿ ಈಗ ಬೆಂಗಳೂರಿನ ರಾಜಾಜಿನಗರ, ಮಹಾದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಐಟಿಐನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಆಕಾಶದೀಪ ಜನಸ್ನೇಹಿ ಸಹಾಯವೇದಿಕೆ, ಕಾರ್ಮಿಕ ಸಹಾಯವಾಣಿಗಳಿಗೆ ಸಹ ಸಂಪುಟ ಒಪ್ಪಿಗೆ ನೀಡಿದೆ.

  • ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ರೇಪ್ ಪ್ರಕರಣಗಳೇ ಹೆಚ್ಚು

    ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ರೇಪ್ ಪ್ರಕರಣಗಳೇ ಹೆಚ್ಚು

    ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಹೊರತು ಪಡಿಸಿ, ಬೇರೆಲ್ಲಾ ಕ್ರೈಂಗಳು ಸಿಲಿಕಾನ್ ಸಿಟಿಯಲ್ಲಿ ತಗ್ಗಿದಂತೆ ಕಾಣುತ್ತಿವೆ. 2019ರ ಜನವರಿಯಿಂದ ಕೊಲೆ, ದರೋಡೆ, ಸರಗಳ್ಳತನಗಳು ಗಣನೀಯವಾಗಿ ಇಳಿಕೆಯಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಕ್ರೈಂಗಳು ವರದಿಯಾಗಿವೆ.

    ಸಿಲಿಕಾನ್ ಸಿಟಿಯಲ್ಲಿ ಈ ವರ್ಷ 183 ಕೊಲೆ, 31 ಡಕಾಯಿತಿ, 461 ದರೋಡೆ ಮತ್ತು 195 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಕ್ರೈಂ ರೇಟ್ ಆಗಿದೆ. ಆದರೆ ಉಡ್ತಾ ಪಂಜಾಬ್ ಸಿನಿಮಾ ಮಾದರಿಯಲ್ಲಿ ಉಡ್ತಾ ಬೆಂಗಳೂರು ಆಗಿದೇಯಾ ಎನ್ನುವ ಸಂಶಯ ಕಾಡುತ್ತಿದೆ.

    ಮಾದಕವ್ಯಸನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದೆರಡು ವರ್ಷದಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಹೆಚ್ಚು ಅಮಲಿನ ಪ್ರಕರಣಗಳು ಈ ಬಾರಿ ದಾಖಲಾಗಿದ್ದು, ಎನ್‍ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಅಡಿ ಈ ವರ್ಷ ಬರೋಬ್ಬರಿ 700 ಪ್ರಕರಣ ದಾಖಲಾಗಿವೆ. 2017ರಲ್ಲಿ 354 ಪ್ರಕರಣ, 2018ರಲ್ಲಿ 286 ಕೇಸ್ ದಾಖಲಾಗಿದ್ರೆ ಈ ಬಾರಿ 700 ಎನ್‍ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು ಆಘಾತಕಾರಿ ವಿಚಾರವಾಗಿದೆ.

    ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲೆ ಎಗ್ಗಿಲ್ಲದೇ ದೌರ್ಜನ್ಯ ದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರದಂತಹ ಪ್ರಕರಣಗಳು ಸಹ ವಿಪರೀತ ಏರಿಕೆಯಾಗಿದ್ದು, ಈ ವರ್ಷ 132 ಅತ್ಯಾಚಾರ ಕೇಸ್, 712 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

    ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ದಂತಹ ಪ್ರಕರಣಗಳು ಕಡಿಮೆಯಾದರೂ ಅತ್ಯಾಚಾರಗಳ ಸಂಖ್ಯೆ ಜಾಸ್ತಿಯಾಗಿವೆ. ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಈ ವರ್ಷ ಬರೋಬ್ಬರಿ 10,000 ಕ್ಕಿಂತ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಆದರೆ ಕಳೆದ ವರ್ಷ ಇಂತಹ ಪ್ರಕರಣಗಳ ಸಂಖ್ಯೆ 5,000 ದಷ್ಟು ಮಾತ್ರ ಇತ್ತು. ಸೈಬರ್ ಕ್ರೈಂ ದ್ವಿಗುಣಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಪೊಲೀಸರು ಹೇಳುತ್ತಿದ್ದಾರೆ.

  • ಒಂದೇ ದಿನದಲ್ಲಿ 1793 ಪ್ರಕರಣಗಳ ರಾಜಿ ಸಂಧಾನ: ಮೆಚ್ಚುಗೆಗೆ ಪಾತ್ರವಾಯಿತು ಧಾರವಾಡ ನ್ಯಾಯಾಲಯ

    ಒಂದೇ ದಿನದಲ್ಲಿ 1793 ಪ್ರಕರಣಗಳ ರಾಜಿ ಸಂಧಾನ: ಮೆಚ್ಚುಗೆಗೆ ಪಾತ್ರವಾಯಿತು ಧಾರವಾಡ ನ್ಯಾಯಾಲಯ

    – ಮೂರು ತಲೆಮಾರಿನ ವ್ಯಾಜ್ಯವೊಂದು ಇತ್ಯರ್ಥ

    ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯದ ಲೋಕ ಅದಾಲತ್‍ನಲ್ಲಿ ಒಂದೇ ದಿನಕ್ಕೆ 1793 ಪ್ರಕರಣದ ರಾಜಿ ಸಂಧಾನ ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಲಾಗಿದೆ.

    ಹಲವು ವರ್ಷಗಳಿಂದ ಜಿಲ್ಲೆಯ ಇತರ ನ್ಯಾಯಾಲಯಗಳಲ್ಲಿ ನಡೆದಿದ್ದ ಕೌಟುಂಬಿಕ, ಜಾಮೀನು ವ್ಯಾಜ್ಯ ಸೇರಿದಂತೆ ಹಲವು ಪ್ರಕರಣಗಳನ್ನು ಒಂದೇ ದಿನದಲ್ಲಿ ಇತ್ಯರ್ಥಪಡಿಸಲಾಗಿದೆ. ಒಟ್ಟು 38 ನ್ಯಾಯಾಧೀಶರು ಆಯಾ ನ್ಯಾಯಾಲಯದ ಆವರಣದಲ್ಲಿ 1793 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

    ವಾಹನಗಳ ವ್ಯಾಜ್ಯ, ಬಾಕಿ ಕೊಡಬೇಕಾದ ಎಲ್ಲ ಪ್ರಕರಣಗಳನ್ನು ಸಹ ವಿಚಾರಣೆ ಮಾಡಿದ ನ್ಯಾಯಾಧೀಶರು, ರಾಜಿ ಮಾಡಿಸುವ ಮೂಲಕ 10 ಕೋಟಿ 33 ಲಕ್ಷದ ಚೆಕ್‍ಗಳನ್ನು ವಿತರಣೆ ಮಾಡಿದ್ದಾರೆ. ಈ ವ್ಯಾಜ್ಯಗಳು ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇದ್ದವು. ಇಂದು ಕಕ್ಷಿದಾರರನ್ನು ಕರೆಸಿ ರಾಜಿ ಮಾಡಿಸಲಾಯಿತು.

    ಇದೇ ಲೋಕ ಅದಾಲತ್‍ನಲ್ಲಿ ಕಳೆದ ಮೂರು ತಲೇಮಾರಿನಿಂದ ಆಸ್ತಿಗಾಗಿ ಉಳಿದಿದ್ದ ವ್ಯಾಜ್ಯವೊಂದನ್ನು ಇತ್ಯರ್ಥಪಡಿಸಲಾಯಿತು. ಜಿಲ್ಲೆಯ ಮನಗುಂಡಿ ಗ್ರಾಮದ ಶಾಂತವ್ವ ಅಂಗಡಿ ಅವರ ಜಮೀನಿನ ವಾಟ್ನಿ ಪ್ರಕರಣ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು. ಪ್ರಕರಣದ ಕಕ್ಷಿದಾರರಾದ ಅಜ್ಜಿ, ಅಣ್ಣ-ತಮ್ಮಂದಿರು, ಮಕ್ಕಳು ಮತ್ತು ಮೊಮ್ಮಕ್ಕಳು ಇಂದಿನ ರಾಷ್ಟ್ರೀಯ ಲೋಕ್ ಅದಾಲತ್‍ದಲ್ಲಿ ಹಾಜರಾಗಿ ರಾಜಿ ಮಾಡಿಕೊಂಡರು.